ಕರ್ಣ ಪರ್ವ
೧೮
ಉಲೂಕನಿಂದ ಯುಯುತ್ಸುವಿನ ಸೋಲು (೧-೧೧). ಕೌರವ ಶ್ರುತಕೀರ್ತಿ ಮತ್ತು ದ್ರೌಪದೇಯ ಶತಾನೀಕರ ಯುದ್ಧ (೧೨-೧೬). ಸುತಸೋಮ-ಶಕುನಿಯರ ಯುದ್ಧ; ಸುತಸೋಮನ ಸೋಲು (೧೭-೪೦). ಕೃಪ-ಧೃಷ್ಟದ್ಯುಮ್ನರ ಯುದ್ಧ; ದೃಷ್ಟದ್ಯುಮ್ನನ ಸೋಲು (೪೧-೬೦). ಕೃತವರ್ಮ-ಶಿಖಂಡಿಯರ ಯುದ್ಧ; ಶಿಖಂಡಿಯು ಮೂರ್ಛೆಹೋದುದು (೬೧-೭೬).
08018001 ಸಂಜಯ ಉವಾಚ|
08018001a ಯುಯುತ್ಸುಂ ತವ ಪುತ್ರಂ ತು ಪ್ರಾದ್ರವಂತಂ ಮಹದ್ಬಲಂ|
08018001c ಉಲೂಕೋಽಭ್ಯಪತತ್ತೂರ್ಣಂ ತಿಷ್ಠ ತಿಷ್ಠೇತಿ ಚಾಬ್ರವೀತ್||
ಸಂಜಯನು ಹೇಳಿದನು: “ಮಹಾಸೇನೆಯನ್ನು ಓಡಿಹೋಗುವಂತೆ ಮಾಡುತ್ತಿದ್ದ ನಿನ್ನ ಪುತ್ರ ಯುಯುತ್ಸುವನ್ನು ಉಲೂಕನು ತಕ್ಷಣವೇ ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು.
08018002a ಯುಯುತ್ಸುಸ್ತು ತತೋ ರಾಜಂ ಶಿತಧಾರೇಣ ಪತ್ರಿಣಾ|
08018002c ಉಲೂಕಂ ತಾಡಯಾಮಾಸ ವಜ್ರೇಣೇಂದ್ರ ಇವಾಚಲಂ||
ರಾಜನ್! ಆಗ ಯುಯುತ್ಸುವಾದರೋ ನಿಶಿತ ಬಾಣಗಳಿಂದ ಇಂದ್ರನು ವಜ್ರದಿಂದ ಪರ್ವತವನ್ನು ಹೊಡೆಯುವಂತೆ ಉಲೂಕನನ್ನು ಹೊಡೆದನು.
08018003a ಉಲೂಕಸ್ತು ತತಃ ಕ್ರುದ್ಧಸ್ತವ ಪುತ್ರಸ್ಯ ಸಂಯುಗೇ|
08018003c ಕ್ಷುರಪ್ರೇಣ ಧನುಶ್ಚಿತ್ತ್ವಾ ತಾಡಯಾಮಾಸ ಕರ್ಣಿನಾ||
ಆಗ ಉಲೂಕನಾದರೋ ಸಂಯುಗದಲ್ಲಿ ನಿನ್ನ ಮಗನ ಮೇಲೆ ಕ್ರುದ್ಧನಾಗಿ ಕ್ಷುರಪ್ರದಿಂದ ಧನುಸ್ಸನ್ನು ಕತ್ತರಿಸಿ ಕರ್ಣಿಗಳಿಂದ ಹೊಡೆಯತೊಡಗಿದನು.
08018004a ತದಪಾಸ್ಯ ಧನುಶ್ಚಿನ್ನಂ ಯುಯುತ್ಸುರ್ವೇಗವತ್ತರಂ|
08018004c ಅನ್ಯದಾದತ್ತ ಸುಮಹಚ್ಚಾಪಂ ಸಂರಕ್ತಲೋಚನಃ||
ಆಗ ಸಂರಕ್ತಲೋಚನನಾದ ಯುಯುತ್ಸುವು ತುಂಡಾದ ಧನುಸ್ಸನ್ನು ಎಸೆದು ಇನ್ನೊಂದು ವೇಗವತ್ತರ ಧನುಸ್ಸನ್ನು ತೆಗೆದುಕೊಂಡನು.
08018005a ಶಾಕುನಿಂ ಚ ತತಃ ಷಷ್ಟ್ಯಾ ವಿವ್ಯಾಧ ಭರತರ್ಷಭ|
08018005c ಸಾರಥಿಂ ತ್ರಿಭಿರಾನರ್ಚತ್ತಂ ಚ ಭೂಯೋ ವ್ಯವಿಧ್ಯತ||
ಭರತರ್ಷಭ! ಅವನು ಶಕುನಿಯ ಮಗನನ್ನು ಅರವತ್ತು ಬಾಣಗಳಿಂದ ಹೊಡೆದನು. ಸಾರಥಿಯನ್ನು ಮೂರರಿಂದ ಹೊಡೆದು ಇನ್ನೊಮ್ಮೆ ಉಲೂಕನನ್ನು ಪ್ರಹರಿಸಿದನು.
08018006a ಉಲೂಕಸ್ತಂ ತು ವಿಂಶತ್ಯಾ ವಿದ್ಧ್ವಾ ಹೇಮವಿಭೂಷಿತೈಃ|
08018006c ಅಥಾಸ್ಯ ಸಮರೇ ಕ್ರುದ್ಧೋ ಧ್ವಜಂ ಚಿಚ್ಚೇದ ಕಾಂಚನಂ||
ಉಲೂಕನಾದರೋ ಸಮರದಲ್ಲಿ ಕ್ರುದ್ಧನಾಗಿ ಯುಯುತ್ಸುವನ್ನು ಇಪ್ಪತ್ತು ಹೇಮಭೂಷಿತ ಬಾಣಗಳಿಂದ ಹೊಡೆದು ಅವನ ಕಾಂಚನಧ್ವಜವನ್ನು ತುಂಡರಿಸಿದನು.
08018007a ಸ ಚ್ಚಿನ್ನಯಷ್ಟಿಃ ಸುಮಹಾಂ ಶೀರ್ಯಮಾಣೋ ಮಹಾಧ್ವಜಃ|
08018007c ಪಪಾತ ಪ್ರಮುಖೇ ರಾಜನ್ಯುಯುತ್ಸೋಃ ಕಾಂಚನೋಜ್ಜ್ವಲಃ||
ರಾಜನ್! ದಂಡವು ತುಂಡಾದ ಆ ಕಾಂಚನೋಜ್ವಲ ಮಹಾಧ್ವಜವು ಛಿನ್ನ-ಛಿನ್ನವಾಗಿ ಯುಯುತ್ಸುವಿನ ಎದುರಿನಲ್ಲಿಯೇ ಬಿದ್ದಿತು.
08018008a ಧ್ವಜಮುನ್ಮಥಿತಂ ದೃಷ್ಟ್ವಾ ಯುಯುತ್ಸುಃ ಕ್ರೋಧಮೂರ್ಚಿತಃ|
08018008c ಉಲೂಕಂ ಪಂಚಭಿರ್ಬಾಣೈರಾಜಘಾನ ಸ್ತನಾಂತರೇ||
ಧ್ವಜವು ಧ್ವಂಸವಾದುದನ್ನು ನೋಡಿ ಕ್ರೋಧಮೂರ್ಛಿತನಾದ ಯುಯುತ್ಸುವು ಐದು ಬಾಣಗಳಿಂದ ಉಲೂಕನ ವಕ್ಷಸ್ಥಳಕ್ಕೆ ಹೊಡೆದನು.
08018009a ಉಲೂಕಸ್ತಸ್ಯ ಭಲ್ಲೇನ ತೈಲಧೌತೇನ ಮಾರಿಷ|
08018009c ಶಿರಶ್ಚಿಚ್ಚೇದ ಸಹಸಾ ಯಂತುರ್ಭರತಸತ್ತಮ||
ಮಾರಿಷ! ರಥಸತ್ತಮ ಉಲೂಕನು ಒಮ್ಮೆಲೇ ತನ್ನ ತೈಲಧೌತ ಭಲ್ಲದಿಂದ ಯುಯುತ್ಸುವಿನ ಸಾರಥಿಯ ಶಿರವನ್ನು ಕತ್ತರಿಸಿದನು.
08018010a ಜಘಾನ ಚತುರೋಽಶ್ವಾಂಶ್ಚ ತಂ ಚ ವಿವ್ಯಾಧ ಪಂಚಭಿಃ|
08018010c ಸೋಽತಿವಿದ್ಧೋ ಬಲವತಾ ಪ್ರತ್ಯಪಾಯಾದ್ರಥಾಂತರಂ||
ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿ ಅವನನ್ನು ಐದು ಬಾಣಗಳಿಂದ ಗಾಯಗೊಳಿಸಿದನು. ಹೀಗೆ ಬಲವತ್ತರವಾಗಿ ಪ್ರಹರಿಸಲ್ಪಟ್ಟ ಯುಯುತ್ಸುವು ಇನ್ನೊಂದು ರಥವನ್ನೇರಿ ಪಲಾಯನಮಾಡಿದನು.
08018011a ತಂ ನಿರ್ಜಿತ್ಯ ರಣೇ ರಾಜನ್ನುಲೂಕಸ್ತ್ವರಿತೋ ಯಯೌ|
08018011c ಪಾಂಚಾಲಾನ್ಸೃಂಜಯಾಂಶ್ಚೈವ ವಿನಿಘ್ನನ್ನಿಶಿತೈಃ ಶರೈಃ||
ರಾಜನ್! ರಣದಲ್ಲಿ ಯುಯುತ್ಸುವನ್ನು ಜಯಿಸಿ ಉಲೂಕನು ತ್ವರೆಮಾಡಿ ನಿಶಿತ ಶರಗಳಿಂದ ಪಾಂಚಾಲರನ್ನು ಮತ್ತು ಸೃಂಜಯರನ್ನು ಸಂಹರಿಸುತ್ತಾ ಹೊರಟನು.
08018012a ಶತಾನೀಕಂ ಮಹಾರಾಜ ಶ್ರುತಕರ್ಮಾ ಸುತಸ್ತವ|
08018012c ವ್ಯಶ್ವಸೂತರಥಂ ಚಕ್ರೇ ನಿಮೇಷಾರ್ಧಾದಸಂಭ್ರಮಂ||
ಮಹಾರಾಜ! ನಿನ್ನ ಮಗ ಶ್ರುತಕರ್ಮನು ಗಾಬರಿಗೊಳ್ಳದೇ ನಿಮಿಷಾರ್ಧದಲ್ಲಿ ಶತಾನೀಕನನ್ನು ಕುದುರೆಗಳು, ಸಾರಥಿ ಮತ್ತು ರಥಗಳಿಂದ ವಿಹೀನನನ್ನಾಗಿ ಮಾಡಿದನು.
08018013a ಹತಾಶ್ವೇ ತು ರಥೇ ತಿಷ್ಠಂ ಶತಾನೀಕೋ ಮಹಾಬಲಃ|
08018013c ಗದಾಂ ಚಿಕ್ಷೇಪ ಸಂಕ್ರುದ್ಧಸ್ತವ ಪುತ್ರಸ್ಯ ಮಾರಿಷ||
ಮಾರಿಷ! ಮಹಾಬಲ ಶತಾನೀಕನು ಕುದುರೆಗಳು ಹತವಾಗಲು ರಥದಮೇಲೆಯೇ ನಿಂತು ಕ್ರುದ್ಧನಾಗಿ ನಿನ್ನ ಮಗನ ಮೇಲೆ ಗದೆಯನ್ನು ಎಸೆದನು.
08018014a ಸಾ ಕೃತ್ವಾ ಸ್ಯಂದನಂ ಭಸ್ಮ ಹಯಾಂಶ್ಚೈವ ಸಸಾರಥೀನ್|
08018014c ಪಪಾತ ಧರಣೀಂ ತೂರ್ಣಂ ದಾರಯಂತೀವ ಭಾರತ||
ಭಾರತ! ಆ ಗದೆಯು ಶ್ರುತಕರ್ಮನು ರಥವನ್ನು ಕುದುರೆಗಳು ಮತ್ತು ಸಾರಥಿಯೊಂದಿಗೆ ಭಸ್ಮೀಭೂತವನ್ನಾಗಿ ಮಾಡಿ ಸೀಳಿಬಿಡುವುದೋ ಎನ್ನುವಂತೆ ಭೂಮಿಯ ಮೇಲೆ ಬಿದ್ದಿತು.
08018015a ತಾವುಭೌ ವಿರಥೌ ವೀರೌ ಕುರೂಣಾಂ ಕೀರ್ತಿವರ್ಧನೌ|
08018015c ಅಪಾಕ್ರಮೇತಾಂ ಯುದ್ಧಾರ್ತೌ ಪ್ರೇಕ್ಷಮಾಣೌ ಪರಸ್ಪರಂ||
ಯುದ್ಧಾರ್ತಿಗಳಾಗಿದ್ದ ಆ ಇಬ್ಬರು ವಿರಥ ವೀರ ಕುರುಗಳ ಕೀರ್ತಿವರ್ಧನರು ಪರಸ್ಪರರನ್ನು ನೋಡುತ್ತಾ ಹಿಂದೆಸರಿದರು.
08018016a ಪುತ್ರಸ್ತು ತವ ಸಂಭ್ರಾಂತೋ ವಿವಿತ್ಸೋ ರಥಮಾವಿಶತ್|
08018016c ಶತಾನೀಕೋಽಪಿ ತ್ವರಿತಃ ಪ್ರತಿವಿಂದ್ಯರಥಂ ಗತಃ||
ಸಂಭ್ರಾಂತನಾದ ನಿನ್ನ ಮಗನಾದರೋ ವಿವಿತ್ಸುವಿನ ರಥವನ್ನು ಏರಿದನು. ಶತಾನೀಕನೂ ಕೂಡ ತ್ವರೆಮಾಡಿ ಪ್ರತಿವಿಂದ್ಯನ ರಥಕ್ಕೆ ಹೋದನು.
08018017a ಸುತಸೋಮಸ್ತು ಶಕುನಿಂ ವಿವ್ಯಾಧ ನಿಶಿತೈಃ ಶರೈಃ|
08018017c ನಾಕಂಪಯತ ಸಂರಬ್ಧೋ ವಾರ್ಯೋಘ ಇವ ಪರ್ವತಂ||
ಸುತಸೋಮನಾದರೋ ಶಕುನಿಯನ್ನು ನಿಶಿತ ಶರಗಳಿಂದ ಹೊಡೆದನು. ಆದರೂ ಭಿರುಗಾಳಿಯು ಪರ್ವತವನ್ನು ಹೇಗೆ ಅಲುಗಾಡಿಸುವುದಿಲ್ಲವೋ ಹಾಗೆ ಶಕುನಿಯು ಸಂರಬ್ಧನಾಗಿ ಕಂಪಿಸಲಿಲ್ಲ.
08018018a ಸುತಸೋಮಸ್ತು ತಂ ದೃಷ್ಟ್ವಾ ಪಿತುರತ್ಯಂತವೈರಿಣಂ|
08018018c ಶರೈರನೇಕಸಾಹಸ್ರೈಶ್ಚಾದಯಾಮಾಸ ಭಾರತ||
ಭಾರತ! ತನ್ನ ತಂದೆಯ ಅತ್ಯಂತ ವೈರಿ ಶಕುನಿಯನ್ನು ನೋಡಿ ಸುತಸೋಮನಾದರೋ ಅನೇಕ ಸಹಸ್ರ ಶರಗಳಿಂದ ಅವನನ್ನು ಮುಸುಕಿದನು.
08018019a ತಾಂ ಶರಾಂ ಶಕುನಿಸ್ತೂರ್ಣಂ ಚಿಚ್ಚೇದಾನ್ಯೈಃ ಪತತ್ರಿಭಿಃ|
08018019c ಲಘ್ವಸ್ತ್ರಶ್ಚಿತ್ರಯೋಧೀ ಚ ಜಿತಕಾಶೀ ಚ ಸಂಯುಗೇ||
ಸಂಯುಗದಲ್ಲಿ ಅಸ್ತ್ರಗಳಲ್ಲಿ ಹಸ್ತಲಾಘವವನ್ನು ಹೊಂದಿದ್ದ ಚಿತ್ರಯೋಧೀ ವಿಜಯಶ್ರೀಯಿಂದ ಸುಶೋಭಿತನಾಗಿದ್ದ ಶಕುನಿಯು ಆ ಶರಗಳನ್ನು ತಕ್ಷಣವೇ ಅನ್ಯ ಪತತ್ರಿಗಳಿಂದ ತುಂಡರಿಸಿದನು.
08018020a ನಿವಾರ್ಯ ಸಮರೇ ಚಾಪಿ ಶರಾಂಸ್ತಾನ್ನಿಶಿತೈಃ ಶರೈಃ|
08018020c ಆಜಘಾನ ಸುಸಂಕ್ರುದ್ಧಃ ಸುತಸೋಮಂ ತ್ರಿಭಿಃ ಶರೈಃ||
ಸಮರದಲ್ಲಿ ಆ ಶರಗಳನ್ನು ನಿಶಿತ ಶರಗಳಿಂದ ತಡೆದು ಸುಸಂಕ್ರುದ್ಧ ಶಕುನಿಯು ಸುತಸೋಮನನ್ನು ಮೂರು ಶರಗಳಿಂದ ಗಾಯಗೊಳಿಸಿದನು.
08018021a ತಸ್ಯಾಶ್ವಾನ್ಕೇತನಂ ಸೂತಂ ತಿಲಶೋ ವ್ಯಧಮಚ್ಚರೈಃ|
08018021c ಸ್ಯಾಲಸ್ತವ ಮಹಾವೀರ್ಯಸ್ತತಸ್ತೇ ಚುಕ್ರುಶುರ್ಜನಾಃ||
ಆಗ ಮಹಾವೀರ್ಯ ನಿನ್ನ ಬಾವಮೈದುನನು ಶರಗಳಿಂದ ಸುತಸೋಮನ ಕುದುರೆಗಳು, ಧ್ವಜ ಮತ್ತು ಸೂತರನ್ನು ಎಳ್ಳಿನಷ್ಟು ನುಚ್ಚುನೂರುಮಾಡಿದನು. ಆಗ ಅಲ್ಲಿದ್ದ ಜನರು ಹರ್ಷಸೂಚಕವಾಗಿ ಕೂಗಿದರು.
08018022a ಹತಾಶ್ವೋ ವಿರಥಶ್ಚೈವ ಚಿನ್ನಧನ್ವಾ ಚ ಮಾರಿಷ|
08018022c ಧನ್ವೀ ಧನುರ್ವರಂ ಗೃಹ್ಯ ರಥಾದ್ಭೂಮಾವತಿಷ್ಠತ||
ಮಾರಿಷ! ಹತಾಶ್ವನೂ ವಿರಥನೂ, ಚಿನ್ನಧನ್ವಿಯೂ ಆದ ಧನ್ವೀ ಸುತಸೋಮನು ಶ್ರೇಷ್ಠ ಧನುಸ್ಸನ್ನು ಹಿಡಿದು ರಥದಿಂದಿಳಿದು ಭೂಮಿಯ ಮೇಲೆ ನಿಂತನು.
08018022e ವ್ಯಸೃಜತ್ಸಾಯಕಾಂಶ್ಚೈವ ಸ್ವರ್ಣಪುಂಖಾಂ ಶಿಲಾಶಿತಾನ್|
08018023a ಚಾದಯಾಮಾಸುರಥ ತೇ ತವ ಸ್ಯಾಲಸ್ಯ ತಂ ರಥಂ||
ಸ್ವರ್ಣಪುಂಖಗಳ ಶಿಲಾಶಿತ ಸಾಯಕಗಳನ್ನು ಪ್ರಯೋಗಿಸುತ್ತಾ ಅವನು ನಿನ್ನ ಬಾವನ ರಥವನ್ನೇ ಮುಚ್ಚಿಬಿಟ್ಟನು.
08018023c ಪತಂಗಾನಾಮಿವ ವ್ರಾತಾಃ ಶರವ್ರಾತಾ ಮಹಾರಥಂ|
08018024a ರಥೋಪಸ್ಥಾನ್ಸಮೀಕ್ಷ್ಯಾಪಿ ವಿವ್ಯಥೇ ನೈವ ಸೌಬಲಃ||
08018024c ಪ್ರಮೃದ್ನಂಶ್ಚ ಶರಾಂಸ್ತಾಂಸ್ತಾಂ ಶರವ್ರಾತೈರ್ಮಹಾಯಶಾಃ|
ಮಿಡಿತೆಗಳೋಪಾದಿಯಲ್ಲಿ ಮಹಾರಥವನ್ನು ಸಮೀಪಿಸುತ್ತಿದ್ದ ಆ ಶರವ್ರಾತವನ್ನು ರಥದಲ್ಲಿ ಕುಳಿತಿದ್ದ ಸೌಬಲನು ನೋಡಿಯೂ ಕೂಡ ಸ್ವಲ್ಪವಾದರೂ ವ್ಯಥೆಪಡಲಿಲ್ಲ. ಮಹಾಯಶಸ್ವಿ ಶಕುನಿಯು ಆ ಶರಗಳ ಮಳೆಯನ್ನು ಶರಗಳಿಂದಲೇ ಧ್ವಂಸಗೊಳಿಸಿದನು.
08018025a ತತ್ರಾತುಷ್ಯಂತ ಯೋಧಾಶ್ಚ ಸಿದ್ಧಾಶ್ಚಾಪಿ ದಿವಿ ಸ್ಥಿತಾಃ||
08018025c ಸುತಸೋಮಸ್ಯ ತತ್ಕರ್ಮ ದೃಷ್ಟ್ವಾಶ್ರದ್ಧೇಯಮದ್ಭುತಂ|
08018025e ರಥಸ್ಥಂ ನೃಪತಿಂ ತಂ ತು ಪದಾತಿಃ ಸನ್ನಯೋಧಯತ್||
ಸುತಸೋಮನಾದರೋ ಪದಾತಿಯಾಗಿಯೇ ರಥಸ್ಥನಾಗಿದ್ದ ಆ ನೃಪತಿಯೊಡನೆ ಯುದ್ಧಮಾಡುತ್ತಿದ್ದನು. ಅವನ ಆ ನಂಬಲಸಾಧ್ಯ ಅದ್ಭುತ ಕೃತ್ಯವನ್ನು ನೋಡಿ ಇತರ ಯೋಧರೂ, ಆಕಾಶದಲ್ಲಿ ನೆರೆದಿದ್ದ ಸಿದ್ಧರೂ ಹರ್ಷಿತರಾದರು.
08018026a ತಸ್ಯ ತೀಕ್ಷ್ಣೈರ್ಮಹಾವೇಗೈರ್ಭಲ್ಲೈಃ ಸಂನತಪರ್ವಭಿಃ|
08018026c ವ್ಯಹನತ್ಕಾರ್ಮುಕಂ ರಾಜಾ ತೂಣೀರಂ ಚೈವ ಸರ್ವಶಃ||
ಆ ಸಮಯದಲ್ಲಿ ರಾಜಾ ಶಕುನಿಯು ಮಹಾವೇಗದ ತೀಕ್ಷ್ಣ ಸನ್ನತಪರ್ತ ಭಲ್ಲಗಳಿಂದ ಸುತಸೋಮನ ಧನುಸ್ಸನ್ನೂ ಬತ್ತಳಿಕೆಯನ್ನೂ ಸಂಪೂರ್ಣವಾಗಿ ನಾಶಗೊಳಿಸಿದನು.
08018027a ಸ ಚ್ಚಿನ್ನಧನ್ವಾ ಸಮರೇ ಖಡ್ಗಮುದ್ಯಮ್ಯ ನಾನದನ್|
08018027c ವೈಡೂರ್ಯೋತ್ಪಲವರ್ಣಾಭಂ ಹಸ್ತಿದಂತಮಯತ್ಸರುಂ||
ಧನುಸ್ಸು ತುಂಡಾದ ಸುತಸೋಮನು ವೈಡೂರ್ಯಮಣಿ ಮತ್ತು ನೀಲಕಮಲಗಳ ಬಣ್ಣದ ಆನೆಯ ದಂತದ ಹಿಡಿಯಿದ್ದ ಖಡ್ಗವನ್ನು ಮೇಲೆತ್ತಿ ಸಿಂಹನಾದಗೈದನು.
08018028a ಭ್ರಾಮ್ಯಮಾಣಂ ತತಸ್ತಂ ತು ವಿಮಲಾಂಬರವರ್ಚಸಂ|
08018028c ಕಾಲೋಪಮಂ ತತೋ ಮೇನೇ ಸುತಸೋಮಸ್ಯ ಧೀಮತಃ||
ಶುದ್ಧ ಆಕಾಶದ ಕಾಂತಿಯಿದ್ದ ಆ ಖಡ್ಗವನ್ನು ತಿರುಗಿಸುತ್ತಿದ್ದ ಧೀಮತ ಸುತಸೋಮನನ್ನು ಶಕುನಿಯು ಕಾಲನೆಂದೇ ಭಾವಿಸಿದನು.
08018029a ಸೋಽಚರತ್ಸಹಸಾ ಖಡ್ಗೀ ಮಂಡಲಾನಿ ಸಹಸ್ರಶಃ|
08018029c ಚತುರ್ವಿಂಶನ್ಮಹಾರಾಜ ಶಿಕ್ಷಾಬಲಸಮನ್ವಿತಃ||
ಮಹಾರಾಜ! ಶಿಕ್ಷಾಬಲಸಮನ್ವಿತ ಖಡ್ಗಧಾರೀ ಸುತಸೋಮನು ಹದಿನಾಲ್ಕು ಸಾವಿರ ಮಂಡಲಗಳಲ್ಲಿ ಸಂಚರಿಸುತ್ತಿದ್ದನು.
08018030a ಸೌಬಲಸ್ತು ತತಸ್ತಸ್ಯ ಶರಾಂಶ್ಚಿಕ್ಷೇಪ ವೀರ್ಯವಾನ್|
08018030c ತಾನಾಪತತ ಏವಾಶು ಚಿಚ್ಚೇದ ಪರಮಾಸಿನಾ||
ವೀರ್ಯವಾನ್ ಸೌಬಲನಾದರೋ ಅವನ ಮೇಲೆ ಶರಗಳನ್ನು ಪ್ರಯೋಗಿಸಲು ಬೀಳುವುದರೊಳಗೇ ಸುತಸೋಮನು ಶ್ರೇಷ್ಠ ಖಡ್ಗದಿಂದ ಅವುಗಳನ್ನು ತುಂಡರಿಸಿದನು.
08018031a ತತಃ ಕ್ರುದ್ಧೋ ಮಹಾರಾಜ ಸೌಬಲಃ ಪರವೀರಹಾ|
08018031c ಪ್ರಾಹಿಣೋತ್ಸುತಸೋಮಸ್ಯ ಶರಾನಾಶೀವಿಷೋಪಮಾನ್||
ಮಹಾರಾಜ! ಆಗ ಪರವೀರಹ ಸೌಬಲನು ಕ್ರುದ್ಧನಾಗಿ ಸುತಸೋಮನ ಮೇಲೆ ಸರ್ಪವಿಷಗಳಿಗೆ ಸಮಾನ ಶರಗಳನ್ನು ಪ್ರಯೋಗಿಸಿದನು.
08018032a ಚಿಚ್ಚೇದ ತಾಂಶ್ಚ ಖಡ್ಗೇನ ಶಿಕ್ಷಯಾ ಚ ಬಲೇನ ಚ|
08018032c ದರ್ಶಯಽಲ್ಲಾಘವಂ ಯುದ್ಧೇ ತಾರ್ಕ್ಷ್ಯವೀರ್ಯಸಮದ್ಯುತಿಃ||
ಗರುಡನ ವೀರ್ಯ ಸಮದ್ಯುತಿ ಸುತಸೋಮನು ತನ್ನ ಶಿಕ್ಷಣ ಮತ್ತು ಬಲಗಳಿಂದ ಆ ಬಾಣಗಳನ್ನು ಖಡ್ಗದಿಂದ ತುಂಡರಿಸಿ ಯುದ್ಧದಲ್ಲಿ ತನ್ನ ಹಸ್ತಲಾಘವವನ್ನು ತೋರಿಸಿದನು.
08018033a ತಸ್ಯ ಸಂಚರತೋ ರಾಜನ್ಮಂಡಲಾವರ್ತನೇ ತದಾ|
08018033c ಕ್ಷುರಪ್ರೇಣ ಸುತೀಕ್ಷ್ಣೇನ ಖಡ್ಗಂ ಚಿಚ್ಚೇದ ಸುಪ್ರಭಂ||
ರಾಜನ್! ಆಗ ಮಂಡಲಾವರ್ತದಲ್ಲಿ ಸಂಚರಿಸುತ್ತಿದ್ದ ಶಕುನಿಯು ತೀಕ್ಷ್ಣ ಕ್ಷುರಪ್ರದಿಂದ ಸುತಸೋಮನ ಸುಪ್ರಭ ಖಡ್ಗವನ್ನು ಕತ್ತರಿಸಿದನು.
08018034a ಸ ಚ್ಚಿನ್ನಃ ಸಹಸಾ ಭೂಮೌ ನಿಪಪಾತ ಮಹಾನಸಿಃ|
08018034c ಅವಶಸ್ಯ ಸ್ಥಿತಂ ಹಸ್ತೇ ತಂ ಖಡ್ಗಂ ಸತ್ಸರುಂ ತದಾ||
ತುಂಡಾದ ಆ ಮಹಾಖಡ್ಗವು ಕೂಡಲೇ ಭೂಮಿಯ ಮೇಲೆ ಬಿದ್ದಿತು. ಆ ಖಡ್ಗದ ಸುಂದರ ಹಿಡಿಯು ಮಾತ್ರ ಸುತಸೋಮನ ಕೈಯಲ್ಲಿಯೇ ಉಳಿಯಿತು.
08018035a ಚಿನ್ನಮಾಜ್ಞಾಯ ನಿಸ್ತ್ರಿಂಶಮವಪ್ಲುತ್ಯ ಪದಾನಿ ಷಟ್|
08018035c ಪ್ರಾವಿಧ್ಯತ ತತಃ ಶೇಷಂ ಸುತಸೋಮೋ ಮಹಾರಥಃ||
ತನ್ನ ಖಡ್ಗವು ತುಂಡಾಯಿತೆಂದು ತಿಳಿದ ಮಹಾರಥ ಸುತಸೋಮನು ಕೂಡಲೇ ಆರು ಹೆಜ್ಜೆ ಮುಂದೆ ಹೋಗಿ ತನ್ನ ಕೈಯಲ್ಲಿ ಉಳಿದಿದ್ದ ಆ ಖಡ್ಗದ ಅರ್ಧಭಾಗದಿಂದಲೇ ಶಕುನಿಯನ್ನು ಪ್ರಹರಿಸಿದನು.
08018036a ಸ ಚ್ಚಿತ್ತ್ವಾ ಸಗುಣಂ ಚಾಪಂ ರಣೇ ತಸ್ಯ ಮಹಾತ್ಮನಃ|
08018036c ಪಪಾತ ಧರಣೀಂ ತೂರ್ಣಂ ಸ್ವರ್ಣವಜ್ರವಿಭೂಷಿತಃ||
ಸ್ವರ್ಣವಜ್ರವಿಭೂಷಿತ ಆ ಖಡ್ಗದ ತುಂಡು ಮಹಾತ್ಮ ಶಕುನಿಯ ಉತ್ತಮ ಚಾಪವನ್ನು ತುಂಡರಿಸಿ ತಕ್ಷಣವೇ ರಣಭೂಮಿಯ ಮೇಲೆ ಬಿದ್ದಿತು.
08018036E ಸುತಸೋಮಸ್ತತೋಽಗಚ್ಚಚ್ಚ್ರುತಕೀರ್ತೇರ್ಮಹಾರಥಂ|
08018037a ಸೌಬಲೋಽಪಿ ಧನುರ್ಗೃಹ್ಯ ಘೋರಮನ್ಯತ್ಸುದುಃಸಹಂ||
08018037c ಅಭ್ಯಯಾತ್ಪಾಂಡವಾನೀಕಂ ನಿಘ್ನಂ ಶತ್ರುಗಣಾನ್ಬಹೂನ್|
ಆಗ ಸುತಸೋಮನು ಶ್ರುತಕೀರ್ತಿಯ ಮಹಾರಥವನ್ನು ಹತ್ತಿದನು. ಸೌಬಲನೂ ಕೂಡ ಇನ್ನೊಂದು ದುಃಸ್ಸಹ ಘೋರ ಧನುಸ್ಸನ್ನು ತೆಗೆದುಕೊಂಡು ಪಾಂಡವ ಸೇನೆಯನ್ನು ಹೊಕ್ಕು ಅನೇಕ ಶತ್ರುಗಳನ್ನು ಸಂಹರಿಸಿದನು.
08018038a ತತ್ರ ನಾದೋ ಮಹಾನಾಸೀತ್ಪಾಂಡವಾನಾಂ ವಿಶಾಂ ಪತೇ||
08018038c ಸೌಬಲಂ ಸಮರೇ ದೃಷ್ಟ್ವಾ ವಿಚರಂತಮಭೀತವತ್|
ವಿಶಾಂಪತೇ! ಆಗ ಸಮರದಲ್ಲಿ ಭೀತಿಯೇ ಇಲ್ಲದವನಂತೆ ಸಂಚರಿಸುತ್ತಿದ್ದ ಸೌಬಲನನ್ನು ನೋಡಿ ಪಾಂಡವರ ಕಡೆಯಲ್ಲಿ ಮಹಾ ಕೋಲಾಹಲವುಂಟಾಯಿತು.
08018039a ತಾನ್ಯನೀಕಾನಿ ದೃಪ್ತಾನಿ ಶಸ್ತ್ರವಂತಿ ಮಹಾಂತಿ ಚ||
08018039c ದ್ರಾವ್ಯಮಾಣಾನ್ಯದೃಶ್ಯಂತ ಸೌಬಲೇನ ಮಹಾತ್ಮನಾ|
ಶಸ್ತ್ರಗಳನ್ನು ಹೊಂದಿದ್ದ ದರ್ಪಿತ ಪಾಂಡವರ ಮಹಾ ಸೇನೆಗಳು ಮಹಾತ್ಮ ಸೌಬಲನಿಂದ ಓಡಿಸಲ್ಪಡುತ್ತಿರುವುದನ್ನು ನಾವು ನೋಡಿದೆವು.
08018040a ಯಥಾ ದೈತ್ಯಚಮೂಂ ರಾಜನ್ದೇವರಾಜೋ ಮಮರ್ದ ಹ||
08018040c ತಥೈವ ಪಾಂಡವೀಂ ಸೇನಾಂ ಸೌಬಲೇಯೋ ವ್ಯನಾಶಯತ್|
ರಾಜನ್! ದೈತ್ಯಸೇನೆಯನ್ನು ದೇವರಾಜನು ಹೇಗೆ ಮರ್ದಿಸಿದನೋ ಹಾಗೆ ಪಾಂಡವೀ ಸೇನೆಯು ಸೌಬಲನಿಂದ ನಾಶಗೊಂಡಿತು.
08018041a ಧೃಷ್ಟದ್ಯುಮ್ನಂ ಕೃಪೋ ರಾಜನ್ವಾರಯಾಮಾಸ ಸಂಯುಗೇ||
08018041c ಯಥಾ ದೃಪ್ತಂ ವನೇ ನಾಗಂ ಶರಭೋ ವಾರಯೇದ್ಯುಧಿ|
ರಾಜನ್! ವನದಲ್ಲಿ ಶರಭವು ದರ್ಪಿತ ಆನೆಯನ್ನು ಹೊಡೆದಾಡಿ ತಡೆಯುವಂತೆ ಯುದ್ಧದಲ್ಲಿ ಕೃಪನು ಧೃಷ್ಟದ್ಯುಮ್ನನನ್ನು ತಡೆದನು.
08018042a ನಿರುದ್ಧಃ ಪಾರ್ಷತಸ್ತೇನ ಗೌತಮೇನ ಬಲೀಯಸಾ||
08018042c ಪದಾತ್ಪದಂ ವಿಚಲಿತುಂ ನಾಶಕ್ನೋತ್ತತ್ರ ಭಾರತ|
ಭಾರತ! ಬಲಶಾಲಿ ಗೌತಮನಿಂದ ತಡೆಯಲ್ಪಟ್ಟ ಪಾರ್ಷತನಿಗೆ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಾಗಲಿಲ್ಲ.
08018043a ಗೌತಮಸ್ಯ ವಪುರ್ದೃಷ್ಟ್ವಾ ಧೃಷ್ಟದ್ಯುಮ್ನರಥಂ ಪ್ರತಿ||
08018043c ವಿತ್ರೇಸುಃ ಸರ್ವಭೂತಾನಿ ಕ್ಷಯಂ ಪ್ರಾಪ್ತಂ ಚ ಮೇನಿರೇ|
ಧೃಷ್ಟದ್ಯುಮ್ನನ ರಥದ ಬಳಿ ಗೌತಮನ ರೂಪವನ್ನು ಕಂಡು ಸರ್ವಭೂತಗಳೂ ಪ್ರಳಯವೇ ಪ್ರಾಪ್ತವಾಯಿತೋ ಎಂದುಕೊಂಡು ನಡುಗಿದವು.
08018044a ತತ್ರಾವೋಚನ್ವಿಮನಸೋ ರಥಿನಃ ಸಾದಿನಸ್ತಥಾ||
08018044c ದ್ರೋಣಸ್ಯ ನಿಧನೇ ನೂನಂ ಸಂಕ್ರುದ್ಧೋ ದ್ವಿಪದಾಂ ವರಃ|
08018045a ಶಾರದ್ವತೋ ಮಹಾತೇಜಾ ದಿವ್ಯಾಸ್ತ್ರವಿದುದಾರಧೀಃ||
08018045c ಅಪಿ ಸ್ವಸ್ತಿ ಭವೇದದ್ಯ ಧೃಷ್ಟದ್ಯುಮ್ನಸ್ಯ ಗೌತಮಾತ್|
ವಿಮನಸ್ಕರಾಗಿದ್ದ ರಥಿಗಳೂ ಕುದುರೆಸವಾರರೂ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು: “ದ್ರೋಣನ ನಿಧನದಿಂದಾಗಿ ದ್ವಿಪದರಲ್ಲಿ ಶ್ರೇಷ್ಠ ಕೃಪನು ತುಂಬಾ ಸಂಕ್ರುದ್ಧನಾಗಿದ್ದಾನೆ. ಮಹಾತೇಜಸ್ವಿ, ದಿವ್ಯಾಸ್ತ್ರವಿದು, ಉದಾರಬುದ್ಧಿಯ ಶಾರದ್ವತ ಗೌತಮನಿಂದ ಇಂದು ಧೃಷ್ಟದ್ಯುಮ್ನನಿಗೆ ಒಳ್ಳೆಯದೇನಾದರೂ ಆಗಬಹುದೇ?
08018046a ಅಪೀಯಂ ವಾಹಿನೀ ಕೃತ್ಸ್ನಾ ಮುಚ್ಯೇತ ಮಹತೋ ಭಯಾತ್||
08018046c ಅಪ್ಯಯಂ ಬ್ರಾಹ್ಮಣಃ ಸರ್ವಾನ್ನ ನೋ ಹನ್ಯಾತ್ಸಮಾಗತಾನ್|
ಈ ಸಂಪೂರ್ಣ ಸೇನೆಯು ಮಹಾಭಯದಿಂದ ಬಿಡುಗಡೆ ಹೊಂದಬಲ್ಲದೇ? ಈ ಬ್ರಾಹ್ಮಣನು ಸೇರಿರುವ ನಮ್ಮೆಲ್ಲರನ್ನೂ ಸಂಹರಿಸದೇ ಬಿಟ್ಟಾನೆಯೇ?
08018047a ಯಾದೃಶಂ ದೃಶ್ಯತೇ ರೂಪಂ ಅಂತಕಪ್ರತಿಮಂ ಭೃಶಂ||
08018047c ಗಮಿಷ್ಯತ್ಯದ್ಯ ಪದವೀಂ ಭಾರದ್ವಾಜಸ್ಯ ಸಂಯುಗೇ|
ಅವನ ಈ ರೂಪವು ಅಂತಕನ ರೂಪದಂತೆಯೇ ತೋರುತ್ತಿದೆ. ಇಂದು ಕೃಪನೂ ಕೂಡ ಯುದ್ಧದಲ್ಲಿ ಭಾರದ್ವಾಜ ದ್ರೋಣನ ಪದವಿಯಲ್ಲಿ ಹೋಗುತ್ತಿದ್ದಾನೆ.
08018048a ಆಚಾರ್ಯಃ ಕ್ಷಿಪ್ರಹಸ್ತಶ್ಚ ವಿಜಯೀ ಚ ಸದಾ ಯುಧಿ||
08018048c ಅಸ್ತ್ರವಾನ್ವೀರ್ಯಸಂಪನ್ನಃ ಕ್ರೋಧೇನ ಚ ಸಮನ್ವಿತಃ|
08018049a ಪಾರ್ಷತಶ್ಚ ಭೃಶಂ ಯುದ್ಧೇ ವಿಮುಖೋಽದ್ಯಾಪಿ ಲಕ್ಷ್ಯತೇ||
08018049c ಇತ್ಯೇವಂ ವಿವಿಧಾ ವಾಚಸ್ತಾವಕಾನಾಂ ಪರೈಃ ಸಹ|
ಆಚಾರ್ಯನು ಕ್ಷಿಪ್ರಹಸ್ತನು. ಯುದ್ಧದಲ್ಲಿ ಸದಾ ವಿಜಯಗಳಿಸುವವನು. ಅಸ್ತ್ರವಾನನೂ ವೀರ್ಯಸಂಪನ್ನನೂ ಆದ ಇವನು ಕ್ರೋಧಸಮನ್ವಿತನಾಗಿದ್ದಾನೆ. ಈ ಯುದ್ಧದಲ್ಲಿ ಪಾರ್ಷತನು ವಿಮುಖನಾಗುತ್ತಾನೆ ಎಂದೇ ಕಂಡುಬರುತ್ತಿದೆ!” ಹೀಗೆ ವಿವಿಧ ರೀತಿಯಲ್ಲಿ ನಿನ್ನವರು ಮತ್ತು ಶತ್ರುಗಳು ಮಾತನಾಡಿಕೊಳ್ಳುತ್ತಿದ್ದರು.
08018050a ವಿನಿಃಶ್ವಸ್ಯ ತತಃ ಕ್ರುದ್ಧಃ ಕೃಪಃ ಶಾರದ್ವತೋ ನೃಪ||
08018050c ಪಾರ್ಷತಂ ಚಾದಯಾಮಾಸ ನಿಶ್ಚೇಷ್ಟಂ ಸರ್ವಮರ್ಮಸು|
ನೃಪ! ಆಗ ಕೋಪದಿಂದ ನಿಟ್ಟುಸಿರು ಬಿಡುತ್ತಾ ಶಾರದ್ವತ ಕೃಪನು ಪಾರ್ಷತನನ್ನು ಎಲ್ಲ ಕಡೆಗಳಿಂದ ಪ್ರಹರಿಸಿ ನಿಶ್ಚೇಷ್ಟನನ್ನಾಗಿಸಿದನು.
08018051a ಸ ವಧ್ಯಮಾನಃ ಸಮರೇ ಗೌತಮೇನ ಮಹಾತ್ಮನಾ||
08018051c ಕರ್ತವ್ಯಂ ನ ಪ್ರಜಾನಾತಿ ಮೋಹಿತಃ ಪರಮಾಹವೇ|
ಸಮರದಲ್ಲಿ ಮಹಾತ್ಮ ಗೌತಮನಿಂದ ವಧಿಸಲ್ಪಡುತ್ತಿದ್ದ ಧೃಷ್ಟದ್ಯುಮ್ನನು ಮೋಹಿತನಾಗಿ ಯುದ್ದದಲ್ಲಿ ಏನು ಮಾಡಬೇಕೆನ್ನುವುದನ್ನೇ ತಿಳಿಯದಾದನು.
08018052a ತಮಬ್ರವೀತ್ತತೋ ಯಂತಾ ಕಚ್ಚಿತ್ ಕ್ಷೇಮಂ ನು ಪಾರ್ಷತ||
08018052c ಈದೃಶಂ ವ್ಯಸನಂ ಯುದ್ಧೇ ನ ತೇ ದೃಷ್ಟಂ ಕದಾ ಚನ|
ಆಗ ಅವನ ಸಾರಥಿಯು ಅವನನ್ನು ಪ್ರಶ್ನಿಸಿದನು: “ಪಾರ್ಷತ! ಏನು ಕ್ಷೇಮದಿಂದಿರುವೆಯಾ? ಯುದ್ಧದಲ್ಲಿ ನೀನು ಈ ರೀತಿ ವ್ಯಸನದಲ್ಲಿರುವುದನ್ನು ನಾನು ಇದೂವರೆಗೂ ನೋಡಿರಲಿಲ್ಲ!
08018053a ದೈವಯೋಗಾತ್ತು ತೇ ಬಾಣಾ ನಾತರನ್ಮರ್ಮಭೇದಿನಃ||
08018053c ಪ್ರೇಷಿತಾ ದ್ವಿಜಮುಖ್ಯೇನ ಮರ್ಮಾಣ್ಯುದ್ದಿಶ್ಯ ಸರ್ವಶಃ|
ದ್ವಿಜಮುಖ್ಯನು ನಿನ್ನ ಮರ್ಮಗಳನ್ನೇ ಗುರಿಯಿಟ್ಟು ಪ್ರಯೋಗಿಸಿದ ಮರ್ಮಭೇದಿ ಬಾಣಗಳು ದೈವಯೋಗದಿಂದ ನಿನ್ನ ಮರ್ಮಗಳ ಮೇಲೆ ಬೀಳಲಿಲ್ಲ.
08018054a ವ್ಯಾವರ್ತಯೇ ತತ್ರ ರಥಂ ನದೀವೇಗಮಿವಾರ್ಣವಾತ್||
08018054c ಅವಧ್ಯಂ ಬ್ರಾಹ್ಮಣಂ ಮನ್ಯೇ ಯೇನ ತೇ ವಿಕ್ರಮೋ ಹತಃ|
ವೇಗವಾಗಿ ಸಾಗರದ ಕಡೆ ಹರಿಯುತ್ತಿರುವ ನದಿಯನ್ನು ಹಿಂದೆ ಸರಿಸುವಂತೆ ನಿನ್ನ ರಥವನ್ನು ನಾನು ಬೇಗ ಹಿಂದಿರುಗಿಸುತ್ತೇನೆ. ನಿನ್ನ ವಿಕ್ರಮವನ್ನು ಕುಂದಿಸಿರುವ ಈ ಬ್ರಾಹ್ಮಣನು ಅವಧ್ಯನೆಂದು ನನಗನ್ನಿಸುತದೆ.”
08018055a ಧೃಷ್ಟದ್ಯುಮ್ನಸ್ತತೋ ರಾಜಂ ಶನಕೈರಬ್ರವೀದ್ವಚಃ||
08018055c ಮುಹ್ಯತೇ ಮೇ ಮನಸ್ತಾತ ಗಾತ್ರೇ ಸ್ವೇದಶ್ಚ ಜಾಯತೇ|
ರಾಜನ್! ಆಗ ಧೃಷ್ಟದ್ಯುಮ್ನನು ಮೆಲ್ಲನೇ ಈ ಮಾತುಗಳನ್ನಾಡಿದನು: “ಅಯ್ಯಾ! ನನ್ನ ಮನಸ್ಸು ಭ್ರಮೆಗೊಂಡಿದೆ. ಶರೀರವು ಬೆವರುತ್ತಿದೆ.
08018056a ವೇಪಥುಂ ಚ ಶರೀರೇ ಮೇ ರೋಮಹರ್ಷಂ ಚ ಪಶ್ಯ ವೈ||
08018056c ವರ್ಜಯನ್ಬ್ರಾಹ್ಮಣಂ ಯುದ್ಧೇ ಶನೈರ್ಯಾಹಿ ಯತೋಽಚ್ಯುತಃ|
08018057a ಅರ್ಜುನಂ ಭೀಮಸೇನಂ ವಾ ಸಮರೇ ಪ್ರಾಪ್ಯ ಸಾರಥೇ||
08018057c ಕ್ಷೇಮಮದ್ಯ ಭವೇದ್ಯಂತರಿತಿ ಮೇ ನೈಷ್ಠಿಕೀ ಮತಿಃ|
ಶರೀರವು ನಡುಗುತ್ತಿದೆ. ರೋಮಹರ್ಷಣವಾಗುತ್ತಿರುವುದನ್ನೂ ನೋಡು. ಸಾರಥೇ! ಅಚ್ಯುತ! ಯುದ್ಧದಲ್ಲಿ ಈ ಬ್ರಾಹ್ಮಣನನ್ನು ಬಿಟ್ಟು ನಿಧಾನವಾಗಿ ನನ್ನನ್ನು ಅರ್ಜುನ ಅಥವಾ ಭೀಮಸೇನನು ಯುದ್ಧಮಾಡುತ್ತಿರುವಲ್ಲಿಗೆ ಕರೆದುಕೊಂಡು ಹೋಗು! ಇದೇ ಇಂದು ನನಗೆ ಕ್ಷೇಮವನ್ನುಂಟುಮಾಡುತ್ತದೆ ಎಂದು ನನ್ನ ದೃಢ ನಂಬಿಕೆಯಾಗಿದೆ.”
08018058a ತತಃ ಪ್ರಾಯಾನ್ಮಹಾರಾಜ ಸಾರಥಿಸ್ತ್ವರಯನ್ ಹಯಾನ್||
08018058c ಯತೋ ಭೀಮೋ ಮಹೇಷ್ವಾಸೋ ಯುಯುಧೇ ತವ ಸೈನಿಕೈಃ|
ಮಹಾರಾಜ! ಆಗ ಸಾರಥಿಯು ತ್ವರೆಯಾಗಿ ಕುದುರೆಗಳನ್ನು ಮಹೇಷ್ವಾಸ ಭೀಮನು ನಿನ್ನ ಸೈನಿಕರೊಂದಿಗೆ ಯುದ್ಧಮಾಡುತ್ತಿರುವಲ್ಲಿಗೆ ತಲುಪಿಸಿದನು.
08018059a ಪ್ರದ್ರುತಂ ತು ರಥಂ ದೃಷ್ಟ್ವಾ ಧೃಷ್ಟದ್ಯುಮ್ನಸ್ಯ ಮಾರಿಷ||
08018059c ಕಿರಂ ಶರಶತಾನ್ಯೇವ ಗೌತಮೋಽನುಯಯೌ ತದಾ|
ಮಾರಿಷ! ಹಾಗೆ ಓಡಿ ಹೋಗುತ್ತಿರುವ ಧೃಷ್ಟದ್ಯುಮ್ನನ ರಥವನ್ನು ನೋಡಿ ಗೌತಮನು ನೂರಾರು ಶರಗಳನ್ನು ಎರಚುತ್ತಾ ಅವನನ್ನೇ ಹಿಂಬಾಲಿಸಿ ಹೋದನು.
08018060a ಶಂಖಂ ಚ ಪೂರಯಾಮಾಸ ಮುಹುರ್ಮುಹುರರಿಂದಮಃ||
08018060c ಪಾರ್ಷತಂ ಪ್ರಾದ್ರವದ್ಯಂತಂ ಮಹೇಂದ್ರ ಇವ ಶಂಬರಂ|
ಮಹೇಂದ್ರನು ಶಂಬರನನ್ನು ಹೇಗೋ ಹಾಗೆ ಪಾರ್ಷತನನ್ನು ಬೆನ್ನಟ್ಟಿ ಹೋಗಿ ಅರಿಂದಮ ಕೃಪನು ಪುನಃ ಪುನಃ ಶಂಖವನ್ನು ಮೊಳಗಿಸಿದನು.
08018061a ಶಿಖಂಡಿನಂ ತು ಸಮರೇ ಭೀಷ್ಮಮೃತ್ಯುಂ ದುರಾಸದಂ||
08018061c ಹಾರ್ದಿಕ್ಯೋ ವಾರಯಾಮಾಸ ಸ್ಮಯನ್ನಿವ ಮುಹುರ್ಮುಹುಃ|
ಪುನಃ ಪುನಃ ನಗುತ್ತಿರುವನೋ ಎಂದು ತೋರುತ್ತಾ ಹಾರ್ದಿಕ್ಯನು ಸಮರದಲ್ಲಿ ಭೀಷ್ಮನ ಮೃತ್ಯು ದುರಾಸದ ಶಿಖಂಡಿಯನ್ನು ತಡೆದನು.
08018062a ಶಿಖಂಡೀ ಚ ಸಮಾಸಾದ್ಯ ಹೃದಿಕಾನಾಂ ಮಹಾರಥಂ||
08018062c ಪಂಚಭಿರ್ನಿಶಿತೈರ್ಭಲ್ಲೈರ್ಜತ್ರುದೇಶೇ ಸಮಾರ್ದಯತ್|
ಮಹಾರಥ ಹಾರ್ದಿಕ್ಯನನ್ನು ಎದುರಿಸಿ ಶಿಖಂಡಿಯು ಐದು ನಿಶಿತ ಭಲ್ಲಗಳಿಂದ ಅವನ ಜತ್ರುಪ್ರದೇಶವನ್ನು ಪ್ರಹರಿಸಿದನು.
08018063a ಕೃತವರ್ಮಾ ತು ಸಂಕ್ರುದ್ಧೋ ಭಿತ್ತ್ವಾ ಷಷ್ಟಿಭಿರಾಶುಗೈಃ||
08018063c ಧನುರೇಕೇನ ಚಿಚ್ಚೇದ ಹಸನ್ರಾಜನ್ಮಹಾರಥಃ|
ರಾಜನ್! ಮಹಾರಥ ಕೃತವರ್ಮನಾದರೋ ಸಂಕ್ರುದ್ಧನಾಗಿ ಅರವತ್ತು ಬಾಣಗಳಿಂದ ಹೊಡೆದು ಒಂದೇ ಬಾಣದಿಂದ ನಗುತ್ತಾ ಅವನ ಧನುಸ್ಸನ್ನು ಕತ್ತರಿಸಿದನು.
08018064a ಅಥಾನ್ಯದ್ಧನುರಾದಾಯ ದ್ರುಪದಸ್ಯಾತ್ಮಜೋ ಬಲೀ||
08018064c ತಿಷ್ಠ ತಿಷ್ಠೇತಿ ಸಂಕ್ರುದ್ಧೋ ಹಾರ್ದಿಕ್ಯಂ ಪ್ರತ್ಯಭಾಷತ|
ಬಲಶಾಲೀ ದ್ರುಪದಾತ್ಮಜನಾದರೋ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸಂಕ್ರುದ್ಧನಾಗಿ ಹಾರ್ದಿಕ್ಯನಿಗೆ ನಿಲ್ಲು ನಿಲ್ಲೆಂದು ಕೂಗಿ ಹೇಳಿದನು.
08018065a ತತೋಽಸ್ಯ ನವತಿಂ ಬಾಣಾನ್ರುಕ್ಮಪುಂಖಾನ್ಸುತೇಜನಾನ್||
08018065c ಪ್ರೇಷಯಾಮಾಸ ರಾಜೇಂದ್ರ ತೇಽಸ್ಯಾಭ್ರಶ್ಯಂತ ವರ್ಮಣಃ|
ರಾಜೇಂದ್ರ! ಅವನು ರುಕ್ಮಪುಂಖಗಳ ಸುತೇಜಯುಕ್ತ ತೊಂಭತ್ತು ಬಾಣಗಳನ್ನು ಕೃತವರ್ಮನ ಮೇಲೆ ಪ್ರಯೋಗಿಸಿದನು. ಅವು ಅವನ ಕವಚಕ್ಕೆ ತಾಗಿ ಕೆಳಗೆ ಬಿದ್ದವು.
08018066a ವಿತಥಾಂಸ್ತಾನ್ಸಮಾಲಕ್ಷ್ಯ ಪತಿತಾಂಶ್ಚ ಮಹೀತಲೇ||
08018066c ಕ್ಷುರಪ್ರೇಣ ಸುತೀಕ್ಷ್ಣೇನ ಕಾರ್ಮುಕಂ ಚಿಚ್ಚಿದೇ ಬಲೀ|
ಅವೆಲ್ಲವೂ ವ್ಯರ್ಥವಾಗಿ ಭೂಮಿಯ ಮೇಲೆ ಬಿದ್ದುದನ್ನು ನೋಡಿದ ಬಲಶಾಲಿ ಶಿಖಂಡಿಯು ತೀಕ್ಷ್ಣ ಕ್ಷುರಪ್ರದಿಂದ ಕೃತವರ್ಮನ ಧನುಸ್ಸನ್ನು ತುಂಡರಿಸಿದನು.
08018067a ಅಥೈನಂ ಚಿನ್ನಧನ್ವಾನಂ ಭಗ್ನಶೃಂಗಮಿವರ್ಷಭಂ||
08018067c ಅಶೀತ್ಯಾ ಮಾರ್ಗಣೈಃ ಕ್ರುದ್ಧೋ ಬಾಹ್ವೋರುರಸಿ ಚಾರ್ದಯತ್|
ಧನುಸ್ಸು ತುಂಡಾಗಿ ಕೋಡುಗಳು ತುಂಡಾಗಿದ್ದ ಹೋರಿಯಂತೆ ಕಾಣುತ್ತಿದ್ದ ಕೃತವರ್ಮನ ತೋಳುಗಳು ಮತ್ತು ಎದೆಗೆ ಕ್ರುದ್ಧನಾದ ಶಿಖಂಡಿಯು ಎಂಭತ್ತು ಮಾರ್ಗಣಗಳಿಂದ ಪ್ರಹರಿಸಿದನು.
08018068a ಕೃತವರ್ಮಾ ತು ಸಂಕ್ರುದ್ಧೋ ಮಾರ್ಗಣೈಃ ಕೃತವಿಕ್ಷತಃ||
08018068c ಧನುರನ್ಯತ್ಸಮಾದಾಯ ಸಮಾರ್ಗಣಗಣಂ ಪ್ರಭೋ|
08018068e ಶಿಖಂಡಿನಂ ಬಾಣವರೈಃ ಸ್ಕಂದದೇಶೇಽಭ್ಯತಾಡಯತ್||
ಪ್ರಭೋ! ಮಾರ್ಗಣಗಳಿಂದ ಕ್ಷತವಿಕ್ಷತನಾದ ಕೃತವರ್ಮನಾದರೋ ಕ್ರುದ್ಧನಾಗಿ ಮಾರ್ಗಣಗಣಗಳಿಂದ ಕೂಡಿದ್ದ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಶ್ರೇಷ್ಠ ಬಾಣಗಳಿಂದ ಶಿಖಂಡಿಯ ಹೆಗಲಿಗೆ ಹೊಡೆದನು.
08018069a ಸ್ಕಂದದೇಶೇ ಸ್ಥಿತೈರ್ಬಾಣೈಃ ಶಿಖಂಡೀ ಚ ರರಾಜ ಹ|
08018069c ಶಾಖಾಪ್ರತಾನೈರ್ವಿಮಲೈಃ ಸುಮಹಾನ್ಸ ಯಥಾ ದ್ರುಮಃ||
ಹೆಗಲಿನ ಮೇಲೆ ಚುಚ್ಚಿಕೊಂಡಿದ್ದ ಬಾಣಗಳಿಂದ ಶಿಖಂಡಿಯು ಕವಲೊಡೆದ ರೆಂಬೆಗಳಿಂದ ಕೂಡಿದ ಮಹಾ ವೃಕ್ಷದಂತೆ ರಾರಾಜಿಸಿದನು.
08018070a ತಾವನ್ಯೋನ್ಯಂ ಭೃಶಂ ವಿದ್ಧ್ವಾ ರುಧಿರೇಣ ಸಮುಕ್ಷಿತೌ|
08018070c ಅನ್ಯೋನ್ಯಶೃಂಗಾಭಿಹತೌ ರೇಜತುರ್ವೃಷಭಾವಿವ||
ಅನ್ಯೋನ್ಯರನ್ನು ಚೆನ್ನಾಗಿ ಪ್ರಹರಿಸಿ ರಕ್ತವನ್ನು ಸುರಿಸುತ್ತಿದ್ದ ಅವರಿಬ್ಬರೂ ಅನ್ಯೋನ್ಯರನ್ನು ಕೋಡುಗಳಿಂದ ತಿವಿದು ಹೋರಾಡುತ್ತಿರುವ ಹೋರಿಗಳಂತೆ ರಾರಾಜಿಸಿದರು.
08018071a ಅನ್ಯೋನ್ಯಸ್ಯ ವಧೇ ಯತ್ನಂ ಕುರ್ವಾಣೌ ತೌ ಮಹಾರಥೌ|
08018071c ರಥಾಭ್ಯಾಂ ಚೇರತುಸ್ತತ್ರ ಮಂಡಲಾನಿ ಸಹಸ್ರಶಃ||
ಅನ್ಯೋನ್ಯರ ವಧೆಗೆ ಪ್ರಯತ್ನಿಸುತ್ತಾ ಆ ಇಬ್ಬರು ಮಹಾರಥರೂ ರಥಗಳಲ್ಲಿ ಸಹಸ್ರಾರು ಮಂಡಲಗಳಲ್ಲಿ ಸಂಚರಿಸುತ್ತಿದ್ದರು.
08018072a ಕೃತವರ್ಮಾ ಮಹಾರಾಜ ಪಾರ್ಷತಂ ನಿಶಿತೈಃ ಶರೈಃ|
08018072c ರಣೇ ವಿವ್ಯಾಧ ಸಪ್ತತ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ||
ಮಹಾರಾಜ! ಕೃತವರ್ಮನು ರಣದಲ್ಲಿ ಪಾರ್ಷತನನ್ನು ಎಪ್ಪತ್ತು ಸ್ವರ್ಣಪುಂಖಗಳ ಶಿಲಾಶಿತ ನಿಶಿತ ಶರಗಳಿಂದ ಹೊಡೆದನು.
08018073a ತತೋಽಸ್ಯ ಸಮರೇ ಬಾಣಂ ಭೋಜಃ ಪ್ರಹರತಾಂ ವರಃ|
08018073c ಜೀವಿತಾಂತಕರಂ ಘೋರಂ ವ್ಯಸೃಜತ್ತ್ವರಯಾನ್ವಿತಃ||
ಆಗ ಸಮರದಲ್ಲಿ ಪ್ರಹರಿಗಳಲ್ಲಿ ಶ್ರೇಷ್ಠ ಭೋಜನು ತ್ವರೆಮಾಡಿ ಜೀವಿತಾಂತಕರವಾದ ಘೋರ ಬಾಣವನ್ನು ಶಿಖಂಡಿಯ ಮೇಲೆ ಪ್ರಯೋಗಿಸಿದನು.
08018074a ಸ ತೇನಾಭಿಹತೋ ರಾಜನ್ಮೂರ್ಚಾಮಾಶು ಸಮಾವಿಶತ್|
08018074c ಧ್ವಜಯಷ್ಟಿಂ ಚ ಸಹಸಾ ಶಿಶ್ರಿಯೇ ಕಶ್ಮಲಾವೃತಃ||
ರಾಜನ್! ಅದರಿಂದ ಪ್ರಹರಿಸಲ್ಪಟ್ಟ ಶಿಖಂಡಿಯು ಮೂರ್ಛಿತನಾದನು. ಮೂರ್ಛಿತನಾಗಿ ಅವನು ಧ್ವಜದಂಡದ ಆಶ್ರಯವನ್ನು ಪಡೆದು ಒರಗಿ ಕುಳಿತುಕೊಂಡನು.
08018075a ಅಪೋವಾಹ ರಣಾತ್ತಂ ತು ಸಾರಥೀ ರಥಿನಾಂ ವರಂ|
08018075c ಹಾರ್ದಿಕ್ಯಶರಸಂತಪ್ತಂ ನಿಃಶ್ವಸಂತಂ ಪುನಃ ಪುನಃ||
ಹಾರ್ದಿಕ್ಯನ ಶರದಿಂದ ಸಂತಪ್ತನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದ ಆ ರಥಿಗಳಲ್ಲಿ ಶ್ರೇಷ್ಠ ಶಿಖಂಡಿಯನ್ನು ಅವನ ಸಾರಥಿಯು ರಣದಿಂದ ದೂರ ಕೊಂಡೊಯ್ದನು.
08018076a ಪರಾಜಿತೇ ತತಃ ಶೂರೇ ದ್ರುಪದಸ್ಯ ಸುತೇ ಪ್ರಭೋ|
08018076c ಪ್ರಾದ್ರವತ್ಪಾಂಡವೀ ಸೇನಾ ವಧ್ಯಮಾನಾ ಸಮಂತತಃ||
ಪ್ರಭೋ! ದ್ರುಪದನ ಶೂರ ಸುತನು ಹೀಗೆ ಪರಾಜಿತನಾಗಲು ವಧಿಸಲ್ಪಡುತ್ತಿರುವ ಪಾಂಡವೀ ಸೇನೆಯು ಎಲ್ಲ ಕಡೆ ಪಲಾಯನಗೈಯಿತು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಅಷ್ಠಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನೆಂಟನೇ ಅಧ್ಯಾಯವು.