ಕರ್ಣ ಪರ್ವ
೨೭
ರಣಭೂಮಿಯಲ್ಲಿ ಪ್ರಯಾಣಿಸುವಾಗ ಕರ್ಣನು ಅರ್ಜುನನ ಕುರಿತು ಕಂಡಕಂಡವರನ್ನು ಕೇಳುವುದು (೧-೧೬). ಆಗ ಶಲ್ಯನು ಕರ್ಣನ ತೇಜೋವಧೆಗೈಯುತ್ತಾ ಅವನನ್ನು ಹೀಯಾಳಿಸಿ ನುಡಿದುದು (೧೭-೨೭). ಕರ್ಣನು ಶಲ್ಯನಿಗೆ “ಮಿತ್ರನ ಮುಖವಾಡವನ್ನು ಧರಿಸಿರುವ ನನ್ನ ಶತ್ರುವಾಗಿರುವೆ!” ಎಂದು ಹೇಳಿದುದು (೨೮-೨೯). ಶಲ್ಯನು ಕರ್ಣನನ್ನು ಕೋಪಗೊಳಿಸುವ ಉದ್ದೇಶದಿಂದ ಕಠೋರ ನುಡಿಗಳನ್ನಾಡಿದುದು (೩೦-೫೨). ಕರ್ಣನು ಅದಕ್ಕುತ್ತರವಾಗಿ ತನ್ನ ಶೌರ್ಯವನ್ನು ಕೊಚ್ಚಿಕೊಳ್ಳುತ್ತಾ, ಮದ್ರದೇಶದ ಜನರೇ ಅಧಮರು ಎಂದು ಹೇಳಿದುದು (೫೩-೧೦೫).
08027001 ಸಂಜಯ ಉವಾಚ|
08027001a ಪ್ರಯಾನೇವ ತದಾ ಕರ್ಣೋ ಹರ್ಷಯನ್ವಾಹಿನೀಂ ತವ|
08027001c ಏಕೈಕಂ ಸಮರೇ ದೃಷ್ಟ್ವಾ ಪಾಂಡವಂ ಪರ್ಯಪೃಚ್ಚತ||
ಸಂಜಯನು ಹೇಳಿದನು: “ನಿನ್ನ ಸೇನೆಯಲ್ಲಿ ಪ್ರಯಾಣಿಸುತ್ತಿರುವಾಗ ಕರ್ಣನು ಹರ್ಷನಾಗಿ ಸಮರದಲ್ಲಿ ಒಬ್ಬೊಬ್ಬರನ್ನೂ ನೋಡಿ ಪಾಂಡವ ಅರ್ಜುನನ ಕುರಿತು ಕೇಳುತ್ತಿದ್ದನು.
08027002a ಯೋ ಮಮಾದ್ಯ ಮಹಾತ್ಮಾನಂ ದರ್ಶಯೇಚ್ಚ್ವೇತವಾಹನಂ|
08027002c ತಸ್ಮೈ ದದ್ಯಾಮಭಿಪ್ರೇತಂ ವರಂ ಯಂ ಮನಸೇಚ್ಚತಿ||
“ಇಂದು ಮಹಾತ್ಮ ಶ್ವೇತವಾಹನನನ್ನು ನನಗೆ ತೋರಿಸಿಕೊಟ್ಟವರಿಗೆ ನಾನು ಅವನ ಮನಸ್ಸು ಇಚ್ಛಿಸುವಷ್ಟು ಧನವನ್ನು ನೀಡುತ್ತೇನೆ!
08027003a ಸ ಚೇತ್ತದಭಿಮನ್ಯೇತ ತಸ್ಮೈ ದದ್ಯಾಮಹಂ ಪುನಃ|
08027003c ಶಕಟಂ ರತ್ನಸಂಪೂರ್ಣಂ ಯೋ ಮೇ ಬ್ರೂಯಾದ್ಧನಂಜಯಂ||
ಅದೂ ಕೂಡ ಕಡಿಮೆಯಾಯಿತೆಂದು ಧನಂಜಯನೆಲ್ಲಿರುವನೆಂದು ಹೇಳಿದವನು ತಿಳಿದರೆ ಪುನಃ ನಾನು ರತ್ನವು ತುಂಬಿರುವ ಬಂಡಿಯನ್ನೇ ನೀಡುತ್ತೇನೆ.
08027004a ಸ ಚೇತ್ತದಭಿಮನ್ಯೇತ ಪುರುಷೋಽರ್ಜುನದರ್ಶಿವಾನ್|
08027004c ಅನ್ಯಂ ತಸ್ಮೈ ಪುನರ್ದದ್ಯಾಂ ಸೌವರ್ಣಂ ಹಸ್ತಿಷಡ್ಗವಂ||
ಅದೂ ಸಾಲದೆಂದಾದರೆ ಅರ್ಜುನನನ್ನು ತೋರಿಸುವ ಪುರುಷನಿಗೆ ಅನ್ಯವಾಗಿ ಪುನಃ ಸುವರ್ಣಮಯ ಆನೆಗಳಂತೆ ದಷ್ಟ-ಪುಷ್ಟವಾಗಿರುವ ಆರು ಎತ್ತುಗಳನ್ನು ಕೊಡುತ್ತೇನೆ.
08027005a ತಥಾ ತಸ್ಮೈ ಪುನರ್ದದ್ಯಾಂ ಸ್ತ್ರೀಣಾಂ ಶತಮಲಂಕೃತಂ|
08027005c ಶ್ಯಾಮಾನಾಂ ನಿಷ್ಕಕಂಟೀನಾಂ ಗೀತವಾದ್ಯವಿಪಶ್ಚಿತಾಂ||
ಜೊತೆಗೆ ಅಂಥವನಿಗೆ ಸುವರ್ಣಮಯ ಕಂಠಾಭರಣಗಳನ್ನು ಧರಿಸಿರುವ ಗೀತ-ವಾದ್ಯವಿದುಷಿಯರಾದ ಆಭರಣಗಳಿಂದ ಸಮಲಂಕೃತರಾದ ನೂರು ಶ್ಯಾಮಲವರ್ಣದ ಯುವತಿಯರನ್ನೂ ಕೊಡುತ್ತೇನೆ.
08027006a ಸ ಚೇತ್ತದಭಿಮನ್ಯೇತ ಪುರುಷೋಽರ್ಜುನದರ್ಶಿವಾನ್|
08027006c ಅನ್ಯಂ ತಸ್ಮೈ ವರಂ ದದ್ಯಾಂ ಶ್ವೇತಾನ್ಪಂಚಶತಾನ್ ಹಯಾನ್||
ಅದೂ ಕೂಡ ಕಡಿಮೆಯೆನಿಸಿದರೆ ಅರ್ಜುನನನ್ನು ತೋರಿಸುವ ಪುರುಷನಿಗೆ ಬೇರೆಯೇ ವರವಾಗಿ ಐದುನೂರು ಶ್ವೇತ ಕುದುರೆಗಳನ್ನು ಕೊಡುತ್ತೇನೆ.
08027007a ಹೇಮಭಾಂಡಪರಿಚ್ಚನ್ನಾನ್ಸುಮೃಷ್ಟಮಣಿಕುಂಡಲಾನ್|
08027007c ಸುದಾಂತಾನಪಿ ಚೈವಾಹಂ ದದ್ಯಾಮಷ್ಟಶತಾನ್ಪರಾನ್||
ಅದರ ಜೊತೆಗೆ ಬಂಗಾರದಹೊದಿಕೆಯನ್ನುಳ್ಳ, ಮುಣಿಕುಂಡಲಗಳನ್ನುಳ್ಳ, ಸುಂದರ ಹಲ್ಲುಗಳುಳ್ಳ ಇನ್ನೂ ಎಂಟು ನೂರು ಕುದುರೆಗಳನ್ನು ಕೊಡುತ್ತೇನೆ.
08027008a ರಥಂ ಚ ಶುಭ್ರಂ ಸೌವರ್ಣಂ ದದ್ಯಾಂ ತಸ್ಮೈ ಸ್ವಲಂಕೃತಂ|
08027008c ಯುಕ್ತಂ ಪರಮಕಾಂಬೋಜೈರ್ಯೋ ಮೇ ಬ್ರೂಯಾದ್ಧನಂಜಯಂ||
ಧನಂಜಯನ ಸುಳಿವು ಕೊಟ್ಟವನಿಗೆ ಶುಭ್ರವಾದ, ಸುವರ್ಣಮಯವಾದ, ಅಲಂಕೃತವಾದ, ಪರಮ ಕಾಂಬೋಜದ ಕುದುರೆಗಳಿಂದ ಯುಕ್ತವಾದ ರಥವನ್ನು ಕೊಡುತ್ತೇನೆ.
08027009a ಅನ್ಯಂ ತಸ್ಮೈ ವರಂ ದದ್ಯಾಂ ಕುಂಜರಾಣಾಂ ಶತಾನಿ ಷಟ್|
08027009c ಕಾಂಚನೈರ್ವಿವಿಧೈರ್ಭಾಂಡೈರಾಚ್ಚನ್ನಾನ್ ಹೇಮಮಾಲಿನಃ|
08027009e ಉತ್ಪನ್ನಾನಪರಾಂತೇಷು ವಿನೀತಾನ್ ಹಸ್ತಿಶಿಕ್ಷಕೈಃ||
ಅದಕ್ಕೂ ಹೊರತಾಗಿ ಅವನಿಗೆ ಕಾಂಚನದ ಅನೇಕ ಹೊದಿಕೆಗಳನ್ನು ಹೊದಿಸಿದ್ದ, ಹೇಮಮಾಲೆಗಳನ್ನು ತೊಡಿಸಿದ್ದ, ಶತ್ರುಗಳ ಮೇಲೆ ಎರಗುವಂತೆ ಮಾವುತರಿಂದ ಪಳಗಿಸಲ್ಪಟ್ಟ ಆರು ನೂರು ಆನೆಗಳನ್ನು ಕೊಡುತ್ತೇನೆ.
08027010a ಸ ಚೇತ್ತದಭಿಮನ್ಯೇತ ಪುರುಷೋಽರ್ಜುನದರ್ಶಿವಾನ್|
08027010c ಅನ್ಯಂ ತಸ್ಮೈ ವರಂ ದದ್ಯಾಮ್ಯಮಸೌ ಕಾಮಯೇತ್ಸ್ವಯಂ||
ಅದರಿಂದಲೂ ತೃಪ್ತನಾಗದಿದ್ದರೆ ಅರ್ಜುನನನ್ನು ತೋರಿಸಿಕೊಟ್ಟವನಿಗೆ ಇಷ್ಟವಾದ ಬೇರೊಂದು ವರವನ್ನು ಕೊಡುತ್ತೇನೆ.
08027011a ಪುತ್ರದಾರಾನ್ವಿಹಾರಾಂಶ್ಚ ಯದನ್ಯದ್ವಿತ್ತಮಸ್ತಿ ಮೇ|
08027011c ತಚ್ಚ ತಸ್ಮೈ ಪುನರ್ದದ್ಯಾಂ ಯದ್ಯತ್ಸ ಮನಸೇಚ್ಚತಿ||
ಮಕ್ಕಳು, ಹೆಂಡತಿ, ವಿಹಾರಸ್ಥಾನಗಳು, ಈ ಎಲ್ಲವನ್ನೂ ಮತ್ತು ನನ್ನಲ್ಲಿರುವ ಎಲ್ಲ ಐಶ್ವರ್ಯವನ್ನೂ ಅವನಿಗೆ ಕೊಡುತ್ತೇನೆ.
08027012a ಹತ್ವಾ ಚ ಸಹಿತೌ ಕೃಷ್ಣೌ ತಯೋರ್ವಿತ್ತಾನಿ ಸರ್ವಶಃ|
08027012c ತಸ್ಮೈ ದದ್ಯಾಮಹಂ ಯೋ ಮೇ ಪ್ರಬ್ರೂಯಾತ್ಕೇಶವಾರ್ಜುನೌ||
ಕೃಷ್ಣರಿಬ್ಬರನ್ನೂ ಒಟ್ಟಿಗೇ ಸಂಹರಿಸಿ ಅವರ ಸಂಪತ್ತೆಲ್ಲವನ್ನೂ ನಾನು ಇಂದು ಕೇಶವಾರ್ಜುನರು ಎಲ್ಲಿರುವರೆಂದು ಹೇಳುವವನಿಗೆ ಕೊಡುತ್ತೇನೆ!”
08027013a ಏತಾ ವಾಚಃ ಸುಬಹುಶಃ ಕರ್ಣ ಉಚ್ಚಾರಯನ್ಯುಧಿ|
08027013c ದಧ್ಮೌ ಸಾಗರಸಂಭೂತಂ ಸುಸ್ವನಂ ಶಂಖಮುತ್ತಮಂ||
ಇಂತಹದೇ ಮಾತುಗಳನ್ನು ರಣರಂಗದಲ್ಲಿ ಬಹಳ ಬಾರಿ ಹೇಳುತ್ತಾ ಕರ್ಣನು ಸುಸ್ವರವುಳ್ಳ ಸಾಗರಸಂಭೂತ ಉತ್ತಮ ಶಂಖವನ್ನು ಊದಿದನು.
08027014a ತಾ ವಾಚಃ ಸೂತಪುತ್ರಸ್ಯ ತಥಾ ಯುಕ್ತಾ ನಿಶಂಯ ತು|
08027014c ದುರ್ಯೋಧನೋ ಮಹಾರಾಜ ಪ್ರಹೃಷ್ಟಃ ಸಾನುಗೋಽಭವತ್||
ಮಹಾರಾಜ! ಸೂತಪುತ್ರನ ಆ ಯುಕ್ತ ಮಾತುಗಳನ್ನು ಕೇಳಿದ ದುರ್ಯೋಧನನು ತನ್ನ ಅನುಯಾಯಿಗಳೊಂದಿಗೆ ಪ್ರಹೃಷ್ಟನಾದನು.
08027015a ತತೋ ದುಂದುಭಿನಿರ್ಘೋಷೋ ಮೃದಂಗಾನಾಂ ಚ ಸರ್ವಶಃ|
08027015c ಸಿಂಹನಾದಃ ಸವಾದಿತ್ರಃ ಕುಂಜರಾಣಾಂ ಚ ನಿಸ್ವನಃ||
ಆಗ ದುಂದುಭಿಗಳ ಮತ್ತು ಮೃದಂಗಗಳ ನಿನಾದವು ಎಲ್ಲೆಡೆ ಮೊಳಗಿದವು. ಅಲ್ಲಿ ಆನೆಗಳ ಘೀಂಕಾರವೂ ಯೋಧರ ಸಿಂಹನಾದವೂ ಕೇಳಿಬಂದಿತು.
08027016a ಪ್ರಾದುರಾಸೀತ್ತದಾ ರಾಜಂಸ್ತ್ವತ್ಸೈನ್ಯೇ ಭರತರ್ಷಭ|
08027016c ಯೋಧಾನಾಂ ಸಂಪ್ರಹೃಷ್ಟಾನಾಂ ತಥಾ ಸಮಭವತ್ಸ್ವನಃ||
ರಾಜನ್! ಭರತರ್ಷಭ! ನಿನ್ನ ಸೇನೆಯಲ್ಲಿ ಆಗ ಸಂಪ್ರಹೃಷ್ಟ ಯೋಧರ ಕೂಗಾಟವು ಕೇಳಿಬಂದಿತು.
08027017a ತಥಾ ಪ್ರಹೃಷ್ಟೇ ಸೈನ್ಯೇ ತು ಪ್ಲವಮಾನಂ ಮಹಾರಥಂ|
08027017c ವಿಕತ್ಥಮಾನಂ ಸಮರೇ ರಾಧೇಯಮರಿಕರ್ಶನಂ|
08027017e ಮದ್ರರಾಜಃ ಪ್ರಹಸ್ಯೇದಂ ವಚನಂ ಪ್ರತ್ಯಭಾಷತ||
ಹೀಗೆ ಸಂತೋಷಭರಿತ ಸೈನ್ಯ ಮತ್ತು ಆತ್ಮಶ್ಲಾಘನೆಯನ್ನು ಮಾಡಿಕೊಳ್ಳುತ್ತಿದ್ದ ಅರಿಕರ್ಶನ ಮಹಾರಥ ರಾಧೇಯನನ್ನು ನೋಡಿ ಮದ್ರರಾಜನು ನಗುತ್ತಾ ಈ ಮಾತನ್ನಾಡಿದನು:
08027018a ಮಾ ಸೂತಪುತ್ರ ಮಾನೇನ ಸೌವರ್ಣಂ ಹಸ್ತಿಷಡ್ಗವಂ|
08027018c ಪ್ರಯಚ್ಚ ಪುರುಷಾಯಾದ್ಯ ದ್ರಕ್ಷ್ಯಸಿ ತ್ವಂ ಧನಂಜಯಂ||
“ಸೂತಪುತ್ರ! ಇಂದು ನೀನು ಅಭಿಮಾನದಿಂದ ಸುವರ್ಣಮಯ ಆನೆಗಳಂತಿರುವ ಆರು ಎತ್ತುಗಳನ್ನು ಯಾರಿಗೂ ಕೊಡಬೇಕಾಗಿಲ್ಲ. ನೀನೇ ಧನಂಜಯನನ್ನು ನೋಡುವೆ!
08027019a ಬಾಲ್ಯಾದಿವ ತ್ವಂ ತ್ಯಜಸಿ ವಸು ವೈಶ್ರವಣೋ ಯಥಾ|
08027019c ಅಯತ್ನೇನೈವ ರಾಧೇಯ ದ್ರಷ್ಟಾಸ್ಯದ್ಯ ಧನಂಜಯಂ||
ನೀನು ವೈಶ್ರವಣ ಕುಬೇರನಂತೆ ಮತ್ತು ಬಾಲಕನಂತೆ ಸಂಪತ್ತನ್ನು ವ್ಯಯಮಾಡಲು ಹೊರಟಿರುವೆ! ರಾಧೇಯ! ಯಾವ ರೀತಿಯ ಪ್ರಯತ್ನವನ್ನೂ ಪಡೆಯದೇ ನೀನು ಇಂದು ಧನಂಜಯನನ್ನು ನೋಡುವಿಯಂತೆ!
08027020a ಪರಾಸೃಜಸಿ ಮಿಥ್ಯಾ ಕಿಂ ಕಿಂ ಚ ತ್ವಂ ಬಹು ಮೂಢವತ್|
08027020c ಅಪಾತ್ರದಾನೇ ಯೇ ದೋಷಾಸ್ತಾನ್ಮೋಹಾನ್ನಾವಬುಧ್ಯಸೇ||
ಕಡುಮೂಢನಂತೆ ನೀನು ನಿನ್ನಲ್ಲಿರುವ ಅಪಾರ ಸಂಪತ್ತನ್ನು ಸ್ವಲ್ಪವೋ ಎನ್ನುವಂತೆ ತ್ಯಾಗಮಾಡಲು ಹೊರಟಿರುವೆ! ಮೋಹವಶನಾದ ನೀನು ಅಪಾತ್ರರಿಗೆ ದಾನ ಮಾಡುವುದರಿಂದ ಉಂಟಾಗುವ ದೋಷಗಳನ್ನು ತಿಳಿತುಕೊಂಡಿಲ್ಲ!
08027021a ಯತ್ಪ್ರವೇದಯಸೇ ವಿತ್ತಂ ಬಹುತ್ವೇನ ಖಲು ತ್ವಯಾ|
08027021c ಶಕ್ಯಂ ಬಹುವಿಧೈರ್ಯಜ್ಞೈರ್ಯಷ್ಟುಂ ಸೂತ ಯಜಸ್ವ ತೈಃ||
ಸೂತ! ನೀನು ಕೊಡಲು ಹೊರಟಿರುವ ಬಹು ಸಂಪತ್ತಿನಿಂದ ಅನೇಕ ವಿಧದ ಯಜ್ಞಗಳನ್ನು ಮಾಡಲು ಶಕ್ಯವಿದೆ. ಆ ಸಂಪತ್ತಿನಿಂದ ಯಜ್ಞಗಳನ್ನು ನಡೆಸು!
08027022a ಯಚ್ಚ ಪ್ರಾರ್ಥಯಸೇ ಹಂತುಂ ಕೃಷ್ಣೌ ಮೋಹಾನ್ಮೃಷೈವ ತತ್|
08027022c ನ ಹಿ ಶುಶ್ರುಮ ಸಮ್ಮರ್ದೇ ಕ್ರೋಷ್ಟ್ರಾ ಸಿಂಹೌ ನಿಪಾತಿತೌ||
ಮೋಹಪರವಶನಾಗಿ ಕೃಷ್ಣಾರ್ಜುನನನ್ನು ಸಂಹರಿಸುವ ನಿನ್ನ ಈ ಪ್ರಯತ್ನವು ವ್ಯರ್ಥವೇ ಸರಿ! ಹೋರಾಟದಲ್ಲಿ ಒಂದು ಗುಳ್ಳೇನರಿಯು ಎರಡು ಸಿಂಹಗಳನ್ನು ಸಂಹರಿಸಿದುದನ್ನು ನಾನು ಇದೂವರೆಗೂ ಕೇಳಿಲ್ಲ!
08027023a ಅಪ್ರಾರ್ಥಿತಂ ಪ್ರಾರ್ಥಯಸೇ ಸುಹೃದೋ ನ ಹಿ ಸಂತಿ ತೇ|
08027023c ಯೇ ತ್ವಾಂ ನ ವಾರಯಂತ್ಯಾಶು ಪ್ರಪತಂತಂ ಹುತಾಶನೇ||
ಇದೂವರೆಗೆ ಯಾರೂ ಬಯಸದೇ ಇರುವುದನ್ನು ನೀನು ಬಯಸುತ್ತಿರುವೆ! ನಿನಗೆ ಸುಹೃದಯರ್ಯಾರೂ ಇಲ್ಲವೆಂದು ತೋರುತ್ತದೆ! ಏಕೆಂದರೆ ಬೆಂಕಿಯಲ್ಲಿ ಬೀಳಲು ಮುಂದಾಗುತ್ತಿರುವ ನಿನ್ನನ್ನು ಯಾರೂ ತಡೆಯುತ್ತಿಲ್ಲ!
08027024a ಕಾಲಕಾರ್ಯಂ ನ ಜಾನೀಷೇ ಕಾಲಪಕ್ವೋಽಸ್ಯಸಂಶಯಂ|
08027024c ಬಹ್ವಬದ್ಧಮಕರ್ಣೀಯಂ ಕೋ ಹಿ ಬ್ರೂಯಾಜ್ಜಿಜೀವಿಷುಃ||
ಕಾಲ-ಕಾರ್ಯಗಳನ್ನು ನೀನು ತಿಳಿದಿಲ್ಲ. ನೀನು ಕಾಲಪಕ್ವನಾಗಿರುವೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲದಿದ್ದರೆ ಯಾರುತಾನೇ ಕೇಳಲು ಅಸಾಧ್ಯವಾದ ಈ ಅಬದ್ಧ ಮಾತುಗಳನ್ನಾಡುತ್ತಾನೆ?
08027025a ಸಮುದ್ರತರಣಂ ದೋರ್ಭ್ಯಾಂ ಕಂಟೇ ಬದ್ಧ್ವಾ ಯಥಾ ಶಿಲಾಂ|
08027025c ಗಿರ್ಯಗ್ರಾದ್ವಾ ನಿಪತನಂ ತಾದೃಕ್ತವ ಚಿಕೀರ್ಷಿತಂ||
ಕುತ್ತಿಗೆಗೆ ಕಲ್ಲನ್ನು ಕಟ್ಟಿಕೊಂಡು ಎರಡು ತೋಳುಗಳಿಂದ ಸಮುದ್ರವನ್ನು ದಾಟಲು ಹೊರಟಿರುವವನಂತೆ ಅಥವಾ ಪರ್ವತದಿಂದ ಕೆಳಗೆ ಧುಮುಕಲು ಹೊರಟಿರುವವನಂತೆ ನೀನು ಮಾಡತೊಡಗಿರುವೆ!
08027026a ಸಹಿತಃ ಸರ್ವಯೋಧೈಸ್ತ್ವಂ ವ್ಯೂಢಾನೀಕೈಃ ಸುರಕ್ಷಿತಃ|
08027026c ಧನಂಜಯೇನ ಯುಧ್ಯಸ್ವ ಶ್ರೇಯಶ್ಚೇತ್ಪ್ರಾಪ್ತುಮಿಚ್ಚಸಿ||
ನೀನು ಶ್ರೇಯಸ್ಸನ್ನು ಬಯಸುವವನಾದರೆ ಸರ್ವಯೋಧರೊಂದಿಗೆ, ಸೇನಾವ್ಯೂಹದಿಂದ ಸುರಕ್ಷಿತನಾಗಿದ್ದುಕೊಂಡು ಧನಂಜಯನೊಡನೆ ಯುದ್ಧಮಾಡು.
08027027a ಹಿತಾರ್ಥಂ ಧಾರ್ತರಾಷ್ಟ್ರಸ್ಯ ಬ್ರವೀಮಿ ತ್ವಾ ನ ಹಿಂಸಯಾ|
08027027c ಶ್ರದ್ಧತ್ಸ್ವೈತನ್ಮಯಾ ಪ್ರೋಕ್ತಂ ಯದಿ ತೇಽಸ್ತಿ ಜಿಜೀವಿಷಾ||
ಧಾರ್ತರಾಷ್ಟ್ರನ ಹಿತಕ್ಕಾಗಿ ಹೀಗೆ ಹೇಳುತ್ತಿದ್ದೇನೆ. ನಿನ್ನನ್ನು ಹಿಂಸಿಸಬೇಕೆಂದಲ್ಲ! ನಿನಗೆ ಜೀವಂತವಾಗಿರುವ ಆಸೆಯಿರುವುದಾದರೆ ನನ್ನ ಮಾತಿನಲ್ಲಿ ವಿಶ್ವಾಸವನ್ನಿಟ್ಟು ಅದರಂತೆ ನಡೆ!”
08027028 ಕರ್ಣ ಉವಾಚ|
08027028a ಸ್ವವೀರ್ಯೇಽಹಂ ಪರಾಶ್ವಸ್ಯ ಪ್ರಾರ್ಥಯಾಂಯರ್ಜುನಂ ರಣೇ|
08027028c ತ್ವಂ ತು ಮಿತ್ರಮುಖಃ ಶತ್ರುರ್ಮಾಂ ಭೀಷಯಿತುಮಿಚ್ಚಸಿ||
ಕರ್ಣನು ಹೇಳಿದನು: “ಸ್ವವೀರ್ಯವನ್ನು ಆಶ್ರಯಿಸಿಯೇ ನಾನು ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸುತ್ತೇನೆ. ನೀನಾದರೋ ಮಿತ್ರನಮುಖವಾಡವನ್ನು ಧರಿಸಿರುವ ನನ್ನ ಶತ್ರುವಾಗಿರುವೆ! ನನ್ನಲ್ಲಿ ಭಯವನ್ನುಂಟುಮಾಡಲು ಬಯಸುತ್ತಿರುವೆ!
08027029a ನ ಮಾಮಸ್ಮಾದಭಿಪ್ರಾಯಾತ್ಕಶ್ಚಿದದ್ಯ ನಿವರ್ತಯೇತ್|
08027029c ಅಪೀಂದ್ರೋ ವಜ್ರಮುದ್ಯಮ್ಯ ಕಿಂ ನು ಮರ್ತ್ಯಃ ಕರಿಷ್ಯತಿ||
ಆದರೆ ನನ್ನ ಈ ಅಭಿಪ್ರಾಯದಿಂದ ಯಾರೂ ನನ್ನನ್ನು ತಡೆಯಲಾರರು! ವಜ್ರವನ್ನು ಎತ್ತಿಕೊಂಡು ಇಂದ್ರನೇ ಬಂದರೂ ನಾನು ನನ್ನ ಸಂಕಲ್ಪದಿಂದ ಚ್ಯುತನಾಗುವುದಿಲ್ಲ. ಇನ್ನು ಮರ್ತ್ಯರೇನು ಮಾಡಿಯಾರು?””
08027030 ಸಂಜಯ ಉವಾಚ|
08027030a ಇತಿ ಕರ್ಣಸ್ಯ ವಾಕ್ಯಾಂತೇ ಶಲ್ಯಃ ಪ್ರಾಹೋತ್ತರಂ ವಚಃ|
08027030c ಚುಕೋಪಯಿಷುರತ್ಯರ್ಥಂ ಕರ್ಣಂ ಮದ್ರೇಶ್ವರಃ ಪುನಃ||
ಸಂಜಯನು ಹೇಳಿದನು: “ಹೀಗೆ ಕರ್ಣನು ವಾಕ್ಯವನ್ನು ಮುಗಿಸುತ್ತಿದ್ದಂತೆಯೇ ಮದ್ರೇಶ್ವರ ಶಲ್ಯನು ಕರ್ಣನನ್ನು ಅತ್ಯಂತ ಕುಪಿತನನ್ನಾಗಿಸುವ ಉದ್ದೇಶದಿಂದ ಪುನಃ ಉತ್ತರಿಸಿದನು:
08027031a ಯದಾ ವೈ ತ್ವಾಂ ಫಲ್ಗುನವೇಗನುನ್ನಾ
ಜ್ಯಾಚೋದಿತಾ ಹಸ್ತವತಾ ವಿಸೃಷ್ಟಾಃ|
08027031c ಅನ್ವೇತಾರಃ ಕಂಕಪತ್ರಾಃ ಶಿತಾಗ್ರಾಃ
ತದಾ ತಪ್ಸ್ಯಸ್ಯರ್ಜುನಸ್ಯಾಭಿಯೋಗಾತ್||
“ವೇಗಯುಕ್ತ ಮೌರ್ವಿಯಿಂದ ಫಲ್ಗುನನು ಹಸ್ತಕೌಶಲದಿಂದ ಪ್ರಯೋಗಿಸುವ ಕಂಕಪತ್ರ ಶಿತಾಗ್ರ ಬಾಣಗಳು ನಿನ್ನ ಶರೀರದಲ್ಲಿ ನಾಟುವಾಗ ನೀನು ಅರ್ಜುನನ ವಿಷಯದಲ್ಲಿ ಈಗ ಆಡುತ್ತಿರುವ ಮಾತಿಗೆ ಪಶ್ಚಾತ್ತಾಪ ಪಡುತ್ತೀಯೆ.
08027032a ಯದಾ ದಿವ್ಯಂ ಧನುರಾದಾಯ ಪಾರ್ಥಃ
ಪ್ರಭಾಸಯನ್ಪೃತನಾಂ ಸವ್ಯಸಾಚೀ|
08027032c ತ್ವಾಮರ್ದಯೇತ ನಿಶಿತೈಃ ಪೃಷತ್ಕೈಸ್
ತದಾ ಪಶ್ಚಾತ್ತಪ್ಸ್ಯಸೇ ಸೂತಪುತ್ರ||
ಸೂತಪುತ್ರ! ಯಾವಾಗ ಪಾರ್ಥ ಸವ್ಯಸಾಚಿಯು ದಿವ್ಯ ಧನುಸ್ಸನ್ನೆತ್ತಿಕೊಂಡು ಸೇನೆಗಳನ್ನು ದಿಗ್ಭ್ರಮೆಗೊಳಿಸುತ್ತಾ ನಿನ್ನನ್ನು ನಿಶಿತ ಪೃಷತ್ಕಗಳಿಂದ ಮರ್ದಿಸುತ್ತಾನೋ ಆಗ ನೀನು ಪಶ್ಚಾತ್ತಾಪ ಪಡುತ್ತೀಯೆ.
08027033a ಬಾಲಶ್ಚಂದ್ರಂ ಮಾತುರಂಕೇ ಶಯಾನೋ
ಯಥಾ ಕಶ್ಚಿತ್ಪ್ರಾರ್ಥಯತೇಽಪಹರ್ತುಂ|
08027033c ತದ್ವನ್ಮೋಹಾದ್ಯತಮಾನೋ ರಥಸ್ಥಸ್
ತ್ವಂ ಪ್ರಾರ್ಥಯಸ್ಯರ್ಜುನಮದ್ಯ ಜೇತುಂ||
ತಾಯಿಯ ತೊಡೆಯಮೇಲೆ ಮಲಗಿರುವ ಬಾಲಕನು ಚಂದ್ರನನ್ನು ಅಪಹರಿಸಲು ಇಚ್ಛಿಸುವಂತೆ ಮೋಹಪರವಶನಾದ ನೀನು ರಥಸ್ಥನಾಗಿ ಹೋರಾಡುತ್ತಿರುವ ಅರ್ಜುನನನ್ನು ಇಂದು ಜಯಿಸಲು ಇಚ್ಛಿಸುತ್ತಿರುವೆ!
08027034a ತ್ರಿಶೂಲಮಾಶ್ಲಿಷ್ಯ ಸುತೀಕ್ಷ್ಣಧಾರಂ
ಸರ್ವಾಣಿ ಗಾತ್ರಾಣಿ ನಿಘರ್ಷಸಿ ತ್ವಂ|
08027034c ಸುತೀಕ್ಷ್ಣಧಾರೋಪಮಕರ್ಮಣಾ ತ್ವಂ
ಯುಯುತ್ಸಸೇ ಯೋಽರ್ಜುನೇನಾದ್ಯ ಕರ್ಣ||
ಸುತೀಕ್ಷ್ಣ ಅಲಗುಗಳುಳ್ಳ ತ್ರಿಶೂಲವನ್ನು ಅಪ್ಪಿಕೊಂಡು ನೀನು ಅಂಗಾಂಗಗಳನ್ನು ಚುಚ್ಚಿಕೊಳ್ಳುತ್ತಿರುವೆ. ಕರ್ಣ! ಆ ಸುತೀಕ್ಷ್ಣ ಅಲಗುಗಳಂಥಹ ಕರ್ಮಗಳನ್ನು ಮಾಡುವ ಅರ್ಜುನನೊಡನೆ ನೀನು ಇಂದು ಯುದ್ಧಮಾಡಬಯಸುತ್ತಿರುವೆ!
08027035a ಸಿದ್ಧಂ ಸಿಂಹಂ ಕೇಸರಿಣಂ ಬೃಹಂತಂ
ಬಾಲೋ ಮೂಢಃ ಕ್ಷುದ್ರಮೃಗಸ್ತರಸ್ವೀ|
08027035c ಸಮಾಹ್ವಯೇತ್ತದ್ವದೇತತ್ತವಾದ್ಯ
ಸಮಾಹ್ವಾನಂ ಸೂತಪುತ್ರಾರ್ಜುನಸ್ಯ||
ಸೂತಪುತ್ರ! ಎಳೆಯದಾದ, ಬುದ್ಧಿಯಿಲ್ಲದ, ಆತುರಬುದ್ಧಿಯ ಕ್ಷುದ್ರಮೃಗವೊಂದು ಕುಪಿತವಾಗಿರುವ ಕೇಸರಯುಕ್ತ ವಿಶಾಲ ಸಿಂಹವನ್ನು ಜಗಳಕ್ಕೆ ಕರೆಯುವಂತೆ ನೀನು ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸುತ್ತಿರುವೆ!
08027036a ಮಾ ಸೂತಪುತ್ರಾಹ್ವಯ ರಾಜಪುತ್ರಂ
ಮಹಾವೀರ್ಯಂ ಕೇಸರಿಣಂ ಯಥೈವ|
08027036c ವನೇ ಸೃಗಾಲಃ ಪಿಶಿತಸ್ಯ ತೃಪ್ತೋ
ಮಾ ಪಾರ್ಥಮಾಸಾದ್ಯ ವಿನಂಕ್ಷ್ಯಸಿ ತ್ವಂ||
ಸೂತಪುತ್ರ! ಕೇಸರಿಯಂತಿರುವ ಮಹಾವೀರ್ಯ ರಾಜಪುತ್ರನನ್ನು ಅಹ್ವಾನಿಸಬೇಡ! ವನದಲ್ಲಿ ಹೊಟ್ಟೆತುಂಬಿ ತೃಪ್ತವಾದ ಗುಳ್ಳೇನರಿಯಂತೆ ನೀನು ಪಾರ್ಥನನ್ನು ಎದುರಿಸಿ ನಾಶಹೊಂದಬೇಡ!
08027037a ಈಷಾದಂತಂ ಮಹಾನಾಗಂ ಪ್ರಭಿನ್ನಕರಟಾಮುಖಂ|
08027037c ಶಶಕಾಹ್ವಯಸೇ ಯುದ್ಧೇ ಕರ್ಣ ಪಾರ್ಥಂ ಧನಂಜಯಂ||
ಕರ್ಣ! ಈಷಾದಂಡತಂಥಹ ಕೋರೆದಾಡೆಗಳಿರುವ ಮದೋದಕವನ್ನು ಸುರಿಸುತ್ತಿರುವ ಮಹಾಗಜವನ್ನು ಮೊಲವೊಂದು ಜಗಳಕ್ಕೆ ಕರೆಯುವಂತೆ ನೀನು ಪಾರ್ಥ ಧನಂಜಯನನ್ನು ಯುದ್ಧಕ್ಕೆ ಆಹ್ವಾನಿಸುತ್ತಿರುವೆ!
08027038a ಬಿಲಸ್ಥಂ ಕೃಷ್ಣಸರ್ಪಂ ತ್ವಂ ಬಾಲ್ಯಾತ್ಕಾಷ್ಠೇನ ವಿಧ್ಯಸಿ|
08027038c ಮಹಾವಿಷಂ ಪೂರ್ಣಕೋಶಂ ಯತ್ಪಾರ್ಥಂ ಯೋದ್ಧುಮಿಚ್ಚಸಿ||
ಬಿಲದಲ್ಲಿರುವ ಮಹಾವಿಷಭರಿತ ಕೃಷ್ಣಸರ್ಪವನ್ನು ಮೂರ್ಖನಾಗಿ ಕೋಲಿನಿಂದ ಚುಚ್ಚುವಂತೆ ನೀನು ಪಾರ್ಥನೊಡನೆ ಯುದ್ಧಮಾಡಲು ಬಯಸುತ್ತಿರುವೆ!
08027039a ಸಿಂಹಂ ಕೇಸರಿಣಂ ಕ್ರುದ್ಧಮತಿಕ್ರಮ್ಯಾಭಿನರ್ದಸಿ|
08027039c ಸೃಗಾಲ ಇವ ಮೂಢತ್ವಾನ್ನೃಸಿಂಹಂ ಕರ್ಣ ಪಾಂಡವಂ||
ಕರ್ಣ! ಮೂಢತ್ವದಿಂದ ಗುಳ್ಳೆನರಿಯೊಂದು ಕೇಸರಿಯುಕ್ತ ಕ್ರುದ್ಧ ಸಿಂಹವನ್ನು ಅತಿಕ್ರಮಿಸಿ ಕೂಗುವಂತೆ ನೀನು ನರಸಿಂಹ ಪಾಂಡವನನ್ನು ಕೂಗಿ ಕರೆಯುತ್ತಿರುವೆ!
08027040a ಸುಪರ್ಣಂ ಪತಗಶ್ರೇಷ್ಠಂ ವೈನತೇಯಂ ತರಸ್ವಿನಂ|
08027040c ಲಟ್ವೇವಾಹ್ವಯಸೇ ಪಾತೇ ಕರ್ಣ ಪಾರ್ಥಂ ಧನಂಜಯಂ||
ಕರ್ಣ! ಸುಪರ್ಣ ಪತಗಶ್ರೇಷ್ಠ ತರಸ್ವಿ ವೈನತೇಯನನ್ನು ತನ್ನ ಮೇಲೆ ಬಂದು ಬೀಳಲು ಆಹ್ವಾನಿಸುತ್ತಿರುವವನಂತೆ ನೀನು ಪಾರ್ಥ ಧನಂಜಯನನ್ನು ಕರೆಯುತ್ತಿರುವೆ!
08027041a ಸರ್ವಾಂಭೋನಿಲಯಂ ಭೀಮಮೂರ್ಮಿಮಂತಂ ಝಷಾಯುತಂ|
08027041c ಚಂದ್ರೋದಯೇ ವಿವರ್ತಂತಮಪ್ಲವಃ ಸಂತಿತೀರ್ಷಸಿ||
ಜಲಜಂತುಗಳಿಂದ ಸಮೃದ್ಧವಾಗಿ ಚಂದ್ರೋದಯದಲ್ಲಿ ಉಕ್ಕಿಬಂದು ಎತ್ತರ ಅಲೆಗಳಿಂದ ಕೂಡಿದ ಸಮುದ್ರವನ್ನೇ ನೀನು ದೋಣಿಯಿಲ್ಲದೇ ಈಜಿ ದಾಟಲು ಬಯಸುತ್ತಿರುವೆ!
08027042a ಋಷಭಂ ದುಂದುಭಿಗ್ರೀವಂ ತೀಕ್ಷ್ಣಶೃಂಗಂ ಪ್ರಹಾರಿಣಂ|
08027042c ವತ್ಸ ಆಹ್ವಯಸೇ ಯುದ್ಧೇ ಕರ್ಣ ಪಾರ್ಥಂ ಧನಂಜಯಂ||
ಕರ್ಣ! ಮಗೂ! ದುಂದುಭಿಯ ನಿನಾದದಂತೆ ಗಂಭೀರ ಕಂಠಧ್ವನಿಯಿರುವ, ಚೂಪಾದ ಕೊಂಬುಗಳಿರುವ, ಹೊರಲಿಕ್ಕೆಬರುವ ಋಷಭದಂತಿರುವ ಧನಂಜಯ ಪಾರ್ಥನನ್ನು ನೀನು ಯುದ್ಧಕ್ಕೆ ಆಹ್ವಾನಿಸುತ್ತಿದ್ದೀಯೆ!
08027043a ಮಹಾಘೋಷಂ ಮಹಾಮೇಘಂ ದರ್ದುರಃ ಪ್ರತಿನರ್ದಸಿ|
08027043c ಕಾಮತೋಯಪ್ರದಂ ಲೋಕೇ ನರಪರ್ಜನ್ಯಮರ್ಜುನಂ||
ಮಹಾಮೇಘದ ಮಹಾ ಗುಡುಗನ್ನು ನೀನು ಪ್ರತಿಧ್ವನಿಸುತ್ತಿರುವೆ! ಲೋಕದಲ್ಲಿ ಬೇಕಾದಷ್ಟು ಬಾಣಗಳ ಮಳೆಸುರಿಸುವ ನರಪರ್ಜನ್ಯ ಅರ್ಜುನನ ಎದಿರು ಗರ್ಜಿಸುತ್ತಿರುವೆ!
08027044a ಯಥಾ ಚ ಸ್ವಗೃಹಸ್ಥಃ ಶ್ವಾ ವ್ಯಾಘ್ರಂ ವನಗತಂ ಭಷೇತ್|
08027044c ತಥಾ ತ್ವಂ ಭಷಸೇ ಕರ್ಣ ನರವ್ಯಾಘ್ರಂ ಧನಂಜಯಂ||
ಕರ್ಣ! ಮನೆಯಲ್ಲಿಯೇ ಕಟ್ಟಿಹಾಕಿದ ನಾಯಿಯೊಂದು ವನದಲ್ಲಿರುವ ಹುಲಿಯ ಎದಿರು ಬೊಗಳುವಂತೆ ನೀನು ನರವ್ಯಾಘ್ರ ಧನಂಜಯನ ಎದಿರು ಬೊಗಳುತ್ತಿರುವೆ!
08027045a ಸೃಗಾಲೋಽಪಿ ವನೇ ಕರ್ಣ ಶಶೈಃ ಪರಿವೃತೋ ವಸನ್|
08027045c ಮನ್ಯತೇ ಸಿಂಹಮಾತ್ಮಾನಂ ಯಾವತ್ಸಿಂಹಂ ನ ಪಶ್ಯತಿ||
ಕರ್ಣ! ವನದಲ್ಲಿ ಮೊಲಗಳ ಹಿಂಡುಗಳ ಮಧ್ಯೆ ವಾಸಿಸುವ ಗುಳ್ಳೇನರಿಯೂ ಕೂಡ ಸಿಂಹವನ್ನು ಕಾಣುವವರೆಗೆ ತಾನೇ ಸಿಂಹ ಎಂದು ಭಾವಿಸುಕೊಳ್ಳುತ್ತದೆ.
08027046a ತಥಾ ತ್ವಮಪಿ ರಾಧೇಯ ಸಿಂಹಮಾತ್ಮಾನಮಿಚ್ಚಸಿ|
08027046c ಅಪಶ್ಯಂ ಶತ್ರುದಮನಂ ನರವ್ಯಾಘ್ರಂ ಧನಂಜಯಂ||
ರಾಧೇಯ! ಹಾಗೆ ಶತ್ರುದಮನ ನರವ್ಯಾಘ್ರ ಧನಂಜನನ್ನು ಇನ್ನೂ ನೋಡದಿರುವ ನೀನೂ ಕೂಡ ನೀನೇ ಸಿಂಹ ಎಂಬ ಅಭಿಮಾನದಿಂದಿರುವೆ!
08027047a ವ್ಯಾಘ್ರಂ ತ್ವಂ ಮನ್ಯಸೇಽತ್ಮಾನಂ ಯಾವತ್ ಕೃಷ್ಣೌ ನ ಪಶ್ಯಸಿ|
08027047c ಸಮಾಸ್ಥಿತಾವೇಕರಥೇ ಸೂರ್ಯಾಚಂದ್ರಮಸಾವಿವ||
ಎಲ್ಲಿಯವರೆಗೆ ನೀನು ಒಂದೇ ರಥದಲ್ಲಿ ಸೂರ್ಯಚಂದ್ರರಂತೆ ಪ್ರಕಾಶಮಾನರಾಗಿ ಕುಳಿತಿರುವ ಕೃಷ್ಣಾರ್ಜುನರನ್ನು ನೋಡುವುದಿಲ್ಲವೋ ಅಲ್ಲಿಯವರೆಗೆ ನೀನು ನಿನ್ನನ್ನೇ ವ್ಯಾಘ್ರವೆಂದು ತಿಳಿದುಕೊಂಡುಬಿಟ್ಟಿದ್ದೀಯೆ!
08027048a ಯಾವದ್ಗಾಂಡೀವನಿರ್ಘೋಷಂ ನ ಶೃಣೋಷಿ ಮಹಾಹವೇ|
08027048c ತಾವದೇವ ತ್ವಯಾ ಕರ್ಣ ಶಕ್ಯಂ ವಕ್ತುಂ ಯಥೇಚ್ಚಸಿ||
ಕರ್ಣ! ಎಲ್ಲಿಯವರೆಗೆ ನೀನು ಮಹಾಯುದ್ಧದಲ್ಲಿ ಗಾಂಡೀವದ ನಿರ್ಘೋಷವನ್ನು ಕೇಳುವುದಿಲ್ಲವೋ ಅಲ್ಲಿಯವರೆಗೆ ನಿನಗಿಷ್ಟಬಂದಂತೆ ಮಾತನಾಡಿಕೊಂಡಿರಬಹುದು!
08027049a ರಥಶಬ್ದಧನುಃಶಬ್ದೈರ್ನಾದಯಂತಂ ದಿಶೋ ದಶ|
08027049c ನರ್ದಂತಮಿವ ಶಾರ್ದೂಲಂ ದೃಷ್ಟ್ವಾ ಕ್ರೋಷ್ಟಾ ಭವಿಷ್ಯಸಿ||
ರಥಶಬ್ಧ ಮತ್ತು ಧನುಸ್ಸಿನ ಟೇಂಕಾರಗಳಿಂದ ಹತ್ತೂ ದಿಕ್ಕುಗಳನ್ನೂ ಮೊಳಗಿಸುತ್ತಾ ಸಿಂಹದಂತೆ ಗರ್ಜಿಸುವ ಅರ್ಜುನನನ್ನು ನೋಡಿ ನೀನು ಗುಳ್ಳೇನರಿಯಾಗಿಬಿಡುತ್ತೀಯೆ!
08027050a ನಿತ್ಯಮೇವ ಸೃಗಾಲಸ್ತ್ವಂ ನಿತ್ಯಂ ಸಿಂಹೋ ಧನಂಜಯಃ|
08027050c ವೀರಪ್ರದ್ವೇಷಣಾನ್ಮೂಢ ನಿತ್ಯಂ ಕ್ರೋಷ್ಟೇವ ಲಕ್ಷ್ಯಸೇ||
ನೀನು ಯಾವಾಗಲೂ ಗುಳ್ಳೇನರಿಯಂತೆಯೇ ಮತ್ತು ಧನಂಜಯನು ಯಾವಾಗಲೂ ಸಿಂಹದಂತೆಯೇ! ಮೂಢ! ವೀರರನ್ನು ದ್ವೇಷಿಸುವ ನೀನು ಯಾವಾಗಲೂ ಗುಳ್ಳೇನರಿಯಂತೆಯೇ ಇರುವೆ!
08027051a ಯಥಾಖುಃ ಸ್ಯಾದ್ಬಿಡಾಲಶ್ಚ ಶ್ವಾ ವ್ಯಾಘ್ರಶ್ಚ ಬಲಾಬಲೇ|
08027051c ಯಥಾ ಸೃಗಾಲಃ ಸಿಂಹಶ್ಚ ಯಥಾ ಚ ಶಶಕುಂಜರೌ||
ಬಲಾಬಲಗಳ ತುಲನೆಯಲ್ಲಿ ಅರ್ಜುನನಿಗೂ ಮತ್ತು ನಿನಗೂ ಬೆಕ್ಕು-ಇಲಿಗಳ ಸಾಮ್ಯವಿದೆ. ಹುಲಿ ಮತ್ತು ನಾಯಿಗಳ ಸಾಮ್ಯವಿದೆ. ಸಿಂಹ ಮತ್ತು ಗುಳ್ಳೇನರಿಗಳ ಸಾಮ್ಯವಿದೆ. ಆನೆ ಮತ್ತು ಮೊಲಗಳ ಸಾಮ್ಯವಿದೆ. ಅರ್ಜುನನಿಗಿಂತ ನೀನು ಅತ್ಯಂತ ದುರ್ಬಲನು.
08027052a ಯಥಾನೃತಂ ಚ ಸತ್ಯಂ ಚ ಯಥಾ ಚಾಪಿ ವಿಷಾಮೃತೇ|
08027052c ತಥಾ ತ್ವಮಪಿ ಪಾರ್ಥಶ್ಚ ಪ್ರಖ್ಯಾತಾವಾತ್ಮಕರ್ಮಭಿಃ||
ಹಾಗೆಯೇ ನೀನು ಮತ್ತು ಪಾರ್ಥರು ಮಾಡಿರುವ ಸತ್ಕರ್ಮಗಳಲ್ಲಿ ಸುಳ್ಳು-ಸತ್ಯಗಳ ಮತ್ತು ವಿಷ-ಅಮೃತಗಳ ನಡುವಿನ ಅಂತರದಷ್ಟೇ ವ್ಯತ್ಯಾಸಗಳುಂಟು!””
08027053 ಸಂಜಯ ಉವಾಚ|
08027053a ಅಧಿಕ್ಷಿಪ್ತಸ್ತು ರಾಧೇಯಃ ಶಲ್ಯೇನಾಮಿತತೇಜಸಾ|
08027053c ಶಲ್ಯಮಾಹ ಸುಸಂಕ್ರುದ್ಧೋ ವಾಕ್ಶಲ್ಯಮವಧಾರಯನ್||
ಸಂಜಯನ ಹೇಳಿದನು: “ಅಮಿತ ತೇಜಸ್ವಿ ಶಲ್ಯನು ಮಾತುಗಳಿಂದ ಈ ರೀತಿ ಕರ್ಣನನ್ನು ನಿಂದಿಸಲು, ಮಾತಿನ ಬಾಣಗಳನ್ನು ಬಿಡುತ್ತಾನೆಂದೇ ಇವನಿಗೆ ಶಲ್ಯನೆಂಬ ಹೆಸರು ಬಂದಿರಬಹುದೆಂದು ಭಾವಿಸಿ, ಅತ್ಯಂತ ಕ್ರೋಧಿತನಾಗಿ ರಾಧೇಯನು ಹೇಳಿದನು:
08027054a ಗುಣಾನ್ಗುಣವತಃ ಶಲ್ಯ ಗುಣವಾನ್ವೇತ್ತಿ ನಾಗುಣಃ|
08027054c ತ್ವಂ ತು ನಿತ್ಯಂ ಗುಣೈರ್ಹೀನಃ ಕಿಂ ಜ್ಞಾಸ್ಯಸ್ಯಗುಣೋ ಗುಣಾನ್||
“ಶಲ್ಯ! ಗುಣವಂತನಾದವನು ಮಾತ್ರವೇ ಗುಣವಂತರ ಸದ್ಗುಣಗಳನ್ನು ತಿಳಿದುಕೊಳ್ಳುತ್ತಾನೆ. ಗುಣಹೀನನಾದವನು ಖಂಡಿತ ತಿಳಿದುಕೊಂಡಿರಲಾರನು! ನಿನ್ನಂತಹ ಗುಣಹೀನನಿಗೆ ಗುಣಾಗುಣಗಳ ಪರಿಜ್ಞಾನವಾದರೂ ಹೇಗಿರಬೇಕು!
08027055a ಅರ್ಜುನಸ್ಯ ಮಹಾಸ್ತ್ರಾಣಿ ಕ್ರೋಧಂ ವೀರ್ಯಂ ಧನುಃ ಶರಾನ್|
08027055c ಅಹಂ ಶಲ್ಯಾಭಿಜಾನಾಮಿ ನ ತ್ವಂ ಜಾನಾಸಿ ತತ್ತಥಾ||
ಶಲ್ಯ! ಅರ್ಜುನನ ಮಹಾಸ್ತ್ರಗಳು, ಅವನ ಕ್ರೋಧ, ವೀರ್ಯ, ಧನುಸ್ಸು ಮತ್ತು ಶರಗಳ ಕುರಿತು ನನಗೆ ಗೊತ್ತಿರುವಷ್ಟು ನಿನಗೆ ಗೊತ್ತಿರಲಿಕ್ಕಿಲ್ಲ!
08027056a ಏವಮೇವಾತ್ಮನೋ ವೀರ್ಯಮಹಂ ವೀರ್ಯಂ ಚ ಪಾಂಡವೇ|
08027056c ಜಾನನ್ನೇವಾಹ್ವಯೇ ಯುದ್ಧೇ ಶಲ್ಯ ನಾಗ್ನಿಂ ಪತಂಗವತ್||
ಶಲ್ಯ! ನನ್ನ ಮತ್ತು ಪಾಂಡವನ ವೀರ್ಯಗಳ ಕುರಿತು ನನಗೆ ಚೆನ್ನಾಗಿ ಗೊತ್ತಿರುವುದರಿಂದಲೇ ನಾನು ಅವನನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದೇನೆ! ಪತಂಗವು ಅಗ್ನಿಯಲ್ಲಿ ಹೋಗಿ ಬೀಳುವಂತಲ್ಲ!
08027057a ಅಸ್ತಿ ಚಾಯಮಿಷುಃ ಶಲ್ಯ ಸುಪುಂಖೋ ರಕ್ತಭೋಜನಃ|
08027057c ಏಕತೂಣೀಶಯಃ ಪತ್ರೀ ಸುಧೌತಃ ಸಮಲಂಕೃತಃ||
ಶಲ್ಯ! ನನ್ನಲ್ಲೊಂದು ಚೆನ್ನಾಗಿ ಶುದ್ಧಗೊಳಿಸಲ್ಪಟ್ಟ, ರಣಹದ್ದಿನ ರೆಕ್ಕೆಗಳಿಂದ ಸುಲಂಕೃತವಾಗಿರುವ ರಕ್ತವೇ ಭೋಜನವಾಗಿರುವ ಒಂದು ಬಾಣವಿದೆ. ಇದನ್ನು ಪ್ರತ್ಯೇಕವಾಗಿ ತೂಣೀರದಲ್ಲಿ ಇಟ್ಟುಕೊಂಡಿದ್ದೇನೆ!
08027058a ಶೇತೇ ಚಂದನಪೂರ್ಣೇನ ಪೂಜಿತೋ ಬಹುಲಾಃ ಸಮಾಃ|
08027058c ಆಹೇಯೋ ವಿಷವಾನುಗ್ರೋ ನರಾಶ್ವದ್ವಿಪಸಂಘಹಾ||
ಅನೇಕ ವರ್ಷಗಳಿಂದಲೂ ಚಂದನಲೇಪದಿಂದ ಪೂಜೆಗೊಳ್ಳುತ್ತಿರುವ ನರಾಶ್ವಗಜಸಮೂಹಗಳನ್ನು ಒಂದೇ ಪ್ರಯೋಗದಲ್ಲಿ ಧ್ವಂಸಮಾಡಬಲ್ಲ ಉಗ್ರ ವಿಷವಾನ್ ಬಾಣವು ಗಂಧದ ಪುಡಿಯಲ್ಲಿಯೇ ಮಲಗಿದೆ.
08027059a ಏಕವೀರೋ ಮಹಾರೌದ್ರಸ್ತನುತ್ರಾಸ್ಥಿವಿದಾರಣಃ|
08027059c ನಿರ್ಭಿಂದ್ಯಾಂ ಯೇನ ರುಷ್ಟೋಽಹಮಪಿ ಮೇರುಂ ಮಹಾಗಿರಿಂ||
ನನ್ನಲ್ಲಿರುವ ಈ ಸರ್ಪಾಸ್ತ್ರವು ಒಬ್ಬನೇ ವೀರನನ್ನು ಸಂಹರಿಸುವಂಥದ್ದು. ಮಹಾರೌದ್ರವಾದ ಈ ಬಾಣವು ಕವಚ-ಅಸ್ಥಿಗಳನ್ನು ಸೀಳಿಕೊಂಡು ಹೋಗಬಲ್ಲದು. ಕ್ರುದ್ಧನಾದರೆ ಇದರಿಂದ ಮಹಾಗಿರಿ ಮೇರುವನ್ನೇ ಭೇದಿಸಬಲ್ಲೆ!
08027060a ತಮಹಂ ಜಾತು ನಾಸ್ಯೇಯಮನ್ಯಸ್ಮಿನ್ಫಲ್ಗುನಾದೃತೇ|
08027060c ಕೃಷ್ಣಾದ್ವಾ ದೇವಕೀಪುತ್ರಾತ್ಸತ್ಯಂ ಚಾತ್ರ ಶೃಣುಷ್ವ ಮೇ||
ಫಲ್ಗುಣ ಮತ್ತು ದೇವಕೀಪುತ್ರ ಈ ಇಬ್ಬರು ಕೃಷ್ಣರ ಹೊರತು ಬೇರೆ ಯಾರಮೇಲೂ ಇದನ್ನು ನಾನು ಪ್ರಯೋಗಿಸುವುದಿಲ್ಲ ಎಂಬ ಈ ಸತ್ಯವನ್ನು ನೀನು ಕೇಳಿಕೋ!
08027061a ತೇನಾಹಮಿಷುಣಾ ಶಲ್ಯ ವಾಸುದೇವಧನಂಜಯೌ|
08027061c ಯೋತ್ಸ್ಯೇ ಪರಮಸಂಕ್ರುದ್ಧಸ್ತತ್ಕರ್ಮ ಸದೃಶಂ ಮಮ||
ಅಂತಹ ಬಾಣವಿದೆ ಎನ್ನುವ ಧೈರ್ಯದಿಂದಲೇ ನಾನು ವಾಸುದೇವ-ಧನಂಜಯರೊಡನೆ ಯುದ್ಧಮಾಡಲು ಹೊರಟಿದ್ದೇನೆ. ಇದು ಪರಮಸಂಕ್ರುದ್ಧನಾದ ನನಗೆ ತಕ್ಕುದಾಗಿಯೇ ಇದೆ.
08027062a ಸರ್ವೇಷಾಂ ವಾಸುದೇವಾನಾಂ ಕೃಷ್ಣೇ ಲಕ್ಷ್ಮೀಃ ಪ್ರತಿಷ್ಠಿತಾ|
08027062c ಸರ್ವೇಷಾಂ ಪಾಂಡುಪುತ್ರಾಣಾಂ ಜಯಃ ಪಾರ್ಥೇ ಪ್ರತಿಷ್ಠಿತಃ|
08027062e ಉಭಯಂ ತತ್ಸಮಾಸಾದ್ಯ ಕೋಽತಿವರ್ತಿತುಮರ್ಹತಿ||
ವಾಸುದೇವರ ಸರ್ವ ಸಂಪತ್ತೂ ಕೃಷ್ಣನಲ್ಲಿ ಪ್ರತಿಷ್ಠಿತವಾಗಿವೆ. ಹಾಗೆಯೇ ಪಾಂಡುಪುತ್ರರ ಎಲ್ಲರ ಜಯವೂ ಪಾರ್ಥ ಅರ್ಜುನನಲ್ಲಿ ಪ್ರತಿಷ್ಠಿತವಾಗಿದೆ. ಅಂತಹ ಇಬ್ಬರನ್ನೂ ಎದುರಿಸಿ ಯಾರು ತಾನೇ ಹಿಂದಿರುಗಿ ಬರಬಲ್ಲರು?
08027063a ತಾವೇತೌ ಪುರುಷವ್ಯಾಘ್ರೌ ಸಮೇತೌ ಸ್ಯಂದನೇ ಸ್ಥಿತೌ|
08027063c ಮಾಮೇಕಮಭಿಸಂಯಾತೌ ಸುಜಾತಂ ಶಲ್ಯ ಪಶ್ಯ ಮೇ||
ಶಲ್ಯ! ಅವರಿಬ್ಬರೂ ಪುರುಷವ್ಯಾಘ್ರರೂ ಒಟ್ಟಿಗೇ ರಥದಲ್ಲಿ ಕುಳಿತು ನಾನೊಬ್ಬನೊಡನೆಯೇ ಯುದ್ಧಮಾಡಲು ಬರುತ್ತಾರೆ. ನನ್ನ ಜನ್ಮವು ಎಷ್ಟು ಶ್ರೇಷ್ಠವೆನ್ನುವುದೆಂದು ನೀನೇ ನೋಡು!
08027064a ಪಿತೃಷ್ವಸಾಮಾತುಲಜೌ ಭ್ರಾತರಾವಪರಾಜಿತೌ|
08027064c ಮಣೀ ಸೂತ್ರ ಇವ ಪ್ರೋತೌ ದ್ರಷ್ಟಾಸಿ ನಿಹತೌ ಮಯಾ||
ಸೋದರಮಾವ ಮತ್ತು ಸೋತರತ್ತೆಯ ಮಕ್ಕಳಾಗಿ ಸಹೋದರರಂತೆ ಮತ್ತು ದಾರದಲ್ಲಿ ಪೋಣಿಸಿದ ಮಣಿಗಳಂತೆ ಒಟ್ಟಿಗೇ ಇರುವ ಅವರಿಬ್ಬರೂ ನನ್ನಿಂದ ಹತರಾಗುವುದನ್ನು ನೋಡುವೆಯಂತೆ!
08027065a ಅರ್ಜುನೇ ಗಾಂಡಿವಂ ಕೃಷ್ಣೇ ಚಕ್ರಂ ತಾರ್ಕ್ಷ್ಯಕಪಿಧ್ವಜೌ|
08027065c ಭೀರೂಣಾಂ ತ್ರಾಸಜನನೌ ಶಲ್ಯ ಹರ್ಷಕರೌ ಮಮ||
ಶಲ್ಯ! ಹೇಡಿಗಳಿಗೆ ನಡುಗನ್ನು ಹುಟ್ಟಿಸುವ ಅರ್ಜುನನ ಗಾಂಡೀವ, ಕೃಷ್ಣನ ಚಕ್ರ, ಗರುಡ ಮತ್ತು ಕಪಿಧ್ವಜಗಳು ನನಗೆ ಹರ್ಷವನ್ನುಂಟು ಮಾಡುತ್ತವೆ!
08027066a ತ್ವಂ ತು ದುಷ್ಪ್ರಕೃತಿರ್ಮೂಢೋ ಮಹಾಯುದ್ಧೇಷ್ವಕೋವಿದಃ|
08027066c ಭಯಾವತೀರ್ಣಃ ಸಂತ್ರಾಸಾದಬದ್ಧಂ ಬಹು ಭಾಷಸೇ||
ನೀನಾದರೋ ದುಷ್ಟಸ್ವಭಾವದವನು. ಮೂಢನು. ಮಹಾಯುದ್ಧಗಳ ಕುರಿತು ತಿಳಿಯದವನು. ಭಯದಿಂದ ತತ್ತರಿಸಿದ್ದೀಯೆ! ಅದರಿಂದಾಗಿ ಬಹಳ ಅಬದ್ಧವಾಗಿ ಮಾತನಾಡುತ್ತಿರುವೆ!
08027067a ಸಂಸ್ತೌಷಿ ತ್ವಂ ತು ಕೇನಾಪಿ ಹೇತುನಾ ತೌ ಕುದೇಶಜ|
08027067c ತೌ ಹತ್ವಾ ಸಮರೇ ಹಂತಾ ತ್ವಾಮದ್ಧಾ ಸಹಬಾಂಧವಂ||
ಕೆಟ್ಟದೇಶದಲ್ಲಿ ಹುಟ್ಟಿದವನೇ! ಅವರಿಬ್ಬರನ್ನೂ ನೀನು ಯಾವುದೋ ಸ್ವಾರ್ಥ ಕಾರಣದಿಂದಲೇ ಸ್ತುತಿಸುತ್ತಿರುವೆ! ಇಂದು ನಾನು ಸಮರದಲ್ಲಿ ಅವರಿಬ್ಬರನ್ನೂ ಸಂಹರಿಸಿ ಬಾಂಧವರೊಂದಿಗೆ ನಿನ್ನನ್ನೂ ಸಂಹರಿಸುತ್ತೇನೆ!
08027068a ಪಾಪದೇಶಜ ದುರ್ಬುದ್ಧೇ ಕ್ಷುದ್ರ ಕ್ಷತ್ರಿಯಪಾಂಸನ|
08027068c ಸುಹೃದ್ಭೂತ್ವಾ ರಿಪುಃ ಕಿಂ ಮಾಂ ಕೃಷ್ಣಾಭ್ಯಾಂ ಭೀಷಯನ್ನಸಿ||
ಪಾಪದೇಶದಲ್ಲಿ ಹುಟ್ಟಿದವನೇ! ದುರ್ಬುದ್ಧೇ! ಕ್ಷುದ್ರ! ಕ್ಷತ್ರಿಯಪಾಂಸನ! ಸುಹೃದಯನಾಗಿದ್ದುಕೊಂಡು ನೀನು ಶತ್ರುಗಳಾದ ಕೃಷ್ಣಾರ್ಜುನರ ಕುರಿತು ನನ್ನನ್ನೇಕೆ ಹೆದರಿಸುತ್ತಿದ್ದೀಯೆ?
08027069a ತೌ ವಾ ಮಮಾದ್ಯ ಹಂತಾರೌ ಹಂತಾಸ್ಮಿ ಸಮರೇ ಸ್ಥಿತೌ|
08027069c ನಾಹಂ ಬಿಭೇಮಿ ಕೃಷ್ಣಾಭ್ಯಾಂ ವಿಜಾನನ್ನಾತ್ಮನೋ ಬಲಂ||
ಅವರಾದರೋ ಇಂದು ನನ್ನನ್ನು ಸಂಹರಿಸುತ್ತಾರೆ ಅಥವಾ ನಾನಾದರೋ ಸಮರದಲ್ಲಿರುವ ಅವರಿಬ್ಬರನ್ನೂ ಸಂಹರಿಸುತ್ತೇನೆ. ನನ್ನ ಬಲವನ್ನು ಚೆನ್ನಾಗಿ ತಿಳಿದುಕೊಂಡಿರುವ ನಾನು ಕೃಷ್ಣಾರ್ಜುನರಿಗೆ ಹೆದರುವವನಲ್ಲ!
08027070a ವಾಸುದೇವಸಹಸ್ರಂ ವಾ ಫಲ್ಗುನಾನಾಂ ಶತಾನಿ ಚ|
08027070c ಅಹಮೇಕೋ ಹನಿಷ್ಯಾಮಿ ಜೋಷಮಾಸ್ಸ್ವ ಕುದೇಶಜ||
ಕೆಟ್ಟದೇಶದಲ್ಲಿ ಹುಟ್ಟಿದವನೇ! ಸಹಸ್ರ ವಾಸುದೇವರಾಗಲೀ ಅಥವಾ ನೂರು ಫಲ್ಗುನರಾಗಲೀ ಬಂದರೂ ಕೂಡ ನಾನೊಬ್ಬನೇ ಅವರನ್ನು ಸಂಹರಿಸುತ್ತೇನೆ! ನೀನು ಮಾತ್ರ ಬಾಯಿಮುಚ್ಚಿಕೋ!
08027071a ಸ್ತ್ರಿಯೋ ಬಾಲಾಶ್ಚ ವೃದ್ಧಾಶ್ಚ ಪ್ರಾಯಃ ಕ್ರೀಡಾಗತಾ ಜನಾಃ|
08027071c ಯಾ ಗಾಥಾಃ ಸಂಪ್ರಗಾಯಂತಿ ಕುರ್ವಂತೋಽಧ್ಯಯನಂ ಯಥಾ|
08027071e ತಾ ಗಾಥಾಃ ಶೃಣು ಮೇ ಶಲ್ಯ ಮದ್ರಕೇಷು ದುರಾತ್ಮಸು||
ಪ್ರಾಯಶಃ ಕ್ರೀಡೆಗೆಂದು ಸ್ತ್ರೀಯರು, ಬಾಲಕರು, ವೃದ್ಧರು ಮತ್ತು ಕಲಿಯುವ ಶಿಷ್ಯ ಜನರು ಒಂದು ಹಾಡನ್ನು ಹಾಡುತ್ತಾರೆ! ಶಲ್ಯ! ದುರಾತ್ಮ ಮದ್ರಕರ ಮೇಲಿರುವ ಈ ಹಾಡನ್ನು ಕೇಳು!
08027072a ಬ್ರಾಹ್ಮಣೈಃ ಕಥಿತಾಃ ಪೂರ್ವಂ ಯಥಾವದ್ರಾಜಸನ್ನಿಧೌ|
08027072c ಶ್ರುತ್ವಾ ಚೈಕಮನಾ ಮೂಢ ಕ್ಷಮ ವಾ ಬ್ರೂಹಿ ವೋತ್ತರಂ||
ಮೂಢ! ಹಿಂದೆ ರಾಜಸನ್ನಿಧಿಗಳಲ್ಲಿ ಬ್ರಾಹ್ಮಣರು ಏನನ್ನು ಹೇಳುತ್ತಿದ್ದರೋ ಅದನ್ನು ಏಕಮನಸ್ಕನಾಗಿ ಕೇಳಿ ಬಾಯಿಮುಚ್ಚು ಅಥವಾ ಅದಕ್ಕೆ ಉತ್ತರವಾಗಿಯಾದರೂ ಮಾತನಾಡು!
08027073a ಮಿತ್ರಧ್ರುಂ ಮದ್ರಕೋ ನಿತ್ಯಂ ಯೋ ನೋ ದ್ವೇಷ್ಟಿ ಸ ಮದ್ರಕಃ|
08027073c ಮದ್ರಕೇ ಸಂಗತಂ ನಾಸ್ತಿ ಕ್ಷುದ್ರವಾಕ್ಯೇ ನರಾಧಮೇ||
“ಮದ್ರದೇಶದವರು ಯಾವಾಗಲೂ ಮಿತ್ರದ್ರೋಹಿಗಳಾಗಿರುತ್ತಾರೆ. ನಿಷ್ಕಾರಣವಾಗಿ ನಮ್ಮನ್ನು ಯಾರಾದರೂ ದ್ವೇಷಿಸಿದರೆ ಅವರು ಹೆಚ್ಚುಭಾಗ ಮದ್ರಕರೇ ಆಗಿರುತ್ತಾರೆ! ಕ್ಷುದ್ರವಾಗಿ ಮಾತನಾಡುವ ನರಾಧಮ ಮದ್ರಕರಲ್ಲಿ ಸೌಹಾರ್ದಭಾವನೆಯು ಇರುವುದೇ ಇಲ್ಲ!
08027074a ದುರಾತ್ಮಾ ಮದ್ರಕೋ ನಿತ್ಯಂ ನಿತ್ಯಂ ಚಾನೃತಿಕೋಽನೃಜುಃ|
08027074c ಯಾವದಂತಂ ಹಿ ದೌರಾತ್ಮ್ಯಂ ಮದ್ರಕೇಷ್ವಿತಿ ನಃ ಶ್ರುತಂ||
ಮದ್ರಕರು ನಿತ್ಯವೂ ದುರಾತ್ಮರು ಮತ್ತು ಸರ್ವದಾ ಕುಟಿಲರೂ ಸುಳ್ಳುಗಾರರೂ ಆಗಿರುತ್ತಾರೆ. ದುರಾತ್ಮತೆಯು ಮದ್ರಕರನ್ನು ಸಾಯುವವರೆಗೂ ಬಿಡುವುದಿಲ್ಲವೆಂದು ನಾವು ಕೇಳಿದ್ದೇವೆ!
08027075a ಪಿತಾ ಮಾತಾ ಚ ಪುತ್ರಶ್ಚ ಶ್ವಶ್ರೂಶ್ವಶುರಮಾತುಲಾಃ|
08027075c ಜಾಮಾತಾ ದುಹಿತಾ ಭ್ರಾತಾ ನಪ್ತಾ ತೇ ತೇ ಚ ಬಾಂದವಾಃ||
08027076a ವಯಸ್ಯಾಭ್ಯಾಗತಾಶ್ಚಾನ್ಯೇ ದಾಸೀದಾಸಂ ಚ ಸಂಗತಂ|
08027076c ಪುಂಭಿರ್ವಿಮಿಶ್ರಾ ನಾರ್ಯಶ್ಚ ಜ್ಞಾತಾಜ್ಞಾತಾಃ ಸ್ವಯೇಚ್ಚಯಾ||
08027077a ಯೇಷಾಂ ಗೃಹೇಷು ಶಿಷ್ಟಾನಾಂ ಸಕ್ತುಮಂತಾಶಿನಾಂ ಸದಾ|
08027077c ಪೀತ್ವಾ ಸೀಧುಂ ಸಗೋಮಾಂಸಂ ನರ್ದಂತಿ ಚ ಹಸಂತಿ ಚ||
08027078a ಯಾನಿ ಚೈವಾಪ್ಯಬದ್ಧಾನಿ ಪ್ರವರ್ತಂತೇ ಚ ಕಾಮತಃ|
08027078c ಕಾಮಪ್ರಲಾಪಿನೋಽನ್ಯೋನ್ಯಂ ತೇಷು ಧರ್ಮಃ ಕಥಂ ಭವೇತ್||
08027079a ಮದ್ರಕೇಷು ವಿಲುಪ್ತೇಷು ಪ್ರಖ್ಯಾತಾಶುಭಕರ್ಮಸು|
08027079c ನಾಪಿ ವೈರಂ ನ ಸೌಹಾರ್ದಂ ಮದ್ರಕೇಷು ಸಮಾಚರೇತ್||
ಹಿಟ್ಟು-ಮೀನುಗಳನ್ನು ತಿನ್ನುವ, ಶಿಷ್ಟಾಚಾರಹೀನ ಮದ್ರಕರ ಮನೆಗಳಲ್ಲಿ ತಂದೆ-ಮಗ-ತಾಯಿ-ಅತ್ತೆ-ಮಾವ-ಸೋದರಮಾವ-ಅಳಿಯ-ಮಗಳು-ಅಣ್ಣತಮ್ಮಂದಿರು-ಮೊಮ್ಮಗ-ಇತರ ಬಾಂಧವರು-ಸ್ನೇಹಿತರು-ಹೊರಗಿನಿಂದ ಬಂದವರು- ದಾಸದಾಸಿಯರು ಇವರೆಲ್ಲರೂ ತಮಗಿಷ್ಟಬಂದಂತೆ ಯಾವುದೇ ಕಟ್ಟುಪಾಡುಗಳೂ ಇಲ್ಲದೇ ಪರಸ್ಪರರೊಡನೆ ವ್ಯವಹರಿಸುತ್ತಾರೆ. ಪರಿಚಿತರು, ಅಪರಿಚಿತರು ಎಂಬ ಬೇಧಗಳಿಲ್ಲದೇ ಸ್ತ್ರೀಯರು ಪುರುಷರೊಂದಿಗೆ ಸ್ವ ಇಚ್ಛೆಯಿಂದ ಬೆರೆಯುತ್ತಾರೆ; ಮದ್ಯಸೇವಿಸಿ ಗೋಮಾಂಸ ತಿಂದು ಕುಣಿಯುತ್ತಾರೆ ಮತ್ತು ಆನಂದಿಸುತ್ತಾರೆ. ಅನ್ಯೋನ್ಯರಲ್ಲಿ ಕಾಮಪ್ರಲಾಪಿಗಳಾದ ಅವರಲ್ಲಿ ಧರ್ಮವು ಹೇಗಿರಬೇಕು? ಮದಿಸಿದ ಮದ್ರಕರು ಅಶುಭಕರ್ಮಗಳಿಗೆ ಪ್ರಖ್ಯಾತರು. ಮದ್ರಕರಲ್ಲಿ ವೈರವನ್ನೂ ಕಟ್ಟಿಕೊಳ್ಳಬಾರದು ಸೌಹಾರ್ದತೆಯನ್ನೂ ಬೆಳೆಸಬಾರದು!
08027080a ಮದ್ರಕೇ ಸಂಗತಂ ನಾಸ್ತಿ ಮದ್ರಕೋ ಹಿ ಸಚಾಪಲಃ|
08027080c ಮದ್ರಕೇಷು ಚ ದುಃಸ್ಪರ್ಶಂ ಶೌಚಂ ಗಾಂದಾರಕೇಷು ಚ||
ಮದ್ರಕರು ಚಪಲರು. ಮದ್ರಕರೊಂದಿಗೆ ಸಂಬಂಧವನ್ನಿಟ್ಟುಕೊಳ್ಳಬಾರದು. ಮದ್ರಕರಲ್ಲಿ ಮತ್ತು ಗಾಂಧಾರದೇಶದವರಲ್ಲಿ ಶೌಚವೆನ್ನುವುದು ಏನೂ ಇಲ್ಲ. ಅವರನ್ನು ಸ್ಪರ್ಷಿಸಲೂ ಬಾರದು!
08027081a ರಾಜಯಾಜಕಯಾಜ್ಯೇನ ನಷ್ಟಂ ದತ್ತಂ ಹವಿರ್ಭವೇತ್|
08027082a ಶೂದ್ರಸಂಸ್ಕಾರಕೋ ವಿಪ್ರೋ ಯಥಾ ಯಾತಿ ಪರಾಭವಂ|
08027082c ತಥಾ ಬ್ರಹ್ಮದ್ವಿಷೋ ನಿತ್ಯಂ ಗಚ್ಚಂತೀಹ ಪರಾಭವಂ||
ರಾಜನೇ ಯಾಜಕನಾಗಿರುವ ಯಾಗದಲ್ಲಿ ನೀಡುವ ದಾನ-ಹವಿಸ್ಸುಗಳು ನಷ್ಟವಾಗುವಂತೆ, ಶೂದ್ರರಿಗೆ ಸಂಸ್ಕಾರಗಳನ್ನು ಮಾಡಿಸುವ ವಿಪ್ರನು ಹೇಗೆ ಪರಾಭವಗೊಳ್ಳುವನೋ ಹಾಗೆ ನಿತ್ಯವೂ ಬ್ರಹ್ಮದ್ವೇಷಿ ಮದ್ರಕರು ಪರಾಭವಹೊಂದುವರು.
08027083a ಮದ್ರಕೇ ಸಂಗತಂ ನಾಸ್ತಿ ಹತಂ ವೃಶ್ಚಿಕತೋ ವಿಷಂ|
08027083c ಆಥರ್ವಣೇನ ಮಂತ್ರೇಣ ಸರ್ವಾ ಶಾಂತಿಃ ಕೃತಾ ಭವೇತ್||
08027084a ಇತಿ ವೃಶ್ಚಿಕದಷ್ಟಸ್ಯ ನಾನಾವಿಷಹತಸ್ಯ ಚ|
ಅಥರ್ವ ಮಂತ್ರದಿಂದ ಶಾಂತಿಮಾಡುವವರೆಲ್ಲರೂ “ಮದ್ರಕರಲ್ಲಿ ಸೌಹಾರ್ದಭಾವವು ಸ್ವಲ್ಪವೂ ಇಲ್ಲದಿರುವಂತೆ ಚೇಳಿನಲ್ಲಿಯೂ ವಿಷವಿಲ್ಲ!” ಎಂದು ಚೇಳಿನ ವಿಷವನ್ನು ಹೋಗಲಾಡಿಸುತ್ತಾ ಹೇಳುತ್ತಾರೆ.
08027084c ಕುರ್ವಂತಿ ಭೇಷಜಂ ಪ್ರಾಜ್ಞಾಃ ಸತ್ಯಂ ತಚ್ಚಾಪಿ ದೃಶ್ಯತೇ|
08027084e ಏವಂ ವಿದ್ವಂ ಜೋಷಮಾಸ್ಸ್ವ ಶೃಣು ಚಾತ್ರೋತ್ತರಂ ವಚಃ||
ತಿಳಿದ ವೈದ್ಯರು ಈ ರೀತಿಯಲ್ಲಿ ಮಾಡಲು ಸತ್ಯವಾಗಿಯೂ ಚೇಳುವಿನ ವಿಷವು ಕಡಿಮೆಯಾಗುವುದು ಕಾಣುತ್ತದೆ. ಇವಲ್ಲದೇ ಮದ್ರಕರ ಕುರಿತು ಇನ್ನೂ ಇತರ ವಿಷಯಗಳಿವೆ. ಸಾವಧಾನಚಿತ್ತನಾಗಿ ಕೇಳು.
08027085a ವಾಸಾಂಸ್ಯುತ್ಸೃಜ್ಯ ನೃತ್ಯಂತಿ ಸ್ತ್ರಿಯೋ ಯಾ ಮದ್ಯಮೋಹಿತಾಃ|
08027085c ಮಿಥುನೇಽಸಂಯತಾಶ್ಚಾಪಿ ಯಥಾಕಾಮಚರಾಶ್ಚ ತಾಃ|
08027085e ತಾಸಾಂ ಪುತ್ರಃ ಕಥಂ ಧರ್ಮಂ ಮದ್ರಕೋ ವಕ್ತುಮರ್ಹತಿ||
ಮದ್ಯಮೋಹಿತರಾದ ಮದ್ರಕ ಸ್ತ್ರೀಯರು ವಸ್ತ್ರಗಳನ್ನೂ ಕಳಚಿ ನರ್ತಿಸುತ್ತಾರೆ. ಸಂಭೋಗದಲ್ಲಿ ಕೂಡ ಅವರು ಯಾವುದೇ ಸಂಯಮಗಳಿಲ್ಲದೇ ಬೇಕಾದಂತೆ ವರ್ತಿಸುತ್ತಾರೆ. ಅಂಥಹ ಸ್ತ್ರೀಯರಲ್ಲಿ ಹುಟ್ಟಿದ ಮದ್ರಕ ಪುತ್ರನು ಹೇಗೆ ತಾನೇ ಇತರರಿಗೆ ಧರ್ಮದ ಕುರಿತು ಹೇಳಲು ಅರ್ಹನಾಗುತ್ತಾನೆ?
08027086a ಯಾಸ್ತಿಷ್ಠಂತ್ಯಃ ಪ್ರಮೇಹಂತಿ ಯಥೈವೋಷ್ಟ್ರೀದಶೇರಕೇ|
08027086c ತಾಸಾಂ ವಿಭ್ರಷ್ಟಲಜ್ಜಾನಾಂ ನಿರ್ಲಜ್ಜಾನಾಂ ತತಸ್ತತಃ|
08027086e ತ್ವಂ ಪುತ್ರಸ್ತಾದೃಶೀನಾಂ ಹಿ ಧರ್ಮಂ ವಕ್ತುಮಿಹೇಚ್ಚಸಿ||
ಮರುಭೂಮಿಯಲ್ಲಿರುವ ಒಂಟೆಗಳಂತೆ ನಿಂತುಕೊಂಡೇ ಮೂತ್ರವಿಸರ್ಜನೆ ಮಾಡುವ ಧರ್ಮಭ್ರಷ್ಟ ನಿರ್ಲಜ್ಜ ಮದ್ರರ ಸ್ತ್ರೀಯರಲ್ಲಿ ಹುಟ್ಟಿದ ನೀನು ನನಗೆ ಧರ್ಮೋಪದೇಶಮಾಡಲು ಹೊರಟಿರುವೆ!
08027087a ಸುವೀರಕಂ ಯಾಚ್ಯಮಾನಾ ಮದ್ರಕಾ ಕಷತಿ ಸ್ಫಿಜೌ|
08027087c ಅದಾತುಕಾಮಾ ವಚನಮಿದಂ ವದತಿ ದಾರುಣಂ||
08027088a ಮಾ ಮಾ ಸುವೀರಕಂ ಕಶ್ಚಿದ್ಯಾಚತಾಂ ದಯಿತೋ ಮಮ|
08027088c ಪುತ್ರಂ ದದ್ಯಾಂ ಪ್ರತಿಪದಂ ನ ತು ದದ್ಯಾಂ ಸುವೀರಕಂ||
ಮದ್ರದೇಶದ ಸ್ತ್ರೀಯರಲ್ಲಿ ಯಾರಾದರೂ ಗಂಜಿಯನ್ನು ಕೇಳಿದರೆ ಕೊಡಲು ಇಷ್ಟವಿಲ್ಲದಿದ್ದರೆ ತನ್ನ ನಿತಂಬಗಳನ್ನು ಕೆರೆದುಕೊಳ್ಳುತ್ತಾ “ನನ್ನನ್ನು ಯಾವನೂ ಗಂಜಿಯನ್ನು ಕೇಳಬಾರದು ಏಕೆಂದರೆ ಅದು ನನಗೆ ಅತ್ಯಂತ ಪ್ರಿಯವಾದುದು! ಬೇಕಾದರೆ ಮಗನನ್ನಾದರೂ ಪತಿಯನ್ನಾದರೂ ಕೊಟ್ಟುಬಿಡುತ್ತೇನೆ. ಆದರೆ ಎಲ್ಲಕ್ಕಿಂತಲೂ ಪ್ರಿಯವಾದ ಗಂಜಿಯನ್ನು ಮಾತ್ರ ಕೊಡುವುದಿಲ್ಲ!” ಎಂದು ಕಠೋರವಾಗಿ ಮಾತನಾಡುವಳು.
08027089a ನಾರ್ಯೋ ಬೃಹತ್ಯೋ ನಿರ್ಹ್ರೀಕಾ ಮದ್ರಕಾಃ ಕಂಬಲಾವೃತಾಃ|
08027089c ಘಸ್ಮರಾ ನಷ್ಟಶೌಚಾಶ್ಚ ಪ್ರಾಯ ಇತ್ಯನುಶುಶ್ರುಮ||
ಮದ್ರಕ ಸ್ತ್ರೀಯರು ಬಿಳುಪಾಗಿರುತ್ತಾರೆ, ಸ್ಥೂಲವಾಗಿರುತ್ತಾರೆ, ನಿರ್ಲಜ್ಜರಾಗಿರುತ್ತಾರೆ ಮತ್ತು ಕಂಬಳಿಗಳನ್ನು ಹೊದ್ದಿರುತ್ತಾರೆ. ಹೊಟ್ಟೆಬಾಕರಾಗಿದ್ದು ಶೌಚಾಚಾರಗಳನ್ನು ಬಿಟ್ಟಿರುತ್ತಾರೆ ಎಂದು ಕೇಳಿದ್ದೇವೆ!
08027090a ಏವಮಾದಿ ಮಯಾನ್ಯೈರ್ವಾ ಶಕ್ಯಂ ವಕ್ತುಂ ಭವೇದ್ಬಹು|
08027090c ಆ ಕೇಶಾಗ್ರಾನ್ನಖಾಗ್ರಾಚ್ಚ ವಕ್ತವ್ಯೇಷು ಕುವರ್ತ್ಮಸು||
ಕೂದಲಿನಿಂದ ಉಗುರಿನವರೆಗೂ ಮದ್ರದೇಶದ ಸ್ತ್ರೀ-ಪುರುಷರ ಕುರಿತು ನಾವು ಅಥವಾ ಇತರರು ಇನ್ನೂ ಅನೇಕ ವಿಷಯಗಳನ್ನು ಹೇಳಬಹುದು!
08027091a ಮದ್ರಕಾಃ ಸಿಂದುಸೌವೀರಾ ಧರ್ಮಂ ವಿದ್ಯುಃ ಕಥಂ ತ್ವಿಹ|
08027091c ಪಾಪದೇಶೋದ್ಭವಾ ಮ್ಲೇಚ್ಚಾ ಧರ್ಮಾಣಾಮವಿಚಕ್ಷಣಾಃ||
ಮದ್ರ,-ಸಿಂಧು ಮತ್ತು ಸೌವೀರದೇಶಗಳಲ್ಲಿ ಜನರು ಧರ್ಮವೆಂದರೆ ಏನೆನ್ನುವುದನ್ನೇ ತಿಳಿಯರು! ಪಾಪದೇಶಗಳಲ್ಲಿ ಹುಟ್ಟಿದ ಆ ಮ್ಲೇಚ್ಛರಿಗೆ ಧರ್ಮವೆಂದರೆ ಏನೆನ್ನುವುದನ್ನೇ ತಿಳಿಯದು!
08027092a ಏಷ ಮುಖ್ಯತಮೋ ಧರ್ಮಃ ಕ್ಷತ್ರಿಯಸ್ಯೇತಿ ನಃ ಶ್ರುತಂ|
08027092c ಯದಾಜೌ ನಿಹತಃ ಶೇತೇ ಸದ್ಭಿಃ ಸಮಭಿಪೂಜಿತಃ||
ಯುದ್ಧದಲ್ಲಿ ಮಡಿದು ಸತ್ಪುರುಷರಿಂದ ಸುಪೂಜಿತನಾಗಿ ರಣದಲ್ಲಿ ಮಲಗುವುದೇ ಕ್ಷತ್ರಿಯನ ಮುಖ್ಯಧರ್ಮವೆಂದು ನಾವು ತಿಳಿದುಕೊಂಡಿದ್ದೇವೆ.
08027093a ಆಯುಧಾನಾಂ ಸಂಪರಾಯೇ ಯನ್ಮುಚ್ಯೇಯಮಹಂ ತತಃ|
08027093c ನ ಮೇ ಸ ಪ್ರಥಮಃ ಕಲ್ಪೋ ನಿಧನೇ ಸ್ವರ್ಗಮಿಚ್ಚತಃ||
ಆಯುಧಗಳನ್ನು ಪಡೆದು ಪ್ರಯೋಗಿಸುವ ನನಗೆ ಪ್ರಥಮ ಸಂಕಲ್ಪವು ಯುದ್ಧದಲ್ಲಿ ನಿಧನ ಮತ್ತು ಸ್ವರ್ಗ!
08027094a ಸೋಽಹಂ ಪ್ರಿಯಃ ಸಖಾ ಚಾಸ್ಮಿ ಧಾರ್ತರಾಷ್ಟ್ರಸ್ಯ ಧೀಮತಃ|
08027094c ತದರ್ಥೇ ಹಿ ಮಮ ಪ್ರಾಣಾ ಯಚ್ಚ ಮೇ ವಿದ್ಯತೇ ವಸು||
ಧೀಮತ ಧಾರ್ತರಾಷ್ಟ್ರ ದುರ್ಯೋಧನನ ಪ್ರಿಯ ಸಖನಾಗಿದ್ದೇನೆ. ಅವನಿಗಾಗಿಯೇ ನನ್ನ ಈ ಪ್ರಾಣ ಮತ್ತು ಸಂಪತ್ತು ಎನ್ನುವುದನ್ನು ತಿಳಿ!
08027095a ವ್ಯಕ್ತಂ ತ್ವಮಪ್ಯುಪಹಿತಃ ಪಾಂಡವೈಃ ಪಾಪದೇಶಜ|
08027095c ಯಥಾ ಹ್ಯಮಿತ್ರವತ್ಸರ್ವಂ ತ್ವಮಸ್ಮಾಸು ಪ್ರವರ್ತಸೇ||
ಪಾಪದೇಶದಲ್ಲಿ ಹುಟ್ಟಿದವನೇ! ನಮ್ಮಲ್ಲಿಯೇ ಅಮಿತ್ರತ್ವವನ್ನು ಉಂಟುಮಾಡಲು ಪಾಂಡವರೇ ನಿನ್ನನ್ನು ನಮ್ಮ ಪಕ್ಷದಲ್ಲಿ ಇರಿಸಿರುವರೆಂದು ವ್ಯಕ್ತವಾಗುತ್ತಿದೆ. ಶತ್ರುವಿನಂತೆಯೇ ನೀನು ವರ್ತಿಸುತ್ತಿರುವೆ!
08027096a ಕಾಮಂ ನ ಖಲು ಶಕ್ಯೋಽಹಂ ತ್ವದ್ವಿಧಾನಾಂ ಶತೈರಪಿ|
08027096c ಸಂಗ್ರಾಮಾದ್ವಿಮುಖಃ ಕರ್ತುಂ ಧರ್ಮಜ್ಞ ಇವ ನಾಸ್ತಿಕೈಃ||
ನಾಸ್ತಿಕನಿಗೆ ಧರ್ಮಜ್ಞನನ್ನು ಧರ್ಮದಿಂದ ವಿಮುಖನನ್ನಾಗಿ ಮಾಡಲು ಅಸಾಧ್ಯವು ಹೇಗೋ ಹಾಗೆ ನಿನ್ನಂಥಹ ನೂರು ಜನರು ಎಷ್ಟೇ ಬಯಸಿದರೂ ನನ್ನನ್ನು ಸಂಗ್ರಾಮದಿಂದ ವಿಮುಖನನ್ನಾಗಿ ಮಾಡಲು ಸಾಧ್ಯವಿಲ್ಲ!
08027097a ಸಾರಂಗ ಇವ ಘರ್ಮಾರ್ತಃ ಕಾಮಂ ವಿಲಪ ಶುಷ್ಯ ಚ|
08027097c ನಾಹಂ ಭೀಷಯಿತುಂ ಶಕ್ಯಃ ಕ್ಷತ್ರವೃತ್ತೇ ವ್ಯವಸ್ಥಿತಃ||
ಬಿಸಿಲಿನ ತಾಪದಿಂದ ಬಳಲಿದ ಜಿಂಕೆಯಂತೆ ನೀನು ಬೇಕಾದಷ್ಟು ವಿಲಪಿಸು. ಕ್ಷತ್ರಿಯ ಧರ್ಮದಲ್ಲಿ ನಿರತನಾಗಿರುವ ನನ್ನನ್ನು ಮಾತ್ರ ನೀನು ಭಯಪಡಿಸಲಾರೆ!
08027098a ತನುತ್ಯಜಾಂ ನೃಸಿಂಹಾನಾಮಾಹವೇಷ್ವನಿವರ್ತಿನಾಂ|
08027098c ಯಾ ಗತಿರ್ಗುರುಣಾ ಪ್ರಾಂ ಮೇ ಪ್ರೋಕ್ತಾ ರಾಮೇಣ ತಾಂ ಸ್ಮರ||
ಯುದ್ಧದಿಂದ ಹಿಂದಿರುಗದೇ ದೇಹತ್ಯಾಗಮಾಡುವ ನರಸಿಂಹರಿಗೆ ಯಾವ ಸದ್ಗತಿಯು ದೊರೆಯುತ್ತದೆ ಎನ್ನುವುದನ್ನು ನನ್ನ ಗುರು ಪರಶುರಾಮನು ಹೇಳಿದುದು ನೆನಪಿಗೆ ಬರುತ್ತಿದೆ!
08027099a ಸ್ವೇಷಾಂ ತ್ರಾಣಾರ್ಥಮುದ್ಯುಕ್ತಂ ವಧಾಯ ದ್ವಿಷತಾಮಪಿ|
08027099c ವಿದ್ಧಿ ಮಾಮಾಸ್ಥಿತಂ ವೃತ್ತಂ ಪೌರೂರವಸಮುತ್ತಮಂ||
ಪುರೂರವನ ಉತ್ತಮ ನಡತೆಯಂತೆ ನನ್ನವರನ್ನು ಉದ್ಧರಿಸಲೂ ಶತ್ರುಗಳನ್ನು ವಧಿಸಲೂ ನಾನು ಸನ್ನದ್ಧನಾಗಿ ನಿಂತಿದ್ದೇನೆ ಎನ್ನುವುದನ್ನು ತಿಳಿದುಕೋ!
08027100a ನ ತದ್ಭೂತಂ ಪ್ರಪಶ್ಯಾಮಿ ತ್ರಿಷು ಲೋಕೇಷು ಮದ್ರಕ|
08027100c ಯೋ ಮಾಮಸ್ಮಾದಭಿಪ್ರಾಯಾದ್ವಾರಯೇದಿತಿ ಮೇ ಮತಿಃ||
ಮದ್ರಕ! ನನ್ನ ಈ ಅಭಿಪ್ರಾಯದಿಂದ ಚ್ಯುತಗೊಳಿಸುವ ಯಾವುದೇ ಪ್ರಾಣಿಯನ್ನು ಈ ಮೂರು ಲೋಕಗಳಲ್ಲಿಯೂ ನಾನು ಕಂಡಿಲ್ಲ!
08027101a ಏವಂ ವಿದ್ವಂ ಜೋಷಮಾಸ್ಸ್ವ ತ್ರಾಸಾತ್ಕಿಂ ಬಹು ಭಾಷಸೇ|
08027101c ಮಾ ತ್ವಾ ಹತ್ವಾ ಪ್ರದಾಸ್ಯಾಮಿ ಕ್ರವ್ಯಾದ್ಭ್ಯೋ ಮದ್ರಕಾಧಮ||
ಮದ್ರಕಾಧಮ! ಇದನ್ನು ತಿಳಿದವನಾದರೂ ನೀನು ಏಕೆ ಅಧಿಕವಾಗಿ ಮಾತನಾಡುತ್ತೀಯೆ? ಸುಮ್ಮನೇ ಕುಳಿತುಕೋ! ನೀನು ಮಾತನಾಡುವುದನ್ನು ಇನ್ನೂ ಮುಂದುವರಿಸಿದರೆ ನಿನ್ನನ್ನು ಕೊಂದು ಮಾಂಸಾಶೀ ಪ್ರಾಣಿಗಳಿಗೆ ಕೊಡುತ್ತೇನೆ. ಎಚ್ಚರದಿಂದಿರು!
08027102a ಮಿತ್ರಪ್ರತೀಕ್ಷಯಾ ಶಲ್ಯ ಧಾರ್ತರಾಷ್ಟ್ರಸ್ಯ ಚೋಭಯೋಃ|
08027102c ಅಪವಾದತಿತಿಕ್ಷಾಭಿಸ್ತ್ರಿಭಿರೇತೈರ್ಹಿ ಜೀವಸಿ||
ಶಲ್ಯ! ಧಾರ್ತರಾಷ್ಟ್ರನ ಗೆಲುವಿನ ಮೇಲೆ ನನ್ನ ಮನಸ್ಸನ್ನು ಕೇಂದ್ರೀಕರಿಸಿರುವುದರಿಂದ ಮತ್ತು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲವೆಂಬ ಅಪಮಾನವು ಬರಬಾರದು ಎಂಬ ಭಯದಿಂದ ನಾನು ನಿನ್ನನ್ನು ಕೊಲ್ಲದೇ ಇನ್ನೂ ಜೀವದಿಂದಿರಿಸಿದ್ದೇನೆ!
08027103a ಪುನಶ್ಚೇದೀದೃಶಂ ವಾಕ್ಯಂ ಮದ್ರರಾಜ ವದಿಷ್ಯಸಿ|
08027103c ಶಿರಸ್ತೇ ಪಾತಯಿಷ್ಯಾಮಿ ಗದಯಾ ವಜ್ರಕಲ್ಪಯಾ||
ಮದ್ರರಾಜ! ಪುನಃ ಈ ರೀತಿಯ ಮಾತುಗಳನ್ನು ನೀನು ಆಡಿದರೆ ವಜ್ರಸಮಾನ ಗದೆಯಿಂದ ನಿನ್ನ ಶಿರಸ್ಸನ್ನು ಬೀಳಿಸುತ್ತೇನೆ!
08027104a ಶ್ರೋತಾರಸ್ತ್ವಿದಮದ್ಯೇಹ ದ್ರಷ್ಟಾರೋ ವಾ ಕುದೇಶಜ|
08027104c ಕರ್ಣಂ ವಾ ಜಘ್ನತುಃ ಕೃಷ್ಣೌ ಕರ್ಣೋ ವಾಪಿ ಜಘಾನ ತೌ||
ಕೆಟ್ಟದೇಶದಲ್ಲಿ ಹುಟ್ಟಿದವನೇ! ಕರ್ಣನು ಸಾಯುತ್ತಾನೆ ಅಥವಾ ಕರ್ಣನು ಕೃಷ್ಣಾರ್ಜುನರನ್ನು ಸಂಹರಿಸುತ್ತಾನೆ ಎನ್ನುವುದನ್ನು ಇಂದು ಜನರು ಕೇಳುತ್ತಾರೆ ಮತ್ತು ನೋಡುತ್ತಾರೆ!”
08027105a ಏವಮುಕ್ತ್ವಾ ತು ರಾಧೇಯಃ ಪುನರೇವ ವಿಶಾಂ ಪತೇ|
08027105c ಅಬ್ರವೀನ್ಮದ್ರರಾಜಾನಂ ಯಾಹಿ ಯಾಹೀತ್ಯಸಂಭ್ರಮಂ||
ವಿಶಾಂಪತೇ! ಹೀಗೆ ಹೇಳಿ ರಾಧೇಯನು ಆತಂಕಗೊಳ್ಳದೇ ಮದ್ರರಾಜನಿಗೆ ಪುನಃ “ಮುಂದೆ ಹೋಗು! ಬೇಗ ಹೋಗು!” ಎಂದು ಹೇಳಿದನು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಮದ್ರಾಧಿಪಸಂವಾದೇ ಸಪ್ತವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಮದ್ರಾಧಿಪಸಂವಾದ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.