|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ: ದ್ಯೂತ ಪರ್ವ
೪೩
ದುರ್ಯೋಧನನ ಸಂತಾಪ
ಮಯಸಭೆಯಲ್ಲಿ ವಿಭ್ರಾಂತನಾದ ದುರ್ಯೋಧನನು ಅಪಮಾನಕ್ಕೀಡಾದುದು (೧-೧೦). ಹಸ್ತಿನಾಪುರಕ್ಕೆ ಹಿಂದಿರುಗುವಾಗ ಚಿಂತಿತನಾದ ದುರ್ಯೋಧನನನ್ನು ಶಕುನಿಯು ಪ್ರಶ್ನಿಸುವುದು (೧೧-೧೮). ಪಾಂಡವರ ಕುರಿತು ತನಗಿರುವ ಅಸೂಯೆಯೇ ಚಿಂತೆಗೆ ಕಾರಣವೆಂದು ದುರ್ಯೋಧನನು ಹೇಳಿಕೊಳ್ಳುವುದು (೧೯-೩೬).
02043001a ವಸನ್ದುರ್ಯೋಧನಸ್ತಸ್ಯಾಂ ಸಭಾಯಾಂ ಭರತರ್ಷಭ|
02043001c ಶನೈರ್ದದರ್ಶ ತಾಂ ಸರ್ವಾಂ ಸಭಾಂ ಶಕುನಿನಾ ಸಹ||
ವೈಶಂಪಾಯನನು ಹೇಳಿದನು: “ಭರತರ್ಷಭ! ಆ ಸಭೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ದುರ್ಯೋಧನನು ಶಕುನಿಯೊಡನೆ ನಿಧಾನವಾಗಿ ಸಭೆಯ ಸರ್ವಸ್ವವನ್ನೂ ನೋಡಿದನು[2].
02043002a ತಸ್ಯಾಂ ದಿವ್ಯಾನಭಿಪ್ರಾಯಾನ್ದದರ್ಶ ಕುರುನಂದನಃ|
02043002c ನ ದೃಷ್ಟಪೂರ್ವಾ ಯೇ ತೇನ ನಗರೇ ನಾಗಸಾಹ್ವಯೇ||
ಕುರುನಂದನನು ಇದಕ್ಕೂ ಮೊದಲು ತನ್ನ ನಾಗಸಾಹ್ವಯದಲ್ಲಿ ನೋಡಿಯೇ ಇರದ ದಿವ್ಯ ಅಭಿಪ್ರಾಯಗಳನ್ನು ಅಲ್ಲಿ ನೋಡಿದನು.
02043003a ಸ ಕದಾ ಚಿತ್ಸಭಾಮಧ್ಯೇ ಧಾರ್ತರಾಷ್ಟ್ರೋ ಮಹೀಪತಿಃ|
02043003c ಸ್ಫಾಟಿಕಂ ತಲಮಾಸಾದ್ಯ ಜಲಮಿತ್ಯಭಿಶಂಕಯಾ||
02043004a ಸ್ವವಸ್ತ್ರೋತ್ಕರ್ಷಣಂ ರಾಜಾ ಕೃತವಾನ್ಬುದ್ಧಿಮೋಹಿತಃ|
02043004c ದುರ್ಮನಾ ವಿಮುಖಶ್ಚೈವ ಪರಿಚಕ್ರಾಮ ತಾಂ ಸಭಾಂ||
ಒಮ್ಮೆ ಮಹೀಪತಿ ರಾಜ ಧಾರ್ತರಾಷ್ಟ್ರನು ಸ್ಫಟಿಕದಿಂದ ನಿರ್ಮಿಸಿದ್ದ ಸಭಾಮಧ್ಯದ ಒಂದು ನೆಲದ ಬಳಿ ಬಂದು ನೀರಿದೆಯೆಂದು ಶಂಕಿಸಿ ಬುದ್ಧಿಮೋಹಿತನಾಗಿ ತನ್ನ ವಸ್ತ್ರಗಳನ್ನು ಎತ್ತಿಹಿಡಿದನು. ನಂತರ ನಾಚಿಕೆಯಿಂದ ನೊಂದ ಅವನು ಸಭೆಯ ಇನ್ನೊಂದೆಡೆ ಹೋದನು.
[3]02043005a ತತಃ ಸ್ಫಾಟಿಕತೋಯಾಂ ವೈ ಸ್ಫಾಟಿಕಾಂಬುಜಶೋಭಿತಾಂ|
02043005c ವಾಪೀಂ ಮತ್ವಾ ಸ್ಥಲಮಿತಿ ಸವಾಸಾಃ ಪ್ರಾಪತಜ್ಜಲೇ||
ಇನ್ನೊಮ್ಮೆ ಸ್ಫಟಿಕ ಕಮಲಗಳಿಂದ ಶೋಭಿತ ಸ್ಫಟಿಕದಂತಿದ್ದ ನೀರನ್ನು ನೋಡಿ ನೆಲವೆಂದು ತಿಳಿದು ವಸ್ತ್ರಗಳ ಸಮೇತ ನೀರಿನಲ್ಲಿ ಬಿದ್ದನು.
[4]02043006a ಜಲೇ ನಿಪತಿತಂ ದೃಷ್ಟ್ವಾ ಕಿಂಕರಾ ಜಹಸುರ್ಭೃಶಂ|
02043006c ವಾಸಾಂಸಿ ಚ ಶುಭಾನ್ಯಸ್ಮೈ ಪ್ರದದೂ ರಾಜಶಾಸನಾತ್||
ನೀರಿನಲ್ಲಿ ಬಿದ್ದುದನ್ನು ನೋಡಿ ಜೋರಾಗಿ ನಕ್ಕ ಅಲ್ಲಿದ್ದ ಸೇವಕರೆಲ್ಲರೂ ರಾಜಶಾಸನದಂತೆ ಅವನಿಗೆ ಶುಭವಸ್ತ್ರಗಳನ್ನು ಕೊಟ್ಟರು.
02043007a ತಥಾಗತಂ ತು ತಂ ದೃಷ್ಟ್ವಾ ಭೀಮಸೇನೋ ಮಹಾಬಲಃ|
02043007c ಅರ್ಜುನಶ್ಚ ಯಮೌ ಚೋಭೌ ಸರ್ವೇ ತೇ ಪ್ರಾಹಸಂಸ್ತದಾ||
ಅವನನ್ನು ಆ ಅವಸ್ಥೆಯಲ್ಲಿ ನೋಡಿದ ಮಹಾಬಲಿ ಭೀಮಸೇನ, ಅರ್ಜುನ ಮತ್ತು ಅವಳಿಗಳೆಲ್ಲರೂ ಜೋರಾಗಿ ನಕ್ಕರು.
02043008a ನಾಮರ್ಷಯತ್ತತಸ್ತೇಷಾಮವಹಾಸಮಮರ್ಷಣಃ|
02043008c ಆಕಾರಂ ರಕ್ಷಮಾಣಸ್ತು ನ ಸ ತಾನ್ಸಮುದೈಕ್ಷತ||
ಅವರ ಅಪಹಾಸ್ಯದಿಂದ ತನಗಾದ ನೋವನ್ನು ಅವರ ಕಡೆ ನೋಡದೆಯೇ ತನ್ನ ಮುಖದಲ್ಲಿಯೇ ಆ ಅಮರ್ಷಣನು ಬಚ್ಚಿಟ್ಟುಕೊಂಡನು.
02043009a ಪುನರ್ವಸನಮುತ್ಕ್ಷಿಪ್ಯ ಪ್ರತರಿಷ್ಯನ್ನಿವ ಸ್ಥಲಂ|
02043009c ಆರುರೋಹ ತತಃ ಸರ್ವೇ ಜಹಸುಸ್ತೇ ಪುನರ್ಜನಾಃ||
ಇನ್ನೊಮ್ಮೆ ಅವನು ಗಟ್ಟಿಯಾದ ನೆಲವನ್ನು ನೀರಿನ ಕೊಳವೆಂದು ತಿಳಿದು ತನ್ನ ವಸ್ತ್ರವನ್ನು ಮೇಲಕ್ಕೆತ್ತಿ ದಾಟಿದುದನ್ನು ನೋಡಿ ಎಲ್ಲರೂ ಪುನಃ ನಕ್ಕರು.
02043010a ದ್ವಾರಂ ಚ ವಿವೃತಾಕಾರಂ ಲಲಾಟೇನ ಸಮಾಹನತ್|
02043010c ಸಂವೃತಂ ಚೇತಿ ಮನ್ವಾನೋ ದ್ವಾರದೇಶಾದುಪಾರಮತ್||
ಒಮ್ಮೆ ಅವನು ತೆರದಹಾಗೆ ತೋರುತ್ತಿದ್ದ ದ್ವಾರದ ಒಳಗೆ ಹೋಗಲು ಪ್ರಯತ್ನಿಸಿ ತನ್ನ ಹಣೆಯನ್ನು ಚಚ್ಚಿಕೊಂಡನು. ಇನ್ನೊಮ್ಮೆ ದ್ವಾರವು ಮುಚ್ಚಿದೆಯೆಂದು ತಿಳಿದು ಬಾಗಿಲಿನಲ್ಲಿಯೇ ಬಿದ್ದನು.
02043011a ಏವಂ ಪ್ರಲಂಭಾನ್ವಿವಿಧಾನ್ಪ್ರಾಪ್ಯ ತತ್ರ ವಿಶಾಂ ಪತೇ|
02043011c ಪಾಂಡವೇಯಾಭ್ಯನುಜ್ಞಾತಸ್ತತೋ ದುರ್ಯೋಧನೋ ನೃಪಃ||
02043012a ಅಪ್ರಹೃಷ್ಟೇನ ಮನಸಾ ರಾಜಸೂಯೇ ಮಹಾಕ್ರತೌ|
02043012c ಪ್ರೇಕ್ಷ್ಯ ತಾಮದ್ಭುತಾಮೃದ್ಧಿಂ ಜಗಾಮ ಗಜಸಾಹ್ವಯಂ||
ವಿಶಾಂಪತೇ! ಆ ಅದ್ಭುತ ಸಮೃದ್ಧ ಮಹಾಕ್ರತು ರಾಜಸೂಯವನ್ನು ನೋಡಿ ಮತ್ತು ಅಲ್ಲಿ ಈ ರೀತಿಯ ವಿವಿಧ ಪರಿಪಾಟಗಳನ್ನು ಅನುಭವಿಸಿದ ನೃಪ ದುರ್ಯೋಧನನು ಮನಸ್ಸಿನಲ್ಲಿಯೇ ಅಸಂತುಷ್ಟನಾಗಿ ಪಾಂಡವರಿಂದ ಅಪ್ಪಣೆಯನ್ನು ಪಡೆದು ಗಜಸಾಹ್ವಯಕ್ಕೆ ಹೊರಟನು.
02043013a ಪಾಂಡವಶ್ರೀಪ್ರತಪ್ತಸ್ಯ ಧ್ಯಾನಗ್ಲಾನಸ್ಯ ಗಚ್ಛತಃ|
02043013c ದುರ್ಯೋಧನಸ್ಯ ನೃಪತೇಃ ಪಾಪಾ ಮತಿರಜಾಯತ||
ಪಾಂಡವರ ಏಳ್ಗೆಯನ್ನು ಸಹಿಸಲಾಗದೇ ಧ್ಯಾನಮಗ್ನನಾದ ನೃಪತಿ ದುರ್ಯೋಧನನಲ್ಲಿ ಕೆಟ್ಟ ಯೋಚನೆಗಳು ಹುಟ್ಟಿದವು.
02043014a ಪಾರ್ಥಾನ್ಸುಮನಸೋ ದೃಷ್ಟ್ವಾ ಪಾರ್ಥಿವಾಂಶ್ಚ ವಶಾನುಗಾನ್|
02043014c ಕೃತ್ಸ್ನಂ ಚಾಪಿ ಹಿತಂ ಲೋಕಮಾಕುಮಾರಂ ಕುರೂದ್ವಹ||
02043015a ಮಹಿಮಾನಂ ಪರಂ ಚಾಪಿ ಪಾಂಡವಾನಾಂ ಮಹಾತ್ಮನಾಂ|
02043015c ದುರ್ಯೋಧನೋ ಧಾರ್ತರಾಷ್ಟ್ರೋ ವಿವರ್ಣಃ ಸಮಪದ್ಯತ|
ಕುರೂಧ್ವಹ! ಪಾರ್ಥರ ಸಂತೋಷವನ್ನು, ಅವರಿಗೆ ವಶರಾದ ಪಾರ್ಥಿವರನ್ನು, ಅವರ ಸಣ್ಣ ಮಕ್ಕಳನ್ನೂ ಸೇರಿಸಿ ಎಲ್ಲರ ಹಿತವನ್ನೇ ಸರ್ವಲೋಕವೂ ಬಯಸುತ್ತಿರುವುದನ್ನು, ಮಹಾತ್ಮ ಪಾಂಡವರ ಇತರ ಅತ್ಯುನ್ನತ ಮಹಿಮೆಗಳನ್ನು ನೋಡಿ ಧಾರ್ತರಾಷ್ಟ್ರ ದುರ್ಯೋಧನನು ವಿವರ್ಣನಾದನು.
02043016a ಸ ತು ಗಚ್ಛನ್ನನೇಕಾಗ್ರಃ ಸಭಾಮೇವಾನುಚಿಂತಯನ್|
02043016c ಶ್ರಿಯಂ ಚ ತಾಮನುಪಮಾಂ ಧರ್ಮರಾಜಸ್ಯ ಧೀಮತಃ||
02043017a ಪ್ರಮತ್ತೋ ಧೃತರಾಷ್ಟ್ರಸ್ಯ ಪುತ್ರೋ ದುರ್ಯೋಧನಸ್ತದಾ|
02043017c ನಾಭ್ಯಭಾಷತ್ಸುಬಲಜಂ ಭಾಷಮಾಣಂ ಪುನಃ ಪುನಃ||
ಧೀಮಂತ ಧರ್ಮರಾಜನ ಆ ಅನುಪಮ ಸುಂದರ ಸಭೆಯ ಕುರಿತೇ ಯೋಚಿಸುತ್ತಾ ಏಕಾಗ್ರನಾಗಿ ಪ್ರಮತ್ತನಾಗಿ ಹೊರಟ ಧೃತರಾಷ್ಟ್ರ ಪುತ್ರ ದುರ್ಯೋಧನನು ಪುನಃ ಪುನಃ ಮಾತನಾಡುತ್ತಿದ್ದ ಸುಬಲಜನಲ್ಲಿ ಏನನ್ನೂ ಮಾತನಾಡಲಿಲ್ಲ.
02043018a ಅನೇಕಾಗ್ರಂ ತು ತಂ ದೃಷ್ಟ್ವಾ ಶಕುನಿಃ ಪ್ರತ್ಯಭಾಷತ|
02043018c ದುರ್ಯೋಧನ ಕುತೋಮೂಲಂ ನಿಃವ್ಯಸನ್ನಿವ ಗಚ್ಛಸಿ||
ಆ ಅನೇಕಾಗ್ರನನ್ನು ನೋಡಿದ ಶಕುನಿಯು ಕೇಳಿದನು: “ದುರ್ಯೋಧನ! ಯಾವ ಕಾರಣಕ್ಕಾಗಿ ಈ ರೀತಿ ನಿಟ್ಟಿಸುರುಬಿಡುತ್ತಾ ಪ್ರಯಾಣಿಸುತ್ತಿರುವೆ?”
02043019 ದುರ್ಯೋಧನ ಉವಾಚ|
02043019a ದೃಷ್ಟ್ವೇಮಾಂ ಪೃಥ್ವೀಂ ಕೃತ್ಸ್ನಾಂ ಯುಧಿಷ್ಠಿರವಶಾನುಗಾಂ|
02043019c ಜಿತಾಮಸ್ತ್ರಪ್ರತಾಪೇನ ಶ್ವೇತಾಶ್ವಸ್ಯ ಮಹಾತ್ಮನಃ||
ದುರ್ಯೋಧನನು ಹೇಳಿದನು: “ಮಹಾತ್ಮ ಶ್ವೇತಾಶ್ವನ ಅಸ್ತ್ರಪ್ರತಾಪದಿಂದ ಗೆಲ್ಲಲ್ಪಟ್ಟ ಇಡೀ ಪೃಥ್ವಿಯೇ ಯುಧಿಷ್ಠಿರನ ವಶವಾದುದನ್ನು ನಾನು ಕಂಡೆ.
02043020a ತಂ ಚ ಯಜ್ಞಂ ತಥಾಭೂತಂ ದೃಷ್ಟ್ವಾ ಪಾರ್ಥಸ್ಯ ಮಾತುಲ|
02043020c ಯಥಾ ಶಕ್ರಸ್ಯ ದೇವೇಷು ತಥಾಭೂತಂ ಮಹಾದ್ಯುತೇ||
ಮಾವ! ಮಹಾದ್ಯುತಿ! ದೇವತೆಗಳಲ್ಲಿ ಶಕ್ರನ ಯಜ್ಞವು ಹೇಗಿರುತ್ತದೆಯೋ ಹಾಗೆ ನಡೆದ ಪಾರ್ಥನ ಯಜ್ಞವನ್ನು ನೋಡಿದೆ.
02043021a ಅಮರ್ಷೇಣ ಸುಸಂಪೂರ್ಣೋ ದಹ್ಯಮಾನೋ ದಿವಾನಿಶಂ|
02043021c ಶುಚಿಶುಕ್ರಾಗಮೇ ಕಾಲೇ ಶುಷ್ಯೇ ತೋಯಮಿವಾಲ್ಪಕಂ||
ಹಗಲು ರಾತ್ರಿ ಸುಡುತ್ತಿರುವ ಅಸೂಯೆಯು ನನ್ನನ್ನು ತುಂಬಿಕೊಂಡಿದೆ ಮತ್ತು ಬೇಸಗೆಯಲ್ಲಿ ಬತ್ತಿಹೋಗುವ ಕೊಳದಂತೆ ನಾನು ಸೊರಗುತ್ತಿದ್ದೇನೆ.
02043022a ಪಶ್ಯ ಸಾತ್ವತಮುಖ್ಯೇನ ಶಿಶುಪಾಲಂ ನಿಪಾತಿತಂ|
02043022c ನ ಚ ತತ್ರ ಪುಮಾನಾಸೀತ್ಕಶ್ಚಿತ್ತಸ್ಯ ಪದಾನುಗಃ||
ನೋಡು! ಸಾತ್ವತಮುಖ್ಯನು ಶಿಶುಪಾಲನನ್ನು ಉರುಳಿಸಿದನು. ಆದರೂ ಅವನನ್ನು ಬೆಂಬಲಿಸುವ ಯಾವ ಪುರುಷನೂ ಅಲ್ಲಿರಲಿಲ್ಲ.
02043023a ದಹ್ಯಮಾನಾ ಹಿ ರಾಜಾನಃ ಪಾಂಡವೋತ್ಥೇನ ವಹ್ನಿನಾ|
02043023c ಕ್ಷಾಂತವಂತೋಽಪರಾಧಂ ತಂ ಕೋ ಹಿ ತಂ ಕ್ಷಂತುಮರ್ಹತಿ||
ಪಾಂಡವೋದ್ಭವ ವಹ್ನಿಯಿಂದ ಸುಡುತ್ತಿರುವ ಆ ರಾಜರು ಅವರ ಅಪರಾಧವನ್ನು ಕ್ಷಮಿಸಿದರು. ಆದರೂ ಅದನ್ನು ಯಾರುತಾನೆ ಕ್ಷಮಿಸಬಲ್ಲರು?
02043024a ವಾಸುದೇವೇನ ತತ್ಕರ್ಮ ತಥಾಯುಕ್ತಂ ಮಹತ್ಕೃತಂ|
02043024c ಸಿದ್ಧಂ ಚ ಪಾಂಡವೇಯಾನಾಂ ಪ್ರತಾಪೇನ ಮಹಾತ್ಮನಾಂ||
ವಾಸುದೇವನ ಯಥಾಯುಕ್ತ ಮಹಾಕಾರ್ಯದಿಂದಾಗಿ ಮಹಾತ್ಮ ಪ್ರತಾಪಿ ಪಾಂಡವರು ಯಶಸ್ವಿಯಾದರು.
02043025a ತಥಾ ಹಿ ರತ್ನಾನ್ಯಾದಾಯ ವಿವಿಧಾನಿ ನೃಪಾ ನೃಪಂ|
02043025c ಉಪತಿಷ್ಠಂತಿ ಕೌಂತೇಯಂ ವೈಶ್ಯಾ ಇವ ಕರಪ್ರದಾಃ||
ಹಾಗೆಯೇ ರಾಜನಿಗೆಂದು ವಿವಿಧ ರತ್ನಗಳನ್ನು ತಂದು ತೆರಿಗೆ ಕೊಡುವ ವೈಶ್ಯರಂತೆ ನೃಪರು ಕೌಂತೇಯನ ಉಪಸ್ಥಿತಿಯಲ್ಲಿದ್ದರು.
02043026a ಶ್ರಿಯಂ ತಥಾವಿಧಾಂ ದೃಷ್ಟ್ವಾ ಜ್ವಲಂತೀಮಿವ ಪಾಂಡವೇ|
02043026c ಅಮರ್ಷವಶಮಾಪನ್ನೋ ದಹ್ಯೇಽಹಮತಥೋಚಿತಃ||
ಪಾಂಡವರ ಆ ಸಂಪತ್ತನ್ನು ನೋಡಿ ನಾನು ಅಸೂಯೆಯ ವಶದಲ್ಲಿ ಬಂದು ಔಚಿತ್ಯವಲ್ಲದಿದ್ದರೂ ಸುಡುತ್ತಿದ್ದೇನೆ.
02043027a ವಹ್ನಿಮೇವ ಪ್ರವೇಕ್ಷ್ಯಾಮಿ ಭಕ್ಷಯಿಷ್ಯಾಮಿ ವಾ ವಿಷಂ|
02043027c ಅಪೋ ವಾಪಿ ಪ್ರವೇಕ್ಷ್ಯಾಮಿ ನ ಹಿ ಶಕ್ಷ್ಯಾಮಿ ಜೀವಿತುಂ||
ಬೆಂಕಿಯಲ್ಲಿಯಾದರೂ ಬೀಳುತ್ತೇನೆ, ವಿಷವನ್ನಾದರೂ ಸೇವಿಸುತ್ತೇನೆ, ಅಥವಾ ನೀರಿನಲ್ಲಿ ಮುಳುಗುತ್ತೇನೆ, ಆದರೆ ಇನ್ನು ಜೀವಿಸುವುದನ್ನು ಸಹಿಸಲಾರೆ.
02043028a ಕೋ ಹಿ ನಾಮ ಪುಮಾಽಲ್ಲೋಕೇ ಮರ್ಷಯಿಷ್ಯತಿ ಸತ್ತ್ವವಾನ್|
02043028c ಸಪತ್ನಾನೃಧ್ಯತೋ ದೃಷ್ಟ್ವಾ ಹಾನಿಮಾತ್ಮನ ಏವ ಚ||
ಯಾಕೆಂದರೆ ಯಾವ ಸತ್ವಯುತ ಮನುಷ್ಯ ತಾನೇ ತನ್ನ ಪ್ರತಿಸ್ಪರ್ಧಿಗಳು ವೃದ್ಧಿಯಾಗುವುದನ್ನು ಮತ್ತು ಸ್ವತಃ ಹಾನಿಯನ್ನು ಹೊಂದುವುದನ್ನು ನೋಡಿಯೂ ಸಹಿಸಿಕೊಳ್ಳುತ್ತಾನೆ?
02043029a ಸೋಽಹಂ ನ ಸ್ತ್ರೀ ನ ಚಾಪ್ಯಸ್ತ್ರೀ ನ ಪುಮಾನ್ನಾಪುಮಾನಪಿ|
02043029c ಯೋಽಹಂ ತಾಂ ಮರ್ಷಯಾಮ್ಯದ್ಯ ತಾದೃಶೀಂ ಶ್ರಿಯಮಾಗತಾಂ||
ಅವರಿಗೆ ದೊರಕಿರುವ ಶ್ರೇಯಸ್ಸನ್ನು ನಾನು ಸಹಿಸಿಕೊಂಡೆನೆಂದರೆ ನಾನು ಸ್ತ್ರೀಯೂ ಆಗಿರಲಿಕ್ಕಿಲ್ಲ ಸ್ತ್ರೀಯಲ್ಲದೆಯೂ ಇರಲಿಕ್ಕಿಲ್ಲ ಅಥವಾ ಪುರುಷನೂ ಆಗಿರಲಿಕ್ಕಿಲ್ಲ ಪುರುಷನಲ್ಲದೆಯೂ ಇರಲಿಕ್ಕಿಲ್ಲ.
02043030a ಈಶ್ವರತ್ವಂ ಪೃಥಿವ್ಯಾಶ್ಚ ವಸುಮತ್ತಾಂ ಚ ತಾದೃಶೀಂ|
02043030c ಯಜ್ಞಂ ಚ ತಾದೃಶಂ ದೃಷ್ಟ್ವಾ ಮಾದೃಶಃ ಕೋ ನ ಸಂಜ್ವರೇತ್||
ಪೃಥ್ವಿಯಲ್ಲಿ ಅವರ ಈಶ್ವರತ್ವವನ್ನು ಮತ್ತು ಅಂಥಹ ಸಂಪತ್ತು, ಅಂಥಹ ಯಜ್ಞವನ್ನು ನೋಡಿದ ನನ್ನಂಥಹ ಯಾರು ತಾನೇ ಜ್ವರದಿಂದ ಸುಡುವುದಿಲ್ಲ?
02043031a ಅಶಕ್ತಶ್ಚೈಕ ಏವಾಹಂ ತಾಮಾಹರ್ತುಂ ನೃಪಶ್ರಿಯಂ|
02043031c ಸಹಾಯಾಂಶ್ಚ ನ ಪಶ್ಯಾಮಿ ತೇನ ಮೃತ್ಯುಂ ವಿಚಿಂತಯೇ||
ನಾನೊಬ್ಬನೇ ಅಂಥಹ ನೃಪಶ್ರೀಯನ್ನು ಪಡೆಯಲು ಶಕ್ಯನಿಲ್ಲ. ನನಗೆ ಸಹಾಯಮಾಡುವ ಯಾರನ್ನು ಕೂಡ ನಾನು ಕಾಣುತ್ತಿಲ್ಲ[5]. ಆದುದರಿಂದ ನಾನು ಮೃತ್ಯುವನ್ನೇ ಯೋಚಿಸುತ್ತಿದ್ದೇನೆ.
02043032a ದೈವಮೇವ ಪರಂ ಮನ್ಯೇ ಪೌರುಷಂ ತು ನಿರರ್ಥಕಂ|
02043032c ದೃಷ್ಟ್ವಾ ಕುಂತೀಸುತೇ ಶುಭ್ರಾಂ ಶ್ರಿಯಂ ತಾಮಾಹೃತಾಂ ತಥಾ||
ಕುಂತೀಸುತನು ಒಟ್ಟುಗೂಡಿಸಿರುವ ಆ ಶುಭ್ರ ಶ್ರೀಯನ್ನು ನೋಡಿ ನನಗನ್ನಿಸುತ್ತದೆ: ದೈವವೇ ಪರ, ಪೌರುಷವೆಲ್ಲವೂ ನಿರರ್ಥಕ.
02043033a ಕೃತೋ ಯತ್ನೋ ಮಯಾ ಪೂರ್ವಂ ವಿನಾಶೇ ತಸ್ಯ ಸೌಬಲ|
02043033c ತಚ್ಚ ಸರ್ವಮತಿಕ್ರಮ್ಯ ಸ ವೃದ್ಧೋಽಪ್ಸ್ವಿವ ಪಂಕಜಂ||
ಸೌಬಲ! ಹಿಂದೆ ನಾನು ಅವನ ವಿನಾಶಕ್ಕೆ ಪಯತ್ನಿಸಿದೆ. ಆದರೆ ಅವೆಲ್ಲವನ್ನು ಅತಿಕ್ರಮಿಸಿ ಅವನು ನೀರಿನಲ್ಲಿನ ಪಂಕಜದಂತೆ ವೃದ್ಧಿಯಾಗಿದ್ದಾನೆ.
02043034a ತೇನ ದೈವಂ ಪರಂ ಮನ್ಯೇ ಪೌರುಷಂ ತು ನಿರರ್ಥಕಂ|
02043034c ಧಾರ್ತರಾಷ್ಟ್ರಾ ಹಿ ಹೀಯಂತೇ ಪಾರ್ಥಾ ವರ್ಧಂತಿ ನಿತ್ಯಶಃ||
ಆದರಿಂದ ನನಗನ್ನಿಸುತ್ತದೆ: ದೈವವೇ ಪರ, ಪೌರುಷವು ನಿರರ್ಥಕ. ಧಾರ್ತರಾಷ್ಟ್ರರು ನಿತ್ಯವೂ ಕುಸಿಯುತ್ತಿದ್ದಾರೆ ಮತ್ತು ಪಾರ್ಥರು ವರ್ಧಿಸುತ್ತಿದ್ದಾರೆ.
02043035a ಸೋಽಹಂ ಶ್ರಿಯಂ ಚ ತಾಂ ದೃಷ್ಟ್ವಾ ಸಭಾಂ ತಾಂ ಚ ತಥಾವಿಧಾಂ|
02043035c ರಕ್ಷಿಭಿಶ್ಚಾವಹಾಸಂ ತಂ ಪರಿತಪ್ಯೇ ಯಥಾಗ್ನಿನಾ||
ಅವರ ಸಂಪತ್ತು, ಸಭೆ, ಮತ್ತು ಅಲ್ಲಿಯ ಕಾವಲುಗಾರರು ಮಾಡಿದ ಅಪಹಾಸ ಇವೆಲ್ಲವೂ ನನ್ನನ್ನು ಅಗ್ನಿಯಂತೆ ಸುಡುತ್ತಿವೆ.
02043036a ಸ ಮಾಮಭ್ಯನುಜಾನೀಹಿ ಮಾತುಲಾದ್ಯ ಸುದುಃಖಿತಂ|
02043036c ಅಮರ್ಷಂ ಚ ಸಮಾವಿಷ್ಟಂ ಧೃತರಾಷ್ಟ್ರೇ ನಿವೇದಯ||
ಮಾವ! ಇಂದು ಈ ಕಹಿ ದುಃಖವನ್ನು ಅನುಭವಿಸಲು ಬಿಡು ಮತ್ತು ನನ್ನನ್ನು ಸಮಾವೇಶಗೊಂಡಿರುವ ಅಸೂಯೆಯ ಕುರಿತು ಧೃತರಾಷ್ಟ್ರನಲ್ಲಿ ನಿವೇದಿಸು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದುರ್ಯೋಧನಸಂತಾಪೇ ತ್ರಿಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದುರ್ಯೋಧನಸಂತಾಪ ಎನ್ನುವ ನಲವತ್ಮೂರನೆಯ ಅಧ್ಯಾಯವು.
[1]ಗೋರಖಪುರದ ಸಂಪುಟದಲ್ಲಿ ದ್ಯೂತಪರ್ವವು ೩೩ ಶ್ಲೋಕಗಳನ್ನುಳ್ಳ ಇನ್ನೊಂದು ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಈ ಅಧ್ಯಾಯವನ್ನು ಸಂಪೂರ್ಣವಾಗಿ ಪುಣೆಯ ಪರಿಷ್ಕರಿಸಲ್ಪಟ್ಟ ಸಂಪುಟದಿಂದ ತೆಗೆದುಹಾಕಲಾಗಿದೆ. ಈ ಅಧ್ಯಾಯದಲ್ಲಿ ವ್ಯಾಸನು ಭವಿಷ್ಯವಾಣಿಯನ್ನು ನುಡಿದಿದ್ದುದು, ಯುಧಿಷ್ಠಿರನ ಚಿಂತೆ ಮತ್ತು ಸಮತ್ವಪೂರ್ಣದಲ್ಲಿ ನಡೆದುಕೊಳ್ಳುತ್ತೇನೆ ಎಂದು ಯುಧಿಷ್ಠಿರನು ಪ್ರತಿಜ್ಞೆಮಾಡಿದ ವಿಷಯಗಳಿವೆ. ಈ ಅಧ್ಯಾಯವನ್ನು ಪ್ರತ್ಯೇಕವಾಗಿ ಪರಿಶಿಷ್ಠದಲ್ಲಿ ನೀಡಲಾಗಿದೆ.
[2]ಆ ಸಭೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ದುರ್ಯೋಧನನು ಶಕುನಿಯೊಡನೆ ನಿಧಾನವಾಗಿ ಸಭೆಯ ಸರ್ವಸ್ವವನ್ನೂ ನೋಡಿದನು.
[3]ಗೋರಖಪುರದ ಸಂಪುಟದಲ್ಲಿ ಇದಕ್ಕೂ ಮೊದಲು ಒಂದು ಶ್ಲೋಕವಿದೆ: ತತಃ ಸ್ಥಲೇ ನಿಪತಿತೋ ದುರ್ಮನಾ ವ್ರೀಡಿತೋ ನೃಪಃ| ನಿಃಶ್ವಸನ್ ವಿಮುಖಶ್ಚಾಪಿ ಪರಿಚಕ್ರಾಮ ತಾಂ ಸಭಾಂ|| ಅರ್ಥಾತ್ - ನಂತರ ಆ ನೃಪತಿಯು ಆ ಸ್ಥಳದಲ್ಲಿಯೇ ಬೀಳಲು ನಾಚಿಕೆ ದುಃಖಗಳಿಂದ ಪೀಡಿತನಾಗಿ, ನಿಟ್ಟುಸಿರು ಬಿಡುತ್ತಾ ಸಭಾಭವನದಲ್ಲಿ ಅತ್ತಿಂದಿತ್ತ ತಿರುಗಾಡತೊಡಗಿದನು.
[4]ಗೋರಖಪುರದ ಸಂಪುಟದಲ್ಲಿ ಭೀಮಸೇನನೂ ನಕ್ಕನೆಂದು ಈ ಶ್ಲೋಕಗಳು ಹೇಳುತ್ತವೆ: “ಜಲೇ ನಿಪತಿತಂ ದೃಷ್ಟ್ವಾ ಭೀಮಸೇನೋ ಮಹಾಬಲಃ| ಜಹಾಸ ಜಹಸುಶ್ಚೈವ ಕಿಂಕರಾಶ್ಚ ಸುಯೋಧನಂ|| ವಾಸಾಂಸಿ ಚ ಶುಭಾನ್ಯಸ್ಮೈ ಪ್ರದ್ದೂ ರಾಜಶಾಸನಾತ್|” ಅರ್ಥಾತ್ ಅವನು ನೀರಿನಲ್ಲಿ ಬಿದ್ದುದನ್ನು ನೋಡಿ ಮಹಾಬಲ ಭೀಮಸೇನನು ನಗಲು ಅಲ್ಲಿದ್ದ ಕಿಂಕರರೂ ಕೂಡ ಸುಯೋಧನನನ್ನು ನೋಡಿ ನಕ್ಕರು, ಮತ್ತು ರಾಜಶಾಸನದಂತೆ ಅವನಿಗೆ ಶುಭವಸ್ತ್ರಗಳನ್ನು ತಂದಿತ್ತರು.
[5] ಕೃಷ್ಣನು ಪಾಂಡವರಿಗೆ ಸಹಾಯಮಾಡುವ ಹಾಗೆ ತನಗೆ ಸಹಾಯ ಮಾಡುವವರು ಯಾರೂ ಇಲ್ಲ!