ಸಭಾ ಪರ್ವ: ಜರಾಸಂಧವಧ ಪರ್ವ
೨೧
ಭೀಮಸೇನ-ಜರಾಸಂಧರ ಮಲ್ಲಯುದ್ಧ
ಜರಾಸಂಧನು ಯುದ್ಧಮಾಡಲು ಭೀಮನನ್ನು ಆರಿಸಿಕೊಳ್ಳುವುದು (೧-೨). ಭೀಮ-ಜರಾಸಂಧರ ಹದಿನಾಲ್ಕು ದಿನಗಳ ಯುದ್ಧ (೩-೧೯). ಕೃಷ್ಣನು ಭೀಮಸೇನನಿಗೆ ಸಲಹೆ ನೀಡಿ ಹುರಿದುಂಬಿಸುವುದು (೨೦-೨೩).
02021001 ವೈಶಂಪಾಯನ ಉವಾಚ|
02021001a ತತಸ್ತಂ ನಿಶ್ಚಿತಾತ್ಮಾನಂ ಯುದ್ಧಾಯ ಯದುನಂದನಃ|
02021001c ಉವಾಚ ವಾಗ್ಮೀ ರಾಜಾನಂ ಜರಾಸಂಧಮಧೋಕ್ಷಜಃ||
ವೈಶಂಪಾಯನನು ಹೇಳಿದನು: “ನಂತರ ಯದುನಂದನ ಅಧೋಕ್ಷಜನು ಯುದ್ಧಕ್ಕೆ ನಿರ್ಧರಿಸಿದ ವಾಗ್ಮಿ ರಾಜನನ್ನು ಕುರಿತು ಹೇಳಿದನು:
02021002a ತ್ರಯಾಣಾಂ ಕೇನ ತೇ ರಾಜನ್ಯೋದ್ಧುಂ ವಿತರತೇ ಮನಃ|
02021002c ಅಸ್ಮದನ್ಯತಮೇನೇಹ ಸಜ್ಜೀಭವತು ಕೋ ಯುಧಿ||
“ರಾಜನ್! ನಮ್ಮ ಈ ಮೂವರಲ್ಲಿ ಯಾರೊಂದಿಗೆ ಯುದ್ಧಮಾಡಲು ಬಯಸುತ್ತೀಯೆ? ನಮ್ಮಲ್ಲಿ ಯಾರು ನಿನ್ನೊಂದಿಗೆ ಯುದ್ಧಮಾಡಲು ಅಣಿಯಾಗಬೇಕು?”
02021003a ಏವಮುಕ್ತಃ ಸ ಕೃಷ್ಣೇನ ಯುದ್ಧಂ ವವ್ರೇ ಮಹಾದ್ಯುತಿಃ|
02021003c ಜರಾಸಂಧಸ್ತತೋ ರಾಜನ್ಭೀಮಸೇನೇನ ಮಾಗಧಃ||
ರಾಜನ್! ಕೃಷ್ಣನು ಈ ರೀತಿ ಹೇಳಲು ಮಾಗಧ ಮಹಾದ್ಯುತಿ ಜರಾಸಂಧನು ಯುದ್ಧಮಾಡಲು ಭೀಮಸೇನನನ್ನು ಆರಿಸಿಕೊಂಡನು.
02021004a ಧಾರಯನ್ನಗದಾನ್ಮುಖ್ಯಾನ್ನಿರ್ವೃತೀರ್ವೇದನಾನಿ ಚ|
02021004c ಉಪತಸ್ಥೇ ಜರಾಸಂಧಂ ಯುಯುತ್ಸುಂ ವೈ ಪುರೋಹಿತಃ||
ಜರಾಸಂಧನ ಬಳಿಯಲ್ಲಿ ಅವನ ಪುರೋಹಿತರು ವೇದನೆಯನ್ನು ಹೋಗಲಾಡಿಸುವ, ಪುನಃಶ್ಚೇತನಗೊಳಿಸುವ ಶ್ರೇಷ್ಠ ಗಿಡಮೂಲಿಕೆಗಳನ್ನು ಹಿಡಿದು ನಿಂತರು.
02021005a ಕೃತಸ್ವಸ್ತ್ಯಯನೋ ವಿದ್ವಾನ್ಬ್ರಾಹ್ಮಣೇನ ಯಶಸ್ವಿನಾ|
02021005c ಸಮನಹ್ಯಜ್ಜರಾಸಂಧಃ ಕ್ಷತ್ರಧರ್ಮಮನುವ್ರತಃ||
02021006a ಅವಮುಚ್ಯ ಕಿರೀಟಂ ಸ ಕೇಶಾನ್ಸಮನುಮೃಜ್ಯ ಚ|
02021006c ಉದತಿಷ್ಠಜ್ಜರಾಸಂಧೋ ವೇಲಾತಿಗ ಇವಾರ್ಣವಃ||
ವಿದ್ವಾನ್ ಬ್ರಾಹ್ಮಣರು ಯಶಸ್ಸಿಗಾಗಿ ಆಶಿರ್ವಚನಗಳನ್ನು ನೀಡಲು, ಸಮನರ್ಹ ಕ್ಷತ್ರಧರ್ಮ ಪಾಲಕ ಜರಾಸಂಧನು ತನ್ನ ಕಿರೀಟವನ್ನು ಕೆಳಗಿಟ್ಟು, ತಲೆಗೂದಲನ್ನು ಬಾಚಿ, ಅಲೆಗಳೊಂದಿಗೆ ಮೇಲೇರುವ ಸಮುದ್ರದಂತೆ ಮೇಲೆದ್ದನು.
02021007a ಉವಾಚ ಮತಿಮಾನ್ರಾಜಾ ಭೀಮಂ ಭೀಮಪರಾಕ್ರಮಂ|
02021007c ಭೀಮ ಯೋತ್ಸ್ಯೇ ತ್ವಯಾ ಸಾರ್ಧಂ ಶ್ರೇಯಸಾ ನಿರ್ಜಿತಂ ವರಂ||
ಆ ಮತಿವಂತ ರಾಜನು ಭೀಮಪರಾಕ್ರಮಿ ಭೀಮನಲ್ಲಿ ಹೇಳಿದನು: “ಭೀಮ! ನಾನು ನಿನ್ನೊಂದಿಗೆ ಯುದ್ಧ ಮಾಡುತ್ತೇನೆ. ಏಕೆಂದರೆ ತನಗಿಂಥ ಶ್ರೇಷ್ಠನಾದವನಿಂದ ಸೋಲುವುದು ಒಳ್ಳೆಯದು.”
02021008a ಏವಮುಕ್ತ್ವಾ ಜರಾಸಂಧೋ ಭೀಮಸೇನಮರಿಂದಮಃ|
02021008c ಪ್ರತ್ಯುದ್ಯಯೌ ಮಹಾತೇಜಾಃ ಶಕ್ರಂ ಬಲಿರಿವಾಸುರಃ||
ಹೀಗೆ ಹೇಳಿ ಅರಿಂದಮ ಮಹಾತೇಜಸ್ವಿ ಜರಾಸಂಧನು ಹಿಂದೆ ಅಸುರ ಬಲಿಯು ಶಕ್ರನನ್ನು ಹೇಗೋ ಹಾಗೆ ಭೀಮಸೇನನ ಮೇಲೆ ಎರಗಿದನು.
02021009a ತತಃ ಸಮ್ಮಂತ್ರ್ಯ ಕೃಷ್ಣೇನ ಕೃತಸ್ವಸ್ತ್ಯಯನೋ ಬಲೀ|
02021009c ಭೀಮಸೇನೋ ಜರಾಸಂಧಮಾಸಸಾದ ಯುಯುತ್ಸಯಾ||
ಆಗ ಬಲಶಾಲಿ ಭೀಮಸೇನನು ಕೃಷ್ಣನಿಂದ ಸಲಹೆ ಪಡೆದು ಅವನಿಂದ ಹರಸಲ್ಪಟ್ಟು ಜರಾಸಂಧನೊಡನೆ ಯುದ್ಧಮಾಡಲು ಮುಂದಾದನು.
02021010a ತತಸ್ತೌ ನರಶಾರ್ದೂಲೌ ಬಾಹುಶಸ್ತ್ರೌ ಸಮೀಯತುಃ|
02021010c ವೀರೌ ಪರಮಸಂಹೃಷ್ಟಾವನ್ಯೋನ್ಯಜಯಕಾಂಕ್ಷಿಣೌ||
ಆ ಇಬ್ಬರು ವೀರ ನರಶಾರ್ದೂಲರು ಬಾಹುಗಳನ್ನೇ ಶಸ್ತ್ರಗಳನ್ನಾಗಿಸಿ ಪರಮಸಂಹೃಷ್ಟರಾಗಿ ಅನ್ಯೋನ್ಯರನ್ನು ಸೋಲಿಸುವ ಉದ್ದೇಶದಿಂದ ಪರಸ್ಪರರ ಮೇಲೆರಗಿದರು.
02021011a ತಯೋರಥ ಭುಜಾಘಾತಾನ್ನಿಗ್ರಹಪ್ರಗ್ರಹಾತ್ತಥಾ|
02021011c ಆಸೀತ್ಸುಭೀಮಸಂಹ್ರಾದೋ ವಜ್ರಪರ್ವತಯೋರಿವ||
ಅವರ ಭುಜಗಳ ಹೊಡೆತದಿಂದ, ನಿಗ್ರಹ ಪ್ರಗ್ರಹಗಳ ಶಬ್ಧವು ಮಿಂಚು ಬಡಿದ ಪರ್ವತಗಳ ಗರ್ಜನೆಯಂತೆ ಕೇಳಿಬಂದವು.
02021012a ಉಭೌ ಪರಮಸಂಹೃಷ್ಟೌ ಬಲೇನಾತಿಬಲಾವುಭೌ|
02021012c ಅನ್ಯೋನ್ಯಸ್ಯಾಂತರಂ ಪ್ರೇಪ್ಸೂ ಪರಸ್ಪರಜಯೈಷಿಣೌ||
ಅವರಿಬ್ಬರೂ ಪರಮಸಂಹೃಷ್ಟರಾಗಿದ್ದರು. ಇಬ್ಬರೂ ಬಲದಲ್ಲಿ ಅತಿಬಲರಾಗಿದ್ದರು ಮತ್ತು ಪರಸ್ಪರರನ್ನು ಬೀಳಿಸುವ ಉದ್ದೇಶದಿಂದ ಅನ್ಯೋನ್ಯರಲ್ಲಿರುವ ನ್ಯೂನತೆಗಳನ್ನು ಹುಡುಕುತ್ತಿದ್ದರು.
02021013a ತದ್ಭೀಮಮುತ್ಸಾರ್ಯ ಜನಂ ಯುದ್ಧಮಾಸೀದುಪಹ್ವರೇ|
02021013c ಬಲಿನೋಃ ಸಂಯುಗೇ ರಾಜನ್ವೃತ್ರವಾಸವಯೋರಿವ||
ರಾಜನ್! ವೃತ್ರ ಮತ್ತು ವಾಸವರ ಯುದ್ಧದಂತಿದ್ದ ಈ ಬಲಿಗಳ ನಡುವಿನ ಯುದ್ಧವು ಬಹಳಷ್ಟು ಪ್ರೇಕ್ಷಕರನ್ನು ಹಿಂಜರಿಯುವಂತೆ ಮಾಡಿತು.
02021014a ಪ್ರಕರ್ಷಣಾಕರ್ಷಣಾಭ್ಯಾಮಭ್ಯಾಕರ್ಷವಿಕರ್ಷಣೈಃ|
02021014c ಆಕರ್ಷೇತಾಂ ತಥಾನ್ಯೋನ್ಯಂ ಜಾನುಭಿಶ್ಚಾಭಿಜಘ್ನತುಃ||
ಪ್ರಕರ್ಷಣ ಆಕರ್ಷಣಗಳಿಂದ ಮತ್ತು ಬಿಗಿ ಹಿಡಿದ ಮುಷ್ಟಿಗಳಿಂದ ಅನ್ಯೋನ್ಯರನ್ನು ಎಳೆದಾಡಿ ಕಾಲುಗಳನ್ನು ಮೇಲೆತ್ತಿ ಬಡಿದರು.
02021015a ತತಃ ಶಬ್ಧೇನ ಮಹತಾ ಭರ್ತ್ಸಯಂತೌ ಪರಸ್ಪರಂ|
02021015c ಪಾಷಾಣಸಂಘಾತನಿಭೈಃ ಪ್ರಹಾರೈರಭಿಜಘ್ನತುಃ||
ನಂತರ ದೊಡ್ಡ ಧ್ವನಿಯಿಂದ ಪರಸ್ಪರರನ್ನು ಹೀಯಾಳಿಸುತ್ತಾ ಕಲ್ಲಿನ ಮೇಲೆ ಕಲ್ಲಿನ ಪ್ರಹಾರವಾಗುತ್ತಿದೆಯೋ ಎನ್ನುವಂತೆ ಇಬ್ಬರೂ ಪರಸ್ಪರರನ್ನು ಗುದ್ದಿದರು.
02021016a ವ್ಯೂಢೋರಸ್ಕೌ ದೀರ್ಘಭುಜೌ ನಿಯುದ್ಧಕುಶಲಾವುಭೌ|
02021016c ಬಾಹುಭಿಃ ಸಮಸಜ್ಜೇತಾಮಾಯಸೈಃ ಪರಿಘೈರಿವ||
ವಿಶಾಲ ಎದೆಯ, ನೀಳಬಾಹುಗಳ, ಇಬ್ಬರು ಯುದ್ಧಕುಶಲರೂ ಕಬ್ಬಿಣದ ಪರಿಘಗಳಂತಿರುವ ಬಾಹುಗಳಿಂದ ಶರೀರದಮೇಲೆ ಹೊಡೆತಗಳ ಮಳೆಸುರಿಸಿದರು.
02021017a ಕಾರ್ತ್ತಿಕಸ್ಯ ತು ಮಾಸಸ್ಯ ಪ್ರವೃತ್ತಂ ಪ್ರಥಮೇಽಹನಿ|
02021017c ಅನಾರತಂ ದಿವಾರಾತ್ರಮವಿಶ್ರಾಂತಮವರ್ತತ||
ಕಾರ್ತೀಕ ಮಾಸದ ಪ್ರಥಮ ದಿನ ಪ್ರಾರಂಭವಾದ ಆ ಸ್ಪರ್ಧೆಯು ದಿನ-ರಾತ್ರಿಗಳೆನ್ನದೇ ಅನವರತವಾಗಿ ಅವಿಶ್ರಾಂತವಾಗಿ ನಡೆಯಿತು.
02021018a ತದ್ವೃತ್ತಂ ತು ತ್ರಯೋದಶ್ಯಾಂ ಸಮವೇತಂ ಮಹಾತ್ಮನೋಃ|
02021018c ಚತುರ್ದಶ್ಯಾಂ ನಿಶಾಯಾಂ ತು ನಿವೃತ್ತೋ ಮಾಗಧಃ ಕ್ಲಮಾತ್||
ಹದಿಮೂರನೆಯ ದಿನವೂ ಇಬ್ಬರು ಮಹಾತ್ಮರೂ ಯುದ್ಧದಲ್ಲಿ ತೊಡಗಿದ್ದರು. ಆದರೆ, ಹದಿನಾಲ್ಕನೆಯ ರಾತ್ರಿ, ಮಾಗಧನು ಆಯಾಸಗೊಂಡು ಹಿಂದೆ ಸರಿದನು.
02021019a ತಂ ರಾಜಾನಂ ತಥಾ ಕ್ಲಾಂತಂ ದೃಷ್ಟ್ವಾ ರಾಜಂ ಜನಾರ್ದನಃ|
02021019c ಉವಾಚ ಭೀಮಕರ್ಮಾಣಂ ಭೀಮಂ ಸಂಬೋಧಯನ್ನಿವ||
ರಾಜನ್! ರಾಜನು ಆಯಾಸಗೊಂಡಿದ್ದುದನ್ನು ನೋಡಿದ ಜನಾರ್ದನನು ಭೀಮಕರ್ಮಿಣಿ ಭೀಮನನ್ನು ಸಂಬೋಧಿಸುತ್ತಿದ್ದಾನೋ ಎನ್ನುವಂತೆ ಹೇಳಿದನು:
02021020a ಕ್ಲಾಂತಃ ಶತ್ರುರ್ನ ಕೌಂತೇಯ ಲಭ್ಯಃ ಪೀಡಯಿತುಂ ರಣೇ|
02021020c ಪೀಡ್ಯಮಾನೋ ಹಿ ಕಾರ್ತ್ಸ್ನ್ಯೆನ ಜಹ್ಯಾಜ್ಜೀವಿತಮಾತ್ಮನಃ||
“ಕೌಂತೇಯ! ಆಯಾಸಗೊಂಡ ಶತ್ರುವನ್ನು ರಣದಲ್ಲಿ ಅಪ್ಪಳಿಸಬಾರದು. ಹಾಗೆ ಅಪ್ಪಳಿಸಿದರೆ ಅವನು ಸಂಪೂರ್ಣವಾಗಿ ಜೀವ ತೊರೆಯಬಹುದು.
02021021a ತಸ್ಮಾತ್ತೇ ನೈವ ಕೌಂತೇಯ ಪೀಡನೀಯೋ ನರಾಧಿಪಃ|
02021021c ಸಮಮೇತೇನ ಯುಧ್ಯಸ್ವ ಬಾಹುಭ್ಯಾಂ ಭರತರ್ಷಭ||
ಕೌಂತೇಯ! ಆದುದರಿಂದ ನರಾಧಿಪನನ್ನು ಪೀಡಿಸಬೇಡ. ಭರತರ್ಷಭ! ಮೊದಲಿನಂತೆ ಒಂದೇ ಸಮನೆ ಬಾಹುಗಳಿಂದಲೇ ಯುದ್ಧಮಾಡು.”
02021022a ಏವಮುಕ್ತಃ ಸ ಕೃಷ್ಣೇನ ಪಾಂಡವಃ ಪರವೀರಹಾ|
02021022c ಜರಾಸಂಧಸ್ಯ ತದ್ರಂಧ್ರಂ ಜ್ಞಾತ್ವಾ ಚಕ್ರೇ ಮತಿಂ ವಧೇ||
ಕೃಷ್ಣನು ಈ ರೀತಿ ಹೇಳಲು ಪರವೀರಹ ಪಾಂಡವನು ಜರಾಸಂಧನ ರಂಧ್ರವನ್ನು ತಿಳಿದು ಅವನನ್ನು ವಧಿಸುವ ಮನಸ್ಸುಮಾಡಿದನು.
02021023a ತತಸ್ತಮಜಿತಂ ಜೇತುಂ ಜರಾಸಂಧಂ ವೃಕೋದರಃ|
02021023c ಸಂರಭ್ಯ ಬಲಿನಾಂ ಮುಖ್ಯೋ ಜಗ್ರಾಹ ಕುರುನಂದನಃ||
ಜಯಿಸಲಾಧ್ಯ ಜರಾಸಂಧನನ್ನು ಬಲಿಗಳ ಮುಖ್ಯ ವೃಕೋದರ ಕುರುನಂದನನು ಗಟ್ಟಿಯಾಗಿ ಹಿಡಿದುಕೊಂಡನು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಜರಾಸಂಧಕ್ಲಾಂತೌ ಏಕವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಜರಾಸಂಧನ ಸೋಲು ಎನ್ನುವ ಇಪ್ಪತ್ತೊಂದನೆಯ ಅಧ್ಯಾಯವು.