Ashvamedhika Parva: Chapter 92

ಅಶ್ವಮೇಧಿಕ ಪರ್ವ

೯೨

ಅಶ್ವಮೇಧವು ಮುಗಿಯುತ್ತಿರಲು ಒಂದು ಪಾರ್ಶ್ವವು ಚಿನ್ನವಾಗಿದ್ದ ಮುಂಗುಸಿಯೊಂದು ಬಿಲದಿಂದ ಹೊರಬಂದು “ಈ ಯಜ್ಞವು ಕುರುಕ್ಷೇತ್ರದಲ್ಲಿ ವಾಸಿಸಿದ್ದ ಉಂಚವೃತ್ತಿಯವನು ನೀಡಿದ ಒಂದು ಸೇರು ಹಿಟ್ಟಿನ ದಾನಕ್ಕೂ ಸಮನಲ್ಲ!” ಎಂದು ಕೂಗಿ ಹೇಳಿದುದು (೧-೫). ವಿಪ್ರರು ಅದಕ್ಕೆ ಕಾರಣವನ್ನು ಪ್ರಶ್ನಿಸಿದುದು (೬-೧೭). ಮುಂಗುಸಿಯು ಉಂಚವೃತ್ತಿಯ ಬ್ರಾಹ್ಮಣನ ಕುರಿತು ಹೇಳಲು ಪ್ರಾರಂಭಿಸಿದುದು (೧೮-೨೨).

Image result for dhritarashtra embraces bhima14092001 ಜನಮೇಜಯ ಉವಾಚ

14092001a ಪಿತಾಮಹಸ್ಯ ಮೇ ಯಜ್ಞೇ ಧರ್ಮಪುತ್ರಸ್ಯ ಧೀಮತಃ|

14092001c ಯದಾಶ್ಚರ್ಯಮಭೂತ್ಕಿಂ ಚಿತ್ತದ್ಭವಾನ್ವಕ್ತುಮರ್ಹತಿ||

ಜನಮೇಜಯನು ಹೇಳಿದನು: “ನನ್ನ ಪಿತಾಮಹ ಧೀಮಂತ ಧರ್ಮಪುತ್ರನ ಯಜ್ಞದಲ್ಲಿ ಏನಾದರೂ ಆಶ್ಚರ್ಯವು ನಡೆಯಿತೇ? ಅದನ್ನು ನೀವು ಹೇಳಬೇಕು!”

14092002 ವೈಶಂಪಾಯನ ಉವಾಚ

14092002a ಶ್ರೂಯತಾಂ ರಾಜಶಾರ್ದೂಲ ಮಹದಾಶ್ಚರ್ಯಮುತ್ತಮಮ್|

14092002c ಅಶ್ವಮೇಧೇ ಮಹಾಯಜ್ಞೇ ನಿವೃತ್ತೇ ಯದಭೂದ್ವಿಭೋ||

ವೈಶಂಪಾಯನನು ಹೇಳಿದನು: “ವಿಭೋ! ರಾಜಶಾರ್ದೂಲ! ಆ ಮಹಾಯಜ್ಞ ಅಶ್ವಮೇಧವು ಮುಗಿಯಲು ಒಂದು ಉತ್ತಮ ಮಹದಾಶ್ಚರ್ಯವು ನಡೆಯಿತು. ಅದನ್ನು ಕೇಳಬೇಕು.

14092003a ತರ್ಪಿತೇಷು ದ್ವಿಜಾಗ್ರ್ಯೇಷು ಜ್ಞಾತಿಸಂಬಂಧಿಬಂಧುಷು|

14092003c ದೀನಾಂಧಕೃಪಣೇ ಚಾಪಿ ತದಾ ಭರತಸತ್ತಮ||

14092004a ಘುಷ್ಯಮಾಣೇ ಮಹಾದಾನೇ ದಿಕ್ಷು ಸರ್ವಾಸು ಭಾರತ|

14092004c ಪತತ್ಸು ಪುಷ್ಪವರ್ಷೇಷು ಧರ್ಮರಾಜಸ್ಯ ಮೂರ್ಧನಿ||

ಭರತಸತ್ತಮ! ಭಾರತ! ದ್ವಿಜಾಗ್ರರು, ಜ್ಞಾತಿ-ಸಂಬಂಧಿ-ಬಂಧುಗಳು ಮತ್ತು ಧೀನ-ಅಂಧ-ಕೃಪಣರು ತೃಪ್ತಿಗೊಳ್ಳಲು, ಮಹಾದಾನಗಳನ್ನು ಸರ್ವದಿಕ್ಕುಗಳಲ್ಲಿಯೂ ಘೋಷಿಸಲು, ಧರ್ಮರಾಜನ ನೆತ್ತಿಯ ಮೇಲೆ ಪುಷ್ಪವೃಷ್ಟಿಯು ಬಿದ್ದಿತು.

14092005a ಬಿಲಾನ್ನಿಷ್ಕ್ರಮ್ಯ ನಕುಲೋ ರುಕ್ಮಪಾರ್ಶ್ವಸ್ತದಾನಘ|

14092005c ವಜ್ರಾಶನಿಸಮಂ ನಾದಮಮುಂಚತ ವಿಶಾಂ ಪತೇ||

ವಿಶಾಂಪತೇ! ಅನಘ! ಆಗ ಒಂದು ಪಾರ್ಶ್ವವು ಸುವರ್ಣಾಮಯವಾಗಿದ್ದ ಮುಂಗಸಿಯೊಂದು ಬಿಲದಿಂದ ಹೊರಬಂದು ಸಿಡಿಲಿನಂತೆ ಗರ್ಜಿಸಿತು.

14092006a ಸಕೃದುತ್ಸೃಜ್ಯ ತಂ ನಾದಂ ತ್ರಾಸಯಾನೋ ಮೃಗದ್ವಿಜಾನ್|

14092006c ಮಾನುಷಂ ವಚನಂ ಪ್ರಾಹ ಧೃಷ್ಟೋ ಬಿಲಶಯೋ ಮಹಾನ್||

ಹಾಗೆ ಜೋರಾಗಿ ಕೂಗಿ ಮೃಗ-ಪಕ್ಷಿಗಳನ್ನು ಭಯಪಡಿಸಿದ ಆ ಮಹಾ ಬಿಲಶಾಯಿಯು ಮಾನವ ಧ್ವನಿಯಲ್ಲಿ ಹೀಗೆ ಹೇಳಿತು:

14092007a ಸಕ್ತುಪ್ರಸ್ಥೇನ ವೋ ನಾಯಂ ಯಜ್ಞಸ್ತುಲ್ಯೋ ನರಾಧಿಪಾಃ|

14092007c ಉಂಚವೃತ್ತೇರ್ವದಾನ್ಯಸ್ಯ ಕುರುಕ್ಷೇತ್ರನಿವಾಸಿನಃ||

“ನರಾಧಿಪರೇ! ಈ ಯಜ್ಞದಲ್ಲಿ ಮಾಡಿದ ದಾನವು ಕುರುಕ್ಷೇತ್ರದಲ್ಲಿ ವಾಸಿಸುವ ಉಂಚವೃತ್ತಿಯವನು ಮಾಡಿದ ಒಂದು ಸೇರು ಹಿಟ್ಟಿನ ದಾನಕ್ಕೂ ಸಮಾನವಲ್ಲ!”

14092008a ತಸ್ಯ ತದ್ವಚನಂ ಶ್ರುತ್ವಾ ನಕುಲಸ್ಯ ವಿಶಾಂ ಪತೇ|

14092008c ವಿಸ್ಮಯಂ ಪರಮಂ ಜಗ್ಮುಃ ಸರ್ವೇ ತೇ ಬ್ರಾಹ್ಮಣರ್ಷಭಾಃ||

ವಿಶಾಂಪತೇ! ಮುಂಗುಸಿಯ ಆ ಮಾತನ್ನು ಕೇಳಿ ಬ್ರಾಹ್ಮಣರ್ಷಭರೆಲ್ಲರೂ ಪರಮ ವಿಸ್ಮಿತರಾದರು.

14092009a ತತಃ ಸಮೇತ್ಯ ನಕುಲಂ ಪರ್ಯಪೃಚ್ಚಂತ ತೇ ದ್ವಿಜಾಃ|

14092009c ಕುತಸ್ತ್ವಂ ಸಮನುಪ್ರಾಪ್ತೋ ಯಜ್ಞಂ ಸಾಧುಸಮಾಗಮಮ್||

ಆಗ ಆ ದ್ವಿಜರೆಲ್ಲರೂ ಒಂದಾಗಿ ಮುಂಗುಸಿಯನ್ನು ಕೇಳಿದರು: “ಸಾಧುಗಳು ಬಂದು ಸೇರಿರುವ ಈ ಯಜ್ಞಕ್ಕೆ ನೀನು ಎಲ್ಲಿಂದ ಆಗಮಿಸಿರುವೆ?

14092010a ಕಿಂ ಬಲಂ ಪರಮಂ ತುಭ್ಯಂ ಕಿಂ ಶ್ರುತಂ ಕಿಂ ಪರಾಯಣಮ್|

14092010c ಕಥಂ ಭವಂತಂ ವಿದ್ಯಾಮ ಯೋ ನೋ ಯಜ್ಞಂ ವಿಗರ್ಹಸೇ||

ನಿನ್ನ ಪರಮ ಬಲವು ಯಾವುದು? ನಿನ್ನ ಪರಿಜ್ಞಾನವು ಏನು? ಯಾರನ್ನಾಶ್ರಯಿಸಿ ಜೀವಿಸುತ್ತಿರುವೆ? ಈ ಯಜ್ಞವನ್ನು ಹೀಗೆ ನಿಂದಿಸುತ್ತಿರುವ ನಿನ್ನನ್ನು ನಾವು ಯಾರೆಂದು ತಿಳಿದುಕೊಳ್ಳಬೇಕು?

14092011a ಅವಿಲುಪ್ಯಾಗಮಂ ಕೃತ್ಸ್ನಂ ವಿಧಿಜ್ಞೈರ್ಯಾಜಕೈಃ ಕೃತಮ್|

14092011c ಯಥಾಗಮಂ ಯಥಾನ್ಯಾಯಂ ಕರ್ತವ್ಯಂ ಚ ಯಥಾಕೃತಮ್||

ನಾನಾವಿಧದ ಯಜ್ಞಸಾಮಾಗ್ರಿಗಳನ್ನು ಸಂಗ್ರಹಿಸಿ ಶಾಸ್ತ್ರವಿಧಿಗೆ ಯಾವ ಲೋಪವೂ ಬರದಂತೆ ಆಗಮಗಳಲ್ಲಿ ಹೇಳಿರುವಂತೆ ಯಥಾನ್ಯಾಯವಾಗಿ ಹೇಗೆ ಮಾಡಬೇಕೋ ಹಾಗೆ ಯಾಜಕರು ಇಲ್ಲಿ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ.

14092012a ಪೂಜಾರ್ಹಾಃ ಪೂಜಿತಾಶ್ಚಾತ್ರ ವಿಧಿವಚ್ಚಾಸ್ತ್ರಚಕ್ಷುಷಾ|

14092012c ಮಂತ್ರಪೂತಂ ಹುತಶ್ಚಾಗ್ನಿರ್ದತ್ತಂ ದೇಯಮಮತ್ಸರಮ್||

ಶಾಸ್ತ್ರಗಳಲ್ಲಿ ತೋರಿಸಿಕೊಟ್ಟಿರುವಂತೆ ಪೂಜಾರ್ಹರನ್ನು ಇಲ್ಲಿ ವಿಧಿವತ್ತಾಗಿ ಪೂಜಿಸಲಾಗಿದೆ. ಮಂತ್ರಪೂತ ಆಹುತಿಗಳಿಂದ ಅಗ್ನಿಯು ತೃಪ್ತನಾಗಿದ್ದಾನೆ. ಮಾತ್ಸರ್ಯವೇನೂ ಇಲ್ಲದೇ ದಾನಗಳನ್ನು ನೀಡಲಾಗಿದೆ.

14092013a ತುಷ್ಟಾ ದ್ವಿಜರ್ಷಭಾಶ್ಚಾತ್ರ ದಾನೈರ್ಬಹುವಿಧೈರಪಿ|

14092013c ಕ್ಷತ್ರಿಯಾಶ್ಚ ಸುಯುದ್ಧೇನ ಶ್ರಾದ್ಧೈರಪಿ ಪಿತಾಮಹಾಃ||

ಇಲ್ಲ ಬಹುವಿಧದ ದಾನಗಳಿಂದ ದ್ವಿಜರ್ಷಭರು ತುಷ್ಟರಾಗಿದ್ದಾರೆ. ಧರ್ಮಯುದ್ಧದಿಂದ ಕ್ಷತ್ರಿಯರೂ, ಶ್ರಾದ್ಧಗಳಿಂದ ಪಿತಾಮಹರೂ ತೃಪ್ತರಾಗಿದ್ದಾರೆ.

14092014a ಪಾಲನೇನ ವಿಶಸ್ತುಷ್ಟಾಃ ಕಾಮೈಸ್ತುಷ್ಟಾ ವರಸ್ತ್ರಿಯಃ|

14092014c ಅನುಕ್ರೋಶೈಸ್ತಥಾ ಶೂದ್ರಾ ದಾನಶೇಷೈಃ ಪೃಥಗ್ಜನಾಃ||

ಪಾಲನೆಯಿಂದ ವೈಶ್ಯರು ತುಷ್ಟರಾಗಿದ್ದಾರೆ. ಶ್ರೇಷ್ಠ ಸ್ತ್ರೀಯರು ಕಾಮಗಳಿಂದ ತೃಪ್ತರಾಗಿದ್ದಾರೆ. ದಯೆಯಿಂದ ಶೂದ್ರರೂ, ದಾನಕೊಟ್ಟು ಉಳಿದುದರಿಂದ ಇತರ ಜನರೂ ತೃಪ್ತರಾಗಿದ್ದಾರೆ.

14092015a ಜ್ಞಾತಿಸಂಬಂಧಿನಸ್ತುಷ್ಟಾಃ ಶೌಚೇನ ಚ ನೃಪಸ್ಯ ನಃ|

14092015c ದೇವಾ ಹವಿರ್ಭಿಃ ಪುಣ್ಯೈಶ್ಚ ರಕ್ಷಣೈಃ ಶರಣಾಗತಾಃ||

ನಮ್ಮ ನೃಪನ ಶೌಚದಿಂದಾಗಿ ಜ್ಞಾತಿ-ಸಂಬಂಧಿಗಳು ತೃಪ್ತರಾಗಿದ್ದಾರೆ. ದೇವತೆಗಳು ಪುಣ್ಯ ಹವಿಸ್ಸುಗಳಿಂದಲೂ ಶರಣಾಗತರು ರಕ್ಷಣೆಯಿಂದಲೂ ತುಷ್ಟರಾಗಿದ್ದಾರೆ.

14092016a ಯದತ್ರ ತಥ್ಯಂ ತದ್ಬ್ರೂಹಿ ಸತ್ಯಸಂಧ ದ್ವಿಜಾತಿಷು|

14092016c ಯಥಾಶ್ರುತಂ ಯಥಾದೃಷ್ಟಂ ಪೃಷ್ಟೋ ಬ್ರಾಹ್ಮಣಕಾಮ್ಯಯಾ||

ಸತ್ಯಸಂಧ! ಇಲ್ಲಿ ಹೀಗಿರುವಾಗ ನೀನು ಏನನ್ನು ಕೇಳಿ ಅಥವಾ ಏನನ್ನು ನೋಡಿ ಹೀಗೆ ಹೇಳುತ್ತಿರುವೆ? ಬ್ರಾಹ್ಮಣರ ಅಪೇಕ್ಷೆಯಂತೆ ದ್ವಿಜಾತಿಯವರು ಕೇಳುವ ಈ ಪ್ರಶ್ನೆಗೆ ಉತ್ತರಿಸು.

14092017a ಶ್ರದ್ಧೇಯವಾಕ್ಯಃ ಪ್ರಾಜ್ಞಸ್ತ್ವಂ ದಿವ್ಯಂ ರೂಪಂ ಬಿಭರ್ಷಿ ಚ|

14092017c ಸಮಾಗತಶ್ಚ ವಿಪ್ರೈಸ್ತ್ವಂ ತತ್ತ್ವತೋ ವಕ್ತುಮರ್ಹಸಿ||

ನೀನು ಪ್ರಾಜ್ಞನಾಗಿರುವೆ. ದಿವ್ಯರೂಪವನ್ನು ಹೊಂದಿರುವೆ. ಬ್ರಾಹ್ಮಣರೊಂದಿಗೆ ಸೇರಿರುವೆ. ನಿನ್ನ ವಾಕ್ಯದಲ್ಲಿ ಶ್ರದ್ಧೆಯಿದೆ. ತತ್ತ್ವವೇನೆಂದು ನೀನು ಹೇಳಬೇಕು.”

14092018a ಇತಿ ಪೃಷ್ಟೋ ದ್ವಿಜೈಸ್ತೈಃ ಸ ಪ್ರಹಸ್ಯ ನಕುಲೋಽಬ್ರವೀತ್|

14092018c ನೈಷಾನೃತಾ ಮಯಾ ವಾಣೀ ಪ್ರೋಕ್ತಾ ದರ್ಪೇಣ ವಾ ದ್ವಿಜಾಃ||

ದ್ವಿಜರು ಹೀಗೆ ಕೇಳಲು ಆ ಮುಂಗಸಿಯು ನಕ್ಕು ಹೇಳಿತು: “ದ್ವಿಜರೇ! ನನ್ನ ಮಾತು ಸುಳ್ಳಲ್ಲ ಅಥವಾ ನಾನು ಇದನ್ನು ದರ್ಪದಿಂದಲೂ ಹೇಳಿಲ್ಲ!

14092019a ಯನ್ಮಯೋಕ್ತಮಿದಂ ಕಿಂ ಚಿದ್ಯುಷ್ಮಾಭಿಶ್ಚಾಪ್ಯುಪಶ್ರುತಮ್|

14092019c ಸಕ್ತುಪ್ರಸ್ಥೇನ ವೋ ನಾಯಂ ಯಜ್ಞಸ್ತುಲ್ಯೋ ನರಾಧಿಪಾಃ|

14092019e ಉಂಚವೃತ್ತೇರ್ವದಾನ್ಯಸ್ಯ ಕುರುಕ್ಷೇತ್ರನಿವಾಸಿನಃ||

“ನರಾಧಿಪರೇ! ಈ ಯಜ್ಞವು ಕುರುಕ್ಷೇತ್ರದಲ್ಲಿ ವಾಸಿಸಿದ್ದ ಉಂಚವೃತ್ತಿಯವನು ನೀಡಿದ ಒಂದು ಸೇರು ಹಿಟ್ಟಿನ ದಾನಕ್ಕೂ ಸಮನಲ್ಲ!” ಎಂಬ ನನ್ನ ಮಾತನ್ನು ನೀವುಗಳು ಕೂಡ ಕೇಳಿಕೊಂಡಿದ್ದೀರಿ.

14092020a ಇತ್ಯವಶ್ಯಂ ಮಯೈತದ್ವೋ ವಕ್ತವ್ಯಂ ದ್ವಿಜಪುಂಗವಾಃ|

14092020c ಶೃಣುತಾವ್ಯಗ್ರಮನಸಃ ಶಂಸತೋ ಮೇ ದ್ವಿಜರ್ಷಭಾಃ||

ದ್ವಿಜಪುಂಗವರೇ! ದ್ವಿಜರ್ಷಭರೇ! ಆದರೂ ನಿಮಗೆ ನಾನು ಈ ಮಾತುಗಳನ್ನು ಹೇಳುವುದು ಅವಶ್ಯಕವಾಗಿದೆ. ಅವ್ಯಗ್ರಮನಸ್ಕರಾಗಿ ನಾನು ಹೇಳುವುದನ್ನು ಕೇಳುವಂಥವರಾಗಿರಿ!

14092021a ಅನುಭೂತಂ ಚ ದೃಷ್ಟಂ ಚ ಯನ್ಮಯಾದ್ಭುತಮುತ್ತಮಮ್|

14092021c ಉಂಚವೃತ್ತೇರ್ಯಥಾವೃತ್ತಂ ಕುರುಕ್ಷೇತ್ರನಿವಾಸಿನಃ||

ಕುರುಕ್ಷೇತ್ರದಲ್ಲಿ ವಾಸಿಸುತ್ತಿದ್ದ ಉಂಚವೃತ್ತಿಯನ್ನನುಸರಿಸುತ್ತಿರುವನ ಉತ್ತಮವೂ ಅದ್ಭುತವೂ ಆದ ಆ ನಡತೆಯನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ.

14092022a ಸ್ವರ್ಗಂ ಯೇನ ದ್ವಿಜಃ ಪ್ರಾಪ್ತಃ ಸಭಾರ್ಯಃ ಸಸುತಸ್ನುಷಃ|

14092022c ಯಥಾ ಚಾರ್ಧಂ ಶರೀರಸ್ಯ ಮಮೇದಂ ಕಾಂಚನೀಕೃತಮ್||

ನನ್ನ ಈ ಅರ್ಧಶರೀರವನ್ನು ಸುವರ್ಣಮಯವನ್ನಾಗಿ ಮಾಡಿಸಿ ಆ ದ್ವಿಜನು ತನ್ನ ಪತ್ನಿ, ಮಗ ಮತ್ತು ಸೊಸೆಯರೊಂದಿಗೆ ಸ್ವರ್ಗವನ್ನು ಪಡೆದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ನಕುಲಾಖ್ಯಾನೇ ದ್ವಿನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ನಕುಲಾಖ್ಯಾನ ಎನ್ನುವ ತೊಂಭತ್ತೆರಡನೇ ಅಧ್ಯಾಯವು.

Comments are closed.