Sabha Parva: Chapter 15

ಸಭಾ ಪರ್ವ: ಮಂತ್ರ ಪರ್ವ

೧೫

ಜರಾಸಂಧವಧೆಯ ಕುರಿತು ಸಮಾಲೋಚನೆ

ಸಾಮ್ರಾಟ ಪದವಿಯು ತನ್ನ ವೈಯಕ್ತಿಕ ಬಯಕೆಯಾದರೂ ಭೀಮಾರ್ಜುನರನ್ನು ಅಪಾಯಕ್ಕೀಡುಮಾಡಲು ಯುಧಿಷ್ಠಿರನು ಅಂಜಿಕೊಳ್ಳುವುದು (೧-೫). ಪಾರ್ಥನು ಆಶ್ವಾಸನೆ ನೀಡುವುದು (೬-೧೬).

02015001 ಯುಧಿಷ್ಠಿರ ಉವಾಚ|

02015001a ಸಮ್ರಾಡ್ಗುಣಮಭೀಪ್ಸನ್ವೈ ಯುಷ್ಮಾನ್ಸ್ವಾರ್ಥಪರಾಯಣಃ|

02015001c ಕಥಂ ಪ್ರಹಿಣುಯಾಂ ಭೀಮಂ ಬಲಾತ್ಕೇವಲಸಾಹಸಾತ್||

ಯುಧಿಷ್ಠಿರನು ಹೇಳಿದನು: “ಸಮ್ರಾಟಪದವಿಯನ್ನು ಪಡೆಯುವುದು ನನ್ನ ವೈಯಕ್ತಿಕ ಬಯಕೆ. ಸ್ವಾರ್ಥಪರಾಯಣನಾದ ನಾನು ಹೇಗೆ ನಿಮ್ಮೆಲ್ಲರನ್ನೂ ಬಲವಂತಮಾಡಿ ಇಂಥಹ ಸಾಹಸಕ್ಕೆ ಕಳುಹಿಸಲಿ?

02015002a ಭೀಮಾರ್ಜುನಾವುಭೌ ನೇತ್ರೇ ಮನೋ ಮನ್ಯೇ ಜನಾರ್ದನಂ|

02015002c ಮನಶ್ಚಕ್ಷುರ್ವಿಹೀನಸ್ಯ ಕೀದೃಶಂ ಜೀವಿತಂ ಭವೇತ್||

ಜನಾರ್ದನ! ಭೀಮಾರ್ಜುನರಿಬ್ಬರೂ ನನ್ನ ಕಣ್ಣುಗಳಿದ್ದಂತೆ ಎಂದು ನನ್ನ ಅನಿಸಿಕೆ. ಮನಸ್ಸು ಮತ್ತು ಕಣ್ಣುಗಳನ್ನು ಕಳೆದುಕೊಂಡರೆ ನನ್ನ ಜೀವನದಲ್ಲಿ ಉಳಿಯುವುದಾದರೂ ಏನು?

02015003a ಜರಾಸಂಧಬಲಂ ಪ್ರಾಪ್ಯ ದುಷ್ಪಾರಂ ಭೀಮವಿಕ್ರಮಂ|

02015003c ಶ್ರಮೋ ಹಿ ವಃ ಪರಾಜಯ್ಯಾತ್ಕಿಮು ತತ್ರ ವಿಚೇಷ್ಟಿತಂ||

ಜರಾಸಂಧನ ದುಷ್ಪಾರ ಭೀಮವಿಕ್ರಮ ಬಲವನ್ನು ಎದುರಿಸಿದಾಗ ಕೇವಲ ಶ್ರಮವು ಪರಾಜಯಗೊಳಿಸುತ್ತದೆ. ಇದರಲ್ಲಿ ಅರ್ಥವಾದರೂ ಏನಿದೆ?

02015004a ಅಸ್ಮಿನ್ನರ್ಥಾಂತರೇ ಯುಕ್ತಮನರ್ಥಃ ಪ್ರತಿಪದ್ಯತೇ|

02015004c ಯಥಾಹಂ ವಿಮೃಶಾಮ್ಯೇಕಸ್ತತ್ತಾವಚ್ಶ್ರೂಯತಾಂ ಮಮ||

ಇದಕ್ಕಿಂತ ಬೇರೆ ಪರಿಣಾಮವಾದರೂ ಅತ್ಯಂತ ಅನರ್ಥವಾಗುವುದು. ಇದರ ಕುರಿತು ನಾನು ಏನು ಯೋಚಿಸುತ್ತಿದ್ದೇನೆ ಎನ್ನುವುದನ್ನು ಕೇಳು.

02015005a ಸಂನ್ಯಾಸಂ ರೋಚಯೇ ಸಾಧು ಕಾರ್ಯಸ್ಯಾಸ್ಯ ಜನಾರ್ದನ|

02015005c ಪ್ರತಿಹಂತಿ ಮನೋ ಮೇಽದ್ಯ ರಾಜಸೂಯೋ ದುರಾಸದಃ||

ಜನಾರ್ದನ! ಈ ಯೋಜನೆಯನ್ನು ಇಲ್ಲಿಯೇ ಬಿಟ್ಟುಬಿಡುವುದು ಒಳ್ಳೆಯದು ಎಂದು ನನಗನ್ನಿಸುತ್ತಿದೆ. ಈಗ ನನ್ನ ಮನಸ್ಸು ಇದರ ವಿರುದ್ಧವಾಗಿದೆ. ರಾಜಸೂಯವು ಸಾಧ್ಯವಾದುದಲ್ಲ.””

02015006 ವೈಶಂಪಾಯನ ಉವಾಚ|

02015006a ಪಾರ್ಥಃ ಪ್ರಾಪ್ಯ ಧನುಃಶ್ರೇಷ್ಠಮಕ್ಷಯ್ಯೌ ಚ ಮಹೇಷುಧೀ|

02015006c ರಥಂ ಧ್ವಜಂ ಸಭಾಂ ಚೈವ ಯುಧಿಷ್ಠಿರಮಭಾಷತ||

ವೈಶಂಪಾಯನನು ಹೇಳಿದನು: “ಶ್ರೇಷ್ಠ ಧನುಸ್ಸು, ಎರಡು ಅಕ್ಷಯ ಬತ್ತಳಿಕೆಗಳು, ರಥ, ಧ್ವಜ, ಮತ್ತು ಸಭೆಯನ್ನು ಪಡೆದ ಮಹಾಯೋಧ ಪಾರ್ಥನು ಯುಧಿಷ್ಠಿರನಿಗೆ ಹೇಳಿದನು:

02015007a ಧನುರಸ್ತ್ರಂ ಶರಾ ವೀರ್ಯಂ ಪಕ್ಷೋ ಭೂಮಿರ್ಯಶೋ ಬಲಂ|

02015007c ಪ್ರಾಪ್ತಮೇತನ್ಮಯಾ ರಾಜನ್ದುಷ್ಪ್ರಾಪಂ ಯದಭೀಪ್ಸಿತಂ||

“ರಾಜನ್! ಬಯಸಿದರೂ ದೊರಕಲು ಕಷ್ಟವಾದ ಧನಸ್ಸು, ಅಸ್ತ್ರ, ಬಾಣಗಳು, ವೀರ್ಯ, ಬೆಂಬಲಿಗರು, ಭೂಮಿ, ಯಶಸ್ಸು, ಬಲಗಳನ್ನು ನಾನು ಪಡೆದಿದ್ದೇನೆ.

02015008a ಕುಲೇ ಜನ್ಮ ಪ್ರಶಂಸಂತಿ ವೈದ್ಯಾಃ ಸಾಧು ಸುನಿಷ್ಠಿತಾಃ|

02015008c ಬಲೇನ ಸದೃಶಂ ನಾಸ್ತಿ ವೀರ್ಯಂ ತು ಮಮ ರೋಚತೇ||

ತಿಳಿದವರು ಉತ್ತಮ ಕುಲದಲ್ಲಿ ಜನಿಸಿದವರನ್ನು ಮತ್ತು ಸತ್ಕರ್ಮದಲ್ಲಿ ತೊಡಗಿದವರನ್ನು ಪ್ರಶಂಸಿಸುತ್ತಾರೆ. ಆದರೆ ಬಲದ ಸದೃಶವಾದುದ್ದು ಇಲ್ಲ ಮತ್ತು ಸಾಹಸವು ನನಗೆ ಇಷ್ಟವಾಗುತ್ತದೆ.

02015009a ಕೃತವೀರ್ಯಕುಲೇ ಜಾತೋ ನಿರ್ವೀರ್ಯಃ ಕಿಂ ಕರಿಷ್ಯತಿ|

02015009c ಕ್ಷತ್ರಿಯಃ ಸರ್ವಶೋ ರಾಜನ್ಯಸ್ಯ ವೃತ್ತಿಃ ಪರಾಜಯೇ||

ವೀರ ಕುಲದಲ್ಲಿ ಹುಟ್ಟಿದವನು ನಿರ್ವೀರ್ಯನಾಗಿ ಏನನ್ನು ಸಾಧಿಸುತ್ತಾನೆ? ರಾಜನ್! ಎಲ್ಲೆಡೆಯೂ ಸೋಲಿಸುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡವನು ಕ್ಷತ್ರಿಯನೆನೆಸಿಕೊಳ್ಳುತ್ತಾನೆ.

02015010a ಸರ್ವೈರಪಿ ಗುಣೈರ್ಹೀನೋ ವೀರ್ಯವಾನ್ ಹಿ ತರೇದ್ರಿಪೂನ್|

02015010c ಸರ್ವೈರಪಿ ಗುಣೈರ್ಯುಕ್ತೋ ನಿರ್ವೀರ್ಯಃ ಕಿಂ ಕರಿಷ್ಯತಿ||

ಸರ್ವಗುಣಹೀನನೂ ಕೂಡ ವೀರ್ಯವಂತನಾಗಿದ್ದರೆ ಶತ್ರುಗಳನ್ನು ಸೋಲಿಸುತ್ತಾನೆ. ಆದರೆ ಸರ್ವಗುಣಯುಕ್ತನಾಗಿದ್ದರೂ ನಿರ್ವೀರ್ಯನಾಗಿದ್ದರೆ ಏನು ತಾನೆ ಮಾಡಿಯಾನು?

02015011a ದ್ರವ್ಯಭೂತಾ ಗುಣಾಃ ಸರ್ವೇ ತಿಷ್ಠಂತಿ ಹಿ ಪರಾಕ್ರಮೇ|

02015011c ಜಯಸ್ಯ ಹೇತುಃ ಸಿದ್ಧಿರ್ಹಿ ಕರ್ಮ ದೈವಂ ಚ ಸಂಶ್ರಿತಂ||

ಬಳಸಬಹುದಾದ ಸರ್ವಗುಣಗಳೂ ಪರಾಕ್ರಮಿಯಲ್ಲಿವೆ. ಸಿದ್ಧಿ, ಕಾರ್ಯ, ದೈವಗಳು ಒಟ್ಟಿಗೇ ಜಯಕ್ಕೆ ಕಾರಣವಾಗುತ್ತವೆ.

02015012a ಸಂಯುಕ್ತೋ ಹಿ ಬಲೈಃ ಕಶ್ಚಿತ್ಪ್ರಮಾದಾನ್ನೋಪಯುಜ್ಯತೇ|

02015012c ತೇನ ದ್ವಾರೇಣ ಶತ್ರುಭ್ಯಃ ಕ್ಷೀಯತೇ ಸಬಲೋ ರಿಪುಃ||

ಒಮ್ಮೊಮ್ಮೆ ಈ ಬಲಗಳಿಂದ ಕೂಡಿದವನೂ ಪ್ರಮಾದಕ್ಕೊಳಗಾಗಿ ಶತ್ರುವಿನ ದ್ವಾರದಲ್ಲಿಯೇ ತನ್ನ ಬಲವನ್ನು ಕಡಿಮೆಮಾಡಿಕೊಳ್ಳಬಹುದು.

02015013a ದೈನ್ಯಂ ಯಥಾಬಲವತಿ ತಥಾ ಮೋಹೋ ಬಲಾನ್ವಿತೇ|

02015013c ತಾವುಭೌ ನಾಶಕೌ ಹೇತೂ ರಾಜ್ಞಾ ತ್ಯಾಜ್ಯೌ ಜಯಾರ್ಥಿನಾ||

ಬಲವಿಲ್ಲದವನು ಹೇಗೆ ದೀನನೋ ಹಾಗೆ ಬಲಾನ್ವಿತನು ಎಲ್ಲರಿಗೂ ಬೇಕಾದವನು. ಜಯವನ್ನು ಬಯಸುವ ರಾಜನು ಇವೆರಡೂ ನಾಶಕಾರಕ ಕಾರಣಗಳನ್ನು ತೊರೆಯಬೇಕು.

02015014a ಜರಾಸಂಧವಿನಾಶಂ ಚ ರಾಜ್ಞಾಂ ಚ ಪರಿಮೋಕ್ಷಣಂ|

02015014c ಯದಿ ಕುರ್ಯಾಮ ಯಜ್ಞಾರ್ಥಂ ಕಿಂ ತತಃ ಪರಮಂ ಭವೇತ್||

ಯಜ್ಞಕ್ಕೋಸ್ಕರ ನಾವು ಜರಾಸಂಧನ ವಿನಾಶ ಮತ್ತು ರಾಜರ ವಿಮೋಚನೆಯನ್ನು ಸಾಧಿಸಿದರೆ ಇದಕ್ಕಿಂತಲೂ ಹೆಚ್ಚಿನದು ಏನಾಗಬಹುದು?

02015015a ಅನಾರಂಭೇ ತು ನಿಯತೋ ಭವೇದಗುಣನಿಶ್ಚಯಃ|

02015015c ಗುಣಾನ್ನಿಃಸಂಶಯಾದ್ರಾಜನ್ನೈರ್ಗುಣ್ಯಂ ಮನ್ಯಸೇ ಕಥಂ||

ಇದಕ್ಕೆ ನಾವು ಹಿಂಜರಿದರೆ ನಮ್ಮಲ್ಲಿ ಗುಣವಿಲ್ಲವೆಂದಾಗುವುದು ನಿಶ್ಚಯ. ರಾಜನ್! ನಿಃಸಂಶಯ ಗುಣಕ್ಕಿಂತಲೂ ನಿರ್ಗುಣವನ್ನು ನೀನು ಹೇಗೆ ಗೌರವಿಸುತ್ತೀಯೆ?

02015016a ಕಾಷಾಯಂ ಸುಲಭಂ ಪಶ್ಚಾನ್ಮುನೀನಾಂ ಶಮಮಿಚ್ಛತಾಂ|

02015016c ಸಾಮ್ರಾಜ್ಯಂ ತು ತವೇಚ್ಛಂತೋ ವಯಂ ಯೋತ್ಸ್ಯಾಮಹೇ ಪರೈಃ||

ನಿನ್ನನ್ನು ಸಾಮ್ರಾಟನನ್ನಾಗಿಸಲು ನಾವು ಶತ್ರುಗಳೊಂದಿಗೆ ಹೋರಾಡುತ್ತೇವೆ. ನಂತರ ಶಾಂತಿಯನ್ನು ಬಯಸುವ ಮುನಿಗಳಿಗೆ ಸುಲಭವಾಗಿ ಕಾಷಾಯವು ದೊರೆಯುತ್ತದೆ.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ಜರಾಸಂಧವಧಮಂತ್ರಣೇ ಪಂಚದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ಜರಾಸಂಧವಧಮಂತ್ರಣ ಎನ್ನುವ ಹದಿನೈದನೆಯ ಅಧ್ಯಾಯವು.

Related image

Comments are closed.