Karna Parva: Chapter 60

ಕರ್ಣ ಪರ್ವ

೬೦

ದುಃಶಾಸನ-ಭೀಮಸೇನರ ಯುದ್ಧ

ಕರ್ಣನು ಪಾಂಚಾಲ ಸೇನಾಪ್ರಮುಖರನ್ನು ಸೋಲಿಸಿದುದು (೧-೨೨). ಕರ್ಣ-ಸಾತ್ಯಕಿಯರ ಯುದ್ಧ (೨೩-೨೮). ಭೀಮಸೇನ-ದುಃಶಾಸನರ ಯುದ್ಧ (೨೯-೩೩).

08060001 ಸಂಜಯ ಉವಾಚ|

08060001a ತತಃ ಕರ್ಣಃ ಕುರುಷು ಪ್ರದ್ರುತೇಷು

         ವರೂಥಿನಾ ಶ್ವೇತಹಯೇನ ರಾಜನ್|

08060001c ಪಾಂಚಾಲಪುತ್ರಾನ್ವ್ಯಧಮತ್ಸೂತಪುತ್ರೋ

         ಮಹೇಷುಭಿರ್ವಾತ ಇವಾಭ್ರಸಂಘಾನ್||

ಸಂಜಯನು ಹೇಳಿದನು: “ರಾಜನ್! ಕುರುಗಳು ಪಲಾಯನಮಾಡುತ್ತಿರಲು ಸೂತಪುತ್ರ ಕರ್ಣನು ಶ್ವೇತಹಯಯುಕ್ತ ರಥದಲ್ಲಿ ಕುಳಿತು ದೊಡ್ಡ ದೊಡ್ಡ ಬಾಣಗಳಿಂದ ಚಂಡಮಾರುತವು ಮೋಡಗಳ ಸಮೂಹವನ್ನು ಚೆಲ್ಲಾಪಿಲ್ಲಿಯಾಗಿ ಮಾಡುವಂತೆ ಪಾಂಚಾಲಪುತ್ರರನ್ನು ವಧಿಸಿದನು.

08060002a ಸೂತಂ ರಥಾದಂಜಲಿಕೇನ ಪಾತ್ಯ

         ಜಘಾನ ಚಾಶ್ವಾಂ ಜನಮೇಜಯಸ್ಯ|

08060002c ಶತಾನೀಕಂ ಸುತಸೋಮಂ ಚ ಭಲ್ಲೈರ್

         ಅವಾಕಿರದ್ಧನುಷೀ ಚಾಪ್ಯಕೃಂತತ್||

ಅಂಜಲಿಕದಿಂದ ಜನಮೇಜಯನ ಕುದುರೆಗಳನ್ನು ಕೊಂದು ಸಾರಥಿಯನ್ನು ಕೆಳಗುರುಳಿಸಿದನು. ಭಲ್ಲಗಳಿಂದ ಶತಾನೀಕ ಮತ್ತು ಸುತಸೋಮರನ್ನು ಮುಚ್ಚಿ, ಅವರ ಧನುಸ್ಸುಗಳನ್ನು ಕತ್ತರಿಸಿದನು.

08060003a ಧೃಷ್ಟದ್ಯುಮ್ನಂ ನಿರ್ಬಿಭೇದಾಥ ಷಡ್ಭಿರ್

         ಜಘಾನ ಚಾಶ್ವಂ ದಕ್ಷಿಣಂ ತಸ್ಯ ಸಂಖ್ಯೇ|

08060003c ಹತ್ವಾ ಚಾಶ್ವಾನ್ಸಾತ್ಯಕೇಃ ಸೂತಪುತ್ರಃ

         ಕೈಕೇಯಪುತ್ರಂ ನ್ಯವಧೀದ್ವಿಶೋಕಂ||

ಬಳಿಕ ಸೂತಪುತ್ರನು ಆರು ಬಾಣಗಳಿಂದ ಧೃಷ್ಟದ್ಯುಮ್ನನನ್ನು ಪ್ರಹರಿಸಿ, ರಣದಲ್ಲಿ ಅವನ ಬಲಗಡೆಯಿದ್ದ ಸಾತ್ಯಕಿಯ ಕುದುರೆಗಳನ್ನೂ ಸಂಹರಿಸಿ, ಕೈಕೇಯಪುತ್ರ ವಿಶೋಕನನ್ನು ಸಂಹರಿಸಿದನು.

08060004a ತಂ ಅಭ್ಯಧಾವನ್ನಿಹತೇ ಕುಮಾರೇ

         ಕೈಕೇಯಸೇನಾಪತಿರುಗ್ರಧನ್ವಾ|

08060004c ಶರೈರ್ವಿಭಿನ್ನಂ ಭೃಶಮುಗ್ರವೇಗೈಃ

         ಕರ್ಣಾತ್ಮಜಂ ಸೋಽಭ್ಯಹನತ್ಸುಷೇಣಂ||

ಕುಮಾರನು ಹತನಾಗಲು ಕೈಕೇಯಸೇನಾಪತಿ ಉಗ್ರಧನ್ವನು ಮುನ್ನುಗ್ಗಿ ಅತ್ಯಂತ ವೇಗಯುಕ್ತವಾದ ಶರಗಳಿಂದ ಕರ್ಣನ ಮಗ ಸುಷೇಣನನ್ನು ಬಹಳವಾಗಿ ಪೀಡಿಸಿದನು.

08060005a ತಸ್ಯಾರ್ಧಚಂದ್ರೈಸ್ತ್ರಿಭಿರುಚ್ಚಕರ್ತ

         ಪ್ರಸಹ್ಯ ಬಾಹೂ ಚ ಶಿರಶ್ಚ ಕರ್ಣಃ|

08060005c ಸ ಸ್ಯಂದನಾದ್ಗಾಮಪತದ್ಗತಾಸುಃ

         ಪರಶ್ವಧೈಃ ಶಾಲ ಇವಾವರುಗ್ಣಃ||

ಕರ್ಣನು ಜೋರಾಗಿ ನಗುತ್ತಾ ಮೂರು ಅರ್ಧಚಂದ್ರಬಾಣಗಳಿಂದ ಅವನ ಬಾಹುಗಳನ್ನೂ ಶಿರವನ್ನೂ ಕತ್ತರಿಸಿದನು. ಕೊಡಲಿಯಿಂದ ಕತ್ತರಿಸಲ್ಪಟ್ಟ ಶಾಲವೃಕ್ಷದಂತೆ ಪ್ರಾಣಗಳನ್ನು ತೊರೆದು ಅವನು ರಥದಿಂದ ಕೆಳಕ್ಕೆ ಬಿದ್ದನು.

08060006a ಹತಾಶ್ವಮಂಜೋಗತಿಭಿಃ ಸುಷೇಣಃ

         ಶಿನಿಪ್ರವೀರಂ ನಿಶಿತೈಃ ಪೃಷತ್ಕೈಃ|

08060006c ಪ್ರಚ್ಚಾದ್ಯ ನೃತ್ಯನ್ನಿವ ಸೌತಿಪುತ್ರಃ

         ಶೈನೇಯಬಾಣಾಭಿಹತಃ ಪಪಾತ||

ರಣದಲ್ಲಿ ನರ್ತಿಸುತ್ತಿರುವನೋ ಎನ್ನುವಂತೆ ಸೌತಿಪುತ್ರ ಸುಷೇಣನು ಅಶ್ವಗಳನ್ನು ಕಳೆದುಕೊಂಡಿದ್ದ ಶಿನಿಪ್ರವೀರ ಸಾತ್ಯಕಿಯನ್ನು ಶೀಘ್ರ ನಿಶಿತ ಪೃಷತ್ಕಗಳಿಂದ ಮುಚ್ಚಿದನು. ಆದರೆ ಶೈನೇಯನ ಬಾಣಗಳಿಂದ ಹೊಡೆಯಲ್ಪಟ್ಟು ಕೆಳಗುರುಳಿದನು.

08060007a ಪುತ್ರೇ ಹತೇ ಕ್ರೋಧಪರೀತಚೇತಾಃ

         ಕರ್ಣಃ ಶಿನೀನಾಂ ಋಷಭಂ ಜಿಘಾಂಸುಃ|

08060007c ಹತೋಽಸಿ ಶೈನೇಯ ಇತಿ ಬ್ರುವನ್ಸ

         ವ್ಯವಾಸೃಜದ್ಬಾಣಮಮಿತ್ರಸಾಹಂ||

ಪುತ್ರನು ಹತನಾಗಲು ವಿಪರೀತವಾಗಿ ಕೋಪಗೊಂಡ ಕರ್ಣನು ಶಿನಿಗಳ ವೃಷಭ ಸಾತ್ಯಕಿಯನ್ನು ಕೊಲ್ಲಲು ಬಯಸಿ “ಶೈನೇಯ! ನೀನು ಸತ್ತೆ!” ಎಂದು ಹೇಳುತ್ತ ಅಮಿತ್ರರಿಗೆ ಸಹಿಸಲಾಗದ ಬಾಣವನ್ನು ಪ್ರಯೋಗಿಸಿದನು.

08060008a ಸ ತಸ್ಯ ಚಿಚ್ಚೇದ ಶರಂ ಶಿಖಂಡೀ

         ತ್ರಿಭಿಸ್ತ್ರಿಭಿಶ್ಚ ಪ್ರತುತೋದ ಕರ್ಣಂ|

08060008c ಶಿಖಂಡಿನಃ ಕಾರ್ಮುಕಂ ಸ ಧ್ವಜಂ ಚ

         ಚ್ಚಿತ್ತ್ವಾ ಶರಾಭ್ಯಾಮಹನತ್ಸುಜಾತಂ||

ಅವನ ಆ ಶರವನ್ನು ಶಿಖಂಡಿಯು ಕತ್ತರಿಸಿ ಮೂವತ್ಮೂರು ಬಾಣಗಳಿಂದ ಕರ್ಣನನ್ನು ಪ್ರತಿಯಾಗಿ ಹೊಡೆದನು. ಅದಕ್ಕೆ ಪ್ರತಿಯಾಗಿ ಕರ್ಣನು ಚೆನ್ನಾಗಿ ಪ್ರಯೋಗಿಸಿದ ಎರಡು ಬಾಣಗಳಿಂದ ಶಿಖಂಡಿಯ ಧನುಸ್ಸನ್ನೂ ಧ್ವಜವನ್ನೂ ಕತ್ತರಿಸಿ ಕೆಳಕ್ಕೆ ಬೀಳಿಸಿದನು.

08060009a ಶಿಖಂಡಿನಂ ಷಡ್ಭಿರವಿಧ್ಯದುಗ್ರೋ

         ದಾಂತೋ ಧಾರ್ಷ್ಟದ್ಯುಮ್ನಶಿರಶ್ಚಕರ್ತ|

08060009c ಅಥಾಭಿನತ್ಸುತಸೋಮಂ ಶರೇಣ

         ಸ ಸಂಶಿತೇನಾಧಿರಥಿರ್ಮಹಾತ್ಮಾ||

ಆ ಉಗ್ರ ಕರ್ಣನು ಶಿಖಂಡಿಯನ್ನು ಆರು ಬಾಣಗಳಿಂದ ಹೊಡೆದು ದಾಂತ ಧೃಷ್ಟದ್ಯುಮ್ನನ ಮಗನ ಶಿರವನ್ನು ಕತ್ತರಿಸಿದನು. ಅನಂತರ ಮಹಾತ್ಮ ಆಧಿರಥಿಯು ಶರಗಳಿಂದ ಸುತಸೋಮನನ್ನು ಆಕ್ರಮಣಿಸಿದನು.

08060010a ಅಥಾಕ್ರಂದೇ ತುಮುಲೇ ವರ್ತಮಾನೇ

         ಧಾರ್ಷ್ಟದ್ಯುಮ್ನೇ ನಿಹತೇ ತತ್ರ ಕೃಷ್ಣಃ|

08060010c ಅಪಾಂಚಾಲ್ಯಂ ಕ್ರಿಯತೇ ಯಾಹಿ ಪಾರ್ಥ

         ಕರ್ಣಂ ಜಹೀತ್ಯಬ್ರವೀದ್ರಾಜಸಿಂಹ||

ಧೃಷ್ಟದ್ಯುಮ್ನನ ಮಗನು ಹತನಾಗಿ ತುಮುಲ ಆಕ್ರಂದವು ನಡೆಯುತ್ತಿರಲು ಕೃಷ್ಣನು “ಪಾರ್ಥ! ಕರ್ಣನು ರಣಭೂಮಿಯನ್ನು ಪಾಂಚಾಲ್ಯರಿಲ್ಲದಿರುವಂತೆ ಮಾಡುತ್ತಿದ್ದಾನೆ. ರಾಜಸಿಂಹ! ಹೋಗಿ ಕರ್ಣನನ್ನು ಸಂಹರಿಸು!” ಎಂದು ಹೇಳಿದನು.

08060011a ತತಃ ಪ್ರಹಸ್ಯಾಶು ನರಪ್ರವೀರೋ

         ರಥಂ ರಥೇನಾಧಿರಥೇರ್ಜಗಾಮ|

08060011c ಭಯೇ ತೇಷಾಂ ತ್ರಾಣಮಿಚ್ಚನ್ಸುಬಾಹುರ್

         ಅಭ್ಯಾಹತಾನಾಂ ರಥಯೂಥಪೇನ||

ಆಗ ರಥಯೂಥಪ ಕರ್ಣನಿಂದ ಪ್ರಹರಿಸಲ್ಪಟ್ಟು ಭಯಗೊಂಡಿರುವ ಅವರನ್ನು ರಕ್ಷಿಸಲು ಬಯಸಿ ಸುಬಾಹು ನರಪ್ರವೀರ ಅರ್ಜುನನು ನಗುತ್ತಾ ತನ್ನ ರಥದಲ್ಲಿ ಕುಳಿತು ಆಧಿರಥನ ರಥದ ಬಳಿ ಬಂದನು.

08060012a ವಿಸ್ಫಾರ್ಯ ಗಾಂಡೀವಮಥೋಗ್ರಘೋಷಂ

         ಜ್ಯಯಾ ಸಮಾಹತ್ಯ ತಲೇ ಭೃಶಂ ಚ|

08060012c ಬಾಣಾಂದಕಾರಂ ಸಹಸೈವ ಕೃತ್ವಾ

         ಜಘಾನ ನಾಗಾಶ್ವರಥಾನ್ನರಾಂಶ್ಚ||

ಉಗ್ರಘೋಷವುಳ್ಳ ಗಾಂಡೀವವನ್ನು ಹಿಡಿದು ಮೌರ್ವಿಯಿಂದ ಎಳೆದು ಟೇಂಕರಿಸಿ, ಅರ್ಜುನನು ಕೂಡಲೇ ಬಾಣಾಂಧಕರವನ್ನು ಸೃಷ್ಟಿಸಿ, ಆನೆ-ಕುದುರೆ-ರಥ-ಪದಾತಿಗಳನ್ನು ಸಂಹರಿಸಿದನು.

08060013a ತಂ ಭೀಮಸೇನೋಽನು ಯಯೌ ರಥೇನ

         ಪೃಷ್ಠೇ ರಕ್ಷನ್ಪಾಂಡವಮೇಕವೀರಂ|

08060013c ತೌ ರಾಜಪುತ್ರೌ ತ್ವರಿತೌ ರಥಾಭ್ಯಾಂ

         ಕರ್ಣಾಯ ಯಾತಾವರಿಭಿರ್ವಿಮುಕ್ತೌ||

ಆ ಪಾಂಡವ ಏಕವೀರನನ್ನು ಹಿಂದಿನಿಂದ ರಕ್ಷಿಸುತ್ತಾ ಭೀಮಸೇನನು ರಥದಿಂದ ಹಿಂಬಾಲಿಸಿ ಬಂದನು. ಆ ಇಬ್ಬರು ರಾಜಪುತ್ರರೂ ತ್ವರೆಮಾಡಿ ರಥಗಳಿಂದ ಕರ್ಣನ ರಥದ ಕಡೆ ಧಾವಿಸಿ ಆಕ್ರಮಣಿಸಿದರು.

08060014a ಅತ್ರಾಂತರೇ ಸುಮಹತ್ಸೂತಪುತ್ರಶ್

         ಚಕ್ರೇ ಯುದ್ಧಂ ಸೋಮಕಾನ್ಸಂಪ್ರಮೃದ್ನನ್|

08060014c ರಥಾಶ್ವಮಾತಂಗಗಣಾಂ ಜಘಾನ

         ಪ್ರಚ್ಚಾದಯಾಮಾಸ ದಿಶಃ ಶರೈಶ್ಚ||

ಅದರ ಮಧ್ಯದಲ್ಲಿ ಸೂತಪುತ್ರನು ಸೋಮಕರನ್ನು ಮರ್ದಿಸುತ್ತಾ ಜೋರಾಗಿ ಯುದ್ಧಮಾಡುತ್ತಿದ್ದನು. ಅವನು ರಥ-ಅಶ್ವ-ಮಾತಂಗ ಗಣಗಳನ್ನು ಸಂಹರಿಸಿ, ಶರಗಳಿಂದ ದಿಕ್ಕುಗಳನ್ನು ಆಚ್ಛಾದಿಸಿದನು.

08060015a ತಮುತ್ತಮೌಜಾ ಜನಮೇಜಯಶ್ಚ

         ಕ್ರುದ್ಧೌ ಯುಧಾಮನ್ಯುಶಿಖಂಡಿನೌ ಚ|

08060015c ಕರ್ಣಂ ವಿನೇದುಃ ಸಹಿತಾಃ ಪೃಷತ್ಕೈಃ

         ಸಮ್ಮರ್ದಮಾನಾಃ ಸಹ ಪಾರ್ಷತೇನ||

ಅದಕ್ಕೆ ಪ್ರತಿಯಾಗಿ ಉತ್ತಮೌಜಸ, ಜನಮೇಜಯ, ಕ್ರುದ್ಧರಾದ ಯುಧಾಮನ್ಯು-ಶಿಖಂಡಿಯರು ಪಾರ್ಷತ ಧೃಷ್ಟದ್ಯುಮ್ನನನ್ನೊಡಗೂಡಿ ಪೃಷತ್ಕಗಳಿಂದ ಕರ್ಣನನ್ನು ಮರ್ದಿಸುತ್ತಾ ಸಿಂಹನಾದಗೈದರು.

08060016a ತೇ ಪಂಚ ಪಾಂಚಾಲರಥಾಃ ಸುರೂಪೈರ್

         ವೈಕರ್ತನಂ ಕರ್ಣಮಭಿದ್ರವಂತಃ|

08060016c ತಸ್ಮಾದ್ರಥಾಚ್ಚ್ಯಾವಯಿತುಂ ನ ಶೇಕುರ್

         ಧೈರ್ಯಾತ್ಕೃತಾತ್ಮಾನಮಿವೇಂದ್ರಿಯಾಣಿ||

ವೈಕರ್ತನ ಕರ್ಣನನ್ನು ಆಕ್ರಮಣಿಸುತ್ತಿದ್ದ ಆ ಐವರು ಸುರೂಪೀ ಪಾಂಚಾಲಮಹಾರಥರು ಜಿತೇಂದ್ರಿಯನನ್ನು ಸ್ಥೈರ್ಯದಿಂದ ಕದಲಿಸಲು ಶಕ್ಯವಲ್ಲದ ಪಂಚೇಂದ್ರಿಯಗಳಂತೆ ಕರ್ಣನನ್ನು ರಥದಿಂದ ಕದಲಿಸಲು ಶಕ್ಯರಾಗಲಿಲ್ಲ.

08060017a ತೇಷಾಂ ಧನೂಂಷಿ ಧ್ವಜವಾಜಿಸೂತಾಂಸ್

         ತೂಣಂ ಪತಾಕಾಶ್ಚ ನಿಕೃತ್ಯ ಬಾಣೈಃ|

08060017c ತಾನ್ಪಂಚಭಿಃ ಸ ತ್ವಹನತ್ಪೃಷತ್ಕೈಃ

         ಕರ್ಣಸ್ತತಃ ಸಿಂಹ ಇವೋನ್ನನಾದ||

ಅವರ ಧನುಸ್ಸು, ಧ್ವಜ, ಕುದುರೆಗಳು, ಸಾರಥಿಗಳು, ಪತಾಕೆಗಳನ್ನು ಬಾಣಗಳಿಂದ ಕತ್ತರಿಸಿ ಕರ್ಣನು ಆ ಐವರನ್ನೂ ಪೃಷತ್ಕಗಳಿಂದ ಪ್ರಹರಿಸಿ ಸಿಂಹದಂತೆ ಗರ್ಜಿಸಿದನು.

08060018a ತಸ್ಯಾಸ್ಯತಸ್ತಾನಭಿನಿಘ್ನತಶ್ಚ

         ಜ್ಯಾಬಾಣಹಸ್ತಸ್ಯ ಧನುಃಸ್ವನೇನ|

08060018c ಸಾದ್ರಿದ್ರುಮಾ ಸ್ಯಾತ್ಪೃಥಿವೀ ವಿಶೀರ್ಣಾ

         ಇತ್ಯೇವ ಮತ್ವಾ ಜನತಾ ವ್ಯಷೀದತ್||

ಮೌರ್ವಿ-ಬಾಣಗಳನ್ನು ಹಿಡಿದು ನಿರಂತರವಾಗಿ ಬಾಣಗಳನ್ನು ಪ್ರಯೋಗಿಸಿ ಶತ್ರುಗಳನ್ನು ಸಂಹರಿಸುತ್ತಿದ್ದ ಅವನ ಧನುಸ್ಸಿನ ಟೇಂಕಾರ ಶಬ್ಧದಿಂದ ಗಿರಿವೃಕ್ಷಗಳೊಂದಿಗೆ ಭೂಮಿಯು ಸೀಳಿಹೋಗುತ್ತಿದೆಯೋ ಎಂದು ತಿಳಿದು ಜನರು ಖಿನ್ನರಾದರು.

08060019a ಸ ಶಕ್ರಚಾಪಪ್ರತಿಮೇನ ಧನ್ವನಾ

         ಭೃಶಾತತೇನಾಧಿರಥಿಃ ಶರಾನ್ಸೃಜನ್|

08060019c ಬಭೌ ರಣೇ ದೀಪ್ತಮರೀಚಿಮಂಡಲೋ

         ಯಥಾಂಶುಮಾಲೀ ಪರಿವೇಷವಾಂಸ್ತಥಾ||

ಆಧಿರಥಿಯು ಶಕ್ರಚಾಪದಂತಿರುವ ಧನುಸ್ಸಿನಿಂದ ಅನವರತವಾಗಿ ಅನೇಕ ಶರಗಳನ್ನು ಸೃಷ್ಟಿಸುತ್ತಾ ಮರೀಚಿಮಂಡಲದಲ್ಲಿ ಉರಿಯುತ್ತಿರುವ ಅಂಶುಮಾಲೀ ಸೂರ್ಯನಂತೆಯೇ ರಣದಲ್ಲಿ ಪ್ರಕಾಶಿಸುತ್ತಿದ್ದನು.

08060020a ಶಿಖಂಡಿನಂ ದ್ವಾದಶಭಿಃ ಪರಾಭಿನಚ್

         ಚಿತೈಃ ಶರೈಃ ಷಡ್ಭಿರಥೋತ್ತಮೌಜಸಂ|

08060020c ತ್ರಿಭಿರ್ಯುಧಾಮನ್ಯುಮವಿಧ್ಯದಾಶುಗೈಸ್

         ತ್ರಿಭಿಸ್ತ್ರಿಭಿಃ ಸೋಮಕಪಾರ್ಷತಾತ್ಮಜೌ||

ಅವನು ಶಿಖಂಡಿಯನ್ನು ಹನ್ನೆರಡು ಶರಗಳಿಂದ, ಉತ್ತಮೌಜಸನನ್ನು ಆರು ನಿಶಿತ ಬಾಣಗಳಿಂದಲೂ, ಯುಧಾಮನ್ಯುವನ್ನು ಮೂರು ಬಾಣಗಳಿಂದ ಹೊಡೆದು ಮೂರು ಮೂರರಿಂದ ಜನಮೇಜಯ-ಧೃಷ್ಟದ್ಯುಮ್ನರನ್ನು ಪ್ರಹರಿಸಿದನು.

08060021a ಪರಾಜಿತಾಃ ಪಂಚ ಮಹಾರಥಾಸ್ತು ತೇ

         ಮಹಾಹವೇ ಸೂತಸುತೇನ ಮಾರಿಷ|

08060021c ನಿರುದ್ಯಮಾಸ್ತಸ್ಥುರಮಿತ್ರಮರ್ದನಾ

         ಯಥೇಂದ್ರಿಯಾರ್ಥಾತ್ಮವತಾ ಪರಾಜಿತಾಃ||

ಮಾರಿಷ! ಜಿತೇಂದ್ರಿಯ ಆತ್ಮವತನಿಂದ ಇಂದ್ರಿಯಗಳು ಹೇಗೋ ಹಾಗೆ ಮಹಾಹವದಲ್ಲಿ ಸೂತಸುತನಿಂದ ಪರಾಜಿತರಾದ ಆ ಐವರು ಅಮಿತ್ರಮರ್ದನ ಮಹಾರಥರು ನಿಶ್ಚೇಷ್ಟರಾಗಿ ನಿಂತಿದ್ದರು.

08060022a ನಿಮಜ್ಜತಸ್ತಾನಥ ಕರ್ಣಸಾಗರೇ

         ವಿಪನ್ನನಾವೋ ವಣಿಜೋ ಯಥಾರ್ಣವೇ|

08060022c ಉದ್ದಧ್ರಿರೇ ನೌಭಿರಿವಾರ್ಣವಾದ್ರಥೈಃ

         ಸುಕಲ್ಪಿತೈರ್ದ್ರೌಪದಿಜಾಃ ಸ್ವಮಾತುಲಾನ್||

ಸಮುದ್ರದಲ್ಲಿ ಒಡೆದುಹೋದ ನಾವೆಯಲ್ಲಿರುವ ವಣಿಜರಂತೆ ಕರ್ಣಸಾಗರದಲ್ಲಿ ಮುಳುಗಿಹೋಗುತ್ತಿರುವ ತಮ್ಮ ಸೋದರ ಮಾವಂದಿರನ್ನು ದ್ರೌಪದಿಯ ಐವರು ಮಕ್ಕಳು ಸಾಗರದಲ್ಲಿ ಹೊಸ ನಾವೆಗಳಂತಿರುವ ಸುಸಜ್ಜಿತ ರಥಗಳಿಂದ ಉದ್ಧರಿಸಿದರು.

08060023a ತತಃ ಶಿನೀನಾಂ ಋಷಭಃ ಶಿತೈಃ ಶರೈರ್

         ನಿಕೃತ್ಯ ಕರ್ಣಪ್ರಹಿತಾನಿಷೂನ್ಬಹೂನ್|

08060023c ವಿದಾರ್ಯ ಕರ್ಣಂ ನಿಶಿತೈರಯಸ್ಮಯೈಸ್

         ತವಾತ್ಮಜಂ ಜ್ಯೇಷ್ಠಮವಿಧ್ಯದಷ್ಟಭಿಃ||

ಆಗ ಶಿನಿಪ್ರವೀರ ಸಾತ್ಯಕಿಯು ಕರ್ಣನು ಪ್ರಯೋಗಿಸಿದ ಅನೇಕ ಬಾಣಗಳನ್ನು ಕತ್ತರಿಸಿ, ಕರ್ಣನನ್ನು ನಿಶಿತ ಆಯಸಗಳಿಂದ ಗಾಯಗೊಳಿಸಿ, ನಿನ್ನ ಹಿರಿಯ ಮಗನನ್ನು ಎಂಟು ಬಾಣಗಳಿಂದ ಹೊಡೆದನು.

08060024a ಕೃಪೋಽಥ ಭೋಜಶ್ಚ ತವಾತ್ಮಜಸ್ತಥಾ

         ಸ್ವಯಂ ಚ ಕರ್ಣೋ ನಿಶಿತೈರತಾಡಯತ್|

08060024c ಸ ತೈಶ್ಚತುರ್ಭಿರ್ಯುಯುಧೇ ಯದೂತ್ತಮೋ

         ದಿಗೀಶ್ವರೈರ್ದೈತ್ಯಪತಿರ್ಯಥಾ ತಥಾ||

ಕೂಡಲೇ ಕೃಪ, ಭೋಜ, ನಿನ್ನ ಮಗ ಮತ್ತು ಸ್ವಯಂ ಕರ್ಣರು ಅವನನ್ನು ನಿಶಿತ ಬಾಣಗಳಿಂದ ಹೊಡೆದರು. ಆ ಯದೂತ್ತಮನಾದರೋ ಹಿಂದೆ ದೈತ್ಯಪತಿಯು ದಿಕ್ಪಾಲಕರನ್ನು ಎದುರಿಸಿದಂತೆ ಆ ನಾಲ್ವರನ್ನು ಎದುರಿಸಿ ಯುದ್ಧಮಾಡಿದನು.

08060025a ಸಮಾನತೇನೇಷ್ವಸನೇನ ಕೂಜತಾ

         ಭೃಶಾತತೇನಾಮಿತಬಾಣವರ್ಷಿಣಾ|

08060025c ಬಭೂವ ದುರ್ಧರ್ಷತರಃ ಸ ಸಾತ್ಯಕಿಃ

         ಶರನ್ನಭೋಮಧ್ಯಗತೋ ಯಥಾ ರವಿಃ||

ಸಮಾನ ನಿಸ್ವನದಿಂದ ಟೇಂಕರಿಸುತ್ತಿರುವ ಅಮಿತ ಬಾಣಗಳ ಮಳೆಗರೆಯುತ್ತಿರುವ ಆ ಧನುಸ್ಸನ್ನು ಹಿಡಿದ ಸಾತ್ಯಕಿಯು ಶರತ್ಕಾಲದಲ್ಲಿ ಆಕಾಶದ ಮಧ್ಯಗತನಾಗಿದ್ದ ರವಿಯಂತೆ ದುರ್ಧರ್ಷನಾದನು.

08060026a ಪುನಃ ಸಮಾಸಾದ್ಯ ರಥಾನ್ಸುದಂಶಿತಾಃ

         ಶಿನಿಪ್ರವೀರಂ ಜುಗುಪುಃ ಪರಂತಪಾಃ|

08060026c ಸಮೇತ್ಯ ಪಾಂಚಾಲರಥಾ ಮಹಾರಣೇ

         ಮರುದ್ಗಣಾಃ ಶಕ್ರಮಿವಾರಿನಿಗ್ರಹೇ||

ಅರಿನಿಗ್ರಹದಲ್ಲಿ ಶಕ್ರನನ್ನು ಮರುದ್ಗಣಗಳು ಹೇಗೋ ಹಾಗೆ ಪುನಃ ಉತ್ತಮ ರಕ್ಷಣೆಯುಳ್ಳ ರಥಗಳನ್ನು ಪಡೆದು ಪರಂತಪ ಪಾಂಚಾಲರಥರು ಒಂದಾಗಿ ಮಹಾರಣದಲ್ಲಿ ಶಿನಿಪ್ರವೀರನನ್ನು ರಕ್ಷಿಸಲು ಬಂದರು.

08060027a ತತೋಽಭವದ್ಯುದ್ಧಮತೀವ ದಾರುಣಂ

         ತವಾಹಿತಾನಾಂ ತವ ಸೈನಿಕೈಃ ಸಹ|

08060027c ರಥಾಶ್ವಮಾತಂಗವಿನಾಶನಂ ತಥಾ

         ಯಥಾ ಸುರಾಣಾಮಸುರೈಃ ಪುರಾಭವತ್||

ಆಗ ನಿನ್ನ ಅಹಿತರು ಮತ್ತು ನಿನ್ನ ಸೈನಿಕರ ನಡುವೆ ಹಿಂದೆ ಸುರಾಸುರರ ನಡುವೆ ನಡೆದಂತೆ ರಥ-ಅಶ್ವ-ಮಾತಂಗ ವಿನಾಶಕಾರಕ ಅತೀವ ದಾರುಣ ಯುದ್ಧವು ನಡೆಯಿತು.

08060028a ರಥದ್ವಿಪಾ ವಾಜಿಪದಾತಯೋಽಪಿ ವಾ

         ಭ್ರಮಂತಿ ನಾನಾವಿಧಶಸ್ತ್ರವೇಷ್ಟಿತಾಃ|

08060028c ಪರಸ್ಪರೇಣಾಭಿಹತಾಶ್ಚ ಚಸ್ಖಲುರ್

         ವಿನೇದುರಾರ್ತಾ ವ್ಯಸವೋಽಪತಂತ ಚ||

ರಥಗಳು, ಆನೆಗಳು, ಕುದುರೆಗಳು, ಮತ್ತು ಪದಾತಿಗಳು ನಾನಾವಿಧದ ಶಸ್ತ್ರಗಳಿಂದ ಪ್ರಹರಿಸಲ್ಪಟ್ಟು ತಿರುಗುತ್ತಿದ್ದು, ಪರಸ್ಪರರಿಂದ ಅಭಿಹತರಾಗಿ ಭಯಪಟ್ಟು, ಆರ್ತರಾಗಿ ಕೂಗುತ್ತಾ ದುಃಖಿತರಾಗಿ ಕೆಳಗೆ ಬೀಳುತ್ತಿದ್ದವು.

08060029a ತಥಾ ಗತೇ ಭೀಮಮಭೀಸ್ತವಾತ್ಮಜಃ

         ಸಸಾರ ರಾಜಾವರಜಃ ಕಿರಂ ಶರೈಃ|

08060029c ತಮಭ್ಯಧಾವತ್ತ್ವರಿತೋ ವೃಕೋದರೋ

         ಮಹಾರುರುಂ ಸಿಂಹ ಇವಾಭಿಪೇತಿವಾನ್||

ಹೀಗೆ ಯುದ್ಧವು ನಡೆಯುತ್ತಿರಲು ರಾಜನ ತಮ್ಮ ನಿನ್ನ ಮಗ ದುಃಶಾಸನನು ಭಯರಹಿತನಾಗಿ ಬಾಣಗಳನ್ನು ಎರಚುತ್ತಾ ಭೀಮಸೇನನನ್ನು ಸಮೀಪಿಸಿದನು. ಮಹಾರುರುವಿನ ಮೇಲೆ ಸಿಂಹವು ಹೇಗೋ ಹಾಗೆ ತ್ವರೆಮಾಡಿ ಬರುತ್ತಿದ್ದ ಅವನ ಮೇಲೆ ವೃಕೋದರನು ಎರಗಿದನು.

08060030a ತತಸ್ತಯೋರ್ಯುದ್ಧಮತೀತಮಾನುಷಂ

         ಪ್ರದೀವ್ಯತೋಃ ಪ್ರಾಣದುರೋದರೇಽಭವತ್|

08060030c ಪರಸ್ಪರೇಣಾಭಿನಿವಿಷ್ಟರೋಷಯೋರ್

         ಉದಗ್ರಯೋಃ ಶಂಬರಶಕ್ರಯೋರ್ಯಥಾ||

ಆಗ ಪ್ರಾಣಗಳನ್ನೇ ಪಣವನ್ನಾಗಿಟ್ಟ ಪರಸ್ಪರರ ಮೇಲೆದ್ದ ರೋಷದಿಂದ ತುಂಬಿಹೋಗಿದ್ದ ಅವರಿಬ್ಬರ ನಡುವೆ ಹಿಂದೆ ಶಂಬರ-ಶಕ್ರರ ನಡುವೆ ನಡೆದ ಮಹಾಸಂಗ್ರಾಮದಂತೆ ಅತೀವ ಅಮಾನುಷ ಯುದ್ಧವು ನಡೆಯಿತು.

08060031a ಶರೈಃ ಶರೀರಾಂತಕರೈಃ ಸುತೇಜನೈರ್

         ನಿಜಘ್ನತುಸ್ತಾವಿತರೇತರಂ ಭೃಶಂ|

08060031c ಸಕೃತ್ಪ್ರಭಿನ್ನಾವಿವ ವಾಶಿತಾಂತರೇ

         ಮಹಾಗಜೌ ಮನ್ಮಥಸಕ್ತಚೇತಸೌ||

ಮದೋದಕಗಳನ್ನು ಸುರಿಸುತ್ತಿರುವ ಮನ್ಮಥಸಕ್ತಚೇತಸ ಮಹಾಗಜಗಳೆರಡು ರತಿಸುಖವನ್ನಪೇಕ್ಷಿಸಿ ನಿಂತಿರುವ ಹೆಣ್ಣಾನೆಯ ಸಮೀಪದಲ್ಲಿ ಹೋರಾಡುವಂತೆ ಅವರಿಬ್ಬರೂ ಶರೀರಗಳಿಗೆ ನೋವನ್ನುಂಟು ಮಾಡುವ ಹರಿತ ಶರಗಳಿಂದ ಅನ್ಯೋನ್ಯರನ್ನು ಬಹಳವಾಗಿ ಗಾಯಗೊಳಿಸುತ್ತಿದ್ದರು.

08060032a ತವಾತ್ಮಜಸ್ಯಾಥ ವೃಕೋದರಸ್ತ್ವರನ್

         ಧನುಃ ಕ್ಷುರಾಭ್ಯಾಂ ಧ್ವಜಮೇವ ಚಾಚ್ಛಿನತ್|

08060032c ಲಲಾಟಮಪ್ಯಸ್ಯ ಬಿಭೇದ ಪತ್ರಿಣಾ

         ಶಿರಶ್ಚ ಕಾಯಾತ್ಪ್ರಜಹಾರ ಸಾರಥೇಃ||

ಆಗ ವೃಕೋದರನು ತ್ವರೆಮಾಡಿ ಕ್ಷುರಗಳೆರಡರಿಂದ ನಿನ್ನ ಮಗನ ಧನುಸ್ಸನ್ನೂ ಧ್ವಜವನ್ನೂ ಕತ್ತರಿಸಿದನು. ಪತ್ರಿಯಿಂದ ಅವನ ಹಣೆಗೂ ಹೊಡೆದು ಅವನ ಸಾರಥಿಯ ಶಿರವನ್ನು ಶರೀರದಿಂದ ಬೇರ್ಪಡಿಸಿದನು.

08060033a ಸ ರಾಜಪುತ್ರೋಽನ್ಯದವಾಪ್ಯ ಕಾರ್ಮುಕಂ

         ವೃಕೋದರಂ ದ್ವಾದಶಭಿಃ ಪರಾಭಿನತ್|

08060033c ಸ್ವಯಂ ನಿಯಚ್ಚಂಸ್ತುರಗಾನಜಿಹ್ಮಗೈಃ

         ಶರೈಶ್ಚ ಭೀಮಂ ಪುನರಭ್ಯವೀವೃಷತ್||

ಆ ರಾಜಪುತ್ರನು ಅನ್ಯ ಧನುಸ್ಸನ್ನು ತೆಗೆದುಕೊಂಡು ವೃಕೋದರನನ್ನು ಹನ್ನೆರಡು ಬಾಣಗಳಿಂದ ಪ್ರಹರಿಸಿದನು. ತಾನೇ ಸ್ವತಃ ಕುದುರೆಗಳನ್ನು ನಿಯಂತ್ರಿಸುತ್ತಾ ಜಿಹ್ಮಗ ಶರಗಳನ್ನು ಭೀಮನ ಮೇಲೆ ಪುನಃ ಸುರಿಸಿದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ದುಃಶಾಸನಭೀಮಸೇನಯುದ್ಧೇ ಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ದುಃಶಾಸನಭೀಮಸೇನಯುದ್ಧ ಎನ್ನುವ ಅರವತ್ತನೇ ಅಧ್ಯಾಯವು.

Related image

Comments are closed.