Sabha Parva: Chapter 38

ಸಭಾ ಪರ್ವ: ಶಿಶುಪಾಲವಧ ಪರ್ವ

೩೮

ಶಿಶುಪಾಲನ ಮಾತು

ಶಿಶುಪಾಲನು ಭೀಷ್ಮನು ನಪುಂಸಕನೆಂದು ಹೀಯಾಳಿಸುವುದು (೧-೪೦).

02038001 ಶಿಶುಪಾಲ ಉವಾಚ|

02038001a ವಿಭೀಷಿಕಾಭಿರ್ಬಹ್ವೀಭಿರ್ಭೀಷಯನ್ಸರ್ವಪಾರ್ಥಿವಾನ್|

02038001c ನ ವ್ಯಪತ್ರಪಸೇ ಕಸ್ಮಾದ್ವೃದ್ಧಃ ಸನ್ಕುಲಪಾಂಸನಃ||

ಶಿಶುಪಾಲನು ಹೇಳಿದನು: “ಕುಲಘಾತಕ! ಈ ರೀತಿ ನಿನ್ನ ಹಲವಾರು ಹೆದರಿಕೆಗಳಿಂದ ಸರ್ವ ಪಾರ್ಥಿವರನ್ನೂ ಭಯಪಡಿಸುತ್ತಿರುವ ನಿನಗೆ ನಾಚಿಕೆಯಾದರೂ ಏಕೆ ಆಗುವುದಿಲ್ಲ?

02038002a ಯುಕ್ತಮೇತತ್ತೃತೀಯಾಯಾಂ ಪ್ರಕೃತೌ ವರ್ತತಾ ತ್ವಯಾ|

02038002c ವಕ್ತುಂ ಧರ್ಮಾದಪೇತಾರ್ಥಂ ತ್ವಂ ಹಿ ಸರ್ವಕುರೂತ್ತಮಃ||

ಸರ್ವಕುರೂತ್ತಮ! ನಪುಂಸಕನಂತೆ ಜೀವಿಸುತ್ತಿರುವ ನಿನಗೆ ಈ ರೀತಿ ಧರ್ಮ ವಿರುದ್ಧ ಮಾತುಗಳನ್ನಾಡುವುದು ನಿಜವಾಗಿಯೂ ಸರಿಯೆನಿಸುತ್ತದೆ.

02038003a ನಾವಿ ನೌರಿವ ಸಂಬದ್ಧಾ ಯಥಾಂಧೋ ವಾಂಧಮನ್ವಿಯಾತ್|

02038003c ತಥಾಭೂತಾ ಹಿ ಕೌರವ್ಯಾ ಭೀಷ್ಮ ಯೇಷಾಂ ತ್ವಮಗ್ರಣೀಃ||

ಇನ್ನೊಂದು ದಾರಿತಪ್ಪಿದ ದೋಣಿಗೆ ಕಟ್ಟಿದ ದೋಣಿಯಂತೆ, ಕುರುಡನನ್ನು ಹಿಂಬಾಲಿಸುವ ಕುರುಡನಂತೆ ಭೀಷ್ಮ! ಕೌರವರೆಲ್ಲರೂ ನಿನ್ನನ್ನು ತಮ್ಮ ಮುಖಂಡನನ್ನಾಗಿ ಹೊಂದಿದ್ದಾರೆ.

02038004a ಪೂತನಾಘಾತಪೂರ್ವಾಣಿ ಕರ್ಮಾಣ್ಯಸ್ಯ ವಿಶೇಷತಃ|

02038004c ತ್ವಯಾ ಕೀರ್ತಯತಾಸ್ಮಾಕಂ ಭೂಯಃ ಪ್ರಚ್ಯಾವಿತಂ ಮನಃ||

ಹಿಂದೆ ಇವನು ಪೂತನಿಯನ್ನು ಕೊಂದ ಕೆಲಸವನ್ನು ವಿಶೇಷವಾಗಿ ಹೊಗಳುತ್ತಾ ನೀನು ನಮ್ಮ ಮನಸ್ಸೆಲ್ಲವೂ ಕುಸಿದುಬೀಳುವಂತೆ ಮಾಡಿರುವೆ[1].

02038005a ಅವಲಿಪ್ತಸ್ಯ ಮೂರ್ಖಸ್ಯ ಕೇಶವಂ ಸ್ತೋತುಮಿಚ್ಛತಃ|

02038005c ಕಥಂ ಭೀಷ್ಮ ನ ತೇ ಜಿಹ್ವಾ ಶತಧೇಯಂ ವಿದೀರ್ಯತೇ||

ಅವಲಿಪ್ತ ಮೂರ್ಖ! ಭೀಷ್ಮ! ಕೇಶವನನ್ನು ಸ್ತುತಿಸಲು ಬಯಸುವ ನಿನ್ನ ನಾಲಗೆಯು ಹೇಗೆ ನೂರು ಚೂರುಗಳಾಗಿ ಒಡೆದು ಹೋಗಿಲ್ಲ?

02038006a ಯತ್ರ ಕುತ್ಸಾ ಪ್ರಯೋಕ್ತವ್ಯಾ ಭೀಷ್ಮ ಬಾಲತರೈರ್ನರೈಃ|

02038006c ತಮಿಮಂ ಜ್ಞಾನವೃದ್ಧಃ ಸಂಗೋಪಂ ಸಂಸ್ತೋತುಮಿಚ್ಛಸಿ||

ಭೀಷ್ಮ! ಜ್ಞಾನವೃದ್ಧ ನೀನು ಮೂಢರೂ ಹೀಗಳೆಯುವ ಗೋಪನನ್ನು ಸಂಸ್ತುತಿಸಲು ಇಚ್ಛಿಸುವೆಯಾ!

02038007a ಯದ್ಯನೇನ ಹತಾ ಬಾಲ್ಯೇ ಶಕುನಿಶ್ಚಿತ್ರಮತ್ರ ಕಿಂ|

02038007c ತೌ ವಾಶ್ವವೃಷಭೌ ಭೀಷ್ಮ ಯೌ ನ ಯುದ್ಧವಿಶಾರದೌ||

ಬಾಲ್ಯದಲ್ಲಿ ಅವನು ಶಕುನಿ[2]ಯೊಂದನ್ನು ಕೊಂದನೆಂದರೆ ಅದರಲ್ಲಿ ಆಶ್ಚರ್ಯವೇನು? ಭೀಷ್ಮ! ಆ ಅಶ್ವ ವೃಷಭ[3]ರು ಯುದ್ಧವಿಶಾರದರಾಗಿರಲಿಲ್ಲ.

02038008a ಚೇತನಾರಹಿತಂ ಕಾಷ್ಠಂ ಯದ್ಯನೇನ ನಿಪಾತಿತಂ|

02038008c ಪಾದೇನ ಶಕಟಂ ಭೀಷ್ಮ ತತ್ರ ಕಿಂ ಕೃತಮದ್ಭುತಂ||

ಭೀಷ್ಮ! ಚೇತನಾರಹಿತ ಕಟ್ಟಿಗೆಯ ಬಂಡಿಯನ್ನು[4] ಪಾದದಿಂದ ಒದ್ದು ಬೀಳಿಸಿದನೆಂದರೆ ಅದರಲ್ಲಿ ಯಾವ ರೀತಿಯ ಅದ್ಭುತವನ್ನು ಮಾಡಿದಹಾಗಾಯಿತು?

02038009a ವಲ್ಮೀಕಮಾತ್ರಃ ಸಪ್ತಾಹಂ ಯದ್ಯನೇನ ಧೃತೋಽಚಲಃ|

02038009c ತದಾ ಗೋವರ್ಧನೋ ಭೀಷ್ಮ ನ ತಚ್ಚಿತ್ರಂ ಮತಂ ಮಮ||

ಭೀಷ್ಮ! ಕೇವಲ ಹುತ್ತದ ಗಾತ್ರದ ಗೋವರ್ಧನ ಪರ್ವತವನ್ನು ಒಂದು ಏಳು ದಿನಗಳ ಪರ್ಯಂತ ಅವನು ಎತ್ತಿ ಹಿಡಿದನೆಂದರೆ ಅದೊಂದು ಪವಾಡವಲ್ಲ ಎನ್ನುವುದು ನನ್ನ ಅಭಿಪ್ರಾಯ.

02038010a ಭುಕ್ತಮೇತೇನ ಬಹ್ವನ್ನಂ ಕ್ರೀಡತಾ ನಗಮೂರ್ಧನಿ|

02038010c ಇತಿ ತೇ ಭೀಷ್ಮ ಶೃಣ್ವಾನಾಃ ಪರಂ ವಿಸ್ಮಯಮಾಗತಾಃ||

ಭೀಷ್ಮ! ಅವನು ಪರ್ವತದ ಮೇಲೆ ಆಡುತ್ತಿರುವಾಗ ಬಹಳಷ್ಟು ಆಹಾರವನ್ನು ತಿನ್ನನೆಂದು ನಮಗೆ ಹೇಳುವ ನೀನು ನಮ್ಮನ್ನೆಲ್ಲ ಬಹಳ ವಿಸ್ಮಿತರನ್ನಾಗಿ ಮಾಡಿದ್ದೀಯೆ.

02038011a ಯಸ್ಯ ಚಾನೇನ ಧರ್ಮಜ್ಞ ಭುಕ್ತಮನ್ನಂ ಬಲೀಯಸಃ|

02038011c ಸ ಚಾನೇನ ಹತಃ ಕಂಸ ಇತ್ಯೇತನ್ನ ಮಹಾದ್ಭುತಂ||

ಯಾರ ಅನ್ನವನ್ನು ತಿಂದಿದ್ದನೋ ಅದೇ ಬಲಶಾಲಿ ಕಂಸನನ್ನು ಇವನು ಕೊಂದನೆನ್ನುವುದು ಧರ್ಮಜ್ಞ ನಿನಗೆ ಮಹಾದ್ಭುತವೆಂದು ತೋರುವುದಿಲ್ಲವೇ?

02038012a ನ ತೇ ಶ್ರುತಮಿದಂ ಭೀಷ್ಮ ನೂನಂ ಕಥಯತಾಂ ಸತಾಂ|

02038012c ಯದ್ವಕ್ಷ್ಯೇ ತ್ವಾಮಧರ್ಮಜ್ಞ ವಾಕ್ಯಂ ಕುರುಕುಲಾಧಮ||

ಕುರುಕುಲಾಧಮ! ಸತ್ಯವಂತರು ಹೇಳುವ ಈ ವಿಷಯಗಳನ್ನು ಅಧರ್ಮಜ್ಞ ನೀನು ಕೇಳಿಲ್ಲ ಎನ್ನುವುದು ನಿಶ್ಚಿತ!

02038013a ಸ್ತ್ರೀಷು ಗೋಷು ನ ಶಸ್ತ್ರಾಣಿ ಪಾತಯೇದ್ಬ್ರಾಹ್ಮಣೇಷು ಚ|

02038013c ಯಸ್ಯ ಚಾನ್ನಾನಿ ಭುಂಜೀತ ಯಶ್ಚ ಸ್ಯಾಚ್ಚರಣಾಗತಃ||

02038014a ಇತಿ ಸಂತೋಽನುಶಾಸಂತಿ ಸಜ್ಜನಾ ಧರ್ಮಿಣಃ ಸದಾ|

02038014c ಭೀಷ್ಮ ಲೋಕೇ ಹಿ ತತ್ಸರ್ವಂ ವಿತಥಂ ತ್ವಯಿ ದೃಶ್ಯತೇ||

ಸ್ತ್ರೀಯರ, ಗೋವುಗಳ, ಬ್ರಾಹ್ಮಣರ, ಯಾರ ಅನ್ನವನ್ನು ತಿಂದಿದ್ದೀವೋ ಅವರ ಮೇಲೆ ಮತ್ತು ಶರಣಾಗತರಾದವರ ಮೇಲೆ ಶಸ್ತ್ರಗಳನ್ನು ಪ್ರಯೋಗಿಸಬಾರದು ಎಂದು ಸಂತರು, ಧಾರ್ಮಿಕರು ಮತ್ತು ಸಜ್ಜನರು ಸದಾ ಹೇಳಿದ್ದಾರೆ. ಭೀಷ್ಮ! ನೀನು ಲೋಕದಲ್ಲಿನ ಇವೆಲ್ಲವನೂ ತಿರಸ್ಕರಿಸಿರುವಂತೆ ತೋರುತ್ತಿದೆ.

02038015a ಜ್ಞಾನವೃದ್ಧಂ ಚ ವೃದ್ಧಂ ಚ ಭೂಯಾಂಸಂ ಕೇಶವಂ ಮಮ|

02038015c ಅಜಾನತ ಇವಾಖ್ಯಾಸಿ ಸಂಸ್ತುವನ್ಕುರುಸತ್ತಮ|

02038015e ಗೋಘ್ನಃ ಸ್ತ್ರೀಘ್ನಶ್ಚ ಸನ್ಭೀಷ್ಮ ಕಥಂ ಸಂಸ್ತವಮರ್ಹತಿ||

ಕುರುಸತ್ತಮ! ನನಗೇನೂ ತಿಳಿದಿಲ್ಲ ಎನ್ನುವ ರೀತಿಯಲ್ಲಿ ನೀನು ಕೇಶವನು ಜ್ಞಾನವೃದ್ಧ, ವೃದ್ಧ ಎಂದು ಸ್ತುತಿಸುತ್ತಿದ್ದೀಯಲ್ಲ! ಭೀಷ್ಮ! ಓರ್ವ ಗೋಹಂತಕ ಮತ್ತು ಸ್ತ್ರೀ ಹಂತಕ[5]ನು ಹೇಗೆ ಸ್ತುತಿಗೆ ಅರ್ಹನಾಗುತ್ತಾನೆ?

02038016a ಅಸೌ ಮತಿಮತಾಂ ಶ್ರೇಷ್ಠೋ ಯ ಏಷ ಜಗತಃ ಪ್ರಭುಃ|

02038016c ಸಂಭಾವಯತಿ ಯದ್ಯೇವಂ ತ್ವದ್ವಾಕ್ಯಾಚ್ಚ ಜನಾರ್ದನಃ|

02038016e ಏವಮೇತತ್ಸರ್ವಮಿತಿ ಸರ್ವಂ ತದ್ವಿತಥಂ ಧ್ರುವಂ||

ಇವನು ಮತಿವಂತರಲ್ಲೆಲ್ಲಾ ಶ್ರೇಷ್ಠನು, ಇವನೇ ಜಗತ್ಪ್ರಭು ಎಂಬ ನಿನ್ನ ಈ ಮಾತುಗಳನ್ನು ಜನಾರ್ದನನೂ ಇವೆಲ್ಲವೂ ಸತ್ಯವೆಂದು ತಿಳಿದಿದ್ದಾನೆ. ಆದರೆ ಇವೆಲ್ಲವೂ ಸುಳ್ಳು ಎನ್ನುವುದಂತೂ ನಿಶ್ಚಿತ.

02038017a ನ ಗಾಥಾ ಗಾಥಿನಂ ಶಾಸ್ತಿ ಬಹು ಚೇದಪಿ ಗಾಯತಿ|

02038017c ಪ್ರಕೃತಿಂ ಯಾಂತಿ ಭೂತಾನಿ ಭೂಲಿಂಗಶಕುನಿರ್ಯಥಾ||

ಎಷ್ಟು ಬಾರಿ ಹಾಡಿದರೂ ಹಾಡು ಹಾಡುಗಾರನನ್ನು ಪ್ರಶಂಸಿಸುವುದಿಲ್ಲ. ಭೂಲಿಂಗ ಪಕ್ಷಿಯಂತೆ ಇರುವವೆಲ್ಲವೂ ಪ್ರಕೃತಿಯನ್ನು ಅನುಸರಿಸುತ್ತವೆ.

02038018a ನೂನಂ ಪ್ರಕೃತಿರೇಷಾ ತೇ ಜಘನ್ಯಾ ನಾತ್ರ ಸಂಶಯಃ|

02038018c ಅತಃ ಪಾಪೀಯಸೀ ಚೈಷಾಂ ಪಾಂಡವಾನಾಮಪೀಷ್ಯತೇ||

02038019a ಯೇಷಾಮರ್ಚ್ಯತಮಃ ಕೃಷ್ಣಸ್ತ್ವಂ ಚ ಯೇಷಾಂ ಪ್ರದರ್ಶಕಃ|

02038019c ಧರ್ಮವಾಕ್ತ್ವಮಧರ್ಮಜ್ಞಃ ಸತಾಂ ಮಾರ್ಗಾದವಪ್ಲುತಃ||

ನಿನ್ನ ಸ್ವಭಾವವು ಅತ್ಯಂತ ಕೀಳಾದದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಸತ್ಯದ ದಾರಿತಪ್ಪಿದ, ಅಧರ್ಮಜ್ಞನಾಗಿದ್ದೂ ಧರ್ಮದ ಮಾತನಾಡುವ ನಿನ್ನ ಹೇಳಿಕೆಯಂತೆ ಕೃಷ್ಣನಿಗೆ ಅತ್ಯುನ್ನತ ಗೌರವವನ್ನು ನೀಡಬೇಕು ಎಂದು ತಿಳಿಯುವ ಈ ಪಾಂಡವರೂ ಕೂಡ ಪಾಪಿಗಳಿರಬೇಕು.

02038020a ಕೋ ಹಿ ಧರ್ಮಿಣಮಾತ್ಮಾನಂ ಜಾನಂಜ್ಞಾನವತಾಂ ವರಃ|

02038020c ಕುರ್ಯಾದ್ಯಥಾ ತ್ವಯಾ ಭೀಷ್ಮ ಕೃತಂ ಧರ್ಮಮವೇಕ್ಷತಾ||

ಜ್ಞಾನವಂತರಲ್ಲಿ ಶ್ರೇಷ್ಠ ಭೀಷ್ಮ! ತಾನು ಧರ್ಮಿಯೆಂದು ತಿಳಿದ ಯಾರುತಾನೆ ಧರ್ಮವನ್ನೇ ಕಡೆಗಣಿಸಿ ನಿನ್ನಂತೆ ನಡೆದುಕೊಳ್ಳುತ್ತಾರೆ?

02038021a ಅನ್ಯಕಾಮಾ ಹಿ ಧರ್ಮಜ್ಞ ಕನ್ಯಕಾ ಪ್ರಾಜ್ಞಮಾನಿನಾ|

02038021c ಅಂಬಾ ನಾಮೇತಿ ಭದ್ರಂ ತೇ ಕಥಂ ಸಾಪಹೃತಾ ತ್ವಯಾ||

ನೀನೊಬ್ಬ ಪ್ರಾಜ್ಞಮಾನಿ, ಧರ್ಮಜ್ಞ ಎಂದು ತಿಳಿದುಕೊಂಡರೆ ಅನ್ಯನನ್ನು ಕಾಮಿಸುತ್ತಿದ್ದ ಅಂಬಾ ಎಂಬ ಹೆಸರಿನವಳನ್ನು ನೀನು ಏಕೆ ಅಪಹರಿಸಿದೆ? ನಿನಗೆ ಮಂಗಳವಾಗಲಿ!

02038022a ಯಾಂ ತ್ವಯಾಪಹೃತಾಂ ಭೀಷ್ಮ ಕನ್ಯಾಂ ನೈಷಿತವಾನ್ನೃಪಃ|

02038022c ಭ್ರಾತಾ ವಿಚಿತ್ರವೀರ್ಯಸ್ತೇ ಸತಾಂ ವೃತ್ತಮನುಷ್ಠಿತಃ||

02038023a ದಾರಯೋರ್ಯಸ್ಯ ಚಾನ್ಯೇನ ಮಿಷತಃ ಪ್ರಾಜ್ಞಮಾನಿನಃ|

02038023c ತವ ಜಾತಾನ್ಯಪತ್ಯಾನಿ ಸಜ್ಜನಾಚರಿತೇ ಪಥಿ||

ಭೀಷ್ಮ! ನಿನ್ನಿಂದ ಅಪಹೃತಳಾದ ಕನ್ಯೆಯನ್ನು ನಿನ್ನ ಭ್ರಾತ ವಿಚಿತ್ರವೀರ್ಯನು ಸ್ವೀಕರಿಸದೇ ಸತ್ಯವಂತರಹಾಗೆ ನಡೆದುಕೊಂಡನು. ಅವನ ಪತ್ನಿಯರಲ್ಲಿ ಇನೊಬ್ಬ ಪ್ರಾಜ್ಞಮಾನಿಯು ನಿನಗಾಗಿ ಸಂತಾನವನ್ನು ಹುಟ್ಟಿಸಿ ಸಜ್ಜನರು ಆಚರಿಸುವ ದಾರಿಯಲ್ಲಿ ನಡೆದುಕೊಳ್ಳುವಹಾಗೆ ಮಾಡಬೇಕಾಯಿತು.

02038024a ನ ಹಿ ಧರ್ಮೋಽಸ್ತಿ ತೇ ಭೀಷ್ಮ ಬ್ರಹ್ಮಚರ್ಯಮಿದಂ ವೃಥಾ|

02038024c ಯದ್ಧಾರಯಸಿ ಮೋಹಾದ್ವಾ ಕ್ಲೀಬತ್ವಾದ್ವಾ ನ ಸಂಶಯಃ||

ಮೋಹದಿಂದ ಅಥವಾ ಕ್ಲೀಬತ್ವದಿಂದ ನೀನು ವೃಥಾ ಆಚರಿಸುತ್ತಿರುವ ಈ ಬ್ರಹ್ಮಚರ್ಯವು ನಿನ್ನ ಧರ್ಮವಲ್ಲ ಭೀಷ್ಮ!

02038025a ನ ತ್ವಹಂ ತವ ಧರ್ಮಜ್ಞ ಪಶ್ಯಾಮ್ಯುಪಚಯಂ ಕ್ವ ಚಿತ್|

02038025c ನ ಹಿ ತೇ ಸೇವಿತಾ ವೃದ್ಧಾ ಯ ಏವಂ ಧರ್ಮಮಬ್ರುವನ್||

02038026a ಇಷ್ಟಂ ದತ್ತಮಧೀತಂ ಚ ಯಜ್ಞಾಶ್ಚ ಬಹುದಕ್ಷಿಣಾಃ|

02038026c ಸರ್ವಮೇತದಪತ್ಯಸ್ಯ ಕಲಾಂ ನಾರ್ಹತಿ ಷೋಡಶೀಂ||

ನೀನು ಏಳ್ಗೆಯನ್ನು ಕಾಣುತ್ತೀಯೆ ಎಂದು ನನಗೆ ಅನ್ನಿಸುವುದಿಲ್ಲ. ನೀನು ಎಂದೂ ವೃದ್ಧರ ಸೇವೆಯನ್ನು ಮಾಡಲಿಲ್ಲ. ಧರ್ಮದಲ್ಲಿ ಹೇಳಿದ ಪ್ರಕಾರ ದಾನವನ್ನು ನೀಡುವುದು, ಬಹುದಕ್ಷಿಣೆಯುಕ್ತ ಯಜ್ಞ ಇವೆಲ್ಲವೂ ಸಂತಾನದ ಮುಂದೆ ಹದಿನಾರರ ಒಂದಂಶವೂ ಅಲ್ಲ.

02038027a ವ್ರತೋಪವಾಸೈರ್ಬಹುಭಿಃ ಕೃತಂ ಭವತಿ ಭೀಷ್ಮ ಯತ್|

02038027c ಸರ್ವಂ ತದನಪತ್ಯಸ್ಯ ಮೋಘಂ ಭವತಿ ನಿಶ್ಚಯಾತ್||

ಭೀಷ್ಮ! ಬಹಳಷ್ಟು ವ್ರತ ಉಪವಾಸಗಳನ್ನು ಮಾಡಿದ್ದರೂ ಎಲ್ಲವೂ ಸಂತಾನವಿಲ್ಲವೆಂದರೆ ವ್ಯರ್ಥವಾಗುತ್ತವೆ ಎಂದು ನಿಶ್ಚಯವಾಗಿದೆ.

02038028a ಸೋಽನಪತ್ಯಶ್ಚ ವೃದ್ಧಶ್ಚ ಮಿಥ್ಯಾಧರ್ಮಾನುಶಾಸನಾತ್|

02038028c ಹಂಸವತ್ತ್ವಮಪೀದಾನೀಂ ಜ್ಞಾತಿಭ್ಯಃ ಪ್ರಾಪ್ನುಯಾ ವಧಂ||

ಸುಳ್ಳುಧರ್ಮವನ್ನು ಅನುಸರಿಸುವ ನೀನು ಮಕ್ಕಳಿಲ್ಲದೇ ವೃದ್ಧನಾಗುತ್ತಿದ್ದೀಯೆ. ಹಂಸದಂತೆ ಈಗ ನಿನ್ನ ಬಂಧುಗಳ ಕೈಯಲ್ಲಿಯೇ ಸಾವನ್ನು ಹೊಂದು.

02038029a ಏವಂ ಹಿ ಕಥಯಂತ್ಯನ್ಯೇ ನರಾ ಜ್ಞಾನವಿದಃ ಪುರಾ|

02038029c ಭೀಷ್ಮ ಯತ್ತದಹಂ ಸಮ್ಯಗ್ವಕ್ಷ್ಯಾಮಿ ತವ ಶೃಣ್ವತಃ||

ಭೀಷ್ಮ! ಜ್ಞಾತಿವಿದ ಜನರು ಹಿಂದೆ ಹೇಳುತ್ತಿದ್ದ ಕಥೆಯನ್ನು ಇದ್ದಹಾಗೆಯೇ ನಿನಗೆ ಹೇಳುತ್ತೇನೆ. ಅದನ್ನು ಕೇಳು.

02038030a ವೃದ್ಧಃ ಕಿಲ ಸಮುದ್ರಾಂತೇ ಕಶ್ಚಿದ್ಧಂಸೋಽಭವತ್ಪುರಾ|

02038030c ಧರ್ಮವಾಗನ್ಯಥಾವೃತ್ತಃ ಪಕ್ಷಿಣಃ ಸೋಽನುಶಾಸ್ತಿ ಹ||

02038031a ಧರ್ಮಂ ಚರತ ಮಾಧರ್ಮಮಿತಿ ತಸ್ಯ ವಚಃ ಕಿಲ|

02038031c ಪಕ್ಷಿಣಃ ಶುಶ್ರುವುರ್ಭೀಷ್ಮ ಸತತಂ ಧರ್ಮವಾದಿನಃ||

ಭೀಷ್ಮ! ಹಿಂದೆ ಸಮುದ್ರ ತೀರದಲ್ಲಿ ಧರ್ಮವನ್ನು ಮಾತನಾಡುವ ಆದರೆ ಆಚರಿಸದಿರುವ ವೃದ್ಧ ಹಂಸವೊಂದು ಇರುತ್ತಿತ್ತು. ಅದು ಇತರ ಪಕ್ಷಿಗಳಿಗೆ ಧರ್ಮದಲ್ಲಿ ನಡೆದುಕೋ, ಅಧರ್ಮದಲ್ಲಿ ಬೇಡ ಎಂದು ಧರ್ಮದ ಉಪದೇಶವನ್ನು ನೀಡುತ್ತಿತ್ತು. ಆ ಧರ್ಮವಾದಿಯಿಂದ ಸತತವೂ ಇದನ್ನೇ ಪಕ್ಷಿಗಳು ಕೇಳುತ್ತಿದ್ದವು. 

02038032a ಅಥಾಸ್ಯ ಭಕ್ಷ್ಯಮಾಜಹ್ರುಃ ಸಮುದ್ರಜಲಚಾರಿಣಃ|

02038032c ಅಂಡಜಾ ಭೀಷ್ಮ ತಸ್ಯಾನ್ಯೇ ಧರ್ಮಾರ್ಥಮಿತಿ ಶುಶ್ರುಮ||

ಭೀಷ್ಮ! ಇತರ ಪಕ್ಷಿಗಳು ಅವನಿಗೆ ಆಹಾರ, ಸಮುದ್ರದ ನೀರಿನಲ್ಲಿ ವಾಸಿಸುತ್ತಿದ್ದ ಮೀನುಗಳು ಮೊದಲಾದವುಗಳನ್ನು ಧರ್ಮಾರ್ಥ ತಂದುಕೊಡುತ್ತಿದ್ದವು.

02038033a ತಸ್ಯ ಚೈವ ಸಮಭ್ಯಾಶೇ ನಿಕ್ಷಿಪ್ಯಾಂಡಾನಿ ಸರ್ವಶಃ|

02038033c ಸಮುದ್ರಾಂಭಸ್ಯಮೋದಂತ ಚರಂತೋ ಭೀಷ್ಮ ಪಕ್ಷಿಣಃ||

ಭೀಷ್ಮ! ಮತ್ತು ಆ ಪಕ್ಷಿಗಳು ಎಲ್ಲವೂ ತಮ್ಮ ಮೊಟ್ಟೆಗಳನ್ನು ಇವನಲ್ಲಿ ಇಟ್ಟು ಸಮುದ್ರದ ನೀರಿನಲ್ಲಿ ವಿನೋದಿಸುತ್ತಿದ್ದವು.

02038034a ತೇಷಾಮಂಡಾನಿ ಸರ್ವೇಷಾಂ ಭಕ್ಷಯಾಮಾಸ ಪಾಪಕೃತ್|

02038034c ಸ ಹಂಸಃ ಸಂಪ್ರಮತ್ತಾನಾಮಪ್ರಮತ್ತಃ ಸ್ವಕರ್ಮಣಿ||

ಇತರರು ಸಂಪ್ರಮತ್ತರಾಗಿದ್ದಾಗ ತನ್ನ ಕೆಲಸವನ್ನು ನೋಡಿಕೊಳ್ಳುವ ಆ ಪಾಪಕರ್ಮಿ ಹಂಸವು ಅವರ ಎಲ್ಲ ಮೊಟ್ಟೆಗಳನ್ನೂ ತಿಂದು ಹಾಕಿತು.

02038035a ತತಃ ಪ್ರಕ್ಷೀಯಮಾಣೇಷು ತೇಷ್ವಂಡೇಷ್ವಂಡಜೋಽಪರಃ|

02038035c ಅಶಂಕತ ಮಹಾಪ್ರಾಜ್ಞಸ್ತಂ ಕದಾ ಚಿದ್ದದರ್ಶ ಹ||

ಮೊಟ್ಟೆಗಳ ಸಂಖ್ಯೆಯು ಬಹಳಷ್ಟು ಕಡಿಮೆಯಾಗುತ್ತಿರುವುದನ್ನು ನೋಡಿದ ಕೆಲವು ಬುದ್ಧಿವಂತ ಪಕ್ಷಿಗಳು ಅವನನ್ನು ಶಂಕಿಸಿ ಅವನ ಮೇಲೆ ಕಣ್ಣಿಟ್ಟವು.

02038036a ತತಃ ಸ ಕಥಯಾಮಾಸ ದೃಷ್ಟ್ವಾ ಹಂಸಸ್ಯ ಕಿಲ್ಬಿಷಂ|

02038036c ತೇಷಾಂ ಪರಮದುಃಖಾರ್ತಃ ಸ ಪಕ್ಷೀ ಸರ್ವಪಕ್ಷಿಣಾಂ||

ಆ ಹಂಸದ ಕೆಟ್ಟಕಾರ್ಯವನ್ನು ನೋಡಿದ ಅವುಗಳು ಪರಮದುಃಖಾರ್ತರಾಗಿ ಇತರ ಸರ್ವ ಪಕ್ಷಿಗಳಿಗೂ ತಿಳಿಸಿದವು.

02038037a ತತಃ ಪ್ರತ್ಯಕ್ಷತೋ ದೃಷ್ಟ್ವಾ ಪಕ್ಷಿಣಸ್ತೇ ಸಮಾಗತಾಃ|

02038037c ನಿಜಘ್ನುಸ್ತಂ ತದಾ ಹಂಸಂ ಮಿಥ್ಯಾವೃತ್ತಂ ಕುರೂದ್ವಹ||

ಕುರೂದ್ವಹ! ಆ ಎಲ್ಲ ಪಕ್ಷಿಗಳೂ ಒಂದಾಗಿ ಪ್ರತ್ಯಕ್ಷತಃ ಅವನನ್ನು ನೋಡಿ, ಸುಳ್ಳುನಡೆದುಕೊಳ್ಳುತ್ತಿದ್ದ ಆ ಹಂಸವನ್ನು ಕೊಂದುಹಾಕಿದವು.

02038038a ತೇ ತ್ವಾಂ ಹಂಸಸಧರ್ಮಾಣಮಪೀಮೇ ವಸುಧಾಧಿಪಾಃ|

02038038c ನಿಹನ್ಯುರ್ಭೀಷ್ಮ ಸಂಕ್ರುದ್ಧಾಃ ಪಕ್ಷಿಣಸ್ತಮಿವಾಂಡಜಂ||

ಭೀಷ್ಮ! ಪಕ್ಷಿಗಳು ಆ ಹಂಸವನ್ನು ಕೊಂದಹಾಗೆ ಈ ವಸುಧಾಧಿಪರೂ ಕೂಡ ಸಂಕೃದ್ಧರಾಗಿ ಹಂಸಧರ್ಮದಂತೆ ನಿನ್ನನ್ನು ಕೊಲ್ಲುತ್ತಾರೆ.

02038039a ಗಾಥಾಮಪ್ಯತ್ರ ಗಾಯಂತಿ ಯೇ ಪುರಾಣವಿದೋ ಜನಾಃ|

02038039c ಭೀಷ್ಮ ಯಾಂ ತಾಂ ಚ ತೇ ಸಮ್ಯಕ್ಕಥಯಿಷ್ಯಾಮಿ ಭಾರತ||

ಭೀಷ್ಮ! ಭಾರತ! ಪುರಾಣವನ್ನು ತಿಳಿದ ಜನರು ಇದರ ಮೇಲೆ ಒಂದು ಹಾಡನ್ನು ಹಾಡುತ್ತಾರೆ. ಅದನ್ನು ನಿನಗೆ ಇದ್ದಹಾಗೆ ಹೇಳುತ್ತೇನೆ.

02038040a ಅಂತರಾತ್ಮನಿ ವಿನಿಹಿತೇ ರೌಷಿ ಪತ್ರರಥ ವಿತಥಂ|

02038040c ಅಂಡಭಕ್ಷಣಮಶುಚಿ ತೇ ಕರ್ಮ ವಾಚಮತಿಶಯತೇ||

“ನೀನು ಸುಳ್ಳನ್ನು ಹೇಳುತ್ತಿರುವಾಗ ನಿನ್ನ ಅಂತರಾತ್ಮವು ಇನ್ನೊಂದೆಡೆಗೆ ತಿರುಗಿರುತ್ತದೆ. ಮೊಟ್ಟೆಯನ್ನು ತಿನ್ನುವ ಈ ನಿನ್ನ ಅಪಕೃತ್ಯವು ನೀನು ಮಾತನಾಡುವುದರಕ್ಕಿಂತ ಬೇರೆಯಾಗಿದೆ.””

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಶಿಶುಪಾಲವಾಕ್ಯೇ ಅಷ್ಟಾತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಶಿಶುಪಾಲವಾಕ್ಯ ಎನ್ನುವ ಮೂವತ್ತೆಂಟನೆಯ ಅಧ್ಯಾಯವು.

Related image

[1]ಶಿಶುಪಾಲನ ಈ ಮಾತುಗಳಿಂದ ತಿಳಿಯುವುದೇನೆಂದರೆ ಭೀಷ್ಮನು ತುಂಬಿದ ಸಭೆಯಲ್ಲಿ ಶ್ರೀಕೃಷ್ಣನು ತನ್ನ ದೇವತ್ವವನ್ನು ಸೂಚಿಸುವ ಹಲವಾರು ಲೀಲೆಗಳನ್ನು ಉದಾಹರಿಸಿದ್ದ. ಈ ಶ್ಲೋಕಗಳು ನಮಗೆ ದಕ್ಷಿಣ ಭಾರತೀಯ ಕುಂಭಕೋಣ ಸಂಪುಟದಲ್ಲಿ ಕಂಡುಬರುತ್ತವೆ. ಪುಣೆಯ ಈ ಸಂಪುಟದಲ್ಲಿ ಈ ಶ್ಲೋಕಗಳನ್ನು ಸೇರಿಸಿಲ್ಲ. ಈ ಶ್ಲೋಕಗಳನ್ನು ಅರ್ಘ್ಯಾಭಿಹರಣ ಪರ್ವದ ಪರಿಶಿಷ್ಠದಲ್ಲಿ ನೀಡಲಾಗಿದೆ.

[2]ಕೃಷ್ಣನನ್ನು ಕೊಲ್ಲಲು ಶಕುನಿ (ಬಾಲಕ್ಕಿ) ಪಕ್ಷಿರೂಪದಲ್ಲಿ ಬಂದ ಕಂಸನ ಸಹಾಯಕ ರಾಕ್ಷಸ

[3]ತನ್ನನು ಕೊಲ್ಲಲು ಕುದುರೆ ಮತ್ತು ಎತ್ತುಗಳ ರೂಪದಲ್ಲಿ ಬಂದಿದ್ದ ಕಂಸನ ಸಹಾಯಕ ರಾಕ್ಷಸರು

[4]ಮರದ ಬಂಡಿಯ ರೂಪದಲ್ಲಿ ಬಂದು ಕೃಷ್ಣನನ್ನು ಕೊಲ್ಲಲು ಪ್ರಯತ್ನಿಸಿದ ಕಂಸನ ಇನ್ನೊಬ್ಬ ಸಹಾಯಕ ರಾಕ್ಷಸ

[5]ಪೂತನಿಯನ್ನು ಕೊಂದಿದುರಿಂದ ಕೃಷ್ಣನು ಸ್ತ್ರೀಹಂತಕನಾದರೆ ಹೋರಿಯೊಂದನ್ನು ಕೊಂದಿದ್ದರಿಂದ ಅವನು ಗೋಪಾತಕನಾಗುತ್ತಾನೆ.

Comments are closed.