ಶಾಂತಿ ಪರ್ವ: ರಾಜಧರ್ಮ ಪರ್ವ
೪
ಸ್ವಯಂವರದಲ್ಲಿ ದುರ್ಯೋಧನನು ಕಲಿಂಗ ರಾಜಕುಮಾರಿಯನ್ನು ಬಲಾತ್ಕಾರವಾಗಿ ಎತ್ತಿಕೊಂಡು ಹೋದುದು (೧-೧೩). ಆಗ ಕರ್ಣನು ಆಕ್ರಮಣಿಸಿದ ರಾಜರನ್ನು ಸೋಲಿಸಿ, ದುರ್ಯೋಧನನನ್ನು ರಕ್ಷಿಸಿದುದು (೧೪-೨೧).
12004001 ನಾರದ ಉವಾಚ
12004001a ಕರ್ಣಸ್ತು ಸಮವಾಪ್ಯೈತದಸ್ತ್ರಂ ಭಾರ್ಗವನಂದನಾತ್|
12004001c ದುರ್ಯೋಧನೇನ ಸಹಿತೋ ಮುಮುದೇ ಭರತರ್ಷಭ||
ನಾರದನು ಹೇಳಿದನು: “ಭರತರ್ಷಭ! ಭಾರ್ಗವನಂದನನಿಂದ ಆ ಅಸ್ತ್ರವನ್ನು ಪಡೆದು ಕರ್ಣನು ದುರ್ಯೋಧನನೊಂದಿಗೆ ಆನಂದಿಸಿದನು.
12004002a ತತಃ ಕದಾ ಚಿದ್ರಾಜಾನಃ ಸಮಾಜಗ್ಮುಃ ಸ್ವಯಂವರೇ|
12004002c ಕಲಿಂಗವಿಷಯೇ ರಾಜನ್ರಾಜ್ಞಶ್ಚಿತ್ರಾಂಗದಸ್ಯ ಚ||
ರಾಜನ್! ಅನಂತರ ಒಮ್ಮೆ ಕಲಿಂಗದೇಶದ ರಾಜ ಚಿತ್ರಾಂಗದನಲ್ಲಿಗೆ ಸ್ವಯಂವರಕ್ಕೆಂದು ರಾಜರು ಬಂದು ಸೇರಿದರು.
12004003a ಶ್ರೀಮದ್ರಾಜಪುರಂ ನಾಮ ನಗರಂ ತತ್ರ ಭಾರತ|
12004003c ರಾಜಾನಃ ಶತಶಸ್ತತ್ರ ಕನ್ಯಾರ್ಥಂ ಸಮುಪಾಗಮನ್||
ಭಾರತ! ಆ ನಗರದ ಹೆಸರು ಶ್ರೀಮದ್ರಾಜಪುರವೆಂದಿತ್ತು. ಅಲ್ಲಿಗೆ ಕನ್ಯೆಗೋಸ್ಕರವಾಗಿ ನೂರಾರು ರಾಜರು ಆಗಮಿಸಿದರು.
12004004a ಶ್ರುತ್ವಾ ದುರ್ಯೋಧನಸ್ತತ್ರ ಸಮೇತಾನ್ಸರ್ವಪಾರ್ಥಿವಾನ್|
12004004c ರಥೇನ ಕಾಂಚನಾಂಗೇನ ಕರ್ಣೇನ ಸಹಿತೋ ಯಯೌ||
ಸರ್ವ ಪಾರ್ಥಿವರೂ ಅಲ್ಲಿ ಸೇರಿರುವರೆಂದು ಕೇಳಿದ ದುರ್ಯೋಧನನು ಕರ್ಣನೊಂದಿಗೆ ಕಾಂಚನ ರಥದಲ್ಲಿ ಕುಳಿತು ಹೋದನು.
12004005a ತತಃ ಸ್ವಯಂವರೇ ತಸ್ಮಿನ್ಸಂಪ್ರವೃತ್ತೇ ಮಹೋತ್ಸವೇ|
12004005c ಸಮಾಪೇತುರ್ನೃಪತಯಃ ಕನ್ಯಾರ್ಥೇ ನೃಪಸತ್ತಮ||
12004006a ಶಿಶುಪಾಲೋ ಜರಾಸಂಧೋ ಭೀಷ್ಮಕೋ ವಕ್ರ ಏವ ಚ|
12004006c ಕಪೋತರೋಮಾ ನೀಲಶ್ಚ ರುಕ್ಮೀ ಚ ದೃಢವಿಕ್ರಮಃ||
12004007a ಸೃಗಾಲಶ್ಚ ಮಹಾರಾಜ ಸ್ತ್ರೀರಾಜ್ಯಾಧಿಪತಿಶ್ಚ ಯಃ|
12004007c ಅಶೋಕಃ ಶತಧನ್ವಾ ಚ ಭೋಜೋ ವೀರಶ್ಚ ನಾಮತಃ||
ನೃಪಸತ್ತಮ! ನಡೆಯುತ್ತಿದ್ದ ಆ ಸ್ವಯಂವರ ಮಹೋತ್ಸವಕ್ಕೆ ಕನ್ಯೆಗಾಗಿ ಈ ಎಲ್ಲ ನೃಪತಿಯರು ಸೇರಿದ್ದರು: ಶಿಶುಪಾಲ, ಜರಾಸಂಧ, ಭೀಷ್ಮಕ, ವಕ್ರ, ಕಪೋತರೋಮ, ನೀಲ, ದೃಢವಿಕ್ರಮಿ ರುಕ್ಮಿ, ಸ್ತ್ರೀರಾಜ್ಯಾಧಿಪತಿ ಮಹಾರಾಜ ಸೃಗಾಲ, ಅಶೋಕ, ಶತಧನ್ವ, ಭೋಜ ಮತ್ತು ವೀರನೆನ್ನುವ ರಾಜ.
12004008a ಏತೇ ಚಾನ್ಯೇ ಚ ಬಹವೋ ದಕ್ಷಿಣಾಂ ದಿಶಮಾಶ್ರಿತಾಃ|
12004008c ಮ್ಲೇಚ್ಚಾಚಾರ್ಯಾಶ್ಚ ರಾಜಾನಃ ಪ್ರಾಚ್ಯೋದೀಚ್ಯಾಶ್ಚ ಭಾರತ||
ಭಾರತ! ಇವರಲ್ಲದೇ ಇನ್ನು ಇತರ ಅನೇಕ ದಕ್ಷಿಣದೇಶದವರು, ಮ್ಲೇಚ್ಛರು, ಆರ್ಯರು, ಪೂರ್ವೋತ್ತರ ದಿಕ್ಕಿನ ರಾಜರು ಬಂದಿದ್ದರು.
12004009a ಕಾಂಚನಾಂಗದಿನಃ ಸರ್ವೇ ಬದ್ಧಜಾಂಬೂನದಸ್ರಜಃ|
12004009c ಸರ್ವೇ ಭಾಸ್ವರದೇಹಾಶ್ಚ ವ್ಯಾಘ್ರಾ ಇವ ಮದೋತ್ಕಟಾಃ||
ಅವರೆಲ್ಲರೂ ಕಾಂಚನ ಅಂಗದಗಳನ್ನೂ, ಚಿನ್ನದ ಹಾರಗಳನ್ನೂ ಧರಿಸಿದ್ದರು. ಎಲ್ಲರ ದೇಹಗಳೂ ಕಾಂತಿಯುಕ್ತವಾಗಿದ್ದವು ಮತ್ತು ಎಲ್ಲರೂ ವ್ಯಾಘ್ರರಂತೆ ಮದೋತ್ಕಟರಾಗಿದ್ದರು.
12004010a ತತಃ ಸಮುಪವಿಷ್ಟೇಷು ತೇಷು ರಾಜಸು ಭಾರತ|
12004010c ವಿವೇಶ ರಂಗಂ ಸಾ ಕನ್ಯಾ ಧಾತ್ರೀವರ್ಷಧರಾನ್ವಿತಾ||
ಭಾರತ! ಆ ರಾಜರು ಕುಳಿತುಕೊಂಡಿರಲು ಕನ್ಯೆಯು ಅನೇಕ ಸೇವಕಿಯರಿಂದ ಸುತ್ತುವರೆಯಲ್ಪಟ್ಟು ರಂಗವನ್ನು ಪ್ರವೇಶಿಸಿದಳು.
12004011a ತತಃ ಸಂಶ್ರಾವ್ಯಮಾಣೇಷು ರಾಜ್ಞಾಂ ನಾಮಸು ಭಾರತ|
12004011c ಅತ್ಯಕ್ರಾಮದ್ಧಾರ್ತರಾಷ್ಟ್ರಂ ಸಾ ಕನ್ಯಾ ವರವರ್ಣಿನೀ||
ಭಾರತ! ರಾಜರ ಹೆಸರುಗಳನ್ನು ಹೇಳುತ್ತಿರುವಾಗ ಆ ವರವರ್ಣಿನೀ ಕನ್ಯೆಯು ಧಾರ್ತರಾಷ್ಟ್ರ ದುರ್ಯೋಧನನನ್ನು ದಾಟಿ ಮುಂದುವರೆದಳು.
12004012a ದುರ್ಯೋಧನಸ್ತು ಕೌರವ್ಯೋ ನಾಮರ್ಷಯತ ಲಂಘನಮ್|
12004012c ಪ್ರತ್ಯಷೇಧಚ್ಚ ತಾಂ ಕನ್ಯಾಮಸತ್ಕೃತ್ಯ ನರಾಧಿಪಾನ್||
ಆ ರೀತಿ ಅವಳು ತನ್ನನ್ನು ದಾಟಿಹೋದುದನ್ನು ಕೌರವ್ಯ ದುರ್ಯೋಧನನು ಸಹಿಸಿಕೊಳ್ಳಲಿಲ್ಲ. ಅಲ್ಲಿದ್ದ ನರಾಧಿಪರನ್ನು ಕಡೆಗಣಿಸಿ ಅವನು ಆ ಕನ್ಯೆಯನ್ನು ತಡೆದನು.
12004013a ಸ ವೀರ್ಯಮದಮತ್ತತ್ವಾದ್ಭೀಷ್ಮದ್ರೋಣಾವುಪಾಶ್ರಿತಃ|
12004013c ರಥಮಾರೋಪ್ಯ ತಾಂ ಕನ್ಯಾಮಾಜುಹಾವ ನರಾಧಿಪಾನ್||
12004014a ತಮನ್ವಯಾದ್ರಥೀ ಖಡ್ಗೀ ಭದ್ಧಗೋಧಾಂಗುಲಿತ್ರವಾನ್|
12004014c ಕರ್ಣಃ ಶಸ್ತ್ರಭೃತಾಂ ಶ್ರೇಷ್ಠಃ ಪೃಷ್ಠತಃ ಪುರುಷರ್ಷಭ||
ಭೀಷ್ಮ-ದ್ರೋಣರ ಆಶ್ರಯವನ್ನು ಪಡೆದಿದ್ದ ವೀರ್ಯಮದದಿಂದ ಮತ್ತನಾಗಿದ್ದ ಅವನು ಆ ಕನ್ಯೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಅಪಹರಿಸಿದನು. ಭರತರ್ಷಭ! ಆಗ ಗೋಧಾಂಗುಲಿಗಳನ್ನು ಕಟ್ಟಿಕೊಂಡು ಖಡ್ಗಧಾರಿಯಾಗಿ ರಥವೇರಿ ಶಸ್ತ್ರಭೃತರಲ್ಲಿ ಶ್ರೇಷ್ಠ ಕರ್ಣನು ಅವನನ್ನು ಅನುಸರಿಸಿ ಹೋದನು.
12004015a ತತೋ ವಿಮರ್ದಃ ಸುಮಹಾನ್ರಾಜ್ಞಾಮಾಸೀದ್ಯುಧಿಷ್ಠಿರ|
12004015c ಸಂನಹ್ಯತಾಂ ತನುತ್ರಾಣಿ ರಥಾನ್ಯೋಜಯತಾಮಪಿ||
ಯುಧಿಷ್ಠಿರ! ಆಗ ರಾಜರ ಮಹಾ ಯುದ್ಧವೇ ನಡೆಯಿತು. ಕುಪಿತರಾದ ರಾಜರು ಕವಚಗಳನ್ನು ಧರಿಸಿ ರಥಗಳನ್ನು ಸಿದ್ಧಗೊಳಿಸಿದರು.
12004016a ತೇಽಭ್ಯಧಾವಂತ ಸಂಕ್ರುದ್ಧಾಃ ಕರ್ಣದುರ್ಯೋಧನಾವುಭೌ|
12004016c ಶರವರ್ಷಾಣಿ ಮುಂಚಂತೋ ಮೇಘಾಃ ಪರ್ವತಯೋರಿವ||
ಮೇಘಗಳು ಪರ್ವತಗಳ ಮೇಲೆ ಹೇಗೋ ಹಾಗೆ ಸಂಕ್ರುದ್ಧರಾದ ಅವರು ಕರ್ಣ-ದುರ್ಯೋಧನರ ಮೇಲೆ ಶರವರ್ಷಗಳನ್ನು ಸುರಿಸಿದರು.
12004017a ಕರ್ಣಸ್ತೇಷಾಮಾಪತತಾಮೇಕೈಕೇನ ಕ್ಷುರೇಣ ಹ|
12004017c ಧನೂಂಷಿ ಸಶರಾವಾಪಾನ್ಯಪಾತಯತ ಭೂತಲೇ||
ಕರ್ಣನು ತನ್ನ ಮೇಲೆ ಬೀಳುತ್ತಿದ್ದ ಅವರ ಬಾಣಗಳನ್ನು ಒಂದೊಂದಾಗಿ ಕ್ಷುರದಿಂದ ಕತ್ತರಿಸಿ ಅವರ ಧನುಸ್ಸು-ಬತ್ತಳಿಕೆಗಳನ್ನೂ ಭೂಮಿಯ ಮೇಲೆ ಬೀಳಿಸಿದನು.
12004018a ತತೋ ವಿಧನುಷಃ ಕಾಂಶ್ಚಿತ್ಕಾಂಶ್ಚಿದುದ್ಯತಕಾರ್ಮುಕಾನ್|
12004018c ಕಾಂಶ್ಚಿದುದ್ವಹತೋ ಬಾಣಾನ್ರಥಶಕ್ತಿಗದಾಸ್ತಥಾ||
ಆಗ ಕೆಲವರು ಧನುಸ್ಸುಗಳನ್ನು ಕಳೆದುಕೊಂಡಿದ್ದರು. ಕೆಲವರು ಬಾಣಗಳಿಲ್ಲದೇ ಕೇವಲ ಧನುಸ್ಸುಗಳನ್ನು ಎತ್ತಿ ಹಿಡಿದಿದ್ದರು. ಕೆಲವರು ಬಾಣಗಳನ್ನೂ, ರಥ-ಶಕ್ತಿ-ಗದೆಗಳನ್ನೂ ಕಳೆದುಕೊಂಡಿದ್ದರು.
12004019a ಲಾಘವಾದಾಕುಲೀಕೃತ್ಯ ಕರ್ಣಃ ಪ್ರಹರತಾಂ ವರಃ|
12004019c ಹತಸೂತಾಂಶ್ಚ ಭೂಯಿಷ್ಠಾನವಜಿಗ್ಯೇ ನರಾಧಿಪಾನ್||
ಪ್ರಹರಿಗಳಲ್ಲಿ ಶ್ರೇಷ್ಠ ಕರ್ಣನು ತನ್ನ ಹಸ್ತಲಾಘವದಿಂದ ಅವರನ್ನು ಆಯುಧಹೀನರನ್ನಾಗಿಸಿ, ಅವರ ಸಾರಥಿಗಳನ್ನೂ ಸಂಹರಿಸಿ, ಆ ನರಾಧಿಪರನ್ನು ಇನ್ನೂ ಹೆಚ್ಚಿನ ಕಷ್ಟಗಳಿಗೀಡುಮಾಡಿದನು.
12004020a ತೇ ಸ್ವಯಂ ತ್ವರಯಂತೋಽಶ್ವಾನ್ಯಾಹಿ ಯಾಹೀತಿ ವಾದಿನಃ|
12004020c ವ್ಯಪೇಯುಸ್ತೇ ರಣಂ ಹಿತ್ವಾ ರಾಜಾನೋ ಭಗ್ನಮಾನಸಾಃ||
ಸ್ವಯಂ ರಾಜರೇ ಹೋಗು ಹೋಗೆಂದು ಕುದುರೆಗಳನ್ನು ಓಡಿಸುತ್ತಾ, ಭಗ್ನಮಾನಸರಾಗಿ ರಣವನ್ನು ತೊರೆದು ಹೊರಟು ಹೋದರು.
12004021a ದುರ್ಯೋಧನಸ್ತು ಕರ್ಣೇನ ಪಾಲ್ಯಮಾನೋಽಭ್ಯಯಾತ್ತದಾ|
12004021c ಹೃಷ್ಟಃ ಕನ್ಯಾಮುಪಾದಾಯ ನಗರಂ ನಾಗಸಾಹ್ವಯಮ್||
ದುರ್ಯೋಧನನಾದರೋ ಕರ್ಣನಿಂದ ರಕ್ಷಿಸಲ್ಪಟ್ಟು ಸಂತೋಷದಿಂದ ಕನ್ಯೆಯನ್ನು ಕರೆದುಕೊಂದು ಹಸ್ತಿನಾಪುರ ನಗರಕ್ಕೆ ಪ್ರಯಾಣಿಸಿದನು.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ದುರ್ಯೋಧನಸ್ವಯಂವರೇ ಕನ್ಯಾಹರಣಂ ನಾಮ ಚತುರ್ಥೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ದುರ್ಯೋಧನನ ಸ್ವಯಂವರದಲ್ಲಿ ಕನ್ಯಾಹರಣ ಎನ್ನುವ ನಾಲ್ಕನೇ ಅಧ್ಯಾಯವು.