|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ: ಶಿಶುಪಾಲವಧ ಪರ್ವ
೩೭
ಯುಧಿಷ್ಠಿರನ ಆಶ್ವಾಸನೆ
ಯುಧಿಷ್ಠಿರನು ಯಾಗಕ್ಕೆ ವಿಘ್ನವಾಗಬಹುದೆಂದು ಭಯಪಡಲು, ಭೀಷ್ಮನು ಅವನಿಗೆ ಹೆದರಬೇಡವೆಂದೂ, ಶಿಶುಪಾಲನಿಗೆ ಬುದ್ಧಿ ಕೆಟ್ಟುಹೋಗಿದೆಯೆಂದೂ ಹೇಳಿದುದು (೧-೧೫).
02037001 ವೈಶಂಪಾಯನ ಉವಾಚ|
02037001a ತತಃ ಸಾಗರಸಂಕಾಶಂ ದೃಷ್ಟ್ವಾ ನೃಪತಿಸಾಗರಂ|
02037001c ರೋಷಾತ್ಪ್ರಚಲಿತಂ ಸರ್ವಮಿದಮಾಹ ಯುಧಿಷ್ಠಿರಃ||
02037002a ಭೀಷ್ಮಂ ಮತಿಮತಾಂ ಶ್ರೇಷ್ಠಂ ವೃದ್ಧಂ ಕುರುಪಿತಾಮಹಂ|
02037002c ಬೃಹಸ್ಪತಿಂ ಬೃಹತ್ತೇಜಾಃ ಪುರುಹೂತ ಇವಾರಿಹಾ||
ವೈಶಂಪಾಯನನು ಹೇಳಿದನು: “ಈ ರೀತಿ ಸಾಗರಸಂಕಾಶ ಸರ್ವ ನೃಪತಿಸಾಗರವು ರೋಷದಿಂದ ಪ್ರಚಲಿತವಾದುದನ್ನು ಕಂಡ ಯುಧಿಷ್ಠಿರನು ಮತಿಮತರಲ್ಲಿ ಶ್ರೇಷ್ಠ ವೃದ್ಧ ಕುರುಪಿತಾಮಹ ಬೃಹಸ್ಪತಿಯಂತೆ ಬೃಹತ್ತೇಜಸ್ವಿ ಪುರುಹೂತ ಭೀಷ್ಮನಲ್ಲಿ ಈ ರೀತಿ ಕೇಳಿಕೊಂಡನು:
02037003a ಅಸೌ ರೋಷಾತ್ಪ್ರಚಲಿತೋ ಮಹಾನ್ನೃಪತಿಸಾಗರಃ|
02037003c ಅತ್ರ ಯತ್ಪ್ರತಿಪತ್ತವ್ಯಂ ತನ್ಮೇ ಬ್ರೂಹಿ ಪಿತಾಮಹ||
“ಈ ಮಹಾನೃಪತಿಸಾಗರವು ರೋಷದಿಂದ ಪ್ರಚಲಿತವಾಗುತ್ತಿದೆ. ಪಿತಾಮಹ! ಹೀಗಿರುವಾಗ ನಾನು ಏನನ್ನು ಮಾಡಬೇಕೆಂದು ಹೇಳು.
02037004a ಯಜ್ಞಸ್ಯ ಚ ನ ವಿಘ್ನಃ ಸ್ಯಾತ್ಪ್ರಜಾನಾಂ ಚ ಶಿವಂ ಭವೇತ್|
02037004c ಯಥಾ ಸರ್ವತ್ರ ತತ್ಸರ್ವಂ ಬ್ರೂಹಿ ಮೇಽದ್ಯ ಪಿತಾಮಹ||
ಪಿತಾಮಹ! ಈ ಯಜ್ಞವು ವಿಘ್ನವಾಗದಂಥೆ ಮತ್ತು ಪ್ರಜೆಗಳಿಗೆ ಶುಭವಾಗುವಂತೆ ನಾನು ಏನು ಮಾಡಬಹುದೆಂದು ಸರ್ವವನ್ನೂ ಇಂದು ನನಗೆ ಹೇಳು[1].”
02037005a ಇತ್ಯುಕ್ತವತಿ ಧರ್ಮಜ್ಞೇ ಧರ್ಮರಾಜೇ ಯುಧಿಷ್ಠಿರೇ|
02037005c ಉವಾಚೇದಂ ವಚೋ ಭೀಷ್ಮಸ್ತತಃ ಕುರುಪಿತಾಮಹಃ||
ಧರ್ಮಜ್ಞ ಧರ್ಮರಾಜ ಯುಧಿಷ್ಠಿರನು ಈ ರೀತಿ ಹೇಳಲು ಕುರುಪಿತಾಮಹ ಭೀಷ್ಮನು ಈ ಮಾತುಗಳನ್ನಾಡಿದನು.
02037006a ಮಾ ಭೈಸ್ತ್ವಂ ಕುರುಶಾರ್ದೂಲ ಶ್ವಾ ಸಿಂಹಂ ಹಂತುಮರ್ಹತಿ|
02037006c ಶಿವಃ ಪಂಥಾಃ ಸುನೀತೋಽತ್ರ ಮಯಾ ಪೂರ್ವತರಂ ವೃತಃ||
“ಕುರುಶಾರ್ದೂಲ! ಭಯಪಡದಿರು! ನಾಯಿಯು ಸಿಂಹವನ್ನು ಕೊಲ್ಲಬಲ್ಲದೇ? ಇದರ ಹಿಂದೆಯೇ ನಾನು ಒಂದು ಮಂಗಳಕರ ಸುನೀತಿಯುಕ್ತ ದಾರಿಯನ್ನು ಆರಿಸಿಕೊಂಡಿದ್ದೇನೆ[2].
02037007a ಪ್ರಸುಪ್ತೇ ಹಿ ಯಥಾ ಸಿಂಹೇ ಶ್ವಾನಸ್ತತ್ರ ಸಮಾಗತಾಃ|
02037007c ಭಷೇಯುಃ ಸಹಿತಾಃ ಸರ್ವೇ ತಥೇಮೇ ವಸುಧಾಧಿಪಾಃ||
ಈ ಎಲ್ಲ ವಸುಧಾಧಿಪರೂ ಸಿಂಹವು ಮಲಗಿರುವ ಸಮಯದಲ್ಲಿ ಬೊಗಳುವ ನಾಯಿಗಳ ಪಡೆಯಂತೆ ಸೇರಿಕೊಂಡಿದ್ದಾರೆ.
02037008a ವೃಷ್ಣಿಸಿಂಹಸ್ಯ ಸುಪ್ತಸ್ಯ ತಥೇಮೇ ಪ್ರಮುಖೇ ಸ್ಥಿತಾಃ|
02037008c ಭಷಂತೇ ತಾತ ಸಂಕ್ರುದ್ಧಾಃ ಶ್ವಾನಃ ಸಿಂಹಸ್ಯ ಸನ್ನಿಧೌ||
ಇವರೆಲ್ಲರೂ ಮಲಗಿರುವ ವೃಷ್ಣಿಸಿಂಹನ ಎದಿರು ನಿಂತು ಸಿಂಹನ ಸನ್ನಿಧಿಯಲ್ಲಿ ಬೊಗಳುವ ನಾಯಿಗಳಂತೆ ಬೊಗಳುತ್ತಿದ್ದಾರೆ.
02037009a ನ ಹಿ ಸಂಬುಧ್ಯತೇ ತಾವತ್ಸುಪ್ತಃ ಸಿಂಹ ಇವಾಚ್ಯುತಃ|
02037009c ತೇನ ಸಿಂಹೀಕರೋತ್ಯೇತಾನ್ನೃಸಿಂಹಶ್ಚೇದಿಪುಂಗವಃ||
ಎಲ್ಲಿಯವರೆಗೆ ಮಲಗಿರುವ ಸಿಂಹದಂತಿರುವ ಅಚ್ಯುತನು ಏಳುವುದಿಲ್ಲವೋ ಅಲ್ಲಿಯವರೆಗೆ ಅವರೆಲ್ಲರೂ ಆ ನರಸಿಂಹ ಚೇದಿಪುಂಗವನನ್ನು ಸಿಂಹನನ್ನಾಗಿ ಮಾಡುತ್ತಿದ್ದಾರೆ.
02037010a ಪಾರ್ಥಿವಾನ್ಪಾರ್ಥಿವಶ್ರೇಷ್ಠ ಶಿಶುಪಾಲೋಽಲ್ಪಚೇತನಃ|
02037010c ಸರ್ವಾನ್ಸರ್ವಾತ್ಮನಾ ತಾತ ನೇತುಕಾಮೋ ಯಮಕ್ಷಯಂ||
ಮಗೂ! ಪಾರ್ಥಿವಶ್ರೇಷ್ಠ! ಅಲ್ಪಚೇತನ ಶಿಶುಪಾಲನು ಪಾರ್ಥಿವ ಸರ್ವರನ್ನೂ, ಯಾರನ್ನೂ ಬಿಡದೇ, ತನ್ನೊಂದಿಗೆ ಯಮಲೋಕಕ್ಕೆ ಕರೆದೊಯ್ಯಲು ಬಯಸುತ್ತಿದ್ದಾನೆ.
02037011a ನೂನಮೇತತ್ಸಮಾದಾತುಂ ಪುನರಿಚ್ಛತ್ಯಧೋಕ್ಷಜಃ|
02037011c ಯದಸ್ಯ ಶಿಶುಪಾಲಸ್ಥಂ ತೇಜಸ್ತಿಷ್ಠತಿ ಭಾರತ||
ಭಾರತ! ಅಧೋಕ್ಷಜನು ಶಿಶುಪಾಲನಲ್ಲಿರುವ ತೇಜಸ್ಸನ್ನು ಹಿಂದೆ ತೆಗೆದುಕೊಳ್ಳಲು ಬಯಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.
02037012a ವಿಪ್ಲುತಾ ಚಾಸ್ಯ ಭದ್ರಂ ತೇ ಬುದ್ಧಿರ್ಬುದ್ಧಿಮತಾಂ ವರ|
02037012c ಚೇದಿರಾಜಸ್ಯ ಕೌಂತೇಯ ಸರ್ವೇಷಾಂ ಚ ಮಹೀಕ್ಷಿತಾಂ||
ಬುದ್ಧಿವಂತರಲ್ಲಿ ಶ್ರೇಷ್ಠ! ನಿನಗೆ ಮಂಗಳವಾಗಲಿ. ಕೌಂತೇಯ! ಚೇದಿರಾಜನ ಮತ್ತು ಸರ್ವ ಮಹೀಕ್ಷಿತರ ಬುದ್ಧಿಯು ಕೆಟ್ಟುಹೋಗಿದೆ.
02037013a ಆದಾತುಂ ಹಿ ನರವ್ಯಾಘ್ರೋ ಯಂ ಯಮಿಚ್ಛತ್ಯಯಂ ಯದಾ|
02037013c ತಸ್ಯ ವಿಪ್ಲವತೇ ಬುದ್ಧಿರೇವಂ ಚೇದಿಪತೇರ್ಯಥಾ||
ಯಾಕೆಂದರೆ ಈ ನರವ್ಯಾಘ್ರನು ಯಾರನ್ನು ತೆಗೆದುಕೊಳ್ಳಲು ಇಚ್ಛಿಸುತ್ತಾನೋ ಅವರ ಬುದ್ಧಿಯು ಚೇದಿಪತಿಯ ಬುದ್ಧಿಯು ಹೇಗೆ ಕೆಟ್ಟುಹೋಗಿದೆಯೋ ಹಾಗೆ ಕೆಟ್ಟುಹೋಗುತ್ತದೆ.
02037014a ಚತುರ್ವಿಧಾನಾಂ ಭೂತಾನಾಂ ತ್ರಿಷು ಲೋಕೇಷು ಮಾಧವಃ|
02037014c ಪ್ರಭವಶ್ಚೈವ ಸರ್ವೇಷಾಂ ನಿಧನಂ ಚ ಯುಧಿಷ್ಠಿರ||
ಯುಧಿಷ್ಠಿರ! ಮೂರೂ ಲೋಕಗಳ ಎಲ್ಲ ಚತುರ್ವಿಧ ಭೂತಗಳಿಗೆ ಮಾಧವನೇ ಪ್ರಭವ ಮತ್ತು ನಿಧನ.”
02037015a ಇತಿ ತಸ್ಯ ವಚಃ ಶ್ರುತ್ವಾ ತತಶ್ಚೇದಿಪತಿರ್ನೃಪಃ|
02037015c ಭೀಷ್ಮಂ ರೂಕ್ಷಾಕ್ಷರಾ ವಾಚಃ ಶ್ರಾವಯಾಮಾಸ ಭಾರತ||
ಭಾರತ! ಅವನ ಈ ಮಾತುಗಳನ್ನು ಕೇಳಿದ ಚೇದಿಪತಿ ನೃಪನು ಬೀಷ್ಮನಿಗೆ ಸಿಟ್ಟಿನಿಂದ ಈ ಮಾತುಗಳನ್ನು ಹೇಳಿದನು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಯುಧಿಷ್ಠಿರಾಶ್ವಾಸನೇ ಸಪ್ತತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಯುಧಿಷ್ಠಿರಾಶ್ವಾಸನ ಎನ್ನುವ ಮೂವತ್ತೇಳನೆಯ ಅಧ್ಯಾಯವು.
[1]ಯುಧಿಷ್ಠಿರನಿಗೆ ಈ ರೀತಿಯ ಅನುಮಾನವು ಏಕುಂಟಾಯಿತು? ಅವನಿಗೆ ಕೃಷ್ಣನ ದೇವತ್ವದ ಕುರಿತಾಗಲೀ ಅಥವಾ ಅವನಿಗೇ ಅಗ್ರಪೂಜೆಯು ದೊರೆಯಬೇಕು ಎನ್ನುವುದರ ಕುರಿತಾಗಲೀ ಅನುಮಾನವಿದ್ದು ಈ ಪ್ರಶ್ನೆಯನ್ನು ಕೇಳಿದನೇ? ಅಥವಾ, ಅವನಿಗೆ ಸೇರಿದ ನೃಪಕುಲರು ಏನು ಹೇಳಿಬಿಡುತ್ತಾರೋ ಎನ್ನುವ ಭಯವಿತ್ತೇ? ಅಥವಾ ಅವನ ಮಾತೇ ಸೂಚಿಸುವಂತೆ ಕೇವಲ ಯಜ್ಞ ನಿರ್ವಿಘ್ನವಾಗಿ ನೆರವೇರಬೇಕು, ಮತ್ತು ಪ್ರಜೆಗಳೆಲ್ಲರಿಗೂ ಶುಭವಾಗಬೇಕು ಎನ್ನುವ ಚಿಂತೆಯಿಂದ ಈ ಪ್ರಶ್ನೆಗಳನ್ನು ಭೀಷ್ಮನಿಗೆ ಕೇಳಿದನೇ? ಈ ರಾಜಸೂಯದ ಸಹಾಯಕನಾದ ಕೃಷ್ಣನಲ್ಲಿಯೇ ಈ ಪ್ರಶ್ನೆಯನ್ನು ಏಕೆ ಕೇಳಲಿಲ್ಲ? ಭೀಷ್ಮನಲ್ಲಿ ಈ ಪ್ರಶ್ನೆಯನ್ನು ಏಕೆ ಕೇಳಿದನು? ಇವೆಲ್ಲವುಗಳನ್ನೂ ವಿಶ್ಲೇಷಿಸಬೇಕು.
[2]ಇನ್ನೂ ಹೆಚ್ಚು ಶ್ರೀಕೃಷ್ಣನ ಗುಣಗಾನವನ್ನು ಮಾಡಿ ಶಿಶುಪಾಲನಿಂದ ಕೃಷ್ಣನ ನಿಂದನೆಯಾಗುವುದರ ಮೂಲಕ ಕೃಷ್ಣನು ತನ್ನ ಪ್ರತಿಜ್ಞೆಯನ್ನು ಪೂರೈಸಲು ಸಹಾಯಕವಾಗುವ ದಾರಿಯನ್ನು ಭೀಷ್ಮನು ಇಲ್ಲಿ ಯೋಚಿಸಿಕೊಂಡಿದ್ದಾನೆ ಎಂದು ತಿಳಿಯಬಹುದು.