ಸಭಾ ಪರ್ವ: ಮಂತ್ರ ಪರ್ವ
೧೪
ಯುಧಿಷ್ಠಿರನು ಇತರ ಕ್ಷತ್ರಿಯರನ್ನು ಎದಿರುಹಾಕಿಕೊಳ್ಳಲು ಹಿಂಜರಿಯುವುದು (೧-೬). ಭೀಮನು ರಾಜನಲ್ಲಿ ಸಾಹಸಪ್ರವೃತ್ತಿಯಿರಬೇಕೆಂದು ರಾಜಸೂಯಕ್ಕೆ ಪ್ರೋತ್ಸಾಹಿಸುವುದು (೭-೯). ಜರಾಸಂಧನನ್ನು ಸೋಲಿಸಿದವನು ಸಾಮ್ರಾಟನಾಗಬಲ್ಲ ಎಂದು ಕೃಷ್ಣನು ಹೇಳುವುದು (೧೦-೨೦).
02014001 ಯುಧಿಷ್ಠಿರ ಉವಾಚ|
02014001a ಉಕ್ತಂ ತ್ವಯಾ ಬುದ್ಧಿಮತಾ ಯನ್ನಾನ್ಯೋ ವಕ್ತುಮರ್ಹತಿ|
02014001c ಸಂಶಯಾನಾಂ ಹಿ ನಿರ್ಮೋಕ್ತಾ ತ್ವನ್ನಾನ್ಯೋ ವಿದ್ಯತೇ ಭುವಿ||
ಯುಧಿಷ್ಠಿರನು ಹೇಳಿದನು: “ಬುದ್ಧಿವಂತ! ಯಾರಿಗೂ ಹೇಳಲು ಸಾಧ್ಯವಾಗದೇ ಇದ್ದುದನ್ನು ನೀನು ಹೇಳಿದ್ದೀಯೆ. ನೀನಲ್ಲದೇ ಭುವಿಯಲ್ಲಿ ಬೇರೆ ಯಾರಿಗೂ ಸಂಶಯಗಳನ್ನು ನಿರ್ಮೂಲನೆ ಮಾಡುವುದು ತಿಳಿದಿಲ್ಲ!
02014002a ಗೃಹೇ ಗೃಹೇ ಹಿ ರಾಜಾನಃ ಸ್ವಸ್ಯ ಸ್ವಸ್ಯ ಪ್ರಿಯಂಕರಾಃ|
02014002c ನ ಚ ಸಾಂರಾಜ್ಯಮಾಪ್ತಾಸ್ತೇ ಸಮ್ರಾತ್ ಶಬ್ಧೋ ಹಿ ಕೃತ್ಸ್ನಭಾಕ್||
ರಾಜರ ಮನೆ ಮನೆಗಳಲ್ಲಿ ಅವರವರದ್ದೇ ಮೆಚ್ಚಿನವರಿರುತ್ತಾರೆ. ಆದರೆ ಅವರ್ಯಾರೂ ಎಲ್ಲರನ್ನೂ ಒಳಗೊಂಡ ಸಾಮ್ರಾಟ ಎನ್ನುವ ಪದವಿಯನ್ನು ಪಡೆಯಲಿಲ್ಲ.
02014003a ಕಥಂ ಪರಾನುಭಾವಜ್ಞಃ ಸ್ವಂ ಪ್ರಶಂಸಿತುಮರ್ಹತಿ|
02014003c ಪರೇಣ ಸಮವೇತಸ್ತು ಯಃ ಪ್ರಶಸ್ತಃ ಸ ಪೂಜ್ಯತೇ||
ಇನ್ನೊಬ್ಬರ ಶಕ್ತಿಯನ್ನು ತಿಳಿದಿದ್ದವನು ತನ್ನನ್ನು ತಾನೇ ಹೊಗಳಿಕೊಳ್ಳಬಹುದು? ಇತರರಿಗೆ ಹೋಲಿಸಿ ಯಾರನ್ನು ಪ್ರಶಂಸಿಸುತ್ತಾರೋ ಅವರಿಗೇ ನಿಜವಾದ ಗೌರವ.
02014004a ವಿಶಾಲಾ ಬಹುಲಾ ಭೂಮಿರ್ಬಹುರತ್ನಸಮಾಚಿತಾ|
02014004c ದೂರಂ ಗತ್ವಾ ವಿಜಾನಾತಿ ಶ್ರೇಯೋ ವೃಷ್ಣಿಕುಲೋದ್ವಹ||
ಭೂಮಿಯು ಬಹಳ ವಿಶಾಲವಾಗಿದೆ ಮತ್ತು ಬಹಳ ರತ್ನಗಳಿಂದ ಕೂಡಿದೆ. ವೃಷ್ಣಿಕುಲೋದ್ದಹ! ದೂರ ಹೋದರೆ ಮಾತ್ರ ಯಾವುದು ಒಳ್ಳೆಯದೆಂದು ತಿಳಿಯಲು ಸಾಧ್ಯ.
02014005a ಶಮಮೇವ ಪರಂ ಮನ್ಯೇ ನ ತು ಮೋಕ್ಷಾದ್ಭವೇಚ್ಛಮಃ|
02014005c ಆರಂಭೇ ಪಾರಮೇಷ್ಠ್ಯಂ ತು ನ ಪ್ರಾಪ್ಯಮಿತಿ ಮೇ ಮತಿಃ||
ಶಮೆಯೇ ಅತ್ಯುತ್ತಮವೆಂದು ನನ್ನ ಅನಿಸಿಕೆ. ಅವರನ್ನು ಬಿಡುಗಡೆಮಾಡಿಸುವುದರಿಂದ ಶಮೆಯು ದೊರಕುವುದಿಲ್ಲ. ಯಜ್ಞವನ್ನು ಪ್ರಾರಂಭಿಸಿದರೆ ಅದು ದೊರಕುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.
02014006a ಏವಮೇವಾಭಿಜಾನಂತಿ ಕುಲೇ ಜಾತಾ ಮನಸ್ವಿನಃ|
02014006c ಕಶ್ಚಿತ್ಕದಾ ಚಿದೇತೇಷಾಂ ಭವೇಚ್ಛ್ರೇಷ್ಠೋ ಜನಾರ್ದನ||
ಜನಾರ್ದನ! ಒಳ್ಳೆಯ ಕುಲದಲ್ಲಿ ಹುಟ್ಟಿದ ಮನಸ್ವಿಗಳೆಲ್ಲರೂ ಇದೇ ಅಭಿಪ್ರಾಯ ಪಡುತ್ತಾರೆ. ಬಹುಷಃ ಯಾವಾಗಲೋ ಅವರಲ್ಲಿಯೇ ಒಬ್ಬನು ಶ್ರೇಷ್ಠನೆನೆಸಿಕೊಳ್ಳುತ್ತಾನೆ.”
02014007 ಭೀಮ ಉವಾಚ|
02014007a ಅನಾರಂಭಪರೋ ರಾಜಾ ವಲ್ಮೀಕ ಇವ ಸೀದತಿ|
02014007c ದುರ್ಬಲಶ್ಚಾನುಪಾಯೇನ ಬಲಿನಂ ಯೋಽಧಿತಿಷ್ಠತಿ||
ಭೀಮನು ಹೇಳಿದನು: “ಸಾಹಸಪ್ರವೃತ್ತಿಯಿಲ್ಲದ ರಾಜನು ಹುತ್ತದಂತೆ ಕುಸಿಯುತ್ತಾನೆ. ಉಪಾಯವಿಲ್ಲದ ಬಲಶಾಲಿಯೂ ದುರ್ಬಲನೆಂದೇ ಪರಿಗಣಿಸಲ್ಪಡುತ್ತಾನೆ.
02014008a ಅತಂದ್ರಿತಸ್ತು ಪ್ರಾಯೇಣ ದುರ್ಬಲೋ ಬಲಿನಂ ರಿಪುಂ|
02014008c ಜಯೇತ್ಸಮ್ಯಮ್ನಯೋ ರಾಜನ್ನೀತ್ಯಾರ್ಥಾನಾತ್ಮನೋ ಹಿತಾನ್||
ಆದರೆ, ಓರ್ವ ದುರ್ಬಲನು ಉಪಾಯದಿಂದ ಬಲಶಾಲಿ ಶತ್ರುವನ್ನು ಸೋಲಿಸಬಹುದು. ರಾಜನ್! ಅವನ ಯೋಜನೆಯು ಸರಿಯಾದುದಾಗಿತ್ತೆಂದರೆ ಅವನು ತನಗೆ ಹಿತವಾದುದನ್ನು ಸಾಧಿಸಬಹುದು.
02014009a ಕೃಷ್ಣೇ ನಯೋ ಮಯಿ ಬಲಂ ಜಯಃ ಪಾರ್ಥೇ ಧನಂಜಯೇ|
02014009c ಮಾಗಧಂ ಸಾಧಯಿಷ್ಯಾಮೋ ವಯಂ ತ್ರಯ ಇವಾಗ್ನಯಃ||
ಕೃಷ್ಣನಲ್ಲಿ ಯೋಜನೆಯಿದೆ. ನನ್ನಲ್ಲಿ ಶಕ್ತಿಯಿದೆ. ಮತ್ತು ಪಾರ್ಥ ಧನಂಜಯನಲ್ಲಿ ಜಯವಿದೆ. ಮೂರು ಅಗ್ನಿಗಳಂತೆ ನಾವು ಮಾಗಧನನ್ನು ಗೆಲ್ಲಬಹುದು.”
02014010 ಕೃಷ್ಣ ಉವಾಚ|
02014010a ಆದತ್ತೇಽರ್ಥಪರೋ ಬಾಲೋ ನಾನುಬಂಧಮವೇಕ್ಷತೇ|
02014010c ತಸ್ಮಾದರಿಂ ನ ಮೃಷ್ಯಂತಿ ಬಾಲಮರ್ಥಪರಾಯಣಂ||
ಕೃಷ್ಣನು ಹೇಳಿದನು: “ತನ್ನ ಲಾಭವನ್ನೇ ಅನುಸರಿಸುತ್ತಿರುವ ಮೂರ್ಖನು ಆಗುವ ಪರಿಣಾಮಗಳನ್ನು ಗಮನಿಸುವುದಿಲ್ಲ. ಆದುದರಿಂದ ಅವರು ಲಾಭದ ಹಿಂದೆಹೋಗುತ್ತಿರುವ ಮೂರ್ಖ ಶತ್ರುಗಳನ್ನು ಸಹಿಸುವುದಿಲ್ಲ.
02014011a ಹಿತ್ವಾ ಕರಾನ್ಯೌವನಾಶ್ವಃ ಪಾಲನಾಚ್ಚ ಭಗೀರಥಃ|
02014011c ಕಾರ್ತವೀರ್ಯಸ್ತಪೋಯೋಗಾದ್ಬಲಾತ್ತು ಭರತೋ ವಿಭುಃ|
02014011e ಋದ್ಧ್ಯಾ ಮರುತ್ತಸ್ತಾನ್ಪಂಚ ಸಮ್ರಾಜ ಇತಿ ಶುಶ್ರುಮಃ||
ತೆರಿಗೆಯಿಲ್ಲದಂತೆ ಮಾಡಿ ಯೌವನಾಶ್ವ, ಪ್ರಜಾಪಾಲನೆಯ ಮೂಲಕ ಭಗೀರಥ, ತಪೋಯೋಗದ ಮೂಲಕ ಕಾರ್ತವೀರ್ಯ, ಬಲದಿಂದ ವಿಭು ಭರತ, ಮತ್ತು ಸಂಪತ್ತಿನ ಮೂಲಕ ಮರುತ್ತ ಈ ಐವರು ಸಾಮ್ರಾಟರೆನಿಸಿಕೊಂಡರೆಂದು ಕೇಳಿದ್ದೇವೆ.
02014012a ನಿಗ್ರಾಹ್ಯಲಕ್ಷಣಂ ಪ್ರಾಪ್ತೋ ಧರ್ಮಾರ್ಥನಯಲಕ್ಷಣೈಃ|
02014012c ಬಾರ್ಹದ್ರಥೋ ಜರಾಸಂಧಸ್ತದ್ವಿದ್ಧಿ ಭರತರ್ಷಭ||
ಭರತರ್ಷಭ! ಈಗ ಬಾರ್ಹದತ್ತ ಜರಾಸಂಧನನ್ನು ಧರ್ಮ, ಲಾಭ ಮತ್ತು ನ್ಯಾಯಗಳಿಂದ ನಿಗ್ರಹಿಸುವ ಸೂಚನೆಯು ಬಂದೊದಗಿದೆ ಎಂದು ತಿಳಿ.
02014013a ನ ಚೈನಮನುರುಧ್ಯಂತೇ ಕುಲಾನ್ಯೇಕಶತಂ ನೃಪಾಃ|
02014013c ತಸ್ಮಾದೇತದ್ಬಲಾದೇವ ಸಾಮ್ರಾಜ್ಯಂ ಕುರುತೇಽದ್ಯ ಸಃ||
ನೂರಾಒಂದು ಕುಲಗಳ ನೃಪರು ಅವನಿಗೆ ತಕ್ಕಂತೆ ನಡೆದುಕೊಳ್ಳಲು ಬಯಸುವುದಿಲ್ಲ. ಆದುದರಿಂದಲೇ ಅವನು ತನ್ನ ಬಲದಿಂದ ರಾಜ್ಯಭಾರ ಮಾಡುತ್ತಿದ್ದಾನೆ.
02014014a ರತ್ನಭಾಜೋ ಹಿ ರಾಜಾನೋ ಜರಾಸಂಧಮುಪಾಸತೇ|
02014014c ನ ಚ ತುಷ್ಯತಿ ತೇನಾಪಿ ಬಾಲ್ಯಾದನಯಮಾಸ್ಥಿತಃ||
ಸಂಪತ್ತಿಗೆ ಭಾಗಧಾರ ರಾಜರು ಜರಾಸಂಧನನ್ನು ಗೌರವಿಸುತ್ತಾರೆ. ಆದರೆ ಬಾಲ್ಯದಿಂದಲೇ ಅನ್ಯಾಯದಲ್ಲಿ ನಿರತನಾಗಿದ್ದ ಅವನಿಗೆ ಇದೂ ಕೂಡ ತೃಪ್ತಿಯನ್ನು ನೀಡುತ್ತಿಲ್ಲ.
02014015a ಮೂರ್ಧಾಭಿಷಿಕ್ತಂ ನೃಪತಿಂ ಪ್ರಧಾನಪುರುಷಂ ಬಲಾತ್|
02014015c ಆದತ್ತೇ ನ ಚ ನೋ ದೃಷ್ಟೋಽಭಾಗಃ ಪುರುಷತಃ ಕ್ವ ಚಿತ್||
ಅವನು ಮೂರ್ಧಾಭಿಷಿಕ್ತ ನೃಪತಿ ಮುಖ್ಯ ಪುರುಷರನ್ನು ಬಲಾತ್ಕಾರವಾಗಿ ಸೋರೆಹೊಡೆಯುತ್ತಾನೆ. ಅವನಿಗೆ ಕಪ್ಪವನ್ನು ಕೊಡದೇ ಇರುವ ಪುರುಷರು ಯಾರನ್ನೂ ನೋಡಿಲ್ಲ.
02014016a ಏವಂ ಸರ್ವಾನ್ವಶೇ ಚಕ್ರೇ ಜರಾಸಂಧಃ ಶತಾವರಾನ್|
02014016c ತಂ ದುರ್ಬಲತರೋ ರಾಜಾ ಕಥಂ ಪಾರ್ಥ ಉಪೈಷ್ಯತಿ||
ಈ ರೀತಿ ಜರಾಸಂಧನು ಸರ್ವರನ್ನೂ ತನ್ನ ವಶದಲ್ಲಿ ಇರಿಸಿಕೊಂಡಿದ್ದಾನೆ - ಅಂಥವರ ಸಂಖ್ಯೆ ಸುಮಾರು ನೂರರ ಹತ್ತಿರವಿದೆ. ಪಾರ್ಥ! ಅಂಥಹವನ ಮೇಲೆ ಓರ್ವ ದುರ್ಬಲ ರಾಜನು ಹೇಗೆ ತಾನೆ ಧಾಳಿಯಿಡಬಹುದು?
02014017a ಪ್ರೋಕ್ಷಿತಾನಾಂ ಪ್ರಮೃಷ್ಟಾನಾಂ ರಾಜ್ಞಾಂ ಪಶುಪತೇರ್ಗೃಹೇ|
02014017c ಪಶೂನಾಮಿವ ಕಾ ಪ್ರೀತಿರ್ಜೀವಿತೇ ಭರತರ್ಷಭ||
ಭರತರ್ಷಭ! ಪಶುಪತಿಯ ಮನೆಯಲ್ಲಿ ಬಲಿಪಶುಗಳಂತೆ ಪ್ರೋಕ್ಷಣೆಮಾಡಿ ಶುದ್ಧಪಡಿಸಿದ ರಾಜರು ಹೇಗೆ ತಾನೆ ಜೀವಿತವಾಗಿರಲು ಬಯಸುತ್ತಾರೆ?
02014018a ಕ್ಷತ್ರಿಯಃ ಶಸ್ತ್ರಮರಣೋ ಯದಾ ಭವತಿ ಸತ್ಕೃತಃ|
02014018c ನನು ಸ್ಮ ಮಾಗಧಂ ಸರ್ವೇ ಪ್ರತಿಬಾಧೇಮ ಯದ್ವಯಂ||
ಶಸ್ತ್ರದಿಂದ ಮರಣಹೊಂದಿದ ಕ್ಷತ್ರಿಯನು ಗೌರವಿಸಲ್ಪಡುತ್ತಾನೆ. ಹೀಗಿರುವಾಗ ನಾವೆಲ್ಲರೂ ಸೇರಿ ಮಾಗಧನನ್ನು ಎದುರಿಸಬಾರದೇ?
02014019a ಷಡಶೀತಿಃ ಸಮಾನೀತಾಃ ಶೇಷಾ ರಾಜಂಶ್ಚತುರ್ದಶ|
02014019c ಜರಾಸಂಧೇನ ರಾಜಾನಸ್ತತಃ ಕ್ರೂರಂ ಪ್ರಪತ್ಸ್ಯತೇ||
ರಾಜನ್! ಎಂಭತ್ತಾರು ರಾಜರು ಜರಾಸಂಧನ ಕಾರಗೃಹದಲ್ಲಿ ಬಂಧಿತರಾಗಿದ್ದಾರೆ. ಇನ್ನು ಉಳಿದ ಹದಿನಾಲ್ಕು ರಾಜರುಗಳ ನಂತರ ಅವನ ಕ್ರೂರಕೃತ್ಯವನ್ನು ನೆರವೇರಿಸುತ್ತಾನೆ.
02014020a ಪ್ರಾಪ್ನುಯಾತ್ಸ ಯಶೋ ದೀಪ್ತಂ ತತ್ರ ಯೋ ವಿಘ್ನಮಾಚರೇತ್|
02014020c ಜಯೇದ್ಯಶ್ಚ ಜರಾಸಂಧಂ ಸ ಸಮ್ರಾಣ್ನಿಯತಂ ಭವೇತ್||
ಇದರಲ್ಲಿ ಅವನಿಗೆ ವಿಘ್ನವನ್ನು ತರುವವನು ಬೆಳಗುವ ಯಶಸ್ಸನ್ನು ಹೊಂದುತ್ತಾನೆ. ಮತ್ತು ಜರಾಸಂಧನ ಮೇಲೆ ವಿಜಯವನ್ನು ಗಳಿಸಿದವನು ನಿಶ್ಚಯವಾಗಿಯೂ ಸಾಮ್ರಾಟನಾಗುತ್ತಾನೆ.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ಕೃಷ್ಣವಾಕ್ಯೇ ಚತುರ್ದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಹದಿನಾಲ್ಕನೆಯ ಅಧ್ಯಾಯವು.