ಕರ್ಣ ಪರ್ವ
೬
ಹದಿನೈದನೇ ರಾತ್ರಿ ಕರ್ಣಾಭಿಷೇಕ
ದ್ರೋಣನ ಮರಣದ ನಂತರ, ಸಾಯಂಕಾಲವಾಗುತ್ತಿದ್ದಂತೆ ಎರಡೂ ಸೇನೆಗಳೂ ಯುದ್ಧದಿಂದ ಹಿಂದೆ ಸರಿದುದು (೧-೫). ದುರ್ಯೋಧನನು ಕುರುಗಳೊಂದಿಗೆ ರಹಸ್ಯದಲ್ಲಿ ಮಂತ್ರಾಲೋಚನೆಗೈದುದು (೬-೧೦). ಅಶ್ವತ್ಥಾಮನು ಕರ್ಣನನ್ನು ಸೇನಾಪತಿಯನ್ನಾಗಿ ನಿಯೋಗಿಸುವಂತೆ ಸೂಚಿಸಿದುದು (೧೧-೧೫). ದುರ್ಯೋಧನನು ಕರ್ಣನಲ್ಲಿ ಸೇನಾಪತಿಯಾಗುವಂತೆ ಕೇಳಿಕೊಂಡಿದುದು (೧೬-೩೨). ಕರ್ಣನು ಒಪ್ಪಿಗೆಯನ್ನು ನೀಡಲು ದುರ್ಯೋಧನನು ಅವನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದುದು (೧೬-೪೬).
08006001 ಸಂಜಯ ಉವಾಚ|
08006001a ಹತೇ ದ್ರೋಣೇ ಮಹೇಷ್ವಾಸೇ ತಸ್ಮಿನ್ನಹನಿ ಭಾರತ|
08006001c ಕೃತೇ ಚ ಮೋಘಸಂಕಲ್ಪೇ ದ್ರೋಣಪುತ್ರೇ ಮಹಾರಥೇ||
08006002a ದ್ರವಮಾಣೇ ಮಹಾರಾಜ ಕೌರವಾಣಾಂ ಬಲೇ ತಥಾ|
08006002c ವ್ಯೂಹ್ಯ ಪಾರ್ಥಃ ಸ್ವಕಂ ಸೈನ್ಯಮತಿಷ್ಠದ್ಭ್ರಾತೃಭಿಃ ಸಹ||
ಸಂಜಯನು ಹೇಳಿದನು: “ಭಾರತ! ಮಹಾರಾಜ! ಆ ದಿನ ಮಹೇಷ್ವಾಸ ದ್ರೋಣನು ಹತನಾಗಲು, ಮಹಾರಥ ದ್ರೋಣಪುತ್ರನು ಮಾಡಿದ ಸಂಕಲ್ಪವು ವ್ಯರ್ಥವಾಗಲು, ಮತ್ತು ಹಾಗೆ ಕೌರವರ ಸೇನೆಯು ಓಡಿಹೋಗುತ್ತಿರಲು ಪಾರ್ಥ ಯುಧಿಷ್ಠಿರನು ಸಹೋದರರೊಂದಿಗೆ ತನ್ನ ಸೇನೆಯ ವ್ಯೂಹವನ್ನು ರಚಿಸಿ ಸಿದ್ಧನಾದನು.
08006003a ತಮವಸ್ಥಿತಮಾಜ್ಞಾಯ ಪುತ್ರಸ್ತೇ ಭರತರ್ಷಭ|
08006003c ದ್ರವಚ್ಚ ಸ್ವಬಲಂ ದೃಷ್ಟ್ವಾ ಪೌರುಷೇಣ ನ್ಯವಾರಯತ್||
ಭರತರ್ಷಭ! ಅವನು ಹಾಗೆ ಸಿದ್ಧನಾಗಿರುವುದನ್ನು ತಿಳಿದು ನಿನ್ನ ಮಗನು ಓಡಿಹೋಗುತ್ತಿರುವ ತನ್ನ ಸೇನೆಯನ್ನು ನೋಡಿ ಪೌರುಷದ ಮಾತುಗಳಿಂದ ತಡೆದನು.
08006004a ಸ್ವಮನೀಕಮವಸ್ಥಾಪ್ಯ ಬಾಹುವೀರ್ಯೇ ವ್ಯವಸ್ಥಿತಃ|
08006004c ಯುದ್ಧ್ವಾ ಚ ಸುಚಿರಂ ಕಾಲಂ ಪಾಂಡವೈಃ ಸಹ ಭಾರತ||
08006005a ಲಬ್ಧಲಕ್ಷೈಃ ಪರೈರ್ಹೃಷ್ಟೈರ್ವ್ಯಾಯಚ್ಚದ್ಭಿಶ್ಚಿರಂ ತದಾ|
08006005c ಸಂಧ್ಯಾಕಾಲಂ ಸಮಾಸಾದ್ಯ ಪ್ರತ್ಯಾಹಾರಮಕಾರಯತ್||
ಭಾರತ! ತನ್ನ ಸೇನೆಯನ್ನು ಬಾಹುವೀರ್ಯದಿಂದ ವ್ಯವಸ್ಥಿತವಾಗಿಸಿ ಸ್ಥಾಪಿಸಿಕೊಂಡು ಬಹಳ ಹೊತ್ತು ಲಬ್ಧಲಕ್ಷ್ಯರಾಗಿದ್ದ ಹೃಷ್ಟರಾಗಿದ್ದ ಪರಿಶ್ರಮಪಟ್ಟು ಯುದ್ಧಮಾಡುತ್ತಿದ್ದ ಪಾಂಡವರೊಂದಿಗೆ ಯುದ್ಧಮಾಡುತ್ತಿದ್ದು, ಸಂಧ್ಯಾಕಾಲವಾಗುತ್ತಿದ್ದಂತೆ ಸೇನೆಗಳು ಹಿಂದೆಸರಿಯುವಂತೆ ಮಾಡಿದನು.
08006006a ಕೃತ್ವಾವಹಾರಂ ಸೈನ್ಯಾನಾಂ ಪ್ರವಿಶ್ಯ ಶಿಬಿರಂ ಸ್ವಕಂ|
08006006c ಕುರವೋಽತ್ಮಹಿತಂ ಮಂತ್ರಂ ಮಂತ್ರಯಾಂ ಚಕ್ರಿರೇ ತದಾ||
ಸೇನೆಗಳು ಹಿಂದಿರುಗುವಂತೆ ಮಾಡಿ ತಾನೂ ಶಿಬಿರವನ್ನು ಪ್ರವೇಶಿಸಿ, ಆತ್ಮಹಿತಕ್ಕಾಗಿ ಕುರುಗಳೊಂದಿಗೆ ರಹಸ್ಯದಲ್ಲಿ ಮಂತ್ರಾಲೋಚನೆಗೈದನು.
08006007a ಪರ್ಯಂಕೇಷು ಪರಾರ್ಧ್ಯೇಷು ಸ್ಪರ್ಧ್ಯಾಸ್ತರಣವತ್ಸು ಚ|
08006007c ವರಾಸನೇಷೂಪವಿಷ್ಟಾಃ ಸುಖಶಯ್ಯಾಸ್ವಿವಾಮರಾಃ||
ಬಹುಮೂಲ್ಯ ರತ್ನಗಂಬಳಿಗಳಿಂದ ಅಚ್ಛಾದಿತ ಪರ್ಯಂಕಗಳಲ್ಲಿಯೂ ಶ್ರೇಷ್ಠ ಸಿಂಹಾಸನಗಳಲ್ಲಿಯೂ ಕುಳಿತಿದ್ದ ಅವರು ಸುಖ ಸುಪ್ಪತ್ತಿಗೆಯ ಮೇಲೆ ಕುಳಿತಿದ್ದ ಅಮರರರಂತೆ ವಿರಾಜಿಸುತ್ತಿದ್ದರು.
08006008a ತತೋ ದುರ್ಯೋಧನೋ ರಾಜಾ ಸಾಮ್ನಾ ಪರಮವಲ್ಗುನಾ|
08006008c ತಾನಾಭಾಷ್ಯ ಮಹೇಷ್ವಾಸಾನ್ಪ್ರಾಪ್ತಕಾಲಮಭಾಷತ||
ಆಗ ರಾಜಾ ದುರ್ಯೋಧನನು ಸಾಂತ್ವಪೂರಕ ಸುಮಧುರ ಮಾತುಗಳಿಂದ ಅಲ್ಲಿದ್ದ ಮಹೇಷ್ವಾಸರಿಗೆ ಸಮಯೋಚಿತ ಈ ಮಾತುಗಳನ್ನಾಡಿದನು:
08006009a ಮತಿಂ ಮತಿಮತಾಂ ಶ್ರೇಷ್ಠಾಃ ಸರ್ವೇ ಪ್ರಬ್ರೂತ ಮಾಚಿರಂ|
08006009c ಏವಂ ಗತೇ ತು ಯತ್ಕಾರ್ಯಂ ಭವೇತ್ಕಾರ್ಯಕರಂ ನೃಪಾಃ||
“ಬುದ್ಧಿವಂತರಲ್ಲಿ ಶ್ರೇಷ್ಠ ನರೋತ್ತಮರೇ! ಪರಿಸ್ಥಿತಿಯು ಹೀಗಿರುವಾಗ ನಾವೇನು ಮಾಡಬೇಕು? ಮಾಡಬೇಕಾದ ಅತಿಮುಖ್ಯ ಕಾರ್ಯವೇನು ಎನ್ನುವುದನ್ನು ಸಮಾಲೋಚಿಸಿ ಈಗಲೇ ಹೇಳಿ!”
08006010a ಏವಮುಕ್ತೇ ನರೇಂದ್ರೇಣ ನರಸಿಂಹಾ ಯುಯುತ್ಸವಃ|
08006010c ಚಕ್ರುರ್ನಾನಾವಿಧಾಶ್ಚೇಷ್ಟಾಃ ಸಿಂಹಾಸನಗತಾಸ್ತದಾ||
ರಾಜನು ಹೀಗೆ ಹೇಳಲು ಸಿಂಹಾಸನಾರೂಢರಾಗಿದ್ದ ಆ ಯುದ್ಧೋತ್ಸುಕ ನರಸಿಂಹರು ನಾನಾವಿಧದ ಅಂಗಚೇಷ್ಟೆಗಳನ್ನು ಮಾಡಿದರು.
08006011a ತೇಷಾಂ ನಿಶಮ್ಯೇಂಗಿತಾನಿ ಯುದ್ಧೇ ಪ್ರಾಣಾಂ ಜುಹೂಷತಾಂ|
08006011c ಸಮುದ್ವೀಕ್ಷ್ಯ ಮುಖಂ ರಾಜ್ಞೋ ಬಾಲಾರ್ಕಸಮವರ್ಚಸಃ|
08006011e ಆಚಾರ್ಯಪುತ್ರೋ ಮೇಧಾವೀ ವಾಕ್ಯಜ್ಞೋ ವಾಕ್ಯಮಾದದೇ||
ಯುದ್ಧಮಾಡಿಯೇ ಪ್ರಾಣವನ್ನು ತ್ಯಜಿಸಬೇಕೆಂಬ ಅವರ ಮನೋಗತ ಅಭಿಪ್ರಾಯವನ್ನು ಅಂಗಚೇಷ್ಟೆಗಳ ಮೂಲಕವಾಗಿಯೇ ಅರಿತುಕೊಂಡ ಮೇಧಾವೀ ವಾಕ್ಯಜ್ಞ ಆಚಾರ್ಯಪುತ್ರ ಅಶ್ವತ್ಥಾಮನು ರಾಜನ ಮುಖವನ್ನು ನೋಡಿ ಈ ಮಾತನ್ನು ಮುಂದಿರಿಸಿದನು:
08006012a ರಾಗೋ ಯೋಗಸ್ತಥಾ ದಾಕ್ಷ್ಯಂ ನಯಶ್ಚೇತ್ಯರ್ಥಸಾಧಕಾಃ|
08006012c ಉಪಾಯಾಃ ಪಂಡಿತೈಃ ಪ್ರೋಕ್ತಾಃ ಸರ್ವೇ ದೈವಸಮಾಶ್ರಿತಾಃ||
“ಅರ್ಥಸಾಧನೆಗೆ ಉಪಾಯಗಳೆಂದು ಪಂಡಿತರು ಹೇಳುವ ರಾಗ (ರಾಜನಲ್ಲಿ ಅನುರಾಗ), ಯೋಗ (ಸಾಧನ ಸಂಪತ್ತಿ), ದಾಕ್ಷ್ಯ (ದಕ್ಷತೆ-ಸಾಮರ್ಥ್ಯ-ಕುಶಲತೆ), ಮತ್ತು ನಯ (ನೀತಿ, ವಿವೇಕದಿಂದ ಕೂಡಿದ ವ್ಯವಹಾರನೈಪುಣ್ಯತೆ, ರಾಜಕೀಯ ಚತುರತೆ) ಇವೆಲ್ಲವೂ ದೈವವನ್ನೇ ಆಶ್ರಯಿಸಿವೆ.
08006013a ಲೋಕಪ್ರವೀರಾ ಯೇಽಸ್ಮಾಕಂ ದೇವಕಲ್ಪಾ ಮಹಾರಥಾಃ|
08006013c ನೀತಿಮಂತಸ್ತಥಾ ಯುಕ್ತಾ ದಕ್ಷಾ ರಕ್ತಾಶ್ಚ ತೇ ಹತಾಃ||
ಹತರಾಗಿ ಹೋದ ನಮ್ಮವರು ಕೂಡ ಲೋಕಪ್ರವೀರರಾಗಿದ್ದರು. ದೇವತೆಗಳಂತೆ ಮಹಾರಥರಾಗಿದ್ದರು. ನೀತಿಮಂತರಾಗಿದ್ದರು, ಯುಕ್ತರೂ ದಕ್ಷರೂ ಆಗಿದ್ದು ನಿನ್ನಲ್ಲೇ ಅನುರಕ್ತರಾಗಿದ್ದರು.
08006014a ನ ತ್ವೇವ ಕಾರ್ಯಂ ನೈರಾಶ್ಯಮಸ್ಮಾಭಿರ್ವಿಜಯಂ ಪ್ರತಿ|
08006014c ಸುನೀತೈರಿಹ ಸರ್ವಾರ್ಥೈರ್ದೈವಮಪ್ಯನುಲೋಮ್ಯತೇ||
ಆದರೂ ಕೂಡ ನಮ್ಮ ವಿಜಯದ ಕುರಿತು ನಿರಾಶೆಗೊಳ್ಳಲು ಕಾರಣವಿಲ್ಲ. ಎಲ್ಲ ಕಾರ್ಯಗಳೂ ಉತ್ತಮ ನೀತಿಗೆ ಅನುಸಾರವಾಗಿ ನಡೆದುದೇ ಆದರೆ ದೈವವೂ ಸಹ ಅನುಕೂಲವಾಗಿಯೇ ಪರಿಣಮಿಸುತ್ತದೆ.
08006015a ತೇ ವಯಂ ಪ್ರವರಂ ನೃಣಾಂ ಸರ್ವೈರ್ಗುಣಗಣೈರ್ಯುತಂ|
08006015c ಕರ್ಣಂ ಸೇನಾಪತಿಂ ಕೃತ್ವಾ ಪ್ರಮಥಿಷ್ಯಾಮಹೇ ರಿಪೂನ್||
ಆದುದರಿಂದ ನಾವು ನರರಲ್ಲಿ ಪ್ರವರನಾಗಿರುವ, ಸರ್ವಗುಣಗಳಿಂದ ಯುಕ್ತನಾಗಿರುವ ಕರ್ಣನನ್ನೇ ಸೇನಾಪತಿಯನ್ನಾಗಿ ಮಾಡಿ ಶತ್ರುಗಳನ್ನು ಸದೆಬಡಿಯಬಲ್ಲೆವು.”
08006016a ತತೋ ದುರ್ಯೋಧನಃ ಪ್ರೀತಃ ಪ್ರಿಯಂ ಶ್ರುತ್ವಾ ವಚಸ್ತದಾ|
08006016c ಪ್ರೀತಿಸಂಸ್ಕಾರಸಂಯುಕ್ತಂ ತಥ್ಯಮಾತ್ಮಹಿತಂ ಶುಭಂ||
ಆಗ ದುರ್ಯೋಧನನು ಪ್ರೀತಿ ಸಂಸ್ಕಾರಯುಕ್ತವಾದ, ಆತ್ಮಹಿತಕ್ಕೆ ತಕ್ಕುದಾದ, ಶುಭವಾದ ಆ ಪ್ರಿಯ ಮಾತುಗಳನ್ನು ಕೇಳಿ ಪ್ರೀತನಾದನು.
08006017a ಸ್ವಂ ಮನಃ ಸಮವಸ್ಥಾಪ್ಯ ಬಾಹುವೀರ್ಯಮುಪಾಶ್ರಿತಃ|
08006017c ದುರ್ಯೋಧನೋ ಮಹಾರಾಜ ರಾಧೇಯಮಿದಮಬ್ರವೀತ್||
ಮಹಾರಾಜ! ಕರ್ಣನ ಬಾಹುವೀರ್ಯವನ್ನು ಆಶ್ರಯಿಸಿದ ದುರ್ಯೋಧನನು ತನ್ನ ಮನಸ್ಸನ್ನು ಸಮನಾಗಿಸಿಕೊಂಡು ರಾಧೇಯನಿಗೆ ಇದನ್ನು ಹೇಳಿದನು:
08006018a ಕರ್ಣ ಜಾನಾಮಿ ತೇ ವೀರ್ಯಂ ಸೌಹೃದಂ ಚ ಪರಂ ಮಯಿ|
08006018c ತಥಾಪಿ ತ್ವಾಂ ಮಹಾಬಾಹೋ ಪ್ರವಕ್ಷ್ಯಾಮಿ ಹಿತಂ ವಚಃ||
“ಕರ್ಣ! ಮಹಾಬಾಹೋ! ನಿನ್ನ ವೀರ್ಯವನ್ನೂ ನನ್ನ ಮೇಲಿರುವ ಪರಮ ಸೌಹಾರ್ದತೆಯನ್ನೂ ನಾನು ತಿಳಿದಿದ್ದೇನೆ. ಹಾಗಿದ್ದರೂ ಈಗ ನಿನಗೆ ಕೆಲವು ಹಿತವಚನಗಳನ್ನು ಹೇಳುತ್ತೇನೆ.
08006019a ಶ್ರುತ್ವಾ ಯಥೇಷ್ಟಂ ಚ ಕುರು ವೀರ ಯತ್ತವ ರೋಚತೇ|
08006019c ಭವಾನ್ಪ್ರಾಜ್ಞತಮೋ ನಿತ್ಯಂ ಮಮ ಚೈವ ಪರಾ ಗತಿಃ||
ವೀರ! ಇದನ್ನು ಕೇಳಿ ನಿನಗಿಷ್ಟವಾದಂತೆ, ನಿನಗೆ ಸೂಕ್ತವೆನಿಸಿದ ಹಾಗೆ ಮಾಡು. ನೀನು ಚೆನ್ನಾಗಿ ತಿಳಿದಿರುವೆ. ನಿತ್ಯವೂ ನನಗೆ ಪರಮ ಆಶ್ರಯನಾಗಿರುವೆ.
08006020a ಭೀಷ್ಮದ್ರೋಣಾವತಿರಥೌ ಹತೌ ಸೇನಾಪತೀ ಮಮ|
08006020c ಸೇನಾಪತಿರ್ಭವಾನಸ್ತು ತಾಭ್ಯಾಂ ದ್ರವಿಣವತ್ತರಃ||
ನನ್ನ ಸೇನಾಪತಿಗಳಾಗಿದ್ದ ಅತಿರಥ ಭೀಷ್ಮ-ದ್ರೋಣರಿಬ್ಬರೂ ಹತರಾದರು. ಅವರಿಬ್ಬರಿಗಿಂತಲೂ ಹೆಚ್ಚು ಶಕ್ತಿವಂತನಾಗಿರುವ ನೀನು ನನ್ನ ಸೇನಾಪತಿಯಾಗು!
08006021a ವೃದ್ಧೌ ಚ ತೌ ಮಹೇಷ್ವಾಸೌ ಸಾಪೇಕ್ಷೌ ಚ ಧನಂಜಯೇ|
08006021c ಮಾನಿತೌ ಚ ಮಯಾ ವೀರೌ ರಾಧೇಯ ವಚನಾತ್ತವ||
ಮಹೇಷ್ವಾಸರಾಗಿದ್ದರೂ ಅವರಿಬ್ಬರೂ ವೃದ್ಧರಾಗಿದ್ದರು ಮತ್ತು ಧನಂಜಯನನ್ನು ಅಪೇಕ್ಷಿಸುತ್ತಿದ್ದರು. ರಾಧೇಯ! ನಿನ್ನ ವಚನದಂತೆ ನಾನು ಆ ವೀರರನ್ನು ಸೇನಾಪತಿಗಳನ್ನಾಗಿ ಮಾಡಿ ಗೌರವಿಸಿದೆನು.
08006022a ಪಿತಾಮಹತ್ವಂ ಸಂಪ್ರೇಕ್ಷ್ಯ ಪಾಂಡುಪುತ್ರಾ ಮಹಾರಣೇ|
08006022c ರಕ್ಷಿತಾಸ್ತಾತ ಭೀಷ್ಮೇಣ ದಿವಸಾನಿ ದಶೈವ ಹ||
ಅಯ್ಯಾ! ತಾನು ಪಾಂಡುಪುತ್ರರಿಗೂ ಪಿತಾಮಹನೆಂಬುದನ್ನು ನೆನಪಿಸಿಕೊಂಡು ಭೀಷ್ಮನು ಹತ್ತು ದಿವಸಗಳೂ ಮಹಾರಣದಲ್ಲಿ ಅವರನ್ನು ರಕ್ಷಿಸಿದನು.
08006023a ನ್ಯಸ್ತಶಸ್ತ್ರೇ ಚ ಭವತಿ ಹತೋ ಭೀಷ್ಮಃ ಪಿತಾಮಹಃ|
08006023c ಶಿಖಂಡಿನಂ ಪುರಸ್ಕೃತ್ಯ ಫಲ್ಗುನೇನ ಮಹಾಹವೇ||
ನೀನೂ ಶಸ್ತ್ರತ್ಯಾಗಮಾಡಿರಲು ಮಹಾಯುದ್ಧದಲ್ಲಿ ಫಲ್ಗುನನು ಶಿಖಂಡಿಯನ್ನು ಮುಂದಿರಿಸಿಕೊಂಡು ಪಿತಾಮಹ ಭೀಷ್ಮನನ್ನು ಹೊಡೆದುರುಳಿಸಿದನು.
08006024a ಹತೇ ತಸ್ಮಿನ್ಮಹಾಭಾಗೇ ಶರತಲ್ಪಗತೇ ತದಾ|
08006024c ತ್ವಯೋಕ್ತೇ ಪುರುಷವ್ಯಾಘ್ರ ದ್ರೋಣೋ ಹ್ಯಾಸೀತ್ಪುರಃಸರಃ||
ಆ ಮಹಾಭಾಗನು ಶರಶಯ್ಯೆಯ ಮೇಲೆ ಮಲಗಲು ಪುರುಷವ್ಯಾಘ್ರ! ನಿನ್ನ ಮಾತಿನಂತೆ ದ್ರೋಣನು ನಮ್ಮ ನಾಯಕನಾದನು.
08006025a ತೇನಾಪಿ ರಕ್ಷಿತಾಃ ಪಾರ್ಥಾಃ ಶಿಷ್ಯತ್ವಾದಿಹ ಸಂಯುಗೇ|
08006025c ಸ ಚಾಪಿ ನಿಹತೋ ವೃದ್ಧೋ ಧೃಷ್ಟದ್ಯುಮ್ನೇನ ಸತ್ವರಂ||
ಆ ವೃದ್ಧನೂ ಕೂಡ ಶಿಷ್ಯತ್ವದಿಂದಾಗಿ ಪಾರ್ಥರನ್ನು ರಣದಲ್ಲಿ ರಕ್ಷಿಸಿ ಬೇಗನೇ ಧೃಷ್ಟದ್ಯುಮ್ನನಿಂದ ಹತನಾದನು.
08006026a ನಿಹತಾಭ್ಯಾಂ ಪ್ರಧಾನಾಭ್ಯಾಂ ತಾಭ್ಯಾಮಮಿತವಿಕ್ರಮ|
08006026c ತ್ವತ್ಸಮಂ ಸಮರೇ ಯೋಧಂ ನಾನ್ಯಂ ಪಶ್ಯಾಮಿ ಚಿಂತಯನ್||
ಅಮಿತವಿಕ್ರಮಿಯೇ! ಆ ಇಬ್ಬರು ಪ್ರಧಾನರೂ ಹತನಾದನಂತರ ಎಷ್ಟೇ ಯೋಚಿಸಿದರೂ ಸಮರದಲ್ಲಿ ನಿನಗೆ ಸರಿಸಮನಾದ ಯೋಧ ಬೇರೆ ಯಾರನ್ನೂ ನಾನು ಕಾಣಲಾರೆ.
08006027a ಭವಾನೇವ ತು ನಃ ಶಕ್ತೋ ವಿಜಯಾಯ ನ ಸಂಶಯಃ|
08006027c ಪೂರ್ವಂ ಮಧ್ಯೇ ಚ ಪಶ್ಚಾಚ್ಚ ತವೈವ ವಿದಿತಂ ಹಿ ತತ್||
ನಮಗೆ ವಿಜಯವನ್ನು ತಂದುಕೊಡಲು ನೀನೇ ಶಕ್ತ ಎನ್ನುವುದರಲ್ಲಿ ಸಂಶಯವಿಲ್ಲ. ಈ ಹಿಂದೆ, ಈಗ ಮತ್ತು ಇದರ ಮುಂದೆ ಕೂಡ ನೀನೇ. ಇದನ್ನು ಅರಿತಿರುವೆ.
08006028a ಸ ಭವಾನ್ಧುರ್ಯವತ್ಸಂಖ್ಯೇ ಧುರಮುದ್ವೋಢುಮರ್ಹಸಿ|
08006028c ಅಭಿಷೇಚಯ ಸೇನಾನ್ಯೇ ಸ್ವಯಮಾತ್ಮಾನಮಾತ್ಮನಾ||
ಧುರಂಧರನಾದ ನೀನು ರಣದಲ್ಲಿ ಯುದ್ಧದ ಭಾರವನ್ನು ಹೊರಬೇಕಾಗಿದೆ. ನೀನೇ ನಿನ್ನನ್ನು ಸೇನಾನಿಯಾಗಿ ಅಭಿಷೇಕಿಸಿಕೋ!
08006029a ದೇವತಾನಾಂ ಯಥಾ ಸ್ಕಂದಃ ಸೇನಾನೀಃ ಪ್ರಭುರವ್ಯಯಃ|
08006029c ತಥಾ ಭವಾನಿಮಾಂ ಸೇನಾಂ ಧಾರ್ತರಾಷ್ಟ್ರೀಂ ಬಿಭರ್ತು ಮೇ|
08006029e ಜಹಿ ಶತ್ರುಗಣಾನ್ಸರ್ವಾನ್ಮಹೇಂದ್ರ ಇವ ದಾನವಾನ್||
ಪ್ರಭು ಅವ್ಯಯ ಸ್ಕಂದನು ಹೇಗೆ ದೇವತೆಗಳ ಸೇನಾನಿಯಾದನೋ ಹಾಗೆ ನೀನೂ ಕೂಡ ಧಾರ್ತರಾಷ್ಟ್ರರ ಈ ಸೇನೆಯನ್ನು ಉದ್ಧರಿಸು. ಮಹೇಂದ್ರನು ದಾನವರನ್ನು ಹೇಗೋ ಹಾಗೆ ಸರ್ವ ಶತ್ರುಗಣಗಳನ್ನೂ ಸಂಹರಿಸು.
08006030a ಅವಸ್ಥಿತಂ ರಣೇ ಜ್ಞಾತ್ವಾ ಪಾಂಡವಾಸ್ತ್ವಾಂ ಮಹಾರಥಂ|
08006030c ದ್ರವಿಷ್ಯಂತಿ ಸಪಾಂಚಾಲಾ ವಿಷ್ಣುಂ ದೃಷ್ಟ್ವೇವ ದಾನವಾಃ|
08006030e ತಸ್ಮಾತ್ತ್ವಂ ಪುರುಷವ್ಯಾಘ್ರ ಪ್ರಕರ್ಷೇಥಾ ಮಹಾಚಮೂಂ||
ವಿಷ್ಣುವನ್ನು ನೋಡಿದ ದಾನವರಂತೆ ರಣದಲ್ಲಿ ನಿಂತಿರುವ ಮಹಾರಥ ನಿನ್ನನ್ನು ನೋಡಿ ಪಾಂಡವರು ಪಾಂಚಾಲರೊಂದಿಗೆ ಓಡಿಹೋಗುವರು. ಪುರುಷವ್ಯಾಘ್ರ! ಆದುದರಿಂದ ನೀನು ಈ ಮಹಾಸೇನೆಯ ಸಂಚಾಲಕನಾಗು!
08006031a ಭವತ್ಯವಸ್ಥಿತೇ ಯತ್ತೇ ಪಾಂಡವಾ ಗತಚೇತಸಃ|
08006031c ಭವಿಷ್ಯಂತಿ ಸಹಾಮಾತ್ಯಾಃ ಪಾಂಚಾಲೈಃ ಸೃಂಜಯೈಃ ಸಹ||
ಪ್ರಯತ್ನಶೀಲನಾಗಿ ನೀನು ನಿಂತಿರಲು ಅಮಾತ್ಯರು, ಪಾಂಚಾಲರು ಮತ್ತು ಸೃಂಜಯರೊಂದಿಗೆ ಪಾಂಡವರು ಗತಚೇತನರಾಗುವರು.
08006032a ಯಥಾ ಹ್ಯಭ್ಯುದಿತಃ ಸೂರ್ಯಃ ಪ್ರತಪನ್ಸ್ವೇನ ತೇಜಸಾ|
08006032c ವ್ಯಪೋಹತಿ ತಮಸ್ತೀವ್ರಂ ತಥಾ ಶತ್ರೂನ್ವ್ಯಪೋಹ ನಃ||
ಉದಯಿಸುತ್ತಿರುವ ಸೂರ್ಯನು ತನ್ನ ತೀವ್ರ ತೇಜಸ್ಸಿನಿಂದ ಉರಿದು ಹೇಗೆ ಕತ್ತಲೆಯನ್ನು ಅಪಹರಿಸುತ್ತಾನೋ ಹಾಗೆ ನೀನೂ ಕೂಡ ಶತ್ರುಗಳನ್ನು ಇಲ್ಲದಂತೆ ಮಾಡು!”
08006033 ಕರ್ಣ ಉವಾಚ|
08006033a ಉಕ್ತಮೇತನ್ಮಯಾ ಪೂರ್ವಂ ಗಾಂದಾರೇ ತವ ಸನ್ನಿಧೌ|
08006033c ಜೇಷ್ಯಾಮಿ ಪಾಂಡವಾನ್ರಾಜನ್ಸಪುತ್ರಾನ್ಸಜನಾರ್ದನಾನ್||
ಕರ್ಣನು ಹೇಳಿದನು: “ಗಾಂಧಾರೇ! ರಾಜನ್! ಹಿಂದೆಯೇ ನಾನು ನಿನ್ನ ಸನ್ನಿಧಿಯಲ್ಲಿ ಪುತ್ರರು ಮತ್ತು ಜನಾರ್ದನರೊಂದಿಗೆ ಪಾಂಡವರನ್ನು ಜಯಿಸುತ್ತೇನೆ ಎಂದು ನಿನಗೆ ಹೇಳಿದ್ದೆ.
08006034a ಸೇನಾಪತಿರ್ಭವಿಷ್ಯಾಮಿ ತವಾಹಂ ನಾತ್ರ ಸಂಶಯಃ|
08006034c ಸ್ಥಿರೋ ಭವ ಮಹಾರಾಜ ಜಿತಾನ್ವಿದ್ಧಿ ಚ ಪಾಂಡವಾನ್||
ನಿನ್ನ ಸೇನಾಪತಿಯಾಗುತ್ತೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮಹಾರಾಜ! ಪಾಂಡವರನ್ನು ಗೆದ್ದೆವೆಂದೇ ತಿಳಿದು ಸ್ಥಿರನಾಗು!””
08006035 ಸಂಜಯ ಉವಾಚ|
08006035a ಏವಮುಕ್ತೋ ಮಹಾತೇಜಾಸ್ತತೋ ದುರ್ಯೋಧನೋ ನೃಪಃ|
08006035c ಉತ್ತಸ್ಥೌ ರಾಜಭಿಃ ಸಾರ್ಧಂ ದೇವೈರಿವ ಶತಕ್ರತುಃ|
08006035e ಸೇನಾಪತ್ಯೇನ ಸತ್ಕರ್ತುಂ ಕರ್ಣಂ ಸ್ಕಂದಮಿವಾಮರಾಃ||
ಸಂಜಯನು ಹೇಳಿದನು: “ಇದನ್ನು ಕೇಳಿದ ಮಹಾತೇಜಸ್ವಿ ನೃಪ ದುರ್ಯೋಧನನು, ಅಮರರು ಸ್ಕಂದನನ್ನು ಹೇಗೋ ಹಾಗೆ ಕರ್ಣನನ್ನು ಸೇನಾಪತಿತ್ವದಿಂದ ಸತ್ಕರಿಸಲು, ದೇವತೆಗಳೊಡನೆ ಶತಕ್ರತುವಿನಂತೆ ರಾಜರೊಡನೆ ಮೇಲೆದ್ದನು.
08006036a ತತೋಽಭಿಷಿಷಿಚುಸ್ತೂರ್ಣಂ ವಿಧಿದೃಷ್ಟೇನ ಕರ್ಮಣಾ|
08006036c ದುರ್ಯೋಧನಮುಖಾ ರಾಜನ್ರಾಜಾನೋ ವಿಜಯೈಷಿಣಃ|
08006036e ಶಾತಕೌಂಭಮಯೈಃ ಕುಂಭೈರ್ಮಾಹೇಯೈಶ್ಚಾಭಿಮಂತ್ರಿತೈಃ||
08006037a ತೋಯಪೂರ್ಣೈರ್ವಿಷಾಣೈಶ್ಚ ದ್ವೀಪಿಖಡ್ಗಮಹರ್ಷಭೈಃ|
08006037c ಮಣಿಮುಕ್ತಾಮಯೈಶ್ಚಾನ್ಯೈಃ ಪುಣ್ಯಗಂದೈಸ್ತಥೌಷಧೈಃ||
08006038a ಔದುಂಬರೇ ಸಮಾಸೀನಮಾಸನೇ ಕ್ಷೌಮಸಂವೃತಂ|
08006038c ಶಾಸ್ತ್ರದೃಷ್ಟೇನ ವಿಧಿನಾ ಸಂಭಾರೈಶ್ಚ ಸುಸಂಭೃತೈಃ||
ರಾಜನ್! ಆಗ ತಕ್ಷಣವೇ ವಿಧಿದೃಷ್ಟ ಕರ್ಮಗಳಿಂದ ವಿಜಯೈಷಿಣರಾದ ದುರ್ಯೋಧನಪ್ರಮುಖ ರಾಜರು ಹೇಮಕುಂಭಗಳಲ್ಲಿ ಅಭಿಮಂತ್ರಿಸಿದ ನೀರನ್ನು ಆನೆಯ ದಂತಗಳಲ್ಲಿ, ಘೇಂಡಾಮೃಗ ಮತ್ತು ಎತ್ತಿನ ಕೊಂಬುಗಳಲ್ಲಿ ತುಂಬಿಸಿ, ಮಣಿ-ಮುತ್ತುಗಳು, ಪುಣ್ಯ ಗಂಧಗಳು ಮತ್ತು ಔಷಧಗಳೊಂದಿಗೆ, ರೇಷ್ಮೆಯ ವಸ್ತ್ರವನ್ನು ಹೊದೆಸಿದ್ದ ಔದುಂಬರಾಸನದಲ್ಲಿ ಸುಖಾಸೀನನಾಗಿರಿಸಿ ಶಾಸ್ತ್ರೋಕ್ತವಾಗಿ ವಿಧಿವಿತ್ತಾಗಿ ಸಂಭಾರ ಸಂಭ್ರಮಗಳಿಂದ ಅವನನ್ನು ಅಭಿಷೇಕಿಸಿದರು.
08006039a ಜಯ ಪಾರ್ಥಾನ್ಸಗೋವಿಂದಾನ್ಸಾನುಗಾಂಸ್ತ್ವಂ ಮಹಾಹವೇ|
08006039c ಇತಿ ತಂ ಬಂದಿನಃ ಪ್ರಾಹುರ್ದ್ವಿಜಾಶ್ಚ ಭರತರ್ಷಭ||
ಭರತರ್ಷಭ! “ಗೋವಿಂದನೊಂದಿಗೆ ಮತ್ತು ಅನುಯಾಯಿಗಳೊಂದಿಗೆ ನೀನು ಮಹಾಯುದ್ಧದಲ್ಲಿ ಪಾರ್ಥರನ್ನು ಜಯಿಸು!” ಎಂದು ಬಂದಿಗಳೂ ದ್ವಿಜರೂ ಅವನನ್ನು ಹರಸಿದರು.
08006040a ಜಹಿ ಪಾರ್ಥಾನ್ಸಪಾಂಚಾಲಾನ್ರಾಧೇಯ ವಿಜಯಾಯ ನಃ|
08006040c ಉದ್ಯನ್ನಿವ ಸದಾ ಭಾನುಸ್ತಮಾಂಸ್ಯುಗ್ರೈರ್ಗಭಸ್ತಿಭಿಃ||
“ರಾಧೇಯ! ಉದಯಿಸುವ ಸೂರ್ಯನು ತನ್ನ ಉಗ್ರ ಕಿರಣಗಳಿಂದ ಸದಾ ಕತ್ತಲೆಯನ್ನು ಹೇಗೆ ಹೋಗಲಾಡಿಸುತ್ತಾನೋ ಹಾಗೆ ನೀನು ವಿಜಯಕ್ಕಾಗಿ ಪಾಂಚಾಲರೊಂದಿಗೆ ಪಾರ್ಥರನ್ನು ಸಂಹರಿಸು!
08006041a ನ ಹ್ಯಲಂ ತ್ವದ್ವಿಸೃಷ್ಟಾನಾಂ ಶರಾಣಾಂ ತೇ ಸಕೇಶವಾಃ|
08006041c ಕೃತಘ್ನಾಃ ಸೂರ್ಯರಶ್ಮೀನಾಂ ಜ್ವಲತಾಮಿವ ದರ್ಶನೇ||
ಉರಿಯುತ್ತಿರುವ ಸೂರ್ಯನನ್ನು ಗೂಬೆಗಳು ಹೇಗೆ ನೋಡಲಾರವೋ ಹಾಗೆ ನಿನ್ನಿಂದ ಬಿಡಲ್ಪಟ್ಟ ಶರಗಳನ್ನು ಕೇಶವನೊಂದಿಗೆ ಅವರೂ ಕೂಡ ನೋಡಲಾರರು.
08006042a ನ ಹಿ ಪಾರ್ಥಾಃ ಸಪಾಂಚಾಲಾಃ ಸ್ಥಾತುಂ ಶಕ್ತಾಸ್ತವಾಗ್ರತಃ|
08006042c ಆತ್ತಶಸ್ತ್ರಸ್ಯ ಸಮರೇ ಮಹೇಂದ್ರಸ್ಯೇವ ದಾನವಾಃ||
ಸಮರದಲ್ಲಿ ಶಸ್ತ್ರಗಳನ್ನು ಧರಿಸಿರುವ ಮಹೇಂದ್ರನನ್ನು ದಾನವರು ಹೇಗೆ ಎದುರಿಸಲಾರರೋ ಹಾಗೆ ಪಾಂಚಾಲರೊಂದಿಗೆ ಪಾರ್ಥರು ನಿನ್ನ ಎದಿರು ನಿಲ್ಲಲು ಶಕ್ತರಾಗುವುದಿಲ್ಲ.”
08006043a ಅಭಿಷಿಕ್ತಸ್ತು ರಾಧೇಯಃ ಪ್ರಭಯಾ ಸೋಽಮಿತಪ್ರಭಃ|
08006043c ವ್ಯತ್ಯರಿಚ್ಯತ ರೂಪೇಣ ದಿವಾಕರ ಇವಾಪರಃ||
ಹೀಗೆ ಅಭಿಷಿಕ್ತನಾದ ರಾಧೇಯನು ಅಮಿತಪ್ರಭೆಯುಳ್ಳವನಾಗಿ ಪ್ರಭೆಯಿಂದ ಇನ್ನೊಬ್ಬ ದಿವಾಕರನೋ ಎನ್ನುವಂತೆ ತೋರುತ್ತಿದ್ದನು.
08006044a ಸೇನಾಪತ್ಯೇನ ರಾಧೇಯಮಭಿಷಿಚ್ಯ ಸುತಸ್ತವ|
08006044c ಅಮನ್ಯತ ತದಾತ್ಮಾನಂ ಕೃತಾರ್ಥಂ ಕಾಲಚೋದಿತಃ||
ಕಾಲಚೋದಿತರಾದ ನಿನ್ನ ಮಕ್ಕಳು ರಾಧೇಯನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿ ತಮ್ಮ ಉದ್ದೇಶವು ಸಿದ್ಧಿಯಾಯಿತೆಂದೇ ಭಾವಿಸಿದರು.
08006045a ಕರ್ಣೋಽಪಿ ರಾಜನ್ಸಂಪ್ರಾಪ್ಯ ಸೇನಾಪತ್ಯಮರಿಂದಮಃ|
08006045c ಯೋಗಮಾಜ್ಞಾಪಯಾಮಾಸ ಸೂರ್ಯಸ್ಯೋದಯನಂ ಪ್ರತಿ||
ರಾಜನ್! ಅರಿಂದಮ ಕರ್ಣನೂ ಕೂಡ ಸೇನಾಪತ್ಯವನ್ನು ಪಡೆದು ಸೂರ್ಯೋದಯವಾಗುತ್ತಿರಲು ಸನ್ನದ್ಧರಾಗುವಂತೆ ಸೇನೆಗಳಿಗೆ ಆಜ್ಞಾಪಿಸಿದನು.
08006046a ತವ ಪುತ್ರೈರ್ವೃತಃ ಕರ್ಣಃ ಶುಶುಭೇ ತತ್ರ ಭಾರತ|
08006046c ದೇವೈರಿವ ಯಥಾ ಸ್ಕಂದಃ ಸಂಗ್ರಾಮೇ ತಾರಕಾಮಯೇ||
ಭಾರತ! ನಿನ್ನ ಪುತ್ರರಿಂದ ಪರಿವೃತನಾಗಿದ್ದ ಕರ್ಣನು ಅಲ್ಲಿ ತಾರಕಾಮಯ[1] ಸಂಗ್ರಾಮದಲ್ಲಿ ದೇವತೆಗಳಿಂದ ಪರಿವೃತನಾದ ಸ್ಕಂದನಂತೆಯೇ ಶೋಭಿಸಿದನು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಾಭಿಷೇಕೇ ಷಷ್ಠಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಾಭಿಷೇಕ ಎನ್ನುವ ಆರನೇ ಅಧ್ಯಾಯವು.
[1] ದೇವ-ದೈತ್ಯರ ನಡುವೆ ಹನ್ನೆರಡು ಅತಿಭಯಂಕರ ಯುದ್ಧಗಳು ನಡೆದವು. ಅವುಗಳಲ್ಲಿ ಒಂದು ತಾರಕಾಮಯ ಯುದ್ಧ. ಈ ಯುದ್ಧಗಳು ಕ್ರಮವಾಗಿ (೧) ನಾರಸಿಂಹ, (೨) ವಾಮನ, (೩) ವರಾಹ, (೪) ಅಮೃತಮಂಥನ, (೫) ತಾರಕಾಮಯ (೬) ಆಡೀಬಕ (೭) ತ್ರೈಪುರ (೮) ಅಂಧಕ (೯) ವೃತ್ರಘಾತಕ (೧೦) ಧಾತ್ರ (೧೧) ಹಾಲಾಹಲ (೧೨) ಕೋಲಾಹಲ. (ಶ್ರೀಮತ್ಸ್ಯಮಹಾಪುರಾಣಂ, ಸಂಪುಟ ೧, ಅಸುರಶಾಪವೆಂಬ ನಾಲ್ವತ್ತೇಳನೇ ಅಧ್ಯಾಯ).