Sabha Parva: Chapter 48

ಸಭಾ ಪರ್ವ: ದ್ಯೂತ ಪರ್ವ

೪೮

ಭೂಮಿಪಾಲರು ಪಾಂಡವರಿಗಾಗಿ ತಂದ ಮುಖ್ಯ ಐಶ್ವರ್ಯಗಳ ವರ್ಣನೆಯನ್ನು ದುರ್ಯೋಧನನು ಮುಂದುವರಿಸಿದುದು (೧-೪೨).

02048001 ದುರ್ಯೋಧನ ಉವಾಚ|

02048001a ದಾಯಂ ತು ತಸ್ಮೈ ವಿವಿಧಂ ಶೃಣು ಮೇ ಗದತೋಽನಘ|

02048001c ಯಜ್ಞಾರ್ಥಂ ರಾಜಭಿರ್ದತ್ತಂ ಮಹಾಂತಂ ಧನಸಂಚಯಂ||

ದುರ್ಯೋಧನನು ಹೇಳಿದನು: “ಅನಘ! ಯಜ್ಞಾರ್ಥವಾಗಿ ರಾಜರು ತಂದಿದ್ದ ವಿವಿಧ ಮಹಾ ಧನಸಂಚಯವನ್ನು ಹೇಳುತ್ತೇನೆ. ಕೇಳು.

02048002a ಮೇರುಮಂದರಯೋರ್ಮಧ್ಯೇ ಶೈಲೋದಾಮಭಿತೋ ನದೀಂ|

02048002c ಯೇ ತೇ ಕೀಚಕವೇಣೂನಾಂ ಚಾಯಾಂ ರಮ್ಯಾಮುಪಾಸತೇ||

02048003a ಖಶಾ ಏಕಾಶನಾಜ್ಯೋಹಾಃ ಪ್ರದರಾ ದೀರ್ಘವೇಣವಃ|

02048003c ಪಶುಪಾಶ್ಚ ಕುಣಿಂದಾಶ್ಚ ತಂಗಣಾಃ ಪರತಂಗಣಾಃ||

02048004a ತೇ ವೈ ಪಿಪೀಲಿಕಂ ನಾಮ ವರದತ್ತಂ ಪಿಪೀಲಿಕೈಃ|

02048004c ಜಾತರೂಪಂ ದ್ರೋಣಮೇಯಮಹಾರ್ಷುಃ ಪುಂಜಶೋ ನೃಪಾಃ||

ಮೇರು ಮತ್ತು ಮಂದರಗಳ ಮಧ್ಯೆ ಶೈಲೋದ ನದೀ ತೀರದಲ್ಲಿ ಬಿದಿರು ಮತ್ತು ಕಬ್ಬುಗಳ ನೆರಳಿನಲ್ಲಿ ವಾಸಿಸುವ ಖಶ, ಏಕಾಶನ, ಜ್ಯೋಹ, ಪ್ರದರ, ದೀರ್ಘವೇನ, ಪಶುಪ, ಕುಣಿಂದ, ತಂಗಣ, ಪರತಂಗಣ ಮೊದರಾದ ರಾಜರುಗಳು, ಪಿಪೀಲಕ ಇರುವೆಗಳು ನೀಡುವ ಪಿಪೀಲಿಕ ಎಂಬ ಹೆಸರಿನ ಚಿನ್ನವನ್ನು ಪಾತ್ರೆಗಳಲ್ಲಿ ತುಂಬಿಸಿ ರಾಶಿಗಟ್ಟಲೆ ತಂದಿದ್ದರು.

02048005a ಕೃಷ್ಣಾಽಲ್ಲಲಾಮಾಂಶ್ಚಮರಾಂ ಶುಕ್ಲಾಂಶ್ಚಾನ್ಯಾಂ ಶಶಿಪ್ರಭಾನ್|

02048005c ಹಿಮವತ್ಪುಷ್ಪಜಂ ಚೈವ ಸ್ವಾದು ಕ್ಷೌದ್ರಂ ತಥಾ ಬಹು||

02048006a ಉತ್ತರೇಭ್ಯಃ ಕುರುಭ್ಯಶ್ಚಾಪ್ಯಪೋಢಂ ಮಾಲ್ಯಮಂಬುಭಿಃ|

02048006c ಉತ್ತರಾದಪಿ ಕೈಲಾಸಾದೋಷಧೀಃ ಸುಮಹಾಬಲಾಃ||

02048007a ಪಾರ್ವತೀಯಾ ಬಲಿಂ ಚಾನ್ಯಮಾಹೃತ್ಯ ಪ್ರಣತಾಃ ಸ್ಥಿತಾಃ|

02048007c ಅಜಾತಶತ್ರೋರ್ನೃಪತೇರ್ದ್ವಾರಿ ತಿಷ್ಠಂತಿ ವಾರಿತಾಃ||

ಕಪ್ಪು ಮತ್ತು ಬಿಳಿಯ ಚುಕ್ಕೆಗಳ ಶಶಿಪ್ರಭೆಯ ಚಾಮರಗಳು, ಹಿಮಾಲಯದ ಪುಷ್ಪಗಳಿಂದ ತಯಾರಾದ ಜೇನುತುಪ್ಪ, ಉತ್ತರ ಕುರುವಿನಿಂದ ಬಂದ ಸುಗಂಧಯುಕ್ತ ನೀರು, ಉತ್ತರ ಕೈಲಾಸದಿಂದ ಮಹಾಶಕ್ತಿಯುಳ್ಳ ಔಷಧಗಳು ಇವೆಲ್ಲವನ್ನೂ ಕಾಣಿಕೆಯಾಗಿ ತಂದ ಪಾರ್ವತೀಯರು ಅಜಾತಶತ್ರು ನೃಪತಿಯ ದ್ವಾರದಲ್ಲಿ ಪ್ರವೇಶ ದೊರೆಯದೇ ನಿಂತಿದ್ದರು.

02048008a ಯೇ ಪರಾರ್ಧೇ ಹಿಮವತಃ ಸೂರ್ಯೋದಯಗಿರೌ ನೃಪಾಃ|

02048008c ವಾರಿಷೇಣಸಮುದ್ರಾಂತೇ ಲೋಹಿತ್ಯಮಭಿತಶ್ಚ ಯೇ|

02048008e ಫಲಮೂಲಾಶನಾ ಯೇ ಚ ಕಿರಾತಾಶ್ಚರ್ಮವಾಸಸಃ||

02048009a ಚಂದನಾಗುರುಕಾಷ್ಠಾನಾಂ ಭಾರಾನ್ಕಾಲೀಯಕಸ್ಯ ಚ|

02048009c ಚರ್ಮರತ್ನಸುವರ್ಣಾನಾಂ ಗಂಧಾನಾಂ ಚೈವ ರಾಶಯಃ||

02048010a ಕೈರಾತಿಕಾನಾಮಯುತಂ ದಾಸೀನಾಂ ಚ ವಿಶಾಂ ಪತೇ|

02048010c ಆಹೃತ್ಯ ರಮಣೀಯಾರ್ಥಾನ್ದೂರಜಾನ್ಮೃಗಪಕ್ಷಿಣಃ||

02048011a ನಿಚಿತಂ ಪರ್ವತೇಭ್ಯಶ್ಚ ಹಿರಣ್ಯಂ ಭೂರಿವರ್ಚಸಂ|

02048011c ಬಲಿಂ ಚ ಕೃತ್ಸ್ನಮಾದಾಯ ದ್ವಾರಿ ತಿಷ್ಠಂತಿ ವಾರಿತಾಃ||

ವಿಶಾಂಪತೇ! ಹಿಮಾಲಯ ಮತ್ತು ಸೂರ್ಯೋದಯಗಿರಿಯ ಇನ್ನೊಂದು ಕಡೆಯ ನೃಪರು, ವಾರಿಷೇಣ ಸಮುದ್ರದ ಕೊನೆಯಲ್ಲಿರುವವರು, ಲೋಹಿತ್ಯದ ಬಳಿ ಇರುವ ಫಲಮೂಲಗಳನ್ನು ಸೇವಿಸುವ ಚರ್ಮಗಳನ್ನು ಧರಿಸಿದ ಕಿರಾತರು ಗಂಧ, ಅಗರು ಮತ್ತು ಕಾಲೀಯಕ ತುಂಡುಗಳ ಹೊರೆಗಳನ್ನು, ಚರ್ಮ, ರತ್ನ, ಸುವರ್ಣ ಮತ್ತು ಸುಗಂಧಗಳ ರಾಶಿಗಳು, ಸುಂದರ ಕೈರಾತ ದಾಸಿಯರು, ದೂರದಲ್ಲಿ ಜನಿಸಿದ ರಮಣೀಯ ಮೃಗಪಕ್ಷಿಗಳು, ಪರ್ವತಗಳಲ್ಲಿ ದೊರೆಯುವ ಸುಂದರ ಹಿರಣ್ಯಗಳು - ಇವೆಲ್ಲವನ್ನೂ ತಂದು ಪ್ರವೇಶ ದೊರೆಯದೇ ದ್ವಾರದಲ್ಲಿಯೇ ನಿಂತಿದ್ದರು.

02048012a ಕಾಯವ್ಯಾ ದರದಾ ದಾರ್ವಾಃ ಶೂರಾ ವೈಯಮಕಾಸ್ತಥಾ|

02048012c ಔದುಂಬರಾ ದುರ್ವಿಭಾಗಾಃ ಪಾರದಾ ಬಾಹ್ಲಿಕೈಃ ಸಹ||

02048013a ಕಾಶ್ಮೀರಾಃ ಕುಂದಮಾನಾಶ್ಚ ಪೌರಕಾ ಹಂಸಕಾಯನಾಃ|

02048013c ಶಿಬಿತ್ರಿಗರ್ತಯೌಧೇಯಾ ರಾಜನ್ಯಾ ಮದ್ರಕೇಕಯಾಃ||

02048014a ಅಂಬಷ್ಠಾಃ ಕೌಕುರಾಸ್ತಾರ್ಕ್ಷ್ಯಾ ವಸ್ತ್ರಪಾಃ ಪಹ್ಲವೈಃ ಸಹ|

02048014c ವಸಾತಯಃ ಸಮೌಲೇಯಾಃ ಸಹ ಕ್ಷುದ್ರಕಮಾಲವೈಃ||

02048015a ಶೌಂಡಿಕಾಃ ಕುಕ್ಕುರಾಶ್ಚೈವ ಶಕಾಶ್ಚೈವ ವಿಶಾಂ ಪತೇ|

02048015c ಅಂಗಾ ವಂಗಾಶ್ಚ ಪುಂಡ್ರಾಶ್ಚ ಶಾನವತ್ಯಾ ಗಯಾಸ್ತಥಾ||

02048016a ಸುಜಾತಯಃ ಶ್ರೇಣಿಮಂತಃ ಶ್ರೇಯಾಂಸಃ ಶಸ್ತ್ರಪಾಣಯಃ|

02048016c ಆಹಾರ್ಷುಃ ಕ್ಷತ್ರಿಯಾ ವಿತ್ತಂ ಶತಶೋಽಜಾತಶತ್ರವೇ||

ವಿಶಾಂಪತೇ! ಕಾಯವ್ಯ, ದರದ, ದರ್ವ, ಶೂರ, ವೈಯಮಕ, ಔದುಂಬರ, ದುರ್ವಿಭಾಗ, ಪೌರಕ, ಹಂಸಕಾಯನ, ಶಿಬಿ, ತ್ರಿಗರ್ತ, ಯೌಧೇಯ, ಮದ್ರ, ಕೇಕಯ ರಾಜರುಗಳು; ಅಂಬಷ್ಠ, ಕೌಕುರ, ತಾರ್ಕ್ಷ್ಯ, ವಸ್ತ್ರಪ, ಫಹ್ಲವ, ವಸತ, ಮೌಲೇಯ, ಕ್ಷದ್ರಕಮಾಲ, ಶೌಂಡಿಕ, ಕುಂಕುರ, ಶಕ, ಅಂಗ, ವಂಗ, ಪುಂಡ್ರ, ಶಾನವತ್ಯ, ಗಯ, ಸುಜತ, ಶ್ರೇಣಿಮಂತ, ಮತ್ತು ಎಲ್ಲ ಶ್ರೇಯ ಶಸ್ತ್ರಪಾಣಿ ಕ್ಷತ್ರಿಯರು ಅಜಾತಶತ್ರುವಿಗೆ ನೂರಾರು ತರಹದ ಸಂಪತ್ತನ್ನು ತಂದೊಪ್ಪಿಸಿದರು.

02048017a ವಂಗಾಃ ಕಲಿಂಗಪತಯಸ್ತಾಮ್ರಲಿಪ್ತಾಃ ಸಪುಂಡ್ರಕಾಃ|

02048017c ದುಕೂಲಂ ಕೌಶಿಕಂ ಚೈವ ಪತ್ರೋರ್ಣಂ ಪ್ರಾವರಾನಪಿ||

ವಂಗ, ಕಲಿಂಗ, ತಾಮ್ರಲಿಪ್ತ ಮತ್ತು ಪುಂಡ್ರಕರು ಕೌಶಿಕ ನದಿಯಲ್ಲಿ ದೊರೆಯುವ ದುಕೂಲ ಮತ್ತು ರೇಷ್ಮೆಯ ವಸ್ತ್ರಗಳನ್ನು ತಂದರು.

02048018a ತತ್ರ ಸ್ಮ ದ್ವಾರಪಾಲೈಸ್ತೇ ಪ್ರೋಚ್ಯಂತೇ ರಾಜಶಾಸನಾತ್|

02048018c ಕೃತಕಾರಾಃ ಸುಬಲಯಸ್ತತೋ ದ್ವಾರಮವಾಪ್ಸ್ಯಥ||

ಆಗ ಅಲ್ಲಿದ್ದ ದ್ವಾರಪಾಲಕರು ರಾಜಶಾಸನದಂತೆ “ನೀವು ಒಳ್ಳೆಯ ಪ್ರಮಾಣದಲ್ಲಿ ಕಪ್ಪ ಕಾಣಿಕೆಗಳನ್ನು ತರಲಿಲ್ಲವಾದರೆ ನಿಮಗೆ ದ್ವಾರದಲ್ಲಿ ಪ್ರವೇಶ ದೊರೆಯದು” ಎಂದರು.

02048019a ಈಷಾದಂತಾನ್ ಹೇಮಕಕ್ಷಾನ್ಪದ್ಮವರ್ಣಾನ್ಕುಥಾವೃತಾನ್|

02048019c ಶೈಲಾಭಾನ್ನಿತ್ಯಮತ್ತಾಂಶ್ಚ ಅಭಿತಃ ಕಾಮ್ಯಕಂ ಸರಃ||

02048020a ದತ್ತ್ವೈಕೈಕೋ ದಶಶತಾನ್ಕುಂಜರಾನ್ಕವಚಾವೃತಾನ್|

02048020c ಕ್ಷಮಾವತಃ ಕುಲೀನಾಂಶ್ಚ ದ್ವಾರೇಣ ಪ್ರಾವಿಶಂಸ್ತತಃ||

ಒಬ್ಬೊಬ್ಬರೂ ಒಂದೊಂದು ಸಾವಿರ ಹೇಮಕಕ್ಷಗಳನ್ನು ಹೊಂದಿದ್ದ, ಪದ್ಮವರ್ಣದ ಬಟ್ಟೆಗಳನ್ನು ಹೊದಿಸಲ್ಪಟ್ಟ ಪರ್ವತಗಳಂಥಹ ನಿತ್ಯವೂ ಮದಿಸಿರುವ ಕಾಮ್ಯಕ ಸರೋವರದಲ್ಲಿ ಜನಿಸಿದ, ಕವಚಗಳಿಂದ ಆವೃತ, ಕ್ಷಮಾವಂತ, ಒಳ್ಳೆಯ ಜಾತಿಯ ಉದ್ದ ದಂತಗಳ ಆನೆಗಳೊಂದಿಗೆ ದ್ವಾರವನ್ನು ಪ್ರವೇಶಿಸಿದರು.

02048021a ಏತೇ ಚಾನ್ಯೇ ಚ ಬಹವೋ ಗಣಾ ದಿಗ್ಭ್ಯಃ ಸಮಾಗತಾಃ|

02048021c ಅನ್ಯೈಶ್ಚೋಪಾಹೃತಾನ್ಯತ್ರ ರತ್ನಾನೀಹ ಮಹಾತ್ಮಭಿಃ||

ಇವರು ಮತ್ತು ಇನ್ನಿತರ ಬಹಳಷ್ಟು ಗಣಗಳು ದಿಕ್ಕುದಿಕ್ಕುಗಳಿಂದ ಸೇರಿದ್ದರು ಮತ್ತು ಆ ಮಹಾತ್ಮರು ರತ್ನಗಳನ್ನು ನೀಡಿದರು.

02048022a ರಾಜಾ ಚಿತ್ರರಥೋ ನಾಮ ಗಂಧರ್ವೋ ವಾಸವಾನುಗಃ|

02048022c ಶತಾನಿ ಚತ್ವಾರ್ಯದದದ್ಧಯಾನಾಂ ವಾತರಂಹಸಾಂ||

02048023a ತುಂಬುರುಸ್ತು ಪ್ರಮುದಿತೋ ಗಂಧರ್ವೋ ವಾಜಿನಾಂ ಶತಂ|

02048023c ಆಮ್ರಪತ್ರಸವರ್ಣಾನಾಮದದದ್ಧೇಮಮಾಲಿನಾಂ||

ರಾಜಾ ಚಿತ್ರರಥನೆಂಬ ಹೆಸರಿನ ವಾಸವಾನುಗ ಗಂಧರ್ವನು ಮಾವಿನ ತಳಿರಿನ ಬಣ್ಣದ ಒಂದು ನೂರು ಹೇಮಮಾಲಿನ ಕುದುರೆಗಳನ್ನು ನೀಡಿದನು.

02048024a ಕೃತೀ ತು ರಾಜಾ ಕೌರವ್ಯ ಶೂಕರಾಣಾಂ ವಿಶಾಂ ಪತೇ|

02048024c ಅದದದ್ಗಜರತ್ನಾನಾಂ ಶತಾನಿ ಸುಬಹೂನ್ಯಪಿ||

ವಿಶಾಂಪತೇ! ಕೌರವ್ಯ! ಶೂಕರರ ರಾಜ ಕೃತಿಯು ಅನೇಕ ನೂರು ಗಜರತ್ನಗಳನ್ನು ಉಡುಗೊರೆಯನ್ನಾಗಿತ್ತನು.

02048025a ವಿರಾಟೇನ ತು ಮತ್ಸ್ಯೇನ ಬಲ್ಯರ್ಥಂ ಹೇಮಮಾಲಿನಾಂ|

02048025c ಕುಂಜರಾಣಾಂ ಸಹಸ್ರೇ ದ್ವೇ ಮತ್ತಾನಾಂ ಸಮುಪಾಹೃತೇ||

ಮತ್ಸ್ಯ ವಿರಾಟನು ಕಾಣಿಕೆಯಾಗಿ ಎರಡುಸಾವಿರ ಹೇಮಮಾಲಿನಿ ಮತ್ತ ಕುಂಜರಗಳನ್ನು ತಂದೊಪ್ಪಿಸಿದನು.

02048026a ಪಾಂಶುರಾಷ್ಟ್ರಾದ್ವಸುದಾನೋ ರಾಜಾ ಷಡ್ವಿಂಶತಿಂ ಗಜಾನ್|

02048026c ಅಶ್ವಾನಾಂ ಚ ಸಹಸ್ರೇ ದ್ವೇ ರಾಜನ್ಕಾಂಚನಮಾಲಿನಾಂ||

02048027a ಜವಸತ್ತ್ವೋಪಪನ್ನಾನಾಂ ವಯಃಸ್ಥಾನಾಂ ನರಾಧಿಪ|

02048027c ಬಲಿಂ ಚ ಕೃತ್ಸ್ನಮಾದಾಯ ಪಾಂಡವೇಭ್ಯೋ ನ್ಯವೇದಯತ್||

ನರಾಧಿಪ! ಪಾಂಡುರಾಷ್ಟ್ರದ ರಾಜ ವಸುದಾನನು ಇಪ್ಪತ್ತಾರು ಆನೆಗಳನ್ನು, ಎರಡು ಸಹಸ್ರ ವೇಗ ಮತ್ತು ಸತ್ವಯುತ, ಕಾಂಚನಮಾಲಿನ ಬೆಳೆದ ಅಶ್ವಗಳನ್ನು ಕಾಣಿಕೆಯಾಗಿ ತಂದು ಪಾಂಡವನಿಗೆ ಒಪ್ಪಿಸಿದನು.

02048028a ಯಜ್ಞಸೇನೇನ ದಾಸೀನಾಂ ಸಹಸ್ರಾಣಿ ಚತುರ್ದಶ|

02048028c ದಾಸಾನಾಮಯುತಂ ಚೈವ ಸದಾರಾಣಾಂ ವಿಶಾಂ ಪತೇ||

02048029a ಗಜಯುಕ್ತಾ ಮಹಾರಾಜ ರಥಾಃ ಷಡ್ವಿಂಶತಿಸ್ತಥಾ|

02048029c ರಾಜ್ಯಂ ಚ ಕೃತ್ಸ್ನಂ ಪಾರ್ಥೇಭ್ಯೋ ಯಜ್ಞಾರ್ಥಂ ವೈ ನಿವೇದಿತಂ||

ವಿಶಾಂಪತೇ! ಯಾಜ್ಞಸೇನನು ಹದಿನಾಲ್ಕು ಸಾವಿರ ದಾಸಿಯರನ್ನು, ಹತ್ತು ಸಾವಿರ ಮದುವೆಯಾಗಿರುವ ದಾಸರನ್ನು ನೀಡಿದನು. ಮಹಾರಾಜ! ಇಪ್ಪತ್ತಾರು ಗಜಯುಕ್ತ ರಥಗಳನ್ನು ಮತ್ತು ಇಡೀ ರಾಜ್ಯವನ್ನೇ ಪಾರ್ಥನ ಯಜ್ಞಾರ್ಥವಾಗಿ ನಿವೇದಿಸಿದ್ದನು.

02048030a ಸಮುದ್ರಸಾರಂ ವೈಡೂರ್ಯಂ ಮುಕ್ತಾಃ ಶಂಖಾಂಸ್ತಥೈವ ಚ|

02048030c ಶತಶಶ್ಚ ಕುಥಾಂಸ್ತತ್ರ ಸಿಂಹಲಾಃ ಸಮುಪಾಹರನ್||

ಸಿಂಹಳರು ಸಮುದ್ರಸಾರದಲ್ಲಿದ್ದ ವೈಡೂರ್ಯ, ಮುತ್ತು, ಶಂಖ, ಗಜಶಾಲೆಗಳ ಸಹಿತ ನೂರಾರು ಆನೆಗಳನ್ನು ಉಡುಗೊರೆಯನ್ನಾಗಿತ್ತರು.

02048031a ಸಂವೃತಾ ಮಣಿಚೀರೈಸ್ತು ಶ್ಯಾಮಾಸ್ತಾಮ್ರಾಂತಲೋಚನಾಃ|

02048031c ತಾನ್ಗೃಹೀತ್ವಾ ನರಾಸ್ತತ್ರ ದ್ವಾರಿ ತಿಷ್ಠಂತಿ ವಾರಿತಾಃ||

ಮಣಿಗಳಿಂದಲಂಕೃತ ವಸ್ತ್ರಗಳನ್ನು ಧರಿಸಿದ್ದ ಕೆಂಪು ಕಣ್ಣು ಮತ್ತು ಕಪ್ಪು ಬಣ್ಣದವರು ಎಲ್ಲರೂ ಸೇರಿ ಹಲವಾರು ಉಡುಗೊರೆಗಳನ್ನು ಹಿಡಿದುಕೊಂಡು ಬಂದವರು ದ್ವಾರದಲ್ಲಿ ಕಾಯುತ್ತಿದ್ದರು.

02048032a ಪ್ರೀತ್ಯರ್ಥಂ ಬ್ರಾಹ್ಮಣಾಶ್ಚೈವ ಕ್ಷತ್ರಿಯಾಶ್ಚ ವಿನಿರ್ಜಿತಃ|

02048032c ಉಪಾಜಹ್ರುರ್ವಿಶಶ್ಚೈವ ಶೂದ್ರಾಃ ಶುಶ್ರೂಷವೋಽಪಿ ಚ|

02048032e ಪ್ರೀತ್ಯಾ ಚ ಬಹುಮಾನಾಚ್ಚ ಅಭ್ಯಗಚ್ಛನ್ಯುಧಿಷ್ಠಿರಂ||

02048033a ಸರ್ವೇ ಮ್ಲೇಚ್ಛಾಃ ಸರ್ವವರ್ಣಾ ಆದಿಮಧ್ಯಾಂತಜಾಸ್ತಥಾ|

02048033c ನಾನಾದೇಶಸಮುತ್ಥೈಶ್ಚ ನಾನಾಜಾತಿಭಿರಾಗತೈಃ|

02048033e ಪರ್ಯಸ್ತ ಇವ ಲೋಕೋಽಯಂ ಯುಧಿಷ್ಠಿರನಿವೇಶನೇ||

ಬ್ರಾಹ್ಮಣರು ಪ್ರೀತಿಯಿಂದ, ಸೋಲನ್ನನುಭವಿಸಿದ್ದುದಕ್ಕಾಗಿ ಕ್ಷತ್ರಿಯರು, ಶುಶ್ರೂಷೆಗೊಳ್ಳುವವರೆಂದು ವೈಶ್ಯ ಶೂದ್ರರು ಉಡುಗೊರೆಗಳನ್ನು ತೆಗೆದುಕೊಂಡು ಬಂದರು. ಯುಧಿಷ್ಠಿರನಲ್ಲಿಗೆ ಪ್ರೀತಿಯಿಂದ ಉಡುಗೊರೆಗಳನ್ನು ತೆಗೆದುಕೊಂಡು ಸರ್ವ ಮ್ಲೇಚ್ಛರೂ, ಸರ್ವವರ್ಣದವರೂ, ಆದಿ ಮದ್ಯಾಂತ ಜಾತಿಯವರೂ, ನಾನಾದೇಶಗಳಿಂದ, ನಾನಾ ಜಾತಿಬಿರಾದರಿಗಳಿಂದ, ಬಂದಿದ್ದರು. ಪೂರ್ಣ ಲೋಕವೇ ಯುಧಿಷ್ಠಿರನ ಮನೆಯಲ್ಲಿ ಪ್ರತಿನಿಧಿಸಲ್ಪಟ್ಟಿತ್ತು.

02048034a ಉಚ್ಚಾವಚಾನುಪಗ್ರಾಹಾನ್ರಾಜಭಿಃ ಪ್ರಹಿತಾನ್ಬಹೂನ್|

02048034c ಶತ್ರೂಣಾಂ ಪಶ್ಯತೋ ದುಃಖಾನ್ಮುಮೂರ್ಷಾ ಮೇಽದ್ಯ ಜಾಯತೇ||

ಈಗ ಹೇಳಿದ್ದ ಹೇಳದೇ ಇದ್ದ ಬಹಳಷ್ಟು ಉಡುಗೊರೆಗಳನ್ನು ರಾಜರುಗಳು ನನ್ನ ಶತ್ರುವಿಗೆ ನೀಡಿದುದನ್ನು ನೋಡಿ ದುಃಖದಿಂದ ಇಂದೇ ಮರಣಬರಲಿ ಎಂದೆನಿಸುತ್ತಿದೆ.

02048035a ಭೃತ್ಯಾಸ್ತು ಯೇ ಪಾಂಡವಾನಾಂ ತಾಂಸ್ತೇ ವಕ್ಷ್ಯಾಮಿ ಭಾರತ|

02048035c ಯೇಷಾಮಾಮಂ ಚ ಪಕ್ವಂ ಚ ಸಂವಿಧತ್ತೇ ಯುಧಿಷ್ಠಿರಃ||

ಭಾರತ! ಪಾಂಡವ ಯುಧಿಷ್ಠಿರನ ಪಕ್ವ ಮತ್ತು ತರಕಾರಿಗಳನ್ನೇ ಅವಲಂಬಿಸಿ ಎಷ್ಟು ಜನರಿದ್ದರು ಎನ್ನುವುದನ್ನು ಹೇಳುತ್ತೇನೆ:

02048036a ಅಯುತಂ ತ್ರೀಣಿ ಪದ್ಮಾನಿ ಗಜಾರೋಹಾಃ ಸಸಾದಿನಃ|

02048036c ರಥಾನಾಮರ್ಬುದಂ ಚಾಪಿ ಪಾದಾತಾ ಬಹವಸ್ತಥಾ||

ಲೆಕ್ಕಕ್ಕೇ ಸಿಗದ ಮೂರು ಪದ್ಮಗಳಷ್ಟು ಗಜಾರೋಹರು ಮತ್ತು ಮಾವುತರು, ತಿಳಿಯುವುದಕ್ಕೇ ಸಾದ್ಯವಾಗದಷ್ಟು ಸಂಖ್ಯೆಯಲ್ಲಿನ ಬಹಳಷ್ಟು ಕಾಲ್ದಾಳುಗಳು.

02048037a ಪ್ರಮೀಯಮಾಣಮಾರಬ್ಧಂ ಪಚ್ಯಮಾನಂ ತಥೈವ ಚ|

02048037c ವಿಸೃಜ್ಯಮಾನಂ ಚಾನ್ಯತ್ರ ಪುಣ್ಯಾಹಸ್ವನ ಏವ ಚ||

ಆಹಾರಸಾಮಾಗ್ರಿಗಳನ್ನು ಒಂದುಕಡೆ ಅಳೆಯುತ್ತಿದ್ದರೆ ಇನ್ನೊಂದೆಡೆ ಅಡುಗೆಯಾಗುತ್ತಿತ್ತು. ಮತ್ತೊಂದೆಡೆ ನೀಡಲಾಗುತ್ತಿದ್ದರೆ ಮೊಗದೊಂದೆಡೆ ಪುಣ್ಯಾಹವಾಚನವು ಕೇಳಿಬರುತ್ತಿತ್ತು.

02048038a ನಾಭುಕ್ತವಂತಂ ನಾಹೃಷ್ಟಂ ನಾಸುಭಿಕ್ಷಂ ಕಥಂ ಚನ|

02048038c ಅಪಶ್ಯಂ ಸರ್ವವರ್ಣಾನಾಂ ಯುಧಿಷ್ಠಿರನಿವೇಶನೇ||

ಯುಧಿಷ್ಠಿರನ ಮನೆಯಲ್ಲಿ ಊಟ ನೀಡಿಸಲ್ಪಟ್ಟಿರದ, ಅಸಂತುಷ್ಟ, ಅಸುಭಿಕ್ಷ ಯಾರನ್ನೂ ಯಾವ ವರ್ಣದವರಲ್ಲಿಯೂ ಕಾಣಲಿಲ್ಲ.

02048039a ಅಷ್ಟಾಶೀತಿಸಹಸ್ರಾಣಿ ಸ್ನಾತಕಾ ಗೃಹಮೇಧಿನಃ|

02048039c ತ್ರಿಂಶದ್ದಾಸೀಕ ಏಕೈಕೋ ಯಾನ್ಬಿಭರ್ತಿ ಯುಧಿಷ್ಠಿರಃ|

02048039e ಸುಪ್ರೀತಾಃ ಪರಿತುಷ್ಟಾಶ್ಚ ತೇಽಪ್ಯಾಶಂಸಂತ್ಯರಿಕ್ಷಯಂ||

ಅಲ್ಲಿ ಯುಧಿಷ್ಠಿರನು ಪೊರೆಯುತ್ತಿರುವ ಎಂಭತ್ತೆಂಟು ಸಾವಿರ ಸ್ನಾತಕ ಕುಟುಂಬಗಳಿವೆ. ಈ ಕುಟುಂಬಗಳಿಗೆ ಒಂದೊಂದರಲ್ಲಿ ಮೂವತ್ತು ಆಳುಗಳಿದ್ದರು. ಸುಪ್ರೀತ ಪರಿತುಷ್ಟರಾದ ಇವರು ಅವನ ಶತ್ರುಗಳ ಅಂತ್ಯಕ್ಕಾಗಿ ಆಶಿಸುತ್ತಿರುತ್ತಾರೆ.

02048040a ದಶಾನ್ಯಾನಿ ಸಹಸ್ರಾಣಿ ಯತೀನಾಮೂರ್ಧ್ವರೇತಸಾಂ|

02048040c ಭುಂಜತೇ ರುಕ್ಮಪಾತ್ರೀಷು ಯುಧಿಷ್ಠಿರನಿವೇಶನೇ||

ಇನ್ನೂ ದಶಸಹಸ್ರ ಯತಿಗಳು, ಊರ್ಧ್ವರೇತಸರು ಯುಧಿಷ್ಠಿರನ ಮನೆಯಲ್ಲಿ ಚಿನ್ನದ ತಟ್ಟೆಗಳಲ್ಲಿ ಭೋಜಿಸುತ್ತಿದ್ದರು.

02048041a ಭುಕ್ತಾಭುಕ್ತಂ ಕೃತಾಕೃತಂ ಸರ್ವಮಾಕುಬ್ಜವಾಮನಂ|

02048041c ಅಭುಂಜಾನಾ ಯಾಜ್ಞಸೇನೀ ಪ್ರತ್ಯವೈಕ್ಷದ್ವಿಶಾಂ ಪತೇ||

ವಿಶಾಂಪತೇ! ಕುಬ್ಜ ವಾಮನರವರೆಗೆ ಸರ್ವರೂ ಊಟಮಾಡಿ ತೃಪ್ತಿಹೊಂದಿದ್ದಾರೆಂದು ನೋಡಿಕೊಳ್ಳುವುದರೊಳಗೆ ಯಾಜ್ಞಸೇನಿಯು ಊಟ ಮಾಡಲಿಲ್ಲ!

02048042a ದ್ವೌ ಕರಂ ನ ಪ್ರಯಚ್ಛೇತಾಂ ಕುಂತೀಪುತ್ರಾಯ ಭಾರತ|

02048042c ವೈವಾಹಿಕೇನ ಪಾಂಚಾಲಾಃ ಸಖ್ಯೇನಾಂಧಕವೃಷ್ಣಯಃ||

ಭಾರತ! ವಿವಾಹ ಸಂಬಂಧಿಕರಾದ ಪಾಂಚಾಲರು ಮತ್ತು ಸಖ್ಯರಾದ ಅಂಧಕ-ವೃಷ್ಣಿಯವರು ಇವರಿಬ್ಬರು ಮಾತ್ರ ಕುಂತೀಪುತ್ರನಿಗೆ ಕಾಣಿಕೆಯನ್ನು ತಂದಿರಲಿಲ್ಲ.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಅಷ್ಟಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ತೆಂಟನೆಯ ಅಧ್ಯಾಯವು.

Related image

Comments are closed.