ಸಭಾ ಪರ್ವ: ದ್ಯೂತ ಪರ್ವ
೫೦
“ನೀನೂ ಕೂಡ ಮಹಾಧ್ವರವನ್ನು ನಡೆಸು, ಉಡುಗೊರೆಗಳು ಸಿಗುತ್ತವೆ” ಎಂದು ಧೃತರಾಷ್ಟ್ರನು ಯುಧಿಷ್ಠಿರನನ್ನು ದ್ವೇಷಿಸಬೇಡವೆಂದು ಮಗನಿಗೆ ಹೇಳಿದುದು (೧-೯). “ವೃದ್ಧರನ್ನೇ ಸೇವೆಗೈಯುತ್ತಿರುವ ನಿನ್ನ ಬುದ್ಧಿಯು ಹಳತಾಗಿ ಹೋಗಿದೆ” ಎಂದು ತಂದೆಯನ್ನು ಹೀಯಾಳಿಸಿ “ಅಸಂತೋಷವೇ ಸಂಪತ್ತಿನ ಮೂಲ. ಆದುದರಿಂದಲೇ ನಾನು ಅಸಂತುಷ್ಟನಾಗಿರಲು ಬಯಸುತ್ತೇನೆ.” ಎಂದು ದುರ್ಯೋಧನನು ತನ್ನ ದೃಢ ನಿರ್ಧಾರವನ್ನು ತಿಳಿಸುವುದು (೧೦-೨೮).
02050001 ಧೃತರಾಷ್ಟ್ರ ಉವಾಚ|
02050001a ತ್ವಂ ವೈ ಜ್ಯೇಷ್ಠೋ ಜ್ಯೈಷ್ಠಿನೇಯಃ ಪುತ್ರ ಮಾ ಪಾಂಡವಾನ್ದ್ವಿಷಃ|
02050001c ದ್ವೇಷ್ಟಾ ಹ್ಯಸುಖಮಾದತ್ತೇ ಯಥೈವ ನಿಧನಂ ತಥಾ||
ಧೃತರಾಷ್ಟ್ರನು ಹೇಳಿದನು: “ನನ್ನ ಜೈಷ್ಠಿನಿಯ ಜ್ಯೇಷ್ಠ ಪುತ್ರ ನೀನು. ಪಾಂಡವರನ್ನು ದ್ವೇಷಿಸಬೇಡ. ದ್ವೇಷಿಸುವವನು ಸಾವಿನಲ್ಲಿ ಎಷ್ಟು ನೋವಿದೆಯೋ ಅಷ್ಟೇ ನೋವನ್ನು ಅನುಭವಿಸುತ್ತಾನೆ.
02050002a ಅವ್ಯುತ್ಪನ್ನಂ ಸಮಾನಾರ್ಥಂ ತುಲ್ಯಮಿತ್ರಂ ಯುಧಿಷ್ಠಿರಂ|
02050002c ಅದ್ವಿಷಂತಂ ಕಥಂ ದ್ವಿಷ್ಯಾತ್ತ್ವಾದೃಶೋ ಭರತರ್ಷಭ||
ಭರತರ್ಷಭ! ನಿನ್ನಂಥವರು ಯಾವ ಕಾರಣಕ್ಕಾಗಿ ನಿನ್ನ ಗುರಿಗಳನ್ನೇ ತಾನೂ ಇಟ್ಟುಕೊಂಡಿರುವ, ನಿನ್ನ ಮಿತ್ರರನ್ನೇ ಮಿತ್ರರನ್ನಾಗಿ ಪಡೆದಿರುವ ಮತ್ತು ನಿನ್ನನ್ನು ದ್ವೇಷಿಸದೇ ಇರುವ ಸರಳ ಯುಧಿಷ್ಠಿರನನ್ನು ದ್ವೇಷಿಸುತ್ತಾರೆ?
y02050003a ತುಲ್ಯಾಭಿಜನವೀರ್ಯಶ್ಚ ಕಥಂ ಭ್ರಾತುಃ ಶ್ರಿಯಂ ನೃಪ|
02050003c ಪುತ್ರ ಕಾಮಯಸೇ ಮೋಹಾನ್ಮೈವಂ ಭೂಃ ಶಾಮ್ಯ ಸಾಧ್ವಿಹ||
ನೃಪ! ಜನನ ಮತ್ತು ವೀರ್ಯದಲ್ಲಿ ನಿನ್ನ ಸಮನಾಗಿರುವ ನಿನ್ನ ಭ್ರಾತುವಿನ ಸಂಪತ್ತನ್ನು ಮೋಹದಿಂದ ಏಕೆ ಬಯಸುತ್ತಿರುವೆ? ಹಾಗಾಗಬೇಡ! ನಿನ್ನನ್ನು ನೀನು ಶಾಂತಗೊಳಿಸಿಕೋ!
02050004a ಅಥ ಯಜ್ಞವಿಭೂತಿಂ ತಾಂ ಕಾಂಕ್ಷಸೇ ಭರತರ್ಷಭ|
02050004c ಋತ್ವಿಜಸ್ತವ ತನ್ವಂತು ಸಪ್ತತಂತುಂ ಮಹಾಧ್ವರಂ||
ಭರತರ್ಷಭ! ಆ ಯಜ್ಞದ ವೈಭವವನ್ನು ಬಯಸುವುದಾದರೆ ನಿನ್ನ ಋತ್ವಿಜರಿಂದ ಏಳು ಎಳೆಗಳಿರುವ ಮಹಾಧ್ವರವನ್ನು ಆಯೋಜಿಸು.
02050005a ಆಹರಿಷ್ಯಂತಿ ರಾಜಾನಸ್ತವಾಪಿ ವಿಪುಲಂ ಧನಂ|
02050005c ಪ್ರೀತ್ಯಾ ಚ ಬಹುಮಾನಾಚ್ಚ ರತ್ನಾನ್ಯಾಭರಣಾನಿ ಚ||
ಆಗ ನಿನಗಾಗಿ ರಾಜರುಗಳು ಪ್ರೀತಿಯಿಂದ ಮತ್ತು ಗೌರವದಿಂದ ರತ್ನಾಭರಣಗಳನ್ನೂ ವಿಪುಲ ಧನವನ್ನೂ ತರುತ್ತಾರೆ.
02050006a ಅನರ್ಥಾಚರಿತಂ ತಾತ ಪರಸ್ವಸ್ಪೃಹಣಂ ಭೃಶಂ|
02050006c ಸ್ವಸಂತುಷ್ಟಃ ಸ್ವಧರ್ಮಸ್ಥೋ ಯಃ ಸ ವೈ ಸುಖಮೇಧತೇ||
ತಾತ! ಪರರು ಸಂಪಾದಿಸಿದ ಧನವನ್ನು ಬಯಸುವುದು ಸ್ವಲ್ಪವೂ ಸರಿಯಲ್ಲ. ನಿನಗಿದ್ದುದರಲ್ಲಿ ತೃಪ್ತನಾಗು. ಸ್ವಧರ್ಮದಲ್ಲಿ ನಿರತನಾಗಿರು. ಅದರಲ್ಲಿ ಸುಖವಿದೆ.
02050007a ಅವ್ಯಾಪಾರಃ ಪರಾರ್ಥೇಷು ನಿತ್ಯೋದ್ಯೋಗಃ ಸ್ವಕರ್ಮಸು|
02050007c ಉದ್ಯಮೋ ರಕ್ಷಣೇ ಸ್ವೇಷಾಮೇತದ್ವೈಭವಲಕ್ಷಣಂ||
ಬೇರೆಯವರ ಸಂಪತ್ತನ್ನು ಗಮನಿಸದೇ ಇರುವುದು, ನಿತ್ಯವೂ ಸ್ವಕರ್ಮದಲ್ಲಿ ನಿರತನಾಗಿರುವುದು ಮತ್ತು ತನ್ನ ಉದ್ಯಮವನ್ನು ರಕ್ಷಿಸಿಕೊಂಡು ಬರುವುದು ಇವೇ ವೈಭವದ ಲಕ್ಷಣಗಳು.
02050008a ವಿಪತ್ತಿಷ್ವವ್ಯಥೋ ದಕ್ಷೋ ನಿತ್ಯಮುತ್ಥಾನವಾನ್ನರಃ|
02050008c ಅಪ್ರಮತ್ತೋ ವಿನೀತಾತ್ಮಾ ನಿತ್ಯಂ ಭದ್ರಾಣಿ ಪಶ್ಯತಿ||
ವಿಪತ್ತು ಬಂದಾಗ ವ್ಯಥಿಸಲು ನಿರಾಕರಿಸುವ ದಕ್ಷ ನರನು ನಿತ್ಯವೂ ಏಳಿಗೆಯನ್ನು ಹೊಂದುತ್ತಾನೆ. ಅಪ್ರಮತ್ತ ವಿನೀತನು ನಿತ್ಯವೂ ಒಳ್ಳೆಯದನ್ನು ಕಾಣುತ್ತಾನೆ.
02050009a ಅಂತರ್ವೇದ್ಯಾಂ ದದದ್ವಿತ್ತಂ ಕಾಮಾನನುಭವನ್ಪ್ರಿಯಾನ್|
02050009c ಕ್ರೀಡನ್ ಸ್ತ್ರೀಭಿರ್ನಿರಾತಂಕಃ ಪ್ರಶಾಮ್ಯ ಭರತರ್ಷಭ||
ಭರತರ್ಷಭ! ವೇದಿಕೆಗಳಲ್ಲಿ ವಿತ್ತವನ್ನು ದಾನಮಾಡುತ್ತಾ, ಪ್ರೀತಿಯ ಬಯಕೆಗಳನ್ನೆಲ್ಲಾ ಅನುಭವಿಸುತ್ತಾ, ಆರೋಗ್ಯ ಸ್ತ್ರೀಯರೊಂದಿಗೆ ಕ್ರೀಡಿಸುತ್ತಾ, ನೆಮ್ಮಂದಿಯಿಂದಿರು.”
02050010 ದುರ್ಯೋಧನ ಉವಾಚ|
02050010a ಜಾನನ್ವೈ ಮೋಹಯಸಿ ಮಾಂ ನಾವಿ ನೌರಿವ ಸಮ್ಯತಾ|
02050010c ಸ್ವಾರ್ಥೇ ಕಿಂ ನಾವಧಾನಂ ತೇ ಉತಾಹೋ ದ್ವೇಷ್ಟಿ ಮಾಂ ಭವಾನ್||
ದುರ್ಯೋಧನನು ಹೇಳಿದನು: “ನಾವೆಗೆ ಕಟ್ಟಿದ ನಾವೆಯಂತೆ ನೀನು ತಿಳಿದವನಾಗಿದ್ದರೂ ನನ್ನಲ್ಲಿ ಗೊಂದಲವನ್ನುಂಟುಮಾಡುತ್ತಿದ್ದೀಯೆ! ಸ್ವಾರ್ಥದ ಕುರಿತು ನಿನಗೆ ಸ್ವಲ್ಪವೂ ಚಿಂತೆಯಿಲ್ಲವೇ? ನೀನು ನನ್ನನ್ನು ದ್ವೇಷಿಸುತ್ತೀಯಾ?
02050011a ನ ಸಂತೀಮೇ ಧಾರ್ತರಾಷ್ಟ್ರಾ ಯೇಷಾಂ ತ್ವಮನುಶಾಸಿತಾ|
02050011c ಭವಿಷ್ಯಮರ್ಥಮಾಖ್ಯಾಸಿ ಸದಾ ತ್ವಂ ಕೃತ್ಯಮಾತ್ಮನಃ||
ನಿನ್ನ ಅನುಶಾಸನದಲ್ಲಿರುವ ಧಾರ್ತರಾಷ್ಟ್ರರು ನನ್ನ ಸಂಗಡವಿದ್ದಾರೆಯೇ? ಭವಿಷ್ಯದ ವಿಚಾರಗಳ ಕುರಿತು ಮಾಡಬೇಕಾದುದು ಬಹಳವಿದೆ ಎಂದು ಸದಾ ನೀನು ಯೋಚಿಸುತ್ತಿರುವೆ.
02050012a ಪರಪ್ರಣೇಯೋಽಗ್ರಣೀರ್ಹಿ ಯಶ್ಚ ಮಾರ್ಗಾತ್ಪ್ರಮುಹ್ಯತಿ|
02050012c ಪಂಥಾನಮನುಗಚ್ಛೇಯುಃ ಕಥಂ ತಸ್ಯ ಪದಾನುಗಾಃ||
ಪ್ರೇರಿತ ಮಾರ್ಗದರ್ಶಿಗೆ ವೈರಿಗಳಿಂದ ಪ್ರಭಾವಿತನಾಗಿ ಯಾವ ಮಾರ್ಗವನ್ನು ತೆಗೆದುಕೊಳ್ಳಬೇಕು ಎನ್ನುವುದೇ ಗೊಂದಲಮಯವಾಗಿದೆಯಾದರೆ ಅವನನ್ನು ಅನುಸರಿಸುವರು ಹೇಗೆ ತಾನೆ ಅವನ ಮಾರ್ಗದಲ್ಲಿ ನಡೆಯಬಲ್ಲರು?
02050013a ರಾಜನ್ಪರಿಗತಪ್ರಜ್ಞೋ ವೃದ್ಧಸೇವೀ ಜಿತೇಂದ್ರಿಯಃ|
02050013c ಪ್ರತಿಪನ್ನಾನ್ಸ್ವಕಾರ್ಯೇಷು ಸಮ್ಮೋಹಯಸಿ ನೋ ಭೃಶಂ||
ರಾಜನ್! ವೃದ್ಧರನ್ನೇ ಸೇವೆಗೈಯುತ್ತಿರುವ ನಿನ್ನ ಬುದ್ಧಿಯು ಹಳತಾಗಿ ಹೋಗಿದೆ. ಜಿತೇಂದ್ರಿಯನಾಗಿದ್ದರೂ ನೀನು ನಮ್ಮ ಕಾರ್ಯಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಗೊಂದಲಗಳನ್ನುಂಟುಮಾಡುತ್ತಿದ್ದೀಯೆ.
02050014a ಲೋಕವೃತ್ತಾದ್ರಾಜವೃತ್ತಮನ್ಯದಾಹ ಬೃಹಸ್ಪತಿಃ|
02050014c ತಸ್ಮಾದ್ರಾಜ್ಞಾ ಪ್ರಯತ್ನೇನ ಸ್ವಾರ್ಥಶ್ಚಿಂತ್ಯಃ ಸದೈವ ಹಿ||
ಬೃಹಸ್ಪತಿಯು ಹೇಳಿದಂತೆ ರಾಜನ ನಡತೆಯು ಇತರ ಜನರ ನಡತೆಗಿಂಥ ಭಿನ್ನವಾಗಿರಬೇಕು. ಆದುದರಿಂದ ರಾಜನು ಸದಾ ತನ್ನ ಸ್ವಾರ್ಥ್ಯವನ್ನು ಚಿಂತಿಸುತ್ತಿರಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸುತ್ತಿರಬೇಕು.
02050015a ಕ್ಷತ್ರಿಯಸ್ಯ ಮಹಾರಾಜ ಜಯೇ ವೃತ್ತಿಃ ಸಮಾಹಿತಾ|
02050015c ಸ ವೈ ಧರ್ಮೋಽಸ್ತ್ವಧರ್ಮೋ ವಾ ಸ್ವವೃತ್ತೌ ಭರತರ್ಷಭ||
ಭರತರ್ಷಭ! ಮಹಾರಾಜ! ಕ್ಷತ್ರಿಯನ ನಡವಳಿಕೆಯು ಜಯವನ್ನು ಪಡೆಯುವುದಕ್ಕಾಗಿಯೇ ಇರಬೇಕು. ಅದು ಧರ್ಮವಾಗಿರಲಿ ಅಥವಾ ಅಧರ್ಮವಾಗಿರಲಿ, ಅದೇ ಅವನ ನಡತೆಯಾಗಿರಬೇಕು.
02050016a ಪ್ರಕಾಲಯೇದ್ದಿಶಃ ಸರ್ವಾಃ ಪ್ರತೋದೇನೇವ ಸಾರಥಿಃ|
02050016c ಪ್ರತ್ಯಮಿತ್ರಶ್ರಿಯಂ ದೀಪ್ತಾಂ ಬುಭೂಷುರ್ಭರತರ್ಷಭ||
ಭರತರ್ಷಭ! ವೈರಿಗಳ ಸಂಪತ್ತನ್ನು ಪಡೆಯುವ ಆಸೆಯಿಂದ ಸಾರಥಿಯು ತನ್ನ ಚಾಟಿಯನ್ನು ಎಲ್ಲೆಡೆಯಲ್ಲಿಯೂ ಬೀಸಬೇಕಾಗುತ್ತದೆ.
02050017a ಪ್ರಚ್ಛನ್ನೋ ವಾ ಪ್ರಕಾಶೋ ವಾ ಯೋ ಯೋಗೋ ರಿಪುಬಾಂಧನಃ|
02050017c ತದ್ವೈ ಶಸ್ತ್ರಂ ಶಸ್ತ್ರವಿದಾಂ ನ ಶಸ್ತ್ರಂ ಚೇದನಂ ಸ್ಮೃತಂ||
ಶಸ್ತ್ರವನ್ನು ತಿಳಿದವನು ಕತ್ತರಿಸುವ ಖಡ್ಗದ ಕುರಿತಲ್ಲದೇ ಅದು ಬಹಿರಂಗವಾಗಲೀ ಅಥವಾ ಮುಚ್ಚುಮರೆಯಲ್ಲಿಯಾಗಲೀ ಶತ್ರುವನ್ನು ಕೆಳಗುರುಳಿಸುವುದಕ್ಕೆ ಮಾತ್ರ ಇದೆ ಎಂದು ತಿಳಿದಿರುತ್ತಾನೆ.
02050018a ಅಸಂತೋಷಃ ಶ್ರಿಯೋ ಮೂಲಂ ತಸ್ಮಾತ್ತಂ ಕಾಮಯಾಮ್ಯಹಂ|
02050018c ಸಮುಚ್ಛ್ರಯೇ ಯೋ ಯತತೇ ಸ ರಾಜನ್ಪರಮೋ ನಯೀ||
ಅಸಂತೋಷವೇ ಸಂಪತ್ತಿನ ಮೂಲ. ಆದುದರಿಂದಲೇ ನಾನು ಅಸಂತುಷ್ಟನಾಗಿರಲು ಬಯಸುತ್ತೇನೆ. ರಾಜನ್! ಅತ್ಯುತ್ತಮ ಏಳಿಗೆಯನ್ನು ಹೊಂದಿದವನೇ ಪರಮ ರಾಜಕಾರಣಿ.
02050019a ಮಮತ್ವಂ ಹಿ ನ ಕರ್ತವ್ಯಮೈಶ್ವರ್ಯೇ ವಾ ಧನೇಽಪಿ ವಾ|
02050019c ಪೂರ್ವಾವಾಪ್ತಂ ಹರಂತ್ಯನ್ಯೇ ರಾಜಧರ್ಮಂ ಹಿ ತಂ ವಿದುಃ||
ಐಶ್ವರ್ಯ ಅಥವಾ ಧನವಿರುವಾಗ ಮಮತ್ವವನ್ನು ಸಾಧಿಸುವುದು ಸರಿಯಲ್ಲವೇ? ಹಿಂದೆ ಗಳಿಸಿದ್ದುದನ್ನು ಕಸಿದುಕೊಳ್ಳುವುದೇ ರಾಜಧರ್ಮವೆಂದು ತಿಳಿಯುತ್ತಾರೆ.
02050020a ಅದ್ರೋಹೇ ಸಮಯಂ ಕೃತ್ವಾ ಚಿಚ್ಛೇದ ನಮುಚೇಃ ಶಿರಃ|
02050020c ಶಕ್ರಃ ಸಾ ಹಿ ಮತಾ ತಸ್ಯ ರಿಪೌ ವೃತ್ತಿಃ ಸನಾತನೀ||
ದ್ರೋಹಬೇಡವೆಂದು ಒಪ್ಪಂದಮಾಡಿಕೊಂಡ ಶಕ್ರನು ನಮೂಚಿಯ ಶಿರವನ್ನು ಕತ್ತರಿಸಿದನು. ಅವನು ಮಾಡಿದ್ದುದು ಶತ್ರುವಿನೊಂದಿಗೆ ನಡೆದುಕೊಳ್ಳುವ ಒಂದು ಸನಾತನ ನಡತೆ.
02050021a ದ್ವಾವೇತೌ ಗ್ರಸತೇ ಭೂಮಿಃ ಸರ್ಪೋ ಬಿಲಶಯಾನಿವ|
02050021c ರಾಜಾನಂ ಚಾವಿರೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಂ||
ಸರ್ಪವು ಇಲಿಯನ್ನು ಹೇಗೆ ನುಂಗುತ್ತದೆಯೋ ಹಾಗೆ ಭೂಮಿಯು ವಿರೋಧಿಸದಿರುವ ರಾಜನನ್ನು ಮತ್ತು ಪ್ರವಾಸವನ್ನೇ ಮಾಡದಿರುವ ಬ್ರಾಹ್ಮಣನನ್ನು ನುಂಗುತ್ತದೆ.
02050022a ನಾಸ್ತಿ ವೈ ಜಾತಿತಃ ಶತ್ರುಃ ಪುರುಷಸ್ಯ ವಿಶಾಂ ಪತೇ|
02050022c ಯೇನ ಸಾಧಾರಣೀ ವೃತ್ತಿಃ ಸ ಶತ್ರುರ್ನೇತರೋ ಜನಃ||
ವಿಶಾಂಪತೇ! ಹುಟ್ಟಿನಿಂದಲೇ ಯಾರೂ ಇನ್ನೊಬ್ಬ ಪುರುಷನ ಶತ್ರುವಾಗಿರುವುದಿಲ್ಲ. ತನ್ನ ಹಾಗೆ ನಡೆದುಕೊಳ್ಳುವ ಯಾರೂ ಅವನಿಗೆ ಶತ್ರುವಾಗುವುದಿಲ್ಲ.
02050023a ಶತ್ರುಪಕ್ಷಂ ಸಮೃಧ್ಯಂತಂ ಯೋ ಮೋಹಾತ್ಸಮುಪೇಕ್ಷತೇ|
02050023c ವ್ಯಾಧಿರಾಪ್ಯಾಯಿತ ಇವ ತಸ್ಯ ಮೂಲಂ ಚಿನತ್ತಿ ಸಃ||
ಶತ್ರುಪಕ್ಷವು ವೃದ್ಧಿಸುತ್ತಿರುವುದನ್ನು ಮೋಹದಿಂದ ನೋಡಿದವನು ಹರಡುತ್ತಿರುವ ವ್ಯಾಧಿಯನ್ನು ಹೇಗೋ ಹಾಗೆ ಅದರ ಬುಡವನ್ನೇ ಕತ್ತರಿಸುತ್ತಾನೆ.
02050024a ಅಲ್ಪೋಽಪಿ ಹ್ಯರಿರತ್ಯಂತಂ ವರ್ಧಮಾನಪರಾಕ್ರಮಃ|
02050024c ವಲ್ಮೀಕೋ ಮೂಲಜ ಇವ ಗ್ರಸತೇ ವೃಕ್ಷಮಂತಿಕಾತ್||
ಎಷ್ಟೇ ಸಣ್ಣದಿರಲಿ, ಪರಾಕ್ರಮದಲ್ಲಿ ವೃದ್ಧಿಸುತ್ತಿರುವ ಶತ್ರುವು ಖಂಡಿತವಾಗಿಯೂ ವೃಕ್ಷದ ಬುಡದಲ್ಲಿ ಬೆಳೆಯುತ್ತಿರುವ ಹುತ್ತವು ವೃಕ್ಷವನ್ನು ಹೇಗೋ ಹಾಗೆ ನುಂಗಿಬಿಡುತ್ತದೆ.
02050025a ಆಜಮೀಢ ರಿಪೋರ್ಲಕ್ಷ್ಮೀರ್ಮಾ ತೇ ರೋಚಿಷ್ಟ ಭಾರತ|
02050025c ಏಷ ಭಾರಃ ಸತ್ತ್ವವತಾಂ ನಯಃ ಶಿರಸಿ ಧಿಷ್ಠಿತಃ||
ಆಜಮೀಢ! ಭಾರತ! ಶತ್ರುವಿನ ಅಭಿವೃದ್ಧಿಯು ನಿನ್ನನ್ನು ಸಂತೋಷಗೊಳಿಸದಿರಲಿ! ಸತ್ಯವಂತರ ಶಿರದ ಮೇಲಿರುವ ಈ ನ್ಯಾಯವು ಒಂದು ಭಾರವೇ ಸರಿ.
02050026a ಜನ್ಮವೃದ್ಧಿಮಿವಾರ್ಥಾನಾಂ ಯೋ ವೃದ್ಧಿಮಭಿಕಾಂಕ್ಷತೇ|
02050026c ಏಧತೇ ಜ್ಞಾತಿಷು ಸ ವೈ ಸದ್ಯೋವೃದ್ಧಿರ್ಹಿ ವಿಕ್ರಮಃ||
ಹುಟ್ಟಿದಾಗಿನಿಂದ ಹೇಗೆ ಬೆಳೆಯುತ್ತಾ ಬಂದಿದ್ದೀವೋ ಹಾಗೆ ನಮ್ಮ ಸಂಪತ್ತೂ ಕುಡ ಬೆಳೆಯುತ್ತದೆ ಎಂದು ಬಯಸುವವನು ತನ್ನ ಬಂಧುಬಾಂಧವರೊಡನೆ ಹೇಗೆ ತಾನೇ ಅಭಿವೃದ್ಧಿಯನ್ನು ಹೊಂದಬಲ್ಲ? ವಿಕ್ರಮವೇ ಶೀಘ್ರ ಅಭಿವೃದ್ಧಿ.
02050027a ನಾಪ್ರಾಪ್ಯ ಪಾಂಡವೈಶ್ವರ್ಯಂ ಸಂಶಯೋ ಮೇ ಭವಿಷ್ಯತಿ|
02050027c ಅವಾಪ್ಸ್ಯೇ ವಾ ಶ್ರಿಯಂ ತಾಂ ಹಿ ಶೇಷ್ಯೇ ವಾ ನಿಹತೋ ಯುಧಿ||
02050028a ಅತಾದೃಶಸ್ಯ ಕಿಂ ಮೇಽದ್ಯ ಜೀವಿತೇನ ವಿಶಾಂ ಪತೇ|
02050028c ವರ್ಧಂತೇ ಪಾಂಡವಾ ನಿತ್ಯಂ ವಯಂ ತು ಸ್ಥಿರವೃದ್ಧಯಃ||
ಪಾಂಡವರ ಐಶ್ವರ್ಯವನ್ನು ಪಡೆಯುವವರೆಗೆ ನಾನು ಅಪಾಯದಲ್ಲಿದ್ದೇನೆ. ನಾನು ಆ ಶ್ರೀಯನ್ನು ಪಡೆಯುತ್ತೇನೆ ಅಥವಾ ಯುದ್ಧದಲ್ಲಿ ಮರಣಹೊಂದುತ್ತೇನೆ. ವಿಶಾಂಪತೇ! ಅವನಿಗೆ ಸದೃಶನಾಗಿರದಿದ್ದರೆ ನಾನು ಏಕೆ ತಾನೆ ಜೀವಿಸಬೇಕು? ಪಾಂಡವರು ದಿನ ನಿತ್ಯವೂ ವರ್ಧಿಸುತ್ತಿದ್ದಾರೆ. ನಾವು ಮಾತ್ರ ನಿಂತಲ್ಲಿಯೇ ನಿಂತಿದ್ದೇವೆ.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಪಂಚಶತ್ತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ಐವತ್ತನೆಯ ಅಧ್ಯಾಯವು.