ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ
೫
ಭೀಷ್ಮನ ನಂತರ ಕೌರವ ಸೇನಾಪತಿಯು ಯಾರಾಗಬೇಕೆಂದು ದುರ್ಯೋಧನನು ಕರ್ಣನನ್ನು ಕೇಳಲು, ಕರ್ಣನು ದ್ರೋಣನ ಹೆಸರನ್ನು ಸೂಚಿಸುವುದು (೧-೨೦). ದುರ್ಯೋಧನನು ದ್ರೋಣನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದುದು (೨೧-೪೦).
07005001 ಸಂಜಯ ಉವಾಚ|
07005001a ರಥಸ್ಥಂ ಪುರುಷವ್ಯಾಘ್ರಂ ದೃಷ್ಟ್ವಾ ಕರ್ಣಮವಸ್ಥಿತಂ|
07005001c ಹೃಷ್ಟೋ ದುರ್ಯೋಧನೋ ರಾಜನ್ನಿದಂ ವಚನಮಬ್ರವೀತ್||
ಸಂಜಯನು ಹೇಳಿದನು: “ರಾಜನ್! ರಥದಲ್ಲಿ ನಿಂತಿದ್ದ ಪುರುಷವ್ಯಾಘ್ರ ಕರ್ಣನನ್ನು ನೋಡಿ ಹೃಷ್ಟನಾದ ದುರ್ಯೋಧನನು ಈ ಮಾತನ್ನಾಡಿನು:
07005002a ಸನಾಥಮಿದಮತ್ಯರ್ಥಂ ಭವತಾ ಪಾಲಿತಂ ಬಲಂ|
07005002c ಮನ್ಯೇ ಕಿಂ ತು ಸಮರ್ಥಂ ಯದ್ಧಿತಂ ತತ್ಸಂಪ್ರಧಾರ್ಯತಾಂ||
“ನಿನ್ನಿಂದ ಪಾಲಿತವಾದ ಈ ಸೇನೆಯು ಈಗ ನಾಯಕನನ್ನು ಪಡೆದಿದೆ. ಈಗ ನೀನು ಏನು ಮಾಡುವುದು ಒಳ್ಳೆಯದೆಂದು ಅಭಿಪ್ರಾಯ ಪಡುತ್ತೀಯೋ ಅದರಂತೆಯೇ ಆಗಲಿ!”
07005003 ಕರ್ಣ ಉವಾಚ|
07005003a ಬ್ರೂಹಿ ತತ್ಪುರುಷವ್ಯಾಘ್ರ ತ್ವಂ ಹಿ ಪ್ರಾಜ್ಞತಮೋ ನೃಪ|
07005003c ಯಥಾ ಚಾರ್ಥಪತಿಃ ಕೃತ್ಯಂ ಪಶ್ಯತೇ ನ ತಥೇತರಃ||
ಕರ್ಣನು ಹೇಳಿದನು: “ಪುರುಷವ್ಯಾಘ್ರ! ನೃಪ! ನಿನಗೆ ಎಲ್ಲರಿಗಿಂತ ಹೆಚ್ಚು ತಿಳಿದಿದೆ. ನೀನೇ ಹೇಳು. ರಾಜನು ಏನು ಮಾಡಬೇಕೆಂದು ಯೋಚಿಸಿರುತ್ತಾನೋ ಅದನ್ನು ಇನ್ನೊಬ್ಬರು ಯೋಚಿಸಿ ಹೇಳಲಿಕ್ಕಾಗುವುದಿಲ್ಲ.
07005004a ತೇ ಸ್ಮ ಸರ್ವೇ ತವ ವಚಃ ಶ್ರೋತುಕಾಮಾ ನರೇಶ್ವರ|
07005004c ನಾನ್ಯಾಯ್ಯಂ ಹಿ ಭವಾನ್ವಾಕ್ಯಂ ಬ್ರೂಯಾದಿತಿ ಮತಿರ್ಮಮ||
ನರೇಶ್ವರ! ಇಲ್ಲಿ ನಾವೆಲ್ಲರೂ ನಿನ್ನ ಮಾತುಗಳನ್ನು ಕೇಳಲು ಬಯಸಿದ್ದೇವೆ. ನೀನು ಅನ್ಯಾಯದ ಮಾತುಗಳನ್ನು ಹೇಳುವುದೇ ಇಲ್ಲವೆಂದು ನನ್ನ ಅಭಿಪ್ರಾಯ.”
07005005 ದುರ್ಯೋಧನ ಉವಾಚ|
07005005a ಭೀಷ್ಮಃ ಸೇನಾಪ್ರಣೇತಾಸೀದ್ವಯಸಾ ವಿಕ್ರಮೇಣ ಚ|
07005005c ಶ್ರುತೇನ ಚ ಸುಸಂಪನ್ನಃ ಸರ್ವೈರ್ಯೋಧಗುಣೈಸ್ತಥಾ||
ದುರ್ಯೋಧನನು ಹೇಳಿದನು: “ವಯಸ್ಸು, ವಿಕ್ರಮ, ವಿದ್ಯೆ ಮತ್ತು ಯೋಧನಲ್ಲಿರಬೇಕಾದ ಎಲ್ಲ ಗುಣಗಳಿಂದ ಸುಸಂಪನ್ನನಾಗಿದ್ದ ಭೀಷ್ಮನು ನಮ್ಮ ಸೇನಾಪತಿಯಾಗಿದ್ದನು.
07005006a ತೇನಾತಿಯಶಸಾ ಕರ್ಣ ಘ್ನತಾ ಶತ್ರುಗಣಾನ್ಮಮ|
07005006c ಸುಯುದ್ಧೇನ ದಶಾಹಾನಿ ಪಾಲಿತಾಃ ಸ್ಮೋ ಮಹಾತ್ಮನಾ||
ಕರ್ಣ! ಅತಿ ಯಶಸ್ವಿಯಾಗಿದ್ದ ಆ ಮಹಾತ್ಮನು ನನ್ನ ಶತ್ರುಗಣಗಳನ್ನು ಸಂಹರಿಸುತ್ತ ಉತ್ತಮವಾಗಿ ಯುದ್ಧಮಾಡಿ ಹತ್ತು ದಿನಗಳು ನಮ್ಮನ್ನು ಪಾಲಿಸಿದನು.
07005007a ತಸ್ಮಿನ್ನಸುಕರಂ ಕರ್ಮ ಕೃತವತ್ಯಾಸ್ಥಿತೇ ದಿವಂ|
07005007c ಕಂ ನು ಸೇನಾಪ್ರಣೇತಾರಂ ಮನ್ಯಸೇ ತದನಂತರಂ||
ಅವನು ಸಾಧಿಸಲಸಾದ್ಯವಾದುದನ್ನು ಸಾಧಿಸಿ ಸ್ವರ್ಗದ ದಾರಿಯನ್ನು ಹಿಡಿದಿದ್ದಾನೆ. ಅವನ ನಂತರ ಯಾರನ್ನು ಸೇನಾಪತಿಯನ್ನಾಗಿ ಮಾಡಬೇಕೆಂದು ನಿನ್ನ ಅಭಿಪ್ರಾಯ?
07005008a ನ ಋತೇ ನಾಯಕಂ ಸೇನಾ ಮುಹೂರ್ತಮಪಿ ತಿಷ್ಠತಿ|
07005008c ಆಹವೇಷ್ವಾಹವಶ್ರೇಷ್ಠ ನೇತೃಹೀನೇವ ನೌರ್ಜಲೇ||
ಆಹವಶ್ರೇಷ್ಠ! ನಾಯಕನಿಲ್ಲದೇ ಯುದ್ಧದಲ್ಲಿ ಸೇನೆಯು ನೀರಿನಲ್ಲಿ ನಾಯಕನಿಲ್ಲದ ದೋಣಿಯಂತೆ ಮುಹೂರ್ತಕಾಲವೂ ನಿಲ್ಲಲಾರದು.
07005009a ಯಥಾ ಹ್ಯಕರ್ಣಧಾರಾ ನೌ ರಥಶ್ಚಾಸಾರಥಿರ್ಯಥಾ|
07005009c ದ್ರವೇದ್ಯಥೇಷ್ಟಂ ತದ್ವತ್ದೃತೇ ಸೇನಾಪತಿಂ ಬಲಂ||
ನಡೆಸುವವನಿಲ್ಲದ ದೋಣಿಯಂತೆ, ಸಾರಥಿಯಿಲ್ಲದ ರಥದಂತೆ ಸೇನಾಪತಿಯಿಲ್ಲದ ಸೇನೆಯು ಇಷ್ಟಬಂದಲ್ಲಿ ಓಡಿ ಹೋಗುವುದಿಲ್ಲವೇ?
07005010a ಸ ಭವಾನ್ವೀಕ್ಷ್ಯ ಸರ್ವೇಷು ಮಾಮಕೇಷು ಮಹಾತ್ಮಸು|
07005010c ಪಶ್ಯ ಸೇನಾಪತಿಂ ಯುಕ್ತಮನು ಶಾಂತನವಾದಿಹ||
ಈಗ ನೀನು ನನ್ನವರಾದ ಮಹಾತ್ಮರಲ್ಲಿ ಶಾಂತನವನಂತೆ ಸೇನಾಪತಿಯಾಗಲು ಯುಕ್ತನಾರೆಂದು ನೋಡು!
07005011a ಯಂ ಹಿ ಸೇನಾಪ್ರಣೇತಾರಂ ಭವಾನ್ವಕ್ಷ್ಯತಿ ಸಂಯುಗೇ|
07005011c ತಂ ವಯಂ ಸಹಿತಾಃ ಸರ್ವೇ ಪ್ರಕರಿಷ್ಯಾಮ ಮಾರಿಷ||
ಮಾರಿಷ! ಯಾರನ್ನು ನೀನು ಸಂಯುಗದಲ್ಲಿ ಸೇನಾಪತಿಯೆಂದು ಆರಿಸುತ್ತೀಯೋ ಅವನನ್ನೇ ನಾವೆಲ್ಲರೂ ಸೇರಿ ಸೇನಾಪತಿಯೆಂದು ಮಾಡೋಣ!”
07005012 ಕರ್ಣ ಉವಾಚ|
07005012a ಸರ್ವ ಏವ ಮಹಾತ್ಮಾನ ಇಮೇ ಪುರುಷಸತ್ತಮಾಃ|
07005012c ಸೇನಾಪತಿತ್ವಮರ್ಹಂತಿ ನಾತ್ರ ಕಾರ್ಯಾ ವಿಚಾರಣಾ||
ಕರ್ಣನು ಹೇಳಿದನು: “ಈ ಎಲ್ಲ ಮಹಾತ್ಮ ಪುರುಷಸತ್ತಮರೂ ಸೇನಾಪತಿಯಾಗಲು ಅರ್ಹರಾಗಿದ್ದಾರೆ. ಅದರಲ್ಲಿ ವಿಚಾರಣೆ ಮಾಡುವುದೇನೂ ಇಲ್ಲ.
07005013a ಕುಲಸಂಹನನಜ್ಞಾನೈರ್ಬಲವಿಕ್ರಮಬುದ್ಧಿಭಿಃ|
07005013c ಯುಕ್ತಾಃ ಕೃತಜ್ಞಾ ಹ್ರೀಮಂತ ಆಹವೇಷ್ವನಿವರ್ತಿನಃ||
ಎಲ್ಲರೂ ಕುಲೀನರು. ಯುದ್ಧದ ಜ್ಞಾನವುಳ್ಳವರು. ವಿಕ್ರಮ ಬುದ್ಧಿಯುಳ್ಳವರು. ಕೃತಜ್ಞರು. ನಾಚಿಕೆಯಿದ್ದವರು. ಮತ್ತು ಯುದ್ಧದಿಂದ ಪಲಾಯನ ಮಾಡದವರು.
07005014a ಯುಗಪನ್ನ ತು ತೇ ಶಕ್ಯಾಃ ಕರ್ತುಂ ಸರ್ವೇ ಪುರಃಸರಾಃ|
07005014c ಏಕ ಏವಾತ್ರ ಕರ್ತವ್ಯೋ ಯಸ್ಮಿನ್ವೈಶೇಷಿಕಾ ಗುಣಾಃ||
ಆದರೆ ಅವರೆಲ್ಲರೂ ಏಕ ಕಾಲದಲ್ಲಿ ನಾಯಕರಾಗಲಾರರು. ವಿಶೇಷ ಗುಣಗಳಿರುವ ಒಬ್ಬನನ್ನೇ ನಾಯಕನನ್ನಾಗಿ ಮಾಡಬೇಕು.
07005015a ಅನ್ಯೋನ್ಯಸ್ಪರ್ಧಿನಾಂ ತೇಷಾಂ ಯದ್ಯೇಕಂ ಸತ್ಕರಿಷ್ಯಸಿ|
07005015c ಶೇಷಾ ವಿಮನಸೋ ವ್ಯಕ್ತಂ ನ ಯೋತ್ಸ್ಯಂತೇ ಹಿ ಭಾರತ||
ಭಾರತ! ಅನ್ಯೋನ್ಯರೊಡನೆ ಸ್ಪರ್ಧಿಸುವ ಅವರಲ್ಲಿ ಯಾರೊಬ್ಬನನ್ನು ನೀನು ಸತ್ಕರಿಸಿದರೂ ಉಳಿದವರು ಬೇಸರ ಪಟ್ಟುಕೊಂಡು ಯುದ್ಧಮಾಡದೇ ಇರಬಹುದು.
07005016a ಅಯಂ ತು ಸರ್ವಯೋಧಾನಾಮಾಚಾರ್ಯಃ ಸ್ಥವಿರೋ ಗುರುಃ|
07005016c ಯುಕ್ತಃ ಸೇನಾಪತಿಃ ಕರ್ತುಂ ದ್ರೋಣಃ ಶಸ್ತ್ರಭೃತಾಂ ವರಃ||
ಈ ಸರ್ವಯೋಧರ ಆಚಾರ್ಯ, ವೃದ್ಧ ಗುರು, ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನನ್ನು ಸೇನಾಪತಿಯನ್ನಾಗಿ ಮಾಡುವುದು ಯುಕ್ತವಾಗಿದೆ.
07005017a ಕೋ ಹಿ ತಿಷ್ಠತಿ ದುರ್ಧರ್ಷೇ ದ್ರೋಣೇ ಬ್ರಹ್ಮವಿದುತ್ತಮೇ|
07005017c ಸೇನಾಪತಿಃ ಸ್ಯಾದನ್ಯೋಽಸ್ಮಾಚ್ಚುಕ್ರಾಂಗಿರಸದರ್ಶನಾತ್||
ಶುಕ್ರ ಮತ್ತು ಅಂಗಿರಸರಂತೆ ತೋರುವ ಈ ಬ್ರಹ್ಮವಿದುತ್ತಮ ದುರ್ಧರ್ಷ ದ್ರೋಣನನ್ನು ಬಿಟ್ಟು ಬೇರೆ ಯಾರುತಾನೇ ಸೇನಾಪತಿಯಾಗಲು ನಿಲ್ಲುತ್ತಾರೆ?
07005018a ನ ಚ ಸ ಹ್ಯಸ್ತಿ ತೇ ಯೋಧಃ ಸರ್ವರಾಜಸು ಭಾರತ|
07005018c ಯೋ ದ್ರೋಣಂ ಸಮರೇ ಯಾಂತಂ ನಾನುಯಾಸ್ಯತಿ ಸಂಯುಗೇ||
ಭಾರತ! ಈ ಸರ್ವ ರಾಜರಲ್ಲಿ ಸಮರದಲ್ಲಿ ಹೋಗುತ್ತಿರುವ ದ್ರೋಣನನ್ನು ಅನುಸರಿಸದೇ ಇರುವವರು ಯಾರೂ ಇಲ್ಲ.
07005019a ಏಷ ಸೇನಾಪ್ರಣೇತಾರಂ ಏಷ ಶಸ್ತ್ರಭೃತಾಮಪಿ|
07005019c ಏಷ ಬುದ್ಧಿಮತಾಂ ಚೈವ ಶ್ರೇಷ್ಠೋ ರಾಜನ್ಗುರುಶ್ಚ ತೇ||
ರಾಜನ್! ಇವನು ಸೇನಾ ಪ್ರಣೇತಾರ. ಇವನು ಶಸ್ತ್ರಭೃತರಲ್ಲಿ ಶ್ರೇಷ್ಠನೂ ಕೂಡ. ಇವನು ಬುದ್ಧಿವಂತರಲ್ಲಿ ಕೂಡ ಶ್ರೇಷ್ಠ. ಮತ್ತು ಇವನು ನಿನ್ನ ಗುರುವೂ ಹೌದು.
07005020a ಏವಂ ದುರ್ಯೋಧನಾಚಾರ್ಯಮಾಶು ಸೇನಾಪತಿಂ ಕುರು|
07005020c ಜಿಗೀಷಂತೋಽಸುರಾನ್ಸಂಖ್ಯೇ ಕಾರ್ತ್ತಿಕೇಯಮಿವಾಮರಾಃ||
ದುರ್ಯೋಧನ! ಹೀಗಿರುವ ಆಚಾರ್ಯನನ್ನು ಸೇನಾಪತಿಯನ್ನಾಗಿ ಮಾಡು. ಅವನು ಕಾರ್ತಿಕೇಯನು ಅಮರರಿಗೆ ಅಸುರರನ್ನು ಗೆದ್ದುಕೊಟ್ಟಂತೆ ನಿನಗೆ ಜಯವನ್ನು ನೀಡುತ್ತಾನೆ.””
07005021 ಸಂಜಯ ಉವಾಚ|
07005021a ಕರ್ಣಸ್ಯ ವಚನಂ ಶ್ರುತ್ವಾ ರಾಜಾ ದುರ್ಯೋಧನಸ್ತದಾ|
07005021c ಸೇನಾಮಧ್ಯಗತಂ ದ್ರೋಣಮಿದಂ ವಚನಮಬ್ರವೀತ್||
ಸಂಜಯನು ಹೇಳಿದನು: “ಕರ್ಣನ ಮಾತನ್ನು ಕೇಳಿ ರಾಜಾ ದುರ್ಯೋಧನನು ಸೇನೆಯ ಮಧ್ಯ ಹೋಗಿ ದ್ರೋಣನಿಗೆ ಈ ಮಾತನ್ನಾಡಿದನು:
07005022a ವರ್ಣಶ್ರೈಷ್ಠ್ಯಾತ್ಕುಲೋತ್ಪತ್ತ್ಯಾ ಶ್ರುತೇನ ವಯಸಾ ಧಿಯಾ|
07005022c ವೀರ್ಯಾದ್ದಾಕ್ಷ್ಯಾದಧೃಷ್ಯತ್ವಾದರ್ಥಜ್ಞಾನಾನ್ನಯಾಜ್ಜಯಾತ್||
07005023a ತಪಸಾ ಚ ಕೃತಜ್ಞತ್ವಾದ್ವೃದ್ಧಃ ಸರ್ವಗುಣೈರಪಿ|
07005023c ಯುಕ್ತೋ ಭವತ್ಸಮೋ ಗೋಪ್ತಾ ರಾಜ್ಞಾಮನ್ಯೋ ನ ವಿದ್ಯತೇ||
“ವರ್ಣದ ಶ್ರೇಷ್ಠತೆಯಲ್ಲಿ, ಜನ್ಮತಾಳಿದ ಕುಲದಲ್ಲಿ, ಶಸ್ತ್ರಜ್ಞಾನದಲ್ಲಿ, ವಯಸ್ಸಿನಲ್ಲಿ, ಬುದ್ಧಿಯಲ್ಲಿ, ವೀರ್ಯದಲ್ಲಿ, ದಕ್ಷತೆಯಲ್ಲಿ, ಅಜೇಯತ್ವದಲ್ಲಿ, ಅರ್ಥಜ್ಞಾನದಲ್ಲಿ, ಜಯದಲ್ಲಿ, ತಪಸ್ಸಿನಲ್ಲಿ, ಕೃತಜ್ಞತೆಯಲ್ಲಿ ಮತ್ತು ಇತರ ಸರ್ವ ಗುಣಗಳಲ್ಲಿ ನಿಮಗೆ ಸಮನಾಗಿರುವವರು ಮತ್ತು ರಕ್ಷಕರು ಯಾರೂ ಇಲ್ಲವೆಂದು ರಾಜನಿಗೆ ತಿಳಿದಿದೆ.
07005024a ಸ ಭವಾನ್ಪಾತು ನಃ ಸರ್ವಾನ್ವಿಬುಧಾನಿವ ವಾಸವಃ|
07005024c ಭವನ್ನೇತ್ರಾಃ ಪರಾಂ ಜೇತುಮಿಚ್ಚಾಮೋ ದ್ವಿಜಸತ್ತಮ||
ದ್ವಿಜಸತ್ತಮ! ವಾಸವನು ದೇವತೆಗಳನ್ನು ಹೇಗೋ ಹಾಗೆ ನೀವು ನಮ್ಮೆಲ್ಲರನ್ನೂ ರಕ್ಷಿಸಬೇಕು. ನಿಮ್ಮ ನೇತೃತ್ವದಲ್ಲಿ ಶತ್ರುಗಳನ್ನು ಜಯಿಸಲು ಇಚ್ಛಿಸುತ್ತೇನೆ.
07005025a ರುದ್ರಾಣಾಮಿವ ಕಾಪಾಲೀ ವಸೂನಾಮಿವ ಪಾವಕಃ|
07005025c ಕುಬೇರ ಇವ ಯಕ್ಷಾಣಾಂ ಮರುತಾಮಿವ ವಾಸವಃ||
07005026a ವಸಿಷ್ಠ ಇವ ವಿಪ್ರಾಣಾಂ ತೇಜಸಾಮಿವ ಭಾಸ್ಕರಃ|
07005026c ಪಿತೄಣಾಮಿವ ಧರ್ಮೋಽಥ ಆದಿತ್ಯಾನಾಮಿವಾಂಬುರಾಟ್||
07005027a ನಕ್ಷತ್ರಾಣಾಮಿವ ಶಶೀ ದಿತಿಜಾನಾಮಿವೋಶನಾಃ|
07005027c ಶ್ರೇಷ್ಠಃ ಸೇನಾಪ್ರಣೇತೄಣಾಂ ಸ ನಃ ಸೇನಾಪತಿರ್ಭವ||
ರುದ್ರರಲ್ಲಿ ಕಪಾಲಿಯಂತೆ, ವಸುಗಳಲ್ಲಿ ಪಾವಕನಂತೆ, ಯಕ್ಷರಲ್ಲಿ ಕುಬೇರನಂತೆ, ಮರುತರಲ್ಲಿ ವಾಸವನಂತೆ, ವಿಪ್ರರಲ್ಲಿ ವಸಿಷ್ಠನಂತೆ, ತೇಜಸ್ವಿಗಳಲ್ಲಿ ಭಾಸ್ಕರನಂತೆ, ಪಿತೃಗಳಲ್ಲಿ ಧರ್ಮನಂತೆ, ಆದಿತ್ಯರಲ್ಲಿ ಸೂರ್ಯನಂತೆ, ನಕ್ಷತ್ರಗಳಲ್ಲಿ ಶಶಿಯಂತೆ, ದೈತ್ಯರಲ್ಲಿ ಶುಕ್ರನಂತೆ ಸೇನಾಪತಿಗಳಲ್ಲಿ ಶ್ರೇಷ್ಠನಾಗಿ ನನ್ನ ಸೇನಾಪತಿಯಾಗು.
07005028a ಅಕ್ಷೌಹಿಣ್ಯೋ ದಶೈಕಾ ಚ ವಶಗಾಃ ಸಂತು ತೇಽನಘ|
07005028c ತಾಭಿಃ ಶತ್ರೂನ್ಪ್ರತಿವ್ಯೂಹ್ಯ ಜಹೀಂದ್ರೋ ದಾನವಾನಿವ||
ಅನಘ! ಈ ಹನ್ನೊಂದು ಅಕ್ಷೌಹಿಣಿಗಳು ನಿನ್ನ ವಶದಲ್ಲಿ ಬಂದಿವೆ. ನೀನೂ ಶತ್ರುಗಳ ಪ್ರತಿಯಾಗಿ ವ್ಯೂಹವನ್ನು ರಚಿಸಿ ದಾನವರನ್ನು ಇಂದ್ರನು ಹೇಗೋ ಹಾಗೆ ಶತ್ರುಗಳನ್ನ್ನು ಸಂಹರಿಸು.
07005029a ಪ್ರಯಾತು ನೋ ಭವಾನಗ್ರೇ ದೇವಾನಾಮಿವ ಪಾವಕಿಃ|
07005029c ಅನುಯಾಸ್ಯಾಮಹೇ ತ್ವಾಜೌ ಸೌರಭೇಯಾ ಇವರ್ಷಭಂ||
ಪಾವಕೀ ಕಾರ್ತಿಕೇಯನು ದೇವಸೇನೆಯ ಅಗ್ರಭಾಗದಲ್ಲಿ ಹೋಗುವಂತೆ ನಿವು ನಮ್ಮ ಮುಂಭಾಗದಲ್ಲಿ ನಡೆಯಿರಿ. ಹಸುಗಳು ಹೋರಿಯನ್ನು ಅನುಸರಿಸುವಂತೆ ನಾವು ನಿಮ್ಮನ್ನು ಹಿಂಬಾಲಿಸಿ ಬರುತ್ತೇವೆ.
07005030a ಉಗ್ರಧನ್ವಾ ಮಹೇಷ್ವಾಸೋ ದಿವ್ಯಂ ವಿಸ್ಫಾರಯನ್ಧನುಃ|
07005030c ಅಗ್ರೇ ಭವಂತಂ ದೃಷ್ಟ್ವಾ ನೋ ನಾರ್ಜುನಃ ಪ್ರಸಹಿಷ್ಯತೇ||
ದಿವ್ಯ ಧನುಸ್ಸನ್ನು ಟೇಂಕರಿಸಿ ಮುಂದಿರುವ ಮಹೇಷ್ವಾಸ ಉಗ್ರಧನ್ವಿ ನಿಮ್ಮನ್ನು ನೋಡಿ ಅರ್ಜುನನು ಪ್ರಹರಿಸುವುದಿಲ್ಲ.
07005031a ಧ್ರುವಂ ಯುಧಿಷ್ಠಿರಂ ಸಂಖ್ಯೇ ಸಾನುಬಂಧಂ ಸಬಾಂಧವಂ|
07005031c ಜೇಷ್ಯಾಮಿ ಪುರುಷವ್ಯಾಘ್ರ ಭವಾನ್ಸೇನಾಪತಿರ್ಯದಿ||
ಪುರುಷವ್ಯಾಘ್ರ! ಒಂದುವೇಳೆ ನೀವು ನನ್ನ ಸೇನಾಪತಿಯಾದರೆ ಯುದ್ಧದಲ್ಲಿ ಬಾಂಧವರು ಮತ್ತು ಅನುಯಾಯಿಗಳೊಂದಿಗೆ ಯುಧಿಷ್ಠಿರನನ್ನು ಗೆಲ್ಲುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
07005032a ಏವಮುಕ್ತೇ ತತೋ ದ್ರೋಣೇ ಜಯೇತ್ಯೂಚುರ್ನರಾಧಿಪಾಃ|
07005032c ಸಿಂಹನಾದೇನ ಮಹತಾ ಹರ್ಷಯಂತಸ್ತವಾತ್ಮಜಂ||
ದ್ರೋಣನಿಗೆ ಹೀಗೆ ಹೇಳಲು ಜಯುವಾಗಲೆಂದು ನರಾಧಿಪರು ಕೂಗಿ ಹೇಳಿ, ಮಹಾ ಸಿಂಹನಾದದಿಂದ ನಿನ್ನ ಮಗನನ್ನು ಹರ್ಷಿಸಿದರು.
07005033a ಸೈನಿಕಾಶ್ಚ ಮುದಾ ಯುಕ್ತಾ ವರ್ಧಯಂತಿ ದ್ವಿಜೋತ್ತಮಂ|
07005033c ದುರ್ಯೋಧನಂ ಪುರಸ್ಕೃತ್ಯ ಪ್ರಾರ್ಥಯಂತೋ ಮಹದ್ಯಶಃ||
ಸಂತೋಷದಿಂದ ಸೈನಿಕರು ದ್ವಿಜೋತ್ತಮನಿಗೆ ಜಯಕಾರ ಹಾಕಿದರು. ದುರ್ಯೋಧನನನ್ನು ಮುಂದಿರಿಸಿಕೊಂಡು ಮಹದ್ಯಶನನ್ನು ಬೇಡಿಕೊಂಡರು.
07005034 ದ್ರೋಣ ಉವಾಚ|
07005034a ವೇದಂ ಷಡಂಗಂ ವೇದಾಹಮರ್ಥವಿದ್ಯಾಂ ಚ ಮಾನವೀಂ|
07005034c ತ್ರೈಯಂಬಕಮಥೇಷ್ವಸ್ತ್ರಮಸ್ತ್ರಾಣಿ ವಿವಿಧಾನಿ ಚ||
ದ್ರೋಣನು ಹೇಳಿದನು: “ಆರೂ ಅಂಗಗಳೊಂದಿಗೆ ವೇದವನ್ನು ತಿಳಿದಿದ್ದೇನೆ. ಮನುವಿನ ಅರ್ಥವಿದ್ಯೆಯನ್ನೂ ನಾನು ತಿಳಿದುಕೊಂಡಿದ್ದೇನೆ. ತ್ರೈಯಂಬಕನ ವಿವಿಧ ಇಷ್ವಸ್ತ್ರಗಳನ್ನೂ ಅರಿತಿದ್ದೇನೆ.
07005035a ಯೇ ಚಾಪ್ಯುಕ್ತಾ ಮಯಿ ಗುಣಾ ಭವದ್ಭಿರ್ಜಯಕಾಂಕ್ಷಿಭಿಃ|
07005035c ಚಿಕೀರ್ಷುಸ್ತಾನಹಂ ಸತ್ಯಾನ್ಯೋಧಯಿಷ್ಯಾಮಿ ಪಾಂಡವಾನ್||
ವಿಜಯಕಾಂಕ್ಷಿಗಳಾದ ನೀವು ನನ್ನ ಏನೆಲ್ಲ ಗುಣಗಳಿವೆಯೆಂದು ಹೇಳಿದಿರೋ ಅವೆಲ್ಲವನ್ನೂ ಸತ್ಯವಾಗಿಸಲು ಪಾಂಡವರೊಡನೆ ಹೋರಾಡುತ್ತೇನೆ.””
07005036 ಸಂಜಯ ಉವಾಚ|
07005036a ಸ ಏವಮಭ್ಯನುಜ್ಞಾತಶ್ಚಕ್ರೇ ಸೇನಾಪತಿಂ ತತಃ|
07005036c ದ್ರೋಣಂ ತವ ಸುತೋ ರಾಜನ್ವಿಧಿದೃಷ್ಟೇನ ಕರ್ಮಣಾ||
ಸಂಜಯನು ಹೇಳಿದನು: “ಹೀಗೆ ಅವನು ಅನುಜ್ಞೆಯನ್ನು ನೀಡಲು ರಾಜನ್! ನಿನ್ನ ಮಗನು ದ್ರೋಣನನ್ನು ವಿಧಿವತ್ತಾದ ಕರ್ಮಗಳಿಂದ ಸೇನಾಪತಿಯನ್ನಾಗಿ ಮಾಡಿದನು.
07005037a ಅಥಾಭಿಷಿಷಿಚುರ್ದ್ರೋಣಂ ದುರ್ಯೋಧನಮುಖಾ ನೃಪಾಃ|
07005037c ಸೇನಾಪತ್ಯೇ ಯಥಾ ಸ್ಕಂದಂ ಪುರಾ ಶಕ್ರಮುಖಾಃ ಸುರಾಃ||
ಆಗ ದುರ್ಯೋಧನಪ್ರಮುಖರಾದ ನೃಪರು ಹಿಂದೆ ಶಕ್ರನ ನಾಯಕತ್ವದಲ್ಲಿ ಸುರರು ಹೇಗೆ ಸ್ಕಂದನನ್ನು ಹೇಗೋ ಹಾಗೆ ದ್ರೋಣನನ್ನು ಸೇನಾಪತಿಯನಗಿ ಅಭಿಷೇಕಿಸಿದರು.
07005038a ತತೋ ವಾದಿತ್ರಘೋಷೇಣ ಸಹ ಪುಂಸಾಂ ಮಹಾಸ್ವನೈಃ|
07005038c ಪ್ರಾದುರಾಸೀತ್ಕೃತೇ ದ್ರೋಣೇ ಹರ್ಷಃ ಸೇನಾಪತೌ ತದಾ||
ಆಗ ಮಂಗಳ ವಾದ್ಯಗಳ ಘೋಷಗಳಿಂದ ಪುರುಷರ ಮಹಾಕೂಗುಗಳೊಡನೆ ಹರ್ಷದಿಂದ ದ್ರೋಣನನ್ನು ಸೇನಾಪತಿಯನ್ನಾಗಿ ಮಾಡಲಾಯಿತು.
07005039a ತತಃ ಪುಣ್ಯಾಹಘೋಷೇಣ ಸ್ವಸ್ತಿವಾದಸ್ವನೇನ ಚ|
07005039c ಸಂಸ್ತವೈರ್ಗೀತಶಬ್ದೈಶ್ಚ ಸೂತಮಾಗಧಬಂದಿನಾಂ||
07005040a ಜಯಶಬ್ದೈರ್ದ್ವಿಜಾಗ್ರ್ಯಾಣಾಂ ಸುಭಗಾನರ್ತಿತೈಸ್ತಥಾ|
07005040c ಸತ್ಕೃತ್ಯ ವಿಧಿವದ್ರೋಣಂ ಜಿತಾನ್ಮನ್ಯಂತ ಪಾಂಡವಾನ್||
ಪುಣ್ಯಾಹಘೋಷ, ಸ್ವಸ್ತಿವಾಚನ, ಸೂತ-ವಂದಿ-ಮಾಗಧರ ಹೊಗಳಿಕೆ, ಸಂಗೀತ, ಶ್ರೇಷ್ಠ ಬ್ರಾಹ್ಮಣರಿಂದ ಜಯಾಶಿಷಗಳು, ನೃತ್ಯಗಾತಿಯರಿಂದ ನರ್ತನ ಇತ್ಯಾದಿಗಳಿಂದ ದ್ರೋಣನನ್ನು ಯಥಾವಿಧಿಯಾಗಿ ಸತ್ಕರಿಸಿದ ಕೌರವರು ಪಾಂಡವರನ್ನು ಗೆದ್ದೆವೆಂದೇ ಭಾವಿಸಿದರು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ದ್ರೋಣಪ್ರೋತ್ಸಾಹನೇ ಪಂಚಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ದ್ರೋಣಪ್ರೋತ್ಸಾಹನ ಎನ್ನುವ ಐದನೇ ಅಧ್ಯಾಯವು.