ಕರ್ಣ ಪರ್ವ
೫೩
ಕರ್ಣಪುತ್ರ ಸುಷೇಣನ ವಧೆ
ಉತ್ತಮೌಜಸನಿಂದ ಕರ್ಣನ ಮಗ ಸುಷೇಣನ ವಧೆ (೧-೧೪).
08053001 ಸಂಜಯ ಉವಾಚ|
08053001a ತೇಷಾಮನೀಕಾನಿ ಬೃಹದ್ಧ್ವಜಾನಿ
ರಣೇ ಸಮೃದ್ಧಾನಿ ಸಮಾಗತಾನಿ|
08053001c ಗರ್ಜಂತಿ ಭೇರೀನಿನದೋನ್ಮುಖಾನಿ
ಮೇಘೈರ್ಯಥಾ ಮೇಘಗಣಾಸ್ತಪಾಂತೇ||
ಸಂಜಯನು ಹೇಳಿದನು: “ಬೇಸಗೆಯ ಕೊನೆಯಲ್ಲಿ ಮೇಘಗಣಗಳು ಹೇಗೆ ಸೇರಿಕೊಳ್ಳುವವೋ ಹಾಗೆ ದೊಡ್ಡ ದೊಡ್ಡ ಧ್ವಜಗಳನ್ನುಳ್ಳ ಅವರ ಸಮೃದ್ಧ ಸೇನೆಗಳು ಭೇರೀನಿನಾದಗಳನ್ನು ಮಾಡುತ್ತಾ ಗರ್ಜಿಸುತ್ತಾ ರಣದಲ್ಲಿ ಬಂದು ಸೇರಿದವು.
08053002a ಮಹಾಗಜಾಭ್ರಾಕುಲಮಸ್ತ್ರತೋಯಂ
ವಾದಿತ್ರನೇಮೀತಲಶಬ್ದವಚ್ಚ|
08053002c ಹಿರಣ್ಯಚಿತ್ರಾಯುಧವೈದ್ಯುತಂ ಚ
ಮಹಾರಥೈರಾವೃತಶಬ್ದವಚ್ಚ||
ಮಹಾಗಜಗಳ ಸಮೂಹಗಳು ಮೇಘಗಳಂತಿದ್ದವು. ರಣವಾದ್ಯಗಳ ಮತ್ತು ರಥಚಕ್ರಗಳ ಶಬ್ಧವು ಗುಡುಗಿನ ಶಬ್ಧಗಳಂತಿದ್ದವು. ಮಹಾರಥರಿಂದ ಪ್ರಯೋಗಿಸಲ್ಪಟ್ಟ ಬಂಗಾರದ ಬಣ್ಣಗಳ ಆಯುಧಗಳು ಶಬ್ಧಮಾಡಿ ಮಿಂಚಿನಂತೆ ಹೊಳೆಯುತ್ತಿದ್ದವು.
08053003a ತದ್ಭೀಮವೇಗಂ ರುಧಿರೌಘವಾಹಿ
ಖಡ್ಗಾಕುಲಂ ಕ್ಷತ್ರಿಯಜೀವವಾಹಿ|
08053003c ಅನಾರ್ತವಂ ಕ್ರೂರಮನಿಷ್ಟವರ್ಷಂ
ಬಭೂವ ತತ್ಸಂಹರಣಂ ಪ್ರಜಾನಾಂ||
ಆ ಭೀಮವೇಗದಿಂದ ಬೀಳುತ್ತಿದ್ದ, ರಕ್ತದ ಪ್ರವಾಹವನ್ನೇ ಹರಿಸುತ್ತಿದ್ದ, ಕ್ಷತ್ರಿಯರ ಜೀವವನ್ನು ಹರಿಸುತ್ತಿದ್ದ ಆ ಖಡ್ಗಗಳ ಕ್ರೂರವಾದ ಅನಿಷ್ಟ ವೃಷ್ಟಿಯು ಆರ್ತರಾದ ಪ್ರಜೆಗಳ ಸಂಹಾರಕವಾಗಿತ್ತು.
08053004a ರಥಾನ್ಸಸೂತಾನ್ಸಹಯಾನ್ಗಜಾಂಶ್ಚ
ಸರ್ವಾನರೀನ್ಮೃತ್ಯುವಶಂ ಶರೌಘೈಃ|
08053004c ನಿನ್ಯೇ ಹಯಾಂಶ್ಚೈವ ತಥಾ ಸಸಾದೀನ್
ಪದಾತಿಸಂಘಾಂಶ್ಚ ತಥೈವ ಪಾರ್ಥಃ||
ಅಲ್ಲಿ ಪಾರ್ಥನು ಶರೌಘಗಳಿಂದ ಸಾರಥಿಗಳೊಂದಿಗೆ ರಥಗಳನ್ನೂ, ಸವಾರಿಗಳೊಂದಿಗೆ ಆನೆಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ ಮತ್ತು ಪದಾತಿ ಸಂಘಗಳನ್ನೂ ಮೃತ್ಯುವಶರನ್ನಾಗಿ ಮಾಡಿದನು.
08053005a ಕೃಪಃ ಶಿಖಂಡೀ ಚ ರಣೇ ಸಮೇತೌ
ದುರ್ಯೋಧನಂ ಸಾತ್ಯಕಿರಭ್ಯಗಚ್ಚತ|
08053005c ಶ್ರುತಶ್ರವಾ ದ್ರೋಣಸುತೇನ ಸಾರ್ಧಂ
ಯುಧಾಮನ್ಯುಶ್ಚಿತ್ರಸೇನೇನ ಚಾಪಿ||
ರಣದಲ್ಲಿ ಕೃಪನು ಶಿಖಂಡಿಯೊಡನೆಯೂ, ದುರ್ಯೋಧನನು ಸಾತ್ಯಕಿಯೊಡನೆಯೂ, ಶ್ರುತಶ್ರವನು ದ್ರೋಣಸುತನೊಡನೆಯೂ ಮತ್ತು ಯುಧಾಮನ್ಯುವು ಚಿತ್ರಸೇನನೊಡನೆಯೂ ಯುದ್ಧಮಾಡುತ್ತಿದ್ದರು.
08053006a ಕರ್ಣಸ್ಯ ಪುತ್ರಸ್ತು ರಥೀ ಸುಷೇಣಂ
ಸಮಾಗತಃ ಸೃಂಜಯಾಂಶ್ಚೋತ್ತಮೌಜಾಃ|
08053006c ಗಾಂದಾರರಾಜಂ ಸಹದೇವಃ ಕ್ಷುಧಾರ್ತೋ
ಮಹರ್ಷಭಂ ಸಿಂಹ ಇವಾಭ್ಯಧಾವತ್||
ಕರ್ಣನ ಪುತ್ರ ರಥೀ ಸುಷೇಣನನ್ನು ಸೃಂಜಯ ಉತ್ತಮೌಜಸನು ಎದುರಾದನು. ಹಸಿದ ಸಿಂಹವು ಮಹಾ ಹೋರಿಯನ್ನು ಹೇಗೋ ಹಾಗೆ ಸಹದೇವನು ಗಾಂಧಾರರಾಜನನ್ನು ಆಕ್ರಮಣಿಸಿದನು.
08053007a ಶತಾನೀಕೋ ನಾಕುಲಿಃ ಕರ್ಣಪುತ್ರಂ
ಯುವಾ ಯುವಾನಂ ವೃಷಸೇನಂ ಶರೌಘೈಃ|
08053007c ಸಮಾರ್ದಯತ ಕರ್ಣಸುತಶ್ಚ ವೀರಃ
ಪಾಂಚಾಲೇಯಂ ಶರವರ್ಷೈರನೇಕೈಃ||
ನಾಕುಲಿ ಯುವ ಶತಾನೀಕನು ಕರ್ಣಪುತ್ರ ಯುವ ವೃಷಸೇನನನ್ನು ಶರೌಘಗಳಿಂದ ಪ್ರಹರಿಸಿದನು. ವೀರ ಕರ್ಣಸುತನೂ ಕೂಡ ಪಾಂಚಾಲಿಯ ಆ ಮಗನನ್ನು ಅನೇಕ ಶರವರ್ಷಗಳಿಂದ ಪ್ರಹರಿಸಿದನು.
08053008a ರಥರ್ಷಭಃ ಕೃತವರ್ಮಾಣಮಾರ್ಚ್ಚನ್
ಮಾದ್ರೀಪುತ್ರೋ ನಕುಲಶ್ಚಿತ್ರಯೋಧೀ|
08053008c ಪಾಂಚಾಲಾನಾಮಧಿಪೋ ಯಾಜ್ಞಸೇನಿಃ
ಸೇನಾಪತಿಂ ಕರ್ಣಮಾರ್ಚ್ಚತ್ಸಸೈನ್ಯಂ||
ಚಿತ್ರಯೋಧೀ ಮಾದ್ರೀಪುತ್ರ ನಕುಲನು ರಥರ್ಷಭ ಕೃತವರ್ಮನನ್ನು ಆಕ್ರಮಣಿಸಿದನು. ಪಾಂಚಾಲರ ಅಧಿಪ ಯಾಜ್ಞಸೇನಿ ಧೃಷ್ಟದ್ಯುಮ್ನನು ಸೇನೆಯೊಡನೆ ಸೇನಾಪತಿ ಕರ್ಣನನ್ನು ಆಕ್ರಮಣಿಸಿದನು.
08053009a ದುಃಶಾಸನೋ ಭಾರತ ಭಾರತೀ ಚ
ಸಂಶಪ್ತಕಾನಾಂ ಪೃತನಾ ಸಮೃದ್ಧಾ|
08053009c ಭೀಮಂ ರಣೇ ಶಸ್ತ್ರಭೃತಾಂ ವರಿಷ್ಠಂ
ತದಾ ಸಮಾರ್ಚ್ಚತ್ತಮಸಹ್ಯವೇಗಂ||
ಭಾರತ! ದುಃಶಾಸನನು ಬಾರತೀ ಮತ್ತು ಸಂಶಪ್ತಕರ ಸಮೃದ್ಧ ಸೇನೆಗಳೊಂದಿಗೆ ರಣದಲ್ಲಿ ಅಸಹ್ಯವೇಗಿ ಶಸ್ತ್ರಭೃತರಲ್ಲಿ ವರಿಷ್ಠ ಭೀಮನನ್ನು ಆಕ್ರಮಣಿಸಿದನು.
08053010a ಕರ್ಣಾತ್ಮಜಂ ತತ್ರ ಜಘಾನ ಶೂರಸ್
ತಥಾಚ್ಚಿನಚ್ಚೋತ್ತಮೌಜಾಃ ಪ್ರಸಃಯ|
08053010c ತಸ್ಯೋತ್ತಮಾಂಗಂ ನಿಪಪಾತ ಭೂಮೌ
ನಿನಾದಯದ್ಗಾಂ ನಿನದೇನ ಖಂ ಚ||
ಆಗ ಶೂರ ಉತ್ತಮೌಜಸನು ಬಲವನ್ನುಪಯೋಗಿಸಿ ಕರ್ಣಾತ್ಮಜನ ಶಿರವನ್ನು ಭೂಮಿಗೆ ಕೆಡವಿ ಜೋರಾಗಿ ಗರ್ಜಿಸಿ ಭೂಮ್ಯಾಕಾಶಗಳನ್ನು ಮೊಳಗಿಸಿದನು.
08053011a ಸುಷೇಣಶೀರ್ಷಂ ಪತಿತಂ ಪೃಥಿವ್ಯಾಂ
ವಿಲೋಕ್ಯ ಕರ್ಣೋಽಥ ತದಾರ್ತರೂಪಃ|
08053011c ಕ್ರೋಧಾದ್ಧಯಾಂಸ್ತಸ್ಯ ರಥಂ ಧ್ವಜಂ ಚ
ಬಾಣೈಃ ಸುಧಾರೈರ್ನಿಶಿತೈರ್ನ್ಯಕೃಂತತ್||
ಸುಷೇಣನ ಶಿರವು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಆರ್ತರೂಪನಾದ ಕರ್ಣನು ಕ್ರೋಧದಿಂದ ಉತ್ತಮೌಜಸನ ಕುದುರೆಗಳನ್ನೂ, ರಥವನ್ನೂ, ಧ್ವಜವನ್ನೂ ಹರಿತ ಮೊಲಗುಗಳುಳ್ಳ ನಿಶಿತ ಬಾಣಗಳಿಂದ ಕತ್ತರಿಸಿದನು.
08053012a ಸ ತೂತ್ತಮೌಜಾ ನಿಶಿತೈಃ ಪೃಷತ್ಕೈರ್
ವಿವ್ಯಾಧ ಖಡ್ಗೇನ ಚ ಭಾಸ್ವರೇಣ|
08053012c ಪಾರ್ಷ್ಣಿಂ ಹಯಾಂಶ್ಚೈವ ಕೃಪಸ್ಯ ಹತ್ವಾ
ಶಿಖಂಡಿವಾಹಂ ಸ ತತೋಽಭ್ಯರೋಹತ್||
ಆ ಉತ್ತಮೌಜಸನಾದರೋ ನಿಶಿತ ಪೃಷತ್ಕಗಳಿಂದ ಮತ್ತು ಹೊಳೆಯುತ್ತಿರುವ ಖಡ್ಗದಿಂದ ಕೃಪನ ಪಾರ್ಷ್ಣಿಯನ್ನೂ ಕುದುರೆಗಳನ್ನೂ ಸಂಹರಿಸಿ ಶಿಖಂಡಿಯ ರಥವನ್ನೇರಿದನು.
08053013a ಕೃಪಂ ತು ದೃಷ್ಟ್ವಾ ವಿರಥಂ ರಥಸ್ಥೋ
ನೈಚ್ಚಚ್ಚರೈಸ್ತಾಡಯಿತುಂ ಶಿಖಂಡೀ|
08053013c ತಂ ದ್ರೌಣಿರಾವಾರ್ಯ ರಥಂ ಕೃಪಂ ಸ್ಮ
ಸಮುಜ್ಜಹ್ರೇ ಪಂಕಗತಾಂ ಯಥಾ ಗಾಂ||
ಕೃಪನು ವಿರಥನಾಗಿರುವುದನ್ನು ನೋಡಿ ರಥಸ್ಥನಾಗಿದ್ದ ಶಿಖಂಡಿಯು ಶರಗಳಿಂದ ಅವನನ್ನು ಪ್ರಹರಿಸಲು ಇಚ್ಛಿಸಲಿಲ್ಲ. ಆಗ ದ್ರೌಣಿಯು ಕೆಸರಿನಲ್ಲಿ ಸಿಲುಕಿಕೊಂಡಿರುವ ಹಸುವನ್ನು ಹೇಗೋ ಹಾಗೆ ಕೃಪನ ರಥವನ್ನು ಎತ್ತಿ ಉದ್ಧರಿಸಿದನು.
08053014a ಹಿರಣ್ಯವರ್ಮಾ ನಿಶಿತೈಃ ಪೃಷತ್ಕೈಸ್
ತವಾತ್ಮಜಾನಾಮನಿಲಾತ್ಮಜೋ ವೈ|
08053014c ಅತಾಪಯತ್ಸೈನ್ಯಮತೀವ ಭೀಮಃ
ಕಾಲೇ ಶುಚೌ ಮಧ್ಯಗತೋ ಯಥಾರ್ಕಃ||
ಆಗ ಬಂಗಾರದ ಕವಚವನ್ನು ಧರಿಸಿದ್ದ ಅನಿಲಾತ್ಮಜ ಭೀಮನು ಮಧ್ಯಾಹ್ನದಲ್ಲಿಶುಚಿ ಆಗಸದಲ್ಲಿರುವ ಸೂರ್ಯನಂತೆ ನಿಶಿತ ಬಾಣಗಳಿಂದ ನಿನ್ನ ಮಕ್ಕಳನ್ನು ಸಂಕಟಕ್ಕೀಡುಮಾಡಿದನು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲದ್ವಂದ್ವಯುದ್ಧೇ ತ್ರಿಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲದ್ವಂದ್ವಯುದ್ಧ ಎನ್ನುವ ಐವತ್ಮೂರನೇ ಅಧ್ಯಾಯವು.