|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ: ಅರ್ಘ್ಯಾಭಿಹರಣ ಪರ್ವ
೩೩
ಶ್ರೀಕೃಷ್ಣನಿಗೆ ಪ್ರಥಮಾರ್ಘ್ಯ
ಯಾಗ ಸಭೆಯಲ್ಲಿ ನಾರದನು ಬ್ರಹ್ಮಭವನದಲ್ಲಿ ರಚಿಸಲ್ಪಟ್ಟ ಅಂಶಾವತರಣವನ್ನು ನೆನಪಿಸಿಕೊಂಡು, ಸಂಪೂರ್ಣಮಾನವನಾಗಿದ್ದ ಹರಿಯನ್ನು ಕಂಡು ಪುಳಕಿತನಾದುದು (೧-೨೦). ಭೀಷ್ಮನ ಸೂಚನೆಯಂತೆ ಕೃಷ್ಣನಿಗೆ ಪ್ರಥಮಾರ್ಘ್ಯವನ್ನು ನೀಡಲು, ಶಿಶುಪಾಲನು ಅದನ್ನು ಆಕ್ಷೇಪಿಸಿದ್ದುದು (೨೧-೩೨).
02033001 ವೈಶಂಪಾಯನ ಉವಾಚ|
02033001a ತತೋಽಭಿಷೇಚನೀಯೇಽಹ್ನಿ ಬ್ರಾಹ್ಮಣಾ ರಾಜಭಿಃ ಸಹ|
02033001c ಅಂತರ್ವೇದೀಂ ಪ್ರವಿವಿಶುಃ ಸತ್ಕಾರಾರ್ಥಂ ಮಹರ್ಷಯಃ||
ವೈಶಂಪಾಯನನು ಹೇಳಿದನು: “ನಂತರ ಅಭಿಷೇಕದ ದಿನದಂದು ಬ್ರಾಹ್ಮಣ-ರಾಜರುಗಳು ಸೇರಿ ಮಹರ್ಷಿಗಳ ಸತ್ಕಾರ ಕಾರ್ಯಕ್ಕೆ ಒಳವೇದಿಯನ್ನು ಪ್ರವೇಶಿಸಿದರು.
02033002a ನಾರದಪ್ರಮುಖಾಸ್ತಸ್ಯಾಮಂತರ್ವೇದ್ಯಾಂ ಮಹಾತ್ಮನಃ|
02033002c ಸಮಾಸೀನಾಃ ಶುಶುಭಿರೇ ಸಹ ರಾಜರ್ಷಿಭಿಸ್ತದಾ||
02033003a ಸಮೇತಾ ಬ್ರಹ್ಮಭವನೇ ದೇವಾ ದೇವರ್ಷಯೋ ಯಥಾ|
02033003c ಕರ್ಮಾಂತರಮುಪಾಸಂತೋ ಜಜಲ್ಪುರಮಿತೌಜಸಃ||
ನಾರದರೇ ಮೊದಲಾದ ಮಹಾತ್ಮರು ವೇದಿಕೆಯ ಹತ್ತಿರದಲ್ಲಿ, ರಾಜರ್ಷಿಗಳೊಡನೆ ಬ್ರಹ್ಮ ಭವನದಲ್ಲಿ ದೇವ-ದೇವರ್ಷಿಗಳು ಹೇಗೆ ಒಟ್ಟಿಗೇ ಕುಳಿತಿರುತ್ತಾರೋ ಹಾಗೆ, ಕುಳಿತುಕೊಂಡರು. ಆ ಅಮಿತೌಜಸರು ಕರ್ಮಗಳನ್ನು ಒಂದೊಂದಾಗಿ ನೆರವೇರಿಸಿ ಮಧ್ಯದಲ್ಲಿ ಅವುಗಳ ಕುರಿತು ಚರ್ಚಿಸುತ್ತಿದ್ದರು.
02033004a ಇದಮೇವಂ ನ ಚಾಪ್ಯೇವಮೇವಮೇತನ್ನ ಚಾನ್ಯಥಾ|
02033004c ಇತ್ಯೂಚುರ್ಬಹವಸ್ತತ್ರ ವಿತಂಡಾನಾಃ ಪರಸ್ಪರಂ||
“ಇದು ಸರಿ! ಇದು ಹೀಗಲ್ಲ! ಇದನ್ನು ಹೀಗೆಯೇ ಮಾಡಬೇಕು! ಬೇರೆ ಯಾವರೀತಿಯೂ ಸರಿಯಲ್ಲ!” ಎಂದು ಗುಂಪಿನಲ್ಲಿ ಪರಸ್ಪರರೊಂದಿಗೆ ವಾದಮಾಡುತ್ತಿದ್ದರು.
02033005a ಕೃಶಾನರ್ಥಾಂಸ್ತಥಾ ಕೇ ಚಿದಕೃಶಾಂಸ್ತತ್ರ ಕುರ್ವತೇ|
02033005c ಅಕೃಶಾಂಶ್ಚ ಕೃಶಾಂಶ್ಚಕ್ರುರ್ಹೇತುಭಿಃ ಶಾಸ್ತ್ರನಿಶ್ಚಿತೈಃ||
ಇದೇ ಶಾಸ್ತ್ರನಿಶ್ಚಿತವೆಂದು ಕೆಲವರು ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಮಾಡಿದರು. ಇನ್ನು ಕೆಲವರು ದೊಡ್ಡ ದೊಡ್ಡ ವಿಷಯಗಳನ್ನು ಚಿಕ್ಕ ವಿಷಯಗಳನ್ನಾಗಿ ಮಾಡಿದರು.
02033006a ತತ್ರ ಮೇಧಾವಿನಃ ಕೇ ಚಿದರ್ಥಮನ್ಯೈಃ ಪ್ರಪೂರಿತಂ|
02033006c ವಿಚಿಕ್ಷಿಪುರ್ಯಥಾ ಶ್ಯೇನಾ ನಭೋಗತಮಿವಾಮಿಷಂ||
ಕೆಲವು ಮೇಧಾವಿಗಳು ಇನ್ನೊಬ್ಬರ ನಿಶ್ಚಯಗಳನ್ನು ಆಕಾಶದಲ್ಲಿ ಎಸೆದ ಮಾಂಸದ ತುಂಡನ್ನು ಗಿಡುಗವು ಹೇಗೋ ಹಾಗೆ ಚಿಂದಿಮಾಡಿದರು.
02033007a ಕೇ ಚಿದ್ಧರ್ಮಾರ್ಥಸಮ್ಯುಕ್ತಾಃ ಕಥಾಸ್ತತ್ರ ಮಹಾವ್ರತಾಃ|
02033007c ರೇಮಿರೇ ಕಥಯಂತಶ್ಚ ಸರ್ವವೇದವಿದಾಂ ವರಾಃ||
ಇನ್ನು ಕೆಲವು ಸರ್ವ ವೇದವಿದರಲ್ಲಿ ಶ್ರೇಷ್ಠ ಮಹಾವ್ರತರು ಧರ್ಮಾರ್ಥಸಂಯುಕ್ತ ಕಥೆಗಳನ್ನು ಹೇಳಿ ಸಂತೋಷಪಟ್ಟರು.
02033008a ಸಾ ವೇದಿರ್ವೇದಸಂಪನ್ನೈರ್ದೇವದ್ವಿಜಮಹರ್ಷಿಭಿಃ|
02033008c ಆಬಭಾಸೇ ಸಮಾಕೀರ್ಣಾ ನಕ್ಷತ್ರೈರ್ದ್ಯೌರಿವಾಮಲಾ||
ವೇದಸಂಪನ್ನರಿಂದ, ದೇವ ದ್ವಿಜರಿಂದ, ಮಹರ್ಷಿಗಳಿಂದ ಕೂಡಿದ್ದ ಆ ವೇದಿಕೆಯು ನಕ್ಷತ್ರಗಳಿಂದ ಹೊಳೆಯುತ್ತಿರುವ ನಿರ್ಮಲ ಆಕಾಶದಂತೆ ಕಂಡುಬಂದಿತು.
02033009a ನ ತಸ್ಯಾಂ ಸನ್ನಿಧೌ ಶೂದ್ರಃ ಕಶ್ಚಿದಾಸೀನ್ನ ಚಾವ್ರತಃ|
02033009c ಅಂತರ್ವೇದ್ಯಾಂ ತದಾ ರಾಜನ್ಯುಧಿಷ್ಠಿರನಿವೇಶನೇ||
ರಾಜನ್! ಯುಧಿಷ್ಠಿರನ ಮನೆಯ ಒಳಗಿನ ಆ ವೇದಿಕೆಯ ಬಳಿ ಯಾವ ಶೂದ್ರನೂ ಅಥವಾ ಅವ್ರತನೂ ಇರಲಿಲ್ಲ.
02033010a ತಾಂ ತು ಲಕ್ಷ್ಮೀವತೋ ಲಕ್ಷ್ಮೀಂ ತದಾ ಯಜ್ಞವಿಧಾನಜಾಂ|
02033010c ತುತೋಷ ನಾರದಃ ಪಶ್ಯನ್ಧರ್ಮರಾಜಸ್ಯ ಧೀಮತಃ||
ಯಜ್ಞವಿಧಿಯಿಂದ ಉಂಟಾದ ಧೀಮಂತ ಶ್ರೀಮಂತ ಧರ್ಮರಾಜನ ಸಂಪತ್ತನ್ನು ಕಂಡ ನಾರದನು ಸಂತೋಷಗೊಂಡನು.
02033011a ಅಥ ಚಿಂತಾಂ ಸಮಾಪೇದೇ ಸ ಮುನಿರ್ಮನುಜಾಧಿಪ|
02033011c ನಾರದಸ್ತಂ ತದಾ ಪಶ್ಯನ್ಸರ್ವಕ್ಷತ್ರಸಮಾಗಮಂ||
02033012a ಸಸ್ಮಾರ ಚ ಪುರಾವೃತ್ತಾಂ ಕಥಾಂ ತಾಂ ಭರತರ್ಷಭ|
02033012c ಅಂಶಾವತರಣೇ ಯಾಸೌ ಬ್ರಹ್ಮಣೋ ಭವನೇಽಭವತ್||
ಮನುಜಾಧಿಪ! ಭರತರ್ಷಭ! ಆಗ ಮುನಿ ನಾರದನು ಸರ್ವ ಕ್ಷತ್ರಿಯರ ಆ ಸಮಾಗಮವನ್ನು ನೋಡಿ ಹಿಂದೆ ಬ್ರಹ್ಮನ ಭವನದಲ್ಲಿ ಕಟ್ಟಲಾದ ಅಂಶಾವತರಣದ ಕಥೆಯನ್ನು ನೆನಪಿಸಿಕೊಂಡನು.
02033013a ದೇವಾನಾಂ ಸಂಗಮಂ ತಂ ತು ವಿಜ್ಞಾಯ ಕುರುನಂದನ|
02033013c ನಾರದಃ ಪುಂಡರೀಕಾಕ್ಷಂ ಸಸ್ಮಾರ ಮನಸಾ ಹರಿಂ||
ಕುರುನಂದನ! ಇದು ದೇವತೆಗಳದ್ದೇ ಸಮಾಗಮವೆಂದು ತಿಳಿದ ನಾರದನು ಮನಸ್ಸಿನಲ್ಲಿಯೇ ಪುಂಡರೀಕಾಕ್ಷ ಹರಿಯನ್ನು ಸ್ಮರಿಸಿದನು.
02033014a ಸಾಕ್ಷಾತ್ಸ ವಿಬುಧಾರಿಘ್ನಃ ಕ್ಷತ್ರೇ ನಾರಾಯಣೋ ವಿಭುಃ|
02033014c ಪ್ರತಿಜ್ಞಾಂ ಪಾಲಯನ್ಧೀಮಾಂಜಾತಃ ಪರಪುರಂಜಯಃ||
02033015a ಸಂದಿದೇಶ ಪುರಾ ಯೋಽಸೌ ವಿಬುಧಾನ್ಭೂತಕೃತ್ಸ್ವಯಂ|
02033015c ಅನ್ಯೋನ್ಯಮಭಿನಿಘ್ನಂತಃ ಪುನರ್ಲೋಕಾನವಾಪ್ಸ್ಯಥ||
“ಅನ್ಯೋನ್ಯರನ್ನು ಸಂಹರಿಸಿ ನೀವು ಪುನಃ ನಿಮ್ಮ ಲೋಕವನ್ನು ಸೇರುತ್ತೀರಿ” ಎಂದು ಹಿಂದೆ ದೇವತೆಗಳಿಗೆ ಆಜ್ಞೆಯನ್ನಿತ್ತಿದ್ದ ದೇವಶತ್ರುಗಳ ಸಂಹಾರಕ, ಧೀಮಂತ, ಪರಪುರಂಜಯ ವಿಭು ನಾರಾಯಣನು ಆಜ್ಞೆಯನ್ನು ಪಾಲಿಸಲು ಸ್ವಯಂ ಸಾಕ್ಷಾತ್ ಕ್ಷತ್ರಿಯರಲ್ಲಿ ಹುಟ್ಟಿದ್ದಾನೆ!
02033016a ಇತಿ ನಾರಾಯಣಃ ಶಂಭುರ್ಭಗವಾಂಜಗತಃ ಪ್ರಭುಃ|
02033016c ಆದಿಶ್ಯ ವಿಬುಧಾನ್ಸರ್ವಾನಜಾಯತ ಯದುಕ್ಷಯೇ||
02033017a ಕ್ಷಿತಾವಂಧಕವೃಷ್ಣೀನಾಂ ವಂಶೇ ವಂಶಭೃತಾಂ ವರಃ|
02033017c ಪರಯಾ ಶುಶುಭೇ ಲಕ್ಷ್ಮ್ಯಾ ನಕ್ಷತ್ರಾಣಾಮಿವೋಡುರಾಟ್||
ಹೀಗೆ ದೇವತೆಗಳಿಗೆ ಆದೇಶವನ್ನಿತ್ತಿದ್ದ ಶಂಭು, ಭಗವನ್, ವಂಶೋದ್ಧಾರಕರಲ್ಲಿ ಶ್ರೇಷ್ಠ ಪ್ರಭು ನಾರಾಯಣನು ಅಂಧಕ ವೃಷ್ಣಿಗಳ ವಂಶದಲ್ಲಿ ಯದುಕುಲದಲ್ಲಿ ಜನ್ಮತಾಳಿ ಈಗ ನಕ್ಷತ್ರಗಳ ಮಧ್ಯದಲ್ಲಿರುವ ಚಂದ್ರನಂತೆ ಅತ್ಯಂತ ಶೋಭೆಯಿಂದ ವಿಜೃಂಭಿಸುತ್ತಿದ್ದಾನೆ!
02033018a ಯಸ್ಯ ಬಾಹುಬಲಂ ಸೇಂದ್ರಾಃ ಸುರಾಃ ಸರ್ವ ಉಪಾಸತೇ|
02033018c ಸೋಽಯಂ ಮಾನುಷವನ್ನಾಮ ಹರಿರಾಸ್ತೇಽರಿಮರ್ದನಃ||
ಯಾರ ಬಾಹುಬಲವನ್ನು ಇಂದ್ರನೂ ಸೇರಿ ಸರ್ವ ಸುರರೂ ಪೂಜಿಸುತ್ತಾರೋ ಆ ಅರಿಮರ್ದನ ಹರಿಯು ಇಂದು ಸಂಪೂರ್ಣ ಮಾನವನಾಗಿದ್ದಾನೆ!
02033019a ಅಹೋ ಬತ ಮಹದ್ಭೂತಂ ಸ್ವಯಂಭೂರ್ಯದಿದಂ ಸ್ವಯಂ|
02033019c ಆದಾಸ್ಯತಿ ಪುನಃ ಕ್ಷತ್ರಮೇವಂ ಬಲಸಮನ್ವಿತಂ||
02033020a ಇತ್ಯೇತಾಂ ನಾರದಶ್ಚಿಂತಾಂ ಚಿಂತಯಾಮಾಸ ಧರ್ಮವಿತ್|
02033020c ಹರಿಂ ನಾರಾಯಣಂ ಜ್ಞಾತ್ವಾ ಯಜ್ಞೈರೀಡ್ಯಂ ತಮೀಶ್ವರಂ||
ಅಹೋ! ಈ ಮಹದ್ಭೂತ, ಸ್ವಯಂಭುವು ಮಹತ್ತರವಾಗಿ ಬೆಳೆದಿರುವ ಈ ಕ್ಷತ್ರಿಯಕುಲವನ್ನು ಸ್ವಯಂ ತನ್ನೊಂದಿಗೆ ಕರೆದೊಯ್ಯುತ್ತಾನೆ! ಎಂಬ ಯೋಚನೆಯನ್ನು ಯೋಚಿಸಿದ ಧರ್ಮವಿದ ನಾರದನು, ಇವನೇ ಯಜ್ಞಗಳಿಗೆಲ್ಲ ಒಡೆಯನಾದ ಹರಿ ನಾರಾಯಣ” ಎಂದು ತಿಳಿದನು[1].
02033021a ತಸ್ಮಿನ್ಧರ್ಮವಿದಾಂ ಶ್ರೇಷ್ಠೋ ಧರ್ಮರಾಜಸ್ಯ ಧೀಮತಃ|
02033021c ಮಹಾಧ್ವರೇ ಮಹಾಬುದ್ಧಿಸ್ತಸ್ಥೌ ಸ ಬಹುಮಾನತಃ||
ಧರ್ಮವಿದರಲ್ಲಿ ಶ್ರೇಷ್ಠ ಆ ಮಹಾಬುದ್ಧಿಯು ಧೀಮಂತ ಧರ್ಮರಾಜನಿಗೆ ಉಡುಗೊರೆಯ ರೂಪದಲ್ಲಿ ಆ ಮಹಾಧ್ವರದಲ್ಲಿ ಉಳಿದುಕೊಂಡನು.
02033022a ತತೋ ಭೀಷ್ಮೋಽಬ್ರವೀದ್ರಾಜನ್ಧರ್ಮರಾಜಂ ಯುಧಿಷ್ಠಿರಂ|
02033022c ಕ್ರಿಯತಾಮರ್ಹಣಂ ರಾಜ್ಞಾಂ ಯಥಾರ್ಹಮಿತಿ ಭಾರತ||
ಆಗ ಭೀಷ್ಮನು ಧರ್ಮರಾಜ ಯುಧಿಷ್ಠಿರನು ಹೇಳಿದನು: “ಭಾರತ! ಯಥಾರ್ಹವಾಗಿ ರಾಜರಿಗೆ ಉಡುಗೊರೆಗಳನ್ನಿತ್ತು ಗೌರವಿಸುವ ಕಾರ್ಯಕ್ರಮವು ನಡೆಯಲಿ.
02033023a ಆಚಾರ್ಯಮೃತ್ವಿಜಂ ಚೈವ ಸಮ್ಯುಕ್ತಂ ಚ ಯುಧಿಷ್ಠಿರ|
02033023c ಸ್ನಾತಕಂ ಚ ಪ್ರಿಯಂ ಚಾಹುಃ ಷಡರ್ಘ್ಯಾರ್ಹಾನ್ನೃಪಂ ತಥಾ||
ಯುಧಿಷ್ಠಿರ! ಆಚಾರ್ಯ, ಋತ್ವಿಜ, ಸಂಬಂಧಿ, ಸ್ನಾತಕ, ಸ್ನೇಹಿತ, ಮತ್ತು ರಾಜ ಈ ಆರು ಮಂದಿಯು ಅತಿಥಿ ಗೌರವಕ್ಕೆ ಪಾತ್ರರು ಎಂದು ಹೇಳುತ್ತಾರೆ.
02033024a ಏತಾನರ್ಹಾನಭಿಗತಾನಾಹುಃ ಸಂವತ್ಸರೋಷಿತಾನ್|
02033024c ತ ಇಮೇ ಕಾಲಪೂಗಸ್ಯ ಮಹತೋಽಸ್ಮಾನುಪಾಗತಾಃ||
02033025a ಏಷಾಮೇಕೈಕಶೋ ರಾಜನ್ನರ್ಘ್ಯಮಾನೀಯತಾಮಿತಿ|
02033025c ಅಥ ಚೈಷಾಂ ವರಿಷ್ಠಾಯ ಸಮರ್ಥಾಯೋಪನೀಯತಾಂ||
ಒಂದು ವರ್ಷ ಪರ್ಯಂತ ಬಂದು ಉಳಿದುಕೊಂಡಿದ್ದವರೂ ಇದಕ್ಕೆ ಅರ್ಹರೆಂದು ಹೇಳುತ್ತಾರೆ. ಈ ರಾಜರು ಕೆಲವು ಸಮಯದ ಹಿಂದೆಯೇ ನಮ್ಮಲ್ಲಿಗೆ ಬಂದಿದ್ದಾರೆ. ಅವರಲ್ಲಿ ಪ್ರತಿಯೊಬ್ಬ ಅತಿಥಿಗೂ ಉಡುಗೊರೆಗಳನ್ನು ಕೊಡುವ ಸಮಯವು ಬಂದಿದೆ. ಮೊಟ್ಟ ಮೊದಲು ಇವರಲ್ಲಿ ಯಾರು ವರಿಷ್ಠನೋ ಅವನಿಗೆ ಉಡುಗೊರೆಯನ್ನು ತರಿಸು.”
02033026 ಯುಧಿಷ್ಠಿರ ಉವಾಚ|
02033026a ಕಸ್ಮೈ ಭವಾನ್ಮನ್ಯತೇಽರ್ಘಮೇಕಸ್ಮೈ ಕುರುನಂದನ|
02033026c ಉಪನೀಯಮಾನಂ ಯುಕ್ತಂ ಚ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಕುರುನಂದನ! ಪಿತಾಮಹ! ಯಾವ ಓರ್ವನಿಗೆ ಈ ಅರ್ಘ್ಯವನ್ನು ನೀಡಬೇಕೆಂದು ನಿನ್ನ ಅಭಿಪ್ರಾಯ? ಯಾವುದು ಯುಕ್ತವೆಂದು ನನಗೆ ಹೇಳು.””
02033027 ವೈಶಂಪಾಯನ ಉವಾಚ|
02033027a ತತೋ ಭೀಷ್ಮಃ ಶಾಂತನವೋ ಬುದ್ಧ್ಯಾ ನಿಶ್ಚಿತ್ಯ ಭಾರತ|
02033027c ವಾರ್ಷ್ಣೇಯಂ ಮನ್ಯತೇ ಕೃಷ್ಣಮರ್ಹಣೀಯತಮಂ ಭುವಿ||
ವೈಶಂಪಾಯನನು ಹೇಳಿದನು: “ಆಗ ಭೀಷ್ಮ ಶಾಂತನವನು ಮನದಲ್ಲಿಯೇ ನಿಶ್ಚಯಿಸಿ, “ಭಾರತ! ವಾರ್ಷ್ಣೇಯ ಕೃಷ್ಣನೇ ಈ ಗೌರವಕ್ಕೆ ಈ ಭುವಿಯಲ್ಲಿಯೇ ಅತ್ಯಂತ ಅರ್ಹನು ಎಂದು ನನ್ನ ಅನಿಸಿಕೆ.
02033028a ಏಷ ಹ್ಯೇಷಾಂ ಸಮೇತಾನಾಂ ತೇಜೋಬಲಪರಾಕ್ರಮೈಃ|
02033028c ಮಧ್ಯೇ ತಪನ್ನಿವಾಭಾತಿ ಜ್ಯೋತಿಷಾಮಿವ ಭಾಸ್ಕರಃ||
ಅವನೇ ಇಲ್ಲಿ ಸೇರಿರುವರಲ್ಲೆಲ್ಲಾ ತೇಜಸ್ಸು, ಬಲ, ಮತ್ತು ಪರಾಕ್ರಮಗಳಿಂದ ನಕ್ಷತ್ರಗಳಲ್ಲೆಲ್ಲಾ ಸೂರ್ಯನು ಹೇಗೋ ಹಾಗೆ ಪ್ರಜ್ವಲಿಸುತ್ತಿದ್ದಾನೆ.
02033029a ಅಸೂರ್ಯಮಿವ ಸೂರ್ಯೇಣ ನಿವಾತಮಿವ ವಾಯುನಾ|
02033029c ಭಾಸಿತಂ ಹ್ಲಾದಿತಂ ಚೈವ ಕೃಷ್ಣೇನೇದಂ ಸದೋ ಹಿ ನಃ||
ಕತ್ತಲಲ್ಲಿ ಸೂರ್ಯನಿಂದ ಮತ್ತು ಗಾಳಿಯಿಲ್ಲದಿರುವಾಗ ಗಾಳಿಯಿಂದ ಹೇಗೆ ಸಂತೋಷವು ದೊರೆಯುತ್ತದೆಯೋ ಹಾಗೆ ಕೃಷ್ಣನಿಂದ ಈ ಸಭಾಸದರೆಲ್ಲರೂ ಕಾಂತಿಯುಕ್ತರಾಗಿದ್ದಾರೆ ಮತ್ತು ಮುದಿತರಾಗಿದ್ದಾರೆ[2].”
02033030a ತಸ್ಮೈ ಭೀಷ್ಮಾಭ್ಯನುಜ್ಞಾತಃ ಸಹದೇವಃ ಪ್ರತಾಪವಾನ್|
02033030c ಉಪಜಹ್ರೇಽಥ ವಿಧಿವದ್ವಾರ್ಷ್ಣೇಯಾಯಾರ್ಘ್ಯಮುತ್ತಮಂ||
ಭೀಷ್ಮನ ಅನುಜ್ಞೆಯಂತೆ ಪ್ರತಾಪಿ ಸಹದೇವನು ವಿಧಿವತ್ತಾಗಿ ಆ ಉತ್ತಮ ಅರ್ಘ್ಯವನ್ನು ವಾರ್ಷ್ಣೆಯನಿಗೆ ಸಮರ್ಪಿಸಿದನು.
02033031a ಪ್ರತಿಜಗ್ರಾಹ ತತ್ ಕೃಷ್ಣಃ ಶಾಸ್ತ್ರದೃಷ್ಟೇನ ಕರ್ಮಣಾ|
02033031c ಶಿಶುಪಾಲಸ್ತು ತಾಂ ಪೂಜಾಂ ವಾಸುದೇವೇ ನ ಚಕ್ಷಮೇ||
ಕೃಷ್ಣನು ಅದನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಿದನು. ಆದರೆ ಶಿಶುಪಾಲನು ಮಾತ್ರ ವಾಸುದೇವನಿಗಿತ್ತ ಆ ಪೂಜೆಯನ್ನು ಸಹಿಸಲಿಲ್ಲ.
02033032a ಸ ಉಪಾಲಭ್ಯ ಭೀಷ್ಮಂ ಚ ಧರ್ಮರಾಜಂ ಚ ಸಂಸದಿ|
02033032c ಅಪಾಕ್ಷಿಪದ್ವಾಸುದೇವಂ ಚೇದಿರಾಜೋ ಮಹಾಬಲಃ||
ಮಹಾಬಲಿ ಚೇದಿರಾಜನು ಆ ಸಂಸದಿಯಲ್ಲಿ ಭೀಷ್ಮ, ಧರ್ಮರಾಜ ಮತ್ತು ವಾಸುದೇವರನ್ನು ಹೀಯಾಳಿಸಿದನು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘಾಭಿಹರಣಪರ್ವಣಿ ಶ್ರೀಕೃಷ್ಣಾರ್ಘ್ಯದಾನೇ ತ್ರಯಸ್ತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘಾಭಿಹರಣಪರ್ವದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯಪ್ರದಾನ ಎನ್ನುವ ಮೂವತ್ತ್ಮೂರನೆಯ ಅಧ್ಯಾಯವು.
[1]ಅಂಶಾವತರಣ ಪರ್ವದಲ್ಲಿ ಜನಮೇಜಯನು ಮಹಾಭಾರತ ಯುದ್ಧವು ನಡೆಯಲು ಕಾರಣವೇನು ಎಂದು ಕೇಳಿದಾಗ ವೈಶಂಪಾಯನನು ಇದು ಒಂದು ದೇವರಹಸ್ಯ ಎಂದು ಹೇಳಿದ್ದನು. ಧರ್ಮರಾಜನ ರಾಜಸೂಯ ಯಾಗದಲ್ಲಿ ಸೇರಿದ್ದ ಭೂಮಿಯ ಸರ್ವ ಕ್ಷತ್ರಿಯರೂ ಯುದ್ಧದಲ್ಲಿ ಪರಸ್ಪರರೊಂದಿಗೆ ಹೋರಾಡಿ ಸಾಯುತ್ತಾರೆ. ಭಗವಾನ್ ವಿಷ್ಣುವು ನಿರ್ದೇಶಿಸಿದ ಇದು ಒಂದು ನಾಟಕವೇ? ಈ ಎಲ್ಲವುಗಳ ಅರ್ಥವೇನು? ಈ ನಾಟಕದ ಉದ್ದೇಶವೇನು?
[2]ಶ್ರೀಕೃಷ್ಣನ ದೈವತ್ವದ ಕುರಿತು ಭೀಷ್ಮನಿಗೆ ಹೇಗೆ ತಿಳಿಯಿತು? ಮುಂದೆ ಅವನೇ ಹೇಳಿದಂತೆ ಅವನು ಋಷಿಮುನಿಗಳ ಸೇವೆ ಮಾಡುವಾಗ ಅವರಿಂದ ಶ್ರೀಕೃಷ್ಣನ ದೈವತ್ವದ ಕುರಿತು ತಿಳಿದುಕೊಂಡನು. ಭೀಷ್ಮನನ್ನು ಮಹಾ ಭಾಗವತನೆಂದು ಹೇಳುತ್ತಾರೆ.