Karna Parva: Chapter 4

ಕರ್ಣ ಪರ್ವ

ಎರಡೂ ಸೇನೆಗಳಲ್ಲಿ ಇಲ್ಲಿಯವರೆಗೆ ಹತರಾದವರು ಮತ್ತು ಉಳಿದುಕೊಂಡವರು ಯಾರ್ಯಾರು ಎಂದು ಧೃತರಾಷ್ಟ್ರನು ಸಂಜಯನಲ್ಲಿ ಕೇಳಿದುದು (೧-೩). ಸಂಜಯನು ಇದೂವರೆಗೆ ಹತರಾದ ಕೌರವ ಸೇನಾ ಪ್ರಮುಖರ ಹೆಸರುಗಳನ್ನು ಹೇಳಿದುದು (೪-೫೭). ಸಂಜಯನು ಇದೂವರೆಗೆ ಹತರಾದ ಪಾಂಡವ ಸೇನಾ ಪ್ರಮುಖರ ಹೆಸರುಗಳನ್ನು ಹೇಳಿದುದು (೫೮-೮೭). ಸಂಜಯನು ಕೌರವ ಸೇನೆಯಲ್ಲಿ ಇನ್ನೂ ಬದುಕಿ ಉಳಿದವರ ಹೆಸರುಗಳನ್ನು ಹೇಳಿದುದು (೮೮-೧೦೫). ಧೃತರಾಷ್ಟ್ರನು ಪುನಃ ಮೂರ್ಛಿತನಾದುದು (೧೦೬-೧೦೮).

08004001 ವೈಶಂಪಾಯನ ಉವಾಚ|

08004001a ಏತಚ್ಚ್ರುತ್ವಾ ಮಹಾರಾಜ ಧೃತರಾಷ್ಟ್ರೋಽಮ್ಬಿಕಾಸುತಃ|

08004001c ಅಬ್ರವೀತ್ಸಂಜಯಂ ಸೂತಂ ಶೋಕವ್ಯಾಕುಲಚೇತನಃ||

ವೈಶಂಪಾಯನನು ಹೇಳಿದನು: “ಮಹಾರಾಜ! ಇದನ್ನು ಕೇಳಿ ಶೋಕವ್ಯಾಕುಲ ಚೇತನನಾದ ಅಂಬಿಕಾಸುತ ಧೃತರಾಷ್ಟ್ರನು ಸೂತ ಸಂಜಯನಿಗೆ ಹೇಳಿದನು:

08004002a ದುಷ್ಪ್ರಣೀತೇನ ಮೇ ತಾತ ಮನಸಾಭಿಪ್ಲುತಾತ್ಮನಃ|

08004002c ಹತಂ ವೈಕರ್ತನಂ ಶ್ರುತ್ವಾ ಶೋಕೋ ಮರ್ಮಾಣಿ ಕೃಂತತಿ||

“ಅಯ್ಯಾ! ನಾನು ಮಾಡಿದ ಅನ್ಯಾಯದಿಂದಾಗಿ ವೈಕರ್ತನನು ಹತನಾದನೆಂದು ಕೇಳಿ ಶೋಕದಿಂದ ನನ್ನ ಮರ್ಮಸ್ಥಾನಗಳು ಕತ್ತರಿಸಲ್ಪಡುತ್ತಿವೆ.

08004003a ಕೃತಾಸ್ತ್ರಪರಮಾಃ ಶಲ್ಯೇ ದುಃಖಪಾರಂ ತಿತೀರ್ಷವಃ|

08004003c ಕುರೂಣಾಂ ಸೃಂಜಯಾನಾಂ ಚ ಕೇ ನು ಜೀವಂತಿ ಕೇ ಮೃತಾಃ||

ಕೊರೆಯುತ್ತಿರುವ ಈ ದುಃಖವನ್ನು ಪಾರುಮಾಡಲು ಬಯಸುತ್ತಿರುವ ನನಗೆ ಕುರುಗಳಲ್ಲಿ ಮತ್ತು ಸೃಂಜಯರಲ್ಲಿ ಯಾವ ಪರಮ ಕೃತಾಸ್ತ್ರರು ಜೀವದಿಂದಿರುವರು ಮತ್ತು ಯಾರು ಮೃತರಾದರು ಎಂದು ಹೇಳು!”

08004004 ಸಂಜಯ ಉವಾಚ|

08004004a ಹತಃ ಶಾಂತನವೋ ರಾಜನ್ದುರಾಧರ್ಷಃ ಪ್ರತಾಪವಾನ್|

08004004c ಹತ್ವಾ ಪಾಂಡವಯೋಧಾನಾಮರ್ಬುದಂ ದಶಭಿರ್ದಿನೈಃ||

ಸಂಜಯನು ಹೇಳಿದನು: “ರಾಜನ್! ಹತ್ತು ದಿನಗಳಲ್ಲಿ ಪ್ರತಿದಿನವೂ ಹತ್ತುಸಾವಿರ ಪಾಂಡವ ಯೋಧರನ್ನು ಸಂಹರಿಸಿ ದುರಾಧರ್ಷ ಪ್ರತಾಪವಾನ್ ಶಾಂತನವನು ಹತನಾದನು.

08004005a ತತೋ ದ್ರೋಣೋ ಮಹೇಷ್ವಾಸಃ ಪಾಂಚಾಲಾನಾಂ ರಥವ್ರಜಾನ್|

08004005c ನಿಹತ್ಯ ಯುಧಿ ದುರ್ಧರ್ಷಃ ಪಶ್ಚಾದ್ರುಕ್ಮರಥೋ ಹತಃ||

ಅನಂತರ ಯುದ್ಧದಲ್ಲಿ ಪಾಂಚಾಲರ ರಥಗುಂಪುಗಳನ್ನು ನಾಶಗೊಳಿಸಿದ ಮಹೇಷ್ವಾಸ ದುರ್ಧರ್ಷ ರುಕ್ಮರಥ ದ್ರೋಣನು ಹತನಾದನು.

08004006a ಹತಶಿಷ್ಟಸ್ಯ ಭೀಷ್ಮೇಣ ದ್ರೋಣೇನ ಚ ಮಹಾತ್ಮನಾ|

08004006c ಅರ್ಧಂ ನಿಹತ್ಯ ಸೈನ್ಯಸ್ಯ ಕರ್ಣೋ ವೈಕರ್ತನೋ ಹತಃ||

ಮಹಾತ್ಮ ಭೀಷ್ಮ ಮತ್ತು ದ್ರೋಣರಿಂದ ಹತರಾಗದೇ ಉಳಿದ ಸೇನೆಯ ಅರ್ಧವನ್ನು ಸಂಹರಿಸಿ ವೈಕರ್ತನ ಕರ್ಣನೂ ಹತನಾದನು.

08004007a ವಿವಿಂಶತಿರ್ಮಹಾರಾಜ ರಾಜಪುತ್ರೋ ಮಹಾಬಲಃ|

08004007c ಆನರ್ತಯೋಧಾಂ ಶತಶೋ ನಿಹತ್ಯ ನಿಹತೋ ರಣೇ||

ಮಹಾರಾಜ! ಮಹಾಬಲ ರಾಜಪುತ್ರ ವಿವಿಂಶತಿಯು ರಣದಲ್ಲಿ ನೂರಾರು ಆನರ್ತಯೋಧರನ್ನು ಸಂಹರಿಸಿ ಹತನಾದನು.

08004008a ಅಥ ಪುತ್ರೋ ವಿಕರ್ಣಸ್ತೇ ಕ್ಷತ್ರವ್ರತಮನುಸ್ಮರನ್|

08004008c ಕ್ಷೀಣವಾಹಾಯುಧಃ ಶೂರಃ ಸ್ಥಿತೋಽಭಿಮುಖತಃ ಪರಾನ್||

08004009a ಘೋರರೂಪಾನ್ಪರಿಕ್ಲೇಶಾನ್ದುರ್ಯೋಧನಕೃತಾನ್ಬಹೂನ್|

08004009c ಪ್ರತಿಜ್ಞಾಂ ಸ್ಮರತಾ ಚೈವ ಭೀಮಸೇನೇನ ಪಾತಿತಃ||

ಇನ್ನು ನಿನ್ನ ಮಗ ವಿಕರ್ಣನು ವಾಹನ ಆಯುಧಗಳನ್ನು ಕಳೆದುಕೊಂಡರೂ ಶೂರನಾಗಿ ಕ್ಷತ್ರಧರ್ಮವನ್ನು ಸ್ಮರಿಸಿಕೊಂಡು ಶತ್ರುಗಳಿಗೆ ಎದುರಾಗಿ ನಿಂತು ದುರ್ಯೋಧನನು ಮಾಡಿದ್ದ ಅನೇಕ ಘೋರ ಪರಿಕ್ಲೇಶಗಳನ್ನು ಮತ್ತು ತಾನು ಮಾಡಿದ್ದ ಪ್ರತಿಜ್ಞೆಯನ್ನು ನೆನಪಿಸಿಕೊಂಡ ಭೀಮಸೇನನಿಂದ ಹತನಾದನು.

08004010a ವಿಂದಾನುವಿಂದಾವಾವಂತ್ಯೌ ರಾಜಪುತ್ರೌ ಮಹಾಬಲೌ|

08004010c ಕೃತ್ವಾ ನಸುಕರಂ ಕರ್ಮ ಗತೌ ವೈವಸ್ವತಕ್ಷಯಂ||

ಅವಂತಿಯ ಮಹಾಬಲ ರಾಜಪುತ್ರ ವಿಂದಾನುವಿಂದರು ದುಷ್ಕರ ಸಾಹಸವನ್ನು ಮಾಡಿ ವೈವಸ್ವತಕ್ಷಯಕ್ಕೆ ಹೋದರು.

08004011a ಸಿಂದುರಾಷ್ಟ್ರಮುಖಾನೀಹ ದಶ ರಾಷ್ಟ್ರಾಣಿ ಯಸ್ಯ ವೈ|

08004011c ವಶೇ ತಿಷ್ಠಂತಿ ವೀರಸ್ಯ ಯಃ ಸ್ಥಿತಸ್ತವ ಶಾಸನೇ||

08004012a ಅಕ್ಷೌಹಿಣೀರ್ದಶೈಕಾಂ ಚ ನಿರ್ಜಿತ್ಯ ನಿಶಿತೈಃ ಶರೈಃ|

08004012c ಅರ್ಜುನೇನ ಹತೋ ರಾಜನ್ಮಹಾವೀರ್ಯೋ ಜಯದ್ರಥಃ||

ರಾಜನ್! ಸಿಂಧುರಾಷ್ಟ್ರವೇ ಮುಖ್ಯವಾಗಿ ಹತ್ತು ರಾಷ್ಟ್ರಗಳು ಯಾರ ಅಧೀನದಲ್ಲಿದ್ದವೋ, ಯಾರು ನಿನ್ನ ಶಾಸನದಡಿಯಲ್ಲಿದ್ದನೋ ಆ ವೀರನ ಹನ್ನೊಂದು[1]

ಅಕ್ಷೌಹಿಣೀ ಸೇನೆಗಳನ್ನೂ ನಿಶಿತ ಶರಗಳಿಂದ ಸೋಲಿಸಿ ಮಹಾವೀರ್ಯ ಜಯದ್ರಥನನ್ನು ಅರ್ಜುನನು ಸಂಹರಿಸಿದನು.

08004013a ತಥಾ ದುರ್ಯೋಧನಸುತಸ್ತರಸ್ವೀ ಯುದ್ಧದುರ್ಮದಃ|

08004013c ವರ್ತಮಾನಃ ಪಿತುಃ ಶಾಸ್ತ್ರೇ ಸೌಭದ್ರೇಣ ನಿಪಾತಿತಃ||

ಹಾಗೆಯೇ ತಂದೆಯ ಶಾಸನಾನುಸಾರವಾಗಿಯೇ ನಡೆಯುತ್ತಿದ್ದ ದುರ್ಯೋಧನನ ಮಗ ತರಸ್ವೀ ಯುದ್ಧದುರ್ಮದ ಲಕ್ಷ್ಮಣನನ್ನು ಸೌಭದ್ರನು ಕೆಳಗುರುಳಿಸಿದನು.

08004014a ತಥಾ ದೌಃಶಾಸನಿರ್ವೀರೋ ಬಾಹುಶಾಲೀ ರಣೋತ್ಕಟಃ|

08004014c ದ್ರೌಪದೇಯೇನ ವಿಕ್ರಮ್ಯ ಗಮಿತೋ ಯಮಸಾದನಂ||

ಹಾಗೆಯೇ ದುಃಶಾಸನನ ಮಗ ವೀರ ಬಾಹುಶಾಲೀ ರಣೋತ್ಕಟನು ದ್ರೌಪದೇಯನ ವಿಕ್ರಮ್ಯದಿಂದ ಯಮಸಾದನಕ್ಕೆ ಹೋದನು.

08004015a ಕಿರಾತಾನಾಮಧಿಪತಿಃ ಸಾಗರಾನೂಪವಾಸಿನಾಂ|

08004015c ದೇವರಾಜಸ್ಯ ಧರ್ಮಾತ್ಮಾ ಪ್ರಿಯೋ ಬಹುಮತಃ ಸಖಾ||

08004016a ಭಗದತ್ತೋ ಮಹೀಪಾಲಃ ಕ್ಷತ್ರಧರ್ಮರತಃ ಸದಾ|

08004016c ಧನಂಜಯೇನ ವಿಕ್ರಮ್ಯ ಗಮಿತೋ ಯಮಸಾದನಂ||

ಸಾಗರತೀರದಲ್ಲಿ ವಾಸಿಸುವ ಕಿರಾತರ ಅಧಿಪತಿ, ದೇವರಾಜನ ಸಖ, ಧರ್ಮಾತ್ಮ, ಬಹುಮತದಂತೆ ಪ್ರಿಯ ಸಖ, ಸದಾ ಕ್ಷತ್ರಧರ್ಮದಲ್ಲಿ ನಿರತ ಮಹೀಪಾಲ ಭಗದತ್ತನು ಧನಂಜಯನ ವಿಕ್ರಮದಿಂದ ಯಮಸಾದನಕ್ಕೆ ಹೋದನು.

08004017a ತಥಾ ಕೌರವದಾಯಾದಃ ಸೌಮದತ್ತಿರ್ಮಹಾಯಶಾಃ|

08004017c ಹತೋ ಭೂರಿಶ್ರವಾ ರಾಜಂ ಶೂರಃ ಸಾತ್ಯಕಿನಾ ಯುಧಿ||

ರಾಜನ್! ಹಾಗೆಯೇ ಕೌರವರ ದಾಯಾದಿ ಮಹಾಯಶಸ್ವಿ, ಸೋಮದತ್ತನ ಮಗ ಶೂರ ಭೂರಿಶ್ರವನು ಯುದ್ಧದಲ್ಲಿ ಸಾತ್ಯಕಿಯಿಂದ ಹತನಾದನು.

08004018a ಶ್ರುತಾಯುರಪಿ ಚಾಂಬಷ್ಠಃ ಕ್ಷತ್ರಿಯಾಣಾಂ ಧನುರ್ಧರಃ|

08004018c ಚರನ್ನಭೀತವತ್ಸಂಖ್ಯೇ ನಿಹತಃ ಸವ್ಯಸಾಚಿನಾ||

ಕ್ಷತ್ರಿಯರ ಧನುರ್ಧರ ಅಂಬಷ್ಠ ಶ್ರುತಾಯುವೂ ಕೂಡ ಯುದ್ಧದಲ್ಲಿ ನಿರ್ಭಯದಿಂದ ಹೋರಾಡಿ ಸವ್ಯಸಾಚಿಯಿಂದ ಹತನಾದನು.

08004019a ತವ ಪುತ್ರಃ ಸದಾ ಸಂಖ್ಯೇ ಕೃತಾಸ್ತ್ರೋ ಯುದ್ಧದುರ್ಮದಃ|

08004019c ದುಃಶಾಸನೋ ಮಹಾರಾಜ ಭೀಮಸೇನೇನ ಪಾತಿತಃ||

ಮಹಾರಾಜ! ಯುದ್ಧದಲ್ಲಿ ಸದಾ ಕೃತಾಸ್ತ್ರನಾಗಿದ್ದ ನಿನ್ನ ಯುದ್ಧದುರ್ಮದ ಮಗ ದುಃಶಾಸನನನ್ನು ಭೀಮಸೇನನು ಕೆಳಗುರುಳಿಸಿದನು.

08004020a ಯಸ್ಯ ರಾಜನ್ಗಜಾನೀಕಂ ಬಹುಸಾಹಸ್ರಮದ್ಭುತಂ|

08004020c ಸುದಕ್ಷಿಣಃ ಸ ಸಂಗ್ರಾಮೇ ನಿಹತಃ ಸವ್ಯಸಾಚಿನಾ||

ಅನೇಕ ಸಾವಿರ ಆನೆಗಳ ಅದ್ಭುತ ಸೇನೆಯನ್ನು ಹೊಂದಿದ್ದ ಸುದಕ್ಷಿಣನು ಸಂಗ್ರಾಮದಲ್ಲಿ ಸವ್ಯಸಾಚಿಯಿಂದ ಹತನಾದನು.

08004021a ಕೋಸಲಾನಾಮಧಿಪತಿರ್ಹತ್ವಾ ಬಹುಶತಾನ್ಪರಾನ್|

08004021c ಸೌಭದ್ರೇಣ ಹಿ ವಿಕ್ರಮ್ಯ ಗಮಿತೋ ಯಮಸಾದನಂ||

ಕೋಸಲರ ಅಧಿಪತಿಯು ಅನೇಕ ನೂರು ಶತ್ರುಗಳನ್ನು ಸಂಹರಿಸಿ ಸೌಭದ್ರನ ವಿಕ್ರಮ್ಯದಿಂದ ಯಮಸಾದನಕ್ಕೆ ಹೋದನು.

08004022a ಬಹುಶೋ ಯೋಧಯಿತ್ವಾ ಚ ಭೀಮಸೇನಂ ಮಹಾರಥಃ|

08004022c ಚಿತ್ರಸೇನಸ್ತವ ಸುತೋ ಭೀಮಸೇನೇನ ಪಾತಿತಃ||

ಭೀಮಸೇನನೊಂದಿಗೆ ಅನೇಕ ಬಾರಿ ಯುದ್ಧಮಾಡಿ ನಿನ್ನ ಮಗ ಮಹಾರಥ ಚಿತ್ರಸೇನನು ಭೀಮಸೇನನಿಂದ ಹತನಾದನು.

08004023a ಮದ್ರರಾಜಾತ್ಮಜಃ ಶೂರಃ ಪರೇಷಾಂ ಭಯವರ್ಧನಃ|

08004023c ಅಸಿಚರ್ಮಧರಃ ಶ್ರೀಮಾನ್ಸೌಭದ್ರೇಣ ನಿಪಾತಿತಃ||

ಶತ್ರುಗಳ ಭಯವನ್ನು ವರ್ಧಿಸುವ, ಖಡ್ಗ-ಗುರಾಣಿಗಳನ್ನು ಧರಿಸಿದ್ದ ಶ್ರೀಮಾನ್ ಶೂರ ಮದ್ರರಾಜನ ಮಗನು ಸೌಭದ್ರನಿಂದ ಹತನಾದನು.

08004024a ಸಮಃ ಕರ್ಣಸ್ಯ ಸಮರೇ ಯಃ ಸ ಕರ್ಣಸ್ಯ ಪಶ್ಯತಃ|

08004024c ವೃಷಸೇನೋ ಮಹಾತೇಜಾಃ ಶೀಘ್ರಾಸ್ತ್ರಃ ಕೃತನಿಶ್ಚಯಃ||

08004025a ಅಭಿಮನ್ಯೋರ್ವಧಂ ಸ್ಮೃತ್ವಾ ಪ್ರತಿಜ್ಞಾಮಪಿ ಚಾತ್ಮನಃ|

08004025c ಧನಂಜಯೇನ ವಿಕ್ರಮ್ಯ ಗಮಿತೋ ಯಮಸಾದನಂ||

ಸಮರದಲ್ಲಿ ಕರ್ಣನ ಸಮನಾಗಿದ್ದ ಮಹಾತೇಜಸ್ವಿ ಶೀಘ್ರಾಸ್ತ್ರ, ಕೃತನಿಶ್ಚಯ ವೃಷಸೇನನು ಕರ್ಣನು ನೋಡುತ್ತಿದ್ದಂತೆಯೇ ಅಭಿಮನ್ಯುವಿನ ವಧೆಯನ್ನು ಮತ್ತು ತಾನು ಮಾಡಿದ ಪ್ರತಿಜ್ಞೆಯನ್ನು ನೆನಪಿಸಿಕೊಂಡ ಧನಂಜಯನ ವಿಕ್ರಮದಿಂದಾಗಿ ಯಮಸಾದನಕ್ಕೆ ಹೋದನು.

08004026a ನಿತ್ಯಪ್ರಸಕ್ತವೈರೋ ಯಃ ಪಾಂಡವೈಃ ಪೃಥಿವೀಪತಿಃ|

08004026c ವಿಶ್ರಾವ್ಯ ವೈರಂ ಪಾರ್ಥೇನ ಶ್ರುತಾಯುಃ ಸ ನಿಪಾತಿತಃ||

ನಿತ್ಯವೂ ಪಾಂಡವರೊಡನೆ ವೈರವನ್ನು ಸಾಧಿಸಿಕೊಂಡು ಬಂದಿದ್ದ ಪೃಥಿವೀಪತಿ ಶ್ರುತಾಯುಯು ತನ್ನ ವೈರವನ್ನು ಪ್ರಕಟಿಸಿ ಪಾರ್ಥನಿಂದ ಕೆಳಗುರುಳಿಸಲ್ಪಟ್ಟನು.

08004027a ಶಲ್ಯಪುತ್ರಸ್ತು ವಿಕ್ರಾಂತಃ ಸಹದೇವೇನ ಮಾರಿಷ|

08004027c ಹತೋ ರುಕ್ಮರಥೋ ರಾಜನ್ಭ್ರಾತಾ ಮಾತುಲಜೋ ಯುಧಿ||

ರಾಜನ್! ಮಾರಿಷ! ಸಹೋದರನಂತಿದ್ದ, ಸೋದರಮಾವನ ಮಗ, ಶಲ್ಯಪುತ್ರ ವಿಕ್ರಾಂತ ರುಕ್ಮರಥನನ್ನು ಯುದ್ಧದಲ್ಲಿ ಸಹದೇವನು ಸಂಹರಿಸಿದನು.

08004028a ರಾಜಾ ಭಗೀರಥೋ ವೃದ್ಧೋ ಬೃಹತ್ಕ್ಷತ್ರಶ್ಚ ಕೇಕಯಃ|

08004028c ಪರಾಕ್ರಮಂತೌ ವಿಕ್ರಾಂತೌ ನಿಹತೌ ವೀರ್ಯವತ್ತರೌ||

ವೃದ್ಧನಾಗಿದ್ದ ರಾಜಾ ಭಗೀರಥ ಮತ್ತು ಕೇಕಯ ಬೃಹತ್ಕ್ಷತ್ರ ಇಬ್ಬರು ಪರಾಕ್ರಮಿಗಳೂ, ವಿಕ್ರಾಂತರೂ, ವೀರ್ಯವತ್ತರರೂ ಹತರಾದರು.

08004029a ಭಗದತ್ತಸುತೋ ರಾಜನ್ಕೃತಪ್ರಜ್ಞೋ ಮಹಾಬಲಃ|

08004029c ಶ್ಯೇನವಚ್ಚರತಾ ಸಂಖ್ಯೇ ನಕುಲೇನ ನಿಪಾತಿತಃ||

ರಾಜನ್! ಕೃತಪ್ರಜ್ಞ ಮಹಾಬಲ ಭಗದತ್ತನ ಮಗನು ರಣದಲ್ಲಿ ಗಿಡುಗನಂತೆ ಸಂಚರಿಸುತ್ತಾ ನಕುಲನಿಂದ ಹತನಾದನು.

08004030a ಪಿತಾಮಹಸ್ತವ ತಥಾ ಬಾಹ್ಲಿಕಃ ಸಹ ಬಾಹ್ಲಿಕೈಃ|

08004030c ಭೀಮಸೇನೇನ ವಿಕ್ರಮ್ಯ ಗಮಿತೋ ಯಮಸಾದನಂ||

ಹಾಗೆಯೇ ನಿನ್ನ ಪಿತಾಮಹ ಬಾಹ್ಲೀಕನು ಬಾಹ್ಲೀಕರೊಂದಿಗೆ ಭೀಮಸೇನನ ವಿಕ್ರಮದಿಂದಾಗಿ ಯಮಸಾದನಕ್ಕೆ ಹೋದನು.

08004031a ಜಯತ್ಸೇನಸ್ತಥಾ ರಾಜಂ ಜಾರಾಸಂಧಿರ್ಮಹಾಬಲಃ|

08004031c ಮಾಗಧೋ ನಿಹತಃ ಸಂಖ್ಯೇ ಸೌಭದ್ರೇಣ ಮಹಾತ್ಮನಾ||

ರಾಜನ್! ಮಾಗಧ ಜರಾಸಂಧನ ಮಗ ಮಹಾಬಲಶಾಲಿ ಜಯತ್ಸೇನನು ಯುದ್ಧದಲ್ಲಿ ಮಹಾತ್ಮ ಸೌಭದ್ರನಿಂದ ಹತನಾದನು.

08004032a ಪುತ್ರಸ್ತೇ ದುರ್ಮುಖೋ ರಾಜನ್ದುಃಸಹಶ್ಚ ಮಹಾರಥಃ|

08004032c ಗದಯಾ ಭೀಮಸೇನೇನ ನಿಹತೌ ಶೂರಮಾನಿನೌ||

ರಾಜನ್! ನಿನ್ನ ಮಹಾರಥ ಶೂರಮಾನಿ ಮಕ್ಕಳಾದ ದುರ್ಮುಖ ಮತ್ತು ದುಃಸಹರು ಭೀಮಸೇನನ ಗದೆಯಿಂದ ಹತರಾದರು.

08004033a ದುರ್ಮರ್ಷಣೋ ದುರ್ವಿಷಹೋ ದುರ್ಜಯಶ್ಚ ಮಹಾರಥಃ|

08004033c ಕೃತ್ವಾ ನಸುಕರಂ ಕರ್ಮ ಗತಾ ವೈವಸ್ವತಕ್ಷಯಂ[2]||

ದುರ್ಮರ್ಷಣ, ದುರ್ವಿಷಹ ಮತ್ತು ಮಹಾರಥ ದುರ್ಜಯರು ದುಷ್ಕರ ಕರ್ಮಗಳನ್ನೆಸಗಿ ವೈವಸ್ವತಕ್ಷಯವನ್ನು ಸೇರಿದರು.

08004034a ಸಚಿವೋ ವೃಷವರ್ಮಾ ತೇ ಸೂತಃ ಪರಮವೀರ್ಯವಾನ್|

08004034c ಭೀಮಸೇನೇನ ವಿಕ್ರಮ್ಯ ಗಮಿತೋ ಯಮಸಾದನಂ||

ನಿನ್ನ ಸಚಿವ ಪರಮ ವೀರ್ಯವಂತ ಸೂತ ವೃಷವರ್ಮನು ಭೀಮಸೇನನ ವಿಕ್ರಮದಿಂದಾಗಿ ಯಮಸಾದನಕ್ಕೆ ಹೋದನು.

08004035a ನಾಗಾಯುತಬಲೋ ರಾಜಾ ನಾಗಾಯುತಬಲೋ ಮಹಾನ್|

08004035c ಸಗಣಃ ಪಾಂಡುಪುತ್ರೇಣ ನಿಹತಃ ಸವ್ಯಸಾಚಿನಾ||

ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದ ಪೌರವಮಹಾರಾಜನು ತನ್ನ ಗಣಗಳೊಂದಿಗೆ ಪಾಂಡುಪುತ್ರ ಸವ್ಯಸಾಚಿಯಿಂದ ಹತನಾದನು.

08004036a ವಸಾತಯೋ ಮಹಾರಾಜ ದ್ವಿಸಾಹಸ್ರಾಃ ಪ್ರಹಾರಿಣಃ|

08004036c ಶೂರಸೇನಾಶ್ಚ ವಿಕ್ರಾಂತಾಃ ಸರ್ವೇ ಯುಧಿ ನಿಪಾತಿತಾಃ||

ಮಹಾರಾಜ! ಎರಡು ಸಾವಿರ ಪ್ರಹಾರಿ ವಸಾಯತರೂ ವಿಕ್ರಾಂತ ಶೂರಸೇನರೂ ಎಲ್ಲರೂ ಯುದ್ಧದಲ್ಲಿ ಕೆಳಗುರುಳಿದರು.

08004037a ಅಭೀಷಾಹಾಃ ಕವಚಿನಃ ಪ್ರಹರಂತೋ ಮದೋತ್ಕಟಾಃ|

08004037c ಶಿಬಯಶ್ಚ ರಥೋದಾರಾಃ ಕಲಿಂಗಸಹಿತಾ ಹತಾಃ||

ಕವಚಿ ಪ್ರಹರಿ ಮದೋತ್ಕಟ ಅಭೀಷಾಹರೂ, ರಥೋದಾರ ಶಿಬಿಗಳೂ ಕಲಿಂಗರೊಂದಿಗೆ ಹತರಾದರು.

08004038a ಗೋಕುಲೇ ನಿತ್ಯಸಂವೃದ್ಧಾ ಯುದ್ಧೇ ಪರಮಕೋವಿದಾಃ|

08004038c ಶ್ರೇಣಯೋ ಬಹುಸಾಹಸ್ರಾಃ ಸಂಶಪ್ತಕಗಣಾಶ್ಚ ಯೇ|

08004038e ತೇ ಸರ್ವೇ ಪಾರ್ಥಮಾಸಾದ್ಯ ಗತಾ ವೈವಸ್ವತಕ್ಷಯಂ||

ಗೋಕುಲದಲ್ಲಿ ಹುಟ್ಟಿ ಬೆಳೆದಿದ್ದ, ಯುದ್ಧದಲ್ಲಿ ಪರಮ ಕೋವಿದರಾಗಿದ್ದ ಅನೇಕ ಸಹಸ್ರ ಸಂಶಪ್ತಕಗಣಗಳು ಎಲ್ಲರೂ ಪಾರ್ಥನನ್ನು ಎದುರಿಸಿ ವೈವಸ್ವತಕ್ಷಯಕ್ಕೆ ಹೋದರು.

08004039a ಸ್ಯಾಲೌ ತವ ಮಹಾರಾಜ ರಾಜಾನೌ ವೃಷಕಾಚಲೌ|

08004039c ತ್ವದರ್ಥೇ ಸಂಪರಾಕ್ರಾಂತೌ ನಿಹತೌ ಸವ್ಯಸಾಚಿನಾ||

ಮಹಾರಾಜ! ನಿನ್ನ ಬಾವಂದಿರು ಪರಾಕ್ರಾಂತ ರಾಜ ವೃಷಕ ಮತ್ತು ಅಚಲರು ನಿನಗಾಗಿ ಸವ್ಯಸಾಚಿಯಿಂದ ಹತರಾದರು.

08004040a ಉಗ್ರಕರ್ಮಾ ಮಹೇಷ್ವಾಸೋ ನಾಮತಃ ಕರ್ಮತಸ್ತಥಾ|

08004040c ಶಾಲ್ವರಾಜೋ ಮಹಾರಾಜ ಭೀಮಸೇನೇನ ಪಾತಿತಃ||

ಮಹಾರಾಜ! ಉಗ್ರಕರ್ಮಿ, ಕರ್ಮದಲ್ಲಿ ಹೆಸರುಗಳಿಸಿದ, ಮಹೇಷ್ವಾಸ ಶಾಲ್ವರಾಜನು ಭೀಮಸೇನನಿಂದ ಕೆಳಗುರುಳಿಸಲ್ಪಟ್ಟನು.

08004041a ಓಘವಾಂಶ್ಚ ಮಹಾರಾಜ ಬೃಹಂತಃ ಸಹಿತೋ ರಣೇ|

08004041c ಪರಾಕ್ರಮಂತೌ ಮಿತ್ರಾರ್ಥೇ ಗತೌ ವೈವಸ್ವತಕ್ಷಯಂ||

ಮಹಾರಾಜ! ಪರಾಕ್ರಮಿ ಓಘವ ಮತ್ತು ಬೃಹಂತರು ಒಟ್ಟಿಗೇ ಮಿತ್ರನಿಗೋಸ್ಕರ ರಣದಲ್ಲಿ ಹೋರಾಡಿ ವೈವಸ್ವತಕ್ಷಯಕ್ಕೆ ಹೋದರು.

08004042a ತಥೈವ ರಥಿನಾಂ ಶ್ರೇಷ್ಠಃ ಕ್ಷೇಮಧೂರ್ತಿರ್ವಿಶಾಂ ಪತೇ|

08004042c ನಿಹತೋ ಗದಯಾ ರಾಜನ್ಭೀಮಸೇನೇನ ಸಂಯುಗೇ||

ರಾಜನ್! ವಿಶಾಂಪತೇ! ಹಾಗೆಯೇ ರಥಿಗಳಲ್ಲಿ ಶ್ರೇಷ್ಠ ಕ್ಷೇಮಧೂರ್ತಿಯು ಯುದ್ಧದಲ್ಲಿ ಭೀಮಸೇನನ ಗದೆಯಿಂದ ಹತನಾದನು.

08004043a ತಥಾ ರಾಜಾ ಮಹೇಷ್ವಾಸೋ ಜಲಸಂಧೋ ಮಹಾಬಲಃ|

08004043c ಸುಮಹತ್ಕದನಂ ಕೃತ್ವಾ ಹತಃ ಸಾತ್ಯಕಿನಾ ರಣೇ||

ಹಾಗೆಯೇ ರಾಜಾ ಮಹೇಷ್ವಾಸ ಮಹಾಬಲ ಜಲಸಂಧನು ರಣದಲ್ಲಿ ಮಹಾ ಕದನವನ್ನಾಡಿ ಸಾತ್ಯಕಿಯಿಂದ ಹತನಾದನು.

08004044a ಅಲಾಯುಧೋ ರಾಕ್ಷಸೇಂದ್ರಃ ಖರಬಂದುರಯಾನಗಃ|

08004044c ಘಟೋತ್ಕಚೇನ ವಿಕ್ರಮ್ಯ ಗಮಿತೋ ಯಮಸಾದನಂ||

ಕತ್ತೆಗಳನ್ನು ಕಟ್ಟಿದ್ದ ರಥದಲ್ಲಿ ಸಂಚರಿಸುತ್ತಿದ್ದ ರಾಕ್ಷಸೇಂದ್ರ ಅಲಾಯುಧನು ಘಟೋತ್ಕಚನ ವಿಕ್ರಮದಿಂದಾಗಿ ಯಮಸಾದನವನ್ನು ಸೇರಿದನು.

08004045a ರಾಧೇಯಾಃ ಸೂತಪುತ್ರಾಶ್ಚ ಭ್ರಾತರಶ್ಚ ಮಹಾರಥಾಃ|

08004045c ಕೇಕಯಾಃ ಸರ್ವಶಶ್ಚಾಪಿ ನಿಹತಾಃ ಸವ್ಯಸಾಚಿನಾ||

ಸೂತಪುತ್ರ ರಾಧೇಯನೂ, ಅವನ ಮಹಾರಥ ಸಹೋದರರು, ಕೇಕಯರು ಎಲ್ಲರೂ ಸವ್ಯಸಾಚಿಯಿಂದ ಹತರಾದರು.

08004046a ಮಾಲವಾ ಮದ್ರಕಾಶ್ಚೈವ ದ್ರವಿಡಾಶ್ಚೋಗ್ರವಿಕ್ರಮಾಃ|

08004046c ಯೌಧೇಯಾಶ್ಚ ಲಲಿತ್ಥಾಶ್ಚ ಕ್ಷುದ್ರಕಾಶ್ಚಾಪ್ಯುಶೀನರಾಃ||

08004047a ಮಾವೇಲ್ಲಕಾಸ್ತುಂಡಿಕೇರಾಃ ಸಾವಿತ್ರೀಪುತ್ರಕಾಂಚಲಾಃ|

08004047c ಪ್ರಾಚ್ಯೋದೀಚ್ಯಾಃ ಪ್ರತೀಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಮಾರಿಷ||

08004048a ಪತ್ತೀನಾಂ ನಿಹತಾಃ ಸಂಘಾ ಹಯಾನಾಮಾಯುತಾನಿ ಚ|

08004048c ರಥವ್ರಜಾಶ್ಚ ನಿಹತಾ ಹತಾಶ್ಚ ವರವಾರಣಾಃ||

ಮಾಲವರು, ಮದ್ರಕರು, ಉಗ್ರವಿಕ್ರಮಿ ದ್ರವಿಡರು, ಯೌಧೇಯರು, ಲಲಿತರು, ಕ್ಷುದ್ರಕರು, ಉಶೀನರರು, ಮಾವೇಲ್ಲಕರು, ತುಂಡಿಕೇರರು, ಸಾವಿತ್ರೀಪುತ್ರಕರು, ಪೂರ್ವದೇಶದವರು, ಪಶ್ಚಿಮದೇಶದವರು, ಉತ್ತರದವರು, ದಕ್ಷಿಣಾತ್ಯರು ಇವರೆಲ್ಲರೂ ಹತ್ತುಸಾವಿರ ಪದಾತಿಸಮೂಹಗಳೊಂದಿಗೆ ರಥವ್ರಜಗಳೊಂದಿಗೆ, ಶ್ರೇಷ್ಠ ಆನೆಗಳೊಂದಿಗೆ ಹತರಾದರು.

08004049a ಸಧ್ವಜಾಃ ಸಾಯುಧಾಃ ಶೂರಾಃ ಸವರ್ಮಾಂಬರಭೂಷಣಾಃ|

08004049c ಕಾಲೇನ ಮಹತಾ ಯತ್ತಾಃ ಕುಲೇ ಯೇ ಚ ವಿವರ್ಧಿತಾಃ||

08004050a ತೇ ಹತಾಃ ಸಮರೇ ರಾಜನ್ ಪಾರ್ಥೇನಾಕ್ಲಿಷ್ಟಕರ್ಮಣಾ|

ರಾಜನ್! ಉತ್ತಮ ಕುಲದಲ್ಲಿ ಬೆಳೆದು ಪ್ರಯತ್ನಪಡುತ್ತಿದ್ದ ಕವಚ-ವಸ್ತ್ರ-ಭೂಷಣಗಳನ್ನು ಧರಿಸಿದ್ದ ಶೂರರು ಕಾಲದ ಮಹಾತ್ಮೆಯಿಂದಾಗಿ ಧ್ವಜ-ಆಯುಧಗಳೊಂದಿಗೆ ಅಕ್ಲಿಷ್ಟಕರ್ಮಿ ಪಾರ್ಥನಿಂದ ಸಮರದಲ್ಲಿ ಹತರಾದರು.

08004050c ಅನ್ಯೇ ತಥಾಮಿತಬಲಾಃ ಪರಸ್ಪರವಧೈಷಿಣಃ||

08004051a ಏತೇ ಚಾನ್ಯೇ ಚ ಬಹವೋ ರಾಜಾನಃ ಸಗಣಾ ರಣೇ|

08004051c ಹತಾಃ ಸಹಸ್ರಶೋ ರಾಜನ್ಯನ್ಮಾಂ ತ್ವಂ ಪರಿಪೃಚ್ಚಸಿ|

ಹಾಗೆಯೇ ಪರಸ್ಪರರನ್ನು ವಧಿಸಲು ಬಯಸುತ್ತಿದ್ದ ಇನ್ನೂ ಇತರ ಅಮಿತಬಲಶಾಲಿ ಅನೇಕ ರಾಜರುಗಳೂ ತಮ್ಮ ಸೇನೆಗಳೊಂದಿಗೆ ರಣದಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಹತರಾದರು. ರಾಜನ್! ಇದು ನೀನು ಕೇಳಿದ್ದಲ್ಲವೇ?

08004051e ಏವಮೇಷ ಕ್ಷಯೋ ವೃತ್ತಃ ಕರ್ಣಾರ್ಜುನಸಮಾಗಮೇ||

08004052a ಮಹೇಂದ್ರೇಣ ಯಥಾ ವೃತ್ರೋ ಯಥಾ ರಾಮೇಣ ರಾವಣಃ|

08004052c ಯಥಾ ಕೃಷ್ಣೇನ ನಿಹತೋ ಮುರೋ ರಣನಿಪಾತಿತಃ|

08004052e ಕಾರ್ತವೀರ್ಯಶ್ಚ ರಾಮೇಣ ಭಾರ್ಗವೇಣ ಹತೋ ಯಥಾ||

08004053a ಸಜ್ಞಾತಿಬಾಂದವಃ ಶೂರಃ ಸಮರೇ ಯುದ್ಧದುರ್ಮದಃ|

08004053c ರಣೇ ಕೃತ್ವಾ ಮಹಾಯುದ್ಧಂ ಘೋರಂ ತ್ರೈಲೋಕ್ಯವಿಶ್ರುತಂ||

08004054a ತಥಾರ್ಜುನೇನ ನಿಹತೋ ದ್ವೈರಥೇ ಯುದ್ಧದುರ್ಮದಃ|

08004054c ಸಾಮಾತ್ಯಬಾಂದವೋ ರಾಜನ್ಕರ್ಣಃ ಪ್ರಹರತಾಂ ವರಃ||

ಕರ್ಣಾರ್ಜುನರ ಸಮಾಗಮದಲ್ಲಿ ಈ ರೀತಿಯ ನಷ್ಟವುಂಟಾಯಿತು. ಆ ಪ್ರಹರಿಗಳಲ್ಲಿ ಶ್ರೇಷ್ಠ ಯುದ್ಧದುರ್ಮದ ಶೂರ ಕರ್ಣನು ಸಮರದ ರಣದಲ್ಲಿ ತ್ರೈಲೋಕ್ಯವಿಶ್ರುತವಾದ ಘೋರ ಮಹಾಯುದ್ಧವನ್ನು ಮಾಡಿ ಮಹೇಂದ್ರನೊಂದಿಗೆ ವೃತ್ರನು ಹೇಗೋ, ರಾಮನೊಂದಿಗೆ ರಾವಣನು ಹೇಗೋ, ಕೃಷ್ಣನಿಂದ ಮುರನು ರಣದಲ್ಲಿ ಕೆಳಗುರುಳಿಸಲ್ಪಟ್ಟು ಹೇಗೆ ಹತನಾದನೋ, ಕಾರ್ತವೀರ್ಯನು ಭಾರ್ಗವ ರಾಮನಿಂದ ಹೇಗೆ ಹತನಾದನೋ, ಹಾಗೆ ಅರ್ಜುನನೊಡನೆ ದ್ವೈರಥಯುದ್ಧಮಾಡಿ ಅಮಾತ್ಯ ಬಾಂಧವರೊಡನೆ ಹತನಾದನು.

08004055a ಜಯಾಶಾ ಧಾರ್ತರಾಷ್ಟ್ರಾಣಾಂ ವೈರಸ್ಯ ಚ ಮುಖಂ ಯತಃ|

08004055c ತೀರ್ಣಂ ತತ್ಪಾಂಡವೈ ರಾಜನ್ಯತ್ಪುರಾ ನಾವಬುಧ್ಯಸೇ||

ರಾಜನ್! ಧಾರ್ತರಾಷ್ಟ್ರರಿಗೆ ಯಾರಿಂದ ಜಯದ ಆಸೆಯಿತ್ತೋ, ಮತ್ತು ಆ ವೈರಕ್ಕೆ ಮುಖ್ಯ ಕಾರಣನು ಯಾರಾಗಿದ್ದನೋ ಅವನನ್ನು ಪಾಂಡವರು ದಾಟಿಬಿಟ್ಟರು! ಹೀಗಾಗುತ್ತದೆಯೆನ್ನುವುದನ್ನು ನೀನು ಮೊದಲು ಯೋಚಿಸಿರಲಿಲ್ಲ.

08004056a ಉಚ್ಯಮಾನೋ ಮಹಾರಾಜ ಬಂದುಭಿರ್ಹಿತಕಾಂಕ್ಷಿಭಿಃ|

08004056c ತದಿದಂ ಸಮನುಪ್ರಾಪ್ತಂ ವ್ಯಸನಂ ತ್ವಾಂ ಮಹಾತ್ಯಯಂ||

ಮಹಾರಾಜ! ಹಿತಾಕಾಂಕ್ಷಿಗಳು ಮತ್ತು ಬಂಧುಗಳು ಹೇಳುತ್ತಿದ್ದರೂ ನೀನು ಅವುಗಳಿಗೆ ಗಮನನೀಡದಿದ್ದುದಕ್ಕಾಗಿಯೇ ಈ ಮಹಾ ನಾಶದ ವ್ಯಸನವು ನಿನಗೆ ಪ್ರಾಪ್ತವಾಗಿದೆ.

08004057a ಪುತ್ರಾಣಾಂ ರಾಜ್ಯಕಾಮಾನಾಂ ತ್ವಯಾ ರಾಜನ್ ಹಿತೈಷಿಣಾ|

08004057c ಅಹಿತಾನೀವ ಚೀರ್ಣಾನಿ ತೇಷಾಂ ತೇ ಫಲಮಾಗತಂ||

ರಾಜನ್! ನಿನ್ನ ರಾಜ್ಯಕಾಮಿ ಪುತ್ರರ ಹಿತವನ್ನೇ ಬಯಸಿದ ನೀನು ಪಾಂಡವರಿಗೆ ಅನೇಕ ಅಹಿತ ಕಾರ್ಯಗಳನ್ನು ಮಾಡಿದುದರ ಈ ಫಲವು ನಿನಗೆ ದೊರಕಿರುವುದು!”

08004058 ಧೃತರಾಷ್ಟ್ರ ಉವಾಚ|

08004058a ಆಖ್ಯಾತಾ ಮಾಮಕಾಸ್ತಾತ ನಿಹತಾ ಯುಧಿ ಪಾಂಡವೈಃ|

08004058c ನಿಹತಾನ್ಪಾಂಡವೇಯಾನಾಂ ಮಾಮಕೈರ್ಬ್ರೂಹಿ ಸಂಜಯ||

ಧೃತರಾಷ್ಟ್ರನು ಹೇಳಿದನು: “ಅಯ್ಯಾ ಸಂಜಯ! ಯುದ್ಧದಲ್ಲಿ ಪಾಂಡವರಿಂದ ಹತರಾದ ನನ್ನವರ ಕುರಿತು ನೀನು ಹೇಳಿರುವೆ. ನನ್ನವರಿಂದ ಹತರಾದ ಪಾಂಡವರ ಕುರಿತು ಹೇಳು!”

08004059 ಸಂಜಯ ಉವಾಚ|

08004059a ಕುಂತಯೋ ಯುಧಿ ವಿಕ್ರಾಂತಾ ಮಹಾಸತ್ತ್ವಾ ಮಹಾಬಲಾಃ|

08004059c ಸಾನುಬಂದಾಃ ಸಹಾಮಾತ್ಯಾ ಭೀಷ್ಮೇಣ ಯುಧಿ ಪಾತಿತಾಃ[3]||

ಸಂಜಯನು ಹೇಳಿದನು: “ಯುದ್ಧದಲ್ಲಿ ವಿಕ್ರಾಂತ, ಮಹಾಸತ್ತ್ವಶಾಲಿ ಮಹಾಬಲ ಕುಂತಯರು ಬಂಧು-ಅಮಾತ್ಯರೊಂದಿಗೆ ರಣದಲ್ಲಿ ಭೀಷ್ಮನಿಂದ ಕೆಳಗುರುಳಿಸಲ್ಪಟ್ಟರು.

08004060a ಸಮಃ ಕಿರೀಟಿನಾ ಸಂಖ್ಯೇ ವೀರ್ಯೇಣ ಚ ಬಲೇನ ಚ|

08004060c ಸತ್ಯಜಿತ್ಸತ್ಯಸಂಧೇನ ದ್ರೋಣೇನ ನಿಹತೋ ರಣೇ[4]||

ಯುದ್ಧದ ವೀರ್ಯ-ಬಲಗಳಲ್ಲಿ ಕಿರೀಟಿಯ ಸಮನಾದ ಸತ್ಯಜಿತುವು ಸತ್ಯಸಂಧ ದ್ರೋಣನಿಂದ ರಣದಲ್ಲಿ ಹತನಾದನು.

08004061a ತಥಾ ವಿರಾಟದ್ರುಪದೌ ವೃದ್ಧೌ ಸಹಸುತೌ ನೃಪೌ|

08004061c ಪರಾಕ್ರಮಂತೌ ಮಿತ್ರಾರ್ಥೇ ದ್ರೋಣೇನ ನಿಹತೌ ರಣೇ||

ಹಾಗೆಯೇ ವೃದ್ಧ ನೃಪರಾಗಿದ್ದ ಪರಾಕ್ರಮಿ ವಿರಾಟ-ದ್ರುಪದರು ಮಕ್ಕಳೊಡನೆ ರಣದಲ್ಲಿ ದ್ರೋಣನಿಂದ ಹತರಾದರು.

08004062a ಯೋ ಬಾಲ ಏವ ಸಮರೇ ಸಮ್ಮಿತಃ ಸವ್ಯಸಾಚಿನಾ|

08004062c ಕೇಶವೇನ ಚ ದುರ್ಧರ್ಷೋ ಬಲದೇವೇನ ಚಾಭಿಭೂಃ||

08004063a ಸ ಏಷ ಕದನಂ ಕೃತ್ವಾ ಮಹದ್ರಣವಿಶಾರದಃ|

08004063c ಪರಿವಾರ್ಯ ಮಹಾಮಾತ್ರೈಃ ಷಡ್ಭಿಃ ಪರಮಕೈ ರಥೈಃ|

08004063e ಅಶಕ್ನುವದ್ಭಿರ್ಬೀಭತ್ಸುಮಭಿಮನ್ಯುರ್ನಿಪಾತಿತಃ||

ಬಾಲಕನಾಗಿದ್ದರೂ ಸಮರದಲ್ಲಿ ಸವ್ಯಸಾಚಿ, ಕೇಶವ ಮತ್ತು ಬಲದೇವರ ಸಮನೆನಿಸಿಕೊಂಡಿದ್ದ ದುರ್ಧರ್ಷ ರಣ ವಿಶಾರದ ಅಭಿಮನ್ಯುವು ಮಹಾ ಕದನವನ್ನೆಸಗಿ ಮಹಾಮಾತ್ರ ಪರಮ ಷಡ್ರಥರಿಂದ ಸುತ್ತುವರೆಯಲ್ಪಟ್ಟು ಕೆಳಗುರುಳಿದನು.

08004064a ತಂ ಕೃತಂ ವಿರಥಂ ವೀರಂ ಕ್ಷತ್ರಧರ್ಮೇ ವ್ಯವಸ್ಥಿತಂ|

08004064c ದೌಃಶಾಸನಿರ್ಮಹಾರಾಜ ಸೌಭದ್ರಂ ಹತವಾನ್ರಣೇ[5]||

ಮಹಾರಾಜ! ಕ್ಷತ್ರಧರ್ಮವ್ಯವಸ್ಥಿತ ಆ ವೀರ ಸೌಭದ್ರನನ್ನು ರಣದಲ್ಲಿ ವಿರಥನನ್ನಾಗಿ ಮಾಡಿ ದುಃಶಾಸನನ ಮಗನು ಸಂಹರಿಸಿದನು.

08004065a ಬೃಹಂತಸ್ತು ಮಹೇಷ್ವಾಸಃ ಕೃತಾಸ್ತ್ರೋ ಯುದ್ಧದುರ್ಮದಃ|

08004065c ದುಃಶಾಸನೇನ ವಿಕ್ರಮ್ಯ ಗಮಿತೋ ಯಮಸಾದನಂ||

ಕೃತಾಸ್ತ್ರ ಮಹೇಷ್ವಾಸ ಯುದ್ಧದುರ್ಮದ ಬೃಹಂತನು ದುಃಶಾಸನನ ವಿಕ್ರಮದಿಂದ ಯಮಸಾದನಕ್ಕೆ ಹೋದನು.

08004066a ಮಣಿಮಾನ್ದಂಡಧಾರಶ್ಚ ರಾಜಾನೌ ಯುದ್ಧದುರ್ಮದೌ|

08004066c ಪರಾಕ್ರಮಂತೌ ಮಿತ್ರಾರ್ಥೇ ದ್ರೋಣೇನ ವಿನಿಪಾತಿತೌ||

ಯುದ್ಧದುರ್ಮದ ಪರಾಕ್ರಮಿ ರಾಜ ಮಣಿಮಾನ್ ಮತ್ತು ದಂಡಧಾರರು ಮಿತ್ರನಿಗಾಗಿ ದ್ರೋಣನಿಂದ ಹತರಾದರು.

08004067a ಅಂಶುಮಾನ್ಭೋಜರಾಜಸ್ತು ಸಹಸೈನ್ಯೋ ಮಹಾರಥಃ|

08004067c ಭಾರದ್ವಾಜೇನ ವಿಕ್ರಮ್ಯ ಗಮಿತೋ ಯಮಸಾದನಂ[6]||

ಮಹಾರಥ ಭೋಜರಾಜ ಅಂಶುಮಾನನು ಸೇನೆಯೊಂದಿಗೆ ಭಾರದ್ವಾಜ ದ್ರೋಣನ ವಿಕ್ರಮದಿಂದ ಯಮಸಾದನಕ್ಕೆ ಹೋದನು.

08004068a ಚಿತ್ರಾಯುಧಶ್ಚಿತ್ರಯೋಧೀ ಕೃತ್ವಾ ತೌ ಕದನಂ ಮಹತ್|

08004068c ಚಿತ್ರಮಾರ್ಗೇಣ ವಿಕ್ರಮ್ಯ ಕರ್ಣೇನ ನಿಹತೌ ಯುಧಿ||

ಚಿತ್ರಾಯುಧ ಮತ್ತು ಚಿತ್ರಯೋಧಿಗಳು ಮಹಾ ಕದನವನ್ನೆಸಗಿ ಚಿತ್ರಮಾರ್ಗಗಳಿಂದ ಕರ್ಣನ ವಿಕ್ರಮದಿಂದಾಗಿ ಯುದ್ಧದಲ್ಲಿ ಹತರಾದರು.

08004069a ವೃಕೋದರಸಮೋ ಯುದ್ಧೇ ದೃಢಃ ಕೇಕಯಜೋ ಯುಧಿ|

08004069c ಕೇಕಯೇನೈವ ವಿಕ್ರಮ್ಯ ಭ್ರಾತ್ರಾ ಭ್ರಾತಾ ನಿಪಾತಿತಃ||

ಯುದ್ಧದಲ್ಲಿ ವೃಕೋದರನ ಸಮನಾಗಿದ್ದ ದೃಢ ಕೇಕಯವಂಶಜನು ಭ್ರಾತ ಕೇಕಯನ ವಿಕ್ರಮದಿಂದಲೇ ಕೆಳಗುರುಳಿಸಲ್ಪಟ್ಟನು.

08004070a ಜನಮೇಜಯೋ ಗದಾಯೋಧೀ ಪಾರ್ವತೀಯಃ ಪ್ರತಾಪವಾನ್|

08004070c ದುರ್ಮುಖೇನ ಮಹಾರಾಜ ತವ ಪುತ್ರೇಣ ಪಾತಿತಃ||

ಮಹಾರಾಜ! ಗದಾಯೋಧೀ, ಪ್ರತಾಪವಾನ್, ಪರ್ವತರಾಜ ಜನಮೇಜಯನನ್ನು ನಿನ್ನ ಮಗ ದುರ್ಮುಖನು ಕೆಳಗುರುಳಿಸಿದನು.

08004071a ರೋಚಮಾನೌ ನರವ್ಯಾಘ್ರೌ ರೋಚಮಾನೌ ಗ್ರಹಾವಿವ|

08004071c ದ್ರೋಣೇನ ಯುಗಪದ್ರಾಜನ್ದಿವಂ ಸಂಪ್ರೇಷಿತೌ ಶರೈಃ||

ರಾಜನ್! ಸೂರ್ಯಚಂದ್ರರಂತೆ ಮಿಂಚುತ್ತಿದ್ದ ನರವ್ಯಾಘ್ರ ಜೋಡಿ ರಾಜಕುಮಾರ ರೋಚಮಾನರಿಬ್ಬರನ್ನು ದ್ರೋಣನು ಶರಗಳನ್ನು ಪ್ರಯೋಗಿಸಿ ಸ್ವರ್ಗಕ್ಕೆ ಕಳುಹಿಸಿದನು.

08004072a ನೃಪಾಶ್ಚ ಪ್ರತಿಯುಧ್ಯಂತಃ ಪರಾಕ್ರಾಂತಾ ವಿಶಾಂ ಪತೇ|

08004072c ಕೃತ್ವಾ ನಸುಕರಂ ಕರ್ಮ ಗತಾ ವೈವಸ್ವತಕ್ಷಯಂ||

08004073a ಪುರುಜಿತ್ಕುಂತಿಭೋಜಶ್ಚ ಮಾತುಲಃ ಸವ್ಯಸಾಚಿನಃ|

08004073c ಸಂಗ್ರಾಮನಿರ್ಜಿತಾಽಲ್ಲೋಕಾನ್ಗಮಿತೋ ದ್ರೋಣಸಾಯಕೈಃ||

ವಿಶಾಂಪತೇ! ಸವ್ಯಸಾಚಿಯ ಸೋದರ ಮಾವಂದಿರಾದ ನೃಪ ಪುರುಜಿತ್ ಮತ್ತು ಕುಂತಿಭೋಜರು, ಪರಾಕ್ರಾಂತರಾಗಿ ಮತ್ತು ಎದುರಾಳಿಗಳಾಗಿ ಯುದ್ಧಮಾಡುತ್ತಾ, ಅಸಾಧ್ಯ ಕೃತ್ಯಗಳನ್ನೆಸಗಿ ಕೊನೆಗೆ ದ್ರೋಣನ ಸಾಯಕಗಳಿಗೆ ಸಿಲುಕಿ ವೈವಸ್ವತಕ್ಷಯಕ್ಕೆ ಹೋಗಿ ಪುಣ್ಯ ಲೋಕಗಳನ್ನು ಸೇರಿದರು.

08004074a ಅಭಿಭೂಃ ಕಾಶಿರಾಜಶ್ಚ ಕಾಶಿಕೈರ್ಬಹುಭಿರ್ವೃತಃ|

08004074c ವಸುದಾನಸ್ಯ ಪುತ್ರೇಣ ನ್ಯಾಸಿತೋ ದೇಹಮಾಹವೇ||

ಅನೇಕ ಕಾಶೀವಾಸಿಯೋಧರಿಂದ ಪರಿವೃತರಾಗಿದ್ದ ಅಭಿಭೂ ಮತ್ತು ಕಾಶಿರಾಜರು ವಸುದಾನನ ಪುತ್ರನಿಂದ ದೇಹಾವಸಾನಹೊಂದಿದರು.

08004075a ಅಮಿತೌಜಾ ಯುಧಾಮನ್ಯುರುತ್ತಮೌಜಾಶ್ಚ ವೀರ್ಯವಾನ್|

08004075c ನಿಹತ್ಯ ಶತಶಃ ಶೂರಾನ್ಪರೈರ್ವಿನಿಹತೌ ರಣೇ||

ವೀರ್ಯವಂತರಾದ ಅಮಿತೌಜಸ, ಯುಧಾಮನ್ಯು ಮತ್ತು ಉತ್ತಮೌಜಸರು ನೂರಾರು ಶೂರರನ್ನು ಸಂಹರಿಸಿ ಕೊನೆಗೆ ರಣದಲ್ಲಿ ಶತ್ರುಗಳಿಂದ ಹತರಾದರು.

08004076a ಕ್ಷತ್ರಧರ್ಮಾ ಚ ಪಾಂಚಾಲ್ಯಃ ಕ್ಷತ್ರವರ್ಮಾ ಚ ಮಾರಿಷ|

08004076c ದ್ರೋಣೇನ ಪರಮೇಷ್ವಾಸೌ ಗಮಿತೌ ಯಮಸಾದನಂ||

ಮಾರಿಷ! ಪಾಂಚಾಲ್ಯ ಮಹೇಷ್ವಾಸ ಕ್ಷತ್ರಧರ್ಮ ಮತ್ತು ಕ್ಷತ್ರವರ್ಮ ಇಬ್ಬರೂ ದ್ರೋಣನಿಂದ ಯಮಸಾದನಕ್ಕೆ ಕಳುಹಿಸಲ್ಪಟ್ಟರು.

08004077a ಶಿಖಂಡಿತನಯೋ ಯುದ್ಧೇ ಕ್ಷತ್ರದೇವೋ ಯುಧಾಂ ಪತಿಃ|

08004077c ಲಕ್ಷ್ಮಣೇನ ಹತೋ ರಾಜಂಸ್ತವ ಪೌತ್ರೇಣ ಭಾರತ||

ರಾಜನ್! ಭಾರತ! ಶಿಖಂಡಿಯ ಮಗ ಸೇನಾಪತಿ ಕ್ಷತ್ರದೇವನು ಯುದ್ಧದಲ್ಲಿ ನಿನ್ನ ಮೊಮ್ಮಗ ಲಕ್ಷ್ಮಣನಿಂದ ಹತನಾದನು.

08004078a ಸುಚಿತ್ರಶ್ಚಿತ್ರಧರ್ಮಾ ಚ ಪಿತಾಪುತ್ರೌ ಮಹಾರಥೌ|

08004078c ಪ್ರಚರಂತೌ ಮಹಾವೀರ್ಯೌ ದ್ರೋಣೇನ ನಿಹತೌ ರಣೇ||

ರಣದಲ್ಲಿ ಸಂಚರಿಸುತ್ತಿದ್ದ ಮಹಾರಥ ಮಹಾವೀರ್ಯ ತಂದೆ ಸುಚಿತ್ರ ಮತ್ತು ಮಗ ಚಿತ್ರಧರ್ಮರು ದ್ರೋಣನಿಂದ ಹತರಾದರು.

08004079a ವಾರ್ಧಕ್ಷೇಮಿರ್ಮಹಾರಾಜ ಕೃತ್ವಾ ಕದನಮಾಹವೇ|

08004079c ಬಾಹ್ಲಿಕೇನ ಮಹಾರಾಜ ಕೌರವೇಣ ನಿಪಾತಿತಃ||

ಮಹಾರಾಜ! ರಣದಲ್ಲಿ ಕದನವನ್ನಾಡಿ ವಾರ್ಧಕ್ಷೇಮಿಯು ಕೌರವ ಬಾಹ್ಲೀಕನಿಂದ ಕೆಳಗುರುಳಿಸಲ್ಪಟ್ಟನು.

08004080a ಧೃಷ್ಟಕೇತುರ್ಮಹಾರಾಜ ಚೇದೀನಾಂ ಪ್ರವರೋ ರಥಃ|

08004080c ಕೃತ್ವಾ ನಸುಕರಂ ಕರ್ಮ ಗತೋ ವೈವಸ್ವತಕ್ಷಯಂ||

ಮಹಾರಾಜ! ಚೇದಿಗಳ ರಥಪ್ರವರ ಧೃಷ್ಟಕೇತುವು ಬಹುಕಷ್ಟಕರ ಕರ್ಮಗಳನ್ನೆಸಗಿ ವೈವಸ್ವತಕ್ಷಯಕ್ಕೆ ಹೋದನು.

08004081a ತಥಾ ಸತ್ಯಧೃತಿಸ್ತಾತ ಕೃತ್ವಾ ಕದನಮಾಹವೇ|

08004081c ಪಾಂಡವಾರ್ಥೇ ಪರಾಕ್ರಾಂತೋ ಗಮಿತೋ ಯಮಸಾದನಂ||

ಅಯ್ಯಾ! ಹಾಗೆಯೇ ಪರಾಕ್ರಾಂತ ಸತ್ಯಧೃತಿಯು ಪಾಂಡವರಿಗೋಸ್ಕರ ರಣದಲ್ಲಿ ಯುದ್ಧಮಾಡಿ ಯಮಸಾದನಕ್ಕೆ ಹೋದನು.

08004082a ಪುತ್ರಸ್ತು ಶಿಶುಪಾಲಸ್ಯ ಸುಕೇತುಃ ಪೃಥಿವೀಪತೇ|

08004082c ನಿಹತ್ಯ ಶಾತ್ರವಾನ್ಸಂಖ್ಯೇ ದ್ರೋಣೇನ ನಿಹತೋ ಯುಧಿ||

ಪೃಥಿವೀಪತೇ! ಶಿಶುಪಾಲನ ಮಗ ಸುಕೇತುವು ರಣದಲ್ಲಿ ಶತ್ರುಗಳನ್ನು ಸಂಹರಿಸಿ ಯುದ್ಧದಲ್ಲಿ ದ್ರೋಣನಿಂದ ಹತನಾದನು.

08004083a ತಥಾ ಸತ್ಯಧೃತಿರ್ವೀರೋ ಮದಿರಾಶ್ವಶ್ಚ ವೀರ್ಯವಾನ್|

08004083c ಸೂರ್ಯದತ್ತಶ್ಚ ವಿಕ್ರಾಂತೋ ನಿಹತೋ ದ್ರೋಣಸಾಯಕೈಃ||

ಹಾಗೆಯೇ ವೀರ ಸತ್ಯಧೃತಿ, ವೀರ್ಯವಾನ್ ಮದಿರಾಶ್ವ, ಮತ್ತು ವಿಕ್ರಾಂತ ಸೂರ್ಯದತ್ತರು ದ್ರೋಣನ ಸಾಯಕಗಳಿಂದ ಹತರಾದರು.

08004084a ಶ್ರೇಣಿಮಾಂಶ್ಚ ಮಹಾರಾಜ ಯುಧ್ಯಮಾನಃ ಪರಾಕ್ರಮೀ|

08004084c ಕೃತ್ವಾ ನಸುಕರಂ ಕರ್ಮ ಗತೋ ವೈವಸ್ವತಕ್ಷಯಂ||

ಮಹಾರಾಜ! ಯುದ್ಧಮಾಡುತ್ತಿದ್ದ ಪರಾಕ್ರಮೀ ಶ್ರೇಣಿಮಾನನೂ ಕೂಡ ಅಸಾಧ್ಯ ಕೃತ್ಯಗಳನ್ನೆಸಗಿ ವೈವಸ್ವತಕ್ಷಯಕ್ಕೆ ಹೋದನು.

08004085a ತಥೈವ ಯುಧಿ ವಿಕ್ರಾಂತೋ ಮಾಗಧಃ ಪರವೀರಹಾ|

08004085c ಭೀಷ್ಮೇಣ ನಿಹತೋ ರಾಜನ್ಯುಧ್ಯಮಾನಃ ಪರಾಕ್ರಮೀ[7]||

ರಾಜನ್! ಹಾಗೆಯೇ ರಣದಲ್ಲಿ ಯುದ್ಧಮಾಡುತ್ತಿದ್ದ ಪರಾಕ್ರಮೀ, ವಿಕ್ರಾಂತ, ಪರವೀರಹ ಮಾಗಧನು ಭೀಷ್ಮನಿಂದ ಹತನಾದನು.

08004086a ವಸುದಾನಶ್ಚ ಕದನಂ ಕುರ್ವಾಣೋಽತೀವ ಸಂಯುಗೇ|

08004086c ಭಾರದ್ವಾಜೇನ ವಿಕ್ರಮ್ಯ ಗಮಿತೋ ಯಮಸಾದನಂ[8]||

ರಣದಲ್ಲಿ ಅತೀವ ಕದನವಾಡುತ್ತಿದ್ದ ವಸುದಾನನು ಭಾರದ್ವಾಜನ ವಿಕ್ರಮದಿಂದಾಗಿ ಯಮಸಾದನಕ್ಕೆ ಹೋದನು.

08004087a ಏತೇ ಚಾನ್ಯೇ ಚ ಬಹವಃ ಪಾಂಡವಾನಾಂ ಮಹಾರಥಾಃ|

08004087c ಹತಾ ದ್ರೋಣೇನ ವಿಕ್ರಮ್ಯ ಯನ್ಮಾಂ ತ್ವಂ ಪರಿಪೃಚ್ಚಸಿ[9]||

ನನ್ನನ್ನು ನೀನು ಕೇಳಿದಂತೆ, ಇವರು ಮತ್ತು ಇನ್ನೂ ಅನೇಕ ಪಾಂಡವರ ಮಹಾರಥರು ದ್ರೋಣನ ವಿಕ್ರಮದಿಂದಾಗಿ ಹತರಾದರು.”

08004088 ಧೃತರಾಷ್ಟ್ರ ಉವಾಚ|

[10]08004088a ಹತಪ್ರವೀರೇ ಸೈನ್ಯೇಽಸ್ಮಿನ್ಮಾಮಕೇ ವದತಾಂ ವರ|

08004088c ಅಹತಾಂ ಶಂಸ ಮೇ ಸೂತ ಯೇಽತ್ರ ಜೀವಂತಿ ಕೇ ಚನ||

ಧೃತರಾಷ್ಟ್ರನು ಹೇಳಿದನು: “ಮಾತನಾಡುವವರಲ್ಲಿ ಶ್ರೇಷ್ಠನೇ! ಸೂತ! ಇವರೆಲ್ಲರೂ ನನ್ನ ಸೇನೆಯಲ್ಲಿ ಹತರಾದ ಪ್ರಮುಖರು. ಅಲ್ಲಿ ಇನ್ನೂ ಜೀವಂತವಾಗಿರುವ ಕೆಲವರು ಯಾರು ಎನ್ನುವುದನ್ನು ಹೇಳು.

08004089a ಏತೇಷು ನಿಹತೇಷ್ವದ್ಯ ಯೇ ತ್ವಯಾ ಪರಿಕೀರ್ತಿತಾಃ|

08004089c ಅಹತಾನ್ಮನ್ಯಸೇ ಯಾಂಸ್ತ್ವಂ ತೇಽಪಿ ಸ್ವರ್ಗಜಿತೋ ಮತಾಃ||

ನೀನು ಹೇಳಿದ ಇವರೇ ಹತರಾಗಿ ಹೋದರೆಂದರೆ ಇನ್ನೂ ಹತರಾಗದೇ ಉಳಿದಿರುವವರು ಕೂಡ ಸ್ವರ್ಗವನ್ನು ಗೆದ್ದರೆಂದೇ ನನಗನ್ನಿಸುತ್ತದೆ!”

08004090 ಸಂಜಯ ಉವಾಚ|

08004090a ಯಸ್ಮಿನ್ಮಹಾಸ್ತ್ರಾಣಿ ಸಮರ್ಪಿತಾನಿ

         ಚಿತ್ರಾಣಿ ಶುಭ್ರಾಣಿ ಚತುರ್ವಿಧಾನಿ|

08004090c ದಿವ್ಯಾನಿ ರಾಜನ್ನಿಹಿತಾನಿ ಚೈವ

         ದ್ರೋಣೇನ ವೀರದ್ವಿಜಸತ್ತಮೇನ||

08004091a ಮಹಾರಥಃ ಕೃತಿಮಾನ್ ಕ್ಷಿಪ್ರಹಸ್ತೋ

         ದೃಢಾಯುಧೋ ದೃಢಮುಷ್ಟಿರ್ದೃಢೇಷುಃ|

08004091c ಸ ವೀರ್ಯವಾನ್ದ್ರೋಣಪುತ್ರಸ್ತರಸ್ವೀ

         ವ್ಯವಸ್ಥಿತೋ ಯೋದ್ಧುಕಾಮಸ್ತ್ವದರ್ಥೇ||

ರಾಜನ್! ವೀರ ದ್ವಿಜಸತ್ತಮ ದ್ರೋಣನಿಂದ ಚತುರ್ವಿಧದ ವಿಚಿತ್ರ ಶುಭ್ರ ಮತ್ತು ದಿವ್ಯ ಮಹಾಸ್ತ್ರಗಳನ್ನು ಕಲಿತಿರುವ, ಮಾಡಿತೋರಿಸುವ, ಮಹಾರಥ ಕ್ಷಿಪ್ರಹಸ್ತ ದೃಢಾಯುಧ ದೃಢಮುಷ್ಟಿ ದೃಢೇಷು ವೀರ್ಯವಾನ್ ತರಸ್ವೀ ದ್ರೋಣಪುತ್ರನು ನಿನಗೋಸ್ಕರ ಯುದ್ಧಮಾಡಲು ಬಯಸಿ ಯುದ್ಧಸನ್ನದ್ಧನಾಗಿದ್ದಾನೆ.

08004092a ಆನರ್ತವಾಸೀ ಹೃದಿಕಾತ್ಮಜೋಽಸೌ

         ಮಹಾರಥಃ ಸಾತ್ವತಾನಾಂ ವರಿಷ್ಠಃ|

08004092c ಸ್ವಯಂ ಭೋಜಃ ಕೃತವರ್ಮಾ ಕೃತಾಸ್ತ್ರೋ

         ವ್ಯವಸ್ಥಿತೋ ಯೋದ್ಧುಕಾಮಸ್ತ್ವದರ್ಥೇ||

ಸಾತ್ವತರಲ್ಲಿಯೇ ಶ್ರೇಷ್ಠ ಮಹಾರಥ ಆನರ್ತವಾಸೀ ಹೃದಿಕನ ಮಗ ಭೋಜರಾಜ ಕೃತಾಸ್ತ್ರ ಕೃತವರ್ಮನು ಸ್ವಯಂ ನಿನಗೋಸ್ಕರ ಯುದ್ಧಮಾಡಲು ಇಚ್ಛಿಸಿ ವ್ಯವಸ್ಥಿತನಾಗಿದ್ದಾನೆ.

08004093a ಶಾರದ್ವತೋ ಗೌತಮಶ್ಚಾಪಿ ರಾಜನ್

         ಮಹಾಬಲೋ ಬಹುಚಿತ್ರಾಸ್ತ್ರಯೋಧೀ|

08004093c ಧನುಶ್ಚಿತ್ರಂ ಸುಮಹದ್ಭಾರಸಾಹಂ

         ವ್ಯವಸ್ಥಿತೋ ಯೋತ್ಸ್ಯಮಾನಃ ಪ್ರಗೃಹ್ಯ||

ರಾಜನ್! ಬಹುಚಿತ್ರಾಸ್ತ್ರಯೋಧೀ ಮಹಾಬಲಶಾಲೀ ಶಾರದ್ವತ ಗೌತಮನೂ ಕೂಡ ಮಹಾಭಾರವನ್ನೂ ಹೊರಬಲ್ಲ ವಿಚಿತ್ರ ಧನುಸ್ಸನ್ನು ಹಿಡಿದು ಯುದ್ಧಮಾಡಲು ಸಿದ್ಧನಾಗಿರುವನು.

08004094a ಆರ್ತಾಯನಿಃ ಸಮರೇ ದುಷ್ಪ್ರಕಂಪ್ಯಃ

         ಸೇನಾಗ್ರಣೀಃ ಪ್ರಥಮಸ್ತಾವಕಾನಾಂ|

08004094c ಸ್ವಸ್ರೇಯಾಂಸ್ತಾನ್ಪಾಂಡವೇಯಾನ್ವಿಸೃಜ್ಯ

         ಸತ್ಯಾಂ ವಾಚಂ ತಾಂ ಚಿಕೀರ್ಷುಸ್ತರಸ್ವೀ||

08004095a ತೇಜೋವಧಂ ಸೂತಪುತ್ರಸ್ಯ ಸಂಖ್ಯೇ

         ಪ್ರತಿಶ್ರುತ್ವಾಜಾತಶತ್ರೋಃ ಪುರಸ್ತಾತ್|

08004095c ದುರಾಧರ್ಷಃ ಶಕ್ರಸಮಾನವೀರ್ಯಃ

         ಶಲ್ಯಃ ಸ್ಥಿತೋ ಯೋದ್ಧುಕಾಮಸ್ತ್ವದರ್ಥೇ||

ಯುದ್ಧದಲ್ಲಿ ಅಲುಗಾಡಿಸಲೂ ಅಸಾಧ್ಯನಾದ, ನಿನ್ನ ಸೇನಾಪತಿಗಳಲ್ಲಿಯೇ ಅಗ್ರಗಣ್ಯನಾದ, ವೇಗಶಾಲಿಯಾದ, ತನ್ನ ಮಾತನ್ನು ಸತ್ಯವನ್ನಾಗಿಸಲು ಯುದ್ಧದಲ್ಲಿ ಕರ್ಣನ ತೇಜೋವಧೆಯನ್ನು ಮಾಡುತ್ತೇನೆಂದು ಯುಧಿಷ್ಠಿರನಿಗೆ ಭರವಸೆಯನ್ನಿತ್ತು ತಂಗಿಯ ಮಕ್ಕಳಾದ ಪಾಂಡವರನ್ನು ಬಿಟ್ಟು ನಿನ್ನ ಕಡೆಗೆ ಆಗಮಿಸಿದ, ಇಂದ್ರನ ಸಮಾನ ಪರಾಕ್ರಮವುಳ್ಳ ದುರಾಧರ್ಷ, ಋತಾಯನಪುತ್ರ ಶಲ್ಯನು ನಿನ್ನ ಸಲುವಾಗಿ ಯುದ್ಧಮಾಡುವ ಇಚ್ಛೆಯಿಂದ ಸನ್ನದ್ಧನಾಗಿ ನಿಂತಿದ್ದಾನೆ.

08004096a ಆಜಾನೇಯೈಃ ಸೈಂಧವೈಃ ಪಾರ್ವತೀಯೈರ್

         ನದೀಜಕಾಂಬೋಜವನಾಯುಬಾಹ್ಲಿಕೈಃ|

08004096c ಗಾಂದಾರರಾಜಃ ಸ್ವಬಲೇನ ಯುಕ್ತೋ

         ವ್ಯವಸ್ಥಿತೋ ಯೋದ್ಧುಕಾಮಸ್ತ್ವದರ್ಥೇ||

ನದೀಜ-ಕಾಂಬೋಜ, ವನಾಯುಜ ಮತ್ತು ಬಾಹ್ಲಿಕಗಳೇ ಮೊದಲಾದ ಉತ್ತಮ ಜಾತಿಯ ಸಿಂಧೂದೇಶದ ಮತ್ತು ಪರ್ವತ ಪ್ರದೇಶದ ಕುದುರೆಗಳಿಂದಲೂ ಮತ್ತು ತನ್ನ ಸೇನೆಗಳಿಂದಲೂ ಕೂಡಿದ ಗಾಂಧಾರರಾಜ ಶಕುನಿಯು ನಿನ್ನ ಸಲುವಾಗಿ ಯುದ್ಧಮಾಡುವ ಇಚ್ಛೆಯಿಂದ ಸನ್ನದ್ಧನಾಗಿ ನಿಂತಿದ್ದಾನೆ.

08004097a ತಥಾ ಸುತಸ್ತೇ ಜ್ವಲನಾರ್ಕವರ್ಣಂ

         ರಥಂ ಸಮಾಸ್ಥಾಯ ಕುರುಪ್ರವೀರ|

08004097c ವ್ಯವಸ್ಥಿತಃ ಕುರುಮಿತ್ರೋ ನರೇಂದ್ರ

         ವ್ಯಭ್ರೇ ಸೂರ್ಯೋ ಭ್ರಾಜಮಾನೋ ಯಥಾ ವೈ||

ನರೇಂದ್ರ! ಕುರುಕುಲಪ್ರವೀರನಾದ ನಿನ್ನ ಮಗ ಕುರುಮಿತ್ರನು ಅಗ್ನಿ ಮತ್ತು ಸೂರ್ಯರ ಕಾಂತಿಗೆ ಸಮಾನ ಕಾಂತಿಯುಳ್ಳ ರಥದಲ್ಲಿ ಕುಳಿತು ಮೋಡವಿಲ್ಲದ ಆಕಾಶದಲ್ಲಿ ಸೂರ್ಯನು ಪ್ರಕಾಶಿಸುವಂತೆ ಪ್ರಕಾಶಿಸುತ್ತಾ ಸನ್ನದ್ಧನಾಗಿದ್ದಾನೆ.

08004098a ದುರ್ಯೋಧನೋ ನಾಗಕುಲಸ್ಯ ಮಧ್ಯೇ

         ಮಹಾವೀರ್ಯಃ ಸಹ ಸೈನ್ಯಪ್ರವೀರೈಃ|

08004098c ರಥೇನ ಜಾಂಬೂನದಭೂಷಣೇನ

         ವ್ಯವಸ್ಥಿತಃ ಸಮರೇ ಯೋದ್ಧುಕಾಮಃ||

ಆನೆಗಳ ಸೈನ್ಯದ ಮಧ್ಯದಲ್ಲಿ ತನ್ನ ಸುವರ್ಣಭೂಷಿತ ರಥದಲ್ಲಿ ಕುಳಿತು ನಿನ್ನ ಮಗ ಮಹಾವೀರ್ಯ ದುರ್ಯೋಧನನು ತನ್ನ ಮುಖ್ಯ ಸೇನೆಗಳೊಂದಿಗೆ ಯುದ್ಧಮಾಡಲು ಇಚ್ಛಿಸಿ ರಣದಲ್ಲಿ ಸನ್ನದ್ಧನಾಗಿ ನಿಂತಿದ್ದಾನೆ.

08004099a ಸ ರಾಜಮಧ್ಯೇ ಪುರುಷಪ್ರವೀರೋ

         ರರಾಜ ಜಾಂಬೂನದಚಿತ್ರವರ್ಮಾ|

08004099c ಪದ್ಮಪ್ರಭೋ ವಃನಿರಿವಾಲ್ಪಧೂಮೋ

         ಮೇಘಾಂತರೇ ಸೂರ್ಯ ಇವ ಪ್ರಕಾಶಃ||

ಕಮಲವರ್ಣ ಪುರುಷಶ್ರೇಷ್ಠ ದುರ್ಯೋಧನನು ಸುವರ್ಣಮಯ ವಿಚಿತ್ರಕವಚವನ್ನು ಧರಿಸಿ, ಸ್ವಲ್ಪವೇ ಹೊಗೆಯಿಂದ ಕೂಡಿರುವ ಯಜ್ಞೇಶ್ವರನಂತೆಯೂ ಮೋಡಗಳ ಮಧ್ಯದಲ್ಲಿರುವ ಸೂರ್ಯನಂತೆಯೂ ರಾಜರ ಮಧ್ಯದಲ್ಲಿ ಪ್ರಕಾಶಿಸುತ್ತಿರುವನು.

08004100a ತಥಾ ಸುಷೇಣೋಽಪ್ಯಸಿಚರ್ಮಪಾಣಿಸ್

         ತವಾತ್ಮಜಃ ಸತ್ಯಸೇನಶ್ಚ ವೀರಃ|

08004100c ವ್ಯವಸ್ಥಿತೌ ಚಿತ್ರಸೇನೇನ ಸಾರ್ಧಂ

         ಹೃಷ್ಟಾತ್ಮಾನೌ ಸಮರೇ ಯೋದ್ಧುಕಾಮೌ||

ಹಾಗೆಯೇ ಕತ್ತಿ-ಗುರಾಣಿಗಳನ್ನು ಕೈಯಲ್ಲಿ ಹಿಡಿದು ಸುಷೇಣನೂ, ನಿನ್ನ ಮಗ ವೀರ ಸತ್ಯಸೇನನೂ ಹೃಷ್ಟಾತ್ಮರಾಗಿ ಸಮರದಲ್ಲಿ ಯುದ್ಧಮಾಡುವ ಇಚ್ಛೆಯಿಂದ ಚಿತ್ರಸೇನನೊಡನೆ ನಿಂತಿದ್ದಾರೆ.

08004101a ಹ್ರೀನಿಷೇಧಾ ಭರತಾ ರಾಜಪುತ್ರಾಶ್

         ಚಿತ್ರಾಯುಧಃ ಶ್ರುತಕರ್ಮಾ ಜಯಶ್ಚ|

08004101c ಶಲಶ್ಚ ಸತ್ಯವ್ರತದುಃಶಲೌ ಚ

         ವ್ಯವಸ್ಥಿತಾ ಬಲಿನೋ ಯೋದ್ಧುಕಾಮಾಃ||

ಲಜ್ಜಾವಿನಯಶೀಲ ಬಲಶಾಲೀ ಭಾರತ ರಾಜಪುತ್ರ ಚಿತ್ರಾಯುಧ, ಶ್ರುತಕರ್ಮ, ಜಯ, ಶಲ, ಸತ್ಯವ್ರತ ಮತ್ತು ದುಃಶಲರು ಯುದ್ಧಮಾಡಲು ಬಯಸಿ ನಿಂತಿರುವರು.

08004102a ಕೈತವ್ಯಾನಾಂ ಅಧಿಪಃ ಶೂರಮಾನೀ

         ರಣೇ ರಣೇ ಶತ್ರುಹಾ ರಾಜಪುತ್ರಃ|

08004102c ಪತ್ರೀ ಹಯೀ ನಾಗರಥಪ್ರಯಾಯೀ

         ವ್ಯವಸ್ಥಿತೋ ಯೋದ್ಧುಕಾಮಸ್ತ್ವದರ್ಥೇ||

ಜೂಜುಗಾರರಿಗೆ ಅಧಿಪತಿಯೆನಿಸಿಕೊಂಡಿರುವ, ಶೂರಮಾನೀ, ಪ್ರತಿಯೊಂದು ಯುದ್ಧದಲ್ಲಿಯೂ ಶತ್ರುಗಳನ್ನು ಸಂಹರಿಸುತ್ತಾ ಬಂದಿರುವ, ರಥ-ಗಜಾಶ್ವ-ಪದಾತಿಗಳಿಂದ ಕೂಡಿರುವ ರಾಜಪುತ್ರ ಉಲೂಕನು ನಿನ್ನ ಸಲುವಾಗಿ ಯುದ್ಧಮಾಡಲು ಇಚ್ಛಿಸಿ ಸನ್ನದ್ಧನಾಗಿದ್ದಾನೆ.

08004103a ವೀರಃ ಶ್ರುತಾಯುಶ್ಚ ಶ್ರುತಾಯುಧಶ್ಚ

         ಚಿತ್ರಾಂಗದಶ್ಚಿತ್ರವರ್ಮಾ ಸ ವೀರಃ|

08004103c ವ್ಯವಸ್ಥಿತಾ ಯೇ ತು ಸೈನ್ಯೇ ನರಾಗ್ರ್ಯಾಹ್

         ಪ್ರಹಾರಿಣೋ ಮಾನಿನಃ ಸತ್ಯಸಂಧಾಃ||

ಸತ್ಯಸಂಧ ಪ್ರಹಾರಿ ಮಾನಿನಿ ನರಾಗ್ರ ವೀರ ಶ್ರುತಾಯು, ಶ್ರುತಾಯುಧ, ಚಿತ್ರಾಂಗದ, ಮತ್ತು ವೀರ ಚಿತ್ರವರ್ಮರು ಸೇನೆಯಲ್ಲಿ ಸನ್ನದ್ಧರಾಗಿ ನಿಂತಿದ್ದಾರೆ.

08004104a ಕರ್ಣಾತ್ಮಜಃ ಸತ್ಯಸೇನೋ ಮಹಾತ್ಮಾ

         ವ್ಯವಸ್ಥಿತಃ ಸಮರೇ ಯೋದ್ಧುಕಾಮಃ|

08004104c ಅಥಾಪರೌ ಕರ್ಣಸುತೌ ವರಾರ್ಹೌ

         ವ್ಯವಸ್ಥಿತೌ ಲಘುಹಸ್ತೌ ನರೇಂದ್ರ|

08004104e ಬಲಂ ಮಹದ್ದುರ್ಭಿದಮಲ್ಪಧೈರ್ಯೈಃ

         ಸಮಾಶ್ರಿತೌ ಯೋತ್ಸ್ಯಮಾನೌ ತ್ವದರ್ಥೇ||

ಸತ್ಯಸಂಧ ಮಹಾತ್ಮ ಕರ್ಣನ ಮಗನು ನಿನ್ನ ಸಲುವಾಗಿ ಯುದ್ಧಮಾಡುವ ಇಚ್ಛೆಯಿಂದ ರಣಾಂಗಣದಲ್ಲಿ ವ್ಯವಸ್ಥಿತನಾಗಿದ್ದಾನೆ. ಹಾಗೆಯೇ ವರಾರ್ಹ ಲಘುಹಸ್ತ ಅಲ್ಪಧೈರ್ಯವಿರುವವರಿಂದ ಗೆಲ್ಲಲಸಾಧ್ಯ ಕರ್ಣನ ಇನ್ನಿಬ್ಬರು ಮಕ್ಕಳೂ ನಿನಗಾಗಿ ಯುದ್ಧಮಾಡಲು ನಿಂತಿರುವರು.

08004105a ಏತೈಶ್ಚ ಮುಖ್ಯೈರಪರೈಶ್ಚ ರಾಜನ್

         ಯೋಧಪ್ರವೀರೈರಮಿತಪ್ರಭಾವೈಃ|

08004105c ವ್ಯವಸ್ಥಿತೋ ನಾಗಕುಲಸ್ಯ ಮಧ್ಯೇ

         ಯಥಾ ಮಹೇಂದ್ರಃ ಕುರುರಾಜೋ ಜಯಾಯ||

ರಾಜನ್! ಇವರೇ ಮೊದಲಾದ ಪ್ರಮುಖವೀರರಿಂದಲೂ ಮತ್ತು ಅಮಿತ ಪ್ರಭಾವಶಾಲೀ ಯೋಧರಿಂದ ಕೂಡಿಕೊಂಡು ಆನೆಗಳ ಸೇನೆಗಳ ಮಧ್ಯಭಾಗದಲ್ಲಿ ಮಹೇಂದ್ರನಂತೆ ಕುರುರಾಜ ದುರ್ಯೋಧನನು ಜಯವನ್ನು ಬಯಸಿ ವ್ಯವಸ್ಥಿತನಾಗಿದ್ದಾನೆ.”

08004106 ಧೃತರಾಷ್ಟ್ರ ಉವಾಚ|

08004106a ಆಖ್ಯಾತಾ ಜೀವಮಾನಾ ಯೇ ಪರೇಭ್ಯೋಽನ್ಯೇ ಯಥಾತಥಂ|

08004106c ಇತೀದಮಭಿಗಚ್ಚಾಮಿ ವ್ಯಕ್ತಮರ್ಥಾಭಿಪತ್ತಿತಃ||

ಧೃತರಾಷ್ಟ್ರನು ಹೇಳಿದನು: “ಜೀವಂತವಾಗಿರುವವರ ಕುರಿತು ಹೇಳಿರುವೆ. ಇವರನ್ನು ಬಿಟ್ಟು ಅನ್ಯರು ಅಸುನೀಗಿರುವವರೆಂದು ಸ್ಪಷ್ಟವಾಗಿದೆ. ಇದೂವರೆಗಿನ ಆಗುಹೋಗುಗಳಿಂದಲೇ ಮುಂದೇನಾಗಬಹುದೆಂದು ವ್ಯಕ್ತವಾಗಿ, ಅದನ್ನು ನಾನು ಮನಗಂಡಿದ್ದೇನೆ.””

08004107 ವೈಶಂಪಾಯನ ಉವಾಚ|

08004107a ಏವಂ ಬ್ರುವನ್ನೇವ ತದಾ ಧೃತರಾಷ್ಟ್ರೋಽಂಬಿಕಾಸುತಃ|

08004107c ಹತಪ್ರವೀರಂ ವಿಧ್ವಸ್ತಂ ಕಿಂಚಿಚ್ಚೇಷಂ ಸ್ವಕಂ ಬಲಂ|

08004107e ಶ್ರುತ್ವಾ ವ್ಯಾಮೋಹಮಗಮಚ್ಚೋಕವ್ಯಾಕುಲಿತೇಂದ್ರಿಯಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಅಂಬಿಕಾಸುತ ಧೃತರಾಷ್ಟ್ರನು ತನ್ನ ಸೇನೆಯಲ್ಲಿ ಪ್ರಮುಖರು ಹತರಾಗಿ ಕೆಲವರು ಮಾತ್ರ ಉಳಿದಿರುವುದನ್ನು ಕೇಳಿ ವ್ಯಾಕುಲಗೊಂಡ ಇಂದ್ರಿಯಗಳುಳ್ಳವನಾಗಿ ಮೂರ್ಛೆಹೋದನು.

08004108a ಮುಹ್ಯಮಾನೋಽಬ್ರವೀಚ್ಚಾಪಿ ಮುಹೂರ್ತಂ ತಿಷ್ಠ ಸಂಜಯ|

08004108c ವ್ಯಾಕುಲಂ ಮೇ ಮನಸ್ತಾತ ಶ್ರುತ್ವಾ ಸುಮಹದಪ್ರಿಯಂ|

08004108e ನಷ್ಟಚಿತ್ತಸ್ತತಃ ಸೋಽಥ ಬಭೂವ ಜಗತೀಪತಿಃ||

ಎಚ್ಚರತಪ್ಪುವಾಗಲೇ ಆ ಜಗತೀಪತಿಯು “ಸಂಜಯ! ಸ್ವಲ್ಪಕಾಲ ಇಲ್ಲಿಯೇ ಇರು! ಮಹಾ ಅಪ್ರಿಯವಾಗಿರುವುದನ್ನು ಕೇಳಿ ನನ್ನ ಮನಸ್ಸು ವ್ಯಾಕುಲಗೊಂಡಿದೆ!” ಎಂದು ಹೇಳಿ ಕೂಡಲೇ ಮೂರ್ಛಿತನಾದನು.”  

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಜಯವಾಕ್ಯೇ ಚತುರ್ಥೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಜಯವಾಕ್ಯ ಎನ್ನುವ ನಾಲ್ಕನೇ ಅಧ್ಯಾಯವು.

[1] ಅರ್ಜುನನು ಏಳು ಅಕ್ಷೋಹಿಣೀ ಸೇನೆಗಳನ್ನು ಕೊಂದು ಜಯದ್ರಥನನ್ನು ಸಂಹರಿಸಿದನೆಂದು ಜಯದ್ರಥವಧಪರ್ವದಲ್ಲಿ ಹೇಳಲಾಗಿದೆ.

[2] ಉಭೌ ಕಲಿಂಗವೃಷಕೌ ಭ್ರಾತರೌ ಯುದ್ಧದುರ್ಮದೌ| ಕೃತ್ವಾ ಚಾಸುಕರಂ ಕರ್ಮ ಗತೌ ವೈವಸ್ವತಕ್ಷಯಮ್|| (ಗೋರಖಪುರ ಸಂಪುಟ).

[3] ನಾರಾಯಣಾ ಬಲಭದ್ರಾಃ ಶೂರಾಶ್ಚ ಶತಶೋಽಪರೇ| ಅನುರಕ್ತಾಶ್ಚ ವೀರೇಣ ಭೀಷ್ಮೇಣ ಯುಧಿ ಪಾತಿತಾಃ| (ಗೋಸಂ)|

[4] ಪಾಂಚಾಲಾನಾಂ ಮಹೇಷ್ವಾಸಾಃ ಸರ್ವೇ ಯುದ್ಧವಿಶಾರದಾಃ| ದ್ರೋಣೇನ ಸಹ ಸಂಗಮ್ಯ ಗತಾ ವೈವಸ್ವತಕ್ಷಯಮ್|| (ಗೋಸಂ).

[5] ನಾರಾಯಣಾ ಬಲಭದ್ರಾಃ ಶೂರಾಶ್ಚ ಶತಶೋಽಪರೇ| ಅನುರಕ್ತಾಶ್ಚ ವೀರೇಣ ಭೀಷ್ಮೇಣ ಯುಧಿ ಪಾತಿತಾಃ| (ಗೋಸಂ)|

[6] ಸಾಮುದ್ರಶ್ಚಿತ್ರಸೇನಶ್ಚ ಸಹ ಪುತ್ರೇಣ ಭಾರತ| ಸಮುದ್ರಸೇನೇನ ಬಾಲಾದ್ ಗಮಿತೋ ಯಮಸಾದನಮ್|| ಅನೂಪವಾಸೀ ನೀಲಶ್ಚ ವ್ಯಾಘ್ರದತ್ತಶ್ಚ ವೀರ್ಯವಾನ್| ಅಶ್ವತ್ಥಾಮ್ನಾ ವಿಕರ್ಣೇನ ಗಮಿತೋ ಯಮಸಾದನಮ್|| (ಗೋಸಂ).

[7] ವಿರಾಟಪುತ್ರಃ ಶಂಖಸ್ತು ಉತ್ತರಶ್ಚ ಮಹಾರಥಃ| ಕುರ್ವಂತೌ ಸುಮಹತ್ ಕರ್ಮ ಗತೌ ವೈವಸ್ವತಕ್ಷಯಮ್|| (ಗೋಸಂ).

[8] ಪಾಂಡ್ಯರಾಜಶ್ಚ ವಿಕ್ರಾಂತೋ ಬಲವಾನ್ ಬಾಹುಶಾಲಿನಾ| ಅಶ್ವತ್ಥಾಮ್ನಾ ಹತಸ್ತತ್ರ ಗಮಿತೋ ವೈ ಯಮಕ್ಷಯಮ್|| (ಗೋಸಂ).

[9] ಇಲ್ಲಿಗೆ ಗೋರಖಪುರ ಸಂಪುಟದಲ್ಲಿ ಆರನೆಯ ಅಧ್ಯಾಯವು ಮುಗಿಯುತ್ತದೆ.

[10] ಮಾಮಕಸ್ಯಾಸ್ಯ ಸೈನ್ಯಸ್ಯ ಹೃತೋತ್ಸೇಕಸ್ಯ ಸಂಜಯ| ಅವಶೇಷಂ ನ ಪಶ್ಯಾಮಿ ಕಕುದೇ ಮೃದಿತೇ ಸತಿ|| ತೌ ಹಿ ವೀರೌ ಮಹೇಷ್ವಾಸೌ ಮದರ್ಥೇ ಕುರುಸತ್ತಮೌ| ಬೀಷ್ಮದ್ರೋಣೌ ಹತೌ ಶ್ರುತ್ವಾ ನಾರ್ಥೋ ವೈ ಚೀವಿತೇಽಸತಿ|| ನ ಚ ಮೃಷ್ಯಾಮಿ ರಾಧೇಯಂ ಹತಮಾಹವಶೋಭನಮ್| ಯಸ್ಯ ಬಾಹುರ್ಬಲಂ ತುಲ್ಯಂ ಕುಂಜರಾಣಾಂ ಶತಂ ಶತಮ್|| (ಗೋಸಂ).

Comments are closed.