ಶಾಂತಿ ಪರ್ವ: ರಾಜಧರ್ಮ ಪರ್ವ
೮
12008001 ವೈಶಂಪಾಯನ ಉವಾಚ
12008001a ಅಥಾರ್ಜುನ ಉವಾಚೇದಮಧಿಕ್ಷಿಪ್ತ ಇವಾಕ್ಷಮೀ|
12008001c ಅಭಿನೀತತರಂ ವಾಕ್ಯಂ ದೃಢವಾದಪರಾಕ್ರಮಃ||
12008002a ದರ್ಶಯನ್ನೈಂದ್ರಿರಾತ್ಮಾನಮುಗ್ರಮುಗ್ರಪರಾಕ್ರಮಃ|
12008002c ಸ್ಮಯಮಾನೋ ಮಹಾತೇಜಾಃ ಸೃಕ್ಕಿಣೀ ಸಂಲಿಹನ್ಮುಹುಃ||
ವೈಶಂಪಾಯನನು ಹೇಳಿದನು: “ಆಗ ವಾದದಲ್ಲಿ ದೃಢ ಪರಾಕ್ರಮಿಯಾಗಿದ್ದ ಮಹಾತೇಜಸ್ವೀ ಐಂದ್ರಿ ಅರ್ಜುನನು ತನ್ನ ಉಗ್ರ ಪರಾಕ್ರಮವನ್ನು ತೋರಿಸುತ್ತಾ ಅವಡುಗಳನ್ನು ಕಚ್ಚುತ್ತಾ, ಗಹ-ಗಹಿಸಿ ನಗುತ್ತಾ ಈ ನೀತಿತರ ವಾಕ್ಯಗಳನ್ನಾಡಿದನು:
12008003a ಅಹೋ ದುಃಖಮಹೋ ಕೃಚ್ಚ್ರಮಹೋ ವೈಕ್ಲವ್ಯಮುತ್ತಮಮ್|
12008003c ಯತ್ಕೃತ್ವಾಮಾನುಷಂ ಕರ್ಮ ತ್ಯಜೇಥಾಃ ಶ್ರಿಯಮುತ್ತಮಾಮ್||
“ಅಯ್ಯೋ! ಅಮಾನುಷ ಕರ್ಮಗಳನ್ನು ಮಾಡಿ ಪಡೆದಿರುವ ಈ ಉತ್ತಮ ರಾಜ್ಯಲಕ್ಷ್ಮಿಯನ್ನು ತ್ಯಜಿಸಬೇಕೆಂದಿರುವ ನಿನ್ನ ಈ ನಿರ್ಧಾರವು ಅತ್ಯಂತ ದುಃಖಕರವೂ, ಕಷ್ಟಕರವೂ, ಮಿತಿಮೀರಿದುದೂ ಆಗಿದೆ.
12008004a ಶತ್ರೂನ್ಹತ್ವಾ ಮಹೀಂ ಲಬ್ಧ್ವಾ ಸ್ವಧರ್ಮೇಣೋಪಪಾದಿತಾಮ್|
12008004c ಹತಾಮಿತ್ರಃ ಕಥಂ ಸರ್ವಂ ತ್ಯಜೇಥಾ ಬುದ್ಧಿಲಾಘವಾತ್||
ಶತ್ರುಗಳನ್ನು ಸಂಹರಿಸಿ ಸ್ವಧರ್ಮದಿಂದ ಜಯಿಸಲ್ಪಟ್ಟಿರುವ ಈ ಭೂಮಿಯನ್ನು ಪಡೆದುಕೊಂಡ ನಂತರ ಎಲ್ಲ ಶತ್ರುಗಳನ್ನು ಕಳೆದುಕೊಂಡ ನೀನು ನಿನ್ನ ಅಲ್ಪಬುದ್ಧಿಯಿಂದ ಅದನ್ನು ಹೇಗೆ ತಾನೇ ತ್ಯಜಿಸಬಲ್ಲೆ?
12008005a ಕ್ಲೀಬಸ್ಯ ಹಿ ಕುತೋ ರಾಜ್ಯಂ ದೀರ್ಘಸೂತ್ರಸ್ಯ ವಾ ಪುನಃ|
12008005c ಕಿಮರ್ಥಂ ಚ ಮಹೀಪಾಲಾನವಧೀಃ ಕ್ರೋಧಮೂರ್ಚಿತಃ||
ಹೇಡಿಗಾಗಲೀ ಸೋಮಾರಿಗಾಗಲಿ ರಾಜ್ಯವು ಹೇಗೆ ಲಭಿಸೀತು? ನಿನಗೆ ರಾಜ್ಯವು ಬೇಡವಾಗಿದ್ದರೆ ಯಾವಕಾರಣಕ್ಕಾಗಿ ಕ್ರೋಧಮೂರ್ಛಿತನಾಗಿ ಮಹೀಪಾಲರನ್ನು ವಧಿಸಿದೆ?
12008006a ಯೋ ಹ್ಯಾಜಿಜೀವಿಷೇದ್ಭೈಕ್ಷ್ಯಂ ಕರ್ಮಣಾ ನೈವ ಕೇನ ಚಿತ್|
12008006c ಸಮಾರಂಭಾನ್ಬುಭೂಷೇತ ಹತಸ್ವಸ್ತಿರಕಿಂಚನಃ||
12008006e ಸರ್ವಲೋಕೇಷು ವಿಖ್ಯಾತೋ ನ ಪುತ್ರಪಶುಸಂಹಿತಃ||
ಎಲ್ಲ ಸಾಧನಗಳೆಲ್ಲವೂ ನಷ್ಟವಾಗಿರುವವನು, ದಟ್ಟ ದರಿದ್ರನು, ಪ್ರಪಂಚದಲ್ಲಿ ಹೇಳಹೆಸರಿಲ್ಲದವನು, ಪುತ್ರ-ಪಶುಗಳಿಲ್ಲದವನು ಭಿಕ್ಷೆಯ ಜೀವನವನ್ನು ನಡೆಸಲು ಅಪೇಕ್ಷಿಸುವುದು ಯೋಗ್ಯವಾಗಿದೆ.
12008007a ಕಾಪಾಲೀಂ ನೃಪ ಪಾಪಿಷ್ಠಾಂ ವೃತ್ತಿಮಾಸ್ಥಾಯ ಜೀವತಃ|
12008007c ಸಂತ್ಯಜ್ಯ ರಾಜ್ಯಮೃದ್ಧಂ ತೇ ಲೋಕೋಽಯಂ ಕಿಂ ವದಿಷ್ಯತಿ||
ನೃಪ! ಸಮೃದ್ಧ ರಾಜ್ಯವನ್ನು ತೊರೆದು, ಕಪಾಲವನ್ನು ಹಿಡಿದು, ಅತ್ಯಂತ ನೀಚವೃತ್ತಿಯಿಂದ ಜೀವಿಸುವ ನಿನ್ನನ್ನು ನೋಡಿ ಈ ಲೋಕವಾದರೂ ಏನೆಂದೀತು?
12008008a ಸರ್ವಾರಂಭಾನ್ಸಮುತ್ಸೃಜ್ಯ ಹತಸ್ವಸ್ತಿರಕಿಂಚನಃ|
12008008c ಕಸ್ಮಾದಾಶಂಸಸೇ ಭೈಕ್ಷ್ಯಂ ಚರ್ತುಂ ಪ್ರಾಕೃತವತ್ಪ್ರಭೋ||
ಪ್ರಭೋ! ಎಲ್ಲವನ್ನೂ ಪರಿತ್ಯಜಿಸಿ, ಮಂಗಳಕರ ಕಾರ್ಯಗಳೆಲ್ಲವುಗಳ ವಿಹೀನನಾಗಿ, ಓರ್ವ ಸಾಮಾನ್ಯ ಭಿಕ್ಷುಕನಂತೆ ಏಕೆ ತಿರುಗಲು ಬಯಸುತ್ತಿರುವೆ?
12008009a ಅಸ್ಮಿನ್ರಾಜಕುಲೇ ಜಾತೋ ಜಿತ್ವಾ ಕೃತ್ಸ್ನಾಂ ವಸುಂಧರಾಮ್|
12008009c ಧರ್ಮಾರ್ಥಾವಖಿಲೌ ಹಿತ್ವಾ ವನಂ ಮೌಢ್ಯಾತ್ಪ್ರತಿಷ್ಠಸೇ||
ಈ ರಾಜಕುಲದಲ್ಲಿ ಹುಟ್ಟಿ, ಇಡೀ ವಸುಂಧರೆಯನ್ನು ಗೆದ್ದು, ಧರ್ಮಾರ್ಥಗಳೆಲ್ಲವನ್ನೂ ತೊರೆದು ಮೂಢನಾಗಿ ವನಕ್ಕೆ ತೆರಳಲು ಸಿದ್ಧನಾಗಿರುವೆಯಲ್ಲ!
12008010a ಯದೀಮಾನಿ ಹವೀಂಷೀಹ ವಿಮಥಿಷ್ಯಂತ್ಯಸಾಧವಃ|
12008010c ಭವತಾ ವಿಪ್ರಹೀಣಾನಿ ಪ್ರಾಪ್ತಂ ತ್ವಾಮೇವ ಕಿಲ್ಬಿಷಮ್||
ಒಂದು ವೇಳೆ ಈ ಹವಿಸ್ಸು-ಯಜ್ಞಸಾಮಗ್ರಿಗಳನ್ನು ದುಷ್ಟ ಜನರು ನಾಶಗೊಳಿಸಿದರೆ ನಿನ್ನಿಂದಲೇ ವಿಪ್ರರು ನಾಶರಾಗಿ ನಿನಗೇ ಪಾಪವು ತಗಲುತ್ತದೆ.
12008011a ಆಕಿಂಚನ್ಯಮನಾಶಾಸ್ಯಮಿತಿ ವೈ ನಹುಷೋಽಬ್ರವೀತ್|
12008011c ಕೃತ್ಯಾ ನೃಶಂಸಾ ಹ್ಯಧನೇ ಧಿಗಸ್ತ್ವಧನತಾಮಿಹ||
ನಹುಷನು ನಿರ್ಧನನಾಗಿದ್ದಾಗ ಕ್ರೂರ ಕರ್ಮಗಳನ್ನೆಸಗಿ “ನಿರ್ಧನತ್ವಕ್ಕೆ ಧಿಕ್ಕಾರ! ಸರ್ವವನ್ನೂ ತ್ಯಾಗಮಾಡಿ ದಾರಿದ್ರ್ಯವನ್ನು ಅನುಭವಿಸುವುದು ಮುನಿಗಳ ಧರ್ಮವಾಗಿದೆ. ಅದು ರಾಜನ ಧರ್ಮವಲ್ಲ!” ಎಂದು ಹೇಳಿದ್ದನು.
12008012a ಅಶ್ವಸ್ತನಮೃಷೀಣಾಂ ಹಿ ವಿದ್ಯತೇ ವೇದ ತದ್ ಭವಾನ್|
12008012c ಯಂ ತ್ವಿಮಂ ಧರ್ಮಮಿತ್ಯಾಹುರ್ಧನಾದೇಷ ಪ್ರವರ್ತತೇ||
ನಾಳೆಗೆಂದು ಸಂಗ್ರಹಿಸದೇ ಆ ದಿನಕ್ಕೆ ಮಾತ್ರ ಭಿಕ್ಷೆಬೇಡುವುದು ಋಷಿಗಳ ಧರ್ಮವೆಂದು ನಿನಗೆ ತಿಳಿದೇ ಇದೆ. ಅದೇ ರೀತಿಯಲ್ಲಿ ಯಾವುದನ್ನು ಕ್ಷತ್ರಿಯ ಧರ್ಮವೆಂದು ಕರೆಯುತ್ತಾರೋ ಅದು ಧನದಿಂದಲೇ ಸಂಪನ್ನವಾಗುತ್ತದೆ.
12008013a ಧರ್ಮಂ ಸಂಹರತೇ ತಸ್ಯ ಧನಂ ಹರತಿ ಯಸ್ಯ ಯಃ|
12008013c ಹ್ರಿಯಮಾಣೇ ಧನೇ ರಾಜನ್ವಯಂ ಕಸ್ಯ ಕ್ಷಮೇಮಹಿ||
ಯಾರ ಧನವನ್ನು ಅಪಹರಿಸಿದರೂ ಅವರ ಧರ್ಮವನ್ನು ಅಪಹರಿಸಿದಂತೆ. ರಾಜನ್! ಧನವನ್ನೇ ಅಪಹರಿಸಿದರೆ ನಾವು ಯಾವ ಧರ್ಮಾಚರಣೆಯನ್ನು ಮಾಡಲು ಸಮರ್ಥರಾಗಿರುತ್ತೇವೆ?
12008014a ಅಭಿಶಸ್ತವತ್ಪ್ರಪಶ್ಯಂತಿ ದರಿದ್ರಂ ಪಾರ್ಶ್ವತಃ ಸ್ಥಿತಮ್|
12008014c ದಾರಿದ್ರ್ಯಂ ಪಾತಕಂ ಲೋಕೇ ಕಸ್ತಚ್ಚಂಸಿತುಮರ್ಹತಿ||
ಪಕ್ಕದಲ್ಲಿ ನಿಂತಿರುವ ದರಿದ್ರನನ್ನು ನೋಡಿ ಜನರು “ಇವನೆಲ್ಲೋ ಶಾಪಗ್ರಸ್ತನಾಗಿ ಹುಟ್ಟಿದ್ದಾನೆ!” ಎಂದು ಭಾವಿಸುತ್ತಾರೆ. ಲೋಕದಲ್ಲಿ ಪಾತಕವೆಂದೇ ತಿಳಿಯಲ್ಪಟ್ಟಿರುವ ದಾರಿದ್ರ್ಯವನ್ನು ನೀನು ಹೇಗೆ ಪ್ರಶಂಸಿಸುತ್ತಿರುವೆ?
12008015a ಪತಿತಃ ಶೋಚ್ಯತೇ ರಾಜನ್ನಿರ್ಧನಶ್ಚಾಪಿ ಶೋಚ್ಯತೇ|
12008015c ವಿಶೇಷಂ ನಾಧಿಗಚ್ಚಾಮಿ ಪತಿತಸ್ಯಾಧನಸ್ಯ ಚ||
ರಾಜನ್! ಪತಿತನು ಶೋಕದಲ್ಲಿರುತ್ತಾನೆ. ನಿರ್ಧನನೂ ಶೋಕಿಸುತ್ತಿರುತ್ತಾನೆ. ಆದುದರಿಂದ ಪತಿತ ಮತ್ತು ನಿರ್ಧನಿಕನಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ.
12008016a ಅರ್ಥೇಭ್ಯೋ ಹಿ ವಿವೃದ್ಧೇಭ್ಯಃ ಸಂಭೃತೇಭ್ಯಸ್ತತಸ್ತತಃ|
12008016c ಕ್ರಿಯಾಃ ಸರ್ವಾಃ ಪ್ರವರ್ತಂತೇ ಪರ್ವತೇಭ್ಯ ಇವಾಪಗಾಃ||
ಪರ್ವತಗಳಿಂದ ಅನೇಕ ನದಿಗಳು ಹುಟ್ಟಿ ಹರಿಯುವಂತೆ ಅಲ್ಲಲ್ಲಿಂದ ಕಪ್ಪ-ಕಾಣಿಕೆಗಳ ರೂಪದಲ್ಲಿ ವೃದ್ಧಿಹೊಂದುವ ಐಶ್ವರ್ಯಗಳಿಂದಲೇ ಎಲ್ಲ ಶುಭಕರ್ಮಗಳೂ ಪ್ರವೃತ್ತವಾಗುತ್ತವೆ.
12008017a ಅರ್ಥಾದ್ಧರ್ಮಶ್ಚ ಕಾಮಶ್ಚ ಸ್ವರ್ಗಶ್ಚೈವ ನರಾಧಿಪ|
12008017c ಪ್ರಾಣಯಾತ್ರಾ ಹಿ ಲೋಕಸ್ಯ ವಿನಾರ್ಥಂ ನ ಪ್ರಸಿಧ್ಯತಿ||
ನರಾಧಿಪ! ಅರ್ಥದಿಂದಲೇ ಧರ್ಮ, ಕಾಮ ಮತ್ತು ಸ್ವರ್ಗಗಳ ಸಾಧ್ಯತೆಗಳಿವೆ. ಅರ್ಥವಿಲ್ಲದೇ ಲೋಕದ ಪ್ರಾಣಯಾತ್ರೆಯೇ ನಡೆಯುವುದಿಲ್ಲ.
12008018a ಅರ್ಥೇನ ಹಿ ವಿಹೀನಸ್ಯ ಪುರುಷಸ್ಯಾಲ್ಪಮೇಧಸಃ|
12008018c ವ್ಯುಚ್ಚಿದ್ಯಂತೇ ಕ್ರಿಯಾಃ ಸರ್ವಾ ಗ್ರೀಷ್ಮೇ ಕುಸರಿತೋ ಯಥಾ||
ಗ್ರೀಷ್ಮಋತುವಿನಲ್ಲಿ ಚಿಕ್ಕ-ಪುಟ್ಟ ನದಿಗಳು ಒಣಗಿಹೋಗುವಂತೆ ಅಲ್ಪಬುದ್ಧಿಯುಳ್ಳ ಮತ್ತು ಧನವಿಹೀನನಾದ ಪುರುಷನ ಕಾರ್ಯಗಳೆಲ್ಲವೂ ನಾಮಾವಶೇಷವಾಗುತ್ತವೆ.
12008019a ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ|
12008019c ಯಸ್ಯಾರ್ಥಾಃ ಸ ಪುಮಾಽಲ್ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ||
ಧನವಿರುವವನಿಗೆ ಮಿತ್ರರಿರುತ್ತಾರೆ. ಧನವಿರುವವನಿಗೆ ಬಾಂಧವರಿರುತ್ತಾರೆ. ಧನವಿದ್ದರೇ ಲೋಕದಲ್ಲಿ ಪುರುಷನೆನಿಸಿಕೊಳ್ಳುತ್ತಾನೆ. ಐಶ್ವರ್ಯಗಳುಳ್ಳವನನ್ನೇ ಪಂಡಿತನೆಂದೂ ಕರೆಯುವರು.
12008020a ಅಧನೇನಾರ್ಥಕಾಮೇನ ನಾರ್ಥಃ ಶಕ್ಯೋ ವಿವಿತ್ಸತಾ|
12008020c ಅರ್ಥೈರರ್ಥಾ ನಿಬಧ್ಯಂತೇ ಗಜೈರಿವ ಮಹಾಗಜಾಃ||
ದರಿದ್ರನಾದವನು ಬಯಸಿದರೂ ಅಧಿಕ ಧನವನ್ನು ಸಂಪಾದಿಸಲು ಶಕ್ಯನಾಗುವುದಿಲ್ಲ. ಆನೆಗಳಿಂದ ಮಹಾಗಜಗಳು ಹುಟ್ಟುವಂತೆ ಧನದಿಂದಲೇ ಅಪಾರ ಸಂಪತ್ತನ್ನು ಗಳಿಸಬಲ್ಲೆವು.
12008021a ಧರ್ಮಃ ಕಾಮಶ್ಚ ಸ್ವರ್ಗಶ್ಚ ಹರ್ಷಃ ಕ್ರೋಧಃ ಶ್ರುತಂ ದಮಃ|
12008021c ಅರ್ಥಾದೇತಾನಿ ಸರ್ವಾಣಿ ಪ್ರವರ್ತಂತೇ ನರಾಧಿಪ||
ನರಾಧಿಪ! ಧರ್ಮ, ಕಾಮ, ಸ್ವರ್ಗ, ಹರ್ಷ, ಕ್ರೋಧ, ವಿದ್ಯೆ, ದಮ, ಇವೆಲ್ಲವೂ ಧನದಿಂದಲೇ ಹುಟ್ಟುತ್ತವೆ.
12008022a ಧನಾತ್ಕುಲಂ ಪ್ರಭವತಿ ಧನಾದ್ಧರ್ಮಃ ಪ್ರವರ್ತತೇ|
12008022c ನಾಧನಸ್ಯಾಸ್ತ್ಯಯಂ ಲೋಕೋ ನ ಪರಃ ಪುರುಷೋತ್ತಮ||
ಪುರುಷೋತ್ತಮ! ಧನದಿಂದ ಕುಲವು ವೃದ್ಧಿಹೊಂದುತ್ತದೆ ಮತ್ತು ಧನದಿಂದ ಧರ್ಮವು ಬೆಳೆಯುತ್ತದೆ. ಧನವಿಲ್ಲದವನಿಗೆ ಈ ಲೋಕದಲ್ಲಿ ಸುಖವಿಲ್ಲ.
12008023a ನಾಧನೋ ಧರ್ಮಕೃತ್ಯಾನಿ ಯಥಾವದನುತಿಷ್ಠತಿ|
12008023c ಧನಾದ್ಧಿ ಧರ್ಮಃ ಸ್ರವತಿ ಶೈಲಾದ್ಗಿರಿನದೀ ಯಥಾ||
ನಿರ್ಧನನು ಧರ್ಮಕೃತ್ಯಗಳನ್ನು ಯಥಾಶಾಸ್ತ್ರವಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಶೈಲದಿಂದ ಗಿರಿನದಿಯು ಸ್ರವಿಸುವಂತೆ ಧನದಿಂದಲೇ ಧರ್ಮವು ಸ್ರವಿಸುತ್ತದೆ.
12008024a ಯಃ ಕೃಶಾಶ್ವಃ ಕೃಶಗವಃ ಕೃಶಭೃತ್ಯಃ ಕೃಶಾತಿಥಿಃ|
12008024c ಸ ವೈ ರಾಜನ್ಕೃಶೋ ನಾಮ ನ ಶರೀರಕೃಶಃ ಕೃಶಃ||
ರಾಜನ್! ಕೇವಲ ಶರೀರದಲ್ಲಿ ಕೃಶನಾಗಿರುವವನಿಗೆ ಕೃಶನೆಂದು ಕರೆಯುವುದಿಲ್ಲ. ಅಶ್ವಧನವಿಲ್ಲದವನು, ಗೋಧನವಿಲ್ಲದವನು, ಸೇವಕರಿಲ್ಲದವನು ಮತ್ತು ಅತಿಥಿಗಳಿಲ್ಲದವನನ್ನೂ ಕೃಶನೆಂದೇ ಕರೆಯುತ್ತಾರೆ.
12008025a ಅವೇಕ್ಷಸ್ವ ಯಥಾನ್ಯಾಯಂ ಪಶ್ಯ ದೇವಾಸುರಂ ಯಥಾ|
12008025c ರಾಜನ್ಕಿಮನ್ಯನ್ಜ್ಞಾತೀನಾಂ ವಧಾದೃಧ್ಯಂತಿ ದೇವತಾಃ||
ರಾಜನ್! ಯಥಾನ್ಯಾಯವಾಗಿ ದೇವಾಸುರರನ್ನು ನೋಡು! ದೇವತೆಗಳು ವೃದ್ಧಿಗಾಗಿ ತಮ್ಮ ದಾಯಾದಿಗಳಾದ ಅಸುರರ ವಧೆಯನ್ನಲ್ಲದೇ ಬೇರೆ ಏನನ್ನು ಬಯಸುತ್ತಾರೆ?
12008026a ನ ಚೇದ್ಧರ್ತವ್ಯಮನ್ಯಸ್ಯ ಕಥಂ ತದ್ಧರ್ಮಮಾರಭೇತ್|
12008026c ಏತಾವಾನೇವ ವೇದೇಷು ನಿಶ್ಚಯಃ ಕವಿಭಿಃ ಕೃತಃ||
ರಾಜನಾದವನು ಇನ್ನೊಬ್ಬರ ಧನವನ್ನು ತೆಗೆದುಕೊಳ್ಳದೇ ಧರ್ಮಕಾರ್ಯಗಳನ್ನು ಹೇಗೆ ಮಾಡಬಹುದು? ಇದನ್ನೇ ರಾಜಧರ್ಮವೆಂದು ತಿಳಿದವರು ವೇದಗಳಲ್ಲಿ ನಿಶ್ಚಯಿಸಿದ್ದಾರೆ.
12008027a ಅಧ್ಯೇತವ್ಯಾ ತ್ರಯೀ ವಿದ್ಯಾ ಭವಿತವ್ಯಂ ವಿಪಶ್ಚಿತಾ|
12008027c ಸರ್ವಥಾ ಧನಮಾಹಾರ್ಯಂ ಯಷ್ಟವ್ಯಂ ಚಾಪಿ ಯತ್ನತಃ||
ರಾಜನಾದವನು ವೇದಾಧ್ಯಯನ ಮಾಡುತ್ತಿರಬೇಕು. ವಿದ್ವಾಂಸನಾಗಿರಬೇಕು. ಸರ್ವಪ್ರಕಾರಗಳಿಂದಲೂ ಧನವನ್ನು ಸಂಗ್ರಹಿಸಬೇಕು ಮತ್ತು ಪ್ರಯತ್ನಪಟ್ಟು ಯಜ್ಞಗಳನ್ನು ಮಾಡಬೇಕು.
12008028a ದ್ರೋಹಾದ್ದೇವೈರವಾಪ್ತಾನಿ ದಿವಿ ಸ್ಥಾನಾನಿ ಸರ್ವಶಃ|
12008028c ಇತಿ ದೇವಾ ವ್ಯವಸಿತಾ ವೇದವಾದಾಶ್ಚ ಶಾಶ್ವತಾಃ||
ದ್ರೋಹದಿಂದಲೇ ದೇವತೆಗಳು ದಿವಿಯಲ್ಲಿ ಎಲ್ಲ ಸ್ಥಾನಗಳನ್ನೂ ಪಡೆದಿದ್ದಾರೆ. ಇದನ್ನೇ ದೇವತೆಗಳು ಲೋಕವ್ಯವಸ್ಥೆಯನ್ನಾಗಿ ಮಾಡಿರುತ್ತಾರೆ. ಶಾಶ್ವತ ವೇದಗಳೂ ಇವನ್ನೇ ಹೇಳುತ್ತವೆ.
12008029a ಅಧೀಯಂತೇ ತಪಸ್ಯಂತಿ ಯಜಂತೇ ಯಾಜಯಂತಿ ಚ|
12008029c ಕೃತ್ಸ್ನಂ ತದೇವ ಚ ಶ್ರೇಯೋ ಯದಪ್ಯಾದದತೇಽನ್ಯತಃ||
ಧನದಿಂದಲೇ ಬ್ರಾಹ್ಮಣರು ಅಧ್ಯಯನಮಾಡುತ್ತಾರೆ. ತಪಸ್ಸನ್ನಾಚರಿಸುತ್ತಾರೆ. ಯಜ್ಞಮಾಡುತ್ತಾರೆ ಮತ್ತು ಮಾಡಿಸುತ್ತಾರೆ. ಇವೆಲ್ಲವೂ ಮತ್ತು ಶ್ರೇಯಸ್ಸೂ ಧನದಿಂದಲೇ ದೊರೆಯುತ್ತದೆ. ಬೇರೆಯಾವುದರಿಂದಲೂ ಅಲ್ಲ.
12008030a ನ ಪಶ್ಯಾಮೋಽನಪಹೃತಂ ಧನಂ ಕಿಂ ಚಿತ್ಕ್ವ ಚಿದ್ವಯಮ್|
12008030c ಏವಮೇವ ಹಿ ರಾಜಾನೋ ಜಯಂತಿ ಪೃಥಿವೀಮಿಮಾಮ್||
ಇನ್ನೊಬ್ಬನಿಂದ ಅಪಹರಿಸದೇ ಸಂಪಾದಿಸಿರುವ ಕಿಂಚಿತ್ತು ಧನವನ್ನೂ ನಾವು ಕಾಣುವುದಿಲ್ಲ. ಇದೇ ರೀತಿಯಲ್ಲಿ ರಾಜರು ಈ ಭೂಮಿಯನ್ನು ಜಯಿಸುತ್ತಾರೆ.
12008031a ಜಿತ್ವಾ ಮಮತ್ವಂ ಬ್ರುವತೇ ಪುತ್ರಾ ಇವ ಪಿತುರ್ಧನೇ|
12008031c ರಾಜರ್ಷಯೋ ಜಿತಸ್ವರ್ಗಾ ಧರ್ಮೋ ಹ್ಯೇಷಾಂ ನಿಗದ್ಯತೇ||
ಮಕ್ಕಳು ತಂದೆಯ ಆಸ್ತಿಯನ್ನು ತಮ್ಮದೆಂದೇ ಹೇಳಿಕೊಳ್ಳುವಂತೆ ಶತ್ರುವಿನಿಂದ ಗೆದ್ದ ಭೂಮಿಯನ್ನೂ ರಾಜರು ತಮ್ಮದೆಂದೇ ಹೇಳಿಕೊಳ್ಳುತ್ತಾರೆ. ಈ ರೀತಿ ಧರ್ಮಮಾರ್ಗದಲ್ಲಿ ನಡೆದು ರಾಜರ್ಷಿಗಳು ಸ್ವರ್ಗಗಳನ್ನು ಗೆದ್ದಿದ್ದಾರೆ.
12008032a ಯಥೈವ ಪೂರ್ಣಾದುದಧೇಃ ಸ್ಯಂದಂತ್ಯಾಪೋ ದಿಶೋ ದಶ|
12008032c ಏವಂ ರಾಜಕುಲಾದ್ವಿತ್ತಂ ಪೃಥಿವೀಂ ಪ್ರತಿತಿಷ್ಠತಿ||
ಮೋಡಗಳ ಮೂಲಕ ಸಮುದ್ರದ ನೀರು ಹತ್ತು ದಿಕ್ಕುಗಳಿಗೂ ಪಸರಿಸುವಂತೆ ರಾಜಕುಲದಿಂದ ವಿತ್ತವು ಪೃಥ್ವಿಯಲ್ಲಿ ಪಸರಿಸಿಕೊಳ್ಳುತ್ತದೆ.
12008033a ಆಸೀದಿಯಂ ದಿಲೀಪಸ್ಯ ನೃಗಸ್ಯ ನಹುಷಸ್ಯ ಚ|
12008033c ಅಂಬರೀಷಸ್ಯ ಮಾಂಧಾತುಃ ಪೃಥಿವೀ ಸಾ ತ್ವಯಿ ಸ್ಥಿತಾ||
ಈ ಪೃಥ್ವಿಯು ಹಿಂದೆ ದಿಲೀಪನದಾಗಿತ್ತು. ನೃಗ, ನಹುಷ, ಅಂಬರೀಷ ಮತ್ತು ಮಾಂಧಾತರದ್ದಾಗಿತ್ತು. ಅದೇ ಭೂಮಿಯು ಈಗ ನಿನ್ನನ್ನು ಅವಲಂಬಿಸಿದೆ.
12008034a ಸ ತ್ವಾಂ ದ್ರವ್ಯಮಯೋ ಯಜ್ಞಃ ಸಂಪ್ರಾಪ್ತಃ ಸರ್ವದಕ್ಷಿಣಃ|
12008034c ತಂ ಚೇನ್ನ ಯಜಸೇ ರಾಜನ್ಪ್ರಾಪ್ತಸ್ತ್ವಂ ದೇವಕಿಲ್ಬಿಷಮ್||
ರಾಜನ್! ಸರ್ವದಕ್ಷಿಣೆಗಳಿಂದ ಕೂಡಿದ ದ್ರವ್ಯಮಯ ಯಜ್ಞಗಳನ್ನು ನೀನು ಯಜಿಸದೇ ಇದ್ದರೆ ದೇವತೆಗಳಿಗೆಸಗುವ ಪಾಪವನ್ನು ಪಡೆದುಕೊಳ್ಳುವೆ.
12008035a ಯೇಷಾಂ ರಾಜಾಶ್ವಮೇಧೇನ ಯಜತೇ ದಕ್ಷಿಣಾವತಾ|
12008035c ಉಪೇತ್ಯ ತಸ್ಯಾವಭೃಥಂ ಪೂತಾಃ ಸರ್ವೇ ಭವಂತಿ ತೇ||
ರಾಜನು ದಕ್ಷಿಣೆಗಳಿಂದ ಕೂಡಿದ ಅಶ್ವಮೇಧಯಜ್ಞವನ್ನು ಯಜಿಸಿದರೆ ಅದರ ಅವಭೃಥಕ್ಕೆ ಸೇರಿದ ಎಲ್ಲರೂ ಪವಿತ್ರರಾಗುತ್ತಾರೆ.
12008036a ವಿಶ್ವರೂಪೋ ಮಹಾದೇವಃ ಸರ್ವಮೇಧೇ ಮಹಾಮಖೇ|
12008036c ಜುಹಾವ ಸರ್ವಭೂತಾನಿ ತಥೈವಾತ್ಮಾನಮಾತ್ಮನಾ||
ವಿಶ್ವರೂಪೀ ಮಹಾದೇವನು ಸರ್ವಮೇಧವೆಂಬ ಮಹಾ ಯಜ್ಞದಲ್ಲಿ ಸರ್ವಭೂತಗಳನ್ನೂ ಆಹುತಿಯನ್ನಾಗಿತ್ತು ಅತ್ಮಾರ್ಪಣೆಯನ್ನೂ ಮಾಡಿಕೊಂಡನು.
12008037a ಶಾಶ್ವತೋಽಯಂ ಭೂತಿಪಥೋ ನಾಸ್ಯಾಂತಮನುಶುಶ್ರುಮ|
12008037c ಮಹಾನ್ದಾಶರಥಃ ಪಂಥಾ[1] ಮಾ ರಾಜನ್ಕಾಪಥಂ ಗಮಃ||
ರಾಜನ್! ಇದೊಂದು ಶಾಶ್ವತ ಮಾರ್ಗವಾಗಿರುವುದು. ಇದು ಕೊನೆಗೊಂಡಿದುದರ ಕುರಿತು ನಾವು ಕೇಳೇ ಇಲ್ಲ. ಹತ್ತು ರಥಗಳುಳ್ಳ ಈ ಯಜ್ಞಗಳ ಮಹಾ ಮಾರ್ಗವನ್ನು ಬಿಟ್ಟು ಕೆಟ್ಟದಾರಿಯಲ್ಲಿ ಹೋಗಬೇಡ!”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಅರ್ಜುನವಾಕ್ಯೇ ಅಷ್ಠಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅರ್ಜುನ ವಾಕ್ಯ ಎನ್ನುವ ಎಂಟನೇ ಅಧ್ಯಾಯವು.
[1] ದಾಶರಥಃ ಪಂಥಾಃ ಎನ್ನುವುದಕ್ಕೆ ಹತ್ತು ರಥಗಳಿರುವ ಯಜ್ಞ ಎಂದು ವ್ಯಾಖ್ಯಾನಮಾಡಿರುತ್ತಾರೆ. ಈ ಹತ್ತು ರಥಗಳು – ಪಶು, ಪತ್ನಿ, ಯಜಮಾನ, ಋಗ್ಯಜುಸ್ಸಾಮವೆಂಬ ಮೂರು ವೇದಗಳು, ಮತ್ತು ನಾಲ್ವರು ಋತ್ವಿಜರು. ದಶರಥಾಶ್ಚ ಪ್ರಚರಂತಿ ಯಸ್ಮಿನ್ ಸಃ ದಶರಥಃ ಸ ಏವ ದಾಶರಥಃ||