ಶಾಂತಿ ಪರ್ವ: ರಾಜಧರ್ಮ ಪರ್ವ
೬೧
ಆಶ್ರಮ ಧರ್ಮಗಳು
12061001 ಭೀಷ್ಮ ಉವಾಚ
12061001a ಆಶ್ರಮಾಣಾಂ ಮಹಾಬಾಹೋ ಶೃಣು ಸತ್ಯಪರಾಕ್ರಮ|
12061001c ಚತುರ್ಣಾಮಿಹ ವರ್ಣಾನಾಂ ಕರ್ಮಾಣಿ ಚ ಯುಧಿಷ್ಠಿರ||
ಭೀಷ್ಮನು ಹೇಳಿದನು: “ಸತ್ಯಪರಾಕ್ರಮಿ! ಮಹಾಬಾಹೋ! ಯುಧಿಷ್ಠಿರ! ನಾಲ್ಕು ಆಶ್ರಮಗಳು ಮತ್ತು ಅವುಗಳಲ್ಲಿ ನಾಲ್ಕು ವರ್ಣದವರ ಕರ್ಮಗಳು ಏನು ಎನ್ನುವುದನ್ನು ಕೇಳು!
12061002a ವಾನಪ್ರಸ್ಥಂ ಭೈಕ್ಷಚರ್ಯಾಂ ಗಾರ್ಹಸ್ಥ್ಯಂ ಚ ಮಹಾಶ್ರಮಮ್|
12061002c ಬ್ರಹ್ಮಚರ್ಯಾಶ್ರಮಂ ಪ್ರಾಹುಶ್ಚತುರ್ಥಂ ಬ್ರಾಹ್ಮಣೈರ್ವೃತಮ್||
ಬ್ರಹ್ಮಚರ್ಯ, ಮಹಾಶ್ರಮ ಗಾರ್ಹಸ್ಥ್ಯ, ವಾನಪ್ರಸ್ಥ, ಮತ್ತು ಭೈಕ್ಷಚರ್ಯಗಳೆಂಬ ನಾಲ್ಕು ಆಶ್ರಮಗಳಿವೆ. ನಾಲ್ಕನೆಯದನ್ನು ಕೇವಲ ಬ್ರಾಹ್ಮಣರು ನಡೆಸುವಂಥದ್ದಾಗಿದೆ.
12061003a ಜಟಾಕರಣಸಂಸ್ಕಾರಂ ದ್ವಿಜಾತಿತ್ವಮವಾಪ್ಯ ಚ|
12061003c ಆಧಾನಾದೀನಿ ಕರ್ಮಾಣಿ ಪ್ರಾಪ್ಯ ವೇದಮಧೀತ್ಯ ಚ||
12061004a ಸದಾರೋ ವಾಪ್ಯದಾರೋ ವಾ ಆತ್ಮವಾನ್ಸಂಯತೇಂದ್ರಿಯಃ|
12061004c ವಾನಪ್ರಸ್ಥಾಶ್ರಮಂ ಗಚ್ಚೇತ್ಕೃತಕೃತ್ಯೋ ಗೃಹಾಶ್ರಮಾತ್||
ಜಟಾಕರಣಸಂಸ್ಕಾರ ಮತ್ತು ದ್ವಿಜಾತಿತ್ವವನ್ನು ಪಡೆದು, ವೇದಗಳನ್ನು ತಿಳಿದುಕೊಂಡು, ಅಧಾನಾದಿಕರ್ಮಗಳನ್ನು[1] ಮುಗಿಸಿ, ಗೃಹಸ್ಥಾಶ್ರಮದಲ್ಲಿ ಕೃತಕೃತ್ಯನಾಗಿ, ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಪತ್ನಿಯೊಡನೆ ಅಥವಾ ಪತ್ನಿಯಿಲ್ಲದೇ ತಾನೊಬ್ಬನೇ ವಾನಪ್ರಸ್ಥಾಶ್ರಮಕ್ಕೆ ತೆರಳಬೇಕು.
12061005a ತತ್ರಾರಣ್ಯಕಶಾಸ್ತ್ರಾಣಿ ಸಮಧೀತ್ಯ ಸ ಧರ್ಮವಿತ್|
12061005c ಊರ್ಧ್ವರೇತಾಃ ಪ್ರಜಾಯಿತ್ವಾ ಗಚ್ಚತ್ಯಕ್ಷರಸಾತ್ಮತಾಮ್||
ಧರ್ಮವಿದನಾದ ಅವನು ಅಲ್ಲಿ ಅರಣ್ಯಕಶಾಸ್ತ್ರಗಳನ್ನು ಚೆನ್ನಾಗಿ ತಿಳಿದುಕೊಂಡು ಊರ್ಧ್ವರೇತಸ್ಕನಾಗಿದ್ದುಕೊಂಡು ಆತ್ಮನಲ್ಲಿ ಅವಿನಾಶೀ ಬ್ರಹ್ಮಸ್ವಭಾವವನ್ನು ಹೊಂದುವನು.
12061006a ಏತಾನ್ಯೇವ ನಿಮಿತ್ತಾನಿ ಮುನೀನಾಮೂರ್ಧ್ವರೇತಸಾಮ್|
12061006c ಕರ್ತವ್ಯಾನೀಹ ವಿಪ್ರೇಣ ರಾಜನ್ನಾದೌ ವಿಪಶ್ಚಿತಾ||
ರಾಜನ್! ಇವೇ ಊರ್ಧ್ವರೇತಸ ಮುನಿಗಳ ಲಕ್ಷಣಗಳು. ಇವುಗಳು ವಿಪ್ರನು ತಪ್ಪದೇ ಮಾಡುವ ಕರ್ತವ್ಯಗಳು ಕೂಡ.
12061007a ಚರಿತಬ್ರಹ್ಮಚರ್ಯಸ್ಯ ಬ್ರಾಹ್ಮಣಸ್ಯ ವಿಶಾಂ ಪತೇ|
12061007c ಭೈಕ್ಷಚರ್ಯಾಸ್ವಧೀಕಾರಃ ಪ್ರಶಸ್ತ ಇಹ ಮೋಕ್ಷಿಣಃ||
ವಿಶಾಂಪತೇ! ಬ್ರಹ್ಮಚರ್ಯದಲ್ಲಿದ್ದ ಬ್ರಾಹ್ಮಣನು ಮೋಕ್ಷವನ್ನು ಬಯಸಿದರೆ ಅವನಿಗೆ ಭೈಕ್ಷಚರ್ಯೆಯನ್ನು ಸ್ವೀಕರಿಸುವ ಅಧಿಕಾರವಿದೆ.
12061008a ಯತ್ರಾಸ್ತಮಿತಶಾಯೀ ಸ್ಯಾನ್ನಿರಗ್ನಿರನಿಕೇತನಃ|
12061008c ಯಥೋಪಲಬ್ಧಜೀವೀ ಸ್ಯಾನ್ಮುನಿರ್ದಾಂತೋ ಜಿತೇಂದ್ರಿಯಃ||
ಮುನಿಯು ಜಿತೇಂದ್ರಿಯನಾಗಿರಬೇಕು. ಆಸೆಗಳನ್ನಿಟ್ಟುಕೊಂಡಿರಬಾರದು. ಮಠ-ಕುಟೀರಗಳ್ಯಾವುವೂ ಇರಬಾರದು. ಯಾವಾಗಲೂ ಸಂಚಾರಮಾಡುತ್ತಲೇ ಇರಬೇಕು. ಸಾಯಂಕಾಲವು ಎಲ್ಲಿ ಆಗುತ್ತದೆಯೋ ಅಲ್ಲಿ ತಂಗಬೇಕು. ದೈವೇಚ್ಛೆಯಿಂದ ಯಾವ ಆಹಾರವು ಎಷ್ಟು ಲಭ್ಯವಾಗುವುದೋ ಅಷ್ಟನ್ನೇ ತಿಂದು ಜೀವನಿರ್ವಹಿಸಬೇಕು.
12061009a ನಿರಾಶೀಃ ಸ್ಯಾತ್ಸರ್ವಸಮೋ ನಿರ್ಭೋಗೋ ನಿರ್ವಿಕಾರವಾನ್|
12061009c ವಿಪ್ರಃ ಕ್ಷೇಮಾಶ್ರಮಂ ಪ್ರಾಪ್ತೋ ಗಚ್ಚತ್ಯಕ್ಷರಸಾತ್ಮತಾಮ್||
ಆಶಾರಹಿತನಾಗಿದ್ದುಕೊಂಡು, ಸರ್ವವನ್ನೂ ಸಮನಾಗಿ ಕಾಣುತ್ತಾ, ನಿರ್ಭೋಗಿಯಾಗಿ, ನಿರ್ವಿಕಾರನಾಗಿ ವಿಪ್ರನು ಕ್ಷೇಮಾಶ್ರಮವನ್ನು ಪಡೆದು ಅವಿನಾಶಿ ಬ್ರಹ್ಮನೊಡನೆ ಏಕತೆಯನ್ನು ಹೊಂದುತ್ತಾನೆ.
12061010a ಅಧೀತ್ಯ ವೇದಾನ್ಕೃತಸರ್ವಕೃತ್ಯಃ
ಸಂತಾನಮುತ್ಪಾದ್ಯ ಸುಖಾನಿ ಭುಕ್ತ್ವಾ|
12061010c ಸಮಾಹಿತಃ ಪ್ರಚರೇದ್ದುಶ್ಚರಂ ತಂ
ಗಾರ್ಹಸ್ಥ್ಯಧರ್ಮಂ ಮುನಿಧರ್ಮದೃಷ್ಟಮ್||
ವೇದಗಳನ್ನು ಅಧ್ಯಯನ ಮಾಡಿ, ಸರ್ವ ಕರ್ತವ್ಯಗಳನ್ನೂ ಮಾಡಿ, ಸಂತಾನವನ್ನು ಪಡೆದು, ಸುಖಗಳನ್ನು ಭೋಗಿಸಿ, ಸಮಾಹಿತನಾಗಿ ಮುನಿಗಳು ಕಂಡ, ಪಾಲಿಸಲು ಕಷ್ಟಕರ ಧರ್ಮವಾದ ಗಾರ್ಹಸ್ಥ್ಯಧರ್ಮವನ್ನು ಪಾಲಿಸಬೇಕು.
12061011a ಸ್ವದಾರತುಷ್ಟ ಋತುಕಾಲಗಾಮೀ
ನಿಯೋಗಸೇವೀ ನಶಠೋ ನಜಿಹ್ಮಃ|
12061011c ಮಿತಾಶನೋ ದೇವಪರಃ ಕೃತಜ್ಞಃ
ಸತ್ಯೋ ಮೃದುಶ್ಚಾನೃಶಂಸಃ ಕ್ಷಮಾವಾನ್||
ಗೃಹಸ್ಥನು ತನ್ನ ಪತ್ನಿಯಲ್ಲಿಯೇ ತೃಪ್ತಿಯನ್ನು ಹೊಂದಬೇಕು. ಋತುಸಮಯದಲ್ಲಿ ಮಾತ್ರ ಪತ್ನಿಯೊಡನೆ ಸಮಾಗಮಿಸಬೇಕು. ಶಠನೂ ವಂಚಕನೂ ಆಗಿರದೇ ನಿತ್ಯವೂ ಯೋಗಿಯಾಗಿರಬೇಕು. ಮಿತಾಹಾರಿಯಾಗಿದ್ದುಕೊಂಡು ದೇವತಾರಾಧನೆಯಲ್ಲಿ ತತ್ಪರನಾಗಿರಬೇಕು. ಕೃತಜ್ಞನಾಗಿರಬೇಕು. ಸತ್ಯವಂತನೂ, ಮೃದುಸ್ವಭಾವದವನೂ, ದಯಾಳುವೂ ಮತ್ತು ಕ್ಷಮಾಶೀಲನೂ ಆಗಿರಬೇಕು.
12061012a ದಾಂತೋ ವಿಧೇಯೋ ಹವ್ಯಕವ್ಯೇಽಪ್ರಮತ್ತೋ
ಅನ್ನಸ್ಯ ದಾತಾ ಸತತಂ ದ್ವಿಜೇಭ್ಯಃ|
12061012c ಅಮತ್ಸರೀ ಸರ್ವಲಿಂಗಿಪ್ರದಾತಾ
ವೈತಾನನಿತ್ಯಶ್ಚ ಗೃಹಾಶ್ರಮೀ ಸ್ಯಾತ್||
ಗೃಹಸ್ಥಾಶ್ರಮಿಯು ಇಂದ್ರಿಯಗಳನ್ನು ನಿಗ್ರಹಿಸಿಕೊಂಡು, ವಿಧೇಯನೂ ಜಾಗರೂಕನೂ ಆಗಿ ಹವ್ಯ-ಕವ್ಯಗಳನ್ನು ಮಾಡಬೇಕು. ಸತತವೂ ದ್ವಿಜರಿಗೆ ಅನ್ನದಾತನಾಗಿರಬೇಕು. ಮಾತ್ಸರ್ಯವಿಲ್ಲದೇ ಸರ್ವವರ್ಣದವರಿಗೂ ನೀಡುವವನಾಗಿರಬೇಕು. ನಿತ್ಯವೂ ಯಜ್ಞ-ಯಾಗಾದಿಗಳಲ್ಲಿ ನಿರತನಾಗಿರಬೇಕು.
12061013a ಅಥಾತ್ರ ನಾರಾಯಣಗೀತಮಾಹುರ್
ಮಹರ್ಷಯಸ್ತಾತ ಮಹಾನುಭಾವಾಃ|
12061013c ಮಹಾರ್ಥಮತ್ಯರ್ಥತಪಃಪ್ರಯುಕ್ತಂ
ತದುಚ್ಯಮಾನಂ ಹಿ ಮಯಾ ನಿಬೋಧ||
ಮಗೂ! ಇದಕ್ಕೆ ಸಂಬಂಧಿಸಿದಂತೆ ಮಹಾನುಭಾವ ಮಹರ್ಷಿಗಳು ನಾರಾಯಣ ಗೀತೆಯನ್ನು ಉದಾಹರಿಸುತ್ತಾರೆ. ಮಹಾ ಅರ್ಥವುಳ್ಳ, ಬಹಳ ತಪಶ್ಚರಣೆಯಿಂದ ಪ್ರೇರಿತವಾದ ಅದನ್ನು ನಾನು ಹೇಳುತ್ತೇನೆ. ಕೇಳು.
12061014a ಸತ್ಯಾರ್ಜವಂ ಚಾತಿಥಿಪೂಜನಂ ಚ
ಧರ್ಮಸ್ತಥಾರ್ಥಶ್ಚ ರತಿಶ್ಚ ದಾರೇ|
12061014c ನಿಷೇವಿತವ್ಯಾನಿ ಸುಖಾನಿ ಲೋಕೇ
ಹ್ಯಸ್ಮಿನ್ಪರೇ ಚೈವ ಮತಂ ಮಮೈತತ್||
“ಸತ್ಯ, ಸರಳತೆ, ಅತಿಥಿಪೂಜನ, ಧರ್ಮ-ಅರ್ಥ ಮತ್ತು ಪತ್ನಿಯೊಂದಿಗೆ ರತಿಸುಖ – ಹೀಗೆ ಲೋಕಗಳಲ್ಲಿ ಸುಖಗಳನ್ನು ಅನುಭವಿಸುವವನು ಪರಲೋಕದಲ್ಲಿಯೂ ಸುಖವನ್ನು ಅನುಭವಿಸುವನೆಂದು ನನ್ನ ಅಭಿಪ್ರಾಯ!”
12061015a ಭರಣಂ ಪುತ್ರದಾರಾಣಾಂ ವೇದಾನಾಂ ಪಾರಣಂ ತಥಾ|
12061015c ಸತಾಂ ತಮಾಶ್ರಮಂ ಶ್ರೇಷ್ಠಂ ವದಂತಿ ಪರಮರ್ಷಯಃ||
ಪತ್ನಿ-ಪುತ್ರರ ಭರಣ-ಪೋಷಣೆ, ವೇದಗಳ ಪಾರಾಯಣ ಇವು ಗೃಹಸ್ಥಾಶ್ರಮವನ್ನು ಆಶ್ರಯಿಸಿರುವ ಸಾಧುಗಳ ಶ್ರೇಷ್ಠ ಕರ್ತವ್ಯಗಳೆಂದು ಪರಮ ಋಷಿಗಳು ಹೇಳುತ್ತಾರೆ.
12061016a ಏವಂ ಹಿ ಯೋ ಬ್ರಾಹ್ಮಣೋ ಯಜ್ಞಶೀಲೋ
ಗಾರ್ಹಸ್ಥ್ಯಮಧ್ಯಾವಸತೇ ಯಥಾವತ್|
12061016c ಗೃಹಸ್ಥವೃತ್ತಿಂ ಪ್ರವಿಶೋಧ್ಯ ಸಮ್ಯಕ್
ಸ್ವರ್ಗೇ ವಿಷುದ್ಧಂ ಫಲಮಾಪ್ನುತೇ ಸಃ||
ಹೀಗೆ ಯಾವ ಬ್ರಾಹ್ಮಣನು ಯಜ್ಞಶೀಲನಾಗಿ ಗಾರ್ಹಸ್ಥ್ಯಧರ್ಮದಲ್ಲಿದ್ದುಕೊಂಡು ಗೃಹಸ್ಥವೃತ್ತಿಯನ್ನು ಯಥಾವತ್ತಾಗಿ ಶುದ್ಧಿಗೊಳಿಸುವನೋ ಅವನು ಸ್ವರ್ಗಲೋಕದಲ್ಲಿಯೂ ವಿಶುದ್ಧ ಫಲವನ್ನು ಹೊಂದುತ್ತಾನೆ.
12061017a ತಸ್ಯ ದೇಹಪರಿತ್ಯಾಗಾದಿಷ್ಟಾಃ ಕಾಮಾಕ್ಷಯಾ ಮತಾಃ|
12061017c ಆನಂತ್ಯಾಯೋಪತಿಷ್ಠಂತಿ ಸರ್ವತೋಕ್ಷಿಶಿರೋಮುಖಾಃ||
ಅವನು ದೇಹಪರಿತ್ಯಾಗ ಮಾಡಿದಾಗ ಅವನ ಇಷ್ಟಕಾಮಗಳೆಲ್ಲವೂ ಅಕ್ಷಯವಾಗುತ್ತವೆ. ಆ ಕಾಮನೆಗಳು ಕಣ್ಣು-ಶಿರ-ಮುಖಗಳನ್ನು ಪಡೆದು ಅನಂತಕಾಲದವರೆಗೆ ಎಲ್ಲ ರೀತಿಯ ಸೇವೆಗಳನ್ನು ಮಾಡುತ್ತವೆ.
12061018a ಖಾದನ್ನೇಕೋ ಜಪನ್ನೇಕಃ ಸರ್ಪನ್ನೇಕೋ ಯುಧಿಷ್ಠಿರ|
12061018c ಏಕಸ್ಮಿನ್ನೇವ ಆಚಾರ್ಯೇ ಶುಶ್ರೂಷುರ್ಮಲಪಂಕವಾನ್||
ಯುಧಿಷ್ಠಿರ! ಕೆಸರು-ಕೊಳೆಗಳಿಂದ ಯುಕ್ತನಾದ ಬ್ರಹ್ಮಚಾರಿಯು ಏಕಾಂಗಿಯಾಗಿ ಊಟಮಾಡಬೇಕು. ಏಕಾಂಗಿಯಾಗಿ ಜಪವನ್ನಾಚರಿಸಬೇಕು. ಏಕಾಂಗಿಯಾಗಿ ಮಲಗಿಕೊಳ್ಳಬೇಕು. ಒಬ್ಬನನ್ನೇ ಆಚಾರ್ಯನನ್ನಾಗಿ ಆರಿಸಿಕೊಂಡು ಅವನ ಸೇವೆಯಲ್ಲಿಯೇ ಸದಾ ನಿರತನಾಗಿರಬೇಕು.
12061019a ಬ್ರಹ್ಮಚಾರೀ ವ್ರತೀ ನಿತ್ಯಂ ನಿತ್ಯಂ ದೀಕ್ಷಾಪರೋ ವಶೀ|
12061019c ಅವಿಚಾರ್ಯ ತಥಾ ವೇದಂ ಕೃತ್ಯಂ ಕುರ್ವನ್ವಸೇತ್ ಸದಾ||
ಬ್ರಹ್ಮಚಾರಿಯು ನಿತ್ಯವೂ ವ್ರತಿಯಾಗಿದ್ದು, ನಿತ್ಯವೂ ದೀಕ್ಷಾಪರನಾಗಿ ವೇದಾಧ್ಯಯವನ್ನು ಮಾಡುತ್ತಾ ಕರ್ತವ್ಯಕರ್ಮಗಳನ್ನೆಸಗುತ್ತಾ ಗುರುವಿನ ಮನೆಯಲ್ಲಿಯೇ ಸದಾ ವಾಸವಾಗಿರಬೇಕು.
12061020a ಶುಶ್ರೂಷಾಂ ಸತತಂ ಕುರ್ವನ್ಗುರೋಃ ಸಂಪ್ರಣಮೇತ ಚ|
12061020c ಷಟ್ಕರ್ಮಸ್ವನಿವೃತ್ತಶ್ಚ ನಪ್ರವೃತ್ತಶ್ಚ ಸರ್ವಶಃ||
ಗುರುವನ್ನು ನಮಸ್ಕರಿಸುತ್ತಾ ಸತತವೂ ಅವನ ಶುಶ್ರೂಷೆಯನ್ನು ಮಾಡುತ್ತಿರಬೇಕು. ಷಟ್ಕರ್ಮಗಳನ್ನು[2] ಬಿಡದೇ ಮಾಡುತ್ತಿರಬೇಕು. ಆದರೆ ಗುರುಶುಶ್ರೂಷೆಗೆ ವಿರೋಧವಾಗದಂತೆ ಯಾವಾಗಲೂ ಅವುಗಳಲ್ಲಿಯೇ ನಿರತನಾಗಿರಬಾರದು.
12061021a ನ ಚರತ್ಯಧಿಕಾರೇಣ ಸೇವಿತಂ ದ್ವಿಷತೋ ನ ಚ|
12061021c ಏಷೋಽಶ್ರಮಪದಸ್ತಾತ ಬ್ರಹ್ಮಚಾರಿಣ ಇಷ್ಯತೇ||
ಅಧಿಕಾರದಿಂದ ನಡೆದುಕೊಳ್ಳಬಾರದು. ದ್ವೇಷಿಗಳ ಸಹವಾಸ ಮಾಡಬಾರದು. ಮಗೂ! ಬ್ರಹ್ಮಚಾರಿ ಆಶ್ರಮಗಳಿಗೆ ಈ ಧರ್ಮವು ಹೇಳಲ್ಪಟ್ಟಿದೆ.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಚತುರಾಶ್ರಮಧರ್ಮಕಥನೇ ಏಕಷಷ್ಠಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಚತುರಾಶ್ರಮಧರ್ಮಕಥನ ಎನ್ನುವ ಅರವತ್ತೊಂದನೇ ಅಧ್ಯಾಯವು.
[1] ವಿವಾಹಿತನಾಗಿ ಔಪಸನಾಗ್ನಿಹೋಗ್ರವೈಶ್ವದೇವಾದಿಗಳನ್ನು ಮಾಡುವುದು.
[2] ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ ಮತ್ತು ಪ್ರತಿಗ್ರಹಗಳೇ ಷಟ್ಕರ್ಮಗಳು.