ಸಭಾ ಪರ್ವ: ಮಂತ್ರ ಪರ್ವ
೧೭
ಜರಾಸಂಧನ ಜನ್ಮಕಥೆಯು ಮುಂದುವರೆದುದು (೧-೨೭).
02017001 ರಾಕ್ಷಸ್ಯುವಾಚ|
02017001a ಜರಾ ನಾಮಾಸ್ಮಿ ಭದ್ರಂ ತೇ ರಾಕ್ಷಸೀ ಕಾಮರೂಪಿಣೀ|
02017001c ತವ ವೇಶ್ಮನಿ ರಾಜೇಂದ್ರ ಪೂಜಿತಾ ನ್ಯವಸಂ ಸುಖಂ||
ರಾಕ್ಷಸಿಯು ಹೇಳಿದಳು: “ರಾಜೇಂದ್ರ! ನಿನಗೆ ಮಂಗಳವಾಗಲಿ! ನಾನೋರ್ವಳು ಇಚ್ಛಿಸಿದ ದೇಹವನ್ನು ಧರಿಸಬಲ್ಲ ಜರಾ ಎಂಬ ಹೆಸರಿನ ರಾಕ್ಷಸಿ. ನಾನು ನಿನ್ನ ರಾಜ್ಯದಲ್ಲಿ ಎಲ್ಲರಿಂದ ಗೌರವಿಸಲ್ಪಟ್ಟು ಸುಖದಿಂದ ವಾಸಿಸುತ್ತಿದ್ದೇನೆ.
02017002a ಸಾಹಂ ಪ್ರತ್ಯುಪಕಾರಾರ್ಥಂ ಚಿಂತಯಂತ್ಯನಿಶಂ ನೃಪ|
02017002c ತವೇಮೇ ಪುತ್ರಶಕಲೇ ದೃಷ್ಟವತ್ಯಸ್ಮಿ ಧಾರ್ಮಿಕ||
02017003a ಸಂಶ್ಲೇಷಿತೇ ಮಯಾ ದೈವಾತ್ಕುಮಾರಃ ಸಮಪದ್ಯತ|
02017003c ತವ ಭಾಗ್ಯೈರ್ಮಹಾರಾಜ ಹೇತುಮಾತ್ರಮಹಂ ತ್ವಿಹ||
ಧಾರ್ಮಿಕ ನೃಪ! ನಿನಗೆ ಹೇಗೆ ಪ್ರತ್ಯುಪಕಾರ ಮಾಡಲಿ ಎಂದು ನಿತ್ಯವೂ ಚಿಂತಿಸುತ್ತಿದ್ದೆ. ಈಗ ನಿನ್ನ ಪುತ್ರನ ಎರಡು ಅರ್ಧಗಳನ್ನು ನೋಡಿ, ಒಟ್ಟುಗೂಡಿಸಿದಾಗ ವಿಧಿಯ ಹೇಳಿಕೆಯಂತೆ ಕುಮಾರನಾದನು. ಮಹಾರಾಜ! ಇದು ನಿನ್ನ ಭಾಗ್ಯ. ಇದರಲ್ಲಿ ನಾನು ಕೇವಲ ಒಂದು ಕಾರಣ ಅಷ್ಟೆ.””
02017004 ಕೃಷ್ಣ ಉವಾಚ|
02017004a ಏವಮುಕ್ತ್ವಾ ತು ಸಾ ರಾಜಂಸ್ತತ್ರೈವಾಂತರಧೀಯತ|
02017004c ಸ ಗೃಹ್ಯ ಚ ಕುಮಾರಂ ತಂ ಪ್ರಾವಿಶತ್ಸ್ವಗೃಹಂ ನೃಪಃ||
ಕೃಷ್ಣನು ಹೇಳಿದನು: “ರಾಜನ್! ಇದನ್ನು ಹೇಳಿದ ಅವಳು ಅಲ್ಲಿಯೇ ಅಂತರ್ಧಾನಳಾದಳು. ನೃಪನು ತನ್ನ ಕುಮಾರನನ್ನು ಎತ್ತಿಕೊಂಡು ಸ್ವಗೃಹವನ್ನು ಪ್ರವೇಶಿಸಿದನು.
02017005a ತಸ್ಯ ಬಾಲಸ್ಯ ಯತ್ಕೃತ್ಯಂ ತಚ್ಚಕಾರ ನೃಪಸ್ತದಾ|
02017005c ಆಜ್ಞಾಪಯಚ್ಚ ರಾಕ್ಷಸ್ಯಾ ಮಾಗಧೇಷು ಮಹೋತ್ಸವಂ||
ಅನಂತರ ನೃಪನು ತನ್ನ ಬಾಲಕನಿಗೆ ಮಾಡಬೇಕಾದ ಎಲ್ಲ ಸಂಸ್ಕಾರಗಳನ್ನೂ ಮಾಡಿ ರಾಕ್ಷಸಿಯ ಕುರಿತು ಮಗಧದಲ್ಲಿ ಮಹಾ ಉತ್ಸವವನ್ನು ಆಜ್ಞಾಪಿಸಿದನು.
02017006a ತಸ್ಯ ನಾಮಾಕರೋತ್ತತ್ರ ಪ್ರಜಾಪತಿಸಮಃ ಪಿತಾ|
02017006c ಜರಯಾ ಸಂಧಿತೋ ಯಸ್ಮಾಜ್ಜರಾಸಂಧಸ್ತತೋಽಭವತ್||
ಆ ಪ್ರಜಾಪತಿಸಮ ಪಿತನು ಅವನಿಗೆ ನಾಮಕರಣ ಮಾಡಿದನು. ಜರಾಳಿಂದ ಒಂದಾದುದರಿಂದ ಅವನ ಹೆಸರು ಜರಾಸಂಧನೆಂದಾಯಿತು.
02017007a ಸೋಽವರ್ಧತ ಮಹಾತೇಜಾ ಮಗಧಾಧಿಪತೇಃ ಸುತಃ|
02017007c ಪ್ರಮಾಣಬಲಸಂಪನ್ನೋ ಹುತಾಹುತಿರಿವಾನಲಃ||
ಆ ಮಗಧಾಧಿಪತಿಯ ಮಗನಾದರೋ ಮಹಾತೇಜಸ್ಸಿನಿಂದ ಆಹುತಿಯನ್ನು ಹಾಕಿದಾಗ ಅಗ್ನಿಯು ಹೇಗೋ ಹಾಗೆ ಗಾತ್ರ ಮತ್ತು ಬಲ ಸಂಪನ್ನನಾಗಿ ಬೆಳೆದನು.
02017008a ಕಸ್ಯ ಚಿತ್ತ್ವಥ ಕಾಲಸ್ಯ ಪುನರೇವ ಮಹಾತಪಾಃ|
02017008c ಮಗಧಾನುಪಚಕ್ರಾಮ ಭಗವಾಂಶ್ಚಂಡಕೌಶಿಕಃ||
ಸ್ವಲ್ಪ ಸಮಯದ ನಂತರ ಪುನಃ ಅದೇ ಮಹಾತಪಸ್ವಿ ಭಗವಾನ್ ಚಂಡಕೌಶಿಕಿಯು ಮಗಧ ದೇಶಕ್ಕೆ ಬಂದನು.
02017009a ತಸ್ಯಾಗಮನಸಂಹೃಷ್ಟಃ ಸಾಮಾತ್ಯಃ ಸಪುರಃಸರಃ|
02017009c ಸಭಾರ್ಯಃ ಸಹ ಪುತ್ರೇಣ ನಿರ್ಜಗಾಮ ಬೃಹದ್ರಥಃ||
ಅವನ ಆಗಮನದಿಂದ ಸಂತೋಷಗೊಂಡ ಬೃಹದ್ರಥನು ತನ್ನ ಅಮಾತ್ಯರು, ಪುರದ ಜನರು, ಪತ್ನಿಯರು ಮತ್ತು ಮಗನೊಂದಿಗೆ ಹೊರಬಂದನು.
02017010a ಪಾದ್ಯಾರ್ಘ್ಯಾಚಮನೀಯೈಸ್ತಮರ್ಚಯಾಮಾಸ ಭಾರತ|
02017010c ಸ ನೃಪೋ ರಾಜ್ಯಸಹಿತಂ ಪುತ್ರಂ ಚಾಸ್ಮೈ ನ್ಯವೇದಯತ್||
ಭಾರತ! ಪಾದ್ಯ, ಅರ್ಘ್ಯ, ಆಚಮನೀಯಗಳಿಂದ ಅವನನ್ನು ಅರ್ಚಿಸಿ ನೃಪತಿಯು ತನ್ನ ರಾಜ್ಯದ ಸಹಿತ ಪುತ್ರನನ್ನು ಅವನಿಗೆ ಸಮರ್ಪಿಸಿದನು.
02017011a ಪ್ರತಿಗೃಹ್ಯ ತು ತಾಂ ಪೂಜಾಂ ಪಾರ್ಥಿವಾದ್ಭಗವಾನೃಷಿಃ|
02017011c ಉವಾಚ ಮಾಗಧಂ ರಾಜನ್ಪ್ರಹೃಷ್ಟೇನಾಂತರಾತ್ಮನಾ||
ರಾಜನಿಂದ ಆ ಪೂಜೆಯನ್ನು ಸ್ವೀಕರಿಸಿದ ಭಗವಾನ್ ಋಷಿಯು ಸಂತೋಷಗೊಂಡ ಅಂತರಾತ್ಮದಿಂದ ಮಾಗಧ ರಾಜನಿಗೆ ಹೇಳಿದನು:
02017012a ಸರ್ವಮೇತನ್ಮಯಾ ರಾಜನ್ವಿಜ್ಞಾತಂ ಜ್ಞಾನಚಕ್ಷುಷಾ|
02017012c ಪುತ್ರಸ್ತು ಶೃಣು ರಾಜೇಂದ್ರ ಯಾದೃಶೋಽಯಂ ಭವಿಷ್ಯತಿ||
“ರಾಜನ್! ಇವೆಲ್ಲವನ್ನೂ ನಾನು ನನ್ನ ಜ್ಞಾನದ ಕಣ್ಣುಗಳಿಂದ ತಿಳಿದಿದ್ದೆ. ರಾಜೇಂದ್ರ! ನಿನ್ನ ಪುತ್ರನು ಭವಿಷ್ಯದಲ್ಲಿ ಏನಾಗುತ್ತಾನೆ ಎನ್ನುವುದನ್ನು ಈಗ ಕೇಳು.
02017013a ಅಸ್ಯ ವೀರ್ಯವತೋ ವೀರ್ಯಂ ನಾನುಯಾಸ್ಯಂತಿ ಪಾರ್ಥಿವಾಃ|
02017013c ದೇವೈರಪಿ ವಿಸೃಷ್ಟಾನಿ ಶಸ್ತ್ರಾಣ್ಯಸ್ಯ ಮಹೀಪತೇ|
02017013e ನ ರುಜಂ ಜನಯಿಷ್ಯಂತಿ ಗಿರೇರಿವ ನದೀರಯಾಃ||
ಇವನ ವೀರ್ಯಕ್ಕಿಂತಲೂ ವೀರ್ಯವುಳ್ಳ ಪಾರ್ಥಿವರ್ಯಾರೂ ಇರುವುದಿಲ್ಲ. ಮಹೀಪತೇ! ನದಿಯ ಪ್ರವಾಹವು ಪರ್ವತಕ್ಕೆ ಹೇಗೆ ನೋವನ್ನುಂಟಮಾಡಲಾರವೋ ಹಾಗೆ ದೇವತೆಗಳೂ ಬಿಟ್ಟ ಅಸ್ತ್ರಗಳಿಂದ ಇವನಿಗೆ ಪೆಟ್ಟಾಗುವುದಿಲ್ಲ.
02017014a ಸರ್ವಮೂರ್ಧಾಭಿಷಿಕ್ತಾನಾಮೇಷ ಮೂರ್ಧ್ನಿ ಜ್ವಲಿಷ್ಯತಿ|
02017014c ಸರ್ವೇಷಾಂ ನಿಷ್ಪ್ರಭಕರೋ ಜ್ಯೋತಿಷಾಮಿವ ಭಾಸ್ಕರಃ||
ನಕ್ಷತ್ರಗಳ ಪ್ರಭೆಯನ್ನು ಮೀರಿಸುವ ಭಾಸ್ಕರನಂತೆ ಇವನು ಮೂರ್ಧಾಭಿಷಿಕ್ತರಾದ ಎಲ್ಲರ ಶಿರಗಳಿಗಿಂಥ ಬೆಳಗುತ್ತಾನೆ.
02017015a ಏನಮಾಸಾದ್ಯ ರಾಜಾನಃ ಸಮೃದ್ಧಬಲವಾಹನಾಃ|
02017015c ವಿನಾಶಮುಪಯಾಸ್ಯಂತಿ ಶಲಭಾ ಇವ ಪಾವಕಂ||
ಇವನನ್ನು ಆಕ್ರಮಿಸುವ ರಾಜರ ಸಮೃದ್ಧ ಬಲ ವಾಹನಗಳು ಬೆಂಕಿಯಿಂದ ಪತಂಗವು ಹೇಗೋ ಹಾಗೆ ವಿನಾಶ ಹೊಂದುತ್ತವೆ.
02017016a ಏಷ ಶ್ರಿಯಂ ಸಮುದಿತಾಂ ಸರ್ವರಾಜ್ಞಾಂ ಗ್ರಹೀಷ್ಯತಿ|
02017016c ವರ್ಷಾಸ್ವಿವೋದ್ಧತಜಲಾ ನದೀರ್ನದನದೀಪತಿಃ||
ಮಳೆನೀರೆಲ್ಲವನ್ನು ನದಿಗಳ ಮೂಲಕ ಹೇಗೆ ಸಾಗರವು ಹೀರಿಕೊಳ್ಳುತ್ತದೆಯೋ ಹಾಗೆ ಇವನು ಸರ್ವರಾಜರ ಶ್ರಿಯನ್ನು ಒಟ್ಟುಗೂಡಿಸಿ ಹಿಡಿದುಕೊಳ್ಳುತ್ತಾನೆ.
02017017a ಏಷ ಧಾರಯಿತಾ ಸಮ್ಯಕ್ಚಾತುರ್ವರ್ಣ್ಯಂ ಮಹಾಬಲಃ|
02017017c ಶುಭಾಶುಭಮಿವ ಸ್ಫೀತಾ ಸರ್ವಸಸ್ಯಧರಾ ಧರಾ||
ಸರ್ವಸಸ್ಯಧಾರಿಣಿ ಈ ಧರೆಯು ಹೇಗೆ ಶುಭ ಮತ್ತು ಅಶುಭಗಳನ್ನು ಸಹಿಸಿಕೊಳ್ಳುತ್ತಾಳೋ ಹಾಗೆ ಈ ಮಹಾಬಲನು ನಾಲ್ಕೂ ವರ್ಣದವರನ್ನು ಚೆನ್ನಾಗಿ ಪರಿಪಾಲಿಸುತ್ತಾನೆ.
02017018a ಅಸ್ಯಾಜ್ಞಾವಶಗಾಃ ಸರ್ವೇ ಭವಿಷ್ಯಂತಿ ನರಾಧಿಪಾಃ|
02017018c ಸರ್ವಭೂತಾತ್ಮಭೂತಸ್ಯ ವಾಯೋರಿವ ಶರೀರಿಣಃ||
ಸರ್ವಭೂತಗಳಲ್ಲಿ ಇರುವ ವಾಯುವಿಗೆ ಶರೀರವು ಹೇಗೋ ಹಾಗೆ ಸರ್ವ ನರಾಧಿಪರೂ ಇವನ ಆಜ್ಞೆಗೊಳಗಾಗುತ್ತಾರೆ.
02017019a ಏಷ ರುದ್ರಂ ಮಹಾದೇವಂ ತ್ರಿಪುರಾಂತಕರಂ ಹರಂ|
02017019c ಸರ್ವಲೋಕೇಷ್ವತಿಬಲಃ ಸ್ವಯಂ ದ್ರಕ್ಷ್ಯತಿ ಮಾಗಧಃ||
ತನ್ನ ಅತಿಬಲದಿಂದ ಸರ್ವಲೋಕಗಳನ್ನು ಜಯಿಸುವ ಈ ಮಾಗಧನು ಸ್ವಯಂ ಮಹಾದೇವ ತ್ರಿಪುರಾಂತಕ ಹರ ರುದ್ರನನ್ನು ಕಾಣುತ್ತಾನೆ.”
02017020a ಏವಂ ಬ್ರುವನ್ನೇವ ಮುನಿಃ ಸ್ವಕಾರ್ಯಾರ್ಥಂ ವಿಚಿಂತಯನ್|
02017020c ವಿಸರ್ಜಯಾಮಾಸ ನೃಪಂ ಬೃಹದ್ರಥಮಥಾರಿಹನ್||
ಅರಿಹನ್! ಹೀಗೆ ಹೇಳಿದ ಮುನಿಯು ತನ್ನ ಕಾರ್ಯಗಳ ಕುರಿತು ಯೋಚಿಸುತ್ತಾ ನೃಪ ಬೃಹದ್ರಥನನ್ನು ಕಳುಹಿಸಿದನು.
02017021a ಪ್ರವಿಶ್ಯ ನಗರಂ ಚೈವ ಜ್ಞಾತಿಸಂಬಂಧಿಭಿರ್ವೃತಃ|
02017021c ಅಭಿಷಿಚ್ಯ ಜರಾಸಂಧಂ ಮಗಧಾಧಿಪತಿಸ್ತದಾ|
02017021e ಬೃಹದ್ರಥೋ ನರಪತಿಃ ಪರಾಂ ನಿರ್ವೃತಿಮಾಯಯೌ||
ತನ್ನ ಜ್ಞಾತಿಬಾಂಧವರಿದ ಕೂಡಿ ನಗರವನ್ನು ಪ್ರವೇಶಿಸಿ ಜರಾಸಂಧನನ್ನು ಮಗಧಾಧಿಪತಿಯನ್ನಾಗಿ ಅಭಿಷೇಕಿಸಿ ನರಪತಿ ಬೃಹದ್ರಥನು ಅಂತಿಮ ನಿವೃತ್ತಿಯನ್ನು ಪಡೆದನು.
02017022a ಅಭಿಷಿಕ್ತೇ ಜರಾಸಂಧೇ ತದಾ ರಾಜಾ ಬೃಹದ್ರಥಃ|
02017022c ಪತ್ನೀದ್ವಯೇನಾನುಗತಸ್ತಪೋವನರತೋಽಭವತ್||
ಜರಾಸಂಧನನ್ನು ಅಭಿಷೇಕಿಸಿ ರಾಜ ಬೃಹದ್ರಥನು ತನ್ನ ಇಬ್ಬರೂ ಪತ್ನಿಯರೊಡನೆ ತಪೋವನದಲ್ಲಿ ಅನುರತನಾದನು.
02017023a ತಪೋವನಸ್ಥೇ ಪಿತರಿ ಮಾತೃಭ್ಯಾಂ ಸಹ ಭಾರತ|
02017023c ಜರಾಸಂಧಃ ಸ್ವವೀರ್ಯೇಣ ಪಾರ್ಥಿವಾನಕರೋದ್ವಶೇ||
ಭಾರತ! ತನ್ನ ಈರ್ವರು ತಾಯಂದಿರೊಡನೆ ತಂದೆಯು ತಪೋವನದಲ್ಲಿರಲು ಜರಾಸಂಧನು ತನ್ನ ವೀರ್ಯದಿಂದ ರಾಜರನ್ನು ವಶಮಾಡಿಕೊಂಡನು.
02017024a ಅಥ ದೀರ್ಘಸ್ಯ ಕಾಲಸ್ಯ ತಪೋವನಗತೋ ನೃಪಃ|
02017024c ಸಭಾರ್ಯಃ ಸ್ವರ್ಗಮಗಮತ್ತಪಸ್ತಪ್ತ್ವಾ ಬೃಹದ್ರಥಃ||
ತುಂಬಾ ಸಮಯದ ನಂತರ ತಪೋವನಕ್ಕೆ ಹೋಗಿದ್ದ ನೃಪ ಬೃಹದ್ರಥನು ತಪಸ್ಸನ್ನು ಮಾಡಿ ತನ್ನ ಭಾರ್ಯೆಯರೊಂದಿಗೆ ಸ್ವರ್ಗವನ್ನು ಸೇರಿದನು.
02017025a ತಸ್ಯಾಸ್ತಾಂ ಹಂಸಡಿಭಕಾವಶಸ್ತ್ರನಿಧನಾವುಭೌ|
02017025c ಮಂತ್ರೇ ಮತಿಮತಾಂ ಶ್ರೇಷ್ಠೌ ಯುದ್ಧಶಾಸ್ತ್ರವಿಶಾರದೌ||
02017026a ಯೌ ತೌ ಮಯಾ ತೇ ಕಥಿತೌ ಪೂರ್ವಮೇವ ಮಹಾಬಲೌ|
02017026c ತ್ರಯಸ್ತ್ರಯಾಣಾಂ ಲೋಕಾನಾಂ ಪರ್ಯಾಪ್ತಾ ಇತಿ ಮೇ ಮತಿಃ||
ಶಸ್ತ್ರಗಳಿಂದ ಸಾವನ್ನು ಹೊಂದದ ಹಂಸ-ಡಿಭಕರು ಜರಾಸಂಧನ ಜೊತೆಯಿದ್ದರು. ನಾನು ಈ ಮೊದಲೇ ಹೇಳಿದ ಆ ಮಹಾಬಲಶಾಲಿಗಳಿಬ್ಬರೂ ಮಂತ್ರಾಲೋಚನೆಯಲ್ಲಿ ಮತಿವಂತರಾಗಿ ಶ್ರೇಷ್ಠರಾಗಿದ್ದರು, ಯುದ್ಧ ಶಾಸ್ತ್ರದಲ್ಲಿ ವಿಶಾರದರಾಗಿದ್ದರು.
02017027a ಏವಮೇಷ ತದಾ ವೀರ ಬಲಿಭಿಃ ಕುಕುರಾಂಧಕೈಃ|
02017027c ವೃಷ್ಣಿಭಿಶ್ಚ ಮಹಾರಾಜ ನೀತಿಹೇತೋರುಪೇಕ್ಷಿತಃ||
ಮಹಾರಾಜ! ಇವನೇ ಆ ವೀರಬಲಿ. ಅವನನ್ನು ಕುಕುರರು, ಅಂಧಕರು, ಮತ್ತು ವೃಷ್ಣಿಗಳು ನೀತಿಯ ಕಾರಣದಿಂದ ಅಲಕ್ಷಿಸಿದ್ದರು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ಜರಾಸಂಧಪ್ರಶಂಸಾಯಾಂ ಸಪ್ತದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ಜರಾಸಂಧಪ್ರಶಂಸೆ ಎನ್ನುವ ಹದಿನೇಳನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಃ||
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೧/೧೮, ಉಪಪರ್ವಗಳು-೨೧/೧೦೦, ಅಧ್ಯಾಯಗಳು-೨೪೨/೧೯೯೫, ಶ್ಲೋಕಗಳು.