Karna Parva: Chapter 13

ಕರ್ಣ ಪರ್ವ

೧೩

ದಂಡಧಾರ-ದಂಡರ ವಧೆ

ಅರ್ಜುನನಿಂದ ಮಗಧ ಕ್ಷತ್ರಿಯ ದಂಡಧಾರನ ವಧೆ (೧-೧೫). ಅರ್ಜುನನು ದಂಡಧಾರನ ತಮ್ಮ ದಂಡನನ್ನು ವಧಿಸಿದುದು (೧೬-೨೫).

08013001 ಸಂಜಯ ಉವಾಚ|

08013001a ಅಥೋತ್ತರೇಣ ಪಾಂಡೂನಾಂ ಸೇನಾಯಾಂ ಧ್ವನಿರುತ್ಥಿತಃ|

08013001c ರಥನಾಗಾಶ್ವಪತ್ತೀನಾಂ ದಂಡಧಾರೇಣ ವಧ್ಯತಾಂ||

ಸಂಜಯನು ಹೇಳಿದನು: “ಆಗ ಪಾಂಡವರ ಸೇನೆಯ ಉತ್ತರ ಭಾಗದಲ್ಲಿ ದಂಡಧಾರ[1]ನಿಂದ ವಧಿಸಲ್ಪಡುತ್ತಿದ್ದ ರಥ-ಗಜ-ಅಶ್ವ-ಪದಾತಿಗಳ ಆರ್ತನಾದವು ಕೇಳಿಬಂದಿತು.

08013002a ನಿವರ್ತಯಿತ್ವಾ ತು ರಥಂ ಕೇಶವೋಽರ್ಜುನಮಬ್ರವೀತ್|

08013002c ವಾಹಯನ್ನೇವ ತುರಗಾನ್ಗರುಡಾನಿಲರಂಹಸಃ||

ಆಗ ರಥವನ್ನು ಹಿಂದಿರುಗಿಸಿ ಗರುಡ-ವಾಯುಗಳ ವೇಗವುಳ್ಳ ಕುದುರೆಗಳನ್ನು ನಡೆಸುತ್ತಾ ಕೇಶವನು ಅರ್ಜುನನಿಗೆ ಹೇಳಿದನು:

08013003a ಮಾಗಧೋಽಥಾಪ್ಯತಿಕ್ರಾಂತೋ ದ್ವಿರದೇನ ಪ್ರಮಾಥಿನಾ|

08013003c ಭಗದತ್ತಾದನವರಃ ಶಿಕ್ಷಯಾ ಚ ಬಲೇನ ಚ||

08013004a ಏನಂ ಹತ್ವಾ ನಿಹಂತಾಸಿ ಪುನಃ ಸಂಶಪ್ತಕಾನಿತಿ|

08013004c ವಾಕ್ಯಾಂತೇ ಪ್ರಾಪಯತ್ಪಾರ್ಥಂ ದಂಡಧಾರಾಂತಿಕಂ ಪ್ರತಿ||

“ಈ ಮಾಗಧನು ಅತಿ ಪರಾಕ್ರಮಿಯು. ಇವನಲ್ಲಿ ಶತ್ರುಗಳನ್ನು ಮಥಿಸುವ ಆನೆಯೂ ಇದೆ. ಶಿಕ್ಷಣ ಮತ್ತು ಬಲದಲ್ಲಿ ಇವನು ಭಗದತ್ತನಿಗೇನು ಕಡಿಮೆಯವನಲ್ಲ. ಇವನನ್ನು ಸಂಹರಿಸಿದ ನಂತರ ಪುನಃ ನೀನು ಸಂಶಪ್ತಕರನ್ನು ಎದುರಿಸಿವೆಯಂತೆ!” ಹೀಗೆ ವಾಕ್ಯವನ್ನು ಮುಗಿಸುವುದರೊಂದಿಗೆ ಪಾರ್ಥನನ್ನು ದಂಡಧಾರನ ಬಳಿ ಕೊಂಡೊಯ್ದನು.

08013005a ಸ ಮಾಗಧಾನಾಂ ಪ್ರವರೋಽಮ್ಕುಶಗ್ರಹೋ

         ಗ್ರಹೇಷ್ವಸಹ್ಯೋ ವಿಕಚೋ ಯಥಾ ಗ್ರಹಃ|

08013005c ಸಪತ್ನಸೇನಾಂ ಪ್ರಮಮಾಥ ದಾರುಣೋ

         ಮಹೀಂ ಸಮಗ್ರಾಂ ವಿಕಚೋ ಯಥಾ ಗ್ರಹಃ||

ಆ ಮಗಧ ಪ್ರವರನು ಅಂಕುಶಗ್ರಹಣದಲ್ಲಿ ಮತ್ತು ಆನೆಯನ್ನು ನಿಯಂತ್ರಿಸುವುದರಲ್ಲಿ ಅದ್ವಿತೀಯನಾಗಿದ್ದನು. ಮೇಘದಿಂದ ಆವೃತನಾಗಿರದೇ ತನ್ನ ಪ್ರಖರ ಕಿರಣಗಳಿಂದಿರುವ ಸೂರ್ಯನಂತೆ ಸಹಿಸಲಸಾಧ್ಯನಾಗಿದ್ದನು. ಮೋಡಗಳಿಲ್ಲದ ದಾರುಣ ಕಿರಣಗಳನ್ನು ಹೊಂದಿದ ಪ್ರಳಯಕಾಲದ ಸೂರ್ಯನು ಸಮಗ್ರಭೂಮಂಡವನ್ನೂ ಧ್ವಂಸಮಾಡುವಂತೆ ಅವನು ಶತ್ರುಗಳ ಸೇನೆಗಳನ್ನು ನಾಶಗೊಳಿಸುತ್ತಿದ್ದನು[2].

08013006a ಸುಕಲ್ಪಿತಂ ದಾನವನಾಗಸಂನಿಭಂ

         ಮಹಾಭ್ರಸಂಹ್ರಾದಮಮಿತ್ರಮರ್ದನಂ|

08013006c ರಥಾಶ್ವಮಾತಂಗಗಣಾನ್ಸಹಸ್ರಶಃ

         ಸಮಾಸ್ಥಿತೋ ಹಂತಿ ಶರೈರ್ದ್ವಿಪಾನಪಿ||

ಗಜಾಸುರನಿಗೆ ಸಮಾನವಾಗಿದ್ದ, ಚೆನ್ನಾಗಿ ಸಜ್ಜಾಗಿದ್ದ ಮತ್ತು ಮಹಾಮೇಘದಂತೆ ಗರ್ಜಿಸುತ್ತಾ ಅನೇಕ ಶತ್ರುಗಳನ್ನು ಧ್ವಂಸಗೊಳಿಸುತ್ತಿದ್ದ ಆನೆಯ ಮೇಲೆ ಕುಳಿತು ದಂಡಧಾರನು ರಥ-ಅಶ್ವ-ಮಾತಂಗ ಗಣಗಳನ್ನು ಸಹಸ್ರಾರು ಸಂಖ್ಯೆಗಳಲ್ಲಿ ಬಾಣಗಳನ್ನು ಪ್ರಯೋಗಿಸಿ ಸಂಹರಿಸುತ್ತಿದ್ದನು.

08013007a ರಥಾನಧಿಷ್ಠಾಯ ಸವಾಜಿಸಾರಥೀನ್

         ರಥಾಂಶ್ಚ ಪದ್ಭಿಸ್ತ್ವರಿತೋ ವ್ಯಪೋಥಯತ್|

08013007c ದ್ವಿಪಾಂಶ್ಚ ಪದ್ಭ್ಯಾಂ ಚರಣೈಃ ಕರೇಣ ಚ

         ದ್ವಿಪಾಸ್ಥಿತೋ ಹಂತಿ ಸ ಕಾಲಚಕ್ರವತ್||

ಕಾಲಚಕ್ರದಂತೆ ಅವನ ಆ ಆನೆಯು ಶತ್ರುರಥಗಳ ಮೇಲೆ ತನ್ನೆರಡು ಕಾಲುಗಳನ್ನು ಇಟ್ಟುಕೊಂಡು ರಥದಲ್ಲಿದ್ದ ಯೋಧರನ್ನೂ ಸಾರಥಿಗಳನ್ನೂ ಮತ್ತು ಕುದುರೆಗಳನ್ನೂ ಕಾಲಿನಿಂದ ತುಳಿದು ಸೊಂಡಿಲಿನಿಂದಲೂ ಎತ್ತಿ ಕೆಳಕ್ಕೆ ಕುಕ್ಕಿ ಸಂಹರಿಸುತ್ತಿತ್ತು.

08013008a ನರಾಂಶ್ಚ ಕಾರ್ಷ್ಣಾಯಸವರ್ಮಭೂಷಣಾನ್

         ನಿಪಾತ್ಯ ಸಾಶ್ವಾನಪಿ ಪತ್ತಿಭಿಃ ಸಹ|

08013008c ವ್ಯಪೋಥಯದ್ದಂತಿವರೇಣ ಶುಷ್ಮಿಣಾ

         ಸಶಬ್ದವತ್ಸ್ಥೂಲನಡಾನ್ಯಥಾ ತಥಾ||

ಲೋಹದ ಕವಚಗಳಿಂದ ಭೂಷಿತರಾದ ಕುದುರೆಗಳ ಸವಾರರನ್ನೂ ಪದಾತಿಗಳೊಂದಿಗೆ ಕೆಳಗುರುಳಿಸಿ ಆ ಅನೆಯು ತುಳಿಯುತ್ತಿರಲು ಅದರಿಂದ ಉಂಟಾಗುವ ಶಬ್ಧವು ದೊಡ್ಡ ಬೆಂಡಿನ ಕಾಡನ್ನು ಅದು ತುಳಿಯುತ್ತಿದೆಯೋ ಎನ್ನುವಂತೆ ಕೇಳಿಬರುತ್ತಿತ್ತು.

08013009a ಅಥಾರ್ಜುನೋ ಜ್ಯಾತಲನೇಮಿನಿಸ್ವನೇ

         ಮೃದಂಗಭೇರೀಬಹುಶಂಖನಾದಿತೇ|

08013009c ನರಾಶ್ವಮಾತಂಗಸಹಸ್ರನಾದಿತೈ

         ರಥೋತ್ತಮೇನಾಭ್ಯಪತದ್ದ್ವಿಪೋತ್ತಮಂ||

ಆಗ ಅರ್ಜುನನು ಧನುಷ್ಟೇಂಕಾರಗಳಿಂದಲೂ, ರಥಚಕ್ರಗಳ ಶಬ್ಧಗಳಿಂದಲೂ, ಮೃದಂಗ-ಭೇರಿ ಮತ್ತು ಅನೇಕ ಶಂಖಗಳ ನಿನಾದಗಳೊಂದಿಗೆ ಮತ್ತು ತನ್ನವರ ಸಹಸ್ರಾರು ನರ-ಅಶ್ವ-ಮಾತಂಗಗಳಿಗೆ ಆನಂದವನ್ನೀಯುತ್ತಾ ಉತ್ತಮ ರಥವನ್ನೇರಿ ಆ ಆನೆಯನ್ನು ಆಕ್ರಮಣಿಸಿದನು.

08013010a ತತೋಽರ್ಜುನಂ ದ್ವಾದಶಭಿಃ ಶರೋತ್ತಮೈರ್

         ಜನಾರ್ದನಂ ಷೋಡಶಭಿಃ ಸಮಾರ್ದಯತ್|

08013010c ಸ ದಂಡಧಾರಸ್ತುರಗಾಂಸ್ತ್ರಿಭಿಸ್ತ್ರಿಭಿಸ್

         ತತೋ ನನಾದ ಪ್ರಜಹಾಸ ಚಾಸಕೃತ್||

ಆಗ ದಂಡಧಾರನು ಅರ್ಜುನನನ್ನು ಹನ್ನೆರಡು ಉತ್ತಮ ಶರಗಳಿಂದ ಮತ್ತು ಜನಾರ್ದನನನ್ನು ಹದಿನಾರರಿಂದ ಹೊಡೆದನು. ಕುದುರೆಗಳನ್ನೂ ಮೂರು ಮೂರು ಬಾಣಗಳಿಂದ ಹೊಡೆದು ಗರ್ಜಿಸುತ್ತಾ ಗಹ ಗಹಿಸಿ ನಕ್ಕನು.

08013011a ತತೋಽಸ್ಯ ಪಾರ್ಥಃ ಸಗುಣೇಷುಕಾರ್ಮುಕಂ

         ಚಕರ್ತ ಭಲ್ಲೈರ್ಧ್ವಜಂ ಅಪ್ಯಲಂಕೃತಂ|

08013011c ಪುನರ್ನಿಯಂತ್^ನ್ ಸಹ ಪಾದಗೋಪ್ತೃಭಿಸ್

         ತತಸ್ತು ಚುಕ್ರೋಧ ಗಿರಿವ್ರಜೇಶ್ವರಃ||

ಆಗ ಪಾರ್ಥನು ಭಲ್ಲಗಳಿಂದ ಅವನ ಬಾಣ-ಧನುಸ್ಸುಗಳನ್ನೂ, ಧ್ವಜವನ್ನೂ, ಅಲಂಕಾರಗಳನ್ನೂ ಕತ್ತರಿಸಿದನು. ಅನಂತರ ಆನೆಯಮೇಲೆ ಕುಳಿತಿದ್ದ ಮಾವಟಿಗರನ್ನೂ ಪಾದರಕ್ಷಕರನ್ನೂ ಸಂಹರಿಸಿ, ಗಿರಿವ್ರಜೇಶ್ವರ ದಂಡಧಾರನನ್ನು ಕುಪಿತಗೊಳಿಸಿದನು.

08013012a ತತೋಽರ್ಜುನಂ ಭಿನ್ನಕಟೇನ ದಂತಿನಾ

         ಘನಾಘನೇನಾನಿಲತುಲ್ಯರಂಹಸಾ|

08013012c ಅತೀವ ಚುಕ್ಷೋಭಯಿಷುರ್ಜನಾರ್ದನಂ

         ಧನಂಜಯಂ ಚಾಭಿಜಘಾನ ತೋಮರೈಃ||

ಕುಂಭಸ್ಥಳದಿಂದ ಮದೋದಕವನ್ನು ಸುರಿಸುತ್ತಿದ್ದ, ವಾಯುವೇಗಕ್ಕೆ ಸಮಾನವೇಗವಿದ್ದ, ಸುತೀಕ್ಷ್ಣ ದಂತಗಳಿದ್ದ ಆ ಮದಿಸಿದ ಆನೆಯಿಂದ ಅರ್ಜುನನನ್ನು ಕ್ಷೋಭೆಗೊಳಿಸಲು ಬಯಸಿ ದಂಡಧಾರನು ತೋಮರಗಳಿಂದ ಜನಾರ್ದನ-ಧನಂಜಯರನ್ನು ಪ್ರಹರಿಸಿದನು.

08013013a ಅಥಾಸ್ಯ ಬಾಹೂ ದ್ವಿಪಹಸ್ತಸಂನಿಭೌ

         ಶಿರಶ್ಚ ಪೂರ್ಣೇಂದುನಿಭಾನನಂ ತ್ರಿಭಿಃ|

08013013c ಕ್ಷುರೈಃ ಪ್ರಚಿಚ್ಚೇದ ಸಹೈವ ಪಾಂಡವಃ

         ತತೋ ದ್ವಿಪಂ ಬಾಣಶತೈಃ ಸಮಾರ್ದಯತ್||

ಕೂಡಲೇ ಪಾಂಡವನು ಆನೆಯ ಸೊಂಡಿಲುಗಳಂತಿದ್ದ ಅವನ ಬಾಹುಗಳನ್ನೂ ಪೂರ್ಣಚಂದ್ರನಂತೆ ಹೊಳೆಯುತ್ತಿದ್ದ ಅವನ ಶಿರಸ್ಸನ್ನೂ ಮೂರು ಕ್ಷುರಗಳಿಂದ ಕತ್ತರಿಸಿದನು ಮತ್ತು ಆನೆಯನ್ನು ನೂರು ಬಾಣಗಳಿಂದ ಪ್ರಹರಿಸಿದನು.

08013014a ಸ ಪಾರ್ಥಬಾಣೈಸ್ತಪನೀಯಭೂಷಣೈಃ

         ಸಮಾರುಚತ್ಕಾಂಚನವರ್ಮಭೃದ್ದ್ವಿಪಃ|

08013014c ತಥಾ ಚಕಾಶೇ ನಿಶಿ ಪರ್ವತೋ ಯಥಾ

         ದವಾಗ್ನಿನಾ ಪ್ರಜ್ವಲಿತೌಷಧಿದ್ರುಮಃ||

ಬಂಗಾರದ ಕವಚವನ್ನು ಧರಿಸಿದ್ದ ಮತ್ತು ಬಂಗಾರದ ಭೂಷಣಗಳಿಂದ ಅಲಂಕೃತವಾಗಿದ್ದ ಆ ಆನೆಯು ಪಾರ್ಥನ ಬಾಣಗಳು ಚುಚ್ಚಿಕೊಳ್ಳಲು ರಾತ್ರಿಯಲ್ಲಿ ದಾವಾಗ್ನಿಯಿಂದ ಔಷಧ ವೃಕ್ಷಗಳು ಸುಡುತ್ತಿದ್ದ ಪರ್ವತದಂತೆ ಪ್ರಕಾಶಿಸುತ್ತಿತ್ತು.

08013015a ಸ ವೇದನಾರ್ತೋಽಮ್ಬುದನಿಸ್ವನೋ ನದಂಶ್

         ಚಲನ್ಭ್ರಮನ್ಪ್ರಸ್ಖಲಿತೋಽತುರೋ ದ್ರವನ್|

08013015c ಪಪಾತ ರುಗ್ಣಃ ಸನಿಯಂತೃಕಸ್ತಥಾ

         ಯಥಾ ಗಿರಿರ್ವಜ್ರನಿಪಾತಚೂರ್ಣಿತಃ||

ಅದು ವೇದನೆಯಿಂದ ಗುಡುಗಿನಂತೆ ಆರ್ತನಾದ ಮಾಡುತ್ತಾ ಎಲ್ಲ ಕಡೆ ತಿರುಗುತ್ತಾ ನಡುನಡುವೆ ತತ್ತರಿಸಿ ಬೀಳುತ್ತಾ ಓಡಿಹೋಗುತ್ತಿತ್ತು. ಆದರೆ ಬಾಣಗಳು ಶರೀರದಲ್ಲಿ ಆಳವಾಗಿ ನೆಟ್ಟಿಹೋದುದರಿಂದ ಮುಂದೆ ಹೋಗಲಾರದೇ ವಜ್ರಾಯುಧದಿಂದ ಸೀಳಲ್ಪಟ್ಟ ಪರ್ವತದಂತೆ ಮಾವಟಿಗರೊಂದಿಗೆ ಕೆಳಗುರುಳಿ ಬಿದ್ದಿತು.

08013016a ಹಿಮಾವದಾತೇನ ಸುವರ್ಣಮಾಲಿನಾ

         ಹಿಮಾದ್ರಿಕೂಟಪ್ರತಿಮೇನ ದಂತಿನಾ|

08013016c ಹತೇ ರಣೇ ಭ್ರಾತರಿ ದಂಡ ಆವ್ರಜಜ್

         ಜಿಘಾಂಸುರಿಂದ್ರಾವರಜಂ ಧನಂಜಯಂ||

ರಣದಲ್ಲಿ ಅಣ್ಣನು ಹತನಾಗಲು ದಂಡನು ಇಂದ್ರಾವರಜ ಕೃಷ್ಣ ಮತ್ತು ಧನಂಜಯರನ್ನು ಸಂಹರಿಸಲು ಬಯಸಿ ಹಿಮದಂತೆ ಶುಭ್ರವಾಗಿದ್ದ ಸುವರ್ಣಮಾಲೆಯನ್ನು ತೊಟ್ಟಿದ್ದ ಹಿಮವತ್ಪರ್ತದ ಶಿಖರೋಪಾದಿಯಲ್ಲಿದ್ದ ಆನೆಯನ್ನೇರಿ ಆಕ್ರಮಣಿಸಿದನು.

08013017a ಸ ತೋಮರೈರರ್ಕಕರಪ್ರಭೈಸ್ತ್ರಿಭಿರ್

         ಜನಾರ್ದನಂ ಪಂಚಭಿರೇವ ಚಾರ್ಜುನಂ|

08013017c ಸಮರ್ಪಯಿತ್ವಾ ವಿನನಾದ ಚಾರ್ದಯಂಸ್

         ತತೋಽಸ್ಯ ಬಾಹೂ ವಿಚಕರ್ತ ಪಾಂಡವಃ||

ಅವನು ಮೂರು ಸೂರ್ಯನ ಕಿರಣಗಳಿಗೆ ಸಮಾನ ತೋಮರಗಳಿಂದ ಜನಾರ್ದನನನ್ನೂ ಐದರಿಂದ ಅರ್ಜುನನನ್ನು ಹೊಡೆದು ನಾದಗೈದನು. ಆಗ ಪಾಂಡವನು ಅವನ ಬಾಹುಗಳನ್ನು ತುಂಡರಿಸಿದನು.

08013018a ಕ್ಷುರಪ್ರಕೃತ್ತೌ ಸುಭೃಶಂ ಸತೋಮರೌ

         ಚ್ಯುತಾಂಗದೌ ಚಂದನರೂಷಿತೌ ಭುಜೌ|

08013018c ಗಜಾತ್ಪತಂತೌ ಯುಗಪದ್ವಿರೇಜತುರ್

         ಯಥಾದ್ರಿಶೃಂಗಾತ್ಪತಿತೌ ಮಹೋರಗೌ||

ಕ್ಷುರದಿಂದ ಕತ್ತರಿಸಲ್ಪಟ್ಟ ಆ ಎರಡು ಅಂಗದಯುಕ್ತ ಚಂದನಲೇಪಿತ ಭುಜಗಳು ತೋಮರಗಳೊಂದಿಗೆ ಆನೆಯಿಂದ ಕೆಳಗೆ ಬೀಳುವಾಗ ಗಿರಿಶೃಂಗದಿಂದ ಕೆಳಕ್ಕೆ ಬೀಳುತ್ತಿರುವ ಮಹಾಸರ್ಪಗಳಂತೆ ತೋರುತ್ತಿದ್ದವು.

08013019a ಅಥಾರ್ಧಚಂದ್ರೇಣ ಹೃತಂ ಕಿರೀಟಿನಾ

         ಪಪಾತ ದಂಡಸ್ಯ ಶಿರಃ ಕ್ಷಿತಿಂ ದ್ವಿಪಾತ್|

08013019c ತಚ್ಚೋಣಿತಾಭಂ ನಿಪತದ್ವಿರೇಜೇ

         ದಿವಾಕರೋಽಸ್ತಾದಿವ ಪಶ್ಚಿಮಾಂ ದಿಶಂ||

ಕೂಡಲೇ ಕಿರೀಟಿಯ ಅರ್ಧಚಂದ್ರದಿಂದ ಅಪಹೃತಗೊಂಡ ದಂಡನ ಶಿರವು ಆನೆಯ ಮೇಲಿಂದ ನೆಲಕ್ಕೆ ಬಿದ್ದಿತು. ರಕ್ತದಿಂದ ತೋಯ್ದುಹೋಗಿದ್ದ ಅವನ ಶಿರವು ಆನೆಯ ಮೇಲಿಂದ ಬೀಳುತ್ತಿರುವಾದ ಪಶ್ಚಿಮ ದಿಶೆಯಲ್ಲಿ ಅಸ್ತನಾಗುತ್ತಿರುವ ದಿವಾಕರನಂತೆ ಪ್ರಕಾಶಿಸುತ್ತಿತ್ತು.

08013020a ಅಥ ದ್ವಿಪಂ ಶ್ವೇತನಗಾಗ್ರಸಂನಿಭಂ

         ದಿವಾಕರಾಂಶುಪ್ರತಿಮೈಃ ಶರೋತ್ತಮೈಃ|

08013020c ಬಿಭೇದ ಪಾರ್ಥಃ ಸ ಪಪಾತ ನಾನದನ್

         ಹಿಮಾದ್ರಿಕೂಟಃ ಕುಲಿಶಾಹತೋ ಯಥಾ||

ನಂತರ ಹಿಮಪರ್ವತಶಿಖರದಂತಿದ್ದ ಆನೆಯನ್ನು ದಿವಾಕರಕಿರಣಗಳಂತಿದ್ದ ಉತ್ತಮ ಶರಗಳಿಂದ ಪಾರ್ಥನು ಭೇದಿಸಿದನು. ಅದು ಚೀತ್ಕರಿಸುತ್ತಾ ವಜ್ರಾಯುಧದಿಂದ ಪ್ರಹೃತಗೊಂಡ ಹಿಮಾದ್ರಿಕೂಟದಂತೆ ಕೆಳಗುರುಳಿತು.

08013021a ತತೋಽಪರೇ ತತ್ಪ್ರತಿಮಾ ಗಜೋತ್ತಮಾ

         ಜಿಗೀಷವಃ ಸಂಯತಿ ಸವ್ಯಸಾಚಿನಂ|

08013021c ತಥಾ ಕೃತಾಸ್ತೇನ ಯಥೈವ ತೌ ದ್ವಿಪೌ

         ತತಃ ಪ್ರಭಗ್ನಂ ಸುಮಹದ್ರಿಪೋರ್ಬಲಂ||

ಆಗ ಅದರಂತೆಯೇ ಇದ್ದ ಇತರ ಉತ್ತಮ ಆನೆಗಳು ಸವ್ಯಸಾಚಿಯನ್ನು ಸಂಹರಿಸಲು ಮುನ್ನುಗ್ಗಿ ಬರಲು ಅರ್ಜುನನು ಆ ಎರಡು ಆನೆಗಳಂತೆ ಇವುಗಳನ್ನೂ ಸಂಹರಿಸಿದನು. ಆಗ ಆ ಮಹಾರಿಪುಬಲವು ಭಗ್ನಗೊಂಡಿತು.

08013022a ಗಜಾ ರಥಾಶ್ವಾಃ ಪುರುಷಾಶ್ಚ ಸಂಘಶಃ

         ಪರಸ್ಪರಘ್ನಾಃ ಪರಿಪೇತುರಾಹವೇ|

08013022c ಪರಸ್ಪರಪ್ರಸ್ಖಲಿತಾಃ ಸಮಾಹತಾ

         ಭೃಶಂ ಚ ತತ್ತತ್ಕುಲಭಾಷಿಣೋ ಹತಾಃ||

ಆನೆಗಳು, ರಥಗಳು, ಕುದುರೆಗಳು, ಮತ್ತು ಪುರುಷ ಗುಂಪುಗಳು ಪರಸ್ಪರರನ್ನು ಕಾದಾಡುತ್ತಾ ರಣದಲ್ಲಿ ಬೀಳುತ್ತಿದ್ದವು. ಪರಸ್ಪರರೊಡನೆ ಯುದ್ಧಮಾಡುತ್ತಾ ಗಾಯಗೊಂಡು ತತ್ತರಿಸುತ್ತಾ ಮನಸ್ಸಿಗೆ ಬಂದಂತೆ ಕೂಗಿಕೊಳ್ಳುತ್ತಾ ಕೆಳಕ್ಕೆ ಬಿದ್ದು ಅವು ಅಸುನೀಗಿದವು.

08013023a ಅಥಾರ್ಜುನಂ ಸ್ವೇ ಪರಿವಾರ್ಯ ಸೈನಿಕಾಃ

         ಪುರಂದರಂ ದೇವಗಣಾ ಇವಾಬ್ರುವನ್|

08013023c ಅಭೈಷ್ಮ ಯಸ್ಮಾನ್ಮರಣಾದಿವ ಪ್ರಜಾಃ

         ಸ ವೀರ ದಿಷ್ಟ್ಯಾ ನಿಹತಸ್ತ್ವಯಾ ರಿಪುಃ||

ಪುರಂದರನನ್ನು ದೇವಗಣಗಳು ಹೇಗೆ ಹಾಗೆ ಅರ್ಜುನನನ್ನು ಸುತ್ತುವರೆದು ಸೈನಿಕರು ಹೀಗೆ ಹೇಳಿದರು: “ಪ್ರಜೆಗಳು ಮರಣಕ್ಕೆ ಹೆದರುವಂತೆ ನಾವು ದಂಡಧಾರನಿಗೆ ಹೆದರಿದ್ದೆವು. ವೀರ! ಅಂಥಹ ಶತ್ರುವನ್ನು ನೀನು ಸಂಹರಿಸಿದುದು ಒಳ್ಳೆಯದೇ ಆಯಿತು.

08013024a ನ ಚೇತ್ಪರಿತ್ರಾಸ್ಯ ಇಮಾಂ ಜನಾನ್ಭಯಾದ್

         ದ್ವಿಷದ್ಭಿರೇವಂ ಬಲಿಭಿಃ ಪ್ರಪೀಡಿತಾನ್|

08013024c ತಥಾಭವಿಷ್ಯದ್ದ್ವಿಷತಾಂ ಪ್ರಮೋದನಂ

         ಯಥಾ ಹತೇಷ್ವೇಷ್ವಿಹ ನೋಽರಿಷು ತ್ವಯಾ||

ಬಲಿಷ್ಠ ಶತ್ರುಗಳಿಂದ ಪೀಡಿತರಾದ ಈ ಜನರನ್ನು ಭಯದಿಂದ ನೀನು ರಕ್ಷಿಸದೇ ಇದ್ದರೆ ಶತ್ರುಗಳನ್ನು ನೀನು ಸಂಹರಿಸಿದುದರಿಂದ ನಮಗುಂಟಾದ ಆನಂದದಂತೆ ನಮ್ಮವರ ಸಂಹಾರದಿಂದಾಗಿ ಶತ್ರುಗಳೇ ಮೋದಿಸುತ್ತಿದ್ದರು.”

08013025a ಇತೀವ ಭೂಯಶ್ಚ ಸುಹೃದ್ಭಿರೀರಿತಾ

         ನಿಶಮ್ಯ ವಾಚಃ ಸುಮನಾಸ್ತತೋಽರ್ಜುನಃ|

08013025c ಯಥಾನುರೂಪಂ ಪ್ರತಿಪೂಜ್ಯ ತಂ ಜನಂ

         ಜಗಾಮ ಸಂಶಪ್ತಕಸಂಘಹಾ ಪುನಃ||

ಹೀಗೆ ಪುನಃ ಪುನಃ ಸುಹೃದಯರು ಹೇಳಿದ ಮಾತುಗಳನ್ನು ಕೇಳಿ ಸುಮನಸ್ಕನಾದ ಅರ್ಜುನನು ಯಥಾನುರೂಪವಾಗಿ ಆ ಜನರನ್ನು ಪುರಸ್ಕರಿಸಿ ಪುನಃ ಸಂಶಪ್ತಕಗಣಗಳ ಬಳಿ ಹೋದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ದಂಡವಧೇ ತ್ರಯೋದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ದಂಡವಧ ಎನ್ನುವ ಹದಿಮೂರನೇ ಅಧ್ಯಾಯವು.

[1] ಮಗಧದೇಶದ ಕ್ಷತ್ರಿಯ, ಕ್ರೋಧವರ್ಧನ ಎಂಬ ರಾಕ್ಷಸನ ಅಂಶದಿಂದ ಹುಟ್ಟಿದವನು.

[2] ವ್ಯಾಖ್ಯಾನಕಾರರು ಗ್ರಹೇ ಎನ್ನುವುದಕ್ಕೆ ಆದಿತ್ಯಾದಿಗ್ರಹಸಮೂಹೇ ಎಂದೂ ವಿಕಚಃ ಎನ್ನುವುದಲ್ಲಿ ಕಚೋಪಲಕ್ಷಿತ ಶಿರೋರಹಿತ ಕೇತುರೂಪೀ ಗ್ರಹ ಇವ ಅಪ್ರಸಹ್ಯಃ ಅಂದರೆ ಆದಿತ್ಯಾದಿ ಗ್ರಹಗಳ ಸಮೂಹದಲ್ಲಿ ಕಚೋಪಲಕ್ಷಿತ ಶಿರಸ್ಸಿನಿಂದ ವಿಹೀನ ಕೇತುಗ್ರಹವನ್ನು ಸಹಿಸಿಕೊಳ್ಳಲು ಅಸಾಧ್ಯವಾಗಿರುವಂತೆ ದಂಡಧಾರನು ಸಹಿಸಲು ಅಸಾಧ್ಯನಾಗಿದ್ದನು ಎಂದೂ ಅನುವಾದಿಸಿದ್ದಾರೆ. ವಿಕಚಃ ಎನ್ನುವುದಕ್ಕೆ ವಿಸ್ತೀರ್ಣೋ ಗ್ರಹಃ ಧೂಮಕೇತುರೂಪೀ ಉತ್ಪಾತ ಗ್ರಹ ಇವ ಎಂದೂ ಅಂದರೆ ವಿಸ್ತೀರ್ಣವಾದ ಧೂಪಕೇತುರೂಪ ಉತ್ಪಾತಗ್ರಹದಂತೆ ಎಂದೂ ಅರ್ಥೈಸಿದ್ದಾರೆ. ಕಚ ಎಂದರೆ ಮೇಘ ಎಂಬ ಅರ್ಥವೂ ಇದೆ. ಆದುದರಿಂದ ವಿಕಚಃ ಎಂದರೆ ಮೇಘರಹಿತ ಮತ್ತು ಗ್ರಹಃ ಎಂದರೆ ಸೂರ್ಯ.

Comments are closed.