ಸಭಾ ಪರ್ವ: ಶಿಶುಪಾಲವಧ ಪರ್ವ
೪೦
ಶಿಶುಪಾಲವೃತ್ತಾಂತ ಕಥನ
ಶಿಶುಪಾಲನಿಗೆ ಕೃಷ್ಣನೇ ವಿಧಿ ವಹಿಸಿದ ಮೃತ್ಯುವೆಂದು ಅವನು ಶಿಶುವಾಗಿದ್ದಾಗಿನ ಚರಿತೆಯನ್ನು ಭೀಷ್ಮನು ಹೇಳಿದ್ದುದು (೧-೨೩).
02040001 ಭೀಷ್ಮ ಉವಾಚ|
02040001a ಚೇದಿರಾಜಕುಲೇ ಜಾತಸ್ತ್ರ್ಯಕ್ಷ ಏಷ ಚತುರ್ಭುಜಃ|
02040001c ರಾಸಭಾರಾವಸದೃಶಂ ರುರಾವ ಚ ನನಾದ ಚ||
ಭೀಷ್ಮನು ಹೇಳಿದನು: “ಚೇದಿರಾಜಕುಲದಲ್ಲಿ ಇವನು ಮೂರು ಕಣ್ಣುಗಳು ಮತ್ತು ನಾಲ್ಕು ಭುಜಗಳುಳ್ಳವನಾಗಿ ಜನಿಸಿದನು. ಮತ್ತು ಅವನು ಕತ್ತೆಯಹಾಗೆ ಚೀರಿಕೊಳ್ಳುತ್ತಿದ್ದನು.
02040002a ತೇನಾಸ್ಯ ಮಾತಾಪಿತರೌ ತ್ರೇಸತುಸ್ತೌ ಸಬಾಂಧವೌ|
02040002c ವೈಕೃತಂ ತಚ್ಚ ತೌ ದೃಷ್ಟ್ವಾ ತ್ಯಾಗಾಯ ಕುರುತಾಂ ಮತಿಂ||
ಬಾಂಧವರೊಂದಿಗೆ ಅವನ ತಂದೆ-ತಾಯಿಯರು ಅವನನ್ನು ನೋಡಿ ನಡುಗಿದರು ಮತ್ತು ಅವನ ವೈಕೃತವನ್ನು ಕಂಡು ಅವನನ್ನು ತ್ಯಾಗಿಸುವ ಮನಸ್ಸು ಮಾಡಿದರು.
02040003a ತತಃ ಸಭಾರ್ಯಂ ನೃಪತಿಂ ಸಾಮಾತ್ಯಂ ಸಪುರೋಹಿತಂ|
02040003c ಚಿಂತಾಸಮ್ಮೂಢಹೃದಯಂ ವಾಗುವಾಚಾಶರೀರಿಣೀ||
ಪತ್ನಿ, ಅಮಾತ್ಯರು ಮತ್ತು ಪುರೋಹಿತರೊಂದಿಗೆ ಚಿಂತೆಯಿಂದ ಸಮ್ಮೂಢ ಹೃದಯನಾದ ಆ ನೃಪತಿಗೆ ಒಂದು ಅಶರೀರವಾಣಿಯು ನುಡಿಯಿತು:
02040004a ಏಷ ತೇ ನೃಪತೇ ಪುತ್ರಃ ಶ್ರೀಮಾಂ ಜಾತೋ ಮಹಾಬಲಃ|
02040004c ತಸ್ಮಾದಸ್ಮಾನ್ನ ಭೇತವ್ಯಮವ್ಯಗ್ರಃ ಪಾಹಿ ವೈ ಶಿಶುಂ||
“ನೃಪತೇ! ನಿನಗೆ ಹುಟ್ಟಿದ ಪುತ್ರನು ಶ್ರೀಮಂತನೂ, ಮಹಾಬಲಿಯೂ ಆಗಿದ್ದಾನೆ. ಆದುದರಿಂದ ಈ ಶಿಶುವನ್ನು ಜಾಗರೂಕತೆಯಿಂದ ಪರಿಪಾಲಿಸು.
02040005a ನ ಚೈವೈತಸ್ಯ ಮೃತ್ಯುಸ್ತ್ವಂ ನ ಕಾಲಃ ಪ್ರತ್ಯುಪಸ್ಥಿತಃ|
02040005c ಮೃತ್ಯುರ್ಹಂತಾಸ್ಯ ಶಸ್ತ್ರೇಣ ಸ ಚೋತ್ಪನ್ನೋ ನರಾಧಿಪ||
ನೀನು ಇವನ ಮೃತ್ಯುವಿಗೆ ಕಾರಣನಲ್ಲ ಮತ್ತು ಇವನ ಮೃತ್ಯುವಿನ ಕಾಲವೂ ಬಂದಿಲ್ಲ. ನರಾಧಿಪ! ಇವನನ್ನು ಶಸ್ತ್ರದಿಂದ ಕೊಲ್ಲುವವನು[1] ಈಗಾಗಲೇ ಹುಟ್ಟಿದ್ದಾನೆ.”
02040006a ಸಂಶ್ರುತ್ಯೋದಾಹೃತಂ ವಾಕ್ಯಂ ಭೂತಮಂತರ್ಹಿತಂ ತತಃ|
02040006c ಪುತ್ರಸ್ನೇಹಾಭಿಸಂತಪ್ತಾ ಜನನೀ ವಾಕ್ಯಮಬ್ರವೀತ್||
ಈ ರೀತಿಯ ಅಂತರ್ಹಿತ ಮಾತುಗಳನ್ನು ಕೇಳಿದ ಅವನ ಜನನಿಯು ಪುತ್ರಸ್ನೇಹದಿಂದ ಸಂತಪ್ತಳಾಗಿ ಹೇಳಿದಳು:
02040007a ಯೇನೇದಮೀರಿತಂ ವಾಕ್ಯಂ ಮಮೈವ ತನಯಂ ಪ್ರತಿ|
02040007c ಪ್ರಾಂಜಲಿಸ್ತಂ ನಮಸ್ಯಾಮಿ ಬ್ರವೀತು ಸ ಪುನರ್ವಚಃ||
“ನನ್ನ ಮಗನ ಕುರಿತಾಗಿ ಈ ವಾಕ್ಯವನ್ನು ಹೇಳಿದವನಿಗೆ ಕೈಜೋಡಿಸಿ ನಮಸ್ಕರಿಸಿ ಪುನಃ ಹೇಳಲು ಕೇಳಿಕೊಳ್ಳುತ್ತೇನೆ.
02040008a ಶ್ರೋತುಮಿಚ್ಛಾಮಿ ಪುತ್ರಸ್ಯ ಕೋಽಸ್ಯ ಮೃತ್ಯುರ್ಭವಿಷ್ಯತಿ|
02040008c ಅಂತರ್ಹಿತಂ ತತೋ ಭೂತಮುವಾಚೇದಂ ಪುನರ್ವಚಃ||
ನನ್ನ ಈ ಪುತ್ರನ ಮೃತ್ಯುವು ಯಾರಿಂದ ಆಗುತ್ತದೆ ಎನ್ನುವುದನ್ನು ತಿಳಿಯಲು ಬಯಸುತ್ತೇನೆ.” ಆಗ ಅಂತರ್ಹಿತ ಭೂತವು ಪುನಃ ಹೀಗೆ ಹೇಳಿತು:
02040009a ಯೇನೋತ್ಸಂಗೇ ಗೃಹೀತಸ್ಯ ಭುಜಾವಭ್ಯಧಿಕಾವುಭೌ|
02040009c ಪತಿಷ್ಯತಃ ಕ್ಷಿತಿತಲೇ ಪಂಚಶೀರ್ಷಾವಿವೋರಗೌ||
02040010a ತೃತೀಯಮೇತದ್ಬಾಲಸ್ಯ ಲಲಾಟಸ್ಥಂ ಚ ಲೋಚನಂ|
02040010c ನಿಮಜ್ಜಿಷ್ಯತಿ ಯಂ ದೃಷ್ಟ್ವಾ ಸೋಽಸ್ಯ ಮೃತ್ಯುರ್ಭವಿಷ್ಯತಿ||
“ಯಾರು ತನ್ನ ತೊಡೆಯಮೇಲೆ ಇವನನ್ನು ಹಿಡಿದಾಗ ಅವನ ಅಧಿಕ ಎರಡು ಕೈಗಳು ಐದುಹೆಡೆಯ ಸರ್ಪದಂತೆ ಭೂಮಿಯಮೇಲೆ ಬೀಳುತ್ತವೆಯೋ ಮತ್ತು ಈ ಬಾಲಕನ ಹಣೆಯ ಮೇಲಿರುವ ಮೂರನೆಯ ಕಣ್ಣು ಕರಗಿ ಹೋಗುತ್ತದೆಯೋ ಅವನೇ ಇವನ ಮೃತ್ಯುವಾಗುತ್ತಾನೆ.”
02040011a ತ್ರ್ಯಕ್ಷಂ ಚತುರ್ಭುಜಂ ಶ್ರುತ್ವಾ ತಥಾ ಚ ಸಮುದಾಹೃತಂ|
02040011c ಧರಣ್ಯಾಂ ಪಾರ್ಥಿವಾಃ ಸರ್ವೇ ಅಭ್ಯಗಚ್ಛನ್ ದಿದೃಕ್ಷವಃ||
ಅವನಿಗೆ ಮೂರು ಕಣ್ಣುಗಳು ಮತ್ತು ನಾಲ್ಕು ಭುಜಗಳಿವೆ ಎಂದು ಕೇಳಿದ ಧರಣಿಯ ಸರ್ವ ಪಾರ್ಥಿವ ಸಮುದಾಯವೂ ಅವನನ್ನು ನೋಡಲು ಬಂದರು.
02040012a ತಾನ್ಪೂಜಯಿತ್ವಾ ಸಂಪ್ರಾಪ್ತಾನ್ಯಥಾರ್ಹಂ ಸ ಮಹೀಪತಿಃ|
02040012c ಏಕೈಕಸ್ಯ ನೃಪಸ್ಯಾಂಕೇ ಪುತ್ರಮಾರೋಪಯತ್ತದಾ||
02040013a ಏವಂ ರಾಜಸಹಸ್ರಾಣಾಂ ಪೃಥಕ್ತ್ವೇನ ಯಥಾಕ್ರಮಂ|
02040013c ಶಿಶುರಂಕೇ ಸಮಾರೂಢೋ ನ ತತ್ಪ್ರಾಪ ನಿದರ್ಶನಂ||
ಆಗಮಿಸಿದವರನ್ನು ಮಹೀಪತಿಯು ಯಥಾರ್ಹ ಸ್ವಾಗತಿಸಿ ಒಬ್ಬೊಬ್ಬರ ತೊಡೆಯ ಮೇಲೂ ಪುತ್ರನನ್ನು ಕೂರಿಸಿದನು. ಈ ರೀತಿ ಆಗಮಿಸಿದ ಸಹಸ್ರಾರು ರಾಜರ ತೊಡೆಯಮೇಲೆ ಕೂರಿಸಿದರೂ ಭವಿಷ್ಯವಾಣಿಯು ನಿಜವಾಗಲಿಲ್ಲ.
02040014a ತತಶ್ಚೇದಿಪುರಂ ಪ್ರಾಪ್ತೌ ಸಂಕರ್ಷಣಜನಾರ್ದನೌ|
02040014c ಯಾದವೌ ಯಾದವೀಂ ದ್ರಷ್ಟುಂ ಸ್ವಸಾರಂ ತಾಂ ಪಿತುಸ್ತದಾ||
ಆಗ ಸಂಕರ್ಷಣ ಜನಾರ್ದನರಿಬ್ಬರು ಯಾದವರೂ ತಮ್ಮ ತಂದೆಯ ತಂಗಿ ಯಾದವಿಯನ್ನು ನೋಡಲು ಚೇದಿಪುರಕ್ಕೆ ಬಂದರು.
02040015a ಅಭಿವಾದ್ಯ ಯಥಾನ್ಯಾಯಂ ಯಥಾಜ್ಯೇಷ್ಠಂ ನೃಪಾಂಶ್ಚ ತಾನ್|
02040015c ಕುಶಲಾನಾಮಯಂ ಪೃಷ್ಟ್ವಾ ನಿಷಣ್ಣೌ ರಾಮಕೇಶವೌ||
ಜೇಷ್ಠರನ್ನೂ ನೃಪತಿಯನ್ನೂ ಯಥಾನ್ಯಾಯ ಅಭಿವಂದಿಸಿ ರಾಮ-ಕೇಶವರು ಕುಶಲಪ್ರಶ್ನೆಗಳನ್ನು ಕೇಳಿ ಕುಳಿತುಕೊಂಡರು.
02040016a ಅಭ್ಯರ್ಚಿತೌ ತದಾ ವೀರೌ ಪ್ರೀತ್ಯಾ ಚಾಭ್ಯಧಿಕಂ ತತಃ|
02040016c ಪುತ್ರಂ ದಾಮೋದರೋತ್ಸಂಗೇ ದೇವೀ ಸಮ್ನ್ಯದಧಾತ್ಸ್ವಯಂ||
ಇಬ್ಬರು ವೀರರನ್ನೂ ಸ್ವಾಗತಿಸಲಾಯಿತು ಮತ್ತು ಅಧಿಕ ಪ್ರೀತಿಯಿಂದ ದೇವಿಯು ತನ್ನ ಮಗನನ್ನು ಸ್ವಯಂ ದಾಮೋದರನ ತೊಡೆಯ ಮೇಲೆ ಕೂರಿಸಿದಳು.
02040017a ನ್ಯಸ್ತಮಾತ್ರಸ್ಯ ತಸ್ಯಾಂಕೇ ಭುಜಾವಭ್ಯಧಿಕಾವುಭೌ|
02040017c ಪೇತತುಸ್ತಚ್ಚ ನಯನಂ ನಿಮಮಜ್ಜ ಲಲಾಟಜಂ||
ಅವನ ತೊಡೆಯಮೇಲೆ ಇಟ್ಟಕೂಡಲೇ ಅಧಿಕವಾಗಿದ್ದ ಅವನ ಎರಡು ಕೈಗಳು ಕೆಳಗೆ ಬಿದ್ದವು ಮತ್ತು ಲಲಾಟದಲ್ಲಿದ್ದ ನಯನವೂ ಕರಗಿಹೋಯಿತು.
02040018a ತದ್ದೃಷ್ಟ್ವಾ ವ್ಯಥಿತಾ ತ್ರಸ್ತಾ ವರಂ ಕೃಷ್ಣಮಯಾಚತ|
02040018c ದದಸ್ವ ಮೇ ವರಂ ಕೃಷ್ಣ ಭಯಾರ್ತಾಯಾ ಮಹಾಭುಜ||
02040019a ತ್ವಂ ಹ್ಯಾರ್ತಾನಾಂ ಸಮಾಶ್ವಾಸೋ ಭೀತಾನಾಮಭಯಂಕರಃ|
02040019c ಪಿತೃಷ್ವಸಾರಂ ಮಾ ಭೈಷೀರಿತ್ಯುವಾಚ ಜನಾರ್ದನಃ||
02040020a ದದಾನಿ ಕಂ ವರಂ ಕಿಂ ವಾ ಕರವಾಣಿ ಪಿತೃಷ್ವಸಃ|
02040020c ಶಕ್ಯಂ ವಾ ಯದಿ ವಾಶಕ್ಯಂ ಕರಿಷ್ಯಾಮಿ ವಚಸ್ತವ||
ಇದನ್ನು ನೋಡಿ ವ್ಯಥಿತಳಾಗಿ ನಡುಗಿದ ಅವಳು ಕೃಷ್ಣನಲ್ಲಿ ಬೇಡಿಕೊಂಡಳು: “ಮಹಾಭುಜ ಕೃಷ್ಣ! ಭಯಾರ್ತ ನನಗೆ ವರವನ್ನು ಕೊಡು. ನೀನು ಆರ್ತರ ಸಮಾಶ್ವಾಸ ಮತ್ತು ಭಯಭೀತರ ಅಭಯಂಕರ.” ಆಗ ತನ್ನ ತಂದೆಯ ತಂಗಿಗೆ ಜನಾರ್ದನನು ಉತ್ತರಿಸಿದನು: “ಹೆದರಬೇಡ! ಅತ್ತೆ! ನಾನು ನಿನಗೆ ಯಾವ ವರವನ್ನು ಕೊಡಲಿ? ಏನು ಮಾಡಲಿ? ಅದು ಸಾಧ್ಯವಿರಲಿ ಅಥವಾ ಸಾಧ್ಯವಿಲ್ಲದಿರಲಿ. ನಿನ್ನ ಮಾತಿನಂತೆ ಮಾಡುತ್ತೇನೆ.”
02040021a ಏವಮುಕ್ತಾ ತತಃ ಕೃಷ್ಣಮಬ್ರವೀದ್ಯದುನಂದನಂ|
02040021c ಶಿಶುಪಾಲಸ್ಯಾಪರಾಧಾನ್ ಕ್ಷಮೇಥಾಸ್ತ್ವಂ ಮಹಾಬಲ||
ಇದಕ್ಕೆ ಅವಳು ಯದುನಂದನ ಕೃಷ್ಣನಿಗೆ ಹೇಳಿದಳು: “ಮಹಾಬಲ! ನೀನು ಶಿಶುಪಾಲನ ಅಪರಾಧಗಳನ್ನು ಕ್ಷಮಿಸು.”
02040022 ಕೃಷ್ಣ ಉವಾಚ|
02040022a ಅಪರಾಧಶತಂ ಕ್ಷಾಮ್ಯಂ ಮಯಾ ಹ್ಯಸ್ಯ ಪಿತೃಷ್ವಸಃ|
02040022c ಪುತ್ರಸ್ಯ ತೇ ವಧಾರ್ಹಾಣಾಂ ಮಾ ತ್ವಂ ಶೋಕೇ ಮನಃ ಕೃಥಾಃ||
ಕೃಷ್ಣನು ಹೇಳಿದನು: “ಅತ್ತೆ! ವಧಾರ್ಹವಾಗಿದ್ದರೂ ಇವನ ನೂರು ಅಪರಾಧಗಳನ್ನು ಕ್ಷಮಿಸುತ್ತೇನೆ. ಶೋಕಿಸಬೇಡ.””
02040023 ಭೀಷ್ಮ ಉವಾಚ|
02040023a ಏವಮೇಷ ನೃಪಃ ಪಾಪಃ ಶಿಶುಪಾಲಃ ಸುಮಂದಧೀಃ|
02040023c ತ್ವಾಂ ಸಮಾಹ್ವಯತೇ ವೀರ ಗೋವಿಂದವರದರ್ಪಿತಃ||
ಭೀಷ್ಮನು ಹೇಳಿದನು: “ವೀರ! ಆದುದರಿಂದಲೇ ಗೋವಿಂದವರದರ್ಪಿತ ಈ ಪಾಪಿ ನೃಪ ಮೂಢ ಶಿಶುಪಾಲನು ನಿನ್ನನ್ನು ಕೆರಳಿಸುತ್ತಿದ್ದಾನೆ[2].”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಶಿಶುಪಾಲವೃತ್ತಾಂತಕಥನೇ ಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಶಿಶುಪಾಲವೃತ್ತಾಂತಕಥನ ಎನ್ನುವ ನಲವತ್ತನೆಯ ಅಧ್ಯಾಯವು.
[1] ಕ್ಷತ್ರಿಯನಾಗಿ ಹುಟ್ಟಿದುದಕ್ಕೆ ಶಸ್ತ್ರದಿಂದ ಸಂಹರಿಸಿ ಮುಕ್ತಿಯನ್ನು ದೊರಕಿಸುವವನು
[2] ನಿನ್ನಿಂದ ಅವನ ವಧೆಯಾಗುವುದಿಲ್ಲವೆಂದು ಶಿಶುಪಾಲನಿಗೆ ಗೊತ್ತು. ಆದುದರಿಂದಲೇ ನಿನ್ನನ್ನು ಕೆರಳಿಸಿ ಯುದ್ಧಮಾಡಿ ನಿನ್ನನ್ನು ಸೋಲಿಸಲು ಬಯಸುತ್ತಿದ್ದಾನೆ.