Sabha Parva: Chapter 44

ಸಭಾ ಪರ್ವ: ದ್ಯೂತ ಪರ್ವ

೪೪

ಶಕುನಿಯಿಂದ ದ್ಯೂತದ ಸಲಹೆ

ದುರ್ಯೋಧನನು ಅಸೂಯೆಪಡುವುದು ಸರಿಯಲ್ಲವೆಂದು ಶಕುನಿಯು ಸಲಹೆ ನೀಡುವುದು (೧-೧೧). ಪಾಂಡವರನ್ನು ಸೋಲಿಸಲು ಉಪಾಯವೇನೆಂದು ಕೇಳಲು ಶಕುನಿಯು ದ್ಯೂತವನ್ನು ಸೂಚಿಸುವುದು (೧೨-೨೨).

02044001 ಶಕುನಿರುವಾಚ|

02044001a ದುರ್ಯೋಧನ ನ ತೇಽಮರ್ಷಃ ಕಾರ್ಯಃ ಪ್ರತಿ ಯುಧಿಷ್ಠಿರಂ|

02044001c ಭಾಗಧೇಯಾನಿ ಹಿ ಸ್ವಾನಿ ಪಾಂಡವಾ ಭುಂಜತೇ ಸದಾ||

ಶಕುನಿಯು ಹೇಳಿದನು: “ದುರ್ಯೋಧನ! ಯುಧಿಷ್ಠಿರನ ಕುರಿತು ಯಾವುದೇ ರೀತಿಯ ಅಸೂಯೆ ಮಾಡಬೇಡ. ಯಾಕೆಂದರೆ ಪಾಂಡವರು ಸದಾ ಭಾಗ್ಯವಂತರಾಗಿದ್ದಾರೆ.

02044002a ಅನೇಕೈರಭ್ಯುಪಾಯೈಶ್ಚ ತ್ವಯಾರಬ್ಧಾಃ ಪುರಾಸಕೃತ್|

02044002c ವಿಮುಕ್ತಾಶ್ಚ ನರವ್ಯಾಘ್ರಾ ಭಾಗಧೇಯಪುರಸ್ಕೃತಾಃ||

ಹಿಂದೆ ನೀನು ಅವರ ಮೇಲೆ ಅನೇಕ ಉಪಾಯ ಪ್ರಯತ್ನಗಳನ್ನು ಮಾಡಿದ್ದೀಯೆ. ಆದರೆ ಆ ನರವ್ಯಾಘ್ರರು ಭಾಗ್ಯದಿಂದಲೇ ವಿಮುಕ್ತರಾದರು.

02044003a ತೈರ್ಲಬ್ಧಾ ದ್ರೌಪದೀ ಭಾರ್ಯಾ ದ್ರುಪದಶ್ಚ ಸುತೈಃ ಸಹ|

02044003c ಸಹಾಯಃ ಪೃಥಿವೀಲಾಭೇ ವಾಸುದೇವಶ್ಚ ವೀರ್ಯವಾನ್||

ಪೃಥ್ವಿಯನ್ನು ಗೆಲ್ಲುವುದಕ್ಕೆ ಅವರು ದ್ರೌಪದಿಯನ್ನು ಪತ್ನಿಯನಾಗಿ, ಸುತರ ಸಹಿತ ದ್ರುಪದನನ್ನು ಹಾಗೂ ವೀರ್ಯವಾನ್ ವಾಸುದೇವನನ್ನು ಸಹಾಯಕರನ್ನಾಗಿ ಗೆದ್ದರು.

02044004a ಲಬ್ಧಶ್ಚ ನಾಭಿಭೂತೋಽರ್ಥಃ ಪಿತ್ರ್ಯೋಽಂಶಃ ಪೃಥಿವೀಪತೇ|

02044004c ವಿವೃದ್ಧಸ್ತೇಜಸಾ ತೇಷಾಂ ತತ್ರ ಕಾ ಪರಿದೇವನಾ||

ಅವರು ಪೃಥ್ವೀಪತಿ ತಂದೆಯ ಭಾಗವಾದ ಸಂಪತ್ತನ್ನು ಪಡೆದರು ಮತ್ತು ಅವರದ್ದೇ ತೇಜಸ್ಸಿನಿಂದ ಅದನ್ನು ವೃದ್ಧಿಸಿದರು. ಅದರಲ್ಲಿ ದುಃಖಪಡುವಂಥಹುದು ಏನಿದೆ?

02044005a ಧನಂಜಯೇನ ಗಾಂಡೀವಮಕ್ಷಯ್ಯೌ ಚ ಮಹೇಷುಧೀ|

02044005c ಲಬ್ಧಾನ್ಯಸ್ತ್ರಾಣಿ ದಿವ್ಯಾನಿ ತರ್ಪಯಿತ್ವಾ ಹುತಾಶನಂ||

ಮಹೇಷುಧೀ ಧನಂಜಯನು ಹುತಾಶನನನ್ನು ತೃಪ್ತಿಗೊಳಿಸಿ ಗಾಂಡೀವವನ್ನೂ, ಅಕ್ಷಯ ಬತ್ತಳಿಕೆಗಳನ್ನೂ, ದಿವ್ಯಾಸ್ತ್ರಗಳನ್ನೂ ಪಡೆದನು.

02044006a ತೇನ ಕಾರ್ಮುಕಮುಖ್ಯೇನ ಬಾಹುವೀರ್ಯೇಣ ಚಾತ್ಮನಃ|

02044006c ಕೃತಾ ವಶೇ ಮಹೀಪಾಲಾಸ್ತತ್ರ ಕಾ ಪರಿದೇವನಾ||

ಆ ಉತ್ತಮ ಧನುಸ್ಸಿನಿಂದ ಮತ್ತು ತನ್ನದೇ ಬಾಹುವೀರ್ಯದಿಂದ ಅವನು ಮಹೀಪಾಲರನ್ನು ವಶಗೊಳಿಸಿದನು. ಅದರಲ್ಲಿ ಬೇಸರಪಡುವಂಥಹುದು ಏನಿದೆ?

02044007a ಅಗ್ನಿದಾಹಾನ್ಮಯಂ ಚಾಪಿ ಮೋಕ್ಷಯಿತ್ವಾ ಸ ದಾನವಂ|

02044007c ಸಭಾಂ ತಾಂ ಕಾರಯಾಮಾಸ ಸವ್ಯಸಾಚೀ ಪರಂತಪಃ||

ಆ ಪರಂತಪ ಸವ್ಯಸಾಚಿಯು ದಹಿಸುತ್ತಿರುವ ಅಗ್ನಿಯಿಂದ ದಾನವ ಮಯನನ್ನು ಉಳಿಸಿ ಅವನಿಂದ ಸಭೆಯನ್ನು ಕಟ್ಟಿಸಿದನು.

02044008a ತೇನ ಚೈವ ಮಯೇನೋಕ್ತಾಃ ಕಿಂಕರಾ ನಾಮ ರಾಕ್ಷಸಾಃ|

02044008c ವಹಂತಿ ತಾಂ ಸಭಾಂ ಭೀಮಾಸ್ತತ್ರ ಕಾ ಪರಿದೇವನಾ||

ಅದೇ ಮಯನ ಹೇಳಿಕೆಯಂತೆ ಕಿಂಕರರೆಂಬ ಹೆಸರಿನ ಭಯಂಕರ ರಾಕ್ಷಸರು ಆ ಸಭೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ದುಃಖಿಸುವುದಾದರೂ ಏನಿದೆ?

02044009a ಯಚ್ಚಾಸಹಾಯತಾಂ ರಾಜನ್ನುಕ್ತವಾನಸಿ ಭಾರತ|

02044009c ತನ್ಮಿಥ್ಯಾ ಭ್ರಾತರೋ ಹೀಮೇ ಸಹಾಯಾಸ್ತೇ ಮಹಾರಥಾಃ||

ಭಾರತ! ರಾಜನ್! ನಿನ್ನ ಸಹಾಯಕರು ಯಾರೂ ಇಲ್ಲ ಎಂದು ಹೇಳುತ್ತಿದ್ದೀಯಲ್ಲ. ಅದು ಸುಳ್ಳು! ನಿನ್ನ ಮಹಾರಥಿ ಸಹೋದರರೇ ನಿನ್ನ ಸಹಾಯಕರು.

02044010a ದ್ರೋಣಸ್ತವ ಮಹೇಷ್ವಾಸಃ ಸಹ ಪುತ್ರೇಣ ಧೀಮತಾ|

02044010c ಸೂತಪುತ್ರಶ್ಚ ರಾಧೇಯೋ ಗೌತಮಶ್ಚ ಮಹಾರಥಃ||

ಹಾಗೆಯೇ ತನ್ನ ಧೀಮಂತ ಪುತ್ರ ಸಹಿತ ಮಹೇಷ್ವಾಸ ದ್ರೋಣ, ಸೂತಪುತ್ರ ರಾಧೇಯ, ಮತ್ತು ಮಹಾರಥಿ ಗೌತಮಿ ಇವರೂ ನಿನ್ನವರೇ.

02044011a ಅಹಂ ಚ ಸಹ ಸೋದರ್ಯೈಃ ಸೌಮದತ್ತಿಶ್ಚ ವೀರ್ಯವಾನ್|

02044011c ಏತೈಸ್ತ್ವಂ ಸಹಿತಃ ಸರ್ವೈರ್ಜಯ ಕೃತ್ಸ್ನಾಂ ವಸುಂಧರಾಂ||

ಸೋದರರೊಂದಿಗೆ ನಾನೂ ಕೂಡ, ಮತ್ತು ವೀರ್ಯವಂತ ಸೌಮದತ್ತಿ, ಇವರೆಲ್ಲರ ಜೊತೆಗೂಡಿ ನೀನು ಇಡೀ ವಸುಂಧರೆಯನ್ನೇ ಜಯಿಸಬಹುದು.”

02044012 ದುರ್ಯೋಧನ ಉವಾಚ|

02044012a ತ್ವಯಾ ಚ ಸಹಿತೋ ರಾಜನ್ನೇತೈಶ್ಚಾನ್ಯೈರ್ಮಹಾರಥೈಃ|

02044012c ಏತಾನೇವ ವಿಜೇಷ್ಯಾಮಿ ಯದಿ ತ್ವಮನುಮನ್ಯಸೇ||

ದುರ್ಯೋಧನನು ಹೇಳಿದನು: “ರಾಜನ್! ನೀನು ಒಪ್ಪುವುದಾದರೆ, ನಿನ್ನ ಮತ್ತು ಇತರ ಮಹಾರಥಿಗಳೊಡಗೂಡಿ ಅವರನ್ನು ಸೋಲಿಸುತ್ತೇನೆ.

02044013a ಏತೇಷು ವಿಜಿತೇಷ್ವದ್ಯ ಭವಿಷ್ಯತಿ ಮಹೀ ಮಮ|

02044013c ಸರ್ವೇ ಚ ಪೃಥಿವೀಪಾಲಾಃ ಸಭಾ ಸಾ ಚ ಮಹಾಧನಾ||

ಅವರನ್ನು ಸೋಲಿಸಿದಾಗ ಈ ಮಹಿ, ಸರ್ವ ಪೃಥಿವೀಪಾಲರು, ಆ ಸಭೆ, ಆ ಮಹಾ ಐಶ್ವರ್ಯ ಎಲ್ಲವೂ ನನ್ನದಾಗುತ್ತದೆ.”

02044014 ಶಕುನಿರುವಾಚ|

02044014a ಧನಂಜಯೋ ವಾಸುದೇವೋ ಭೀಮಸೇನೋ ಯುಧಿಷ್ಠಿರಃ|

02044014c ನಕುಲಃ ಸಹದೇವಶ್ಚ ದ್ರುಪದಶ್ಚ ಸಹಾತ್ಮಜೈಃ||

02044015a ನೈತೇ ಯುಧಿ ಬಲಾಜ್ಜೇತುಂ ಶಕ್ಯಾಃ ಸುರಗಣೈರಪಿ|

02044015c ಮಹಾರಥಾ ಮಹೇಷ್ವಾಸಾಃ ಕೃತಾಸ್ತ್ರಾ ಯುದ್ಧದುರ್ಮದಾಃ||

ಶಕುನಿಯು ಹೇಳಿದನು: “ಆ ಮಹಾರಥಿ, ಮಹೇಷ್ವಾಸ, ಕೃತಾಸ್ತ್ರ ಮತ್ತು ಯುದ್ಧದುರ್ಮದ ಧನಂಜಯ, ವಾಸುದೇವ, ಭೀಮಸೇನ, ಯುಧಿಷ್ಠಿರ, ನಕುಲ, ಸಹದೇವ ಮತ್ತು ಪುತ್ರರ ಸಹಿತ ದ್ರುಪದ ಇವರನ್ನು ಬಲದಿಂದ ಯುದ್ಧದಲ್ಲಿ ಜಯಿಸಲು ಸುರಗಣರಿಗೂ ಶಕ್ಯವಿಲ್ಲ.

02044016a ಅಹಂ ತು ತದ್ವಿಜಾನಾಮಿ ವಿಜೇತುಂ ಯೇನ ಶಕ್ಯತೇ|

02044016c ಯುಧಿಷ್ಠಿರಂ ಸ್ವಯಂ ರಾಜಂಸ್ತನ್ನಿಬೋಧ ಜುಷಸ್ವ ಚ||

ರಾಜನ್! ಆದರೆ ಯುಧಿಷ್ಠಿರನನ್ನು ಹೇಗೆ ಸೋಲಿಸಬಹುದು ಎನ್ನುವುದನ್ನು ನಾನು ತಿಳಿದಿದ್ದೇನೆ. ಅದನ್ನು ಕೇಳು ಮತ್ತು ಅದರಂತೆ ಮಾಡು.”

02044017 ದುರ್ಯೋಧನ ಉವಾಚ|

02044017a ಅಪ್ರಮಾದೇನ ಸುಹೃದಾಮನ್ಯೇಷಾಂ ಚ ಮಹಾತ್ಮನಾಂ|

02044017c ಯದಿ ಶಕ್ಯಾ ವಿಜೇತುಂ ತೇ ತನ್ಮಮಾಚಕ್ಷ್ವ ಮಾತುಲ||

ದುರ್ಯೋಧನನು ಹೇಳಿದನು: “ಮಾವ! ಸುಹೃದಯರಿಗೆ ಮತ್ತು ಇತರ ಮಹಾತ್ಮರಿಗೆ ಅಪ್ರಮಾದವಾಗದ ರೀತಿಯಲ್ಲಿ ಅವರನ್ನು ಜಯಿಸಲು ಶಕ್ಯವಿದ್ದರೆ ಅದನ್ನು ಹೇಳು!”

02044018 ಶಕುನಿರುವಾಚ|

02044018a ದ್ಯೂತಪ್ರಿಯಶ್ಚ ಕೌಂತೇಯೋ ನ ಚ ಜಾನಾತಿ ದೇವಿತುಂ|

02044018c ಸಮಾಹೂತಶ್ಚ ರಾಜೇಂದ್ರೋ ನ ಶಕ್ಷ್ಯತಿ ನಿವರ್ತಿತುಂ||

ಶಕುನಿಯು ಹೇಳಿದನು: “ಕೌಂತೇಯನು ದ್ಯೂತಪ್ರಿಯ. ಆದರೆ ಜೂಜಾಡುವುದು ಅವನಿಗೆ ಗೊತ್ತಿಲ್ಲ. ಆಹ್ವಾನಿಸಿದರೆ ಆ ರಾಜೇಂದ್ರನಿಗೆ ನಿರಾಕರಿಸಲು ಕಷ್ಟವಾಗುತ್ತದೆ. 

02044019a ದೇವನೇ ಕುಶಲಶ್ಚಾಹಂ ನ ಮೇಽಸ್ತಿ ಸದೃಶೋ ಭುವಿ|

02044019c ತ್ರಿಷು ಲೋಕೇಷು ಕೌಂತೇಯಂ ತಂ ತ್ವಂ ದ್ಯೂತೇ ಸಮಾಹ್ವಯ||

ನಾನು ಜೂಜಿನಲ್ಲಿ ಕುಶಲ ಮತ್ತು ಇದರಲ್ಲಿ ನನ್ನ ಸರಿಸಮನು ಮೂರೂ ಲೋಕಗಳಲ್ಲಿಯೂ, ಭೂಮಿಯಲ್ಲಿಯೂ ಯಾರೂ ಇಲ್ಲ. ಕೌಂತೇಯನನ್ನು ದ್ಯೂತಕ್ಕೆ ಆಹ್ವಾನಿಸು.

02044020a ತಸ್ಯಾಕ್ಷಕುಶಲೋ ರಾಜನ್ನಾದಾಸ್ಯೇಽಹಮಸಂಶಯಂ|

02044020c ರಾಜ್ಯಂ ಶ್ರಿಯಂ ಚ ತಾಂ ದೀಪ್ತಾಂ ತ್ವದರ್ಥಂ ಪುರುಷರ್ಷಭ|

ರಾಜನ್! ಪುರುಷರ್ಷಭ! ಜೂಜಾಟದಲ್ಲಿ ನನ್ನ ಈ ಕುಶಲತೆಯಿಂದ ನಿಶ್ಚಯವಾಗಿಯೂ ಅವನ ರಾಜ್ಯ ಮತ್ತು ಸಂಪತ್ತನ್ನು ನಿನ್ನದಾಗಿಸುತ್ತೇನೆ.

02044021a ಇದಂ ತು ಸರ್ವಂ ತ್ವಂ ರಾಜ್ಞೇ ದುರ್ಯೋಧನ ನಿವೇದಯ|

02044021c ಅನುಜ್ಞಾತಸ್ತು ತೇ ಪಿತ್ರಾ ವಿಜೇಷ್ಯೇ ತಂ ನ ಸಂಶಯಃ||

ದುರ್ಯೋಧನ! ಇವೆಲ್ಲವನ್ನು ನೀನು ರಾಜನಿಗೆ ನಿವೇದಿಸು. ನಿನ್ನ ತಂದೆಯು ಅಪ್ಪಣೆಯಿತ್ತರೆ ನಾನು ಅವನನ್ನು ಜಯಿಸುತ್ತೇನೆ. ಸಂಶಯವೇ ಇಲ್ಲ.”

02044022 ದುರ್ಯೋಧನ ಉವಾಚ|

02044022a ತ್ವಮೇವ ಕುರುಮುಖ್ಯಾಯ ಧೃತರಾಷ್ಟ್ರಾಯ ಸೌಬಲ|

02044022c ನಿವೇದಯ ಯಥಾನ್ಯಾಯಂ ನಾಹಂ ಶಕ್ಷ್ಯೇ ನಿಶಂಸಿತುಂ||

ದುರ್ಯೋಧನನು ಹೇಳಿದನು: “ಸೌಬಲ! ನೀನೇ ಇದನ್ನು ಕುರುಮುಖ್ಯ ಧೃತರಾಷ್ಟ್ರನಲ್ಲಿ ಸರಿಯಾದ ರೀತಿಯಲ್ಲಿ ಹೇಳಬೇಕು. ಈ ವಿಷಯವನ್ನು ಪ್ರಸ್ತಾಪಿಸಲು ನನಗೆ ಸಾಧ್ಯವಿಲ್ಲ.””

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ಚತುಶ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ನಾಲ್ಕನೆಯ ಅಧ್ಯಾಯವು.

Related image

Comments are closed.