ಕರ್ಣ ಪರ್ವ
೫೪
ಭೀಮಸೇನ-ವಿಶೋಕರ ಸಂವಾದ
ಭೀಮಸೇನನ ಆಕ್ರಮಣದಿಂದ ಕೌರವ ಸೇನೆಯು ದಿಕ್ಕಾಪಾಲಾಗಿ ಹೋದುದು (೧-೧೧). ಅರ್ಜುನನ ರಥವನ್ನು ಹುಡುಕುತ್ತಿದ್ದ ಭೀಮಸೇನ ಮತ್ತು ಅವನ ಸಾರಥಿ ವಿಶೋಕರ ಸಂವಾದ (೧೨-೨೯).
08054001 ಸಂಜಯ ಉವಾಚ|
08054001a ಅಥ ತ್ವಿದಾನೀಂ ತುಮುಲೇ ವಿಮರ್ದೇ
ದ್ವಿಷದ್ಭಿರೇಕೋ ಬಹುಭಿಃ ಸಮಾವೃತಃ|
08054001c ಮಹಾಭಯೇ ಸಾರಥಿಮಿತ್ಯುವಾಚ
ಭೀಮಶ್ಚಮೂಂ ವಾರಯನ್ಧಾರ್ತರಾಷ್ಟ್ರೀಂ|
08054001e ತ್ವಂ ಸಾರಥೇ ಯಾಹಿ ಜವೇನ ವಾಹೈರ್
ನಯಾಮ್ಯೇತಾನ್ಧಾರ್ತರಾಷ್ಟ್ರಾನ್ಯಮಾಯ||
ಸಂಜಯನು ಹೇಳಿದನು: “ಆಗ ತುಮುಲದಲ್ಲಿ ಅನೇಕ ವೈರಿಗಳಿಂದ ಸಮಾವೃತನಾಗಿ ಏಕಾಂಗಿಯಾಗಿ ಮರ್ದಿಸಲ್ಪಡುತ್ತಿದ್ದ ಭೀಮನು ಧಾರ್ತರಾಷ್ಟ್ರರ ಸೇನೆಯನ್ನು ತಡೆಯುತ್ತಾ ಮಹಾಭಯದಿಂದ[1] ಸಾರಥಿಗೆ “ಸಾರಥೇ! ನೀನು ವೇಗದಿಂದ ರಥವನ್ನು ಕೊಂಡೊಯ್ಯಿ! ಈ ಧಾರ್ತರಾಷ್ಟ್ರರನ್ನು ಯಮಲೋಕಕ್ಕೆ ಕಳುಹಿಸೋಣ!” ಎಂದು ಹೇಳಿದನು:
08054002a ಸಂಚೋದಿತೋ ಭೀಮಸೇನೇನ ಚೈವಂ
ಸ ಸಾರಥಿಃ ಪುತ್ರಬಲಂ ತ್ವದೀಯಂ|
08054002c ಪ್ರಾಯಾತ್ತತಃ ಸಾರಥಿರುಗ್ರವೇಗೋ
ಯತೋ ಭೀಮಸ್ತದ್ಬಲಂ ಗಂತುಮೈಚ್ಚತ್||
ಉಗ್ರವೇಗದಲ್ಲಿ ರಥವನ್ನು ಕೊಂಡೊಯ್ಯುವ ಸಾರಥಿಯು ಭೀಮಸೇನನಿಂದ ಪ್ರಚೋದಿತನಾಗಿ ಭೀಮನು ಯಾವ ಸೇನೆಯ ಕಡೆ ಹೋಗಲು ಬಯಸಿದ್ದನೋ ಆ ನಿನ್ನ ಪುತ್ರನ ಸೇನೆಯ ಬಳಿ ರಥವನ್ನು ಕೊಂಡೊಯ್ದನು.
08054003a ತತೋಽಪರೇ ನಾಗರಥಾಶ್ವಪತ್ತಿಭಿಃ
ಪ್ರತ್ಯುದ್ಯಯುಃ ಕುರವಸ್ತಂ ಸಮಂತಾತ್|
08054003c ಭೀಮಸ್ಯ ವಾಹಾಗ್ರ್ಯಮುದಾರವೇಗಂ
ಸಮಂತತೋ ಬಾಣಗಣೈರ್ನಿಜಘ್ನುಃ||
ಅನಂತರ ಕುರುಗಳು ಆನೆ-ರಥ-ಕುದುರೆ-ಪದಾತಿಗಳೊಂದಿಗೆ ಉದಾರವೇಗದಲ್ಲಿದ್ದ ಭೀಮನ ರಥವನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ಬಾಣಗಣಗಳಿಂದ ಸುತ್ತಲೂ ಹೊಡೆದರು.
08054004a ತತಃ ಶರಾನಾಪತತೋ ಮಹಾತ್ಮಾ
ಚಿಚ್ಛೇದ ಬಾಣೈಸ್ತಪನೀಯಪುಂಖೈಃ|
08054004c ತೇ ವೈ ನಿಪೇತುಸ್ತಪನೀಯಪುಂಖಾ
ದ್ವಿಧಾ ತ್ರಿಧಾ ಭೀಮಶರೈರ್ನಿಕೃತ್ತಾಃ||
ಆಗ ಮೇಲೆ ಬೀಳುತ್ತಿದ್ದ ಬಾಣಗಳನ್ನು ಸುವರ್ಣಮಯಪುಂಖಗಳ ಬಾಣಗಳಿಂದ ಕತ್ತರಿಸಿದನು. ಅವರ ಬಾಣಗಳು ಭೀಮನ ಬಾಣಗಳಿಂದ ಕತ್ತರಿಸಲ್ಪಟ್ಟು ಎರಡು ಅಥವಾ ಮೂರು ಭಾಗಗಳಾಗಿ ಬೀಳುತ್ತಿದ್ದವು.
08054005a ತತೋ ರಾಜನ್ನಾಗರಥಾಶ್ವಯೂನಾಂ
ಭೀಮಾಹತಾನಾಂ ತವ ರಾಜಮಧ್ಯೇ|
08054005c ಘೋರೋ ನಿನಾದಃ ಪ್ರಬಭೌ ನರೇಂದ್ರ
ವಜ್ರಾಹತಾನಾಮಿವ ಪರ್ವತಾನಾಂ||
ರಾಜನ್! ನರೇಂದ್ರ! ಆಗ ರಾಜಮಧ್ಯದಲ್ಲಿ ವಜ್ರಗಳಿಂದ ಹತಗೊಂಡ ಪರ್ವತಗಳಂತೆ ಭೀಮನಿಂದ ಹತರಾದ ಗಜಾಶ್ವರಥಪದಾತಿಗಳ ಸೇನೆಗಳ ಘೋರ ನಿನಾದವುಂಟಾಯಿತು.
08054006a ತೇ ವಧ್ಯಮಾನಾಶ್ಚ ನರೇಂದ್ರಮುಖ್ಯಾ
ನಿರ್ಭಿನ್ನಾ ವೈ ಭೀಮಸೇನಪ್ರವೇಕೈಃ|
08054006c ಭೀಮಂ ಸಮಂತಾತ್ಸಮರೇಽಧ್ಯರೋಹನ್
ವೃಕ್ಷಂ ಶಕುಂತಾ ಇವ ಪುಷ್ಪಹೇತೋಃ||
ಭೀಮಸೇನನ ಶ್ರೇಷ್ಠ ಬಾಣಗಳಿಂದ ವಧಿಸಲ್ಪಟ್ಟು ಗಾಯಗೊಂಡಿರುವ ಆ ನರೇಂದ್ರಮುಖ್ಯರು ಸಮರದಲ್ಲಿ ಪಕ್ಷಿಗಳು ಪುಷ್ಪಕ್ಕಾಗಿ ವೃಕ್ಷವನ್ನು ಮುತ್ತಿಗೆ ಹಾಕುವಂತೆ ಎಲ್ಲಕಡೆಗಳಿಂದ ಭೀಮನನ್ನು ಮುತ್ತಿಗೆ ಹಾಕಿದರು.
08054007a ತತೋಽಭಿಪಾತಂ ತವ ಸೈನ್ಯಮಧ್ಯೇ
ಪ್ರಾದುಶ್ಚಕ್ರೇ ವೇಗಮಿವಾತ್ತವೇಗಃ|
08054007c ಯಥಾಂತಕಾಲೇ ಕ್ಷಪಯನ್ದಿಧಕ್ಷುರ್
ಭೂತಾಂತಕೃತ್ಕಾಲ ಇವಾತ್ತದಂಡಃ||
ಹಾಗೆ ಸೈನ್ಯಮಧ್ಯದಲ್ಲಿ ಆಕ್ರಮಣಕ್ಕೊಳಗಾದ ಅತಿವೇಗಶಾಲೀ ಭೀಮನು ಪ್ರಳಯಕಾಲದಲ್ಲಿ ದಂಡಧರ ಕಾಲನು ಪ್ರಪಂಚವನ್ನೇ ದಹಿಸುವ ಇಚ್ಛೆಯಿಂದ ವೇಗವಾಗಿ ಕಾರ್ಯಪ್ರವೃತ್ತನಾಗುವಂತೆ ಆಕ್ರಮಣಿಸಿದನು.
08054008a ತಸ್ಯಾತಿವೇಗಸ್ಯ ರಣೇಽತಿವೇಗಂ
ನಾಶಕ್ನುವನ್ಧಾರಯಿತುಂ ತ್ವದೀಯಾಃ|
08054008c ವ್ಯಾತ್ತಾನನಸ್ಯಾಪತತೋ ಯಥೈವ
ಕಾಲಸ್ಯ ಕಾಲೇ ಹರತಃ ಪ್ರಜಾ ವೈ||
ಪ್ರಳಯಕಾಲದಲ್ಲಿ ಪ್ರಜೆಗಳ ಪ್ರಾಣಗಳನ್ನು ಅಪಹರಿಸುವ ಬಾಯಿಕಳೆದ ಕಾಲನಿಂದ ಹೇಗೋ ಹಾಗೆ, ರಣದಲ್ಲಿ ಅತಿವೇಗಿಯಾಗಿದ್ದ ಅವನ ಆ ಅತಿವೇಗವನ್ನು ಸಹಿಸಿಕೊಳ್ಳಲು ನಿನ್ನವರಿಗೆ ಸಾಧ್ಯವಾಗಲಿಲ್ಲ.
08054009a ತತೋ ಬಲಂ ಭಾರತ ಭಾರತಾನಾಂ
ಪ್ರದಹ್ಯಮಾನಂ ಸಮರೇ ಮಹಾತ್ಮನ್|
08054009c ಭೀತಂ ದಿಶೋಽಕೀರ್ಯತ ಭೀಮನುನ್ನಂ
ಮಹಾನಿಲೇನಾಭ್ರಗಣೋ ಯಥೈವ||
ಭಾರತ! ಮಹಾತ್ಮನ್! ಸಮರದಲ್ಲಿ ಭೀಮನಿಂದ ಹಾಗೆ ಸುಡಲ್ಪಡುತ್ತಿದ್ದ ಭಾರತರ ಸೇನೆಯು ಭೀತಿಗೊಂಡು ಚಂಡಮಾರುತದಿಂದ ಚದುರಿಹೋಗುವ ಮೋಡಗಳ ಗುಂಪುಗಳಂತೆ ದಿಕ್ಕಾಪಾಲಾಗಿ ಓಡಿ ಹೋಯಿತು.
08054010a ತತೋ ಧೀಮಾನ್ಸಾರಥಿಮಬ್ರವೀದ್ಬಲೀ
ಸ ಭೀಮಸೇನಃ ಪುನರೇವ ಹೃಷ್ಟಃ|
08054010c ಸೂತಾಭಿಜಾನೀಹಿ ಪರಾನ್ಸ್ವಕಾನ್ವಾ
ರಥಾನ್ಧ್ವಜಾಂಶ್ಚಾಪತತಃ ಸಮೇತಾನ್|
08054010e ಯುಧ್ಯನ್ನಹಂ ನಾಭಿಜಾನಾಮಿ ಕಿಂ ಚಿನ್
ಮಾ ಸೈನ್ಯಂ ಸ್ವಂ ಚಾದಯಿಷ್ಯೇ ಪೃಷತ್ಕೈಃ||
ಆಗ ಧೀಮಾನ್ ಬಲಶಾಲೀ ಭೀಮಸೇನನು ಹೃಷ್ಟನಾಗಿ ಪುನಃ ಸಾರಥಿಗೆ ಹೇಳಿದನು: “ಸೂತ! ಒಟ್ಟಾಗಿ ಮೇಲೆ ಬೀಳುತ್ತಿರುವ ಈ ರಥಧ್ವಜಗಳು ಶತ್ರುಗಳದ್ದೋ ಅಥವಾ ನಮ್ಮವರದ್ದೋ ಎನ್ನುವುದು ತಿಳಿಯದಂತಾಗಿದೆ! ಏಕೆಂದರೆ ಯುದ್ಧದಲ್ಲಿ ತೊಡಗಿರುವಾಗ ನನಗೆ ಏನೊಂದೂ ತಿಳಿಯುತ್ತಿಲ್ಲ! ನಾನು ನನ್ನದೇ ಸೇನೆಯನ್ನು ಬಾಣಗಳಿಂದ ಹೊಡೆಯಬಾರದಲ್ಲ!
08054011a ಅರೀನ್ವಿಶೋಕಾಭಿನಿರೀಕ್ಷ್ಯ ಸರ್ವತೋ
ಮನಸ್ತು ಚಿಂತಾ ಪ್ರದುನೋತಿ ಮೇ ಭೃಶಂ|
08054011c ರಾಜಾತುರೋ ನಾಗಮದ್ಯತ್ಕಿರೀಟೀ
ಬಹೂನಿ ದುಃಖಾನ್ಯಭಿಜಾತೋಽಸ್ಮಿ ಸೂತ||
ವಿಶೋಕ! ಸೂತ! ಸುತ್ತಲೂ ನೋಡಿ ಚಿಂತೆಯು ನನ್ನ ಮನಸ್ಸನ್ನು ತುಂಬಾ ಕಾಡುತ್ತಿದೆ. ರಾಜಾ ಯುಧಿಷ್ಠಿರನನ್ನು ನೋಡಲು ಹೋಗಿದ್ದ ಕಿರೀಟಿಯು ಇನ್ನೂ ಬರಲಿಲ್ಲವೆಂದು ಬಹಳ ದುಃಖಿತನಾಗಿದ್ದೇನೆ!
08054012a ಏತದ್ದುಃಖಂ ಸಾರಥೇ ಧರ್ಮರಾಜೋ
ಯನ್ಮಾಂ ಹಿತ್ವಾ ಯಾತವಾಂ ಶತ್ರುಮಧ್ಯೇ|
08054012c ನೈನಂ ಜೀವನ್ನಾಪಿ ಜಾನಾಮ್ಯಜೀವನ್
ಬೀಭತ್ಸುಂ ವಾ ತನ್ಮಮಾದ್ಯಾತಿದುಃಖಂ||
ಸಾರಥೇ! ಧರ್ಮರಾಜನು ನನ್ನನ್ನು ಬಿಟ್ಟು ಶತ್ರುಗಳ ಮಧ್ಯದಲ್ಲಿ ಹೋದಾಗಲೇ ನನಗೆ ದುಃಖವಾಗಿತ್ತು. ಈಗ ಅವನು ಅಥವಾ ಬೀಭತ್ಸುವು ಬದುಕಿರುವನೋ ಇಲ್ಲವೋ ಎನ್ನುವುದನ್ನೂ ನಾನು ತಿಳಿಯದಂತಾಗಿದ್ದೇನೆ.
08054013a ಸೋಽಹಂ ದ್ವಿಷತ್ಸೈನ್ಯಮುದಗ್ರಕಲ್ಪಂ
ವಿನಾಶಯಿಷ್ಯೇ ಪರಮಪ್ರತೀತಃ|
08054013c ಏತಾನ್ನಿಹತ್ಯಾಜಿಮಧ್ಯೇ ಸಮೇತಾನ್
ಪ್ರೀತೋ ಭವಿಷ್ಯಾಮಿ ಸಹ ತ್ವಯಾದ್ಯ||
ಏನೇ ಆದರೂ ನಾನು ಪರಮಪ್ರೀತನಾಗಿ ಶತ್ರುಗಳ ಈ ಉಗ್ರಕಲ್ಪ ಸೇನೆಯನ್ನು ವಿನಾಶಗೊಳಿಸುತ್ತೇನೆ. ರಣಮಧ್ಯದಲ್ಲಿ ಸೇರಿರುವ ಇವರನ್ನು ಇಂದು ನಿನ್ನ ಸಹಾಯದಿಂದ ಸಂಹರಿಸಿ ಪ್ರೀತನಾಗುತ್ತೇನೆ.
08054014a ಸರ್ವಾಂಸ್ತೂಣೀರಾನ್ಮಾರ್ಗಣಾನ್ವಾನ್ವವೇಕ್ಷ್ಯ
ಕಿಂ ಶಿಷ್ಟಂ ಸ್ಯಾತ್ಸಾಯಕಾನಾಂ ರಥೇ ಮೇ|
08054014c ಕಾ ವಾ ಜಾತಿಃ ಕಿಂ ಪ್ರಮಾಣಂ ಚ ತೇಷಾಂ
ಜ್ಞಾತ್ವಾ ವ್ಯಕ್ತಂ ತನ್ಮಮಾಚಕ್ಷ್ವ ಸೂತ||
ಸೂತ! ನನ್ನ ರಥದಲ್ಲಿರುವ ತೂಣೀರಗಳನ್ನೂ ಮಾರ್ಗಣಗಳನ್ನೂ ಸಾಯಕಗಳನ್ನೂ ನೋಡಿ ಯಾವ ಯಾವ ಜಾತಿಯ ಬಾಣಗಳು ಎಷ್ಟು ಪ್ರಮಾಣಗಳಲ್ಲಿವೆಯೆನ್ನುವುದನ್ನು ತಿಳಿದುಕೊಂಡು ನನಗೆ ಹೇಳು!”
08054015 ವಿಶೋಕ ಉವಾಚ|
08054015a ಷಣ್ಮಾರ್ಗಣಾನಾಮಯುತಾನಿ ವೀರ
ಕ್ಷುರಾಶ್ಚ ಭಲ್ಲಾಶ್ಚ ತಥಾಯುತಾಖ್ಯಾಃ|
08054015c ನಾರಾಚಾನಾಂ ದ್ವೇ ಸಹಸ್ರೇ ತು ವೀರ
ತ್ರೀಣ್ಯೇವ ಚ ಪ್ರದರಾಣಾಂ ಚ ಪಾರ್ಥ||
ವಿಶೋಕನು ಹೇಳಿದನು: “ವೀರ! ನಿನ್ನಲ್ಲಿ ಅರುವತ್ತು ಸಾವಿರ ಮಾರ್ಗಣಗಳೂ, ಹತ್ತು ಸಾವಿರ ಕ್ಷುರಗಳೂ, ಹತ್ತುಸಾವಿರ ಭಲ್ಲಗಳೂ, ಎರಡು ಸಾವಿರ ನಾರಾಚಗಳೂ ಮತ್ತು ಮೂರು ಸಾವಿರ ಪ್ರದರಗಳೂ ಇವೆ.
08054016a ಅಸ್ತ್ಯಾಯುಧಂ ಪಾಂಡವೇಯಾವಶಿಷ್ಟಂ
ನ ಯದ್ವಹೇಚ್ಚಕಟಂ ಷಡ್ಗವೀಯಂ|
08054016c ಏತದ್ವಿದ್ವನ್ಮುಂಚ ಸಹಸ್ರಶೋಽಪಿ
ಗದಾಸಿಬಾಹುದ್ರವಿಣಂ ಚ ತೇಽಸ್ತಿ||
ಪಾಂಡವೇಯ! ನಿನ್ನಲ್ಲಿ ಎಷ್ಟು ಆಯುಧಗಳು ಉಳಿದಿವೆಯೆಂದರೆ ಅವುಗಳನ್ನು ಒಂದು ಗಾಡಿಯಲ್ಲಿ ತುಂಬಿಸಿದರೆ ಆರು ಎತ್ತುಗಳಿಗೂ ಆ ಗಾಡಿಯನ್ನು ಎಳೆದುಕೊಂಡು ಹೋಗಲಾವುದಿಲ್ಲ! ಇದಕ್ಕೆ ಹೊರತಾಗಿ ನಿನ್ನಲ್ಲಿ ಗದೆ, ಖಡ್ಗ ಮತ್ತು ಬಾಹುಬಲವೂ ಇದೆಯೆಂದು ತಿಳಿದು ಸಹಸ್ರಸಂಖ್ಯೆಗಳಲ್ಲಿ ಬಾಣಗಳನ್ನು ಪ್ರಯೋಗಿಸು!”
08054017 ಭೀಮ ಉವಾಚ|
08054017a ಸೂತಾದ್ಯೇಮಂ ಪಶ್ಯ ಭೀಮಪ್ರಮುಕ್ತೈಃ
ಸಂಭಿಂದದ್ಭಿಃ ಪಾರ್ಥಿವಾನಾಶುವೇಗೈಃ|
08054017c ಉಗ್ರೈರ್ಬಾಣೈರಾಹವಂ ಘೋರರೂಪಂ
ನಷ್ಟಾದಿತ್ಯಂ ಮೃತ್ಯುಲೋಕೇನ ತುಲ್ಯಂ||
ಭೀಮನು ಹೇಳಿದನು: “ಸೂತ! ನೀನು ಇಂದು ಭೀಮಪ್ರಮುಕ್ತ ವೇಗಯುಕ್ತ ಆಶುಗಗಳಿಂದ ಚಿಂದಿಚಿಂದಿಗೊಳ್ಳುವ ಪಾರ್ಥಿವರನ್ನೂ, ಉಗ್ರ ಬಾಣಗಳಿಂದ ಸೂರ್ಯನನ್ನೂ ಮುಚ್ಚಿ ಆಕಾಶವನ್ನು ಘೋರರೂಪದ ಮೃತ್ಯುಲೋಕಕ್ಕೆ ಸಮನಾಗಿ ಮಾಡುವುದನ್ನು ನೋಡು!
08054018a ಅದ್ಯೈವ ತದ್ವಿದಿತಂ ಪಾರ್ಥಿವಾನಾಂ
ಭವಿಷ್ಯತಿ ಆಕುಮಾರಂ ಚ ಸೂತ|
08054018c ನಿಮಗ್ನೋ ವಾ ಸಮರೇ ಭೀಮಸೇನ
ಏಕಃ ಕುರೂನ್ವಾ ಸಮರೇ ವಿಜೇತಾ||
ಸೂತ! ಇಂದು ಭೀಮಸೇನನು ಸಮರದಲ್ಲಿ ಮುಳುಗಿಹೋದನು ಅಥವಾ ಸಮರದಲ್ಲಿ ಒಬ್ಬನೇ ಕುರುಗಳನ್ನು ಜಯಿಸಿದನು ಎನ್ನುವ ಈ ವಾರ್ತೆಯು ಬಾಲಕರಿಂದ ಹಿಡಿದು ವೃದ್ಧರವರೆಗಿನ ಎಲ್ಲ ರಾಜರಿಗೂ ತಿಳಿಯುತ್ತದೆ!
08054019a ಸರ್ವೇ ಸಂಖ್ಯೇ ಕುರವೋ ನಿಷ್ಪತಂತು
ಮಾಂ ವಾ ಲೋಕಾಃ ಕೀರ್ತಯಂತ್ವಾಕುಮಾರಂ|
08054019c ಸರ್ವಾನೇಕಸ್ತಾನಹಂ ಪಾತಯಿಷ್ಯೇ
ತೇ ವಾ ಸರ್ವೇ ಭೀಮಸೇನಂ ತುದಂತು||
ಸರ್ವಕುರುಗಳೂ ಯುದ್ಧದಲ್ಲಿ ಬಿದ್ದರು ಅಥವಾ ಎಲ್ಲರೂ ಒಂದಾಗಿ ನನ್ನನ್ನು ಕೆಳಗೆ ಬೀಳಿಸಿದರು ಅಥವಾ ಎಲ್ಲರೂ ಭೀಮಸೇನನನ್ನು ಪೀಡಿಸಿದರು ಎಂದು ಬಾಲಕರಿಂದ ಹಿಡಿದು ವೃದ್ಧರವರೆಗಿನ ಜನರು ಮಾತನಾಡಿಕೊಳ್ಳಲಿ!
08054020a ಆಶಾಸ್ತಾರಃ ಕರ್ಮ ಚಾಪ್ಯುತ್ತಮಂ ವಾ
ತನ್ಮೇ ದೇವಾಃ ಕೇವಲಂ ಸಾಧಯಂತು|
08054020c ಆಯಾತ್ವಿಹಾದ್ಯಾರ್ಜುನಃ ಶತ್ರುಘಾತೀ
ಶಕ್ರಸ್ತೂರ್ಣಂ ಯಜ್ಞ ಇವೋಪಹೂತಃ||
ಉತ್ತಮ ಕರ್ಮಗಳನ್ನು ಆಶಿಸುವ ದೇವತೆಗಳು ನನ್ನ ಕೇವಲ ಈ ಇಚ್ಛೆಯನ್ನು ಸಾಧಿಸಿಕೊಡಲಿ! ಯಜ್ಞದಲ್ಲಿ ಆಹ್ವಾನಿಸಲ್ಪಟ್ಟೊಡನೆಯೇ ಇಂದ್ರನು ಬಹಳ ಬೇಗ ಬರುವಂತೆ ಶತ್ರುಘಾತೀ ಅರ್ಜುನನು ಇಲ್ಲಿಗೆ ಕೂಡಲೇ ಬರಲಿ!
08054021a ಈಕ್ಷಸ್ವೈತಾಂ ಭಾರತೀಂ ದೀರ್ಯಮಾಣಾಂ
ಏತೇ ಕಸ್ಮಾದ್ವಿದ್ರವಂತೇ ನರೇಂದ್ರಾಃ|
08054021c ವ್ಯಕ್ತಂ ಧೀಮಾನ್ಸವ್ಯಸಾಚೀ ನರಾಗ್ರ್ಯಃ
ಸೈನ್ಯಂ ಹ್ಯೇತಚ್ಛಾದಯತ್ಯಾಶು ಬಾಣೈಃ||
ಅಲ್ಲಿ ನೋಡು! ಭಾರತೀ ಸೇನೆಯು ಒಡೆದು ಹೀಗೆ ಏಕೆ ನರೇಂದ್ರರು ಪಲಾಯನಮಾಡುತ್ತಿದ್ದಾರೆ? ಧೀಮಾನ್ ನರಾಗ್ರ್ಯ ಸವ್ಯಸಾಚಿಯು ಇವರ ಸೈನ್ಯವನ್ನು ಆಶುಗ ಬಾಣಗಳಿಂದ ಮುಸುಕಿದ್ದಾನೆಂದು ವ್ಯಕ್ತವಾಗುತ್ತಿದೆ!
08054022a ಪಶ್ಯ ಧ್ವಜಾಂಶ್ಚ ದ್ರವತೋ ವಿಶೋಕ
ನಾಗಾನ್ ಹಯಾನ್ಪತ್ತಿಸಂಘಾಂಶ್ಚ ಸಂಖ್ಯೇ|
08054022c ರಥಾನ್ವಿಶೀರ್ಣಾಂ ಶರಶಕ್ತಿತಾಡಿತಾನ್
ಪಶ್ಯಸ್ವೈತಾನ್ರಥಿನಶ್ಚೈವ ಸೂತ||
ಸೂತ! ವಿಶೋಕ! ರಣದಲ್ಲಿ ಓಡಿಹೋಗುತ್ತಿರುವ ಧ್ವಜಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಸಂಘಗಳನ್ನೂ ನೋಡು! ಶರ-ಶಕ್ತಿಗಳಿಂದ ಪೀಡಿತವಾಗಿ ಒಡೆದು ಹೋದ ರಥಗಳನ್ನೂ ರಥಿಗಳನ್ನೂ ನೋಡು!
08054023a ಆಪೂರ್ಯತೇ ಕೌರವೀ ಚಾಪ್ಯಭೀಕ್ಷ್ಣಂ
ಸೇನಾ ಹ್ಯಸೌ ಸುಭೃಶಂ ಹನ್ಯಮಾನಾ|
08054023c ಧನಂಜಯಸ್ಯಾಶನಿತುಲ್ಯವೇಗೈರ್
ಗ್ರಸ್ತಾ ಶರೈರ್ಬರ್ಹಿಸುವರ್ಣವಾಜೈಃ||
ಈ ಕೌರವೀ ಸೇನೆಯು ಮಿಂಚಿನವೇಗವುಳ್ಳ ಧನಂಜಯನ ಸುವರ್ಣಮಯ ನವಿಲಿನ ರೆಕ್ಕೆಗಳನ್ನುಳ್ಳ ಶರಗಳಪ್ರಹಾರದಿಂದ ಬಹಳವಾಗಿ ಗಾಯಗೊಂಡಿದೆ.
08054024a ಏತೇ ದ್ರವಂತಿ ಸ್ಮ ರಥಾಶ್ವನಾಗಾಃ
ಪದಾತಿಸಂಘಾನವಮರ್ದಯಂತಃ|
08054024c ಸಮ್ಮುಹ್ಯಮಾನಾಃ ಕೌರವಾಃ ಸರ್ವ ಏವ
ದ್ರವಂತಿ ನಾಗಾ ಇವ ದಾವಭೀತಾಃ|
08054024e ಹಾಹಾಕೃತಾಶ್ಚೈವ ರಣೇ ವಿಶೋಕ
ಮುಂಚಂತಿ ನಾದಾನ್ವಿಪುಲಾನ್ಗಜೇಂದ್ರಾಃ||
ವಿಶೋಕ! ರಥ-ಕುದುರೆ-ಆನೆಗಳು ಮತ್ತು ಪದಾತಿಸಂಘಗಳು ಮರ್ದಿಸಲ್ಪಟ್ಟು ಓಡಿ ಹೋಗುತ್ತಿವೆ. ಸರ್ವ ಕೌರವರೂ ಬುದ್ಧಿಗೆಟ್ಟವರಂತಾಗಿದ್ದಾರೆ. ಆನೆಗಳು ರಣದಲ್ಲಿ ಭಯಭೀತರಾಗಿ ಹಾಹಾಕಾರಗೈಯುತ್ತಾ ಓಡಿಹೋಗುತ್ತಿವೆ. ಗಜೇಂದ್ರಗಳು ಜೋರಾಗಿ ಘೀಳಿಡುತ್ತಿವೆ!”
08054025 ವಿಶೋಕ ಉವಾಚ|
08054025a ಸರ್ವೇ ಕಾಮಾಃ ಪಾಂಡವ ತೇ ಸಮೃದ್ಧಾಃ
ಕಪಿಧ್ವಜೋ ದೃಶ್ಯತೇ ಹಸ್ತಿಸೈನ್ಯೇ|
08054025c ನೀಲಾದ್ಧನಾದ್ವಿದ್ಯುತಮುಚ್ಚರಂತೀಂ
ತಥಾಪಶ್ಯಂ ವಿಸ್ಫುರದ್ವೈ ಧನುಸ್ತತ್||
ವಿಶೋಕನು ಹೇಳಿದನು: “ಪಾಂಡವ! ನಿನ್ನ ಸರ್ವಕಾಮಗಳನ್ನೂ ಪೂರೈಸಲು ಹಸ್ತಿಸೇನೆಯಲ್ಲಿ ಕಪಿಧ್ವಜನು ಕಾಣಿಸಿಕೊಂಡಿದ್ದಾನೆ. ಮೇಘದಂತಿರುವ ಧನುಸ್ಸಿನಲ್ಲಿ ಮಿಂಚಿನಂತಿರುವ ಅವನ ಮೌರ್ವಿಯನ್ನು ನೋಡು. ಧನುಸ್ಸಿನ ಠೇಂಕಾರವನ್ನು ಕೇಳು!
08054026a ಕಪಿರ್ಹ್ಯಸೌ ವೀಕ್ಷ್ಯತೇ ಸರ್ವತೋ ವೈ
ಧ್ವಜಾಗ್ರಮಾರುಹ್ಯ ಧನಂಜಯಸ್ಯ|
08054026c ದಿವಾಕರಾಭೋ ಮಣಿರೇಷ ದಿವ್ಯೋ
ವಿಭ್ರಾಜತೇ ಚೈವ ಕಿರೀಟಸಂಸ್ಥಃ||
ಧನಂಜಯನ ಧ್ವಜವನ್ನೇರಿದ ಕಪಿಯು ಸುತ್ತಲೂ ನೋಡುತ್ತಿದ್ದಾನೆ. ಅರ್ಜುನನ ಕಿರೀಟದ ಮೇಲಿರುವ ದಿವ್ಯ ಮಣಿಯು ದಿವಾಕರನ ಪ್ರಕಾಶದಿಂದ ಹೊಳೆಯುತ್ತಿದೆ!
08054027a ಪಾರ್ಶ್ವೇ ಭೀಮಂ ಪಾಂಡುರಾಭ್ರಪ್ರಕಾಶಂ
ಪಶ್ಯೇಮಂ ತ್ವಂ ದೇವದತ್ತಂ ಸುಘೋಷಂ|
08054027c ಅಭೀಶುಹಸ್ತಸ್ಯ ಜನಾರ್ದನಸ್ಯ
ವಿಗಾಹಮಾನಸ್ಯ ಚಮೂಂ ಪರೇಷಾಂ||
ಅವನ ಪಕ್ಕದಲ್ಲಿ ಬಿಳಿಯ ಮೋಡದ ಪ್ರಕಾಶವುಳ್ಳ ಸುಘೋಷವುಳ್ಳ ದೇವದತ್ತವನ್ನು ನೋಡುತ್ತಿದ್ದೇವೆ. ಜನಾರ್ದನನ ಕೈಯಲ್ಲಿ ಶತ್ರುಗಳ ಸೇನೆಯನ್ನು ನುಗ್ಗಿಹೋಗುವ ಕುದುರೆಗಳ ಲಗಾಮಿರುವುದನ್ನು ನೋಡು!
08054028a ರವಿಪ್ರಭಂ ವಜ್ರನಾಭಂ ಕ್ಷುರಾಂತಂ
ಪಾರ್ಶ್ವೇ ಸ್ಥಿತಂ ಪಶ್ಯ ಜನಾರ್ದನಸ್ಯ|
08054028c ಚಕ್ರಂ ಯಶೋ ವರ್ಧಯತ್ಕೇಶವಸ್ಯ
ಸದಾರ್ಚಿತಂ ಯದುಭಿಃ ಪಶ್ಯ ವೀರ||
ವೀರ! ಜನಾರ್ದನನ ಪಕ್ಕದಲ್ಲಿ ನಿಂತಿರುವ, ಯದುಗಳು ಸದಾ ಅರ್ಚಿಸುವ, ಕೇಶವನ ಯಶಸ್ಸನ್ನು ವರ್ಧಿಸುವ, ರವಿಪ್ರಭೆಯುಳ್ಳ, ವಜ್ರನಾಭೀ, ಕ್ಷುರಾಂತ ಚಕ್ರವನ್ನು ನೋಡು!”
08054029 ಭೀಮ ಉವಾಚ|
08054029a ದದಾಮಿ ತೇ ಗ್ರಾಮವರಾಂಶ್ಚತುರ್ದಶ
ಪ್ರಿಯಾಖ್ಯಾನೇ ಸಾರಥೇ ಸುಪ್ರಸನ್ನಃ|
08054029c ದಸೀಶತಂ ಚಾಪಿ ರಥಾಂಶ್ಚ ವಿಂಶತಿಂ
ಯದರ್ಜುನಂ ವೇದಯಸೇ ವಿಶೋಕ||
ಭೀಮನು ಹೇಳಿದನು: “ಸಾರಥೇ! ಪ್ರಿಯವಾರ್ತೆಯನ್ನು ಹೇಳಿದುದಕ್ಕೆ ಸುಪ್ರಸನ್ನನಾಗಿ ನಿನಗೆ ಹದಿನಾಲ್ಕು ಶ್ರೇಷ್ಠ ಗ್ರಾಮಗಳನ್ನು ನೀಡುತ್ತೇನೆ! ವಿಶೋಕ! ಅರ್ಜುನನು ಬಂದಿರುವುದನ್ನು ತಿಳಿಸಿದುದಕ್ಕೆ ನಿನಗೆ ನೂರು ದಾಸಿಯರನ್ನೂ ಇಪ್ಪತ್ತು ರಥಗಳನ್ನೂ ಕೊಡುತ್ತೇನೆ!””
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಭೀಮಸೇನವಿಶೋಕಸಂವಾದೇ ಚತುಷ್ಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಭೀಮಸೇನವಿಶೋಕಸಂವಾದ ಎನ್ನುವ ಐವತ್ನಾಲ್ಕನೇ ಅಧ್ಯಾಯವು.
[1] ಯುಧಿಷ್ಠಿರನನ್ನು ನೋಡಲು ಹೋಗಿದ್ದ ಅರ್ಜುನನು ಇನ್ನೂ ಬರಲಿಲ್ಲವೆಂದು ಹೆದರಿ?