|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ: ಜರಾಸಂಧವಧ ಪರ್ವ
೧೮
ಕೃಷ್ಣ-ಪಾಂಡವರ ಮಾಗಧಯಾತ್ರೆ
ಜರಾಸಂಧನನ್ನು ಕೊಲ್ಲುವ ಉಪಾಯವನ್ನು ಮಾತನಾಡಿಕೊಂಡು ಕೃಷ್ಣನು ಯುಧಿಷ್ಠಿರನಲ್ಲಿ ಭೀಮಾರ್ಜುನರನ್ನು ಕೇಳಿ ಪಡೆದುದು (೧-೨೦). ಮೂವರೂ ಮಗಧಕ್ಕೆ ಪ್ರಯಾಣಿಸಿದುದು (೨೧-೩೦).
02018001 ವಾಸುದೇವ ಉವಾಚ|
02018001a ಪತಿತೌ ಹಂಸಡಿಭಕೌ ಕಂಸಾಮಾತ್ಯೌ ನಿಪಾತಿತೌ|
02018001c ಜರಾಸಂಧಸ್ಯ ನಿಧನೇ ಕಾಲೋಽಯಂ ಸಮುಪಾಗತಃ||
ವಾಸುದೇವನು ಹೇಳಿದನು: “ಹಂಸ-ಡಿಭಕರು[1] ಪತಿತರಾಗಿದ್ದಾರೆ; ಕಂಸ ಮತ್ತು ಅವನ ಅಮಾತ್ಯರು[2] ನಿಪತಿತರಾಗಿದ್ದಾರೆ. ಈಗ ಜರಾಸಂಧನ ನಿಧನದ ಕಾಲವು ಬಂದೊದಗಿದೆ.
02018002a ನ ಸ ಶಕ್ಯೋ ರಣೇ ಜೇತುಂ ಸರ್ವೈರಪಿ ಸುರಾಸುರೈಃ|
02018002c ಪ್ರಾಣಯುದ್ಧೇನ ಜೇತವ್ಯಃ ಸ ಇತ್ಯುಪಲಭಾಮಹೇ||
ಅವನನ್ನು ರಣದಲ್ಲಿ ಗೆಲ್ಲಲು ಸುರಾಸುರ ಸರ್ವರಿಂದಲೂ ಶಕ್ಯವಿಲ್ಲ. ಆದರೆ, ನಮಗೆ ತಿಳಿದಿರುವಂತೆ, ಪ್ರಾಣ-ಯುದ್ಧ[3]ದಲ್ಲಿ ಅವನನ್ನು ಗೆಲ್ಲಬಹುದು.
02018003a ಮಯಿ ನೀತಿರ್ಬಲಂ ಭೀಮೇ ರಕ್ಷಿತಾ ಚಾವಯೋರ್ಜುನಃ|
02018003c ಸಾಧಯಿಷ್ಯಾಮ ತಂ ರಾಜನ್ವಯಂ ತ್ರಯ ಇವಾಗ್ನಯಃ||
ನನ್ನಲ್ಲಿ ನೀತಿಯಿದೆ. ಭೀಮನಲ್ಲಿ ಬಲವಿದೆ. ಮತ್ತು ಅರ್ಜುನನು ನಮ್ಮೀರ್ವರನ್ನು ರಕ್ಷಿಸಬಲ್ಲನು. ರಾಜನ್! ಮೂರು ಅಗ್ನಿಗಳಂತೆ ನಾವು ಅವನನ್ನು ಸಾಧಿಸುತ್ತೇವೆ[4].
02018004a ತ್ರಿಭಿರಾಸಾದಿತೋಽಸ್ಮಾಭಿರ್ವಿಜನೇ ಸ ನರಾಧಿಪಃ|
02018004c ನ ಸಂದೇಹೋ ಯಥಾ ಯುದ್ಧಮೇಕೇನಾಭ್ಯುಪಯಾಸ್ಯತಿ||
ಏಕಾಂತದಲ್ಲಿ ಆ ನರಾಧಿಪನನ್ನು ನಾವು ಮೂವರೂ ಎದುರಿಸಿದಾಗ ನಮ್ಮಲ್ಲಿ ಒಬ್ಬನನ್ನು ಯುದ್ಧದಲ್ಲಿ ತೊಡಗಿಸುತ್ತಾನೆ ಎನ್ನುವುದರಲ್ಲಿ ಸಂದೇಹವಿಲ್ಲ.
02018005a ಅವಮಾನಾಚ್ಚ ಲೋಕಸ್ಯ ವ್ಯಾಯತತ್ವಾಚ್ಚ ಧರ್ಷಿತಃ|
02018005c ಭೀಮಸೇನೇನ ಯುದ್ಧಾಯ ಧ್ರುವಮಭ್ಯುಪಯಾಸ್ಯತಿ||
ಲೋಕದ ಅವಮಾನ ಮತ್ತು ತನ್ನ ಮೇಲಿರುವ ಅಭಿಮಾನಗಳು[5] ನಿಶ್ಚಿತವಾಗಿಯೂ ಅವನನ್ನು ಭೀಮಸೇನನೊಡನೆ ಯುದ್ಧಮಾಡಲು ಪ್ರೇರೇಪಿಸುತ್ತವೆ.
02018006a ಅಲಂ ತಸ್ಯ ಮಹಾಬಾಹುರ್ಭೀಮಸೇನೋ ಮಹಾಬಲಃ|
02018006c ಲೋಕಸ್ಯ ಸಮುದೀರ್ಣಸ್ಯ ನಿಧನಾಯಾಂತಕೋ ಯಥಾ||
ಲೋಕ ನಿಧನಕ್ಕೆ ಹೇಗೆ ಅಂತಕನು ಸಾಕೋ ಹಾಗೆ ಅವನ ನಿಧನಕ್ಕೆ ಮಹಾಬಾಹು ಮಹಾಬಲ ಭೀಮಸೇನನು ಸಾಕು[6].
02018007a ಯದಿ ತೇ ಹೃದಯಂ ವೇತ್ತಿ ಯದಿ ತೇ ಪ್ರತ್ಯಯೋ ಮಯಿ|
02018007c ಭೀಮಸೇನಾರ್ಜುನೌ ಶೀಘ್ರಂ ನ್ಯಾಸಭೂತೌ ಪ್ರಯಚ್ಛ ಮೇ||
ನಿನ್ನ ಹೃದಯವು ತಿಳಿದಿದ್ದರೆ[7] ಮತ್ತು ನನ್ನಮೇಲೆ ನಿನಗೆ ವಿಶ್ವಾಸವಿದ್ದರೆ ಶೀಘ್ರದಲ್ಲಿಯೇ ಭೀಮಾರ್ಜುನರನ್ನು ನನಗೊಪ್ಪಿಸು.””
02018008 ವೈಶಂಪಾಯನ ಉವಾಚ|
02018008a ಏವಮುಕ್ತೋ ಭಗವತಾ ಪ್ರತ್ಯುವಾಚ ಯುಧಿಷ್ಠಿರಃ|
02018008c ಭೀಮಪಾರ್ಥೌ ಸಮಾಲೋಕ್ಯ ಸಂಪ್ರಹೃಷ್ಟಮುಖೌ ಸ್ಥಿತೌ||
ವೈಶಂಪಾಯನನು ಹೇಳಿದನು: “ಭಗವಂತನು ಹೀಗೆ ಹೇಳಲು ಯುಧಿಷ್ಠಿರನು ಸಂಪ್ರಹೃಷ್ಟಮುಖರಾಗಿ ನಿಂತಿದ್ದ ಭೀಮ-ಪಾರ್ಥರೆಡೆಗೆ ನೋಡುತ್ತಾ ಉತ್ತರಿಸಿದನು:
02018009a ಅಚ್ಯುತಾಚ್ಯುತ ಮಾ ಮೈವಂ ವ್ಯಾಹರಾಮಿತ್ರಕರ್ಷಣ|
02018009c ಪಾಂಡವಾನಾಂ ಭವಾನ್ನಾಥೋ ಭವಂತಂ ಚಾಶ್ರಿತಾ ವಯಂ||
“ಅಚ್ಯುತ[8]! ಅಚ್ಯುತ! ಅಮಿತ್ರಕರ್ಷಣ! ನನ್ನೊಂದಿಗೆ ಈ ರೀತಿ ವ್ಯವಹರಿಸಬೇಡ! ಪಾಂಡವರ ನಾಥನು ನೀನು. ನಾವೆಲ್ಲರೂ ನಿನ್ನ ಆಶ್ರಯದಲ್ಲಿದ್ದೇವೆ.
02018010a ಯಥಾ ವದಸಿ ಗೋವಿಂದ ಸರ್ವಂ ತದುಪಪದ್ಯತೇ|
02018010c ನ ಹಿ ತ್ವಮಗ್ರತಸ್ತೇಷಾಂ ಯೇಷಾಂ ಲಕ್ಷ್ಮೀಃ ಪರಾಙ್ಮುಖೀ||
ಗೋವಿಂದ! ನೀನು ಹೇಳಿದುದೆಲ್ಲವೂ ಸರಿಯೇ. ಲಕ್ಷ್ಮಿಯು ಪರಾಂಙ್ಮುಖಿಯಾಗಿರುವವರ ಎದಿರು ನೀನು ಬರುವುದೇ ಇಲ್ಲ.
02018011a ನಿಹತಶ್ಚ ಜರಾಸಂಧೋ ಮೋಕ್ಷಿತಾಶ್ಚ ಮಹೀಕ್ಷಿತಃ|
02018011c ರಾಜಸೂಯಶ್ಚ ಮೇ ಲಬ್ಧೋ ನಿದೇಶೇ ತವ ತಿಷ್ಠತಃ||
ನಿನ್ನ ನಿರ್ದೇಶನದಂತೆ ನಡೆದರೆ ಜರಾಸಂಧನು ನಿಹತನಾಗುತ್ತಾನೆ, ಮಹೀಕ್ಷಿತರು ಬಿಡುಗಡೆ ಹೊಂದುತ್ತಾರೆ ಮತ್ತು ರಾಜಸೂಯವು ನನಗೆ ಲಬ್ಧವಾಗುತ್ತದೆ.
02018012a ಕ್ಷಿಪ್ರಕಾರಿನ್ಯಥಾ ತ್ವೇತತ್ಕಾರ್ಯಂ ಸಮುಪಪದ್ಯತೇ|
02018012c ಮಮ ಕಾರ್ಯಂ ಜಗತ್ಕಾರ್ಯಂ ತಥಾ ಕುರು ನರೋತ್ತಮ||
ನರೋತ್ತಮ! ಕ್ಷಿಪ್ರಕಾರಿನ್! ನನ್ನ ಜಗತ್ಕಾರ್ಯ ಕಾರ್ಯವು ಸರಿಯಾಗಿ ನೆರವೇರುವಂತೆ ಮಾಡು[9].
02018013a ತ್ರಿಭಿರ್ಭವದ್ಭಿರ್ಹಿ ವಿನಾ ನಾಹಂ ಜೀವಿತುಮುತ್ಸಹೇ|
02018013c ಧರ್ಮಕಾಮಾರ್ಥರಹಿತೋ ರೋಗಾರ್ತ ಇವ ದುರ್ಗತಃ||
ನೀವು ಮೂವರ ವಿನಃ ನಾನು ಜೀವಿಸಲು ಶಕ್ಯನಿಲ್ಲ. ಧರ್ಮಕಾಮಾರ್ಥರಹಿತ ರೋಗಿಯಂತೆ ಬಳಲುತ್ತೇನೆ[10].
02018014a ನ ಶೌರಿಣಾ ವಿನಾ ಪಾರ್ಥೋ ನ ಶೌರಿಃ ಪಾಂಡವಂ ವಿನಾ|
02018014c ನಾಜೇಯೋಽಸ್ತ್ಯನಯೋರ್ಲೋಕೇ ಕೃಷ್ಣಯೋರಿತಿ ಮೇ ಮತಿಃ||
ಶೌರಿಯ ವಿನಃ ಪಾರ್ಥನಿಲ್ಲ, ಪಾಂಡವನ ವಿನಃ ಶೌರಿಯಿಲ್ಲ. ಈ ಈರ್ವರು ಕೃಷ್ಣರಿಗೆ ಲೋಕದಲ್ಲಿ ಅಜೇಯರು ಯಾರೂ ಇಲ್ಲ ಎನ್ನುವುದು ನನ್ನ ಅಭಿಪ್ರಾಯ.
02018015a ಅಯಂ ಚ ಬಲಿನಾಂ ಶ್ರೇಷ್ಠಃ ಶ್ರೀಮಾನಪಿ ವೃಕೋದರಃ|
02018015c ಯುವಾಭ್ಯಾಂ ಸಹಿತೋ ವೀರಃ ಕಿಂ ನ ಕುರ್ಯಾನ್ಮಹಾಯಶಾಃ||
ಈ ಶ್ರೀಮಾನ್ ವೃಕೋದರನೂ ಕೂಡ ಬಲಿಗಳಲ್ಲಿ ಶ್ರೇಷ್ಠನು. ನಿಮ್ಮಿಬ್ಬರ ಸಹಾಯ ದೊರೆತರೆ ಈ ಮಹಾಯಶಸ್ವಿ ವೀರನು ಏನನ್ನು ಸಾಧಿಸಲಾರ?
02018016a ಸುಪ್ರಣೀತೋ ಬಲೌಘೋ ಹಿ ಕುರುತೇ ಕಾರ್ಯಮುತ್ತಮಂ|
02018016c ಅಂಧಂ ಜಡಂ ಬಲಂ ಪ್ರಾಹುಃ ಪ್ರಣೇತವ್ಯಂ ವಿಚಕ್ಷಣೈಃ||
ಸುಪ್ರಣೀತನ ನಾಯಕತ್ವವನ್ನು ಹೊಂದಿರುವ ಬಲಪ್ರವಾಹವು ಉತ್ತಮ ಕಾರ್ಯವನ್ನು ಸಾಧಿಸಬಲ್ಲದು. ಪ್ರಣೀತನ ನಾಯಕತ್ವದಲ್ಲಿ ಬಲವಿರಬೇಕು. ಇಲ್ಲದಿದ್ದರೆ ಅದು ಕುರುಡು ಮತ್ತು ಜಡವಾಗಿರುತ್ತದೆ ಎಂದು ಹೇಳುತ್ತಾರೆ.
02018017a ಯತೋ ಹಿ ನಿಮ್ನಂ ಭವತಿ ನಯಂತೀಹ ತತೋ ಜಲಂ|
02018017c ಯತಶ್ಚಿದ್ರಂ ತತಶ್ಚಾಪಿ ನಯಂತೇ ಧೀಧನಾ ಬಲಂ||
ತಗ್ಗಿರುವಲ್ಲಿಗೇ ನೀರು ಹೇಗೆ ಹರಿಯುತ್ತದೆಯೋ ಹಾಗೆ ಅಮಿತಬುದ್ಧಿಯುಳ್ಳವರು[11] ಛಿದ್ರವಿರುವಲ್ಲಿಗೆ ಬಲವನ್ನು ಒಯ್ಯುತ್ತಾರೆ.
02018018a ತಸ್ಮಾನ್ನಯವಿಧಾನಜ್ಞಂ ಪುರುಷಂ ಲೋಕವಿಶ್ರುತಂ|
02018018c ವಯಮಾಶ್ರಿತ್ಯ ಗೋವಿಂದಂ ಯತಾಮಃ ಕಾರ್ಯಸಿದ್ಧಯೇ||
ಆದುದರಿಂದ ವಿಧಾನಜ್ಞ[12] ಲೋಕವಿಶ್ರುತ ಪುರುಷ ಗೋವಿಂದನ ಆಶ್ರಯದಲ್ಲಿರುವ ನಾವು ಕಾರ್ಯಸಿದ್ಧಿಯನ್ನು ಹೊಂದುತ್ತೇವೆ.
02018019a ಏವಂ ಪ್ರಜ್ಞಾನಯಬಲಂ ಕ್ರಿಯೋಪಾಯಸಮನ್ವಿತಂ|
02018019c ಪುರಸ್ಕುರ್ವೀತ ಕಾರ್ಯೇಷು ಕೃಷ್ಣ ಕಾರ್ಯಾರ್ಥಸಿದ್ಧಯೇ||
ಹೀಗೆ ಕಾರ್ಯಾರ್ಥಸಿದ್ಧಿಗಾಗಿ ಎಲ್ಲ ಕಾರ್ಯಗಳಲ್ಲಿ ಪ್ರಜ್ಞೆ, ನೀತಿ, ಬಲ ಮತ್ತು ಕ್ರಿಯೋಪಾಯಸಮನ್ವಿತ ಕೃಷ್ಣನನ್ನೇ ಮುಂದಿಡಬೇಕು.
02018020a ಏವಮೇವ ಯದುಶ್ರೇಷ್ಠಂ ಪಾರ್ಥಃ ಕಾರ್ಯಾರ್ಥಸಿದ್ಧಯೇ|
02018020c ಅರ್ಜುನಃ ಕೃಷ್ಣಮನ್ವೇತು ಭೀಮೋಽನ್ವೇತು ಧನಂಜಯಂ|
02018020e ನಯೋ ಜಯೋ ಬಲಂ ಚೈವ ವಿಕ್ರಮೇ ಸಿದ್ಧಿಮೇಷ್ಯತಿ||
ಈ ರೀತಿ ಕಾರ್ಯಾರ್ಥಸಿದ್ಧಿಗಾಗಿ ಪಾರ್ಥ ಅರ್ಜುನನು ಯದುಶ್ರೇಷ್ಠ ಕೃಷ್ಣನನ್ನು ಅನುಸರಿಸಲಿ[13]. ಭೀಮನು ದನಂಜಯನನ್ನು ಅನುಸರಿಸಲಿ. ನೀತಿ, ಜಯ ಮತ್ತು ಬಲವು ವಿಕ್ರಮವನ್ನು ಸಿದ್ಧಿಗೊಳಿಸುತ್ತದೆ.”
02018021a ಏವಮುಕ್ತಾಸ್ತತಃ ಸರ್ವೇ ಭ್ರಾತರೋ ವಿಪುಲೌಜಸಃ|
02018021c ವಾರ್ಷ್ಣೇಯಃ ಪಾಂಡವೇಯೌ ಚ ಪ್ರತಸ್ಥುರ್ಮಾಗಧಂ ಪ್ರತಿ||
ಅವನು ಈ ರೀತಿ ಹೇಳಲು ವಿಪುಲೌಜಸ ಸರ್ವ ಭ್ರಾತರರೂ - ವಾರ್ಷ್ಣೇಯ ಮತ್ತು ಪಾಂಡವರೀರ್ವರು - ಮಗಧದ ಕಡೆ ಹೊರಟರು.
02018022a ವರ್ಚಸ್ವಿನಾಂ ಬ್ರಾಹ್ಮಣಾನಾಂ ಸ್ನಾತಕಾನಾಂ ಪರಿಚ್ಛದಾನ್|
02018022c ಆಚ್ಛಾದ್ಯ ಸುಹೃದಾಂ ವಾಕ್ಯೈರ್ಮನೋಜ್ಞೈರಭಿನಂದಿತಾಃ||
ವರ್ಚಸ್ವಿ ಸ್ನಾತಕ ಬ್ರಾಹ್ಮಣರ ಉಡುಪನ್ನು ಹೊದ್ದು ಸುಹೃದಯರ ಮನೋಜ್ಞ ಮಾತುಗಳಿಂದ ಅಭಿನಂದಿತರಾಗಿ ಹೊರಟರು.
02018023a ಅಮರ್ಷಾದಭಿತಪ್ತಾನಾಂ ಜ್ಞಾತ್ಯರ್ಥಂ ಮುಖ್ಯವಾಸಸಾಂ|
02018023c ರವಿಸೋಮಾಗ್ನಿವಪುಷಾಂ ಭೀಮಮಾಸೀತ್ತದಾ ವಪುಃ||
ಸುಂದರ ವಸ್ತ್ರಗಳನ್ನು ಧರಿಸಿದ್ದ ಮತ್ತು ಅಭಿತಪ್ತ ಜ್ಞಾತಿಗಳಿಗೋಸ್ಕರ ಸಿಟ್ಟಿಗೆದ್ದಿದ್ದ ಆ ರವಿಸೋಮಾಗ್ನಿವಪುಷರ ದೇಹಗಳು ಭಯಂಕರವಾಗಿ ತೋರುತ್ತಿದ್ದವು[14].
02018024a ಹತಂ ಮೇನೇ ಜರಾಸಂಧಂ ದೃಷ್ಟ್ವಾ ಭೀಮಪುರೋಗಮೌ|
02018024c ಏಕಕಾರ್ಯಸಮುದ್ಯುಕ್ತೌ ಕೃಷ್ಣೌ ಯುದ್ಧೇಽಪರಾಜಿತೌ||
ಭೀಮನನ್ನು ಮುಂದಿಟ್ಟುಕೊಂಡು ಒಂದೇ ಕಾರ್ಯದಲ್ಲಿ ತೊಡಗಿರುವ ಯುದ್ಧದಲ್ಲಿ ಅಪರಾಜಿತ ಕೃಷ್ಣರೀರ್ವರನ್ನು ನೋಡಿದ ಅವನು ಜರಾಸಂಧನು ಹತನಾದನೆಂದೇ ಭಾವಿಸಿದನು.
02018025a ಈಶೌ ಹಿ ತೌ ಮಹಾತ್ಮಾನೌ ಸರ್ವಕಾರ್ಯಪ್ರವರ್ತನೇ|
02018025c ಧರ್ಮಾರ್ಥಕಾಮಕಾರ್ಯಾಣಾಂ ಕಾರ್ಯಾಣಾಮಿವ ನಿಗ್ರಹೇ||
ಯಾಕೆಂದರೆ ಅವರೀರ್ವರು ಮಹಾತ್ಮರೂ ಸರ್ವಕಾರ್ಯಗಳನ್ನು ಪ್ರಾರಂಭಿಸುವುದರಲ್ಲಿ ಮತ್ತು ಧರ್ಮಾರ್ಥಕಾಮಕಾರ್ಯಗಳ ನಿಗ್ರಹದಲ್ಲಿ ಈಶರು[15].
02018026a ಕುರುಭ್ಯಃ ಪ್ರಸ್ಥಿತಾಸ್ತೇ ತು ಮಧ್ಯೇನ ಕುರುಜಾಂಗಲಂ|
02018026c ರಮ್ಯಂ ಪದ್ಮಸರೋ ಗತ್ವಾ ಕಾಲಕೂಟಮತೀತ್ಯ ಚ||
02018027a ಗಂಡಕೀಯಾಂ ತಥಾ ಶೋಣಂ ಸದಾನೀರಾಂ ತಥೈವ ಚ|
02018027c ಏಕಪರ್ವತಕೇ ನದ್ಯಃ ಕ್ರಮೇಣೈತ್ಯ ವ್ರಜಂತಿ ತೇ||
ಕುರುದೇಶದಿಂದ ಹೊರಟು ಕುರುಜಂಗಲದ ಮಧ್ಯದಿಂದ ಹಾಯ್ದು ರಮ್ಯ ಪದ್ಮಸರೋವರಕ್ಕೆ ಹೋಗಿ ಕಾಲಕೂಟವನ್ನು ದಾಟಿ, ಒಂದೇ ಪರ್ವತದಿಂದ ಉದ್ಭವಿಸುವ ಗಂಡಕೀ, ಶೋಣ ಮತ್ತು ಸದಾನೀರ ನದಿಗಳನ್ನು ಒಂದೊಂದಾಗಿ ದಾಟಿ ಮುಂದುವರೆದರು.
02018028a ಸಂತೀರ್ಯ ಸರಯೂಮ್ರಮ್ಯಾಂ ದೃಷ್ಟ್ವಾ ಪೂರ್ವಾಂಶ್ಚ ಕೋಸಲಾನ್|
02018028c ಅತೀತ್ಯ ಜಗ್ಮುರ್ಮಿಥಿಲಾಂ ಮಾಲಾಂ ಚರ್ಮಣ್ವತೀಂ ನದೀಂ||
ರಮ್ಯ ಸರಯೂವನ್ನು ದಾಟಿ ಪೂರ್ವದಲ್ಲಿ ಕೋಸಲವನ್ನು ನೋಡುತ್ತಾ ಮಿಥಿಲೆಗೆ ಹೋಗಿ ಮಾಲಾ ಮತ್ತು ಚರ್ಮಣ್ವತೀ ನದಿಗಳನ್ನು ದಾಟಿದರು.
02018029a ಉತ್ತೀರ್ಯ ಗಂಗಾಂ ಶೋಣಂ ಚ ಸರ್ವೇ ತೇ ಪ್ರಾಙ್ಮುಖಾಸ್ತ್ರಯಃ|
02018029c ಕುರವೋರಶ್ಚದಂ ಜಗ್ಮುರ್ಮಾಗಧಂ ಕ್ಷೇತ್ರಮಚ್ಯುತಾಃ||
ಆ ಮೂವರು ಅಚ್ಯುತರೂ ಪೂರ್ವಮುಖವಾಗಿ ಹೊರಟು ಗಂಗಾ ಮತ್ತು ಶೋಣ ನದಿಗಳನ್ನು ದಾಟಿ ಕುರವ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟ ಮಾಗಧ ಕ್ಷೇತ್ರವನ್ನು ತಲುಪಿದರು[16].
02018030a ತೇ ಶಶ್ವದ್ಗೋಧನಾಕೀರ್ಣಮಂಬುಮಂತಂ ಶುಭದ್ರುಮಂ|
02018030c ಗೋರಥಂ ಗಿರಿಮಾಸಾದ್ಯ ದದೃಶುರ್ಮಾಗಧಂ ಪುರಂ||
ಗೋವುಗಳ ಗುಂಪಿನಿಂದ ಕೂಡಿದ, ಒಳ್ಳೆಯ ನೀರು ಮತ್ತು ಸುಂದರ ವೃಕ್ಷಗಳಿಂದ ಕೂಡಿದ ಗೋರಥ ಗಿರಿಯನ್ನು ತಲುಪಿ ಅಲ್ಲಿಂದ ಅವರು ಮಾಗಧ ಪುರವನ್ನು ಕಂಡರು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಜರಾಸಂಧವಧಪರ್ವಣಿ ಕೃಷ್ಣಪಾಂಡವಮಾಗಧಯಾತ್ರಾಯಾಂ ಅಷ್ಟಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಜರಾಸಂಧವಧಪರ್ವದಲ್ಲಿ ಕೃಷ್ಣಪಾಂಡವರ ಮಾಗಧಯಾತ್ರೆ ಎನ್ನುವ ಹದಿನೆಂಟನೆಯ ಅಧ್ಯಾಯವು.
[1]ಹಂಸ ಮತ್ತು ಡಿಭಕರು ಜರಾಸಂಧನ ಸಹಾಯಕರು ಮತ್ತು ಅವರು ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದರು. ಇವರ ನಿಜವಾದ ಹೆಸರು ಕೌಶಿಕ ಮತ್ತು ಚಿತ್ರಸೇನ.
[2]ಗೋರಖಪುರದ ಸಂಪುಟದಲ್ಲಿ ಪತಿತೌ ಹಂಸಡಿಂಭಕೌ ಕಂಸಶ್ಚ ಸಗಣೋ ಹತಃ ಎಂದಿದೆ.
[3]ಗೋರಖಪುರ ಪರಿಪಾಠದಲ್ಲಿ “ಪ್ರಾಣಯುದ್ಧ” ದ ಬದಲಾಗಿ “ಬಾಹುಯುದ್ಧ” ಎಂದಿದೆ. ರಣಯುದ್ಧವೆಂದರೆ ಶಸ್ತ್ರಾಸ್ತ್ರಗಳಿಂದ ಹೋರಾಟ. ಬಾಹುಯುದ್ಧವೆಂದರೆ ಆಯುಧಗಳನ್ನೇನನ್ನೂ ಬಳಸದೇ, ಬರಿಗೈಯಲ್ಲಿ, ಮುಷ್ಠಿಯುದ್ಧ ಮಾಡುವುದು ಎಂದರ್ಥ.
[4]ಗೋರಖಪುರದ ಸಂಪುಟದಲ್ಲಿ ಮಾಗಧಂ ಸಾಧಯಿಷ್ಯಾಮ ಇಷ್ಟಿಂ ತ್ರಯ ಇವಾಗ್ನಯಃ ಎಂದಿದೆ. ಅಂದರೆ “ಮೂರು ಅಗ್ನಿಗಳು ಯಜ್ಞವನ್ನು ಹೇಗೆ ಸಾಧಿಸುತ್ತವೆಯೋ ಹಾಗೆ ನಾವು ಮೂವರು ಮಾಗಧನನ್ನು (ಮಗಧ ರಾಜ ಜರಾಸಂಧನನ್ನು) ಸಾಧಿಸುತ್ತೇವೆ” ಎಂದರ್ಥ.
[5]ಗೋರಖಪುರದ ಸಂಪುಟದಲ್ಲಿ ಅವಮಾನಾಚ್ಚ ಲೋಭಾಚ್ಚ ಬಾಹುವೀರ್ಯಾಚ್ಚ ದರ್ಪಿತಃ ಎಂದಿದೆ. ಅಂದರೆ, ಅಪಮಾನದ ಭಯದಿಂದ, ಭೀಮಸೇನನಂಥಹ ಮಹಾ ಯೋದ್ಧನೊಡನೆ ಹೋರಾಡುವ ಆಸೆಯಿಂದ, ಮತ್ತು ತನ್ನ ಬಾಹುಬಲದಿಂದ ದರ್ಪಿತನಾಗಿರುವುದರಿಂದ ಅವನು ಭೀಮಸೇನನೊಂದಿಗೆ ಹೋರಾಡಲು ನಿಶ್ಚಯಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
[6]ಇಡೀ ಲೋಕವನ್ನು ಅಂತ್ಯಗೊಳಿಸಲು ಅಂತಕನೊಬ್ಬನೇ ಇರುವ ಹಾಗೆ ಜರಾಸಂದನನ್ನು ಅಂತ್ಯಗೊಳಿಸಲು ಭೀಮಸೇನನೊಬ್ಬನೇ ಸಾಕು.
[7]ಇಡೀ ಲೋಕವನ್ನು ಅಂತ್ಯಗೊಳಿಸಲು ಅಂತಕನೊಬ್ಬನೇ ಇರುವ ಹಾಗೆ ಜರಾಸಂದನನ್ನು ಅಂತ್ಯಗೊಳಿಸಲು ಭೀಮಸೇನನೊಬ್ಬನೇ ಸಾಕು.
[8]ತನ್ನ ಮರ್ಯಾದೆಯಿಂದ ಚ್ಯುತನಾಗದವನು ಅಚ್ಯುತ.
[9]ಗೋರಖಪುರ ಸಂಪುಟದಲ್ಲಿ ಅಪ್ರಮತ್ತೋ ಜಗನ್ನಾಥ ತಥಾ ಕುರು ನರೋತ್ತಮ ಎಂದಿದೆ.
[10]ಗೋರಖಪುರ ಸಂಪುಟದಲ್ಲಿ ದುರ್ಗತಃ ಎನ್ನುವುದರ ಬದಲು ದುಃಖಿತಃ ಎಂದಿದೆ.
[11]“ಧೀಧನಾ” ಎಂದರೆ ಬುದ್ಧಿಯನ್ನೇ ಸಂಪತ್ತನ್ನಾಗಿ ಹೊಂದಿದವರು ಎಂದೂ ಅರ್ಥವಾಗುತ್ತದೆ.
[12]ಏನು ಮಾಡಬೇಕೆಂದು ತಿಳಿದಿರುವವನು
[13]ಗೋರಖಪುರದ ಸಂಪುಟದಲ್ಲಿ ಏವಮೇವ ಯದುಶ್ರೇಷ್ಠ ಯಾವತ್ಕಾರ್ಯಾರ್ಥಸಿದ್ಧಯೇ ಎಂದಿದೆ.
[14]ಗೋರಖಪುರದ ಸಂಪುಟದಲ್ಲಿ ಅಮರ್ಷದಭಿತಪ್ತಾನಾಂ ಜ್ಞಾತ್ಯರ್ಥಂ ಮುಖ್ಯತೇಜಸಾಂ| ರವಿಸೋಮಾಗಿವಪುಷಾಂ ದೀಪ್ತಮಾಸೀತ್ ತದಾ ವಪುಃ|| ಎಂದಿದೆ. ಅಂದರೆ: ಜರಾಸಂಧನ ಮೇಲಿನ ಸಿಟ್ಟಿನಿಂದ ಪ್ರಜ್ವಲಿಸುತ್ತಿದ್ದ ಮತ್ತು ಜ್ಜಾತಿ ಕ್ಷತ್ರಿಯರನ್ನು ಬಿಡುಡಡೆಮಾಡುವ ಉದ್ದೇಶದಿಂದ ಮುಖದಲ್ಲಿ ತೇಜಸ್ಸನ್ನು ಪ್ರಕಟಿಸುತ್ತಿದ್ದ, ರವಿ, ಸೋಮ ಮತ್ತು ಅಗ್ನಿ ಸಮಾನ ತೇಜಸ್ವಿ ಶರೀರವನ್ನು ಹೊಂದಿದ್ದ ಆ ಮೂವರ ಸ್ವರೂಪಗಳು ಅತ್ಯಂತ ಉದ್ಭಾಸಿತವಾಗಿ ತೋರುತ್ತಿದ್ದವು.
[15]ಗೋರಖಪುರದ ಸಂಪುಟದಲ್ಲಿ ಈಶೌ ಹಿ ತೌ ಮಹಾತ್ಮಾನೌ ಸರ್ವಕಾರ್ಯಪ್ರವರ್ತಿನೌ| ಧರ್ಮಕಾಮಾರ್ಥಲೋಕಾನಾಂ ಕಾರ್ಯಾಣಾಂ ಚ ಪ್ರವರ್ತಕೌ|| ಎಂದಿದೆ. ಇದರರ್ಥ: ಯಾಕೆಂದರೆ ಇವರೀರ್ವರು ಮಹಾತ್ರ್ಮರೂ ಸರ್ವಕಾರ್ಯಪ್ರವರ್ತಿಗಳಾಗಿದ್ದು ಲೋಕಗಳ ಧರ್ಮ, ಕಾಮ, ಮತ್ತು ಅರ್ಥಕ್ಕೆ ಸಂಬಂಧಿಸಿದ ಸರ್ವ ಕಾರ್ಯಗಳ ಪ್ರವರ್ತಕರು.
[16]ಗೋರಖಪುರದ ಸಂಪುಟದಲ್ಲಿ ಕುರವೋರಶ್ಚದಂ ಎನ್ನುವುದರ ಬದಲಿಗೆ ಕುಶಚೀರಚ್ಛದಾ ಎಂದಿದೆ. ಇದರ ಅರ್ಥ: ಕುಶ ಮತ್ತು ಚೀರಗಳನ್ನು ಧರಿಸಿದ (ಆ ಮೂವರೂ).