Sabha Parva: Chapter 51

ಸಭಾ ಪರ್ವ: ದ್ಯೂತ ಪರ್ವ

೫೧

ದ್ಯೂತಕ್ಕೆ ಯುಧಿಷ್ಠಿರನನ್ನು ಕರೆಯಿಸಿದುದು

ಶತ್ರುವಿಗೆ ದ್ಯೂತದ ಆಹ್ವಾನವನ್ನು ನೀಡಿದರೆ ತಾನು ಯುಧಿಷ್ಠಿರನ ಯಾವ ಸಂಪತ್ತನ್ನು ನೋಡಿ ದುರ್ಯೋಧನನು ಪರಿತಪಿಸುತ್ತಿದ್ದಾನೋ ಅದನ್ನು ಅಪಹರಿಸಿಕೊಡುವೆನೆಂದು ಶಕುನಿಯು ಆಶ್ವಾಸನೆ ನೀಡುವುದು; ಅದರ ಕುರಿತು ದುರ್ಯೋಧನ-ಧೃತರಾಷ್ಟ್ರರ ನಡುವೆ ಚರ್ಚೆ (೧-೧೬). ಸಭೆಯು ಸಿದ್ಧವಾದಾಗ ಧೃತರಾಷ್ಟ್ರನು ದ್ಯೂತದ ವಿರುದ್ಧ ಸಲಹೆ ನೀಡಿದ ವಿದುರನನ್ನೇ ಯುಧಿಷ್ಠಿರನನ್ನು ಕರೆತರಲು ಆಜ್ಞೆಯಿತ್ತುದು (೧೭-೨೬).

02051001 ಶಕುನಿರುವಾಚ|

02051001a ಯಾಂ ತ್ವಮೇತಾಂ ಶ್ರಿಯಂ ದೃಷ್ಟ್ವಾ ಪಾಂಡುಪುತ್ರೇ ಯುಧಿಷ್ಠಿರೇ|

02051001c ತಪ್ಯಸೇ ತಾಂ ಹರಿಷ್ಯಾಮಿ ದ್ಯೂತೇನಾಹೂಯತಾಂ ಪರಃ||

ಶಕುನಿಯು ಹೇಳಿದನು: “ಪಾಂಡುಪುತ್ರ ಯುಧಿಷ್ಠಿರನಲ್ಲಿ ನೀನು ಯಾವ ಸಂಪತ್ತನ್ನು ನೋಡಿ ತಪಿಸುತ್ತಿರುವೆಯೋ ಅದನ್ನು ನಾನು ಅಪಹರಿಸುತ್ತೇನೆ. ಶತ್ರುವಿಗೆ ದ್ಯೂತದ ಆಹ್ವಾನವನ್ನು ಕಳುಹಿಸು.

02051002a ಅಗತ್ವಾ ಸಂಶಯಮಹಮಯುದ್ಧ್ವಾ ಚ ಚಮೂಮುಖೇ|

02051002c ಅಕ್ಷಾನ್ ಕ್ಷಿಪನ್ನಕ್ಷತಃ ಸನ್ವಿದ್ವಾನವಿದುಷೋ ಜಯೇ||

ನಾನು ಸಂಶಯ ಬರುವಂಥಹುದೇನನ್ನೂ ಮಾಡುವುದಿಲ್ಲ. ಸೇನೆಗಳನ್ನು ಎದುರಿಟ್ಟು ಯುದ್ಧ ಮಾಡುವುದೂ ಇಲ್ಲ. ದಾಳಗಳನ್ನು ಮಾತ್ರ ಎಸೆದು ಆ ವಿದ್ವಾನ್ ವಿದುಷಿಯನ್ನು ಜಯಿಸುತ್ತೇನೆ.

02051003a ಗ್ಲಹಾನ್ಧನೂಂಷಿ ಮೇ ವಿದ್ಧಿ ಶರಾನಕ್ಷಾಂಶ್ಚ ಭಾರತ|

02051003c ಅಕ್ಷಾಣಾಂ ಹೃದಯಂ ಮೇ ಜ್ಯಾಂ ರಥಂ ವಿದ್ಧಿ ಮಮಾಸ್ತರಂ||

ಭಾರತ! ದಾಳಗಳೇ ನನ್ನ ಬಿಲ್ಲು ಬಾಣಗಳೆಂದು ತಿಳಿ. ದಾಳಗಳ ಹೃದಯವು ಧನುಸ್ಸಿನ ದಾರ ಮತ್ತು ದಾಳಗಳನ್ನು ಎಸೆಯುವ ಚಾಪೆಯು ರಥವೆಂದು ತಿಳಿ.”

02051004 ದುರ್ಯೋಧನ ಉವಾಚ|

02051004a ಅಯಮುತ್ಸಹತೇ ರಾಜಂ ಶ್ರಿಯಮಾಹರ್ತುಮಕ್ಷವಿತ್|

02051004c ದ್ಯೂತೇನ ಪಾಂಡುಪುತ್ರೇಭ್ಯಸ್ತತ್ತುಭ್ಯಂ ತಾತ ರೋಚತಾಂ||

ದುರ್ಯೋಧನನು ಹೇಳಿದನು: “ರಾಜನ್! ಈ ಅಕ್ಷವಿದನು ದ್ಯೂತದಲ್ಲಿ ಪಾಂಡುಪುತ್ರನಿಂದ ಅವನ ಸಂಪತ್ತನ್ನು ಕಸಿದುಕೊಳ್ಳಲು ಉತ್ಸುಕನಾಗಿದ್ದಾನೆ. ತಂದೇ! ಇದು ನಿನಗೆ ಸಂತಸವನ್ನುಂಟುಮಾಡಬೇಕು.”

02051005 ಧೃತರಾಷ್ಟ್ರ ಉವಾಚ|

02051005a ಸ್ಥಿತೋಽಸ್ಮಿ ಶಾಸನೇ ಭ್ರಾತುರ್ವಿದುರಸ್ಯ ಮಹಾತ್ಮನಃ|

02051005c ತೇನ ಸಂಗಮ್ಯ ವೇತ್ಸ್ಯಾಮಿ ಕಾರ್ಯಸ್ಯಾಸ್ಯ ವಿನಿಶ್ಚಯಂ||

ಧೃತರಾಷ್ಟ್ರನು ಹೇಳಿದನು: “ನನ್ನ ತಮ್ಮ ಮಹಾತ್ಮ ವಿದುರನ ಶಾಸನದಂತೆ ನಡೆಯುತ್ತಿದ್ದೇನೆ. ಅವನೊಂದಿಗೆ ವಿಚಾರಮಾಡಿ ಮುಂದಿನ ಕಾರ್ಯದ ಕುರಿತು ನಿಶ್ಚಯಿಸುತ್ತೇನೆ.”

02051006 ದುರ್ಯೋಧನ ಉವಾಚ|

02051006a ವಿಹನಿಷ್ಯತಿ ತೇ ಬುದ್ಧಿಂ ವಿದುರೋ ಮುಕ್ತಸಂಶಯಃ|

02051006c ಪಾಂಡವಾನಾಂ ಹಿತೇ ಯುಕ್ತೋ ನ ತಥಾ ಮಮ ಕೌರವ||

ದುರ್ಯೋಧನನು ಹೇಳಿದನು: “ಕೌರವ! ವಿದುರನು ನಿನ್ನ ಬುದ್ಧಿಯನ್ನು ನಾಶಪಡಿಸುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವನು ಪಾಂಡವರ ಹಿತದಲ್ಲಿ ಎಷ್ಟು ನಿರತನಾಗಿದ್ದಾನೋ ಅಷ್ಟು ನನ್ನ ಕುರಿತು ಇಲ್ಲ.

02051007a ನಾರಭೇತ್ಪರಸಾಮರ್ಥ್ಯಾತ್ಪುರುಷಃ ಕಾರ್ಯಮಾತ್ಮನಃ|

02051007c ಮತಿಸಾಮ್ಯಂ ದ್ವಯೋರ್ನಾಸ್ತಿ ಕಾರ್ಯೇಷು ಕುರುನನ್ದನ||

ಕುರುನಂದನ! ಪುರುಷನು ತನ್ನ ಕೆಲಸವನ್ನು ಇನ್ನೊಬ್ಬರ ಅಧಿಕಾರಕ್ಕೊಳಪಟ್ಟು ಮಾಡಬಾರದು. ಯಾವುದೇ ಕಾರ್ಯದಲ್ಲಿ ಇಬ್ಬರ ಅಭಿಪ್ರಾಯಗಳೂ ಒಂದೇ ಆಗಿರುವುದಿಲ್ಲ.

02051008a ಭಯಂ ಪರಿಹರನ್ಮಂದ ಆತ್ಮಾನಂ ಪರಿಪಾಲಯನ್|

02051008c ವರ್ಷಾಸು ಕ್ಲಿನ್ನಕಟವತ್ತಿಷ್ಠನ್ನೇವಾವಸೀದತಿ||

ಭಯದಿಂದ ತನ್ನ ರಕ್ಷಣೆಯನ್ನು ಮಾಡಿಕೊಳ್ಳದಿದ್ದ ಮೂಢನು ಮಳೆಯಲ್ಲಿ ನಿಂತ ಒಂಟಿ ಕಡ್ಡಿಯಂತೆ ನಾಶಹೊಂದುತ್ತಾನೆ.

02051009a ನ ವ್ಯಾಧಯೋ ನಾಪಿ ಯಮಃ ಶ್ರೇಯಃಪ್ರಾಪ್ತಿಂ ಪ್ರತೀಕ್ಷತೇ|

02051009c ಯಾವದೇವ ಭವೇತ್ಕಲ್ಪಸ್ತಾವಚ್ಛ್ರೇಯಃ ಸಮಾಚರೇತ್||

ವ್ಯಾಧಿಯಾಗಲೀ ಯಮನಾಗಲೀ ಒಳ್ಳೆಯ ಗಳಿಗೆಯನ್ನು ನೋಡಿ ಬರುವುದಿಲ್ಲ. ಸಮಯ ದೊರಕಿದಾಗಲೇ ನಮ್ಮ ಶ್ರೇಯಸ್ಸಿಗಾಗಿ ನಡೆದುಕೊಳ್ಳಬೇಕು.”

02051010 ಧೃತರಾಷ್ಟ್ರ ಉವಾಚ|

02051010a ಸರ್ವಥಾ ಪುತ್ರ ಬಲಿಭಿರ್ವಿಗ್ರಹಂ ತೇ ನ ರೋಚಯೇ|

02051010c ವೈರಂ ವಿಕಾರಂ ಸೃಜತಿ ತದ್ವೈ ಶಸ್ತ್ರಮನಾಯಸಂ||

ಧೃತರಾಷ್ಟ್ರನು ಹೇಳಿದನು: “ಆದರೂ ಪುತ್ರ! ನಮಗಿಂಥಲೂ ಬಲಶಾಲಿಯಾಗಿರುವರನ್ನು ವಿರೋಧಿಸಲು ಮನಸ್ಸು ಬರುತ್ತಿಲ್ಲ. ಶಸ್ತ್ರದಂತೆ ವೈರವು ವಿಕಾರಗಳನ್ನು ಸೃಷ್ಟಿಸುತ್ತದೆ.

02051011a ಅನರ್ಥಮರ್ಥಂ ಮನ್ಯಸೇ ರಾಜಪುತ್ರ

         ಸಂಗ್ರಂಥನಂ ಕಲಹಸ್ಯಾತಿಘೋರಂ|

02051011c ತದ್ವೈ ಪ್ರವೃತ್ತಂ ತು ಯಥಾ ಕಥಂ ಚಿದ್

         ವಿಮೋಕ್ಷಯೇಚ್ಚಾಪ್ಯಸಿಸಾಯಕಾಂಶ್ಚ||

ರಾಜಪುತ್ರ! ಯಾವ ಅನರ್ಥವನ್ನು ಅರ್ಥವೆಂದು ತಿಳಿದಿದ್ದೀಯೋ ಅದು ಅತಿ ಘೋರ ಕಲಹವನ್ನು ತಂದೊಡ್ಡುತ್ತದೆ. ಯಾವುದೇ ರೀತಿಯಲ್ಲಿ ಅದು ಒಮ್ಮೆ ಪ್ರಾರಂಭವಾಯಿತೆಂದರೆ ಅದು ಖಡ್ಗ ಬಾಣಗಳನ್ನು ಬಿಟ್ಟೇ ಬಿಡುತ್ತದೆ.”

02051012 ದುರ್ಯೋಧನ ಉವಾಚ|

02051012a ದ್ಯೂತೇ ಪುರಾಣೈರ್ವ್ಯವಹಾರಃ ಪ್ರಣೀತಸ್

         ತತ್ರಾತ್ಯಯೋ ನಾಸ್ತಿ ನ ಸಂಪ್ರಹಾರಃ|

02051012c ತದ್ರೋಚತಾಂ ಶಕುನೇರ್ವಾಕ್ಯಮದ್ಯ

         ಸಭಾಂ ಕ್ಷಿಪ್ರಂ ತ್ವಮಿಹಾಜ್ಞಾಪಯಸ್ವ||

ದುರ್ಯೋಧನನು ಹೇಳಿದನು: “ಪುರಾಣಗಳಲ್ಲಿ ದ್ಯೂತವು ಒಂದು ವ್ಯವಹಾರವೆಂದು ಪ್ರಣೀತವಾಗಿದೆ. ಅದರಲ್ಲಿ ಕೆಟ್ಟದ್ದೇನೂ ಇಲ್ಲ. ಸಂಪ್ರಹಾರಗಳೇನೂ ಇಲ್ಲ. ಇಂದು ಶಕುನಿಯ ಮಾತುಗಳನ್ನು ಒಪ್ಪು. ಕ್ಷಿಪ್ರವಾಗಿ ಒಂದು ಸಭೆಯನ್ನು ಕಟ್ಟಲು ಆಜ್ಞಾಪಿಸು.

02051013a ಸ್ವರ್ಗದ್ವಾರಂ ದೀವ್ಯತಾಂ ನೋ ವಿಶಿಷ್ಟಂ

         ತದ್ವರ್ತಿನಾಂ ಚಾಪಿ ತಥೈವ ಯುಕ್ತಂ|

02051013c ಭವೇದೇವಂ ಹ್ಯಾತ್ಮನಾ ತುಲ್ಯಮೇವ

         ದುರೋದರಂ ಪಾಂಡವೈಸ್ತ್ವಂ ಕುರುಷ್ವ||

ಜೂಜಾಡಿದರೆ ಸ್ವರ್ಗದ ಬಾಗಿಲು ನಮಗೆ ಹತ್ತಿರವಾಗುತ್ತದೆ. ಹಾಗೆ ಮಾಡುವುದೇ ನಮಗೆ ಸೂಕ್ತ. ನಾವಿಬ್ಬರೂ ಒಂದೇ ಸ್ತರದಲ್ಲಿ ನಿಲ್ಲುವ ಹಾಗಾಗುತ್ತದೆ. ಪಾಂಡವರೊಂದಿಗೆ ಆಡಲು ಒಪ್ಪಿಗೆ ನೀಡು.”

02051014 ಧೃತರಾಷ್ಟ್ರ ಉವಾಚ|

02051014a ವಾಕ್ಯಂ ನ ಮೇ ರೋಚತೇ ಯತ್ತ್ವಯೋಕ್ತಂ

         ಯತ್ತೇ ಪ್ರಿಯಂ ತತ್ಕ್ರಿಯತಾಂ ನರೇಂದ್ರ|

02051014c ಪಶ್ಚಾತ್ತಪ್ಸ್ಯಸೇ ತದುಪಾಕ್ರಮ್ಯ ವಾಕ್ಯಂ

         ನ ಹೀದೃಶಂ ಭಾವಿ ವಚೋ ಹಿ ಧರ್ಮ್ಯಂ||

ಧೃತರಾಷ್ಟ್ರನು ಹೇಳಿದನು: “ನೀನು ಆಡುವ ಮಾತುಗಳು ನನಗೆ ಹಿಡಿಸುತ್ತಿಲ್ಲ. ಆದರೆ, ನರೇಂದ್ರ! ನಿನಗೆ ಇಷ್ಟವಾದುದನ್ನು ಮಾಡು. ನನ್ನ ಮಾತುಗಳನ್ನು ಉಲ್ಲಂಘಿಸಿದ ನೀನು ನಂತರ ಪಶ್ಚಾತ್ತಾಪ ಪಡುತ್ತೀಯೆ. ಏಕೆಂದರೆ ಇಂಥಹ ಮಾತುಗಳು ಧರ್ಮವನ್ನು ಅನುಸರಿಸಿಲ್ಲ.

02051015a ದೃಷ್ಟಂ ಹ್ಯೇತದ್ವಿದುರೇಣೈವಮೇವ

         ಸರ್ವಂ ಪೂರ್ವಂ ಬುದ್ಧಿವಿದ್ಯಾನುಗೇನ|

02051015c ತದೇವೈತದವಶಸ್ಯಾಭ್ಯುಪೈತಿ

         ಮಹದ್ಭಯಂ ಕ್ಷತ್ರಿಯಬೀಜಘಾತಿ||

ತನ್ನ ಬುದ್ಧಿ-ವಿಧ್ಯೆಗಳ ಸಹಾಯದಿಂದ ವಿದುರನು ಹಿಂದೆಯೇ ಈ ಎಲ್ಲವನ್ನೂ ಕಂಡಿದ್ದನು. ಕ್ಷತ್ರಿಯರ ಬೀಜವನ್ನೇ ನಾಶಪಡಿಸುವ ಆ ಮಹಾ ಭಯವೇ ಇಂದು ಅಸಹಾಯಕ ನರನ ಎದಿರಾಗಿ ನಿಂತಿದೆ.””

02051016 ವೈಶಂಪಾಯನ ಉವಾಚ|

02051016a ಏವಮುಕ್ತ್ವಾ ಧೃತರಾಷ್ಟ್ರೋ ಮನೀಷೀ

         ದೈವಂ ಮತ್ವಾ ಪರಮಂ ದುಸ್ತರಂ ಚ|

02051016c ಶಶಾಸೋಚ್ಚೈಃ ಪುರುಷಾನ್ಪುತ್ರವಾಕ್ಯೇ

         ಸ್ಥಿತೋ ರಾಜಾ ದೈವಸಮ್ಮೂಢಚೇತಾಃ||

ವೈಶಂಪಾಯನನು ಹೇಳಿದನು: “ದೈವವು ಪರಮ ದುಸ್ತರವಾದುದೆಂದು ತಿಳಿದು ದೈವಸಮ್ಮೂಢಚೇತಸ ಮನೀಷಿ ರಾಜ ಧೃತರಾಷ್ಟ್ರನು ಹೀಗೆ ಹೇಳಿ ಪುರುಷರಿಗೆ ತನ್ನ ಪುತ್ರನ ವಾಕ್ಯಗಳನ್ನು ಪರಿಪಾಲಿಸುವಂತೆ ಆಜ್ಞೆಯನ್ನಿತ್ತನು.

02051017a ಸಹಸ್ರಸ್ತಂಭಾಂ ಹೇಮವೈಡೂರ್ಯಚಿತ್ರಾಂ

         ಶತದ್ವಾರಾಂ ತೋರಣಸ್ಫಾಟಿಶೃಂಗಾಂ|

02051017c ಸಭಾಮಗ್ರ್ಯಾಂ ಕ್ರೋಶಮಾತ್ರಾಯತಾಂ ಮೇ

         ತದ್ವಿಸ್ತಾರಾಮಾಶು ಕುರ್ವಂತು ಯುಕ್ತಾಃ||

“ಹೇಮವೈಡೂರ್ಯಗಳಿಂದ ಅಲಂಕರಿಸಿದ ಸಾವಿರ ಸ್ತಂಭಗಳ ಮತ್ತು ಸ್ಫಟಿಕದ ತೋರಣ ಕಮಾನುಗಳನ್ನುಳ್ಳ ನೂರು ದ್ವಾರಗಳ, ಒಂದು ಕ್ರೋಶ ಚೌಕದ ವಿಸ್ತಾರ ಸುಂದರ ಸಭಾಗೃಹವನ್ನು ನಿರ್ಮಾಣಮಾಡಿ.”

02051018a ಶ್ರುತ್ವಾ ತಸ್ಯ ತ್ವರಿತಾ ನಿರ್ವಿಶಂಕಾಃ

         ಪ್ರಾಜ್ಞಾ ದಕ್ಷಾಸ್ತಾಂ ತಥಾ ಚಕ್ರುರಾಶು|

02051018c ಸರ್ವದ್ರವ್ಯಾಣ್ಯುಪಜಹ್ರುಃ ಸಭಾಯಾಂ

         ಸಹಸ್ರಶಃ ಶಿಲ್ಪಿನಶ್ಚಾಪಿ ಯುಕ್ತಾಃ||

ಅವನನ್ನು ಕೇಳಿದ ನಿರ್ವಿಶಂಕ ಪ್ರಾಜ್ಞ ಮತ್ತು ದಕ್ಷರು ಸರ್ವವಸ್ತು ಸಾಮಾಗ್ರಿಗಳನ್ನೂ ಸಹಸ್ರಾರು ಯುಕ್ತಶಿಲ್ಪಿಗಳನ್ನೂ ತರಿಸಿ ಸಭೆಯನ್ನು ಕಟ್ಟಿಸಿದರು.

02051019a ಕಾಲೇನಾಲ್ಪೇನಾಥ ನಿಷ್ಠಾಂ ಗತಾಂ ತಾಂ

         ಸಭಾಂ ರಮ್ಯಾಂ ಬಹುರತ್ನಾಂ ವಿಚಿತ್ರಾಂ|

02051019c ಚಿತ್ರೈರ್ಹೈಮೈರಾಸನೈರಭ್ಯುಪೇತಾಂ

         ಆಚಖ್ಯುಸ್ತೇ ತಸ್ಯ ರಾಜ್ಞಃ ಪ್ರತೀತಾಃ||

ಸ್ವಲ್ಪವೇ ಸಮಯದಲ್ಲಿ ನಿಷ್ಠರಾಗಿದ್ದ ಅವರು ಬಹುರತ್ನಗಳಿಂದ ಅಲಂಕೃತ, ಚಿನ್ನದ ಸುಂದರ ಆಸನಗಳಿಂದ ಕೂಡಿದ ರಮ್ಯ ಸಭೆಯು ತಯಾರಾಗಿದೆಯೆಂದು ರಾಜನಿಗೆ ವರದಿಮಾಡಿದರು.

02051020a ತತೋ ವಿದ್ವಾನ್ವಿದುರಂ ಮಂತ್ರಿಮುಖ್ಯಂ

         ಉವಾಚೇದಂ ಧೃತರಾಷ್ಟ್ರೋ ನರೇಂದ್ರಃ|

02051020c ಯುಧಿಷ್ಠಿರಂ ರಾಜಪುತ್ರಂ ಹಿ ಗತ್ವಾ

         ಮದ್ವಾಕ್ಯೇನ ಕ್ಷಿಪ್ರಮಿಹಾನಯಸ್ವ||

ನಂತರ ನರೇಂದ್ರ ಧೃತರಾಷ್ಟ್ರನು ಮಂತ್ರಿ ಮುಖ್ಯ ವಿದ್ವಾನ್ ವಿದುರನನ್ನು ಕರೆಯಿಸಿ ಹೇಳಿದನು: “ರಾಜಪುತ್ರ ಯುದಿಷ್ಠಿರನಲ್ಲಿಗೆ ಹೋಗಿ ನನ್ನ ಕರೆಯಂತೆ ಅವನನ್ನು ತಕ್ಷಣವೇ ಇಲ್ಲಿಗೆ ಕರೆದುಕೊಂಡು ಬಾ.

02051021a ಸಭೇಯಂ ಮೇ ಬಹುರತ್ನಾ ವಿಚಿತ್ರಾ

         ಶಯ್ಯಾಸನೈರುಪಪನ್ನಾ ಮಹಾರ್ಹೈಃ|

02051021c ಸಾ ದೃಶ್ಯತಾಂ ಭ್ರಾತೃಭಿಃ ಸಾರ್ಧಮೇತ್ಯ

         ಸುಹೃದ್ದ್ಯೂತಂ ವರ್ತತಾಮತ್ರ ಚೇತಿ||

“ಬಹುರತ್ನಗಳಿಂದ ಅಲಂಕೃತಗೊಂಡ, ಬೆಲೆಬಾಳುವ ಮಂಚ ಆಸನಗಳಿಂದ ಸಜ್ಜಿತವಾದ ಈ ನನ್ನ ಸಭೆಯನ್ನು ನಿನ್ನ ಸಹೋದರರೊಂದಿಗೆ ಬಂದು ನೋಡು. ಅಲ್ಲಿ ಸ್ನೇಹಪರ ದ್ಯೂತವನ್ನು ಆಡೋಣ!” ಎಂದು ಹೇಳು.”

02051022a ಮತಮಾಜ್ಞಾಯ ಪುತ್ರಸ್ಯ ಧೃತರಾಷ್ಟ್ರೋ ನರಾಧಿಪಃ|

02051022c ಮತ್ವಾ ಚ ದುಸ್ತರಂ ದೈವಮೇತದ್ರಾಜಾ ಚಕಾರ ಹ||

ಪುತ್ರನ ಮನಸ್ಸನ್ನು ಅರಿತಿದ್ಡ ನರಾಧಿಪ ರಾಜ ಧೃತರಾಷ್ಟ್ರನು ಇದೊಂದು ದುಸ್ತರ ದೈವವೆಂದು ತಿಳಿದು ಹಾಗೆ ಮಾಡಿದನು.

02051023a ಅನ್ಯಾಯೇನ ತಥೋಕ್ತಸ್ತು ವಿದುರೋ ವಿದುಷಾಂ ವರಃ|

02051023c ನಾಭ್ಯನಂದದ್ವಚೋ ಭ್ರಾತುರ್ವಚನಂ ಚೇದಮಬ್ರವೀತ್||

ವಿದ್ವಾಂಸರಲ್ಲಿಯೇ ಶ್ರೇಷ್ಠ ವಿದುರನು ತನ್ನ ಅಣ್ಣನ ಈ ಅನ್ಯಾಯದ ಮಾತುಗಳನ್ನು ಒಪ್ಪಿಕೊಳ್ಳದೇ ಹೀಗೆ ಹೇಳಿದನು:

02051024a ನಾಭಿನಂದಾಮಿ ನೃಪತೇ ಪ್ರೈಷಮೇತಂ

         ಮೈವಂ ಕೃಥಾಃ ಕುಲನಾಶಾದ್ಬಿಭೇಮಿ|

02051024c ಪುತ್ರೈರ್ಭಿನ್ನೈಃ ಕಲಹಸ್ತೇ ಧ್ರುವಂ ಸ್ಯಾದ್

         ಏತಚ್ಛಂಕೇ ದ್ಯೂತಕೃತೇ ನರೇಂದ್ರ||

“ನೃಪತೇ! ಈ ಕೆಲಸವನ್ನು ನಾನು ಸ್ವಾಗತಿಸುವುದಿಲ್ಲ. ಇದನ್ನು ಮಾಡಬೇಡ! ನಮ್ಮ ಕುಲದ ನಾಶದ ಕುರಿತು ಭಯಪಡುತ್ತೇನೆ. ನರೇಂದ್ರ! ಪುತ್ರರಲ್ಲಿ ಭಿನ್ನತೆಯನ್ನು ತರುವುದರಿಂದ ಕಲಹವಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ದ್ಯೂತವನ್ನಾಡುವುದರ ಕುರಿತು ಇದೇ ನನ್ನ ಭಯ.”

02051025 ಧೃತರಾಷ್ಟ್ರ ಉವಾಚ|

02051025a ನೇಹ ಕ್ಷತ್ತಃ ಕಲಹಸ್ತಪ್ಸ್ಯತೇ ಮಾಂ

         ನ ಚೇದ್ದೈವಂ ಪ್ರತಿಲೋಮಂ ಭವಿಷ್ಯತ್|

02051025c ಧಾತ್ರಾ ತು ದಿಷ್ಟಸ್ಯ ವಶೇ ಕಿಲೇದಂ

         ಸರ್ವಂ ಜಗಚ್ಚೇಷ್ಟತಿ ನ ಸ್ವತಂತ್ರಂ||

ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಇದರಲ್ಲಿ ಯಾವುದೇ ಕಲಹದ ಚಿಂತೆ ನನಗಿಲ್ಲ. ದೈವದ ವಿರುದ್ಧವೂ ಇದು ಆಗುವುದಿಲ್ಲ. ಇವೆಲ್ಲವೂ ಧಾತಾರನ ಕಲ್ಪನೆಯ ವಶ. ಸರ್ವ ಜಗತ್ತೂ ಸ್ವತಂತ್ರವಾಗಿ ನಡೆಯುತ್ತಿಲ್ಲ.

02051026a ತದದ್ಯ ವಿದುರ ಪ್ರಾಪ್ಯ ರಾಜಾನಂ ಮಮ ಶಾಸನಾತ್|

02051026c ಕ್ಷಿಪ್ರಮಾನಯ ದುರ್ಧರ್ಷಂ ಕುಂತೀಪುತ್ರಂ ಯುಧಿಷ್ಠಿರಂ||

ಆದುದರಿಂದ ವಿದುರ! ಇಂದು ನನ್ನ ಶಾಸನದಂತೆ ರಾಜನಲ್ಲಿಗೆ ತಲುಪಿ ಕ್ಷಿಪ್ರವಾಗಿ ಆ ದುರ್ಧರ್ಷ ಕುಂತೀಪುತ್ರ ಯುಧಿಷ್ಠಿರನನ್ನು ಕರೆದುಕೊಂಡು ಬಾ!””

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಯುಧಿಷ್ಠಿರಾನಯನೇ ಏಕಪಂಚಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಯುಧಿಷ್ಠಿರಾನಯನ ಎನ್ನುವ ಐವತ್ತೊಂದನೆಯ ಅಧ್ಯಾಯವು.

Related image

Comments are closed.