ಶಾಂತಿ ಪರ್ವ: ರಾಜಧರ್ಮ ಪರ್ವ
೬೭
12067001 ಯುಧಿಷ್ಠಿರ ಉವಾಚ
12067001a ಚಾತುರಾಶ್ರಮ್ಯ ಉಕ್ತೋಽತ್ರ ಚಾತುರ್ವರ್ಣ್ಯಸ್ತಥೈವ ಚ|
12067001c ರಾಷ್ಟ್ರಸ್ಯ ಯತ್ಕೃತ್ಯತಮಂ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ನಾಲ್ಕು ಆಶ್ರಮಗಳ ಕುರಿತೂ ಮತ್ತು ನಾಲ್ಕು ವರ್ಣಗಳ ಕುರಿತೂ ನೀನು ಹೇಳಿದ್ದೀಯೆ. ಈಗ ರಾಷ್ಟ್ರದ ಮುಖ್ಯ ಕರ್ತವ್ಯವೇನೆಂದು ನನಗೆ ಹೇಳು.”
12067002 ಭೀಷ್ಮ ಉವಾಚ
12067002a ರಾಷ್ಟ್ರಸ್ಯೈತತ್ಕೃತ್ಯತಮಂ ರಾಜ್ಞ ಏವಾಭಿಷೇಚನಮ್|
12067002c ಅನಿಂದ್ರಮಬಲಂ ರಾಷ್ಟ್ರಂ ದಸ್ಯವೋಽಭಿಭವಂತಿ ಚ||
ಭೀಷ್ಮನು ಹೇಳಿದನು: “ರಾಜನನ್ನು ಅಭಿಷೇಕಿಸುವುದೇ ರಾಷ್ಟ್ರದ ಮುಖ್ಯ ಕರ್ತವ್ಯ. ರಾಜನಿಲ್ಲದ ರಾಷ್ಟ್ರವು ಬಲಹೀನವಾಗುತ್ತದೆ. ದಸ್ಯುಗಳ ವಶವಾಗುತ್ತದೆ.
12067003a ಅರಾಜಕೇಷು ರಾಷ್ಟ್ರೇಷು ಧರ್ಮೋ ನ ವ್ಯವತಿಷ್ಠತೇ|
12067003c ಪರಸ್ಪರಂ ಚ ಖಾದಂತಿ ಸರ್ವಥಾ ಧಿಗರಾಜಕಮ್||
ರಾಜನಿಲ್ಲದ ರಾಷ್ಟ್ರದಲ್ಲಿ ಧರ್ಮವು ಉಳಿಯುವುದಿಲ್ಲ. ಪರಸ್ಪರರನ್ನು ನುಂಗಿಹಾಕುತ್ತಾರೆ. ಅರಾಜಕತೆಯನ್ನು ಸರ್ವಥಾ ಧಿಕ್ಕರಿಸಬೇಕು.
12067004a ಇಂದ್ರಮೇನಂ ಪ್ರವೃಣುತೇ ಯದ್ರಾಜಾನಮಿತಿ ಶ್ರುತಿಃ|
12067004c ಯಥೈವೇಂದ್ರಸ್ತಥಾ ರಾಜಾ ಸಂಪೂಜ್ಯೋ ಭೂತಿಮಿಚ್ಚತಾ||
ಪ್ರಜೆಗಳು ರಾಜನನ್ನು ವರಣಮಾಡಿದಾಗ ಇಂದ್ರನನ್ನೇ ಅವರು ವರಣಮಾಡಿದಂತೆ ಎಂಬ ಶೃತಿವಾಕ್ಯವಿದೆ. ಆದುದರಿಂದ ಶ್ರೇಯಸ್ಸನ್ನು ಇಚ್ಛಿಸುವವರು ರಾಜನನ್ನು ಇಂದ್ರನೆಂದು ತಿಳಿದೇ ಪೂಜಿಸುತ್ತಾರೆ.
12067005a ನಾರಾಜಕೇಷು ರಾಷ್ಟ್ರೇಷು ವಸ್ತವ್ಯಮಿತಿ ವೈದಿಕಮ್|
12067005c ನಾರಾಜಕೇಷು ರಾಷ್ಟ್ರೇಷು ಹವ್ಯಮಗ್ನಿರ್ವಹತ್ಯಪಿ||
ರಾಜನಿಲ್ಲದ ರಾಷ್ಟ್ರದಲ್ಲಿ ವೈದಿಕ ಧರ್ಮವು ವಾಸಿಸುವುದಿಲ್ಲ. ರಾಜನಿಲ್ಲದ ರಾಷ್ಟ್ರದಲ್ಲಿ ಅಗ್ನಿಯು ಹವಿಸ್ಸುಗಳನ್ನು ಒಯ್ಯುವುದಿಲ್ಲ.
12067006a ಅಥ ಚೇದಭಿವರ್ತೇತ ರಾಜ್ಯಾರ್ಥೀ ಬಲವತ್ತರಃ|
12067006c ಅರಾಜಕಾನಿ ರಾಷ್ಟ್ರಾಣಿ ಹತರಾಜಾನಿ ವಾ ಪುನಃ||
12067007a ಪ್ರತ್ಯುದ್ಗಮ್ಯಾಭಿಪೂಜ್ಯಃ ಸ್ಯಾದೇತದತ್ರ ಸುಮಂತ್ರಿತಮ್|
12067007c ನ ಹಿ ಪಾಪಾತ್ಪಾಪತರಮಸ್ತಿ ಕಿಂ ಚಿದರಾಜಕಾತ್||
ರಾಜನಿಲ್ಲದಿರುವ ಅಥವಾ ರಾಜನು ಹತನಾಗಿರುವ ರಾಷ್ಟ್ರವನ್ನು ಬಲವತ್ತರ ರಾಜ್ಯಾರ್ಥಿಯು ಆಕ್ರಮಣಿಸಿದರೆ ಅವನನ್ನು ಪೂಜಿಸಿ ಸ್ವಾಗತಿಸುವುದೇ ರಾಷ್ಟ್ರದ ಜನರಿಗೆ ಉತ್ತಮವಾದುದು ಎಂಬ ಸಲಹೆಯಿದೆ. ಅರಾಜಕತೆಯ ಪಾಪಕ್ಕಿಂತ ಹೆಚ್ಚಿನ ಪಾಪವು ಇಲ್ಲ.
12067008a ಸ ಚೇತ್ಸಮನುಪಶ್ಯೇತ ಸಮಗ್ರಂ ಕುಶಲಂ ಭವೇತ್|
12067008c ಬಲವಾನ್ಹಿ ಪ್ರಕುಪಿತಃ ಕುರ್ಯಾನ್ನಿಃಶೇಷತಾಮಪಿ||
ಅವನು ಅವರನ್ನು ಒಳ್ಳೆಯದಾಗಿಯೇ ನೋಡಿಕೊಳ್ಳಬಹುದು. ಸಮಗ್ರವೂ ಕುಶಲವಾಗಬಹುದು. ಕೋಪಿಷ್ಠನಾದ ಬಲವಾನನು ರಾಷ್ಟ್ರವನ್ನು ನಿಃಶೇಷವನ್ನಾಗಿಯೂ ಮಾಡಬಹುದು.
12067009a ಭೂಯಾಂಸಂ ಲಭತೇ ಕ್ಲೇಶಂ ಯಾ ಗೌರ್ಭವತಿ ದುರ್ದುಹಾ|
12067009c ಸುದುಹಾ ಯಾ ತು ಭವತಿ ನೈವ ತಾಂ ಕ್ಲೇಶಯಂತ್ಯುತ||
ಸುಲಭವಾಗಿ ಹಾಲುಕೊಡದ ಗೋವನ್ನು ಬಹಳವಾಗಿ ಕಾಡಿಸಿ ಹಾಲುಕರೆಯುತ್ತಾರೆ. ಹಾಗೆಯೇ ಸುಲಭವಾಗಿ ಹಾಲುಕೊಡುವ ಗೋವನ್ನು ಯಾವ ರೀತಿಯಲ್ಲಿಯೂ ಕಾಡಿಸುವುದಿಲ್ಲ[1].
12067010a ಯದತಪ್ತಂ ಪ್ರಣಮತಿ ನ ತತ್ಸಂತಾಪಯಂತ್ಯುತ|
12067010c ಯಚ್ಚ ಸ್ವಯಂ ನತಂ ದಾರು ನ ತತ್ಸಂನಾಮಯಂತ್ಯಪಿ||
ಯಾವುದು ಕಾಯಿಸದೆಯೇ ಬಗ್ಗುವುದೋ ಅದನ್ನು ಕಾಯಿಸುವುದಿಲ್ಲ. ಸ್ವಯಂ ಬಗ್ಗಿರುವ ಕೋಲನ್ನು ಯಾರೂ ಪುನಃ ಬಗ್ಗಿಸಲು ಪ್ರಯತ್ನಿಸುವುದಿಲ್ಲ.
12067011a ಏತಯೋಪಮಯಾ ಧೀರಃ ಸಂನಮೇತ ಬಲೀಯಸೇ|
12067011c ಇಂದ್ರಾಯ ಸ ಪ್ರಣಮತೇ ನಮತೇ ಯೋ ಬಲೀಯಸೇ||
ಈ ಉಪಮೆಗಳಂತೆ ಬುದ್ಧಿವಂತನು ಬಲಿಷ್ಟನಾದವನಿಗೆ ಬಗ್ಗಿ ನಡೆಯಬೇಕು. ಬಲಿಷ್ಠನಿಗೆ ವಿನಮ್ರನಾಗಿರುವವನು ಇಂದ್ರನಿಗೆ ಪ್ರಮಾಣಮಾಡಿದಂತೆಯೇ ಆಗುತ್ತದೆ.
12067012a ತಸ್ಮಾದ್ರಾಜೈವ ಕರ್ತವ್ಯಃ ಸತತಂ ಭೂತಿಮಿಚ್ಚತಾ|
12067012c ನ ಧನಾರ್ಥೋ ನ ದಾರಾರ್ಥಸ್ತೇಷಾಂ ಯೇಷಾಮರಾಜಕಮ್||
ಆದುದರಿಂದ ಸತತವೂ ಏಳ್ಗೆಯನ್ನು ಬಯಸುವವರಿಗೆ ರಾಜನನ್ನು ಪಡೆಯುವುದೇ ಕರ್ತವ್ಯ. ರಾಜನಿಲ್ಲದಿರುವ ರಾಷ್ಟ್ರದವರಿಗೆ ತಮ್ಮ ಧನದಿಂದಾಗಲೀ ಪತ್ನಿಯಿಂದಾಗಲೀ ಯಾವ ಪ್ರಯೋಜನವೂ ಇರುವುದಿಲ್ಲ.
12067013a ಪ್ರೀಯತೇ ಹಿ ಹರನ್ಪಾಪಃ ಪರವಿತ್ತಮರಾಜಕೇ|
12067013c ಯದಾಸ್ಯ ಉದ್ಧರಂತ್ಯನ್ಯೇ ತದಾ ರಾಜಾನಮಿಚ್ಚತಿ||
ರಾಜನಿಲ್ಲದಿರುವ ದೇಶದಲ್ಲಿ ಪಾಪಿಗಳು ಪರವಿತ್ತವನ್ನು ಅಪಹರಿಸಿಯೇ ಸಂತೋಷದಿಂದಿರುತ್ತಾರೆ. ಆದರೆ ಅವನಿಗಿಂತಲೂ ಬಲಿಷ್ಠನು ಅದನ್ನು ಅವನಿಂದ ಕಸಿದುಕೊಳ್ಳಲು ಬಂದಾಗ ಅವನೂ ರಾಜನನ್ನೇ ಬಯಸುತ್ತಾನೆ.
12067014a ಪಾಪಾ ಅಪಿ ತದಾ ಕ್ಷೇಮಂ ನ ಲಭಂತೇ ಕದಾ ಚನ|
12067014c ಏಕಸ್ಯ ಹಿ ದ್ವೌ ಹರತೋ ದ್ವಯೋಶ್ಚ ಬಹವೋಽಪರೇ||
ರಾಜನಿಲ್ಲದ ದೇಶದಲ್ಲಿ ಪಾಪಿಗಳಿಗೂ ಕ್ಷೇಮವೆನ್ನುವುದಿರುವುದಿಲ್ಲ. ಒಬ್ಬನದ್ದನ್ನು ಇಬ್ಬರು ಅಪಹರಿಸುತ್ತಾರೆ. ಇಬ್ಬರದ್ದನ್ನು ಇನ್ನು ಅನೇಕರು ಸೇರಿ ಅಪಹರಿಸುತ್ತಾರೆ.
12067015a ಅದಾಸಃ ಕ್ರಿಯತೇ ದಾಸೋ ಹ್ರಿಯಂತೇ ಚ ಬಲಾತ್ಸ್ತ್ರಿಯಃ|
12067015c ಏತಸ್ಮಾತ್ಕಾರಣಾದ್ದೇವಾಃ ಪ್ರಜಾಪಾಲಾನ್ಪ್ರಚಕ್ರಿರೇ||
ದಾಸರಲ್ಲದವರನ್ನು ದಾಸರನ್ನಾಗಿ ಮಾಡಲಾಗುತ್ತದೆ. ಸ್ತ್ರೀಯರನ್ನು ಬಲಾತ್ಕಾರವಾಗಿ ಅಪಹರಿಸಲಾಗುತ್ತದೆ. ಈ ಕಾರಣಗಳಿಂದಲೇ ದೇವತೆಗಳು ಪ್ರಜಾಪಾಲಕರನ್ನು ಸೃಷ್ಟಿಸಿದರು.
12067016a ರಾಜಾ ಚೇನ್ನ ಭವೇಲ್ಲೋಕೇ ಪೃಥಿವ್ಯಾಂ ದಂಡಧಾರಕಃ|
12067016c ಶೂಲೇ ಮತ್ಸ್ಯಾನಿವಾಪಕ್ಷ್ಯನ್ದುರ್ಬಲಾನ್ಬಲವತ್ತರಾಃ||
ಈ ಲೋಕದಲ್ಲಿ ದಂಡಧಾರಕನಾದ ರಾಜನೆನ್ನುವನು ಇಲ್ಲದೇ ಹೋಗಿದ್ದರೆ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದುಹಾಕುವಂತೆ ಈ ಭೂಮಿಯಲ್ಲಿ ದುರ್ಬಲರನ್ನು ಬಲವಂತರು ನಾಶಪಡಿಸುತ್ತಿದ್ದರು.
12067017a ಅರಾಜಕಾಃ ಪ್ರಜಾಃ ಪೂರ್ವಂ ವಿನೇಶುರಿತಿ ನಃ ಶ್ರುತಮ್|
12067017c ಪರಸ್ಪರಂ ಭಕ್ಷಯಂತೋ ಮತ್ಸ್ಯಾ ಇವ ಜಲೇ ಕೃಶಾನ್||
ಹಿಂದೆ ಅರಾಜಕತೆಯಿಂದಾಗಿ ಪ್ರಜೆಗಳು ನೀರಿನಲ್ಲಿರುವ ಮೀನುಗಳಂತೆ ಪರಸ್ಪರ ದುರ್ಬಲರನ್ನು ತಿಂದು ನಾಶಹೊಂದಿದರೆಂದು ಕೇಳಿದ್ದೇವೆ.
12067018a ತಾಃ ಸಮೇತ್ಯ ತತಶ್ಚಕ್ರುಃ ಸಮಯಾನಿತಿ ನಃ ಶ್ರುತಮ್|
12067018c ವಾಕ್ಕ್ರೂರೋ ದಂಡಪುರುಷೋ ಯಶ್ಚ ಸ್ಯಾತ್ಪಾರದಾರಿಕಃ|
12067018e ಯಶ್ಚ ನ ಸ್ವಮಥಾದದ್ಯಾತ್ತ್ಯಾಜ್ಯಾ ನಸ್ತಾದೃಶಾ ಇತಿ||
ಆಗ ಅಳಿದುಳಿದವರು ಒಂದಾಗಿ ತಮ್ಮ ಒಳಿತಿಗಾಗಿ ಈ ನಿಯಮಗಳನ್ನು ಮಾಡಿಕೊಂಡರೆಂದು ಕೇಳಿದ್ದೇವೆ: “ನಮ್ಮಲ್ಲಿ ಯಾರು ಕ್ರೂರವಾಗಿ ಮಾತನಾಡುವವರೋ, ಅತ್ಯಂತ ಕಠೋರವಾಗಿ ಶಿಕ್ಷಿಸುವವರೋ, ಇತರರ ಸ್ತ್ರೀಯನ್ನು ಸೇರುವರೋ ಮತ್ತು ಪರರ ಸ್ವತ್ತನ್ನು ಅಪಹರಿಸುವರೋ ಅವರೆಲ್ಲರನ್ನೂ ಬಹಿಷ್ಕರಿಸೋಣ!”
12067019a ವಿಶ್ವಾಸನಾರ್ಥಂ ವರ್ಣಾನಾಂ ಸರ್ವೇಷಾಮವಿಶೇಷತಃ|
12067019c ತಾಸ್ತಥಾ ಸಮಯಂ ಕೃತ್ವಾ ಸಮಯೇ ನಾವತಸ್ಥಿರೇ||
ಹೀಗೆ ವಿಶ್ವಾಸಾರ್ಥವಾಗಿ ನಿಯಮಮಾಡಿಕೊಂಡು ಸರ್ವ ವರ್ಣದವರೂ ದುಷ್ಟರನ್ನು ದೂರಮಾಡಿ ಕೆಲವು ಸಮಯ ಸುಖದಿಂದಲೇ ಇದ್ದರು. ಆದರೆ ಆ ಒಪ್ಪಂದವು ಹೆಚ್ಚುಕಾಲ ನಿಲ್ಲಲಿಲ್ಲ.
12067020a ಸಹಿತಾಸ್ತಾಸ್ತದಾ ಜಗ್ಮುರಸುಖಾರ್ತಾಃ ಪಿತಾಮಹಮ್|
12067020c ಅನೀಶ್ವರಾ ವಿನಶ್ಯಾಮೋ ಭಗವನ್ನೀಶ್ವರಂ ದಿಶ||
12067021a ಯಂ ಪೂಜಯೇಮ ಸಂಭೂಯ ಯಶ್ಚ ನಃ ಪರಿಪಾಲಯೇತ್|
12067021c ತಾಭ್ಯೋ ಮನುಂ ವ್ಯಾದಿದೇಶ ಮನುರ್ನಾಭಿನನಂದ ತಾಃ||
ಆಗ ದುಃಖಪೀಡಿತರಾದ ಅವರು ಒಟ್ಟಿಗೇ ಪಿತಾಮಹನ ಬಳಿಹೋಗಿ ಹೇಳಿದರು: “ಭಗವನ್! ಒಡೆಯನಿಲ್ಲದೇ ನಾವು ವಿನಾಶಹೊಂದುತ್ತಿದ್ದೇವೆ. ಯಾರು ಶಾಸಮಾಡಲು ಸಮರ್ಥನೋ, ಯಾರನ್ನು ನಾವು ಪೂಜಿಸಬಲ್ಲೆವೋ ಯಾರು ನಮ್ಮನ್ನು ಪರಿಪಾಲಿಸುವವನೋ ಅಂಥಹ ರಾಜನನ್ನು ತೋರಿಸು!” ಆಗ ಭಗವಾನನು ಮನುವಿಗೆ ರಾಜನಾಗುವಂತೆ ನಿರ್ದೇಶಿಸಿದನು. ಆದರೆ ಮನುವು ಆ ಪ್ರಜೆಗಳನ್ನು ಸ್ವೀಕರಿಸಲಿಲ್ಲ.
12067022 ಮನುರುವಾಚ
12067022a ಬಿಭೇಮಿ ಕರ್ಮಣಃ ಕ್ರೂರಾದ್ರಾಜ್ಯಂ ಹಿ ಭೃಶದುಷ್ಕರಮ್|
12067022c ವಿಶೇಷತೋ ಮನುಷ್ಯೇಷು ಮಿಥ್ಯಾವೃತ್ತಿಷು ನಿತ್ಯದಾ||
ಮನುವು ಹೇಳಿದನು: “ಜನರು ಮಾಡುವ ಪಾಪಕರ್ಮಗಳ ವಿಷಯವಾಗಿ ನಾನು ಬಹಳ ಭಯಪಡುತ್ತೇನೆ. ರಾಜ್ಯಭಾರಮಾಡುವುದು ಅತ್ಯಂತ ಕಷ್ಟಕರವಾದುದು. ಅದರಲ್ಲಿಯೂ ನಿತ್ಯವೂ ಮಿಥ್ಯಾಚಾರದಲ್ಲಿ ತೊಡಗಿರುವ ಮನುಷ್ಯರ ಮೇಲೆ ಅಧಿಕಾರ ನಡೆಸುವುದು ಅತ್ಯಂತ ಕಠಿನವಾದುದು.””
12067023 ಭೀಷ್ಮ ಉವಾಚ
12067023a ತಮಬ್ರುವನ್ಪ್ರಜಾ ಮಾ ಭೈಃ ಕರ್ಮಣೈನೋ ಗಮಿಷ್ಯತಿ|
12067023c ಪಶೂನಾಮಧಿಪಂಚಾಶದ್ಧಿರಣ್ಯಸ್ಯ ತಥೈವ ಚ||
12067023e ಧಾನ್ಯಸ್ಯ ದಶಮಂ ಭಾಗಂ ದಾಸ್ಯಾಮಃ ಕೋಶವರ್ಧನಮ್||
ಭೀಷ್ಮನು ಹೇಳಿದನು: “ಆಗ ಪ್ರಜೆಗಳು ಅವನಿಗೆ ಹೇಳಿದರು: “ಹೆದರಬೇಡ! ಪಾಪಕರ್ಮಿಗಳ ಪಾಪವು ರಾಜನಿಗೆ ತಗಲುವುದಿಲ್ಲ. ನಿನ್ನ ಭಂಡಾರವನ್ನು ವೃದ್ಧಿಗೊಳಿಸಲು ಐವತ್ತರಲ್ಲಿ ಒಂದು ಹಸುವನ್ನೂ, ಐವತ್ತರಲ್ಲಿ ಒಂದು ಸುವರ್ಣ ನಾಣ್ಯವನ್ನೂ, ಧಾನ್ಯದ ಹತ್ತನೇ ಒಂದು ಭಾಗವನ್ನೂ ಕೊಡುತ್ತೇವೆ.
[2]12067024a ಮುಖ್ಯೇನ ಶಸ್ತ್ರಪತ್ರೇಣ ಯೇ ಮನುಷ್ಯಾಃ ಪ್ರಧಾನತಃ|
12067024c ಭವಂತಂ ತೇಽನುಯಾಸ್ಯಂತಿ ಮಹೇಂದ್ರಮಿವ ದೇವತಾಃ||
ಮಹೇಂದ್ರನನ್ನು ದೇವತೆಗಳು ಹೇಗೋ ಹಾಗೆ ಪ್ರಧಾನ ಪುರುಷರು ಪ್ರಮುಖ ಶಸ್ತ್ರಗಳನ್ನು ಹಿಡಿದು ನಿನ್ನನ್ನು ಅನುಸರಿಸಿ ಬರುತ್ತಾರೆ.
12067025a ಸ ತ್ವಂ ಜಾತಬಲೋ ರಾಜನ್ದುಷ್ಪ್ರಧರ್ಷಃ ಪ್ರತಾಪವಾನ್|
12067025c ಸುಖೇ ಧಾಸ್ಯಸಿ ನಃ ಸರ್ವಾನ್ಕುಬೇರ ಇವ ನೈರೃತಾನ್||
ರಾಜನ್! ಹೀಗೆ ಬಲಶಾಲಿಯೂ, ಪ್ರತಾಪವಂತನೂ, ಅನ್ಯರಿಗೆ ಎದುರಿಸಲು ಅಸಾಧ್ಯನೂ ಆಗಿ ನೀನು ನೈರೃತರನ್ನು ಕುಬೇರನು ಹೇಗೋ ಹಾಗೆ ನಮ್ಮೆಲ್ಲರನ್ನೂ ಸುಖವಾಗಿ ರಕ್ಷಿಸುತ್ತೀಯೆ.
12067026a ಯಂ ಚ ಧರ್ಮಂ ಚರಿಷ್ಯಂತಿ ಪ್ರಜಾ ರಾಜ್ಞಾ ಸುರಕ್ಷಿತಾಃ|
12067026c ಚತುರ್ಥಂ ತಸ್ಯ ಧರ್ಮಸ್ಯ ತ್ವತ್ಸಂಸ್ಥಂ ನೋ ಭವಿಷ್ಯತಿ||
ರಾಜನಿಂದ ಸುರಕ್ಷಿತರಾದ ಪ್ರಜೆಗಳು ಎಷ್ಟು ಧರ್ಮದಲ್ಲಿ ನಡೆದುಕೊಳ್ಳುತ್ತಾರೋ ಆ ಧರ್ಮದ ನಾಲ್ಕನೆಯ ಒಂದು ಭಾಗವು ನಿನ್ನ ಪಾಲಾಗುತ್ತದೆ.
12067027a ತೇನ ಧರ್ಮೇಣ ಮಹತಾ ಸುಖಲಬ್ಧೇನ ಭಾವಿತಃ|
12067027c ಪಾಹ್ಯಸ್ಮಾನ್ಸರ್ವತೋ ರಾಜನ್ದೇವಾನಿವ ಶತಕ್ರತುಃ||
ರಾಜನ್! ಸುಖವಾಗಿ ಲಬ್ಧವಾಗುವ ಆ ಮಹಾ ಧರ್ಮದಿಂದ ಭಾವಿತನಾಗಿ ದೇವತೆಗಳನ್ನು ಶತುಕ್ರತುವು ಹೇಗೋ ಹಾಗೆ ನಮ್ಮನ್ನು ಸರ್ವತಃ ರಕ್ಷಿಸು.
12067028a ವಿಜಯಾಯಾಶು ನಿರ್ಯಾಹಿ ಪ್ರತಪನ್ರಶ್ಮಿಮಾನಿವ|
12067028c ಮಾನಂ ವಿಧಮ ಶತ್ರೂಣಾಂ ಧರ್ಮೋ ಜಯತು ನಃ ಸದಾ||
ಸೂರ್ಯನಂತೆ ಶತ್ರುಗಳನ್ನು ಸುಡುತ್ತಾ ವಿಜಯಯಾತ್ರೆಗೆ ಹೊರಡು. ಶತ್ರುಗಳ ಮಾನವನ್ನು ಒಡೆದುಹಾಕು. ಸದಾ ಧರ್ಮವು ಜಯಿಸಲಿ!”
12067029a ಸ ನಿರ್ಯಯೌ ಮಹಾತೇಜಾ ಬಲೇನ ಮಹತಾ ವೃತಃ|
12067029c ಮಹಾಭಿಜನಸಂಪನ್ನಸ್ತೇಜಸಾ ಪ್ರಜ್ವಲನ್ನಿವ||
ಆಗ ಅವನು ಮಹಾತೇಜಸ್ಸಿನಿಂದ ಮಹಾ ಸೇನೆಯಿಂದ ಸುತ್ತುವರೆಯಲ್ಪಟ್ಟು ಮಹಾಭಿಜನಸಂಪನ್ನನಾಗಿ ತೇಜಸ್ಸಿನಿಂದ ಪ್ರಜ್ವಲಿಸುತ್ತಾ ಹೊರಟನು.
12067030a ತಸ್ಯ ತಾಂ ಮಹಿಮಾಂ ದೃಷ್ಟ್ವಾ ಮಹೇಂದ್ರಸ್ಯೇವ ದೇವತಾಃ|
12067030c ಅಪತತ್ರಸಿರೇ ಸರ್ವೇ ಸ್ವಧರ್ಮೇ ಚ ದಧುರ್ಮನಃ||
ಮಹೇಂದ್ರನ ಮಹಿಮೆಯನ್ನು ನೋಡಿ ದೇವತೆಗಳು ಹೇಗೋ ಹಾಗೆ ಅವನ ಆ ಮಹಿಮೆಯನ್ನು ನೋಡಿ ಬೆದರಿ ಸರ್ವರೂ ಸ್ವಧರ್ಮದಲ್ಲಿ ನಿರತರಾಗಿರಲು ನಿಶ್ಚಯಿಸಿದರು.
12067031a ತತೋ ಮಹೀಂ ಪರಿಯಯೌ ಪರ್ಜನ್ಯ ಇವ ವೃಷ್ಟಿಮಾನ್|
12067031c ಶಮಯನ್ಸರ್ವತಃ ಪಾಪಾನ್ಸ್ವಕರ್ಮಸು ಚ ಯೋಜಯನ್||
ಬಳಿಕ ಮನುವು ಮಳೆಗರೆಯುವ ಮೇಘದಂತೆ ಪಾಪಿಗಳನ್ನು ಉಪಶಮನಗೊಳಿಸುತ್ತಾ, ಎಲ್ಲಕಡೆ ಎಲ್ಲರನ್ನೂ ಸ್ವಕರ್ಮದಲ್ಲಿ ತೊಡಗಿಸುತ್ತಾ ಇಡೀ ಭೂಮಿಯಲ್ಲಿ ಸಂಚರಿಸಿದನು.
12067032a ಏವಂ ಯೇ ಭೂತಿಮಿಚ್ಚೇಯುಃ ಪೃಥಿವ್ಯಾಂ ಮಾನವಾಃ ಕ್ವ ಚಿತ್|
12067032c ಕುರ್ಯೂ ರಾಜಾನಮೇವಾಗ್ರೇ ಪ್ರಜಾನುಗ್ರಹಕಾರಣಾತ್||
ಹೀಗೆ ಭೂಮಿಯಲ್ಲಿ ಅಭಿವೃದ್ಧಿಯನ್ನು ಬಯಸುವ ಮಾನವರು ಎಲ್ಲಕ್ಕಿಂತಲೂ ಮೊದಲು ಪ್ರಜಾನುಗ್ರಹದ ಕಾರಣಕ್ಕಾಗಿ ರಾಜನನ್ನು ನಿಯೋಜಿಸಿಕೊಳ್ಳಬೇಕು.
12067033a ನಮಸ್ಯೇಯುಶ್ಚ ತಂ ಭಕ್ತ್ಯಾ ಶಿಷ್ಯಾ ಇವ ಗುರುಂ ಸದಾ|
12067033c ದೇವಾ ಇವ ಸಹಸ್ರಾಕ್ಷಂ ಪ್ರಜಾ ರಾಜಾನಮಂತಿಕೇ||
ಶಿಷ್ಯರು ಸದಾ ಗುರುವನ್ನು ಹೇಗೋ ಹಾಗೆ ಮತ್ತು ದೇವತೆಗಳು ಸಹಸ್ರಾಕ್ಷನನ್ನು ಹೇಗೋ ಹಾಗೆ ಪ್ರಜೆಗಳು ರಾಜನ ಬಳಿಸಾರಿ ನಮಸ್ಕರಿಸುತ್ತಾರೆ.
12067034a ಸತ್ಕೃತಂ ಸ್ವಜನೇನೇಹ ಪರೋಽಪಿ ಬಹು ಮನ್ಯತೇ|
12067034c ಸ್ವಜನೇನ ತ್ವವಜ್ಞಾತಂ ಪರೇ ಪರಿಭವಂತ್ಯುತ||
ಸ್ವಜನರಿಂದ ಸತ್ಕೃತನಾದವನನ್ನು ಇತರರೂ ಕೂಡ ಗೌರವಿಸುತ್ತಾರೆ. ಸ್ವಜನರಿಂದಲೇ ತಿರಸ್ಕೃತನಾದವನನ್ನು ಇತರರೂ ಅನಾದರಿಸುತ್ತಾರೆ.
12067035a ರಾಜ್ಞಃ ಪರೈಃ ಪರಿಭವಃ ಸರ್ವೇಷಾಮಸುಖಾವಹಃ|
12067035c ತಸ್ಮಾಚ್ಚತ್ರಂ ಚ ಪತ್ರಂ ಚ ವಾಸಾಂಸ್ಯಾಭರಣಾನಿ ಚ||
12067036a ಭೋಜನಾನ್ಯಥ ಪಾನಾನಿ ರಾಜ್ಞೇ ದದ್ಯುರ್ಗೃಹಾಣಿ ಚ|
12067036c ಆಸನಾನಿ ಚ ಶಯ್ಯಾಶ್ಚ ಸರ್ವೋಪಕರಣಾನಿ ಚ||
ಶತ್ರುಗಳಿಂದ ಪರಾಜಿತನಾದ ರಾಜನು ಸರ್ವರಿಗೂ ಅಸುಖವನ್ನು ತರುತ್ತಾನೆ. ಆದುದರಿಂದ ರಾಜನಿಗೆ ಚತ್ರ, ವಾಹನ, ವಸ್ತ್ರಗಳು, ಆಭರಣಗಳು, ಭೋಜನ, ಅನ್ಯ ಪಾನೀಯಗಳು ಮತ್ತು ಗೃಹಗಳನ್ನು ನೀಡಬೇಕು.
12067037a ಗುಪ್ತಾತ್ಮಾ ಸ್ಯಾದ್ದುರಾಧರ್ಷಃ ಸ್ಮಿತಪೂರ್ವಾಭಿಭಾಷಿತಾ|
12067037c ಆಭಾಷಿತಶ್ಚ ಮಧುರಂ ಪ್ರತಿಭಾಷೇತ ಮಾನವಾನ್||
ಹೀಗೆ ಪ್ರಜೆಗಳಿಂದ ರಕ್ಷಿತನಾದ ರಾಜನು ಇತರರಿಗೆ ದುರಾಧರ್ಷನಾಗುತ್ತಾನೆ. ನಗುಮುಖದಿಂದಲೇ ಪ್ರಜೆಗಳೊಂದಿಗೆ ಮಾತನಾಡುತ್ತಾನೆ. ರಾಜನಾದವನು ಪ್ರಜೆಗಳಿಗೆ ಮಧುರ ಮಾತುಗಳಿಂದಲೇ ಉತ್ತರಿಸಬೇಕು.
12067038a ಕೃತಜ್ಞೋ ದೃಢಭಕ್ತಿಃ ಸ್ಯಾತ್ಸಂವಿಭಾಗೀ ಜಿತೇಂದ್ರಿಯಃ|
12067038c ಈಕ್ಷಿತಃ ಪ್ರತಿವೀಕ್ಷೇತ ಮೃದು ಚರ್ಜು ಚ ವಲ್ಗು ಚ||
ರಾಜನಾದವನು ಪ್ರಜೆಗಳಿಗೆ ಕೃತಜ್ಞನಾಗಿರಬೇಕು. ಪ್ರಜೆಗಳಲ್ಲಿ ದೃಢ ಭಕ್ತಿಯನ್ನಿಟ್ಟುಕೊಂಡಿರಬೇಕು. ಅವರೊಂದಿಗೆ ಹಂಚಿಕೊಳ್ಳಬೇಕು. ಜಿತೇಂದ್ರಿಯನಾಗಿರಬೇಕು. ತನ್ನ ಕಡೆ ನೋಡುವವರನ್ನು ತಾನೂ ನೋಡಬೇಕು. ಮೃದುವಾಗಿರಬೇಕು. ಮಾಧುರ್ಯದಿಂದ ಮತ್ತು ಸರಳತೆಯಿಂದ ಮಾತನಾಡಬೇಕು.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ರಾಷ್ಟ್ರೇರಾಜಕರಣಾವಶ್ಯಕಸ್ಯಕಥನೇ ಸಪ್ತಷಷ್ಠಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ರಾಷ್ಟ್ರದಲ್ಲಿ ರಾಜನನ್ನು ಮಾಡಿಕೊಳ್ಳುವ ಅವಶ್ಯಕತೆಯ ಕಥನ ಎನ್ನುವ ಅರವತ್ತೇಳನೇ ಅಧ್ಯಾಯವು.
[1] ಪ್ರಜೆಗಳು ವಿನಮ್ರರಾಗಿದ್ದರೆ ಸುಖವಾಗಿರುತ್ತಾರೆ.
[2] ಭಾರತ ದರ್ಶನದಲ್ಲಿ ಈ ಶ್ಲೋಕದ ಮೊದಲು ಇನ್ನೊಂದು ಶ್ಲೋಕಾರ್ಧವಿದೆ: ಕನ್ಯಾಂ ಶುಲ್ಕೇ ಚಾರುರೂಪಾಂ ವಿವಾಹೇಷೂದ್ಯತಾಸು ಚ| ಅರ್ಥಾತ್: ವಿವಾಹಯೋಗ್ಯ ಕನ್ಯೆಯರಲ್ಲಿ ಅತಿಸುಂದರಿಯಾಗಿರುವವಳನ್ನು ನಿನಗೆ ಶುಲ್ಕವಾಗಿ ಕೊಡುತ್ತೇವೆ.