ಸಭಾ ಪರ್ವ: ದ್ಯೂತ ಪರ್ವ
೪೬
ಪೃಥ್ವಿಯ ವಿನಾಶಕ್ಕೆ ಮೂಲಹೇತುವಾಗಿದ್ದ ದ್ಯೂತದ ಕುರಿತು ವಿಸ್ತಾರವಾಗಿ ಹೇಳಬೇಕೆಂದು ಕೇಳಿಕೊಳ್ಳಲು ವೈಶಂಪಾಯನನು ಮುಂದುವರಿಸಿದುದು (೧-೬). ಧೃತರಾಷ್ಟ್ರನು ದುರ್ಯೋಧನನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿ, ಈ ಶೋಕದ ಮೂಲವೇನೆಂದು ಕೇಳಿದುದು (೭-೧೭). “ಊಟ ಮತ್ತು ಉಡುಗೆತೊಡುಗೆಗಳನ್ನಷ್ಟೇ ಕಾಣುವವನು ಪಾಪಪುರುಷ. ಅಸೂಯೆಪಡದಿರುವ ಪುರುಷನು ಅಧಮನೆಂದು ಹೇಳುತ್ತಾರೆ” ಎಂದು ಹೇಳಿ ದುರ್ಯೋಧನನು ರಾಜಸೂಯ ಯಾಗದಲ್ಲಿ ಪಾಂಡವರಿಗೆ ದೊರೆತ ಉಡುಗೊರೆ-ಮಾನ್ಯತೆಗಳನ್ನು ವರ್ಣಿಸುವುದು (೧೮-೩೫).
02046001 ಜನಮೇಜಯ ಉವಾಚ|
02046001a ಕಥಂ ಸಮಭವದ್ದ್ಯೂತಂ ಭ್ರಾತೄಣಾಂ ತನ್ಮಹಾತ್ಯಯಂ|
02046001c ಯತ್ರ ತದ್ವ್ಯಸನಂ ಪ್ರಾಪ್ತಂ ಪಾಂಡವೈರ್ಮೇ ಪಿತಾಮಹೈಃ||
ಜನಮೇಜಯನು ಹೇಳಿದನು: “ಭ್ರಾತೃಗಳ ಮಹಾತ್ಯಯ ನನ್ನ ಪಿತಾಮಹ ಪಾಂಡವರಿಗೆ ದುಃಖನೀಡಿದ ಆ ದ್ಯೂತವು ಹೇಗೆ ನಡೆಯಿತು?
02046002a ಕೇ ಚ ತತ್ರ ಸಭಾಸ್ತಾರಾ ರಾಜಾನೋ ಬ್ರಹ್ಮವಿತ್ತಮ|
02046002c ಕೇ ಚೈನಮನ್ವಮೋದಂತ ಕೇ ಚೈನಂ ಪ್ರತ್ಯಷೇಧಯನ್||
ಬ್ರಹ್ಮವಿತ್ತಮ! ಆ ಸಭೆಯಲ್ಲಿ ಯಾವ ಯಾವ ರಾಜರು ಆಡಿದರು? ಯಾರು ಅವರಿಗೆ ಪ್ರೋತ್ಸಾಹಿಸಿದರು ಮತ್ತು ಯಾರು ವಿರೋಧಿಸಿದರು?
02046003a ವಿಸ್ತರೇಣೈತದಿಚ್ಛಾಮಿ ಕಥ್ಯಮಾನಂ ತ್ವಯಾ ದ್ವಿಜ|
02046003c ಮೂಲಂ ಹ್ಯೇತದ್ವಿನಾಶಸ್ಯ ಪೃಥಿವ್ಯಾ ದ್ವಿಜಸತ್ತಮ||
ದ್ವಿಜ! ದ್ವಿಜಸತ್ತಮ! ಈ ಪೃಥ್ವಿಯ ವಿನಾಶಕ್ಕೆ ಮೂಲಹೇತುವಾಗಿದ್ದ ಇದರ ಕುರಿತು ವಿಸ್ತಾರವಾಗಿ ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.””
02046004 ಸೂತ ಉವಾಚ|
02046004a ಏವಮುಕ್ತಸ್ತದಾ ರಾಜ್ಞಾ ವ್ಯಾಸಶಿಷ್ಯಃ ಪ್ರತಾಪವಾನ್|
02046004c ಆಚಚಕ್ಷೇ ಯಥಾವೃತ್ತಂ ತತ್ಸರ್ವಂ ಸರ್ವವೇದವಿತ್||
ಸೂತನು ಹೇಳಿದನು: “ರಾಜನು ಹೀಗೆ ಕೇಳಿಕೊಳ್ಳಲು ಸರ್ವವೇದವಿದುಷಿ ಪ್ರತಾಪಿ ವ್ಯಾಸಶಿಷ್ಯನು ಅದೆಲ್ಲವನ್ನು ನಡೆದ ಹಾಗೆಯೇ ಹೇಳಿದನು.
02046005 ವೈಶಂಪಾಯನ ಉವಾಚ|
02046005a ಶೃಣು ಮೇ ವಿಸ್ತರೇಣೇಮಾಂ ಕಥಾಂ ಭರತಸತ್ತಮ|
02046005c ಭೂಯ ಏವ ಮಹಾರಾಜ ಯದಿ ತೇ ಶ್ರವಣೇ ಮತಿಃ||
ವೈಶಂಪಾಯನನು ಹೇಳಿದನು: “ಭರತಸತ್ತಮ! ಮಹಾರಾಜ! ನಡೆದಿದ್ದುದನ್ನು ಕೇಳಲು ಮನಸ್ಸುಳ್ಳವನಾಗಿದ್ದರೆ ನನ್ನಿಂದ ವಿಸ್ತಾರವಾದ ಈ ಕಥೆಯನ್ನು ಕೇಳು.
02046006a ವಿದುರಸ್ಯ ಮತಂ ಜ್ಞಾತ್ವಾ ಧೃತರಾಷ್ಟ್ರೋಽಂಬಿಕಾಸುತಃ|
02046006c ದುರ್ಯೋಧನಮಿದಂ ವಾಕ್ಯಮುವಾಚ ವಿಜನೇ ಪುನಃ||
ವಿದುರನ ಅಭಿಪ್ರಾಯವನ್ನು ತಿಳಿದ ಅಂಬಿಕಾಸುತ ಧೃತರಾಷ್ಟ್ರನು ಪುನಃ ಏಕಾಂತದಲ್ಲಿ ದುರ್ಯೋಧನನಿಗೆ ಹೇಳಿದನು:
02046007a ಅಲಂ ದ್ಯೂತೇನ ಗಾಂಧಾರೇ ವಿದುರೋ ನ ಪ್ರಶಂಸತಿ|
02046007c ನ ಹ್ಯಸೌ ಸುಮಹಾಬುದ್ಧಿರಹಿತಂ ನೋ ವದಿಷ್ಯತಿ||
“ಗಾಂಧಾರೇ! ದ್ಯೂತವು ಬೇಡ. ವಿದುರನು ಇದಕ್ಕೆ ಇಷ್ಟಪಡುತ್ತಿಲ್ಲ. ಆ ಮಹಾಬುದ್ಧಿಯು ಇದು ನಮ್ಮೆಲ್ಲರ ಹಿತದಲ್ಲಿದೆ ಎಂದೂ ಅಭಿಪ್ರಾಯಪಟ್ಟಿಲ್ಲ.
02046008a ಹಿತಂ ಹಿ ಪರಮಂ ಮನ್ಯೇ ವಿದುರೋ ಯತ್ಪ್ರಭಾಷತೇ|
02046008c ಕ್ರಿಯತಾಂ ಪುತ್ರ ತತ್ಸರ್ವಮೇತನ್ಮನ್ಯೇ ಹಿತಂ ತವ||
ಪರಮ ಹಿತಕ್ಕಾಗಿಯೇ ವಿದುರನು ಹೀಗೆ ಮಾತನಾಡುತ್ತಿದ್ದಾನೆ. ಪುತ್ರ! ಅವನು ಹೇಳಿದ ಹಾಗೆ ಮಾಡೋಣ. ಅದರಲ್ಲಿಯೇ ನಿನ್ನ ಹಿತವಿದೆ ಎಂದು ನನಗನ್ನಿಸುತ್ತದೆ.
02046009a ದೇವರ್ಷಿರ್ವಾಸವಗುರುರ್ದೇವರಾಜಾಯ ಧೀಮತೇ|
02046009c ಯತ್ಪ್ರಾಹ ಶಾಸ್ತ್ರಂ ಭಗವಾನ್ಬೃಹಸ್ಪತಿರುದಾರಧೀಃ||
02046010a ತದ್ವೇದ ವಿದುರಃ ಸರ್ವಂ ಸರಹಸ್ಯಂ ಮಹಾಕವಿಃ|
02046010c ಸ್ಥಿತಶ್ಚ ವಚನೇ ತಸ್ಯ ಸದಾಹಮಪಿ ಪುತ್ರಕ||
ಪುತ್ರಕ! ದೇವರಾಜ ವಾಸವನ ಗುರು ದೇವರ್ಷಿ ಧೀಮಂತ ಉದಾರಧೀ ಭಗವಾನ್ ಬೃಹಸ್ಪತಿಯಿಂದ ಶಾಸ್ತ್ರಗಳನ್ನು ತಿಳಿಸಲ್ಪಟ್ಟ ಮತ್ತು ಸರ್ವರಹಸ್ಯಗಳ ಸಹಿತ ಅವುಗಳನ್ನು ತಿಳಿದುಕೊಂಡ ಮಹಾಕವಿ ವಿದುರನ ಮಾತುಗಳಂತೆಯೇ ನಾನು ಸದಾ ನಡೆದುಕೊಳ್ಳುತ್ತೇನೆ.
02046011a ವಿದುರೋ ವಾಪಿ ಮೇಧಾವೀ ಕುರೂಣಾಂ ಪ್ರವರೋ ಮತಃ|
02046011c ಉದ್ಧವೋ ವಾ ಮಹಾಬುದ್ಧಿರ್ವೃಷ್ಣೀನಾಮರ್ಚಿತೋ ನೃಪ||
ನೃಪ! ವೃಷ್ಣಿಗಳಲ್ಲಿ ಉದ್ಧವನನ್ನು ಹೇಗೆ ಮಹಾಬುದ್ಧಿವಂತನೆಂದು ಪೂಜಿಸುತ್ತಾರೋ ಹಾಗೆ ಕುರುಗಳಲ್ಲಿ ವಿದುರನನ್ನು ಮೇಧಾವೀ ಪ್ರವರನೆಂದು ಅಭಿಪ್ರಾಯಪಡುತ್ತಾರೆ.
02046012a ದ್ಯೂತೇನ ತದಲಂ ಪುತ್ರ ದ್ಯೂತೇ ಭೇದೋ ಹಿ ದೃಶ್ಯತೇ|
02046012c ಭೇದೇ ವಿನಾಶೋ ರಾಜ್ಯಸ್ಯ ತತ್ಪುತ್ರ ಪರಿವರ್ಜಯ||
ಪುತ್ರ! ಆದುದರಿಂದ ಈ ದ್ಯೂತವು ಬೇಡ. ದ್ಯೂತದಿಂದ ಭೇದವುಂಟಾಗುತ್ತದೆ ಮತ್ತು ಭೇದದಿಂದ ರಾಜ್ಯವು ವಿನಾಶಗೊಳ್ಳುತ್ತದೆ. ಅದನ್ನು ಬಿಟ್ಟುಬಿಡು.
02046013a ಪಿತ್ರಾ ಮಾತ್ರಾ ಚ ಪುತ್ರಸ್ಯ ಯದ್ವೈ ಕಾರ್ಯಂ ಪರಂ ಸ್ಮೃತಂ|
02046013c ಪ್ರಾಪ್ತಸ್ತ್ವಮಸಿ ತತ್ತಾತ ಪಿತೃಪೈತಾಮಹಂ ಪದಂ||
ಮಾತಾ ಪಿತರಿಂದ ಒಬ್ಬ ಪುತ್ರನಿಗೆ ದೊರಕಬೇಕೆಂದು ಸ್ಮೃತವಾದ ಪರಮ ಪಿತೃ ಪಿತಾಮಹರ ಪದವು ನಿನಗೆ ದೊರಕಿದೆ.
02046014a ಅಧೀತವಾನ್ಕೃತೀ ಶಾಸ್ತ್ರೇ ಲಾಲಿತಃ ಸತತಂ ಗೃಹೇ|
02046014c ಭ್ರಾತೃಜ್ಯೇಷ್ಠಃ ಸ್ಥಿತೋ ರಾಜ್ಯೇ ವಿನ್ದಸೇ ಕಿಂ ನ ಶೋಭನಂ||
ಶಾಸ್ತ್ರಗಳಲ್ಲಿ ಪರಿಣಿತನನ್ನಾಗಿ ಮಾಡಿದ್ದೇವೆ. ಮನೆಯಲ್ಲಿ ಸತತವಾಗಿ ಆಡುತ್ತಿರುವೆ. ರಾಜ್ಯದಲ್ಲಿ ಜ್ಯೇಷ್ಠ ಭ್ರಾತೃವಾಗಿದ್ದೀಯೆ. ಇವುಗಳಲ್ಲಿ ಯಾವುದನ್ನೂ ನೀನು ಒಳ್ಳೆಯದೆಂದು ತಿಳಿಯುವುದಿಲ್ಲವೇ?
02046015a ಪೃಥಗ್ಜನೈರಲಭ್ಯಂ ಯದ್ಭೋಜನಾಚ್ಛಾದನಂ ಪರಂ|
02046015c ತತ್ಪ್ರಾಪ್ತೋಽಸಿ ಮಹಾಬಾಹೋ ಕಸ್ಮಾಚ್ಛೋಚಸಿ ಪುತ್ರಕ||
ಸಾಮನ್ಯ ಜನರಿಗೆ ದೊರೆಯುವುದಕ್ಕಿಂತಲೂ ಶ್ರೇಷ್ಠವಾದ ಬೋಜನ, ಉಡುಗೆತೊಡುಗೆಗಳನ್ನು ಪಡೆದಿದ್ದೀಯೆ. ಮಹಾಬಾಹು ಪುತ್ರಕ! ಇವೆಲ್ಲವನ್ನೂ ಹೊಂದಿದ ನೀನು ಯಾಕೆ ಶೋಕಿಸುತ್ತಿರುವೆ?
02046016a ಸ್ಫೀತಂ ರಾಷ್ಟ್ರಂ ಮಹಾಬಾಹೋ ಪಿತೃಪೈತಾಮಹಂ ಮಹತ್|
02046016c ನಿತ್ಯಮಾಜ್ಞಾಪಯನ್ಭಾಸಿ ದಿವಿ ದೇವೇಶ್ವರೋ ಯಥಾ||
ಪಿತೃಪಿತಾಮಹರಿಂದ ದೊರಕಿದ ಈ ಸಮೃದ್ಧ ಮಹಾ ರಾಷ್ಟ್ರವನ್ನು ನಿತ್ಯವೂ ಆಳುತ್ತಿರುವ ನೀನು ದಿವಿಯಲ್ಲಿ ದೇವೇಶ್ವರನಂತೆ ಬೆಳಗುತ್ತಿದ್ದೀಯೆ.
02046017a ತಸ್ಯ ತೇ ವಿದಿತಪ್ರಜ್ಞ ಶೋಕಮೂಲಮಿದಂ ಕಥಂ|
02046017c ಸಮುತ್ಥಿತಂ ದುಃಖತರಂ ತನ್ಮೇ ಶಂಸಿತುಮರ್ಹಸಿ||
ನೀನು ವಿದಿತಪ್ರಜ್ಞನೆಂದು ನನಗೆ ಗೊತ್ತು. ಆದರೂ ನಿನ್ನ ಈ ಸಮುತ್ಥಿತ ದುಃಖತರ ಶೋಕದ ಮೂಲವು ಏನು? ನನಗೆ ಹೇಳು.”
02046018 ದುರ್ಯೋಧನ ಉವಾಚ|
02046018a ಅಶ್ನಾಮ್ಯಾಚ್ಛಾದಯಾಮೀತಿ ಪ್ರಪಶ್ಯನ್ಪಾಪಪೂರುಷಃ|
02046018c ನಾಮರ್ಷಂ ಕುರುತೇ ಯಸ್ತು ಪುರುಷಃ ಸೋಽಧಮಃ ಸ್ಮೃತಃ||
ದುರ್ಯೋಧನನು ಹೇಳಿದನು: “ಊಟ ಮತ್ತು ಉಡುಗೆತೊಡುಗೆಗಳನ್ನಷ್ಟೇ ಕಾಣುವವನು ಪಾಪಪುರುಷ. ಅಸೂಯೆಪಡದಿರುವ ಪುರುಷನು ಅಧಮನೆಂದು ಹೇಳುತ್ತಾರೆ.
02046019a ನ ಮಾಂ ಪ್ರೀಣಾತಿ ರಾಜೇಂದ್ರ ಲಕ್ಷ್ಮೀಃ ಸಾಧಾರಣಾ ವಿಭೋ|
02046019c ಜ್ವಲಿತಾಮಿವ ಕೌಂತೇಯೇ ಶ್ರಿಯಂ ದೃಷ್ಟ್ವಾ ಚ ವಿವ್ಯಥೇ||
ರಾಜೇಂದ್ರ! ವಿಭೋ! ಸಾಧಾರಣವಾದ ಸಂಪತ್ತು ನನಗೆ ಸಂತೋಷವನ್ನು ನೀಡುವುದಿಲ್ಲ. ಕೌಂತೇಯನಲ್ಲಿರುವ ಪ್ರಜ್ವಲಿಸುವ ಶ್ರೀಯನು ನೋಡಿ ನನ್ನ ಮನಸ್ಸು ವಿಹ್ವಲವಾಗಿದೆ.
02046020a ಸರ್ವಾಂ ಹಿ ಪೃಥಿವೀಂ ದೃಷ್ಟ್ವಾ ಯುಧಿಷ್ಠಿರವಶಾನುಗಾಂ|
02046020c ಸ್ಥಿರೋಽಸ್ಮಿ ಯೋಽಹಂ ಜೀವಾಮಿ ದುಃಖಾದೇತದ್ಬ್ರವೀಮಿ ತೇ||
ಸರ್ವ ಪೃಥ್ವಿಯೂ ಯುಧಿಷ್ಠಿರನ ವಶವಾದುದನ್ನು ನೋಡಿಯೂ ನಾನು ಇನ್ನೂ ಜೀವಂತನಾಗಿ ಇಲ್ಲಿ ನಿಂತಿದ್ದೇನಲ್ಲ! ಇದನ್ನು ದುಃಖದಿಂದ ನಿನಗೆ ಹೇಳುತ್ತಿದ್ದೇನೆ.
02046021a ಆವರ್ಜಿತಾ ಇವಾಭಾಂತಿ ನಿಘ್ನಾಶ್ಚೈತ್ರಕಿಕೌಕುರಾಃ|
02046021c ಕಾರಸ್ಕರಾ ಲೋಹಜಂಘಾ ಯುಧಿಷ್ಠಿರನಿವೇಶನೇ||
ಯುಧಿಷ್ಠಿರನ ನಿವೇಶನದಲ್ಲಿ ಸದೆಬಡಿಯಲ್ಪಟ್ಟ ಸೋತ ಚೈತ್ರಿಕರು, ಕೌಕುರರು, ಕಾರಸ್ಕರರು, ಲೋಹಜಂಘರಂತೆ ಆಗಿದ್ದೇನೆ.
02046022a ಹಿಮವತ್ಸಾಗರಾನೂಪಾಃ ಸರ್ವರತ್ನಾಕರಾಸ್ತಥಾ|
02046022c ಅಂತ್ಯಾಃ ಸರ್ವೇ ಪರ್ಯುದಸ್ತಾ ಯುಧಿಷ್ಠಿರನಿವೇಶನೇ||
ಯುಧಿಷ್ಠಿರನ ನಿವೇಶನದಲ್ಲಿ ಹಿಮಾಲಯದ, ಸಾಗರದ ಮತ್ತು ತಪ್ಪಲುಪ್ರದೇಶಗಳ ಸರ್ವ ರತ್ನಾಕರರೂ ಮತ್ತು ಇತರರೂ ದಾಸರಂತೆ ಇದ್ದಾರೆ.
02046023a ಜ್ಯೇಷ್ಠೋಽಯಮಿತಿ ಮಾಂ ಮತ್ವಾ ಶ್ರೇಷ್ಠಶ್ಚೇತಿ ವಿಶಾಂ ಪತೇ|
02046023c ಯುಧಿಷ್ಠಿರೇಣ ಸತ್ಕೃತ್ಯ ಯುಕ್ತೋ ರತ್ನಪರಿಗ್ರಹೇ||
ವಿಶಾಂಪತೇ! ನಾನು ಜ್ಯೇಷ್ಠ ಮತ್ತು ಶ್ರೇಷ್ಠನೆಂದು ತಿಳಿದು ಸತ್ಕರಿಸಿ ಯುಧಿಷ್ಠಿರನು ನನ್ನನ್ನು ರತ್ನಪರಿಗ್ರಹಕ್ಕೆ ನಿಯುಕ್ತಗೊಳಿಸಿದನು.
02046024a ಉಪಸ್ಥಿತಾನಾಂ ರತ್ನಾನಾಂ ಶ್ರೇಷ್ಠಾನಾಮರ್ಘಹಾರಿಣಾಂ|
02046024c ನಾದೃಶ್ಯತ ಪರಃ ಪ್ರಾಂತೋ ನಾಪರಸ್ತತ್ರ ಭಾರತ||
ಭಾರತ! ಅಲ್ಲಿದ್ದ ಶ್ರೇಷ್ಠ ಬೆಲೆಬಾಳುವ ರತ್ನಗಳ ತುದಿ ಮೊದಲುಗಳನ್ನು ನೋಡಲಿಕ್ಕಾಗುತ್ತಿರಲಿಲ್ಲ.
02046025a ನ ಮೇ ಹಸ್ತಃ ಸಮಭವದ್ವಸು ತತ್ಪ್ರತಿಗೃಹ್ಣತಃ|
02046025c ಪ್ರಾತಿಷ್ಠಂತ ಮಯಿ ಶ್ರಾಂತೇ ಗೃಹ್ಯ ದೂರಾಹೃತಂ ವಸು||
ಆ ಸಂಪತ್ತುಗಳನ್ನು ಸ್ವೀಕರಿಸುವಾಗ ನಾನು ನನ್ನ ಕೈಒಡ್ಡಬೇಕಾಗಿರಲಿಲ್ಲ. ದೂರದಿಂದ ತಂದು ಅಲ್ಲಿರಿಸಿದ್ದ ಸಂಪತ್ತನ್ನು ತೆಗೆದುಕೊಳ್ಳುವುದರಲ್ಲಿಯೇ ನಾನು ಆಯಾಸಗೊಂಡಿದ್ದೆನು.
02046026a ಕೃತಾಂ ಬಿಂದುಸರೋರತ್ನೈರ್ಮಯೇನ ಸ್ಫಾಟಿಕಚ್ಛದಾಂ|
02046026c ಅಪಶ್ಯಂ ನಲಿನೀಂ ಪೂರ್ಣಾಮುದಕಸ್ಯೇವ ಭಾರತ||
ಭಾರತ! ಬಿಂದುಸರೋವರದ ರತ್ನಗಳು ಮತ್ತು ಸ್ಫಟಿಕ-ಕಾಂಚನಗಳಿಂದ ಮಯನು ನಿರ್ಮಿಸಿದ ತಾವರೆಯ ಕೊಳವನ್ನು ನಾನು ನೋಡಿದ್ದೇನೆ.
02046027a ವಸ್ತ್ರಮುತ್ಕರ್ಷತಿ ಮಯಿ ಪ್ರಾಹಸತ್ಸ ವೃಕೋದರಃ|
02046027c ಶತ್ರೋರೃದ್ಧಿವಿಶೇಷೇಣ ವಿಮೂಢಂ ರತ್ನವರ್ಜಿತಂ||
ರತ್ನವರ್ಜಿತನಾದ ನಾನು ಶತ್ರುಗಳ ವಿಶೇಷ ವೃದ್ಧಿಯನ್ನು ನೋಡಿ ವಿಮೂಢನಾಗಿ ವಸ್ತ್ರವನ್ನು ಮೇಲಿತ್ತಿಕೊಂಡಾಗ ವೃಕೋದರನು ನಕ್ಕನು.
02046028a ತತ್ರ ಸ್ಮ ಯದಿ ಶಕ್ತಃ ಸ್ಯಾಂ ಪಾತಯೇಯಂ ವೃಕೋದರಂ|
02046028c ಸಪತ್ನೇನಾವಹಾಸೋ ಹಿ ಸ ಮಾಂ ದಹತಿ ಭಾರತ||
ನನಗೆ ಸಾಧ್ಯವಾಗಿದ್ದರೆ ನಾನು ಆಗಲೇ ಆ ವೃಕೋದರನನ್ನು ಕೊಂದುಬಿಡುತ್ತಿದ್ದೆ! ಭಾರತ! ಪ್ರತಿಸ್ಪರ್ಧಿಯಿಂದ ಅಪಮಾನಗೊಂಡ ನಾನು ಸುಡುತ್ತಿದ್ದೇನೆ.
02046029a ಪುನಶ್ಚ ತಾದೃಶೀಮೇವ ವಾಪೀಂ ಜಲಜಶಾಲಿನೀಂ|
02046029c ಮತ್ವಾ ಶಿಲಾಸಮಾಂ ತೋಯೇ ಪತಿತೋಽಸ್ಮಿ ನರಾಧಿಪ||
ನರಾಧಿಪ! ಇನ್ನೊಮ್ಮೆ ಅದೇತರಹದ ತಾವರೆಗಳಿಂದ ತುಂಬಿದ್ದ ಇನ್ನೊಂದು ಕೊಳವನ್ನು ನೋಡಿ ಅದೂಕೂಡ ಶಿಲಾಸಮವೆಂದು ತಿಳಿದು ಹೋಗಿ ನೀರಿನಲ್ಲಿ ಬಿದ್ದೆ.
02046030a ತತ್ರ ಮಾಂ ಪ್ರಾಹಸತ್ಕೃಷ್ಣಃ ಪಾರ್ಥೇನ ಸಹ ಸಸ್ವನಂ|
02046030c ದ್ರೌಪದೀ ಚ ಸಹ ಸ್ತ್ರೀಭಿರ್ವ್ಯಥಯಂತೀ ಮನೋ ಮಮ||
ಆಗ ಅಲ್ಲಿ ಪಾರ್ಥನೊಂದಿಗೆ ಕೃಷ್ಣನು ಜೋರಾಗಿ ನಕ್ಕನು. ಹಾಗೆಯೇ ಸ್ತ್ರೀಯರೊಂದಿಗೆ ದ್ರೌಪದಿಯೂ ನನ್ನ ಮನಸ್ಸನ್ನು ನೋಯಿಸಲು ನಕ್ಕಳು.
02046031a ಕ್ಲಿನ್ನವಸ್ತ್ರಸ್ಯ ಚ ಜಲೇ ಕಿಂಕರಾ ರಾಜಚೋದಿತಾಃ|
02046031c ದದುರ್ವಾಸಾಂಸಿ ಮೇಽನ್ಯಾನಿ ತಚ್ಚ ದುಃಖತರಂ ಮಮ||
02046032a ಪ್ರಲಂಭಂ ಚ ಶೃಣುಷ್ವಾನ್ಯಂ ಗದತೋ ಮೇ ನರಾಧಿಪ|
ನೀರಿನಿಂದ ನನ್ನ ವಸ್ತ್ರವು ಒದ್ದೆಯಾಗಿರಲು ರಾಜನ ಆಜ್ಞೆಯಂತೆ ಕಿಂಕರರು ನನಗಾಗಿ ಬೇರೆ ವಸ್ತ್ರಗಳನ್ನಿತ್ತರು. ನನಗೆ ಇನ್ನೂ ಹೆಚ್ಚು ದುಃಖವನ್ನು ನೀಡಿದ್ದುದೆಂದರೆ, ಅವರು ಅನ್ಯರಿಗೆ ಕೇಳುವಂತೆ ತುಂಬಾ ಹೊತ್ತು ನಕ್ಕಿದ್ದುದು, ನರಾಧಿಪ!
02046032c ಅದ್ವಾರೇಣ ವಿನಿರ್ಗಚ್ಛನ್ದ್ವಾರಸಂಸ್ಥಾನರೂಪಿಣಾ|
02046032e ಅಭಿಹತ್ಯ ಶಿಲಾಂ ಭೂಯೋ ಲಲಾಟೇನಾಸ್ಮಿ ವಿಕ್ಷತಃ||
ದ್ವಾರವಿದೆಯೇನೋ ಎಂದು ತೋರುತ್ತಿದ್ದ ಗೋಡೆಯಲ್ಲಿ ಹೋಗಿ ಶಿಲೆಯು ನನ್ನ ಹಣೆಗೆ ಹೊಡೆದು ಗಾಯಗೊಂಡೆ.
02046033a ತತ್ರ ಮಾಂ ಯಮಜೌ ದೂರಾದಾಲೋಕ್ಯ ಲಲಿತೌ ಕಿಲ|
02046033c ಬಾಹುಭಿಃ ಪರಿಗೃಹ್ಣೀತಾಂ ಶೋಚಂತೌ ಸಹಿತಾವುಭೌ||
ದೂರದಿಂದಲೇ ಇದನ್ನು ನೋಡಿದ ಅವಳಿಗಳು ವಿನೋದಿಸಿದರು. ದುಃಖಪಟ್ಟ ಅವರಿಬ್ಬರೂ ಬಾಹುಗಳಿಂದ ನನ್ನನ್ನು ಹಿಡಿದರು.
02046034a ಉವಾಚ ಸಹದೇವಸ್ತು ತತ್ರ ಮಾಂ ವಿಸ್ಮಯನ್ನಿವ|
02046034c ಇದಂ ದ್ವಾರಮಿತೋ ಗಚ್ಛ ರಾಜನ್ನಿತಿ ಪುನಃ ಪುನಃ||
ಆಗ ಸಹದೇವನು ವಿಸ್ಮಯದಿಂದಲೋ ಎನ್ನುವಂತೆ “ರಾಜ! ಇದು ದ್ವಾರವು. ಇಲ್ಲಿ ಹೋಗು” ಎಂದು ಪುನಃ ಪುನಃ ಹೇಳಿದನು.
02046035a ನಾಮಧೇಯಾನಿ ರತ್ನಾನಾಂ ಪುರಸ್ತಾನ್ನ ಶ್ರುತಾನಿ ಮೇ|
02046035c ಯಾನಿ ದೃಷ್ಟಾನಿ ಮೇ ತಸ್ಯಾಂ ಮನಸ್ತಪತಿ ತಚ್ಚ ಮೇ||
ಅಲ್ಲಿ ನಾನು ಹೆಸರೇ ತಿಳಿಯದಿದ್ದ ಮತ್ತು ಕೇಳದೇ ಇದ್ದ ರತ್ನಗಳ ರಾಶಿಯನ್ನು ಕಂಡೆ. ಇವುಗಳಿಂದ ನನ್ನ ಮನಸ್ಸು ಸುಡುತ್ತಿದೆ.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಷಟ್‌ಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ತಾರನೆಯ ಅಧ್ಯಾಯವು.