ಮೌಸಲ ಪರ್ವ
೯
ವ್ಯಾಸಾರ್ಜುನ ಸಮಾಗಮ
ಅರ್ಜುನನು ವ್ಯಾಸನಲ್ಲಿ ತನ್ನ ದುಃಖವನ್ನು ಹೇಳಿಕೊಳ್ಳುವುದು (೧-೨೪). ವ್ಯಾಸನು ಅರ್ಜುನನಿಗೆ ಸಮಾಧಾನವನ್ನು ಹೇಳಿ “ನೀವೂ ಕೂಡ ಕಾಲದ ಗತಿಯಲ್ಲಿ ಹೋಗುವುದು ಮುಖ್ಯ” ಎಂದುದು (೨೫-೩೮).
16009001 ವೈಶಂಪಾಯನ ಉವಾಚ|
16009001a ಪ್ರವಿಶನ್ನರ್ಜುನೋ ರಾಜನ್ನಾಶ್ರಮಂ ಸತ್ಯವಾದಿನಃ|
16009001c ದದರ್ಶಾಸೀನಮೇಕಾಂತೇ ಮುನಿಂ ಸತ್ಯವತೀಸುತಮ್||
ವೈಶಂಪಾಯನನು ಹೇಳಿದನು: “ರಾಜನ್! ಸತ್ಯವಾದಿ ಅರ್ಜುನನು ಆಶ್ರಮವನ್ನು ಪ್ರವೇಶಿಸಿ ಏಕಾಂತಲ್ಲಿ ಕುಳಿತಿದ್ದ ಮುನಿ ಸತ್ಯವತೀ ಸುತನನ್ನು ಸಂದರ್ಶಿಸಿದನು.
16009002a ಸ ತಮಾಸಾದ್ಯ ಧರ್ಮಜ್ಞಮುಪತಸ್ಥೇ ಮಹಾವ್ರತಮ್|
16009002c ಅರ್ಜುನೋಽಸ್ಮೀತಿ ನಾಮಾಸ್ಮೈ ನಿವೇದ್ಯಾಭ್ಯವದತ್ತತಃ||
ಕುಳಿತಿದ್ದ ಆ ಮಹಾವ್ರತ ಧರ್ಮಜ್ಞನ ಬಳಿಸಾರಿ “ನಾನು ಅರ್ಜುನ!” ಎಂದು ಹೇಳಿ ವಂದಿಸಿ ನಿಂತುಕೊಂಡನು.
16009003a ಸ್ವಾಗತಂ ತೇಽಸ್ತ್ವಿತಿ ಪ್ರಾಹ ಮುನಿಃ ಸತ್ಯವತೀಸುತಃ|
16009003c ಆಸ್ಯತಾಮಿತಿ ಚೋವಾಚ ಪ್ರಸನ್ನಾತ್ಮಾ ಮಹಾಮುನಿಃ||
“ನಿನಗೆ ಸ್ವಾಗತ!” ಎಂದು ಮುನಿ ಸತ್ಯವತೀ ಸುತನು ಹೇಳಿ, ಪ್ರಸನ್ನಾತ್ಮನಾದ ಆ ಮಹಾಮುನಿಯು “ಕುಳಿತುಕೋ!” ಎಂದನು.
16009004a ತಮಪ್ರತೀತಮನಸಂ ನಿಃಶ್ವಸಂತಂ ಪುನಃ ಪುನಃ|
16009004c ನಿರ್ವಿಣ್ಣಮನಸಂ ದೃಷ್ಟ್ವಾ ಪಾರ್ಥಂ ವ್ಯಾಸೋಽಬ್ರವೀದಿದಮ್||
ಮನಸ್ಸನ್ನೇ ಕಳೆದುಕೊಂಡಿದ್ದ, ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದ, ನಿರ್ವಿಣ್ಣ ಮನಸ್ಕನಾಗಿದ್ದ ಪಾರ್ಥನನ್ನು ನೋಡಿ ವ್ಯಾಸನು ಇಂತೆಂದನು:
16009005a ಅವೀರಜೋಽಭಿಘಾತಸ್ತೇ ಬ್ರಾಹ್ಮಣೋ ವಾ ಹತಸ್ತ್ವಯಾ|
16009005c ಯುದ್ಧೇ ಪರಾಜಿತೋ ವಾಸಿ ಗತಶ್ರೀರಿವ ಲಕ್ಷ್ಯಸೇ||
“ವೀರನಲ್ಲದವನಿಂದ ಗಾಯಗೊಂಡಿರುವೆಯೇ? ಅಥವಾ ಬ್ರಾಹ್ಮಣನನ್ನು ಕೊಂದೆಯೇ? ಅಥವಾ ಯುದ್ಧದಲ್ಲಿ ಪರಾಜಿತಗೊಂಡೆಯೇ? ನಿನ್ನ ಕಾಂತಿಯನ್ನು ಕಳೆದುಕೊಂಡಂತಿದೆ!
16009006a ನ ತ್ವಾ ಪ್ರತ್ಯಭಿಜಾನಾಮಿ ಕಿಮಿದಂ ಭರತರ್ಷಭ|
16009006c ಶ್ರೋತವ್ಯಂ ಚೇನ್ಮಯಾ ಪಾರ್ಥ ಕ್ಷಿಪ್ರಮಾಖ್ಯಾತುಮರ್ಹಸಿ||
ಭರತರ್ಷಭ! ಇದೇನಿದು! ನಿನ್ನನ್ನು ನಾನು ಗುರುತಿಸಲಾಗುತ್ತಿಲ್ಲ! ಪಾರ್ಥ! ಅದನ್ನು ನಾನು ಕೇಳಬಹುದಾದರೆ ಬೇಗನೆ ಏನಾಯಿತೆಂದು ಹೇಳು!”
16009007 ಅರ್ಜುನ ಉವಾಚ|
16009007a ಯಃ ಸ ಮೇಧವಪುಃ ಶ್ರೀಮಾನ್ಬೃಹತ್ಪಂಕಜಲೋಚನಃ|
16009007c ಸ ಕೃಷ್ಣಃ ಸಹ ರಾಮೇಣ ತ್ಯಕ್ತ್ವಾ ದೇಹಂ ದಿವಂ ಗತಃ||
ಅರ್ಜುನನು ಹೇಳಿದನು: “ಆ ಮೇಧವಪು, ಬೃಹತ್ ಕಮಲಲೋಚನ ಶ್ರೀಮಾನ್ ಕೃಷ್ಣನು ರಾಮನೊಂದಿಗೆ ದೇಹವನ್ನು ತೊರೆದು ದಿವಂಗತನಾಗಿದ್ದಾನೆ.
16009008a ಮೌಸಲೇ ವೃಷ್ಣಿವೀರಾಣಾಂ ವಿನಾಶೋ ಬ್ರಹ್ಮಶಾಪಜಃ|
16009008c ಬಭೂವ ವೀರಾಂತಕರಃ ಪ್ರಭಾಸೇ ರೋಮಹರ್ಷಣಃ||
ಬ್ರಹ್ಮಶಾಪದಿಂದ ಹುಟ್ಟಿದ ಮುಸಲಗಳಿಂದ ಪ್ರಭಾಸದಲ್ಲಿ ವೃಷ್ಣಿವೀರರ ರೋಮಾಂಚಕಾರೀ ವಿನಾಶವಾಯಿತು!
16009009a ಯೇ ತೇ ಶೂರಾ ಮಹಾತ್ಮಾನಃ ಸಿಂಹದರ್ಪಾ ಮಹಾಬಲಾಃ|
16009009c ಭೋಜವೃಷ್ಣ್ಯಂಧಕಾ ಬ್ರಹ್ಮನ್ನನ್ಯೋನ್ಯಂ ತೈರ್ಹತಂ ಯುಧಿ||
ಬ್ರಹ್ಮನ್! ಆ ಶೂರ, ಮಹಾತ್ಮ, ಸಿಂಹದರ್ಪ ಮಹಾಬಲ ಭೋಜ-ವೃಷ್ಣಿ-ಅಂಧಕರು ಅನ್ಯೋನ್ಯರೊಡನೆ ಹೋರಾಡಿ ಹತರಾದರು.
16009010a ಗದಾಪರಿಘಶಕ್ತೀನಾಂ ಸಹಾಃ ಪರಿಘಬಾಹವಃ|
16009010c ತ ಏರಕಾಭಿರ್ನಿಹತಾಃ ಪಶ್ಯ ಕಾಲಸ್ಯ ಪರ್ಯಯಮ್||
ಗದೆ-ಪರಿಘ-ಶಕ್ತಿಗಳನ್ನು ಸಹಿಸಬಲ್ಲ ಪರಿಘದಂತಹ ಬಾಹುಗಳಿದ್ದ ಅವರು ಎರಕ ಹುಲ್ಲುಗಳಿಂದ ಹತರಾದರು. ಕಾಲದ ಪಲ್ಲಟನವನ್ನು ನೋಡು!
16009011a ಹತಂ ಪಂಚಶತಂ ತೇಷಾಂ ಸಹಸ್ರಂ ಬಾಹುಶಾಲಿನಾಮ್|
16009011c ನಿಧನಂ ಸಮನುಪ್ರಾಪ್ತಂ ಸಮಾಸಾದ್ಯೇತರೇತರಮ್||
ಐನೂರು ಸಾವಿರ ಬಾಹುಶಾಲಿಗಳು ಪರಸ್ಪರರೊಡನೆ ಹೋರಾಡಿ ನಿಧನ ಹೊಂದಿದರು.
16009012a ಪುನಃ ಪುನರ್ನ ಮೃಶ್ಯಾಮಿ ವಿನಾಶಮಮಿತೌಜಸಾಮ್|
16009012c ಚಿಂತಯಾನೋ ಯದೂನಾಂ ಚ ಕೃಷ್ಣಸ್ಯ ಚ ಯಶಸ್ವಿನಃ||
ಅಮಿತೌಜಸ ಯದುಗಳ ಮತ್ತು ಯಶಸ್ವಿ ಕೃಷ್ಣನ ವಿನಾಶವನ್ನು ಪುನಃ ಪುನಃ ಚಿಂತಿಸಿ ತಡೆದುಕೊಳ್ಳದಾಗಿದ್ದೇನೆ.
16009013a ಶೋಷಣಂ ಸಾಗರಸ್ಯೇವ ಪರ್ವತಸ್ಯೇವ ಚಾಲನಮ್|
16009013c ನಭಸಃ ಪತನಂ ಚೈವ ಶೈತ್ಯಮಗ್ನೇಸ್ತಥೈವ ಚ||
16009014a ಅಶ್ರದ್ಧೇಯಮಹಂ ಮನ್ಯೇ ವಿನಾಶಂ ಶಾಙ್ರಧನ್ವನಃ|
16009014c ನ ಚೇಹ ಸ್ಥಾತುಮಿಚ್ಚಾಮಿ ಲೋಕೇ ಕೃಷ್ಣವಿನಾಕೃತಃ||
ಸಮುದ್ರವು ಬತ್ತಿಹೋಯಿತೆಂದರೆ ಅಥವಾ ಪರ್ವತವು ಚಲಿಸಿತೆಂದರೆ, ಆಕಾಶವು ಬಿದ್ದಿತೆಂದರೆ ಮತ್ತು ಅಗ್ನಿಯು ಶೀತಲನಾದನೆಂದರೆ ಹೇಗೋ ಹಾಗೆ ಶಾಂಙ್ರಧನ್ವಿಯು ವಿನಾಶನಾದನೆನ್ನುವುದನ್ನು ನಾನು ನಂಬುವುದಿಲ್ಲ. ಕೃಷ್ಣನಿಲ್ಲದ ಈ ಲೋಕದಲ್ಲಿ ನಾನಿರಲು ಬಯಸುವುದಿಲ್ಲ.
16009015a ಇತಃ ಕಷ್ಟತರಂ ಚಾನ್ಯಚ್ಛೃಣು ತದ್ವೈ ತಪೋಧನ|
16009015c ಮನೋ ಮೇ ದೀರ್ಯತೇ ಯೇನ ಚಿಂತಯಾನಸ್ಯ ವೈ ಮುಹುಃ||
ಇದಕ್ಕಿಂತಲೂ ಕಷ್ಟತರವಾದುದಿದೆ. ತಪೋಧನ! ಅದನ್ನು ಕೇಳು. ಅದನ್ನು ಪುನಃ ಪುನಃ ಯೋಚಿಸಿ ನನ್ನ ಮನಸ್ಸು ಸೀಳಿಹೋಗುತ್ತಿದೆ.
16009016a ಪಶ್ಯತೋ ವೃಷ್ಣಿದಾರಾಶ್ಚ ಮಮ ಬ್ರಹ್ಮನ್ಸಹಸ್ರಶಃ|
16009016c ಆಭೀರೈರನುಸೃತ್ಯಾಜೌ ಹೃತಾಃ ಪಂಚನದಾಲಯೈಃ||
ಬ್ರಹ್ಮನ್! ನನ್ನ ಎದುರಿಗೇ ಐದು ನದಿಗಳ ಪ್ರದೇಶದಲ್ಲಿ ಅಭೀರರು ಸಹಸ್ರಾರು ವೃಷ್ಣಿಸ್ತ್ರೀಯರನ್ನು ಅನುಸರಿಸಿ ಬಂದು ಅವರನ್ನು ಅಪಹರಿಸಿಕೊಂಡು ಹೋದರು!
16009017a ಧನುರಾದಾಯ ತತ್ರಾಹಂ ನಾಶಕಂ ತಸ್ಯ ಪೂರಣೇ|
16009017c ಯಥಾ ಪುರಾ ಚ ಮೇ ವೀರ್ಯಂ ಭುಜಯೋರ್ನ ತಥಾಭವತ್||
ಧನುಸ್ಸನ್ನೆತ್ತಿ ನಾನು ಅವರನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದಿರುವಾಗ ನನ್ನ ಭುಜಗಳಲ್ಲಿ ಹಿಂದೆ ಇದ್ದ ವೀರ್ಯವು ಆಗ ಇಲ್ಲವಾಯಿತು!
16009018a ಅಸ್ತ್ರಾಣಿ ಮೇ ಪ್ರನಷ್ಟಾನಿ ವಿವಿಧಾನಿ ಮಹಾಮುನೇ|
16009018c ಶರಾಶ್ಚ ಕ್ಷಯಮಾಪನ್ನಾಃ ಕ್ಷಣೇನೈವ ಸಮಂತತಃ||
ಮಹಾಮುನೇ! ಅವರಿಂದ ಸುತ್ತುವರೆಯಲ್ಪಟ್ಟಿದ್ದಾಗ ಕ್ಷಣದಲ್ಲಿಯೇ ನನ್ನ ವಿವಿಧ ಅಸ್ತ್ರಗಳು ಮರೆತು ಹೋದವು ಮತ್ತು ಶರಗಳೂ ಮುಗಿದು ಹೋದವು.
16009019a ಪುರುಷಶ್ಚಾಪ್ರಮೇಯಾತ್ಮಾ ಶಂಖಚಕ್ರಗದಾಧರಃ|
16009019c ಚತುರ್ಭುಜಃ ಪೀತವಾಸಾ ಶ್ಯಾಮಃ ಪದ್ಮಾಯತೇಕ್ಷಣಃ||
16009020a ಯಃ ಸ ಯಾತಿ ಪುರಸ್ತಾನ್ಮೇ ರಥಸ್ಯ ಸುಮಹಾದ್ಯುತಿಃ|
16009020c ಪ್ರದಹನ್ರಿಪುಸೈನ್ಯಾನಿ ನ ಪಶ್ಯಾಮ್ಯಹಮದ್ಯ ತಮ್||
16009021a ಯೇನ ಪೂರ್ವಂ ಪ್ರದಗ್ಧಾನಿ ಶತ್ರುಸೈನ್ಯಾನಿ ತೇಜಸಾ|
16009021c ಶರೈರ್ಗಾಂಡೀವನಿರ್ಮುಕ್ತೈರಹಂ ಪಶ್ಚಾದ್ವ್ಯನಾಶಯಮ್||
ನನ್ನ ರಥದ ಮುಂದೆ ಹೋಗುತ್ತಾ ರಿಪುಸೈನ್ಯಗಳನ್ನು ಸುಡುತ್ತಿದ್ದ ಆ ಪುರುಷ, ಅಪ್ರಮೇಯಾತ್ಮಾ, ಶಂಖಚಕ್ರಗದಾಧರ, ಚತುರ್ಭುಜ, ಪೀತವಾಸ, ಶ್ಯಾಮ, ಪದ್ಮಾಯತೇಕ್ಷಣನನ್ನು ನಾನು ಕಾಣುತ್ತಿಲ್ಲ! ತನ್ನ ತೇಜಸ್ಸಿನಿಂದ ಮೊದಲೇ ಅವನು ಸುಟ್ಟಿದ್ದವರನ್ನು ನಂತರ ನನ್ನ ಶರಗಳನ್ನು ಗಾಂಡೀವದಿಂದ ಪ್ರಯೋಗಿಸಿ ವಿನಾಶಗೊಳಿಸುತ್ತಿದ್ದೆನು.
16009022a ತಮಪಶ್ಯನ್ವಿಷೀದಾಮಿ ಘೂರ್ಣಾಮೀವ ಚ ಸತ್ತಮ|
16009022c ಪರಿನಿರ್ವಿಣ್ಣಚೇತಾಶ್ಚ ಶಾಂತಿಂ ನೋಪಲಭೇಽಪಿ ಚ||
ಸತ್ತಮ! ಅವನನ್ನು ನೋಡದೇ ನಾನು ನಿರಾಶನಾಗಿ ದುಃಖಿತನಾಗಿದ್ದೇನೆ. ನನ್ನ ಚೇತನವೇ ಉಡುಗಿಹೋಗಿ, ಶಾಂತಿಯು ದೊರೆಯದಾಗಿದೆ.
16009023a ವಿನಾ ಜನಾರ್ದನಂ ವೀರಂ ನಾಹಂ ಜೀವಿತುಮುತ್ಸಹೇ|
16009023c ಶ್ರುತ್ವೈವ ಹಿ ಗತಂ ವಿಷ್ಣುಂ ಮಮಾಪಿ ಮುಮುಹುರ್ದಿಶಃ||
ವೀರ ಜನಾರ್ದನನಿಲ್ಲದೇ ನಾನು ಜೀವಿಸಿರಲು ಬಯಸುವುದಿಲ್ಲ. ವಿಷ್ಣುವು ಹೊರಟುಹೋದನೆಂದು ಕೇಳುತ್ತಲೇ ನಾನೂ ಕೂಡ ದಿಕ್ಕುತೋಚದವನಾಗಿದ್ದೇನೆ.
16009024a ಪ್ರನಷ್ಟಜ್ಞಾತಿವೀರ್ಯಸ್ಯ ಶೂನ್ಯಸ್ಯ ಪರಿಧಾವತಃ|
16009024c ಉಪದೇಷ್ಟುಂ ಮಮ ಶ್ರೇಯೋ ಭವಾನರ್ಹತಿ ಸತ್ತಮ||
ನನ್ನ ಬಂಧುವೀರನನ್ನು ಕಳೆದುಕೊಂಡು ನಾನು ಶೂನ್ಯನಾಗಿ ಸುತ್ತುತ್ತಿದ್ದೇನೆ. ಸತ್ತಮ! ನನಗೆ ಶ್ರೇಯವಾದುದನ್ನು ಉಪದೇಶಿಸು!”
16009025 ವ್ಯಾಸ ಉವಾಚ|
16009025a ಬ್ರಹ್ಮಶಾಪವಿನಿರ್ದಗ್ಧಾ ವೃಷ್ಣ್ಯಂಧಕಮಹಾರಥಾಃ|
16009025c ವಿನಷ್ಟಾಃ ಕುರುಶಾರ್ದೂಲ ನ ತಾನ್ಶೋಚಿತುಮರ್ಹಸಿ||
ವ್ಯಾಸನು ಹೇಳಿದನು: “ಕುರುಶಾರ್ದೂಲ! ವೃಷ್ಣಿ-ಅಂಧಕ ಮಹಾರಥರು ಬ್ರಾಹ್ಮಣರ ಶಾಪದಿಂದ ಸುಟ್ಟು ವಿನಾಶಹೊಂದಿದ್ದಾರೆ. ಅವರ ಕುರಿತು ಶೋಕಿಸಬೇಡ!
16009026a ಭವಿತವ್ಯಂ ತಥಾ ತದ್ಧಿ ದಿಷ್ಟಮೇತನ್ಮಹಾತ್ಮನಾಮ್|
16009026c ಉಪೇಕ್ಷಿತಂ ಚ ಕೃಷ್ಣೇನ ಶಕ್ತೇನಾಪಿ ವ್ಯಪೋಹಿತುಮ್||
ಅದು ಹಾಗೆಯೇ ಆಗಬೇಕಾಗಿತ್ತು. ಆ ಮಹಾತ್ಮರಿಗೆ ಹಾಗೆಯೇ ಆಗಬೇಕೆಂದು ವಿಧಿಯು ಕಲ್ಪಿಸಿತ್ತು. ಅದನ್ನು ತಡೆಯಬಲ್ಲವನಾಗಿದ್ದರೂ ಕೃಷ್ಣನು ಅದನ್ನು ಹಾಗೆಯೇ ಆಗಲು ಬಿಟ್ಟನು.
16009027a ತ್ರೈಲೋಕ್ಯಮಪಿ ಕೃಷ್ಣೋ ಹಿ ಕೃತ್ಸ್ನಂ ಸ್ಥಾವರಜಂಗಮಮ್|
16009027c ಪ್ರಸಹೇದನ್ಯಥಾ ಕರ್ತುಂ ಕಿಮು ಶಾಪಂ ಮನೀಷಿಣಾಮ್||
ಏಕೆಂದರೆ ಸ್ಥಾವರ-ಜಂಗಮಗಳುಳ್ಳ ಈ ತ್ರೈಲೋಕ್ಯಗಳನ್ನೂ ಕೂಡ ಸಂಪೂರ್ಣವಾಗಿ ಬದಲಾಯಿಸಬಲ್ಲ ಕೃಷ್ಣನಿಗೆ ಮುನಿಗಳ ಶಾಪವು ಯಾವ ಲೆಖ್ಕದ್ದು?
16009028a ರಥಸ್ಯ ಪುರತೋ ಯಾತಿ ಯಃ ಸ ಚಕ್ರಗದಾಧರಃ|
16009028c ತವ ಸ್ನೇಹಾತ್ಪುರಾಣರ್ಷಿರ್ವಾಸುದೇವಶ್ಚತುರ್ಭುಜಃ||
ನಿನ್ನ ಮೇಲಿನ ಸ್ನೇಹದಿಂದ ರಥದ ಮುಂದೆ ಹೋಗುತ್ತಿದ್ದ ಅವನು ಪುರಾಣ ಋಷಿ ಚಕ್ರಗದಾಧರ ಚತುರ್ಭುಜ ವಾಸುದೇವನು.
16009029a ಕೃತ್ವಾ ಭಾರಾವತರಣಂ ಪೃಥಿವ್ಯಾಃ ಪೃಥುಲೋಚನಃ|
16009029c ಮೋಕ್ಷಯಿತ್ವಾ ಜಗತ್ಸರ್ವಂ ಗತಃ ಸ್ವಸ್ಥಾನಮುತ್ತಮಮ್||
ಭೂಮಿಯ ಭಾರವನ್ನು ಕಡಿಮೆ ಮಾಡಿ ಸರ್ವ ಜಗತ್ತನ್ನೂ ಬಿಡುಗಡೆಗೊಳಿಸಿ ಆ ಪೃಥುಲೋಚನನು ತನ್ನ ಉತ್ತಮ ಸ್ಥಾನವನ್ನು ಸೇರಿದ್ದಾನೆ.
16009030a ತ್ವಯಾ ತ್ವಿಹ ಮಹತ್ಕರ್ಮ ದೇವಾನಾಂ ಪುರುಷರ್ಷಭ|
16009030c ಕೃತಂ ಭೀಮಸಹಾಯೇನ ಯಮಾಭ್ಯಾಂ ಚ ಮಹಾಭುಜ||
ಪುರುಷರ್ಷಭ! ಮಹಾಭುಜ! ನೀನಾದರೋ ಭೀಮ ಮತ್ತು ಯಮಳರ ಸಹಾಯದಿಂದ ದೇವತೆಗಳ ಮಹಾ ಕಾರ್ಯವನ್ನು ಮಾಡಿಕೊಟ್ಟಿದ್ದೀಯೆ.
16009031a ಕೃತಕೃತ್ಯಾಂಶ್ಚ ವೋ ಮನ್ಯೇ ಸಂಸಿದ್ಧಾನ್ಕುರುಪುಂಗವ|
16009031c ಗಮನಂ ಪ್ರಾಪ್ತಕಾಲಂ ಚ ತದ್ಧಿ ಶ್ರೇಯೋ ಮತಂ ಮಮ||
ಕುರುಪುಂಗವು! ನೀವು ಎಲ್ಲವನ್ನು ಸಾಧಿಸಿದ್ದೀರಿ ಮತ್ತು ಕೃತಕೃತ್ಯರಾಗಿದ್ದೀರಿ. ನೀವು ಹೊರಡುವ ಕಾಲವು ಬಂದೊದಗಿದೆಯೆಂದೂ ಅದೇ ನಿಮಗೆ ಶ್ರೇಯಸ್ಕರವೆಂದು ನನ್ನ ಅಭಿಪ್ರಾಯ.
16009032a ಬಲಂ ಬುದ್ಧಿಶ್ಚ ತೇಜಶ್ಚ ಪ್ರತಿಪತ್ತಿಶ್ಚ ಭಾರತ|
16009032c ಭವಂತಿ ಭವಕಾಲೇಷು ವಿಪದ್ಯಂತೇ ವಿಪರ್ಯಯೇ||
ಭಾರತ! ಬಲ, ಬುದ್ಧಿ, ತೇಜಸ್ಸು ಮತ್ತು ಸಾಧನೆಗಳು ಏಳಿಗೆಯ ಕಾಲದಲ್ಲಿ ಏಳ್ಗೆ ಹೊಂದುತ್ತವೆ ಮತ್ತು ಕಾಲ ವಿಪರ್ಯಾಸವಾದಾಗ ನಷ್ಟವಾಗುತ್ತವೆ.
16009033a ಕಾಲಮೂಲಮಿದಂ ಸರ್ವಂ ಜಗದ್ಬೀಜಂ ಧನಂಜಯ|
16009033c ಕಾಲ ಏವ ಸಮಾದತ್ತೇ ಪುನರೇವ ಯದೃಚ್ಚಯಾ||
ಧನಂಜಯ! ಇರುವುದೆಲ್ಲವಕ್ಕೂ ಕಾಲವೇ ಮೂಲ. ಕಾಲವೇ ಸರ್ವಜಗತ್ತಿನ ಬೀಜ. ಕಾಲವೇ, ಬಯಸಿದಾಗ, ಪುನಃ ಎಲ್ಲವನ್ನೂ ಹಿಂದೆ ಸೆಳೆದುಕೊಳ್ಳುತ್ತದೆ.
16009034a ಸ ಏವ ಬಲವಾನ್ಭೂತ್ವಾ ಪುನರ್ಭವತಿ ದುರ್ಬಲಃ|
16009034c ಸ ಏವೇಶಶ್ಚ ಭೂತ್ವೇಹ ಪರೈರಾಜ್ಞಾಪ್ಯತೇ ಪುನಃ||
ಬಲವಂತನಾಗಿದ್ದವನು ಪುನಃ ದುರ್ಬಲನಾಗುತ್ತಾನೆ. ಒಡೆಯನಾಗಿದ್ದವನಿಗೆ ಪುನಃ ಇತರರು ಆಜ್ಞಾಪಿಸುತ್ತಾರೆ.
16009035a ಕೃತಕೃತ್ಯಾನಿ ಚಾಸ್ತ್ರಾಣಿ ಗತಾನ್ಯದ್ಯ ಯಥಾಗತಮ್|
16009035c ಪುನರೇಷ್ಯಂತಿ ತೇ ಹಸ್ತಂ ಯದಾ ಕಾಲೋ ಭವಿಷ್ಯತಿ||
ಮಾಡಬೇಕಾದುದನ್ನು ಮಾಡಿ ಮುಗಿಸಿದ ಅಸ್ತ್ರಗಳು ಇಂದು ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಹೊರಟು ಹೋಗಿವೆ. ಮುಂದೆ ಕಾಲವು ಬಂದಾಗ ಪುನಃ ನಿನ್ನ ಕೈಗೆ ಅವು ಬರುತ್ತವೆ.
16009036a ಕಾಲೋ ಗಂತುಂ ಗತಿಂ ಮುಖ್ಯಾಂ ಭವತಾಮಪಿ ಭಾರತ|
16009036c ಏತಚ್ಛ್ರೇಯೋ ಹಿ ವೋ ಮನ್ಯೇ ಪರಮಂ ಭರತರ್ಷಭ||
ಭಾರತ! ಭರತರ್ಷಭ! ನೀವೂ ಕೂಡ ಕಾಲದ ಗತಿಯಲ್ಲಿ ಹೋಗುವುದು ಮುಖ್ಯ. ಇದರಲ್ಲಿಯೇ ನಿಮ್ಮ ಪರಮ ಶ್ರೇಯವಿದೆಯೆಂದು ನನಗನ್ನಿಸುತ್ತದೆ.”
16009037a ಏತದ್ವಚನಮಾಜ್ಞಾಯ ವ್ಯಾಸಸ್ಯಾಮಿತತೇಜಸಃ|
16009037c ಅನುಜ್ಞಾತೋ ಯಯೌ ಪಾರ್ಥೋ ನಗರಂ ನಾಗಸಾಹ್ವಯಮ್||
ಅಮಿತತೇಜಸ್ವಿ ವ್ಯಾಸನ ಈ ಮಾತನ್ನು ಆಜ್ಞೆಯೆಂದು ಸ್ವೀಕರಿಸಿ ಅವನಿಂದ ಅಪ್ಪಣೆಪಡೆದು ಪಾರ್ಥನು ಹಸ್ತಿನಾಪುರಕ್ಕೆ ಬಂದನು.
16009038a ಪ್ರವಿಶ್ಯ ಚ ಪುರೀಂ ವೀರಃ ಸಮಾಸಾದ್ಯ ಯುಧಿಷ್ಠಿರಮ್|
16009038c ಆಚಷ್ಟ ತದ್ಯಥಾವೃತ್ತಂ ವೃಷ್ಣ್ಯಂಧಕಜನಂ ಪ್ರತಿ||
ಆ ವೀರನು ಪುರವನ್ನು ಪ್ರವೇಶಿಸಿ, ಯುಧಿಷ್ಠಿರನನ್ನು ಸಂದರ್ಶಿಸಿ, ಅವನಿಗೆ ವೃಷ್ಣಿ-ಅಂಧಕ ಜನರಿಗೆ ಆದುದೆಲ್ಲವನ್ನೂ ತಿಳಿಸಿದನು.”
ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ವ್ಯಾಸಾರ್ಜುನಸಂವಾದೇ ನವಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ವ್ಯಾಸಾರ್ಜುನಸಂವಾದ ಎನ್ನುವ ಒಂಭತ್ತನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಮೌಸಲಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಮೌಸಲಪರ್ವವು|
ಇದೂವರೆಗಿನ ಒಟ್ಟು ಮಹಾಪರ್ವಗಳು – ೧೬/೧೮, ಉಪಪರ್ವಗಳು-೯೩/೧೦೦, ಅಧ್ಯಾಯಗಳು-೧೯೮೭/೧೯೯೫, ಶ್ಲೋಕಗಳು-೭೩೪೮೪/೭೩೭೮೪
ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು||
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|
ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||
ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ||
ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||
|| ಹರಿಃ ಓಂ ಕೃಷ್ಣಾರ್ಪಣಮಸ್ತು ||