ಕರ್ಣ ಪರ್ವ
೬೯
ಕರ್ಣನನ್ನು ವಧಿಸಿದ ಅರ್ಜುನನನ್ನು ಕೃಷ್ಣನು ಪ್ರಶಂಸಿದುದು (೧-೫). ಕೃಷ್ಣಾರ್ಜುನರು ಯುಧಿಷ್ಠಿರನನ್ನು ಸಂದರ್ಶಿಸಿ ಕರ್ಣನ ವಧೆಯ ವಿಷಯವನ್ನು ತಿಳಿಸಿದುದು; ಪಾಂಡವ ಶಿಬಿರದಲ್ಲಿ ವಿಜಯೋತ್ಸಾಹ (೬-೪೧). ಕರ್ಣನ ವಧೆಯ ವಿಷಯವನ್ನು ತಿಳಿದ ಧೃತರಾಷ್ಟ್ರ-ಗಾಂಧಾರಿಯರು ಮೂರ್ಛೆಹೋದುದು (೪೨-೪೩).
08069001 ಸಂಜಯ ಉವಾಚ|
08069001a ತಥಾ ನಿಪಾತಿತೇ ಕರ್ಣೇ ತವ ಸೈನ್ಯೇ ಚ ವಿದ್ರುತೇ|
08069001c ಆಶ್ಲಿಷ್ಯ ಪಾರ್ಥಂ ದಾಶಾರ್ಹೋ ಹರ್ಷಾದ್ವಚನಮಬ್ರವೀತ್||
ಸಂಜಯನು ಹೇಳಿದನು: “ಹಾಗೆ ಕರ್ಣನ ಪತನವಾಗಿ ನಿನ್ನ ಸೇನೆಯು ಪಲಾಯನಮಾಡಲು ದಾಶಾರ್ಹನು ಪಾರ್ಥನನ್ನು ಬಿಗಿದಪ್ಪಿ ಹರ್ಷದಿಂದ ಈ ಮಾತನ್ನಾಡಿದನು:
08069002a ಹತೋ ಬಲಭಿದಾ ವೃತ್ರಸ್ತ್ವಯಾ ಕರ್ಣೋ ಧನಂಜಯ|
08069002c ವಧಂ ವೈ ಕರ್ಣವೃತ್ರಾಭ್ಯಾಂ ಕಥಯಿಷ್ಯಂತಿ ಮಾನವಾಃ||
“ಧನಂಜಯ! ವೃತ್ರನು ಬಲಭಿದ ಇಂದ್ರನಿಂದ ಮತ್ತು ಕರ್ಣನು ನಿನ್ನಿಂದ ಹತರಾದರು. ಕರ್ಣ ಮತ್ತು ವೃತ್ರರ ವಧೆಯನ್ನು ಮಾನವರು ಹೇಳುತ್ತಿರುತ್ತಾರೆ.
08069003a ವಜ್ರಿಣಾ ನಿಹತೋ ವೃತ್ರಃ ಸಂಯುಗೇ ಭೂರಿತೇಜಸಾ|
08069003c ತ್ವಯಾ ತು ನಿಹತಃ ಕರ್ಣೋ ಧನುಷಾ ನಿಶಿತೈಃ ಶರೈಃ||
ಭೂರಿತೇಜಸ ಇಂದ್ರನು ವೃತ್ರನನ್ನು ವಜ್ರದಿಂದ ಯುದ್ಧದಲ್ಲಿ ಸಂಹರಿಸಿದನು. ನೀನಾದರೋ ಕರ್ಣನನ್ನು ಧನುಸ್ಸು ಮತ್ತು ನಿಶಿತ ಶರಗಳಿಂದ ಸಂಹರಿಸಿದೆ.
08069004a ತಮಿಮಂ ವಿಕ್ರಮಂ ಲೋಕೇ ಪ್ರಥಿತಂ ತೇ ಯಶೋವಹಂ|
08069004c ನಿವೇದಯಾವಃ ಕೌಂತೇಯ ಧರ್ಮರಾಜಾಯ ಧೀಮತೇ||
ನಿನ್ನ ಈ ಯಶೋಕಾರಿ ವಿಕ್ರಮವು ಲೋಕದಲ್ಲಿ ಪ್ರಥಿತವಾಗುತ್ತದೆ. ಇದರ ಕುರಿತು ಧೀಮತ ಕೌಂತೇಯ ಧರ್ಮರಾಜನಿಗೆ ಹೇಳೋಣ!
08069005a ವಧಂ ಕರ್ಣಸ್ಯ ಸಂಗ್ರಾಮೇ ದೀರ್ಘಕಾಲಚಿಕೀರ್ಷಿತಂ|
08069005c ನಿವೇದ್ಯ ಧರ್ಮರಾಜಸ್ಯ ತ್ವಮಾನೃಣ್ಯಂ ಗಮಿಷ್ಯಸಿ||
ದೀರ್ಘಕಾಲದಿಂದ ಸಂಗ್ರಾಮದಲ್ಲಿ ಕರ್ಣನ ವಧೆಯಾಗಬೇಕೆಂದು ಅವನು ಬಯಸಿದ್ದನು. ಅದು ಆಯಿತೆಂದು ಧರ್ಮರಾಜನಿಗೆ ಹೇಳು. ಅವನ ಋಣದಿಂದ ನೀನು ಮುಕ್ತನಾಗುವೆ.”
08069006a ತಥೇತ್ಯುಕ್ತೇ ಕೇಶವಸ್ತು ಪಾರ್ಥೇನ ಯದುಪುಂಗವಃ|
08069006c ಪರ್ಯವರ್ತಯದವ್ಯಗ್ರೋ ರಥಂ ರಥವರಸ್ಯ ತಂ||
ಹಾಗೆಯೇ ಆಗಲೆಂದು ಪಾರ್ಥನು ಹೇಳಲು ಯದುಪುಂಗವ ಕೇಶವನು ಅವ್ಯಗ್ರನಾಗಿ ರಥಶ್ರೇಷ್ಠನ ರಥವನ್ನು ಹಿಂದಿರುಗಿಸಿದನು.
08069007a ಧೃಷ್ಟದ್ಯುಮ್ನಂ ಯುಧಾಮನ್ಯುಂ ಮಾದ್ರೀಪುತ್ರೌ ವೃಕೋದರಂ|
08069007c ಯುಯುಧಾನಂ ಚ ಗೋವಿಂದ ಇದಂ ವಚನಮಬ್ರವೀತ್||
ಗೋವಿಂದನು ಧೃಷ್ಟದ್ಯುಮ್ನ, ಯುಧಾಮನ್ಯು, ಮಾದ್ರೀಪುತ್ರರು, ವೃಕೋದರ ಮತ್ತು ಯುಯುಧಾನರಿಗೆ ಇದನ್ನು ಹೇಳಿದನು:
08069008a ಪರಾನಭಿಮುಖಾ ಯತ್ತಾಸ್ತಿಷ್ಠಧ್ವಂ ಭದ್ರಮಸ್ತು ವಃ|
08069008c ಯಾವದಾವೇದ್ಯತೇ ರಾಜ್ಞೇ ಹತಃ ಕರ್ಣೋಽರ್ಜುನೇನ ವೈ||
“ಕರ್ಣನು ಅರ್ಜುನನಿಂದ ಹತನಾದುದನ್ನು ರಾಜನಿಗೆ ತಿಳಿಸಿ ಬರುವವರೆಗೆ ನೀವು ಶತ್ರುಗಳಿಗೆ ಅಭಿಮುಖರಾಗಿ ನಿಂತು ಪ್ರಯತ್ನಪಟ್ಟು ಅವರನ್ನು ತಡೆಯಿರಿ. ನಿಮಗೆ ಮಂಗಳವಾಗಲಿ! “
08069009a ಸ ತೈಃ ಶೂರೈರನುಜ್ಞಾತೋ ಯಯೌ ರಾಜನಿವೇಶನಂ|
08069009c ಪಾರ್ಥಮಾದಾಯ ಗೋವಿಂದೋ ದದರ್ಶ ಚ ಯುಧಿಷ್ಠಿರಂ||
ಹಾಗೆ ಆ ಶೂರರಿಂದ ಬೀಳ್ಕೊಂಡು ಅವರಿಬ್ಬರೂ ರಾಜನಿವೇಶನಕ್ಕೆ ಹೋದರು. ಪಾರ್ಥನನ್ನು ಕರೆದುಕೊಂಡು ಗೋವಿಂದನು ಯುಧಿಷ್ಠಿರನನ್ನು ಸಂದರ್ಶಿಸಿದನು.
08069010a ಶಯಾನಂ ರಾಜಶಾರ್ದೂಲಂ ಕಾಂಚನೇ ಶಯನೋತ್ತಮೇ|
08069010c ಅಗೃಹ್ಣೀತಾಂ ಚ ಚರಣೌ ಮುದಿತೌ ಪಾರ್ಥಿವಸ್ಯ ತೌ||
ಕಾಂಚನದ ಉತ್ತಮ ಶಯನದಲ್ಲಿ ಮಲಗಿದ್ದ ಆ ರಾಜಶಾರ್ದೂಲನ ಚರಣಗಳನ್ನು ಸಂತೋಷದಿಂದಿದ್ದ ಅವರಿಬ್ಬರೂ ಹಿಡಿದುಕೊಂಡರು.
08069011a ತಯೋಃ ಪ್ರಹರ್ಷಮಾಲಕ್ಷ್ಯ ಪ್ರಹಾರಾಂಶ್ಚಾತಿಮಾನುಷಾನ್|
08069011c ರಾಧೇಯಂ ನಿಹತಂ ಮತ್ವಾ ಸಮುತ್ತಸ್ಥೌ ಯುಧಿಷ್ಠಿರಃ||
ಅವರ ಹರ್ಷವನ್ನೂ ಸೈನಿಕರು ಎದೆತಟ್ಟಿಕೊಳ್ಳುತ್ತಿರುವುದನ್ನೂ ಕಂಡ ಯುಧಿಷ್ಠಿರನು ರಾಧೇಯನು ಹತನಾದನೆಂದು ತಿಳಿದು ಮೇಲೆದ್ದು ನಿಂತನು.
08069012a ತತೋಽಸ್ಮೈ ತದ್ಯಥಾವೃತ್ತಂ ವಾಸುದೇವಃ ಪ್ರಿಯಂವದಃ|
08069012c ಕಥಯಾಮಾಸ ಕರ್ಣಸ್ಯ ನಿಧನಂ ಯದುನಂದನಃ||
ಆಗ ಪ್ರಿಯಂವದ ವಾಸುದೇವ ಯದುನಂದನನು ಅವನಿಗೆ ಕರ್ಣನ ನಿಧನದ ಕುರಿತು, ಅಲ್ಲಿ ಹೇಗೆ ನಡೆಯಿತೋ ಹಾಗೆ, ಹೇಳಿದನು.
08069013a ಈಷದುತ್ಸ್ಮಯಮಾನಸ್ತು ಕೃಷ್ಣೋ ರಾಜಾನಮಬ್ರವೀತ್|
08069013c ಯುಧಿಷ್ಠಿರಂ ಹತಾಮಿತ್ರಂ ಕೃತಾಂಜಲಿರಥಾಚ್ಯುತಃ||
ಅಚ್ಯುತ ಕೃಷ್ಣನು ನಸುನಗುತ್ತ ಶತ್ರುವನ್ನು ಕಳೆದುಕೊಂಡ ರಾಜಾ ಯುಧಿಷ್ಠಿರನಿಗೆ ಬದ್ಧಾಂಜಲಿಯಾಗಿ ಹೇಳಿದನು:
08069014a ದಿಷ್ಟ್ಯಾ ಗಾಂಡೀವಧನ್ವಾ ಚ ಪಾಂಡವಶ್ಚ ವೃಕೋದರಃ|
08069014c ತ್ವಂ ಚಾಪಿ ಕುಶಲೀ ರಾಜನ್ಮಾದ್ರೀಪುತ್ರೌ ಚ ಪಾಂಡವೌ||
“ರಾಜನ್! ಒಳ್ಳೆಯದಾಯಿತು ಗಾಂಡೀವಧನ್ವಿ ಪಾಂಡವ, ವೃಕೋದರ, ಮಾದ್ರೀಪುತ್ರ ಪಾಂಡವರೀರ್ವರೂ ಮತ್ತು ನೀನೂ ಕೂಡ ಕುಶಲರಾಗಿರುವಿರಿ!
08069015a ಮುಕ್ತಾ ವೀರಕ್ಷಯಾದಸ್ಮಾತ್ಸಂಗ್ರಾಮಾಲ್ಲೋಮಹರ್ಷಣಾತ್|
08069015c ಕ್ಷಿಪ್ರಮುತ್ತರಕಾಲಾನಿ ಕುರು ಕಾರ್ಯಾಣಿ ಪಾರ್ಥಿವ||
ಪಾರ್ಥಿವ! ಈ ಲೋಮಹರ್ಷಣ ವೀರಕ್ಷಯಕಾರಕ ಸಂಗ್ರಾಮದಿಂದ ನೀವು ಪಾರಾಗಿದ್ದೀರಿ. ಆದುದರಿಂದ ಮುಂದೆ ಮಾಡಬೇಕಾದ ಕಾರ್ಯಗಳನ್ನು ಮಾಡಲು ಬೇಗನೇ ಉಪಕ್ರಮಿಸು.
08069016a ಹತೋ ವೈಕರ್ತನಃ ಕ್ರೂರಃ ಸೂತಪುತ್ರೋ ಮಹಾಬಲಃ|
08069016c ದಿಷ್ಟ್ಯಾ ಜಯಸಿ ರಾಜೇಂದ್ರ ದಿಷ್ಟ್ಯಾ ವರ್ಧಸಿ ಪಾಂಡವ||
ರಾಜೇಂದ್ರ! ಕ್ರೂರ ಮಹಾಬಲ ವೈಕರ್ತನ ಸೂತಪುತ್ರನು ಹತನಾಗಿದ್ದಾನೆ. ಅದೃಷ್ಟವಷಾತ್ ನಿನಗೆ ಜಯವಾಗಿದೆ. ಪಾಂಡವ! ಅದೃಷ್ಟವಷಾತ್ ನಿನ್ನ ಏಳ್ಗೆಯಾಗುತ್ತಿದೆ.
08069017a ಯಃ ಸ ದ್ಯೂತಜಿತಾಂ ಕೃಷ್ಣಾಂ ಪ್ರಾಹಸತ್ಪುರುಷಾಧಮಃ|
08069017c ತಸ್ಯಾದ್ಯ ಸೂತಪುತ್ರಸ್ಯ ಭೂಮಿಃ ಪಿಬತಿ ಶೋಣಿತಂ||
ದ್ಯೂತದಲ್ಲಿ ಗೆದ್ದಿದ್ದ ಕೃಷ್ಣೆಯನ್ನು ನೋಡಿ ಯಾವ ಪುರುಷಾಧಮನು ನಕ್ಕಿದ್ದನೋ ಆ ಸೂತಪುತ್ರನ ರಕ್ತವನ್ನು ಇಂದು ಭೂಮಿಯು ಕುಡಿಯುತ್ತಿದೆ.
08069018a ಶೇತೇಽಸೌ ಶರದೀರ್ಣಾಂಗಃ ಶತ್ರುಸ್ತೇ ಕುರುಪುಂಗವ|
08069018c ತಂ ಪಶ್ಯ ಪುರುಷವ್ಯಾಘ್ರ ವಿಭಿನ್ನಂ ಬಹುಧಾ ಶರೈಃ||
ಪುರುಷವ್ಯಾಘ್ರ! ಕುರುಪುಂಗವ! ಬಾಣಗಳಿಂದ ಸೀಳಲ್ಪಟ್ಟು ಅನೇಕ ಶರಗಳಿಂದ ಕತ್ತರಿಸಲ್ಪಟ್ಟಿರುವ ನಿನ್ನ ಶತ್ರುವನ್ನು ನೋಡು!”
08069019a ಯುಧಿಷ್ಠಿರಸ್ತು ದಾಶಾರ್ಹಂ ಪ್ರಹೃಷ್ಟಃ ಪ್ರತ್ಯಪೂಜಯತ್|
08069019c ದಿಷ್ಟ್ಯಾ ದಿಷ್ಟ್ಯೇತಿ ರಾಜೇಂದ್ರ ಪ್ರೀತ್ಯಾ ಚೇದಮುವಾಚ ಹ||
ಯುಧಿಷ್ಠಿರನಾದರೋ ಪ್ರಹೃಷ್ಟನಾಗಿ ದಾಶಾರ್ಹನನ್ನು ಪ್ರತಿಪೂಜಿಸಿದನು. ಸಂತೋಷದಿಂದ “ಒಳ್ಳೆಯದಾಯಿತು! ಒಳ್ಳೆಯದಾಯಿತು!” ಎಂದು ಹೇಳುತ್ತಾ ಇದನ್ನೂ ಹೇಳಿದನು:
08069020a ನೈತಚ್ಚಿತ್ರಂ ಮಹಾಬಾಹೋ ತ್ವಯಿ ದೇವಕಿನಂದನ|
08069020c ತ್ವಯಾ ಸಾರಥಿನಾ ಪಾರ್ಥೋ ಯತ್ಕುರ್ಯಾದದ್ಯ ಪೌರುಷಂ||
“ಮಹಾಬಾಹೋ! ದೇವಕೀನಂದನ! ನೀನಿರುವಾಗ ಮತ್ತು ನೀನು ಸಾರಥಿಯಾಗಿರುವಾಗ ಇಂದು ಪಾರ್ಥನು ತೋರಿಸಿದ ಪೌರುಷವು ನನಗೆ ಆಶ್ಚರ್ಯವೆನಿಸುವುದಿಲ್ಲ.”
08069021a ಪ್ರಗೃಹ್ಯ ಚ ಕುರುಶ್ರೇಷ್ಠಃ ಸಾಂಗದಂ ದಕ್ಷಿಣಂ ಭುಜಂ|
08069021c ಉವಾಚ ಧರ್ಮಭೃತ್ಪಾರ್ಥ ಉಭೌ ತೌ ಕೇಶವಾರ್ಜುನೌ||
ಅನಂತರ ಆ ಕುರುಶ್ರೇಷ್ಠ ಧರ್ಮಭೃತ್ ಪಾರ್ಥನು ತೋಳ್ಬಂದಿಯಿಂದ ಕೂಡಿದ ಬಲಭುಜವನ್ನು ಮೇಲೆತ್ತಿ ಕೇಶವಾರ್ಜುನರಿಬ್ಬರಿಗೂ ಹೇಳಿದನು:
08069022a ನರನಾರಾಯಣೌ ದೇವೌ ಕಥಿತೌ ನಾರದೇನ ಹ|
08069022c ಧರ್ಮಸಂಸ್ಥಾಪನೇ ಯುಕ್ತೌ ಪುರಾಣೌ ಪುರುಷೋತ್ತಮೌ||
“ನಾರದನು ಹೇಳಿದಂತೆ ನೀವಿಬ್ಬರೂ ನರ-ನಾರಾಯಣ ದೇವರುಗಳು. ಧರ್ಮಸಂಸ್ಥಾಪನೆಯಲ್ಲಿ ನಿರತರಾಗಿರುವ ಪುರಾಣ ಪುರುಷೋತ್ತಮರು.
08069023a ಅಸಕೃಚ್ಚಾಪಿ ಮೇಧಾವೀ ಕೃಷ್ಣದ್ವೈಪಾಯನೋ ಮಮ|
08069023c ಕಥಾಮೇತಾಂ ಮಹಾಬಾಹೋ ದಿವ್ಯಾಮಕಥಯತ್ಪ್ರಭುಃ||
ಮಹಾಬಾಹೋ! ಹಾಗೆಯೇ ತತ್ತ್ವವಿದ ಮೇಧಾವೀ ಪ್ರಭು ಕೃಷ್ಣದ್ವೈಪಾಯನನೂ ಕೂಡ ಈ ವಿಷಯವನ್ನು ಹಲವು ಬಾರಿ ನನಗೆ ಹೇಳಿದ್ದನು.
08069024a ತವ ಕೃಷ್ಣ ಪ್ರಭಾವೇಣ ಗಾಂಡೀವೇನ ಧನಂಜಯಃ|
08069024c ಜಯತ್ಯಭಿಮುಖಾಂ ಶತ್ರೂನ್ನ ಚಾಸೀದ್ವಿಮುಖಃ ಕ್ವ ಚಿತ್||
ಕೃಷ್ಣ! ನಿನ್ನ ಪ್ರಭಾವದಿಂದಾಗಿ ಧನಂಜಯನು ಗಾಂಡೀವದಿಂದ ಶತ್ರುಗಳನ್ನು ಎದುರಿಸಿ ಜಯವನ್ನೇ ಪಡೆದಿದ್ದಾನೆ. ಎಂದೂ ವಿಮುಖನಾಗಲಿಲ್ಲ.
08069025a ಜಯಶ್ಚೈವ ಧ್ರುವೋಽಸ್ಮಾಕಂ ನ ತ್ವಸ್ಮಾಕಂ ಪರಾಜಯಃ|
08069025c ಯದಾ ತ್ವಂ ಯುಧಿ ಪಾರ್ಥಸ್ಯ ಸಾರಥ್ಯಮುಪಜಗ್ಮಿವಾನ್||
ಯುದ್ಧದಲ್ಲಿ ನೀನು ಪಾರ್ಥನ ಸಾರಥ್ಯವನ್ನು ವಹಿಸುತ್ತಿರುವಾಗ ನಮಗೆ ಜಯವೇ ನಿಶ್ಚಯವಾದುದು. ನಮಗೆ ಪರಾಜಯವೆನ್ನುವುದೇ ಇರುವುದಿಲ್ಲ.”
08069026a ಏವಮುಕ್ತ್ವಾ ಮಹಾರಾಜ ತಂ ರಥಂ ಹೇಮಭೂಷಿತಂ|
08069026c ದಂತವರ್ಣೈರ್ಹಯೈರ್ಯುಕ್ತಂ ಕಾಲವಾಲೈರ್ಮಹಾರಥಃ||
08069027a ಆಸ್ಥಾಯ ಪುರುಷವ್ಯಾಘ್ರಃ ಸ್ವಬಲೇನಾಭಿಸಂವೃತಃ|
08069027c ಕೃಷ್ಣಾರ್ಜುನಾಭ್ಯಾಂ ವೀರಾಭ್ಯಾಮನುಮನ್ಯ ತತಃ ಪ್ರಿಯಂ||
ಮಹಾರಾಜ! ಹೀಗೆ ಹೇಳಿ ಆ ಪುರುಷವ್ಯಾಘ್ರ ಮಹಾರಥನು ಶರೀರದಲ್ಲಿ ಬಿಳುಪಾಗಿಯೂ ಬಾಲದಲ್ಲಿ ಕಪ್ಪಾಗಿಯೂ ಇದ್ದ ಕುದುರೆಗಳನ್ನು ಕಟ್ಟಿದ್ದ ಪ್ರಿಯ ಹೇಮಭೂಷಿತ ರಥವನ್ನೇರಿ ಸ್ವಸೇನೆಯಿಂದ ಪರಿವೃತವಾಗಿ, ಕೃಷ್ಣಾರ್ಜುನರನ್ನೊಡಗೂಡಿ ಹೊರಟನು.
08069028a ಆಗತೋ ಬಹುವೃತ್ತಾಂತಂ ದ್ರಷ್ಟುಮಾಯೋಧನಂ ತದಾ|
08069028c ಆಭಾಷಮಾಣಸ್ತೌ ವೀರಾವುಭೌ ಮಾಧವಫಲ್ಗುನೌ||
08069029a ಸ ದದರ್ಶ ರಣೇ ಕರ್ಣಂ ಶಯಾನಂ ಪುರುಷರ್ಷಭಂ|
08069029c ಗಾಂಡೀವಮುಕ್ತೈರ್ವಿಶಿಖೈಃ ಸರ್ವತಃ ಶಕಲೀಕೃತಂ||
ದಾರಿಯಲ್ಲಿ ವೀರರಾದ ಮಾಧವ-ಫಲ್ಗುನರೊಂದಿಗೆ ಯುದ್ಧದ ವಿಷವಾಗಿ ಬಹಳವಾಗಿ ಮಾತನಾಡಿಕೊಳ್ಳುತ್ತಾ ರಣಭೂಮಿಯನ್ನು ನೋಡಲು ಹೊರಟ ಅವನು ರಣದಲ್ಲಿ ಗಾಂಡೀವದಿಂದ ಹೊರಟ ವಿಶಿಖಗಳಿಂದ ದೇಹದಲ್ಲೆಲ್ಲಾ ಗಾಯಗೊಂಡು ಮಲಗಿದ್ದ ಪುರುಷರ್ಷಭ ಕರ್ಣನನ್ನು ನೋಡಿದನು.
08069030a ಸಪುತ್ರಂ ನಿಹತಂ ದೃಷ್ಟ್ವಾ ಕರ್ಣಂ ರಾಜಾ ಯುಧಿಷ್ಠಿರಃ|
08069030c ಪ್ರಶಶಂಸ ನರವ್ಯಾಘ್ರಾವುಭೌ ಮಾಧವಪಾಂಡವೌ||
ಪುತ್ರನೊಂದಿಗೆ ಹತನಾಗಿದ್ದ ಕರ್ಣನನ್ನು ನೋಡಿ ರಾಜಾ ಯುಧಿಷ್ಠಿರನು ನರವ್ಯಾಘ್ರ ಮಾಧವ-ಪಾಂಡವರಿಬ್ಬರನ್ನೂ ಪ್ರಶಂಸಿಸಿದನು.
08069031a ಅದ್ಯ ರಾಜಾಸ್ಮಿ ಗೋವಿಂದ ಪೃಥಿವ್ಯಾಂ ಭ್ರಾತೃಭಿಃ ಸಹ|
08069031c ತ್ವಯಾ ನಾಥೇನ ವೀರೇಣ ವಿದುಷಾ ಪರಿಪಾಲಿತಃ||
“ಗೋವಿಂದ! ನಿನ್ನ ರಕ್ಷಣೆ, ವೀರ್ಯ, ಮತ್ತು ಬುದ್ಧಿವಂತಿಕೆಯಿಂದ ಪರಿಪಾಲಿತನಾದ ನಾನು ಇಂದು ಸಹೋದರರೊಂದಿಗೆ ಪೃಥ್ವಿಯ ರಾಜನಾಗಿದ್ದೇನೆ.
08069032a ಹತಂ ದೃಷ್ಟ್ವಾ ನರವ್ಯಾಘ್ರಂ ರಾಧೇಯಮಭಿಮಾನಿನಂ|
08069032c ನಿರಾಶೋಽದ್ಯ ದುರಾತ್ಮಾಸೌ ಧಾರ್ತರಾಷ್ಟ್ರೋ ಭವಿಷ್ಯತಿ|
08069032e ಜೀವಿತಾಚ್ಚಾಪಿ ರಾಜ್ಯಾಚ್ಚ ಹತೇ ಕರ್ಣೇ ಮಹಾರಥೇ||
ನರವ್ಯಾಘ್ರ ಅಭಿಮಾನಿ ರಾಧೇಯನು ಹತನಾದುದನ್ನು ನೋಡಿ ಇಂದು ದುರಾತ್ಮ ಧಾರ್ತರಾಷ್ಟ್ರನು ಮಹಾರಥ ಕರ್ಣನು ಹತನಾದನೆಂದು ಜೀವಿತದಲ್ಲಿಯೂ ರಾಜ್ಯದ ವಿಷಯದಲ್ಲಿಯೂ ಅತ್ಯಂತ ನಿರಾಶನಾಗುತ್ತಾನೆ.
08069033a ತ್ವತ್ಪ್ರಸಾದಾದ್ವಯಂ ಚೈವ ಕೃತಾರ್ಥಾಃ ಪುರುಷರ್ಷಭ|
08069033c ತ್ವಂ ಚ ಗಾಂಡೀವಧನ್ವಾ ಚ ವಿಜಯೀ ಯದುನಂದನ|
08069033e ದಿಷ್ಟ್ಯಾ ಜಯಸಿ ಗೋವಿಂದ ದಿಷ್ಟ್ಯಾ ಕರ್ಣೋ ನಿಪಾತಿತಃ||
ಪುರುಷರ್ಷಭ! ನಿನ್ನ ಅನುಗ್ರಹದಿಂದ ನಾವು ಕೃತಾರ್ಥರಾಗಿದ್ದೇವೆ. ಯದುನಂದನ! ನೀನು ಮತ್ತು ಗಾಂಡೀವಧನ್ವಿಯು ವಿಜಯಿಯಾಗಿರುವಿರಿ. ಗೋವಿಂದ! ಸೌಭಾಗ್ಯದಿಂದಲೇ ನೀವು ಜಯಿಸಿರುವಿರಿ! ಸೌಭಾಗ್ಯದಿಂದಲೇ ಕರ್ಣನು ಪತನಹೊಂದಿದನು!”
08069034a ಏವಂ ಸ ಬಹುಶೋ ಹೃಷ್ಟಃ ಪ್ರಶಶಂಸ ಜನಾರ್ದನಂ|
08069034c ಅರ್ಜುನಂ ಚಾಪಿ ರಾಜೇಂದ್ರ ಧರ್ಮರಾಜೋ ಯುಧಿಷ್ಠಿರಃ||
ರಾಜೇಂದ್ರ! ಹೀಗೆ ಧರ್ಮರಾಜ ಯುಧಿಷ್ಠಿರನು ಅತ್ಯಂತ ಹರ್ಷಿತನಾಗಿ ಜನಾರ್ದನನನ್ನೂ ಅರ್ಜುನನನ್ನೂ ಬಹಳವಾಗಿ ಪ್ರಶಂಸಿಸಿದನು.
08069035a ತತೋ ಭೀಮಪ್ರಭೃತಿಭಿಃ ಸರ್ವೈಶ್ಚ ಭ್ರಾತೃಭಿರ್ವೃತಂ|
08069035c ವರ್ಧಯಂತಿ ಸ್ಮ ರಾಜಾನಂ ಹರ್ಷಯುಕ್ತಾ ಮಹಾರಥಾಃ||
ಆಗ ಭೀಮಸೇನನೇ ಮೊದಲಾದ ಸರ್ವ ಭಾತೃಗಳೂ ಹರ್ಷಯುಕ್ತ ಮಹಾರಥರೂ ರಾಜನನ್ನು ಅಭಿನಂದಿಸಿದರು.
08069036a ನಕುಲಃ ಸಹದೇವಶ್ಚ ಪಾಂಡವಶ್ಚ ವೃಕೋದರಃ|
08069036c ಸಾತ್ಯಕಿಶ್ಚ ಮಹಾರಾಜ ವೃಷ್ಣೀನಾಂ ಪ್ರವರೋ ರಥಃ||
08069037a ಧೃಷ್ಟದ್ಯುಮ್ನಃ ಶಿಖಂಡೀ ಚ ಪಾಂಡುಪಾಂಚಾಲಸೃಂಜಯಾಃ|
08069037c ಪೂಜಯಂತಿ ಸ್ಮ ಕೌಂತೇಯಂ ನಿಹತೇ ಸೂತನಂದನೇ||
ಸೂತನಂದನನು ಹತನಾಗಲು ನಕುಲ-ಸಹದೇವರು, ಪಾಂಡವ ವೃಕೋದರ, ವೃಷ್ಣಿಗಳ ರಥಪ್ರವರ ಸಾತ್ಯಕಿ, ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಇತರ ಪಾಂಡು-ಪಾಂಚಾಲ-ಸೃಂಜಯರು ಕೌಂತೇಯನನ್ನು ಗೌರವಿಸಿದರು.
08069038a ತೇ ವರ್ಧಯಿತ್ವಾ ನೃಪತಿಂ ಪಾಂಡುಪುತ್ರಂ ಯುಧಿಷ್ಠಿರಂ|
08069038c ಜಿತಕಾಶಿನೋ ಲಬ್ಧಲಕ್ಷಾ ಯುದ್ಧಶೌಂಡಾಃ ಪ್ರಹಾರಿಣಃ||
08069039a ಸ್ತುವಂತಃ ಸ್ತವಯುಕ್ತಾಭಿರ್ವಾಗ್ಭಿಃ ಕೃಷ್ಣೌ ಪರಂತಪೌ|
08069039c ಜಗ್ಮುಃ ಸ್ವಶಿಬಿರಾಯೈವ ಮುದಾ ಯುಕ್ತಾ ಮಹಾರಥಾಃ||
ವಿಜಯೋಲ್ಲಾಸಿತರಾದ, ಗುರಿಯನ್ನು ತಲುಪಿದ್ದ, ಯುದ್ಧಕುಶಲರಾದ, ಪ್ರಹಾರಿಗಳಾದ ಮಹಾರಥರು ಮುದಿತರಾಗಿ ನೃಪತಿ ಪಾಂಡುಪುತ್ರ ಯುಧಿಷ್ಠಿರನನ್ನು ಅಭಿನಂದಿಸಿ, ಪರಂತಪರಾದ ಕೃಷ್ಣರಿಬ್ಬರನ್ನೂ ಪ್ರಶಂಸಯುಕ್ತ ಮಾತುಗಳಿಂದ ಸ್ತುತಿಸುತ್ತಾ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.
08069040a ಏವಮೇಷ ಕ್ಷಯೋ ವೃತ್ತಃ ಸುಮಹಾಽಲ್ಲೋಮಹರ್ಷಣಃ|
08069040c ತವ ದುರ್ಮಂತ್ರಿತೇ ರಾಜನ್ನತೀತಂ ಕಿಂ ನು ಶೋಚಸಿ||
ರಾಜನ್! ನಿನ್ನ ದುರ್ಮಂತ್ರದಿಂದಾಗಿ ಈ ಮಹಾ ಲೋಮಹರ್ಷಣಕಾರೀ ವಿನಾಶವು ನಡೆದುಹೋಯಿತು. ಆಗಿಹೋದುದಕ್ಕೆ ನೀನೇಕೆ ದುಃಖಿಸುವೆ?””
08069041 ವೈಶಂಪಾಯನ ಉವಾಚ|
08069041a ಶ್ರುತ್ವಾ ತದಪ್ರಿಯಂ ರಾಜನ್ಧೃತರಾಷ್ಟ್ರೋ ಮಹೀಪತಿಃ|
08069041c ಪಪಾತ ಭೂಮೌ ನಿಶ್ಚೇಷ್ಟಃ ಕೌರವ್ಯಃ ಪರಮಾರ್ತಿವಾನ್|
08069041e ತಥಾ ಸತ್ಯವ್ರತಾ ದೇವೀ ಗಾಂಧಾರೀ ಧರ್ಮದರ್ಶಿನೀ||
ವೈಶಂಪಾಯನನು ಹೇಳಿದನು: “ರಾಜನ್! ಅಪ್ರಿಯವಾದ ಅದನ್ನು ಕೇಳಿ ಪರಮ ದುಃಖಿತನಾದ ಕೌರವ್ಯ ಮಹೀಪತಿ ಧೃತರಾಷ್ಟ್ರನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು. ಹಾಗೆಯೇ ಸತ್ಯವ್ರತೆ ದೇವೀ ಧರ್ಮದರ್ಶಿನಿ ಗಾಂಧಾರಿಯೂ ಕೂಡ ಕೆಳಗೆ ಬಿದ್ದಳು.
08069042a ತಂ ಪ್ರತ್ಯಗೃಹ್ಣಾದ್ವಿದುರೋ ನೃಪತಿಂ ಸಂಜಯಸ್ತಥಾ|
08069042c ಪರ್ಯಾಶ್ವಾಸಯತಶ್ಚೈವಂ ತಾವುಭಾವೇವ ಭೂಮಿಪಂ||
ಅವಳನ್ನು ವಿದುರನೂ ನೃಪತಿಯನ್ನು ಸಂಜಯನೂ ಹಿಡಿದು ಕುಳ್ಳಿರಿಸಿದರು. ಅನಂತರ ಅವರಿಬ್ಬರೂ ಭೂಮಿಪನನ್ನು ಶೈತ್ಯೋಪಚಾರ ಮಾಡಿ ಸಮಾಧಾನಗೊಳಿಸಿದರು.
08069043a ತಥೈವೋತ್ಥಾಪಯಾಮಾಸುರ್ಗಾಂಧಾರೀಂ ರಾಜಯೋಷಿತಃ|
08069043c ತಾಭ್ಯಾಮಾಶ್ವಾಸಿತೋ ರಾಜಾ ತೂಷ್ಣೀಮಾಸೀದ್ವಿಚೇತನಃ||
ಹಾಗೆಯೇ ರಾಜಕನ್ಯೆಯರು ಗಾಂಧಾರಿಯನ್ನು ಎಬ್ಬಿಸಿ ಸಂತವಿಸಿದರು. ಅವರಿಬ್ಬರಿಂದಲೂ ಆಶ್ವಾಸಿತನಾದ ರಾಜನು ಬುದ್ಧಿಯನ್ನು ಕಳೆದುಕೊಂಡವನಂತೆ ಸುಮ್ಮನೇ ಕುಳಿತಿದ್ದನು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಯುಧಿಷ್ಠಿರಹರ್ಷೇ ಏಕೋನಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಯುಧಿಷ್ಠಿರಹರ್ಷ ಎನ್ನುವ ಅರವತ್ತೊಂಭತ್ತನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಕರ್ಣಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೮/೧೮, ಉಪಪರ್ವಗಳು-೭೩/೧೦೦, ಅಧ್ಯಾಯಗಳು-೧೨೧೯/೧೯೯೫, ಶ್ಲೋಕಗಳು-೪೫೧೯೩/೭೩೭೮೪
ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು||
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|
ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||
ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ||
ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||
|| ಹರಿಃ ಓಂ ಕೃಷ್ಣಾರ್ಪಣಮಸ್ತು ||