ಅಶ್ವಮೇಧಿಕ ಪರ್ವ
೯೧
ಅಶ್ವದ ಆಲಂಭನ (೧-೫). ಯುಧಿಷ್ಠಿರನ ದಾನ (೬-೨೮). ಯಜ್ಞಸಮಾಪ್ತಿ (೨೯-೪೧).
14091001 ವೈಶಂಪಾಯನ ಉವಾಚ
14091001a ಶಮಯಿತ್ವಾ ಪಶೂನನ್ಯಾನ್ವಿಧಿವದ್ದ್ವಿಜಸತ್ತಮಾಃ|
14091001c ತುರಗಂ ತಂ ಯಥಾಶಾಸ್ತ್ರಮಾಲಭಂತ ದ್ವಿಜಾತಯಃ||
ವೈಶಂಪಾಯನನು ಹೇಳಿದನು: “ ದ್ವಿಜಾತಿಯ ದ್ವಿಜಸತ್ತಮರು ಅನ್ಯ ಪಶುಗಳನ್ನು ವಿಧಿವತ್ತಾಗಿ ಹೋಮಮಾಡಿದ ನಂತರ ಆ ತುರಗವನ್ನು ಆಲಂಭನ ಮಾಡಿದರು.
14091002a ತತಃ ಸಂಜ್ಞಾಪ್ಯ ತುರಗಂ ವಿಧಿವದ್ಯಾಜಕರ್ಷಭಾಃ|
14091002c ಉಪಸಂವೇಶಯನ್ರಾಜಂಸ್ತತಸ್ತಾಂ ದ್ರುಪದಾತ್ಮಜಾಮ್|
14091002e ಕಲಾಭಿಸ್ತಿಸೃಭೀ ರಾಜನ್ಯಥಾವಿಧಿ ಮನಸ್ವಿನೀಮ್||
ರಾಜನ್! ಅನಂತರ ಯಾಜಕರ್ಷಭರು ವಿಧಿವತ್ತಾಗಿ ತುರಗವನ್ನು ಸಂಜ್ಞಾಪಿಸಿ ಅದರ ಬಳಿ ಮೂರು ಕಲೆಗಳಿಂದ ಯುಕ್ತಳಾದ ಮನಸ್ವಿನೀ ದ್ರುಪದಾತ್ಮಜೆಯನ್ನು ಕುಳ್ಳಿರಿಸಿದರು.
14091003a ಉದ್ಧೃತ್ಯ ತು ವಪಾಂ ತಸ್ಯ ಯಥಾಶಾಸ್ತ್ರಂ ದ್ವಿಜರ್ಷಭಾಃ|
14091003c ಶ್ರಪಯಾಮಾಸುರವ್ಯಗ್ರಾಃ ಶಾಸ್ತ್ರವದ್ಭರತರ್ಷಭ||
ಭರತರ್ಷಭ! ಶಾಸ್ತ್ರೋಕ್ತವಾಗಿ ಕುದುರೆಯ ವಪೆಯನ್ನು ತೆಗೆದು ಅವ್ಯಗ್ರ ದ್ವಿಜರ್ಷಭರು ಶಾಸ್ತ್ರಾನುಸಾರವಾಗಿ ಬೇಯಿಸಿದರು.
14091004a ತಂ ವಪಾಧೂಮಗಂಧಂ ತು ಧರ್ಮರಾಜಃ ಸಹಾನುಜಃ|
14091004c ಉಪಾಜಿಘ್ರದ್ಯಥಾನ್ಯಾಯಂ ಸರ್ವಪಾಪ್ಮಾಪಹಂ ತದಾ||
ಅನಂತರ ಸಮಸ್ತ ಪಾಪಗಳನ್ನೂ ಕಳೆಯುವ ಆ ವಪೆಯ ಹೊಗೆಯ ವಾಸನೆಯನ್ನು ಅನುಜರೊಂದಿಗೆ ಧರ್ಮರಾಜನು ಆಘ್ರಾಣಿಸಿದನು.
14091005a ಶಿಷ್ಟಾನ್ಯಂಗಾನಿ ಯಾನ್ಯಾಸಂಸ್ತಸ್ಯಾಶ್ವಸ್ಯ ನರಾಧಿಪ|
14091005c ತಾನ್ಯಗ್ನೌ ಜುಹುವುರ್ಧೀರಾಃ ಸಮಸ್ತಾಃ ಷೋಡಶರ್ತ್ವಿಜಃ||
ನರಾಧಿಪ! ಕುದುರೆಯ ಉಳಿದ ಅಂಗಗಳನ್ನು ಎಲ್ಲವನ್ನೂ ಹದಿನಾರು ಧೀರ ಋತ್ವಿಜರು ಅಗ್ನಿಯಲ್ಲಿ ಹೋಮಮಾಡಿದರು.
14091006a ಸಂಸ್ಥಾಪ್ಯೈವಂ ತಸ್ಯ ರಾಜ್ಞಸ್ತಂ ಕ್ರತುಂ ಶಕ್ರತೇಜಸಃ|
14091006c ವ್ಯಾಸಃ ಸಶಿಷ್ಯೋ ಭಗವಾನ್ವರ್ಧಯಾಮಾಸ ತಂ ನೃಪಮ್||
ಶಕ್ರತೇಜಸ್ಸಿನಿಂದ ಕೂಡಿದ್ದ ರಾಜನ ಆ ಯಜ್ಞವನ್ನು ಸಂಸ್ಥಾಪಿಸಿ ಶಿಷ್ಯರೊಂದಿಗೆ ಭಗವಾನ್ ವ್ಯಾಸನು ನೃಪನಿಗೆ ಅಭ್ಯುದಯಪೂರ್ವಕ ಆಶೀರ್ವಾದಗಳನ್ನು ನೀಡಿದನು.
14091007a ತತೋ ಯುಧಿಷ್ಠಿರಃ ಪ್ರಾದಾತ್ಸದಸ್ಯೇಭ್ಯೋ ಯಥಾವಿಧಿ|
14091007c ಕೋಟೀಸಹಸ್ರಂ ನಿಷ್ಕಾಣಾಂ ವ್ಯಾಸಾಯ ತು ವಸುಂಧರಾಮ್||
ಆಗ ಯುಧಿಷ್ಠಿರನು ಯಥಾವಿಧಿಯಾಗಿ ಸದಸ್ಯರಿಗೆ ಸಹಸ್ರ ಕೋಟಿ ಸುವರ್ಣನಾಣ್ಯಗಳನ್ನು ಮತ್ತು ವ್ಯಾಸನಿಗೆ ಇಡೀ ವಸುಂಧರೆಯನ್ನು ದಾನಮಾಡಿದನು.
14091008a ಪ್ರತಿಗೃಹ್ಯ ಧರಾಂ ರಾಜನ್ವ್ಯಾಸಃ ಸತ್ಯವತೀಸುತಃ|
14091008c ಅಬ್ರವೀದ್ಭರತಶ್ರೇಷ್ಠಂ ಧರ್ಮಾತ್ಮಾನಂ ಯುಧಿಷ್ಠಿರಮ್||
ರಾಜನ್! ಧರೆಯನ್ನು ಸ್ವೀಕರಿಸಿ ಸತ್ಯವತೀಸುತ ವ್ಯಾಸನು ಭರತಶ್ರೇಷ್ಠ ಧರ್ಮಾತ್ಮ ಯುಧಿಷ್ಠಿರನಿಗೆ ಇಂತೆಂದನು:
14091009a ಪೃಥಿವೀ ಭವತಸ್ತ್ವೇಷಾ ಸಂನ್ಯಸ್ತಾ ರಾಜಸತ್ತಮ|
14091009c ನಿಷ್ಕ್ರಯೋ ದೀಯತಾಂ ಮಹ್ಯಂ ಬ್ರಾಹ್ಮಣಾ ಹಿ ಧನಾರ್ಥಿನಃ||
“ರಾಜಸತ್ತಮ! ನಿನ್ನ ಈ ಪೃಥ್ವಿಯನ್ನು ನಿನ್ನಲ್ಲಿಯೇ ಇಡುತ್ತೇನೆ. ಇದರ ಬೆಲೆಯನ್ನು ನೀನು ನನಗೆ ಕೊಡು. ಬ್ರಾಹ್ಮಣರು ಧನಾರ್ಥಿಗಳಲ್ಲವೇ?”
14091010a ಯುಧಿಷ್ಠಿರಸ್ತು ತಾನ್ವಿಪ್ರಾನ್ಪ್ರತ್ಯುವಾಚ ಮಹಾಮನಾಃ|
14091010c ಭ್ರಾತೃಭಿಃ ಸಹಿತೋ ಧೀಮಾನ್ಮಧ್ಯೇ ರಾಜ್ಞಾಂ ಮಹಾತ್ಮನಾಮ್||
ಮಹಾತ್ಮ ರಾಜರ ಮಧ್ಯದಲ್ಲಿ ಸಹೋದರರೊಂದಿಗಿದ್ದ ಧೀಮಾನ್ ಮಹಾಮನಸ್ವಿ ಯುಧಿಷ್ಠಿರನು ಆ ವಿಪ್ರರಿಗೆ ಉತ್ತರಿಸಿದನು:
14091011a ಅಶ್ವಮೇಧೇ ಮಹಾಯಜ್ಞೇ ಪೃಥಿವೀ ದಕ್ಷಿಣಾ ಸ್ಮೃತಾ|
14091011c ಅರ್ಜುನೇನ ಜಿತಾ ಸೇಯಮೃತ್ವಿಗ್ಭ್ಯಃ ಪ್ರಾಪಿತಾ ಮಯಾ||
“ಅಶ್ವಮೇಧ ಮಹಾಯಜ್ಞದಲ್ಲಿ ಪೃಥ್ವಿಯನ್ನೇ ದಕ್ಷಿಣೆಯನ್ನಾಗಿ ಕೊಡಬೇಕೆಂಬ ವಿಧಿಯಿದೆ. ಅರ್ಜುನನು ಗೆದ್ದ ಇದನ್ನು ನಾನು ಋತ್ವಿಜರಿಗೆ ನೀಡುತ್ತಿದ್ದೇನೆ.
14091012a ವನಂ ಪ್ರವೇಕ್ಷ್ಯೇ ವಿಪ್ರೇಂದ್ರಾ ವಿಭಜಧ್ವಂ ಮಹೀಮಿಮಾಮ್|
14091012c ಚತುರ್ಧಾ ಪೃಥಿವೀಂ ಕೃತ್ವಾ ಚಾತುರ್ಹೋತ್ರಪ್ರಮಾಣತಃ||
ವಿಪ್ರೇಂದ್ರರೇ! ನಾನಿನ್ನು ವನವನ್ನು ಪ್ರವೇಶಿಸುತ್ತೇನೆ. ಈ ಮಹಿಯನ್ನು ನೀವು ವಿಭಜಿಸಿಕೊಳ್ಳಿರಿ. ಚಾತುರ್ಹೋತ್ರ[1]ದ ಪ್ರಮಾಣದಂತೆ ಪೃಥ್ವಿಯನ್ನು ನಾಲ್ಕು ಭಾಗಗಳನ್ನಾಗಿ ಮಾಡಿಕೊಳ್ಳಿ.
14091013a ನಾಹಮಾದಾತುಮಿಚ್ಚಾಮಿ ಬ್ರಹ್ಮಸ್ವಂ ಮುನಿಸತ್ತಮಾಃ|
14091013c ಇದಂ ಹಿ ಮೇ ಮತಂ ನಿತ್ಯಂ ಭ್ರಾತೄಣಾಂ ಚ ಮಮಾನಘಾಃ||
ಮುನಿಸತ್ತಮರೇ! ಅನಘರೇ! ಬ್ರಾಹ್ಮಣರಾದ ನಿಮ್ಮ ಸ್ವತ್ತನ್ನು ತೆಗೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ. ನನ್ನ ಸಹೋದರರ ಮತವೂ ನಿತ್ಯವೂ ಇದೇ ಆಗಿದೆ.”
14091014a ಇತ್ಯುಕ್ತವತಿ ತಸ್ಮಿಂಸ್ತೇ ಭ್ರಾತರೋ ದ್ರೌಪದೀ ಚ ಸಾ|
14091014c ಏವಮೇತದಿತಿ ಪ್ರಾಹುಸ್ತದಭೂದ್ರೋಮಹರ್ಷಣಮ್||
ಅವನು ಹೀಗೆ ಹೇಳಲು ಸಹೋದರರು ಮತ್ತು ದ್ರೌಪದಿಯೂ “ಇದು ಹೀಗೆಯೇ ಸರಿ” ಎಂದು ಹೇಳಿದರು. ಅದು ರೋಮಾಂಚಕಾರಿಯಾಗಿತ್ತು!
14091015a ತತೋಽಂತರಿಕ್ಷೇ ವಾಗಾಸೀತ್ಸಾಧು ಸಾಧ್ವಿತಿ ಭಾರತ|
14091015c ತಥೈವ ದ್ವಿಜಸಂಘಾನಾಂ ಶಂಸತಾಂ ವಿಬಭೌ ಸ್ವನಃ||
ಭಾರತ! ಆಗ ಅಂತರಿಕ್ಷದಲ್ಲಿ “ಸಾಧು! ಸಾಧು!” ಎಂಬ ಮಾತೂ ಕೇಳಿಬಂದಿತು. ಹಾಗೆಯೇ ದ್ವಿಜಸಂಘಗಳ ಪ್ರಶಂಸೆಯ ಧ್ವನಿಗಳೂ ಕೇಳಿಬಂದವು.
14091016a ದ್ವೈಪಾಯನಸ್ತಥೋಕ್ತಸ್ತು ಪುನರೇವ ಯುಧಿಷ್ಠಿರಮ್|
14091016c ಉವಾಚ ಮಧ್ಯೇ ವಿಪ್ರಾಣಾಮಿದಂ ಸಂಪೂಜಯನ್ ಮುನಿಃ||
ಅದನ್ನು ಗೌರವಿಸಿ ವಿಪ್ರರ ಮಧ್ಯದಲ್ಲಿ ಮುನಿ ದ್ವೈಪಾಯನನು ಪುನಃ ಯುಧಿಷ್ಠಿರನಿಗೆ ಹೀಗೆ ಹೇಳಿದನು:
14091017a ದತ್ತೈಷಾ ಭವತಾ ಮಹ್ಯಂ ತಾಂ ತೇ ಪ್ರತಿದದಾಮ್ಯಹಮ್|
14091017c ಹಿರಣ್ಯಂ ದೀಯತಾಮೇಭ್ಯೋ ದ್ವಿಜಾತಿಭ್ಯೋ ಧರಾಸ್ತು ತೇ||
“ನನಗೆ ನೀನು ಭೂಮಿಯನ್ನು ಕೊಟ್ಟಿರುವೆ. ಅದನ್ನೇ ನಾನು ನಿನಗೆ ವಹಿಸಿಕೊಡುತ್ತಿದ್ದೇನೆ. ದ್ವಿಜಾತಿಯರಿಗೆ ಭೂಮಿಯ ಪ್ರತ್ಯಾಮ್ನಾಯವಾಗಿ ಸುವರ್ಣವನ್ನು ನೀಡು. ಭೂಮಿಯು ನಿನ್ನ ಅಧಿಕಾರದಲ್ಲಿಯೇ ಇರಲಿ!”
14091018a ತತೋಽಬ್ರವೀದ್ವಾಸುದೇವೋ ಧರ್ಮರಾಜಂ ಯುಧಿಷ್ಠಿರಮ್|
14091018c ಯಥಾಹ ಭಗವಾನ್ವ್ಯಾಸಸ್ತಥಾ ತತ್ಕರ್ತುಮರ್ಹಸಿ||
ಆಗ ವಾಸುದೇವನು ಧರ್ಮರಾಜ ಯುಧಿಷ್ಠಿರನಿಗೆ “ಭಗವಾನ್ ವ್ಯಾಸನು ಹೇಳಿದಂತೆಯೇ ಮಾಡಬೇಕು!” ಎಂದು ಹೇಳಿದನು.
14091019a ಇತ್ಯುಕ್ತಃ ಸ ಕುರುಶ್ರೇಷ್ಠಃ ಪ್ರೀತಾತ್ಮಾ ಭ್ರಾತೃಭಿಃ ಸಹ|
14091019c ಕೋಟಿಕೋಟಿಕೃತಾಂ ಪ್ರಾದಾದ್ದಕ್ಷಿಣಾಂ ತ್ರಿಗುಣಾಂ ಕ್ರತೋಃ||
ಕೃಷ್ಣನು ಹೀಗೆ ಹೇಳಲು ಕುರುಶ್ರೇಷ್ಠ ಯುಧಿಷ್ಠಿರನು ಪ್ರೀತಾತ್ಮನಾಗಿ ಸಹೋದರರೊಂದಿಗೆ ಮೂರು ಕ್ರತುಗಳಿಗೆ ಆಗುವಷ್ಟು ಕೋಟಿ ಕೋಟಿಗಟ್ಟಲೆ ದಕ್ಷಿಣೆಗಳನ್ನು ನೀಡಿದನು.
14091020a ನ ಕರಿಷ್ಯತಿ ತಲ್ಲೋಕೇ ಕಶ್ಚಿದನ್ಯೋ ನರಾಧಿಪಃ|
14091020c ಯತ್ಕೃತಂ ಕುರುಸಿಂಹೇನ ಮರುತ್ತಸ್ಯಾನುಕುರ್ವತಾ||
“ಮರುತ್ತನನ್ನೇ ಅನುಸರಿಸಿ ನರಾಧಿಪ ಕುರುಸಿಂಹನು ಮಾಡಿದುದನ್ನು ಈ ಲೋಕದಲ್ಲಿ ಬೇರೆ ಯಾರೂ ಮಾಡುವುದಿಲ್ಲ!”
14091021a ಪ್ರತಿಗೃಹ್ಯ ತು ತದ್ದ್ರವ್ಯಂ ಕೃಷ್ಣದ್ವೈಪಾಯನಃ ಪ್ರಭುಃ|
14091021c ಋತ್ವಿಗ್ಭ್ಯಃ ಪ್ರದದೌ ವಿದ್ವಾಂಶ್ಚತುರ್ಧಾ ವ್ಯಭಜಂಶ್ಚ ತೇ||
ಆ ದ್ರವ್ಯವನ್ನು ಸ್ವೀಕರಿಸಿದ ಪ್ರಭು ಕೃಷ್ಣದ್ವೈಪಾಯನನು ಅದನ್ನು ಋತ್ವಿಜರಿಗೆ ನೀಡಿದರು. ಆ ವಿದ್ವಾನರು ಅದನ್ನು ನಾಲ್ಕು ಭಾಗಗಳನ್ನಾಗಿ ವಿಭಾಗಿಸಿಕೊಂಡರು.
14091022a ಪೃಥಿವ್ಯಾ ನಿಷ್ಕ್ರಯಂ ದತ್ತ್ವಾ ತದ್ಧಿರಣ್ಯಂ ಯುಧಿಷ್ಠಿರಃ|
14091022c ಧೂತಪಾಪ್ಮಾ ಜಿತಸ್ವರ್ಗೋ ಮುಮುದೇ ಭ್ರಾತೃಭಿಃ ಸಹ||
ಪೃಥ್ವಿಯ ಬೆಲೆಯನ್ನು ಹಿರಣ್ಯರೂಪದಲ್ಲಿ ನೀಡಿ ಸಹೋದರರೊಂದಿಗೆ ಯುಧಿಷ್ಠಿರನು ಪಾಪಗಳನ್ನು ತೊಳೆದುಕೊಂಡು ಸ್ವರ್ಗವನ್ನೇ ಜಯಿಸಿ ಆನಂದಿಸಿದನು.
14091023a ಋತ್ವಿಜಸ್ತಮಪರ್ಯಂತಂ ಸುವರ್ಣನಿಚಯಂ ತದಾ|
14091023c ವ್ಯಭಜಂತ ದ್ವಿಜಾತಿಭ್ಯೋ ಯಥೋತ್ಸಾಹಂ ಯಥಾಬಲಮ್||
ಋತ್ವಿಜರು ಆ ಸುವರ್ಣರಾಶಿಯನ್ನು ಪಡೆದು ಉತ್ಸಾಹವಿದ್ದಂತೆ ಯಥಾಬಲವಾಗಿ ದ್ವಿಜಾತಿಯರಲ್ಲಿ ಹಂಚಿಕೊಂಡರು.
14091024a ಯಜ್ಞವಾಟೇ ತು ಯತ್ಕಿಂ ಚಿದ್ಧಿರಣ್ಯಮಪಿ ಭೂಷಣಮ್|
14091024c ತೋರಣಾನಿ ಚ ಯೂಪಾಂಶ್ಚ ಘಟಾಃ ಪಾತ್ರೀಸ್ತಥೇಷ್ಟಕಾಃ|
14091024e ಯುಧಿಷ್ಠಿರಾಭ್ಯನುಜ್ಞಾತಾಃ ಸರ್ವಂ ತದ್ವ್ಯಭಜನ್ದ್ವಿಜಾಃ||
ಯಜ್ಞವಾಟಿಯಲ್ಲಿ ಇದ್ದ ಏನೆಲ್ಲ ಹಿರಣ್ಯ, ಭೂಷಣ, ತೋರಣ, ಯೂಪ, ಘಟ, ಪಾತ್ರೆ ಮತ್ತು ಎಲ್ಲವನ್ನೂ ಯಥೇಷ್ಟವಾಗಿ ದ್ವಿಜರು, ಯುಧಿಷ್ಠಿರನ ಅಪ್ಪಣೆಯಂತೆ, ತಮ್ಮಲ್ಲಿ ವಿಭಜಿಸಿಕೊಂಡರು.
14091025a ಅನಂತರಂ ಬ್ರಾಹ್ಮಣೇಭ್ಯಃ ಕ್ಷತ್ರಿಯಾ ಜಹ್ರಿರೇ ವಸು|
14091025c ತಥಾ ವಿಟ್ಶೂದ್ರಸಂಘಾಶ್ಚ ತಥಾನ್ಯೇ ಮ್ಲೇಚ್ಚಜಾತಯಃ|
14091025e ಕಾಲೇನ ಮಹತಾ ಜಹ್ರುಸ್ತತ್ಸುವರ್ಣಂ ತತಸ್ತತಃ||
ಅನಂತರ ಹಾಗೆಯೇ ಅಲ್ಲಿದ್ದ ಕ್ಷತ್ರಿಯರು, ವೈಶ್ಯರು, ಶೂದ್ರರು ಮತ್ತು ಅನ್ಯ ಮ್ಲೇಚ್ಛಜಾತಿಯವರು ಬ್ರಾಹ್ಮಣರಿಗೆ ಧನವನ್ನಿತ್ತರು. ಆ ಸಮಯದಲ್ಲಿ ಆಗಾಗ ಮಹಾ ಸುವರ್ಣವನ್ನು ದಾನಮಾಡಲಾಯಿತು.
14091026a ತತಸ್ತೇ ಬ್ರಾಹ್ಮಣಾಃ ಸರ್ವೇ ಮುದಿತಾ ಜಗ್ಮುರಾಲಯಾನ್|
14091026c ತರ್ಪಿತಾ ವಸುನಾ ತೇನ ಧರ್ಮರಾಜ್ಞಾ ಮಹಾತ್ಮನಾ||
ಮಹಾತ್ಮ ಧರ್ಮರಾಜನ ಆ ಐಶ್ವರ್ಯದಿಂದ ತೃಪ್ತರಾದ ಬ್ರಾಹ್ಮಣರೆಲ್ಲರೂ ಮುದಿತರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
14091027a ಸ್ವಮಂಶಂ ಭಗವಾನ್ವ್ಯಾಸಃ ಕುಂತ್ಯೈ ಪಾದಾಭಿವಾದನಾತ್|
14091027c ಪ್ರದದೌ ತಸ್ಯ ಮಹತೋ ಹಿರಣ್ಯಸ್ಯ ಮಹಾದ್ಯುತಿಃ||
ಮಹಾದ್ಯುತಿ ಭಗವಾನ್ ವ್ಯಾಸನು ತನ್ನ ಭಾಗಕ್ಕೆ ಬಂದಿದ್ದ ಮಹಾ ಹಿರಣ್ಯರಾಶಿಯನ್ನು ಆದರದಿಂದ ಕುಂತಿಗೆ ನೀಡಿದನು.
14091028a ಶ್ವಶುರಾತ್ಪ್ರೀತಿದಾಯಂ ತಂ ಪ್ರಾಪ್ಯ ಸಾ ಪ್ರೀತಮಾನಸಾ|
14091028c ಚಕಾರ ಪುಣ್ಯಂ ಲೋಕೇ ತು ಸುಮಹಾಂತಂ ಪೃಥಾ ತದಾ||
ಮಾವನಿಂದ ಪ್ರೀತಿಪೂರ್ವಕವಾಗಿ ಪಡೆದ ಆ ಮಹಾಧನವನ್ನು ಪೃಥೆಯು ಪ್ರೀತಿಮನಸ್ಸಿನಿಂದ ಜನರಿಗೆ ಪುಣ್ಯವಾಗುವ ಕಾರ್ಯಗಳನ್ನು ಮಾಡಿದಳು.
14091029a ಗತ್ವಾ ತ್ವವಭೃಥಂ ರಾಜಾ ವಿಪಾಪ್ಮಾ ಭ್ರಾತೃಭಿಃ ಸಹ|
14091029c ಸಭಾಜ್ಯಮಾನಃ ಶುಶುಭೇ ಮಹೇಂದ್ರೋ ದೈವತೈರಿವ||
ಅವಭೃತಸ್ನಾನಗೈದು ಪಾಪಗಳನ್ನು ಕಳೆದುಕೊಂಡು ಸಹೋದರರೊಂದಿಗೆ ರಾಜಾ ಯುಧಿಷ್ಠಿರನು ದೇವತೆಗಳಿಂದ ಸೇವಿಸಲ್ಪಟ್ಟ ಮಹೇಂದ್ರನಂತೆ ಶೋಭಿಸಿದನು.
14091030a ಪಾಂಡವಾಶ್ಚ ಮಹೀಪಾಲೈಃ ಸಮೇತೈಃ ಸಂವೃತಾಸ್ತದಾ|
14091030c ಅಶೋಭಂತ ಮಹಾರಾಜ ಗ್ರಹಾಸ್ತಾರಾಗಣೈರಿವ||
ಮಹಾರಾಜ! ಬಂದು ಸೇರಿದ್ದ ಮಹೀಪಾಲರಿಂದ ಸುತ್ತುವರೆಯಲ್ಪಟ್ಟ ಪಾಂಡವರೂ ಕೂಡ ಗ್ರಹಗಳಿಂದ ಸುತ್ತುವರೆಯಲ್ಪಟ್ಟ ತಾರಾಗಣಗಳಂತೆ ಶೋಭಿಸಿದರು.
14091031a ರಾಜಭ್ಯೋಽಪಿ ತತಃ ಪ್ರಾದಾದ್ರತ್ನಾನಿ ವಿವಿಧಾನಿ ಚ|
14091031c ಗಜಾನಶ್ವಾನಲಂಕಾರಾನ್ ಸ್ತ್ರಿಯೋ ವಸ್ತ್ರಾಣಿ ಕಾಂಚನಮ್||
ಆಗ ಯುಧಿಷ್ಠಿರನು ರಾಜರಿಗೆ ಕೂಡ ವಿವಿಧ ರತ್ನಗಳನ್ನೂ, ಆನೆ-ಕುದುರೆಗಳ ಅಲಂಕಾರಗಳನ್ನೂ, ಸ್ತ್ರೀಯರನ್ನೂ, ಕಾಂಚನ-ವಸ್ತ್ರಗಳನ್ನೂ ನೀಡಿದನು.
14091032a ತದ್ಧನೌಘಮಪರ್ಯಂತಂ ಪಾರ್ಥಃ ಪಾರ್ಥಿವಮಂಡಲೇ|
14091032c ವಿಸೃಜನ್ಶುಶುಭೇ ರಾಜಾ ಯಥಾ ವೈಶ್ರವಣಸ್ತಥಾ||
ಕೊನೆಯಿಲ್ಲದ ಆ ಧನರಾಶಿಯನ್ನು ದಾನವನ್ನಾಗಿತ್ತ ರಾಜಾ ಪಾರ್ಥನು ಪಾರ್ಥಿವಮಂಡಲದಲ್ಲಿ ವೈಶ್ರವಣ ಕುಬೇರನಂತೆ ಶೋಭಿಸಿದನು.
14091033a ಆನಾಯ್ಯ ಚ ತಥಾ ವೀರಂ ರಾಜಾನಂ ಬಭ್ರುವಾಹನಮ್|
14091033c ಪ್ರದಾಯ ವಿಪುಲಂ ವಿತ್ತಂ ಗೃಹಾನ್ಪ್ರಾಸ್ಥಾಪಯತ್ತದಾ||
ಹಾಗೆಯೇ ವೀರ ರಾಜ ಬಭ್ರುವಾಹನನನ್ನು ಕರೆಯಿಸಿ ಅವನಿಗೆ ವಿಪುಲ ವಿತ್ತವನ್ನಿತ್ತನು. ಆಗ ಅವನು ತನ್ನ ಮನೆಗೆ ತೆರಳಿದನು.
14091034a ದುಃಶಲಾಯಾಶ್ಚ ತಂ ಪೌತ್ರಂ ಬಾಲಕಂ ಪಾರ್ಥಿವರ್ಷಭ|
14091034c ಸ್ವರಾಜ್ಯೇ ಪಿತೃಭಿರ್ಗುಪ್ತೇ ಪ್ರೀತ್ಯಾ ಸಮಭಿಷೇಚಯತ್||
ಪಾರ್ಥಿವರ್ಷಭ! ದುಃಶಲೆಯ ಮೊಮ್ಮಗ ಆ ಬಾಲಕನನ್ನು ಅವನ ತಂದೆಯ ಸ್ವರಾಜ್ಯಕ್ಕೇ ರಾಜನನ್ನಾಗಿ ಅಭಿಷೇಕಿಸಿದನು.
14091035a ರಾಜ್ಞಶ್ಚೈವಾಪಿ ತಾನ್ಸರ್ವಾನ್ಸುವಿಭಕ್ತಾನ್ಸುಪೂಜಿತಾನ್|
14091035c ಪ್ರಸ್ಥಾಪಯಾಮಾಸ ವಶೀ ಕುರುರಾಜೋ ಯುಧಿಷ್ಠಿರಃ||
ಸಂಯಮಿ ಕುರುರಾಜ ಯುಧಿಷ್ಠಿರನು ಆ ಎಲ್ಲ ರಾಜರನ್ನೂ ಪ್ರತ್ಯೇಕವಾಗಿ ಪೂಜಿಸಿ ಕಳುಹಿಸಿಕೊಟ್ಟನು.
14091036a ಏವಂ ಬಭೂವ ಯಜ್ಞಃ ಸ ಧರ್ಮರಾಜಸ್ಯ ಧೀಮತಃ|
14091036c ಬಹ್ವನ್ನಧನರತ್ನೌಘಃ ಸುರಾಮೈರೇಯಸಾಗರಃ||
ಹೀಗೆ ಬಹಳ ಅನ್ನ-ಧನ-ರತ್ನಗಳ ರಾಶಿಗಳಿದ್ದ ಮತ್ತು ಸುರೆ-ಮೈರೇಯಗಳ ಸಾಗರಗಳಿದ್ದ ಆ ಯಜ್ಞವು ನಡೆಯಿತು.
14091037a ಸರ್ಪಿಃಪಂಕಾ ಹ್ರದಾ ಯತ್ರ ಬಹವಶ್ಚಾನ್ನಪರ್ವತಾಃ|
14091037c ರಸಾಲಾಕರ್ದಮಾಃ ಕುಲ್ಯಾ ಬಭೂವುರ್ಭರತರ್ಷಭ||
ಭರತರ್ಷಭ! ಅಲ್ಲಿ ತುಪ್ಪವೇ ಕೆಸರಾದ ಸರೋವರಗಳೂ, ಅನೇಕ ಪರ್ವತಗಳಂತಿದ್ದ ಅನ್ನಗಳ ರಾಶಿಗಳೂ, ಕೆಸರಿಲ್ಲದ ರಸಗಳ ಕಾಲುವೆಗಳೂ ಇದ್ದವು.
14091038a ಭಕ್ಷ್ಯಷಾಂಡವರಾಗಾಣಾಂ ಕ್ರಿಯತಾಂ ಭುಜ್ಯತಾಮಿತಿ|
14091038c ಪಶೂನಾಂ ವಧ್ಯತಾಂ ಚಾಪಿ ನಾಂತಸ್ತತ್ರ ಸ್ಮ ದೃಶ್ಯತೇ||
ಅಲ್ಲಿ ಭಕ್ಷ್ಯ-ಭೋಜ್ಯಗಳನ್ನು ಮಾಡುವವರ, ಊಟಮಾಡಿ ಎಂದು ಹೇಳುವವರ, ಮತ್ತು ಪಶುಗಳನ್ನು ವಧಿಸುತ್ತಿದ್ದವರ ಕೊನೆಯೇ ಕಾಣುತ್ತಿರಲಿಲ್ಲ.
14091039a ಮತ್ತೋನ್ಮತ್ತಪ್ರಮುದಿತಂ ಪ್ರಗೀತಯುವತೀಜನಮ್|
14091039c ಮೃದಂಗಶಂಖಶಬ್ದೈಶ್ಚ ಮನೋರಮಮಭೂತ್ತದಾ||
ಮತ್ತೋನ್ಮತ್ತರಾಗಿ ಆನಂದಿಸುತ್ತಿದ್ದ, ಹಾಡುತ್ತಿದ್ದ ಯುವತೀ ಜನರಿಂದ, ಮೃದಂಗ-ಶಂಖ ಶಬ್ಧಗಳಿಂದ ಅದು ಮನೋರಮವಾಗಿತ್ತು.
14091040a ದೀಯತಾಂ ಭುಜ್ಯತಾಂ ಚೇತಿ ದಿವಾರಾತ್ರಮವಾರಿತಮ್|
14091040c ತಂ ಮಹೋತ್ಸವಸಂಕಾಶಮತಿಹೃಷ್ಟಜನಾಕುಲಮ್|
14091040e ಕಥಯಂತಿ ಸ್ಮ ಪುರುಷಾ ನಾನಾದೇಶನಿವಾಸಿನಃ||
“ಕೊಡಿ! ಭೋಜನ ಮಾಡಿ!” ಎಂಬ ಕೂಗುಗಳು ಹಗಲು-ರಾತ್ರಿಗಳೂ ಅಲ್ಲಿ ಕೇಳಿಬರುತ್ತಿದ್ದವು. ಆ ಮಹೋತ್ಸವಕ್ಕೆ ಬಂದಿದ್ದ ನಾನಾ ದೇಶನಿವಾಸಿ ಜನರು ಅತ್ಯಂತ ಹರ್ಷಿತರಾಗಿ ಅದರ ಕುರಿತೇ ಮಾತನಾಡಿಕೊಳ್ಳುತ್ತಿದ್ದರು.
14091041a ವರ್ಷಿತ್ವಾ ಧನಧಾರಾಭಿಃ ಕಾಮೈ ರತ್ನೈರ್ಧನೈಸ್ತಥಾ|
14091041c ವಿಪಾಪ್ಮಾ ಭರತಶ್ರೇಷ್ಠಃ ಕೃತಾರ್ಥಃ ಪ್ರಾವಿಶತ್ ಪುರಮ್||
ಧನ ಮತ್ತು ಬಯಸಿದ ರತ್ನಧನಗಳ ಧಾರೆಗಳನ್ನೇ ಮಳೆಯಾಗಿ ಸುರಿಸಿದ ಆ ಭರತಶ್ರೇಷ್ಠನು ಪಾಪಗಳನ್ನು ಕಳೆದುಕೊಂಡು ಕೃತಾರ್ಥನಾಗಿ ಪುರವನ್ನು ಪ್ರವೇಶಿಸಿದನು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಸಮಾಪ್ತೌ ಏಕನವತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಸಮಾಪ್ತಿ ಎನ್ನುವ ತೊಂಭತ್ತೊಂದನೇ ಅಧ್ಯಾಯವು.
[1] ಅಧ್ವರ್ಯು, ಉದ್ಗಾತ್ರ, ಹೋತೃ ಮತ್ತು ಬ್ರಹ್ಮರೂಪವಾದ ನಾಲ್ಕರಿಂದ ನಡೆಯುವ ಯಾಗವೇ ಚಾತುರ್ಹೋತ್ರ ಯಜ್ಞ. ಒಂದೊಂದು ಗುಂಪಿನಲ್ಲಿ ನಾಲ್ಕು ನಾಲ್ಕು ಜನ ಋತ್ವಿಜರು. ಒಟ್ಟು ಹದಿನಾರು ಮಂದಿ. ಅವರಲ್ಲಿ ಪ್ರಧಾನರು ಬ್ರಹ್ಮಾ, ಅಧ್ವರ್ಯು, ಹೋತೃ, ಮತ್ತು ಉದ್ಗಾತ್ರ. ಇವರಲ್ಲಿ ದಕ್ಷಿಣೆಯ ವಿಭಜನಕ್ರಮದ ವರ್ಣನೆಯು ವೇದದಲ್ಲಿ ಹೇಳಲ್ಪಟ್ಟಿದೆ.