Sabha Parva: Chapter 39

ಸಭಾ ಪರ್ವ: ಶಿಶುಪಾಲವಧ ಪರ್ವ

೩೯

ಭೀಮನ ಕ್ರೋಧ

ಶಿಶುಪಾಲನು ಕೃಷ್ಣನನ್ನು ಹೀಯಾಳಿಸುವುದು (೧-೮). ಭೀಮಸೇನನು ಕೃದ್ಧನಾದುದು, ಭೀಷ್ಮನು ಅವನನ್ನು ತಡೆದದ್ದು (೯-೨೦).

02039001 ಶಿಶುಪಾಲ ಉವಾಚ|

02039001a ಸ ಮೇ ಬಹುಮತೋ ರಾಜಾ ಜರಾಸಂಧೋ ಮಹಾಬಲಃ|

02039001c ಯೋಽನೇನ ಯುದ್ಧಂ ನೇಯೇಷ ದಾಸೋಽಯಮಿತಿ ಸಂಯುಗೇ||

ಶಿಶುಪಾಲನು ಹೇಳಿದನು: “ನೀನು ದಾಸನಿಗಿಂತ ಹೆಚ್ಚಿನವನಲ್ಲ! ಎಂದು ಹೇಳಿ ಇವನೊಂದಿಗೆ ಯುದ್ಧಮಾಡಲು ನಿರಾಕರಿಸಿದ ಮಹಾಬಲಿ ಜರಾಸಂಧನನ್ನು ನಾನು ತುಂಬಾ ಗೌರವಿಸುತ್ತಿದ್ದೆ.

02039002a ಕೇಶವೇನ ಕೃತಂ ಯತ್ತು ಜರಾಸಂಧವಧೇ ತದಾ|

02039002c ಭೀಮಸೇನಾರ್ಜುನಾಭ್ಯಾಂ ಚ ಕಸ್ತತ್ಸಾಧ್ವಿತಿ ಮನ್ಯತೇ||

ಕೇಶವನಿಂದ, ಮತ್ತು ಭೀಮಸೇನ ಅರ್ಜುನರಿಂದ ಆದ ಜರಾಸಂಧವಧೆಯನ್ನು ಯಾರುತಾನೆ ಒಳ್ಳೆಯದಾಯಿತೆಂದು ಸ್ವೀಕರಿಸುತ್ತಾರೆ?

02039003a ಅದ್ವಾರೇಣ ಪ್ರವಿಷ್ಟೇನ ಚದ್ಮನಾ ಬ್ರಹ್ಮವಾದಿನಾ|

02039003c ದೃಷ್ಟಃ ಪ್ರಭಾವಃ ಕೃಷ್ಣೇನ ಜರಾಸಂಧಸ್ಯ ಧೀಮತಃ||

ಧೀಮಂತ ಜರಾಸಂಧನು ಬ್ರಹ್ಮವಾದಿಯ ವೇಷದಲ್ಲಿದ್ದ ಕೃಷ್ಣನನ್ನು ಯಾವ ದ್ವಾರದಿಂದ ಪ್ರವೇಶಿಸಿದುದನ್ನೂ ನೋಡಲಿಲ್ಲ.

02039004a ಯೇನ ಧರ್ಮಾತ್ಮನಾತ್ಮಾನಂ ಬ್ರಹ್ಮಣ್ಯಮಭಿಜಾನತಾ|

02039004c ನೈಷಿತಂ ಪಾದ್ಯಮಸ್ಮೈ ತದ್ದಾತುಮಗ್ರೇ ದುರಾತ್ಮನೇ||

02039005a ಭುಜ್ಯತಾಮಿತಿ ತೇನೋಕ್ತಾಃ ಕೃಷ್ಣಭೀಮಧನಂಜಯಾಃ|

02039005c ಜರಾಸಂಧೇನ ಕೌರವ್ಯ ಕೃಷ್ಣೇನ ವಿಕೃತಂ ಕೃತಂ||

ಆ ಧರ್ಮಾತ್ಮನು ಇವರು ಬ್ರಾಹ್ಮಣರೆಂದು ತಿಳಿದು ಈ ದುರಾತ್ಮ ಕೃಷ್ಣ, ಭೀಮ, ಧನಂಜಯರಿಗೆ ಮೊದಲು ಪಾದ್ಯವನ್ನು ನೀಡಿ, ನಂತರ ಭೋಜನ ಮಾಡಿ ಎಂದು ಹೇಳಿದನು. ಕೌರವ್ಯ! ಕೃಷ್ಣನು ಜರಾಸಂಧನಿಗೆ ಮೋಸಮಾಡಿದನು.

02039006a ಯದ್ಯಯಂ ಜಗತಃ ಕರ್ತಾ ಯಥೈನಂ ಮೂರ್ಖ ಮನ್ಯಸೇ|

02039006c ಕಸ್ಮಾನ್ನ ಬ್ರಾಹ್ಮಣಂ ಸಂಯಗಾತ್ಮಾನಮವಗಚ್ಛತಿ||

ಮೂರ್ಖನಾದ ನೀನು ತಿಳಿದಂತೆ ಒಂದುವೇಳೆ ಇವನೇನಾದರೂ ಜಗತ್ತಿನ ಕರ್ತುವಾಗಿದ್ದರೆ, ಅವನು ಅಲ್ಲಿಗೆ ತನ್ನನ್ನು ಬ್ರಾಹ್ಮಣನನ್ನಾಗಿಸಿಕೊಂಡು ಏಕೆ ಹೋದನು?

02039007a ಇದಂ ತ್ವಾಶ್ಚರ್ಯಭೂತಂ ಮೇ ಯದಿಮೇ ಪಾಂಡವಾಸ್ತ್ವಯಾ|

02039007c ಅಪಕೃಷ್ಟಾಃ ಸತಾಂ ಮಾರ್ಗಾನ್ಮನ್ಯಂತೇ ತಚ್ಚ ಸಾಧ್ವಿತಿ||

ನಿನ್ನಿಂದ ಸತ್ಯವಂತರ ಮಾರ್ಗವನ್ನು ಕಳೆದುಕೊಂಡ ಪಾಂಡವರು ಈಗಲೂ ನಿನ್ನನ್ನು ಸಾಧುವೆಂದು ತಿಳಿಯುತ್ತಿದ್ದಾರಲ್ಲ. ಅದೇ ನನಗೆ ಬಹಳ ಆಶ್ಚರ್ಯವೆನಿಸುತ್ತದೆ.

02039008a ಅಥ ವಾ ನೈತದಾಶ್ಚರ್ಯಂ ಯೇಷಾಂ ತ್ವಮಸಿ ಭಾರತ|

02039008c ಸ್ತ್ರೀಸಧರ್ಮಾ ಚ ವೃದ್ಧಶ್ಚ ಸರ್ವಾರ್ಥಾನಾಂ ಪ್ರದರ್ಶಕಃ||

ಅಥವಾ ಅವರಿಗೆ ಸ್ತ್ರೀಯಂತೆ ನಡೆದುಕೊಳ್ಳುತ್ತಿರುವ ವೃದ್ಧ ಭಾರತ ನೀನು ಸರ್ವವಿಷಯಗಳ ಮಾರ್ಗದರ್ಶಕ ಎನ್ನುವುದು ಬಹುಷಃ ಅಷ್ಟೊಂದು ಆಶ್ಚರ್ಯಕರವಾದದ್ದು ಇಲ್ಲದಿರಬಹುದು.””

02039009 ವೈಶಂಪಾಯನ ಉವಾಚ|

02039009a ತಸ್ಯ ತದ್ವಚನಂ ಶ್ರುತ್ವಾ ರೂಕ್ಷಂ ರೂಕ್ಷಾಕ್ಷರಂ ಬಹು|

02039009c ಚುಕೋಪ ಬಲಿನಾಂ ಶ್ರೇಷ್ಠೋ ಭೀಮಸೇನಃ ಪ್ರತಾಪವಾನ್||

ವೈಶಂಪಾಯನನು ಹೇಳಿದನು: “ಕಟುಶಬ್ಧಗಳಿಂದ ಕೂಡಿದ ಅವನ ಈ ಸುದೀರ್ಘ ಕಟು ಮಾತುಗಳನ್ನು ಕೇಳಿದ ಬಲಶಾಲಿಗಳಲ್ಲಿ ಶ್ರೇಷ್ಠ ಪ್ರತಾಪಿ ಭೀಮಸೇನನು ಸಿಟ್ಟಿಗೆದ್ದನು.

02039010a ತಸ್ಯ ಪದ್ಮಪ್ರತೀಕಾಶೇ ಸ್ವಭಾವಾಯತವಿಸ್ತೃತೇ|

02039010c ಭೂಯಃ ಕ್ರೋಧಾಭಿತಾಂರಾಂತೇ ರಕ್ತೇ ನೇತ್ರೇ ಬಭೂವತುಃ||

ಪದ್ಮದಂತೆ ಸ್ವಭಾವತಃ ಶಾಂತವಾಗಿದ್ದ ಕಣ್ಣುಗಳು ಕ್ರೋಧದಿಂದ ಕೆಂಪಾದವು ಮತ್ತು ಕಣ್ಣಂಚು ತಾಮ್ರದ ಬಣ್ಣವನ್ನು ತಾಳಿತು.

02039011a ತ್ರಿಶಿಖಾಂ ಭ್ರುಕುಟೀಂ ಚಾಸ್ಯ ದದೃಶುಃ ಸರ್ವಪಾರ್ಥಿವಾಃ|

02039011c ಲಲಾಟಸ್ಥಾಂ ತ್ರಿಕೂಟಸ್ಥಾಂ ಗಂಗಾಂ ತ್ರಿಪಥಗಾಮಿವ||

ಅವನ ಹಣೆಯ ಹುಬ್ಬುಗಳು ತ್ರಿಕೂಟದಿಂದ ಮೂರು ಭಾಗಗಳಾಗಿ ಹರಿಯುವ ಗಂಗೆಯಂತೆ ಮೂರು ಪದರಗಳಲ್ಲಿ ಬಿಗಿಯಾದುದನ್ನು ಸರ್ವ ಪಾರ್ಥಿವರೂ ನೋಡಿದರು.

02039012a ದಂತಾನ್ಸಂದಶತಸ್ತಸ್ಯ ಕೋಪಾದ್ದದೃಶುರಾನನಂ|

02039012c ಯುಗಾಂತೇ ಸರ್ವಭೂತಾನಿ ಕಾಲಸ್ಯೇವ ದಿಧಕ್ಷತಃ||

ಅವನು ಯುಗಾಂತದಲ್ಲಿ ಸರ್ವಭೂತಗಳನ್ನೂ ಸುಟ್ಟುಬಿಡುವ ಕಾಲನಂತೆ ಕೋಪದಿಂದ ಹಲ್ಲು ಕಡೆಯುತ್ತಿದ್ದುದನು ನೋಡಿದರು.

02039013a ಉತ್ಪತಂತಂ ತು ವೇಗೇನ ಜಗ್ರಾಹೈನಂ ಮನಸ್ವಿನಂ|

02039013c ಭೀಷ್ಮ ಏವ ಮಹಾಬಾಹುರ್ಮಹಾಸೇನಮಿವೇಶ್ವರಃ||

ಆದರೆ ವೇಗದಿಂದ ಮೇಲೆದ್ದು ಮುಂದೆಬರುತ್ತಿದ್ದ ಮಹಾಬಾಹು ಭೀಮಸೇನನನ್ನು ಈಶ್ವರ ಭೀಷ್ಮನು ತಡೆಹಿಡಿದನು.

02039014a ತಸ್ಯ ಭೀಮಸ್ಯ ಭೀಷ್ಮೇಣ ವಾರ್ಯಮಾಣಸ್ಯ ಭಾರತ|

02039014c ಗುರುಣಾ ವಿವಿಧೈರ್ವಾಕ್ಯೈಃ ಕ್ರೋಧಃ ಪ್ರಶಮಮಾಗತಃ||

ಭಾರತ! ಭೀಷ್ಮನು ಭೀಮನನ್ನು ತಡೆಯಲು, ಗುರುವಿನ ವಿವಿಧ ವಾಕ್ಯಗಳಿಂದ ಅವನ ಕ್ರೋಧವು ಪ್ರಶಮನವಾಯಿತು.

02039015a ನಾತಿಚಕ್ರಾಮ ಭೀಷ್ಮಸ್ಯ ಸ ಹಿ ವಾಕ್ಯಮರಿಂದಮಃ|

02039015c ಸಮುದ್ಧೂತೋ ಘನಾಪಾಯೇ ವೇಲಾಮಿವ ಮಹೋದಧಿಃ||

ಮಳೆಗಾಲದಲ್ಲಿ ಮಹೋದಧಿಯು ಎಷ್ಟೇ ಭರತ ಹೊಂದಿದರೂ ಪ್ರವಾಹರೇಖೆಯನ್ನು ಹೇಗೆ ದಾಟುವುದಿಲ್ಲವೋ ಹಾಗೆ ಆ ಅರಿಂದಮನು ಭೀಷ್ಮನ ವಾಕ್ಯವನ್ನು ಅತಿಕ್ರಮಿಸಲಿಲ್ಲ.

02039016a ಶಿಶುಪಾಲಸ್ತು ಸಂಕ್ರುದ್ಧೇ ಭೀಮಸೇನೇ ನರಾಧಿಪ|

02039016c ನಾಕಂಪತ ತದಾ ವೀರಃ ಪೌರುಷೇ ಸ್ವೇ ವ್ಯವಸ್ಥಿತಃ||

ನರಾಧಿಪ! ಸಂಕೃದ್ಧ ಭೀಮಸೇನನಿಗೆ ಶಿಶುಪಾಲನು ಹೆದರಲಿಲ್ಲ ಮತ್ತು ಆ ವೀರನು ತನ್ನ ಪೌರುಷದಲ್ಲಿಯೇ ವ್ಯವಸ್ಥಿತನಾಗಿದ್ದನು.

02039017a ಉತ್ಪತಂತಂ ತು ವೇಗೇನ ಪುನಃ ಪುನರರಿಂದಮಃ|

02039017c ನ ಸ ತಂ ಚಿಂತಯಾಮಾಸ ಸಿಂಹಃ ಕ್ಷುದ್ರಮೃಗಂ ಯಥಾ||

ಆ ಅರಿಂದಮನು ಪುನಃ ಪುನಃ ವೇಗದಿಂದ ಎದ್ದೇಳುತ್ತಿದ್ದರೂ ಒಂದು ಸಿಂಹವು ಕ್ಷುದ್ರಮೃಗವನ್ನು ಹೇಗೋ ಹಾಗೆ ಅವನ ಕುರಿತು ಸ್ವಲ್ಪವೂ ಚಿಂತಿಸಲಿಲ್ಲ.

02039018a ಪ್ರಹಸಂಶ್ಚಾಬ್ರವೀದ್ವಾಕ್ಯಂ ಚೇದಿರಾಜಃ ಪ್ರತಾಪವಾನ್|

02039018c ಭೀಮಸೇನಮತಿಕ್ರುದ್ಧಂ ದೃಷ್ಟ್ವಾ ಭೀಮಪರಾಕ್ರಮಂ||

ಭೀಮಪರಾಕ್ರಮಿ ಅತಿಕೃದ್ಧ ಭೀಮಸೇನನನ್ನು ನೋಡಿ ಪ್ರತಾಪಿ ಚೇದಿರಾಜನು ಜೋರಾಗಿ ನಗುತ್ತಾ ಹೇಳಿದನು:

02039019a ಮುಂಚೈನಂ ಭೀಷ್ಮ ಪಶ್ಯಂತು ಯಾವದೇನಂ ನರಾಧಿಪಾಃ|

02039019c ಮತ್ಪ್ರತಾಪಾಗ್ನಿನಿರ್ದಗ್ಧಂ ಪತಂಗಮಿವ ವಃನಿನಾ||

“ಭೀಷ್ಮ! ಅವನನ್ನು ಬರಲು ಬಿಡು. ಅಗ್ನಿಯಲ್ಲಿ ಪತಂಗದಂತೆ ನನ್ನ ಪ್ರತಾಪಾಗ್ನಿಯಲ್ಲಿ ಇವನು ಸುಟ್ಟುಹೋಗುವುದನ್ನು ನರಾಧಿಪರೆಲ್ಲ ನೋಡಲಿ!”

02039020a ತತಶ್ಚೇದಿಪತೇರ್ವಾಕ್ಯಂ ತಶ್ರುತ್ವಾ ಕುರುಸತ್ತಮಃ|

02039020c ಭೀಮಸೇನಮುವಾಚೇದಂ ಭೀಷ್ಮೋ ಮತಿಮತಾಂ ವರಃ||

ಆಗ ಚೇದಿಪತಿಯ ಈ ಮಾತುಗಳನ್ನು ಕೇಳಿದ ಮತಿವಂತರಲ್ಲಿ ಶ್ರೇಷ್ಠ ಕುರುಸತ್ತಮ ಭೀಷ್ಮನು ಬೀಮಸೇನನಿಗೆ ಈ ಮಾತುಗಳನ್ನಾಡಿದನು.

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಭೀಮಕ್ರೋಧೇ ಏಕೋನಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಭೀಮಕ್ರೋಧ ಎನ್ನುವ ಮೂವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.