Sabha Parva: Chapter 47

ಸಭಾ ಪರ್ವ: ದ್ಯೂತ ಪರ್ವ

೪೭

ಭೂಮಿಪಾಲರು ಪಾಂಡವರಿಗಾಗಿ ತಂದ ಮುಖ್ಯ ಐಶ್ವರ್ಯಗಳನ್ನು ದುರ್ಯೋಧನನು ವರ್ಣಿಸಿದುದು (೧-೩೧).

02047001 ದುರ್ಯೋಧನ ಉವಾಚ|

02047001a ಯನ್ಮಯಾ ಪಾಂಡವಾನಾಂ ತು ದೃಷ್ಟಂ ತಚ್ಛೃಣು ಭಾರತ|

02047001c ಆಹೃತಂ ಭೂಮಿಪಾಲೈರ್ಹಿ ವಸು ಮುಖ್ಯಂ ತತಸ್ತತಃ||

ದುರ್ಯೋಧನನು ಹೇಳಿದನು: “ಭಾರತ! ಪಾಂಡವರಲ್ಲಿ ನಾನು ಕಂಡ ಭೂಮಿಪಾಲರು ತಂದ ಮುಖ್ಯ ಐಶ್ವರ್ಯಗಳನ್ನು ಹೇಳುತ್ತೇನೆ. ಕೇಳು.

02047002a ನ ವಿಂದೇ ದೃಢಮಾತ್ಮಾನಂ ದೃಷ್ಟ್ವಾಹಂ ತದರೇರ್ಧನಂ|

02047002c ಫಲತೋ ಭೂಮಿತೋ ವಾಪಿ ಪ್ರತಿಪದ್ಯಸ್ವ ಭಾರತ||

ನನ್ನ ಶತ್ರುಗಳ ಬೆಳೆದ ಅಥವಾ ಅಗೆದ ಆ ಧನವನ್ನು ನೋಡಿದ ನನ್ನ ಮನಸ್ಸನ್ನು ಧೃಢವಾಗಿರಿಸಲು ತಿಳಿದಿಲ್ಲ. ಭಾರತ! ಕೇಳು.

02047003a ಐಡಾಂಶ್ಚೈಲಾನ್ವಾರ್ಷದಂಶಾಂ ಜಾತರೂಪಪರಿಷ್ಕೃತಾನ್|

02047003c ಪ್ರಾವಾರಾಜಿನಮುಖ್ಯಾಂಶ್ಚ ಕಾಂಬೋಜಃ ಪ್ರದದೌ ವಸು||

02047004a ಅಶ್ವಾಂಸ್ತಿತ್ತಿರಿಕಲ್ಮಾಷಾಂಸ್ತ್ರಿಶತಂ ಶುಕನಾಸಿಕಾನ್|

02047004c ಉಷ್ಟ್ರವಾಮೀಸ್ತ್ರಿಶತಂ ಚ ಪುಷ್ಟಾಃ ಪೀಲುಶಮೀಂಗುದೈಃ||

ಕಾಂಬೋಜರು ಬಂಗಾರದ ಕಸೂತಿಮಾಡಿದ ಏಡಾ ಕುರಿಯ ರಾಶಿ ರಾಶಿ ಕಂಬಳಿಗಳನ್ನು, ಜಿಂಕೆಯ ಚರ್ಮದ ಅಂಗಿಗಳನ್ನು, ಮುನ್ನೂರು ಚೂಪಾದ ಮೂಗಿರುವ ಸಿಂಗರಿಸಿದ ಬೂದುಬಣ್ಣದ ಕುದುರೆಗಳನ್ನು, ಮತ್ತು ಮೂರು ನೂರು ಖರ್ಜೂರ ಶಮಿ ಮತ್ತು ಇಂಗುಡಗಳನ್ನು ತಿನ್ನಿಸಿ ಬೆಳಸಿದ ಒಂಟೆಗಳನ್ನು ಕಾಣಿಕೆಯಾಗಿ ನೀಡಿದರು.

02047005a ಗೋವಾಸನಾ ಬ್ರಾಹ್ಮಣಾಶ್ಚ ದಾಸಮೀಯಾಶ್ಚ ಸರ್ವಶಃ|

02047005c ಪ್ರೀತ್ಯರ್ಥಂ ತೇ ಮಹಾಭಾಗಾ ಧರ್ಮರಾಜ್ಞೋ ಮಹಾತ್ಮನಃ|

02047005e ತ್ರಿಖರ್ವಂ ಬಲಿಮಾದಾಯ ದ್ವಾರಿ ತಿಷ್ಠಂತಿ ವಾರಿತಾಃ||

ಮಹಾಭಾಗ ಮಹಾತ್ಮ ಧರ್ಮರಾಜನ ಮೇಲಿನ ಪ್ರೀತಿಯಿಂದ ಅವನಿಗೆ ಮೂರು ಕೋಟಿ ಕಾಣಿಕೆಗಳನ್ನು ತಂದು ದ್ವಾರದಲ್ಲಿ ನಿಂತಿದ್ದ ಗೋವಾಸನ ಮತ್ತು ದಾಸಮೀಯ ಬ್ರಾಹ್ಮಣರೆಲ್ಲರಿಗೆ ಒಳಬರಲು ಅವಕಾಶವಿರಲಿಲ್ಲ.

02047006a ಕಮಂಡಲೂನುಪಾದಾಯ ಜಾತರೂಪಮಯಾಂ ಶುಭಾನ್|

02047006c ಏವಂ ಬಲಿಂ ಪ್ರದಾಯಾಥ ಪ್ರವೇಶಂ ಲೇಭಿರೇ ತತಃ||

ಬಂಗಾರದ ಸುಂದರ ಕಮಂಡಲುಗಳನ್ನು ಅವರು ಕಾಣಿಕೆಯಾಗಿ ತಂದ ನಂತರವೇ ಅವರಿಗೆ ಪ್ರವೇಶವು ದೊರೆಯಿತು.

02047007a ಶತಂ ದಾಸೀಸಹಸ್ರಾಣಾಂ ಕಾರ್ಪಾಸಿಕನಿವಾಸಿನಾಂ|

02047007c ಶ್ಯಾಮಾಸ್ತನ್ವ್ಯೋ ದೀರ್ಘಕೇಶ್ಯೋ ಹೇಮಾಭರಣಭೂಷಿತಾಃ|

02047007e ಶೂದ್ರಾ ವಿಪ್ರೋತ್ತಮಾರ್ಹಾಣಿ ರಾಂಕವಾನ್ಯಜಿನಾನಿ ಚ||

02047008a ಬಲಿಂ ಚ ಕೃತ್ಸ್ನಮಾದಾಯ ಭರುಕಚ್ಛನಿವಾಸಿನಃ|

02047008c ಉಪನಿನ್ಯುರ್ಮಹಾರಾಜ ಹಯಾನ್ಗಾಂಧಾರದೇಶಜಾನ್||

ಮಹಾರಾಜ! ಭರೂಕಚ್ಛ ನಿವಾಸಿ ಶೂದ್ರರು ಕಾರ್ಪಾಸಿಕನಿವಾಸಿ ನೂರು ಸಾವಿರ ಶ್ಯಾಮವರ್ಣದ, ತೆಳುದೇಹದ, ಉದ್ದ ಕೂದಲಿನ, ಹೇಮಾಭರಣಭೂಷಿತ ದಾಸಿಯರನ್ನು, ವಿಪ್ರೋತ್ತಮರಿಗೆ ತಕ್ಕುದಾದ ರಾಂಕಜಿಂಕೆಯ ಜಿನಗಳನ್ನು, ಭರೂಕನಿವಾಸಿ ಒಂಟೆಗಳನ್ನು ಮತ್ತು ಗಾಂಧಾರದೇಶದಲ್ಲಿ ಜನಿಸಿದ ಕುದುರೆಗಳನ್ನು ಕಾಣಿಕೆಗಳನ್ನಾಗಿ ತಂದರು.

02047009a ಇಂದ್ರಕೃಷ್ಟೈರ್ವರ್ತಯಂತಿ ಧಾನ್ಯೈರ್ನದೀಮುಖೈಶ್ಚ ಯೇ|

02047009c ಸಮುದ್ರನಿಷ್ಕುಟೇ ಜಾತಾಃ ಪರಿಸಿಂಧು ಚ ಮಾನವಾಃ||

02047010a ತೇ ವೈರಾಮಾಃ ಪಾರದಾಶ್ಚ ವಂಗಾಶ್ಚ ಕಿತವೈಃ ಸಹ|

02047010c ವಿವಿಧಂ ಬಲಿಮಾದಾಯ ರತ್ನಾನಿ ವಿವಿಧಾನಿ ಚ||

02047011a ಅಜಾವಿಕಂ ಗೋಹಿರಣ್ಯಂ ಖರೋಷ್ಟ್ರಂ ಫಲಜಂ ಮಧು|

02047011c ಕಂಬಲಾನ್ವಿವಿಧಾಂಶ್ಚೈವ ದ್ವಾರಿ ತಿಷ್ಠಂತಿ ವಾರಿತಾಃ||

ಇಂದ್ರಕೃಷ್ಟದಲ್ಲಿರುವ, ನದೀಮುಖಗಳಲ್ಲಿ ವಾಸಿಸುವ, ಸಮುದ್ರನಿಷ್ಕೃಟಗಳಲ್ಲಿ ಹುಟ್ಟಿದ್ದ ಮತ್ತು ಸಿಂಧುವಿನ ಬಳಿ ವಾಸಿಸುವ ಮಾನವ ವೈರಮರು, ಪಾರದರು, ವಂಗರು ಮತ್ತು ಕಿತವರು ವಿವಿಧ ರತ್ನ, ಆಡು, ಕುರಿ, ಗೋವು, ಹಿರಣ್ಯ, ಕತ್ತೆ, ಒಂಟೆ, ಮಾದಕ ಪಾನೀಯ, ವಿವಿಧ ಕಂಬಳಿ, ಮುಂತಾದ ವಿವಿಧ ಕಾಣಿಕೆಗಳನ್ನು ತಂದಿದ್ದರೂ ಪ್ರವೇಶ ದೊರೆಯದೇ ದ್ವಾರದಲ್ಲಿಯೇ ನಿಂತಿದ್ದರು.

02047012a ಪ್ರಾಗ್ಜ್ಯೋತಿಷಾಧಿಪಃ ಶೂರೋ ಮ್ಲೇಚ್ಛಾನಾಮಧಿಪೋ ಬಲೀ|

02047012c ಯನವೈಃ ಸಹಿತೋ ರಾಜಾ ಭಗದತ್ತೋ ಮಹಾರಥಃ||

02047013a ಆಜಾನೇಯಾನ್ ಹಯಾಂಶೀಘ್ರಾನಾದಾಯಾನಿಲರಂಹಸಃ|

02047013c ಬಲಿಂ ಚ ಕೃತ್ಸ್ನಮಾದಾಯ ದ್ವಾರಿ ತಿಷ್ಠತಿ ವಾರಿತಃ||

ಪ್ರಾಗ್ಜ್ಯೋತಿಷಾಧಿಪ ಶೂರ ಮ್ಲೇಚ್ಛಾಧಿಪ ಬಲಿ ಮಹಾರಥಿ ರಾಜಾ ಭಗದತ್ತನು ಯನವರ ಸಹಿತ ಗಾಳಿಯಂತೆ ಶೀಘ್ರವಾಗಿ ಓಡಬಲ್ಲ ಉತ್ತಮ ಥಳಿಯ ಕುದುರೆಗಳೊಂದಿಗೆ ಬಂದನು. ಬಹಳಷ್ಟು ಕಾಣಿಕೆಗಳನ್ನು ತೆಗೆದುಕೊಂಡು ಬಂದಿದ್ದರೂ ಪ್ರವೇಶ ದೊರೆಯದೇ ದ್ವಾರದಲ್ಲಿಯೇ ನಿಂತಿದ್ದನು.

02047014a ಅಶ್ಮಸಾರಮಯಂ ಭಾಂಡಂ ಶುದ್ಧದಂತತ್ಸರೂನಸೀನ್|

02047014c ಪ್ರಾಗ್ಜ್ಯೋತಿಷೋಽಥ ತದ್ದತ್ತ್ವಾ ಭಗದತ್ತೋಽವ್ರಜತ್ತದಾ||

ಅಶ್ಮಸಾರಮಯ ಕುಂಡ ಮತ್ತು ಶುದ್ಧ ದಂತದ ಹಿಡಿಯಿರುವ ಖಡ್ಗಗಳನ್ನು ಕೊಟ್ಟು ಪ್ರಾಗ್ಜ್ಯೋತಿಷದ ಭಗದತ್ತನು ಪ್ರವೇಶಿಸಿದನು.

02047015a ದ್ವ್ಯಕ್ಷಾಂಸ್ತ್ರ್ಯಕ್ಷಾಽಲ್ಲಲಾಟಾಕ್ಷಾನ್ನಾನಾದಿಗ್ಭ್ಯಃ ಸಮಾಗತಾನ್|

02047015c ಔಷ್ಣೀಷಾನನಿವಾಸಾಂಶ್ಚ ಬಾಹುಕಾನ್ಪುರುಷಾದಕಾನ್||

02047016a ಏಕಪಾದಾಂಶ್ಚ ತತ್ರಾಹಮಪಶ್ಯಂ ದ್ವಾರಿ ವಾರಿತಾನ್|

02047016c ಬಲ್ಯರ್ಥಂ ದದತಸ್ತಸ್ಮೈ ಹಿರಣ್ಯಂ ರಜತಂ ಬಹು||

ಇನ್ನೂ ಬೇರೆ ಬೇರೆ ಪ್ರದೇಶಗಳಿಂದ ಬೇರೆ ಬೇರೆ ರೀತಿಯ ಜನರು - ಎರಡು ಕಣ್ಣುಳ್ಳವರು, ಮೂರು ಕಣ್ಣುಳ್ಳವರು, ಹಣೆಯ ಮೇಲೆ ಒಂದೇ ಕಣ್ಣಿರುವವರು, ಮುಂಡಾಸ ಸುತ್ತಿದವರು, ಬಾಹುಕರು, ನರಭಕ್ಷಕರು, ಒಂದೇ ಕಾಲಿದ್ದವರು, ಮುಂತಾದವರು ಸಾಕಷ್ಟು ಚಿನ್ನ ಬೆಳ್ಳಿಗಳ ಕಾಣಿಕೆಗಳನ್ನು ತೆಗೆದುಕೊಂಡು ಬಂದಿದ್ದರೂ ಪ್ರವೇಶ ದೊರೆಯದೇ ದ್ವಾರದಲ್ಲಿಯೇ ನಿಂತಿದ್ದುದನ್ನು ನಾನು ನೋಡಿದೆನು.

02047017a ಇಂದ್ರಗೋಪಕವರ್ಣಾಭಾಂ ಶುಕವರ್ಣಾನ್ಮನೋಜವಾನ್|

02047017c ತಥೈವೇಂದ್ರಾಯುಧನಿಭಾನ್ಸಂಧ್ಯಾಭ್ರಸದೃಶಾನಪಿ||

02047018a ಅನೇಕವರ್ಣಾನಾರಣ್ಯಾನ್ಗೃಹೀತ್ವಾಶ್ವಾನ್ಮನೋಜವಾನ್|

02047018c ಜಾತರೂಪಮನರ್ಘ್ಯಂ ಚ ದದುಸ್ತಸ್ಯೈಕಪಾದಕಾಃ||

ಒಂದೇ ಕಾಲಿನವರು ಇಂದ್ರಗೋಪಕವರ್ಣದ, ಶುಕವರ್ಣದ, ಮನೋವೇಗದ, ಇಂದ್ರಾಯುಧದಂತೆ ಹೊಳೆಯುವ, ಸಂಧ್ಯೆಯ ಆಕಾಶದಂತಿರುವ ಅನೇಕವರ್ಣದ ಮನೋವೇಗದ ಹಲವಾರು ಅಶ್ವಗಳನ್ನು ಅಮೂಲ್ಯ ಚಿನ್ನಗಳೊಂದಿಗೆ ಅವನಿಗೆ ತಂದೊಪ್ಪಿಸಿದರು. 

02047019a ಚೀನಾನ್ ಹೂಣಾಂ ಶಕಾನೋಡ್ರಾನ್ಪರ್ವತಾಂತರವಾಸಿನಃ|

02047019c ವಾರ್ಷ್ಣೇಯಾನ್ ಹಾರಹೂಣಾಂಶ್ಚ ಕೃಷ್ಣಾನ್ ಹೈಮವತಾಂಸ್ತಥಾ||

02047020a ನ ಪಾರಯಾಮ್ಯಭಿಗತಾನ್ವಿವಿಧಾನ್ದ್ವಾರಿ ವಾರಿತಾನ್|

02047020c ಬಲ್ಯರ್ಥಂ ದದತಸ್ತಸ್ಯ ನಾನಾರೂಪಾನನೇಕಶಃ||

ಚೀನರ, ಹೂಣರು, ಶಕಾನರು, ಪರ್ವತಗಳಲ್ಲಿ ವಾಸಿಸುವವರು, ವಾರ್ಷ್ಣೇಯರು, ಹಾರಹೂಣರು, ಕಪ್ಪು ಜನರು, ಹಿಮಾಲಯದಲ್ಲಿ ವಾಸಿಸುವವರು, ಮೊದಲಾದ ಎಷ್ಟೋ ಮಂದಿ ಜನರು ಪ್ರವೇಶ ದೊರೆಯದಿದ್ದರೂ ಬೇರೆ ಬೇರೆ ರೂಪದ ಅನೇಕ ಕಾಣಿಕೆಗಳನ್ನು ನೀಡಿದರು.

02047021a ಕೃಷ್ಣಗ್ರೀವಾನ್ಮಹಾಕಾಯಾನ್ರಾಸಭಾಂ ಶತಪಾತಿನಃ|

02047021c ಆಹಾರ್ಷುರ್ದಶಸಾಹಸ್ರಾನ್ವಿನೀತಾನ್ದಿಕ್ಷು ವಿಶ್ರುತಾನ್||

02047022a ಪ್ರಮಾಣರಾಗಸ್ಪರ್ಶಾಢ್ಯಂ ಬಾಹ್ಲೀಚೀನಸಮುದ್ಭವಂ|

02047022c ಔರ್ಣಂ ಚ ರಾಂಕವಂ ಚೈವ ಕೀಟಜಂ ಪಟ್ಟಜಂ ತಥಾ||

02047023a ಕುಟ್ಟೀಕೃತಂ ತಥೈವಾನ್ಯತ್ಕಮಲಾಭಂ ಸಹಸ್ರಶಃ|

02047023c ಶ್ಲಕ್ಷ್ಣಂ ವಸ್ತ್ರಮಕಾರ್ಪಾಸಮಾವಿಕಂ ಮೃದು ಚಾಜಿನಂ||

02047024a ನಿಶಿತಾಂಶ್ಚೈವ ದೀರ್ಘಾಸೀನೃಷ್ಟಿಶಕ್ತಿಪರಶ್ವಧಾನ್|

02047024c ಅಪರಾಂತಸಮುದ್ಭೂತಾಂಸ್ತಥೈವ ಪರಶೂಂ ಶಿತಾನ್||

02047025a ರಸಾನ್ಗಂಧಾಂಶ್ಚ ವಿವಿಧಾನ್ರತ್ನಾನಿ ಚ ಸಹಸ್ರಶಃ|

02047025c ಬಲಿಂ ಚ ಕೃತ್ಸ್ನಮಾದಾಯ ದ್ವಾರಿ ತಿಷ್ಠಂತಿ ವಾರಿತಾಃ||

ನೂರಾರನ್ನು ಕೊಲ್ಲುವಂಥ ಪಳಗಿದ ಕಪ್ಪು ಕೊರಳಿನ ಮಹಾಕಾಯದ ದಿಕ್ಕುಗಳಲ್ಲಿ ವಿಶ್ರುತ ನೂರು ಸಾವಿರ ಕತ್ತೆಗಳು; ಬಾಹ್ಲೀಕ ಮತ್ತು ಚೀನದಲ್ಲಿ ತಯಾರಿಸಿದ ಪ್ರಮಾಣ ಬಣ್ಣ ಮತ್ತು ಸ್ಪರ್ಷದಲ್ಲಿ ಸಮೃದ್ಧವಾದ, ಕೆಂಪು ಕಮಲಗಳ ಬಣ್ಣದ ಉಣ್ಣೆ, ರಂಕು ಚರ್ಮ, ರೇಷ್ಮೆ, ಸೆಣಬು ಮತ್ತು ಹತ್ತಿಯ ಸಾವಿರಾರು ದಾರದ ಉಂಡೆಗಳು; ಹತ್ತಿಯಲ್ಲದ ಬಟ್ಟೆ, ಮೃದು ಚರ್ಮ, ಪೂರ್ವಪ್ರದೇಶಗಳ® ಹರಿತಾದ ಕತ್ತಿಗಳು, ಮದ್ಯ, ಸುಗಂಧ ದ್ರವ್ಯಗಳು ಮತ್ತು ಸಾವಿರಾರು ಬೇರೆ ಬೇರೆ ರತ್ನಗಳು ಎಲ್ಲವನ್ನೂ ಕಾಣಿಕೆಯಾಗಿ ತಂದವರು ಪ್ರವೇಶ ದೊರೆಯದೆ ದ್ವಾರದಲ್ಲಿಯೇ ನಿಂತಿದ್ದರು.

02047026a ಶಕಾಸ್ತುಖಾರಾಃ ಕಂಕಾಶ್ಚ ರೋಮಶಾಃ ಶೃಂಗಿಣೋ ನರಾಃ|

02047026c ಮಹಾಗಮಾನ್ದೂರಗಮಾನ್ಗಣಿತಾನರ್ಬುದಂ ಹಯಾನ್||

02047027a ಕೋಟಿಶಶ್ಚೈವ ಬಹುಶಃ ಸುವರ್ಣಂ ಪದ್ಮಸಮ್ಮಿತಂ|

02047027c ಬಲಿಮಾದಾಯ ವಿವಿಧಂ ದ್ವಾರಿ ತಿಷ್ಠಂತಿ ವಾರಿತಾಃ||

ಅತಿ ವೇಗದಲ್ಲಿ ಅತಿ ದೂರ ಚಲಿಸಬಲ್ಲ ಅರ್ಬುದ ಸಂಖ್ಯೆಯ ಕುದುರೆಗಳು, ಕೋಟಿಗಟ್ಟಲೆ ಲೆಕ್ಕವಿಲ್ಲದಷ್ಟು ಬಹಳಷ್ಟು ಸುವರ್ಣಗಳನ್ನು ಕಾಣಿಕೆಯಾಗಿ ತಂದಿದ್ದ ಶಕರು, ತುಖಾರರು, ಕಂಕರು, ರೋಮಶರು, ಮತ್ತು ಕೋಡುಗಳುಳ್ಳ ಮನುಷ್ಯರು ಪ್ರವೇಶ ದೊರೆಯದೇ ದ್ವಾರದಲ್ಲಿಯೇ ನಿಂತಿದ್ದರು.

02047028a ಆಸನಾನಿ ಮಹಾರ್ಹಾಣಿ ಯಾನಾನಿ ಶಯನಾನಿ ಚ|

02047028c ಮಣಿಕಾಂಚನಚಿತ್ರಾಣಿ ಗಜದಂತಮಯಾನಿ ಚ||

02047029a ರಥಾಂಶ್ಚ ವಿವಿಧಾಕಾರಾಂ ಜಾತರೂಪಪರಿಷ್ಕೃತಾನ್|

02047029c ಹಯೈರ್ವಿನೀತೈಃ ಸಂಪನ್ನಾನ್ವೈಯಾಘ್ರಪರಿವಾರಣಾನ್||

02047030a ವಿಚಿತ್ರಾಂಶ್ಚ ಪರಿಸ್ತೋಮಾನ್ರತ್ನಾನಿ ಚ ಸಹಸ್ರಶಃ|

02047030c ನಾರಾಚಾನರ್ಧನಾರಾಚಾಂ ಶಸ್ತ್ರಾಣಿ ವಿವಿಧಾನಿ ಚ||

02047031a ಏತದ್ದತ್ತ್ವಾ ಮಹದ್ದ್ರವ್ಯಂ ಪೂರ್ವದೇಶಾಧಿಪೋ ನೃಪಃ|

02047031c ಪ್ರವಿಷ್ಟೋ ಯಜ್ಞಸದನಂ ಪಾಂಡವಸ್ಯ ಮಹಾತ್ಮನಃ||

ಬೆಲೆಬಾಳುವ ಆಸನಗಳೂ, ಪಲ್ಲಕ್ಕಿಗಳು, ಹಾಸಿಗೆಗಳು, ಮಣಿಕಾಂಚನ ಅಲಂಕೃತ ಗಜದಂತನಿರ್ಮಿತ, ಚಿನ್ನದಿಂದ ಪರಿಷ್ಕೃತ, ಹುಲಿಯ ಚರ್ಮಗಳನ್ನು ಹೊದ್ದ ಸಂಪನ್ನ ಕುದುರೆಗಳಿಂದ ಎಳೆಯಲ್ಪಟ್ಟ, ಮೆತ್ತನೆಯ ದಿಂಬುಗಳಿಂದ ಕೂಡಿದ್ದ ವಿವಿಧಾಕಾರದ ಸಹಸ್ರಾರು ರಥಗಳು, ಸಹಸ್ರಾರು ರತ್ನಗಳು, ಕಬ್ಬಿಣ ಮತ್ತು ಅರ್ಧ ಕಬ್ಬಿಣದಿಂದ ತಯಾರಿಸಿದ ನಾನಾ ಪ್ರಕಾರದ ಶಸ್ತ್ರಗಳು ಈ ಎಲ್ಲ ಮಹಾ ದ್ರವ್ಯಗಳನ್ನು ಪೂರ್ವದೇಶಾಧಿಪ ನೃಪನು ಮಹಾತ್ಮ ಪಾಂಡವನ ಯಜ್ಞಸದನವನ್ನು ಪ್ರವೇಶಿಸುವಾಗ ಕಾಣಿಕೆಯಾಗಿ ತಂದನು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಸಪ್ತಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ತೇಳನೆಯ ಅಧ್ಯಾಯವು.

Related image

Comments are closed.