ಅಶ್ವಮೇಧಿಕ ಪರ್ವ
೯೦
ಬಭ್ರುವಾಹನನು ಕುಂತಿ, ದ್ರೌಪದಿ, ಸುಭದ್ರೆ ಮತ್ತು ಇತರ ಕುರುಸ್ತ್ರೀಯರನ್ನೂ, ಧೃತರಾಷ್ಟ್ರನನ್ನೂ, ಪಾಂಡವರನ್ನೂ, ಮತ್ತು ಕೃಷ್ಣನನ್ನೂ ಸಂಧಿಸಿದುದು (೧-೧೦). ವ್ಯಾಸನ ಆದೇಶದಂತೆ ಮೂರು ಅಶ್ವಮೇಧಗಳಿಗೆ ಸಮನಾಗುವಂತೆ ಮೂರುಪಟ್ಟು ದಕ್ಷಿಣೆಗಳನ್ನಿತ್ತು ಯುಧಿಷ್ಠಿರನು ಯಜ್ಞವನ್ನು ನಡೆಸಿದುದು (೧೧-೨೧). ಯೂಪೋಚ್ಛ್ರಯದ ವರ್ಣನೆ (೨೨-೩೯).
14090001 ವೈಶಂಪಾಯನ ಉವಾಚ
14090001a ಸ ಪ್ರವಿಶ್ಯ ಯಥಾನ್ಯಾಯಂ ಪಾಂಡವಾನಾಂ ನಿವೇಶನಮ್|
14090001c ಪಿತಾಮಹೀಮಭ್ಯವದತ್ಸಾಮ್ನಾ ಪರಮವಲ್ಗುನಾ||
ವೈಶಂಪಾಯನನು ಹೇಳಿದನು: “ಅವನು ಪಾಂಡವನ ಅರಮನೆಯನ್ನು ಪ್ರವೇಶಿಸಿ ಯಥಾನ್ಯಾಯವಾಗಿ ವಿನೀತನಾಗಿ ಮಧುರಮಾತುಗಳಿಂದ ಪಿತಾಮಹಿಯನ್ನು ನಮಸ್ಕರಿಸಿದನು.
14090002a ತಥಾ ಚಿತ್ರಾಂಗದಾ ದೇವೀ ಕೌರವ್ಯಸ್ಯಾತ್ಮಜಾಪಿ ಚ|
14090002c ಪೃಥಾಂ ಕೃಷ್ಣಾಂ ಚ ಸಹಿತೇ ವಿನಯೇನಾಭಿಜಗ್ಮತುಃ|
14090002E ಸುಭದ್ರಾಂ ಚ ಯಥಾನ್ಯಾಯಂ ಯಾಶ್ಚಾನ್ಯಾಃ ಕುರುಯೋಷಿತಃ||
ಹಾಗೆಯೇ ದೇವೀ ಚಿತ್ರಾಂಗದೆ ಮತ್ತು ಕೌರವ್ಯಸುತೆ ಉಲೂಪಿಯರು ಒಟ್ಟಾಗಿ ಕುಂತಿ, ಕೃಷ್ಣೆ, ಸುಭದ್ರೆ ಮತ್ತು ಅನ್ಯ ಕುರುಸ್ತ್ರೀಯರನ್ನು ಯಥಾನ್ಯಾಯವಾಗಿ ವಿನಯದಿಂದ ನಮಸ್ಕರಿಸಿದರು.
14090003a ದದೌ ಕುಂತೀ ತತಸ್ತಾಭ್ಯಾಂ ರತ್ನಾನಿ ವಿವಿಧಾನಿ ಚ|
14090003c ದ್ರೌಪದೀ ಚ ಸುಭದ್ರಾ ಚ ಯಾಶ್ಚಾಪ್ಯನ್ಯಾ ದದುಃ ಸ್ತ್ರಿಯಃ||
ಕುಂತಿಯು ಅವರಿಬ್ಬರಿಗೆ ವಿವಿಧರತ್ನಗಳನ್ನಿತ್ತಳು. ದ್ರೌಪದೀ ಮತ್ತು ಸುಭದ್ರೆಯರೂ ಉಡುಗೊರೆಗಳನ್ನಿತ್ತರು.
14090004a ಊಷತುಸ್ತತ್ರ ತೇ ದೇವ್ಯೌ ಮಹಾರ್ಹಶಯನಾಸನೇ|
14090004c ಸುಪೂಜಿತೇ ಸ್ವಯಂ ಕುಂತ್ಯಾ ಪಾರ್ಥಸ್ಯ ಪ್ರಿಯಕಾಮ್ಯಯಾ||
ಆ ಇಬ್ಬರು ದೇವಿಯರೂ ಅಮೂಲ್ಯ ಶಯನಾಸನಯುಕ್ತ ಭವನಗಳಲ್ಲಿ ಪಾರ್ಥನಿಗೆ ಪ್ರಿಯವನ್ನುಂಟುಮಾಡುವ ಸ್ವಯಂ ಕುಂತಿಯಿಂದ ಸತ್ಕರಿಸಲ್ಪಟ್ಟು ಉಳಿದುಕೊಂಡರು.
14090005a ಸ ಚ ರಾಜಾ ಮಹಾವೀರ್ಯಃ ಪೂಜಿತೋ ಬಭ್ರುವಾಹನಃ|
14090005c ಧೃತರಾಷ್ಟ್ರಂ ಮಹೀಪಾಲಮುಪತಸ್ಥೇ ಯಥಾವಿಧಿ||
ಸತ್ಕರಿಸಲ್ಪಟ್ಟ ಮಹಾವೀರ್ಯ ರಾಜಾ ಬಭ್ರುವಾಹನನು ಯಥಾವಿಧಿಯಾಗಿ ಮಹೀಪಾಲ ಧೃತರಾಷ್ಟ್ರನ ಸೇವೆಗೈದನು.
14090006a ಯುಧಿಷ್ಠಿರಂ ಚ ರಾಜಾನಂ ಭೀಮಾದೀಂಶ್ಚಾಪಿ ಪಾಂಡವಾನ್|
14090006c ಉಪಗಮ್ಯ ಮಹಾತೇಜಾ ವಿನಯೇನಾಭ್ಯವಾದಯತ್||
ಮಹಾತೇಜಸ್ವಿ ಬಭ್ರುವಾಹನನು ರಾಜ ಯುಧಿಷ್ಠಿರನನ್ನೂ ಭೀಮಾದಿ ಪಾಂಡವರನ್ನೂ ಸಂಧಿಸಿ ವಿನಯದಿಂದ ಅಭಿವಂದಿಸಿದನು.
14090007a ಸ ತೈಃ ಪ್ರೇಮ್ಣಾ ಪರಿಷ್ವಕ್ತಃ ಪೂಜಿತಶ್ಚ ಯಥಾವಿಧಿ|
14090007c ಧನಂ ಚಾಸ್ಮೈ ದದುರ್ಭೂರಿ ಪ್ರೀಯಮಾಣಾ ಮಹಾರಥಾಃ||
ಆ ಮಹಾರಥರು ಪ್ರೇಮದಿಂದ ಅವನನ್ನು ಆಲಂಗಿಸಿ ಯಥಾವಿಧಿಯಾಗಿ ಗೌರವಿಸಿ, ಪ್ರೀತಿಯಿಂದ ಅವನಿಗೆ ಬಹು ಧನವನ್ನು ನೀಡಿದರು.
14090008a ತಥೈವ ಸ ಮಹೀಪಾಲಃ ಕೃಷ್ಣಂ ಚಕ್ರಗದಾಧರಮ್|
14090008c ಪ್ರದ್ಯುಮ್ನ ಇವ ಗೋವಿಂದಂ ವಿನಯೇನೋಪತಸ್ಥಿವಾನ್||
ಹಾಗೆಯೇ ಆ ಮಹೀಪಾಲನು ಚಕ್ರಗದಾಧಾರಿ ಕೃಷ್ಣ ಗೋವಿಂದನನ್ನು ಪ್ರದ್ಯುಮ್ನನಂತೆಯೇ ವಿನಯದಿಂದ ಸೇವೆಗೈದನು.
14090009a ತಸ್ಮೈ ಕೃಷ್ಣೋ ದದೌ ರಾಜ್ಞೇ ಮಹಾರ್ಹಮಭಿಪೂಜಿತಮ್|
14090009c ರಥಂ ಹೇಮಪರಿಷ್ಕಾರಂ ದಿವ್ಯಾಶ್ವಯುಜಮುತ್ತಮಮ್||
ಆ ರಾಜನಿಗೆ ಕೃಷ್ಣನು ಬೆಲೆಬಾಳುವ ಚಿನ್ನದಿಂದ ಅಲಂಕೃತ ರಥವನ್ನೂ ಉತ್ತಮ ದಿವ್ಯಾಶ್ವಗಳನ್ನೂ ಕೊಟ್ಟು ಸತ್ಕರಿಸಿದನು.
14090010a ಧರ್ಮರಾಜಶ್ಚ ಭೀಮಶ್ಚ ಯಮಜೌ ಫಲ್ಗುನಸ್ತಥಾ|
14090010c ಪೃಥಕ್ ಪೃಥಗತೀವೈನಂ ಮಾನಾರ್ಹಂ ಸಮಪೂಜಯನ್||
ಧರ್ಮರಾಜ, ಭೀಮ, ಯಮಳರು ಮತ್ತು ಫಲ್ಗುನರು ಅವನಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಉಡುಗೊರೆಗಳನ್ನಿತ್ತು ಸತ್ಕರಿಸಿದರು.
14090011a ತತಸ್ತೃತೀಯೇ ದಿವಸೇ ಸತ್ಯವತ್ಯಾಃ ಸುತೋ ಮುನಿಃ|
14090011c ಯುಧಿಷ್ಠಿರಂ ಸಮಭ್ಯೇತ್ಯ ವಾಗ್ಮೀ ವಚನಮಬ್ರವೀತ್||
ಅನಂತರ ಮೂರನೆಯ ದಿವಸ ಸತ್ಯವತೀ ಸುತ ವಾಗ್ಮೀ ಮುನಿ ವ್ಯಾಸನು ಯುಧಿಷ್ಠಿರನನ್ನು ಸಂಧಿಸಿ ಈ ಮಾತುಗಳನ್ನಾಡಿದನು:
14090012a ಅದ್ಯ ಪ್ರಭೃತಿ ಕೌಂತೇಯ ಯಜಸ್ವ ಸಮಯೋ ಹಿ ತೇ|
14090012c ಮುಹೂರ್ತೋ ಯಜ್ಞಿಯಃ ಪ್ರಾಪ್ತಶ್ಚೋದಯಂತಿ ಚ ಯಾಜಕಾಃ||
“ಕೌಂತೇಯ! ಇಂದಿನಿಂದ ನೀನು ದೀಕ್ಷಾಬದ್ಧನಾಗಿ ಯಜ್ಞವನ್ನು ಆರಂಭಿಸು. ಯಜ್ಞದ ಮುಹೂರ್ತವು ಸನ್ನಿಹಿತವಾಗಿದೆಯೆಂದು ಯಾಜಕರು ಪ್ರೇರೇಪಿಸುತ್ತಿದ್ದಾರೆ.
14090013a ಅಹೀನೋ ನಾಮ ರಾಜೇಂದ್ರ ಕ್ರತುಸ್ತೇಽಯಂ ವಿಕಲ್ಪವಾನ್|
14090013c ಬಹುತ್ವಾತ್ಕಾಂಚನಸ್ಯಾಸ್ಯ ಖ್ಯಾತೋ ಬಹುಸುವರ್ಣಕಃ||
ರಾಜೇಂದ್ರ! ಈ ಕ್ರತುವಿನ ಹೆಸರೇ “ಅಹೀನ” ಅಂದರೆ ಲೋಪವಿಲ್ಲದ್ದು ಎಂದಿದೆ. ಇದರಲ್ಲಿ ಚಿನ್ನವನ್ನು ಬಹುವಾಗಿ ಬಳಸುವುದರಿಂದ ಇದು ಬಹುಸುವರ್ಣಕ ಎಂದೂ ಖ್ಯಾತಿಯಾಗಿದೆ.
14090014a ಏವಮೇವ ಮಹಾರಾಜ ದಕ್ಷಿಣಾಂ ತ್ರಿಗುಣಾಂ ಕುರು|
14090014c ತ್ರಿತ್ವಂ ವ್ರಜತು ತೇ ರಾಜನ್ಬ್ರಾಹ್ಮಣಾ ಹ್ಯತ್ರ ಕಾರಣಮ್||
ಮಹಾರಾಜ! ರಾಜನ್! ಇದಕ್ಕೆ ಪ್ರಧಾನ ಕಾರಣರಾಗಿರುವ ಬ್ರಾಹ್ಮಣರಿಗೆ ಮೂರು ಪಟ್ಟು ಅಧಿಕವಾದ ದಕ್ಷಿಣೆಯನ್ನು ಕೊಟ್ಟು ಮೂರು ಯಜ್ಞಗಳನ್ನು ಮಾಡಿದಂಥವನಾಗು!
14090015a ತ್ರೀನಶ್ವಮೇಧಾನತ್ರ ತ್ವಂ ಸಂಪ್ರಾಪ್ಯ ಬಹುದಕ್ಷಿಣಾನ್|
14090015c ಜ್ಞಾತಿವಧ್ಯಾಕೃತಂ ಪಾಪಂ ಪ್ರಹಾಸ್ಯಸಿ ನರಾಧಿಪ||
ನರಾಧಿಪ! ಬಹುದಕ್ಷಿಣಾಯುಕ್ತವಾದ ಮೂರು ಅಶ್ವಮೇಧಗಳನ್ನು ಮಾಡಿದವನಾಗಿ ನೀನು ಜ್ಞಾತಿವಧೆಯ ಪಾಪವನ್ನು ಕಳೆದುಕೊಳ್ಳುತ್ತೀಯೆ!
14090016a ಪವಿತ್ರಂ ಪರಮಂ ಹ್ಯೇತತ್ಪಾವನಾನಾಂ ಚ ಪಾವನಮ್|
14090016c ಯದಶ್ವಮೇಧಾವಭೃಥಂ ಪ್ರಾಪ್ಸ್ಯಸೇ ಕುರುನಂದನ||
ಕುರುನಂದನ! ಪರಮ ಪವಿತ್ರವೂ ಪಾವನಗಳಲ್ಲಿ ಪಾವನವೂ ಆಗಿರುವ ಈ ಅಶ್ವಮೇಧದ ಅವಭೃತವನ್ನು ನೀನು ಪಡೆಯುವವನಾಗು!”
14090017a ಇತ್ಯುಕ್ತಃ ಸ ತು ತೇಜಸ್ವೀ ವ್ಯಾಸೇನಾಮಿತತೇಜಸಾ|
14090017c ದೀಕ್ಷಾಂ ವಿವೇಶ ಧರ್ಮಾತ್ಮಾ ವಾಜಿಮೇಧಾಪ್ತಯೇ ತದಾ|
14090017e ನರಾಧಿಪಃ ಪ್ರಾಯಜತ ವಾಜಿಮೇಧಂ ಮಹಾಕ್ರತುಮ್||
ತೇಜಸ್ವೀ ಅಮಿತತೇಜಸ್ವೀ ವ್ಯಾಸನು ಹೀಗೆ ಹೇಳಲು ಆ ಧರ್ಮಾತ್ಮಾ ನರಾಧಿಪ ಯುಧಿಷ್ಠಿರನು ಅಶ್ವಮೇಧದ ದೀಕ್ಷೆಯನ್ನು ಗ್ರಹಣಮಾಡಿ, ಮಹಾಕ್ರತು ಅಶ್ವಮೇಧ ಯಾಗವನ್ನು ನಡೆಸಿದನು.
14090018a ತತ್ರ ವೇದವಿದೋ ರಾಜಂಶ್ಚಕ್ರುಃ ಕರ್ಮಾಣಿ ಯಾಜಕಾಃ|
14090018c ಪರಿಕ್ರಮಂತಃ ಶಾಸ್ತ್ರಜ್ಞಾ ವಿಧಿವತ್ಸಾಧುಶಿಕ್ಷಿತಾಃ||
ರಾಜನ್! ಅಲ್ಲಿ ಚೆನ್ನಾಗಿ ಪಳಗಿದ್ದ ವೇದವಿದ ಶಾಸ್ತ್ರಜ್ಞ ಯಾಜಕರು ವಿಧಿವತ್ತಾಗಿ ಕರ್ಮಗಳನ್ನು ಕ್ರಮವಾಗಿ ನಡೆಸಿದರು.
14090019a ನ ತೇಷಾಂ ಸ್ಖಲಿತಂ ತತ್ರ ನಾಸೀದಪಹುತಂ ತಥಾ|
14090019c ಕ್ರಮಯುಕ್ತಂ ಚ ಯುಕ್ತಂ ಚ ಚಕ್ರುಸ್ತತ್ರ ದ್ವಿಜರ್ಷಭಾಃ||
ಆ ದ್ವಿಜರ್ಷಭರು ಕ್ರಮಯುಕ್ತವಾಗಿ ಎಲ್ಲ ಕರ್ಮಗಳನ್ನೂ ನಡೆಸಿದರು. ಅಲ್ಲಿ ಯಾವುದನ್ನೂ ಬಿಡದೇ ಯಾವುದರಲ್ಲಿಯೂ ತಪ್ಪದೇ ಮಾಡಿಸಿದರು.
14090020a ಕೃತ್ವಾ ಪ್ರವರ್ಗ್ಯಂ ಧರ್ಮಜ್ಞಾ ಯಥಾವದ್ದ್ವಿಜಸತ್ತಮಾಃ|
14090020c ಚಕ್ರುಸ್ತೇ ವಿಧಿವದ್ರಾಜಂಸ್ತಥೈವಾಭಿಷವಂ ದ್ವಿಜಾಃ||
ರಾಜನ್! ಧರ್ಮಜ್ಞ ದ್ವಿಜ ದ್ವಿಜಸತ್ತಮರು ಯಥಾವಿಧಿಯಾಗಿ ಪ್ರವರ್ಗ್ಯವನ್ನು ಮಾಡಿ ವಿಧಿವತ್ತಾಗಿ ಅಭಿಷವ[1]ವನ್ನೂ ನಡೆಸಿದರು.
14090021a ಅಭಿಷೂಯ ತತೋ ರಾಜನ್ಸೋಮಂ ಸೋಮಪಸತ್ತಮಾಃ|
14090021c ಸವನಾನ್ಯಾನುಪೂರ್ವ್ಯೇಣ ಚಕ್ರುಃ ಶಾಸ್ತ್ರಾನುಸಾರಿಣಃ||
ರಾಜನ್! ಅನಂತರ ಸೋಮಪಾನಮಾಡುವುದರಲ್ಲಿ ಶ್ರೇಷ್ಠರಾದ ಅವರು ಸೋಮವನ್ನು ತಯಾರಿಸಿ ಅದರ ಮೂಲಕ ಶಾಸ್ತ್ರಗಳನ್ನನುಸರಿಸಿ ಓಂದಾದರೊಂದಂತೆ ಸವನಗಳನ್ನು ಮಾಡಿದರು.
14090022a ನ ತತ್ರ ಕೃಪಣಃ ಕಶ್ಚಿನ್ನ ದರಿದ್ರೋ ಬಭೂವ ಹ|
14090022c ಕ್ಷುಧಿತೋ ದುಃಖಿತೋ ವಾಪಿ ಪ್ರಾಕೃತೋ ವಾಪಿ ಮಾನವಃ||
ಅಲ್ಲಿ ಯಾವ ಮಾನವನೂ ಕೃಪಣನಾಗಲೀ, ದರಿದ್ರನಾಗಲೀ, ಹಸಿದವನಾಗಲೀ, ದುಃಖಿತನಾಗಲೀ, ಅಸಂಸ್ಕೃತನಾಗಲೀ ಇರಲಿಲ್ಲ.
14090023a ಭೋಜನಂ ಭೋಜನಾರ್ಥಿಭ್ಯೋ ದಾಪಯಾಮಾಸ ನಿತ್ಯದಾ|
14090023c ಭೀಮಸೇನೋ ಮಹಾತೇಜಾಃ ಸತತಂ ರಾಜಶಾಸನಾತ್||
ರಾಜಶಾಸನದಂತೆ ಮಹಾತೇಜಸ್ವೀ ಭೀಮಸೇನನು ನಿತ್ಯವೂ ಸತತವಾಗಿ ಭೋಜನಾರ್ಥಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡುತ್ತಿದ್ದನು.
14090024a ಸಂಸ್ತರೇ ಕುಶಲಾಶ್ಚಾಪಿ ಸರ್ವಕರ್ಮಾಣಿ ಯಾಜಕಾಃ|
14090024c ದಿವಸೇ ದಿವಸೇ ಚಕ್ರುರ್ಯಥಾಶಾಸ್ತ್ರಾರ್ಥಚಕ್ಷುಷಃ||
ಸರ್ವಕರ್ಮಗಳಲ್ಲಿ ಕುಶಲರಾದ ಮತ್ತು ಶಾಸ್ತ್ರಾರ್ಥಗಳನ್ನು ಕಂಡುಕೊಂಡಿದ್ದ ಯಾಜಕರು ಅನುದಿನವೂ ಎಲ್ಲಕರ್ಮಗಳನ್ನೂ ಸರಿಯಾಗಿಯೇ ಮಾಡಿಸುತ್ತಿದ್ದರು.
14090025a ನಾಷಡಂಗವಿದತ್ರಾಸೀತ್ಸದಸ್ಯಸ್ತಸ್ಯ ಧೀಮತಃ|
14090025c ನಾವ್ರತೋ ನಾನುಪಾಧ್ಯಾಯೋ ನ ಚ ವಾದಾಕ್ಷಮೋ ದ್ವಿಜಃ||
ಧೀಮತ ಯುಧಿಷ್ಠಿರನ ಸದಸ್ಯರಲ್ಲಿ ಷಡಂಗಸಹಿತ ವೇದವನ್ನು ತಿಳಿಯದ, ವ್ರತಾನುಷ್ಠಾನಗಳನ್ನು ಮಾಡಿರದ, ಉಪಾಧ್ಯಾಯನಲ್ಲದ ಮತ್ತು ವಾದಗಳಿಗೆ ಸಕ್ಷಮನಲ್ಲದ ದ್ವಿಜರು ಯಾರೂ ಇರಲಿಲ್ಲ.
14090026a ತತೋ ಯೂಪೋಚ್ಚ್ರಯೇ ಪ್ರಾಪ್ತೇ ಷಡ್ ಬೈಲ್ವಾನ್ಭರತರ್ಷಭ|
14090026c ಖಾದಿರಾನ್ಬಿಲ್ವಸಮಿತಾಂಸ್ತಾವತಃ ಸರ್ವವರ್ಣಿನಃ||
14090027a ದೇವದಾರುಮಯೌ ದ್ವೌ ತು ಯೂಪೌ ಕುರುಪತೇಃ ಕ್ರತೌ|
14090027c ಶ್ಲೇಷ್ಮಾತಕಮಯಂ ಚೈಕಂ ಯಾಜಕಾಃ ಸಮಕಾರಯನ್||
ಭರತರ್ಷಭ! ಕುರುಪತಿಯ ಕ್ರತುವಿನಲ್ಲಿ ಯೂಪೋಚ್ಛ್ರಯವು ಸನ್ನಿಹಿತವಾದಾಗ ಯಾಜಕರು ಆರು ಬಿಲ್ವ, ಆರು ಖಾದಿರ (ಕಗ್ಗಲಿ), ಆರು ಬಿಲ್ವಸಮಿತ (ಪಲಾಶ), ಎರಡು ದೇವದಾರು, ಮತ್ತು ಒಂದು ಶ್ಲೇಷ್ಮಾತಕ ವೃಕ್ಷಗಳ (ಇಪ್ಪತ್ತೊಂದು) ಯೂಪಗಳನ್ನು ಸ್ಥಾಪಿಸಿದರು.
14090028a ಶೋಭಾರ್ಥಂ ಚಾಪರಾನ್ಯೂಪಾನ್ಕಾಂಚನಾನ್ಪುರುಷರ್ಷಭ|
14090028c ಸ ಭೀಮಃ ಕಾರಯಾಮಾಸ ಧರ್ಮರಾಜಸ್ಯ ಶಾಸನಾತ್||
ಪುರುಷರ್ಷಭ! ಧರ್ಮರಾಜನ ಶಾಸನದಂತೆ ಆ ಯೂಪಗಳ ಶೋಭೆಗಾಗಿ ಭೀಮನು ಅವುಗಳನ್ನು ಕಾಂಚನದಿಂದಲೇ ಮಾಡಿಸಿದ್ದನು.
14090029a ತೇ ವ್ಯರಾಜಂತ ರಾಜರ್ಷೇ ವಾಸೋಭಿರುಪಶೋಭಿತಾಃ|
14090029c ನರೇಂದ್ರಾಭಿಗತಾ ದೇವಾನ್ಯಥಾ ಸಪ್ತರ್ಷಯೋ ದಿವಿ||
ರಾಜರ್ಷೇ! ನರೇಂದ್ರ! ಬಣ್ಣದ ವಸ್ತ್ರಗಳಿಂದ ಶೋಭಿತವಾಗಿದ್ದ ಆ ಯೂಪಸ್ಥಂಭಗಳು ನಭದಲ್ಲಿ ಸಪ್ತರ್ಷಿ ಸಹಿತರಾದ ದೇವತೆಗಳಂತೆಯೇ ವಿರಾಜಿಸುತ್ತಿದ್ದವು.
14090030a ಇಷ್ಟಕಾಃ ಕಾಂಚನೀಶ್ಚಾತ್ರ ಚಯನಾರ್ಥಂ ಕೃತಾಭವನ್|
14090030c ಶುಶುಭೇ ಚಯನಂ ತತ್ರ ದಕ್ಷಸ್ಯೇವ ಪ್ರಜಾಪತೇಃ||
ಚಯನಕ್ಕೆ ಚಿನ್ನದ ಇಟ್ಟಿಗೆಗಳನ್ನೇ ಮಾಡಿಸಲಾಗಿತ್ತು. ಅಲ್ಲಿಯ ಚಯನವು ಪ್ರಜಾಪತಿ ದಕ್ಷನ ಚಯನದಂತೆಯೇ ಶೋಭಿಸಿತು.
14090031a ಚತುಶ್ಚಿತ್ಯಃ ಸ ತಸ್ಯಾಸೀದಷ್ಟಾದಶಕರಾತ್ಮಕಃ|
14090031c ಸ ರುಕ್ಮಪಕ್ಷೋ ನಿಚಿತಸ್ತ್ರಿಗುಣೋ ಗರುಡಾಕೃತಿಃ||
ಅಲ್ಲಿದ್ದ ನಾಲ್ಕು ಚಿತಿಗಳಲ್ಲಿ ಪ್ರತಿಯೊಂದರ ಉದ್ದಗಲಗಳು ಹದಿನೆಂಟು ಗೇಣುಗಳಾಗಿದ್ದು, ಸುವರ್ಣಮಯ ರೆಕ್ಕೆಗಳುಳ್ಳ ಗರುಡನ ಆಕಾರದಲ್ಲಿ ತ್ರಿಕೋಣಗಳಾಗಿದ್ದವು.
14090032a ತತೋ ನಿಯುಕ್ತಾಃ ಪಶವೋ ಯಥಾಶಾಸ್ತ್ರಂ ಮನೀಷಿಭಿಃ|
14090032c ತಂ ತಂ ದೇವಂ ಸಮುದ್ದಿಶ್ಯ ಪಕ್ಷಿಣಃ ಪಶವಶ್ಚ ಯೇ||
ಮನೀಷಿಗಳು ಶಾಸ್ತ್ರಪ್ರಕಾರವಾಗಿ ಆಯಾ ದೇವತೆಗಳನ್ನು ಉದ್ದೇಶಿಸಿ ಪಕ್ಷಿ-ಪಶುಗಳನ್ನು ನಿಯೋಜಿಸಿದ್ದರು.
14090033a ಋಷಭಾಃ ಶಾಸ್ತ್ರಪಠಿತಾಸ್ತಥಾ ಜಲಚರಾಶ್ಚ ಯೇ|
14090033c ಸರ್ವಾಂಸ್ತಾನಭ್ಯಯುಂಜಂಸ್ತೇ ತತ್ರಾಗ್ನಿಚಯಕರ್ಮಣಿ||
ಆ ಅಗ್ನಿಚಯ ಕರ್ಮದಲ್ಲಿ ಶಾಸ್ತ್ರದಲ್ಲಿ ಹೇಳಿರುವಂತೆ ಋಷಭಗಳನ್ನೂ, ಜಲಚರ ಪ್ರಾಣಿಗಳನ್ನು ಎಲ್ಲವನ್ನೂ ಒಟ್ಟಾಗಿ ಸೇರಿಸಿದ್ದರು.
14090034a ಯೂಪೇಷು ನಿಯತಂ ಚಾಸೀತ್ಪಶೂನಾಂ ತ್ರಿಶತಂ ತಥಾ|
14090034c ಅಶ್ವರತ್ನೋತ್ತರಂ ರಾಜ್ಞಃ ಕೌಂತೇಯಸ್ಯ ಮಹಾತ್ಮನಃ||
ರಾಜ ಮಾಹಾತ್ಮ ಕೌಂತೇಯನ ಯೂಪಗಳಲ್ಲಿ ಮೂರುನೂರು ಪಶುಗಳನ್ನು ಬಂಧಿಸಿದ್ದರು. ಅವುಗಳಲ್ಲಿ ಕುದುರೆಯು ಪ್ರಧಾನವಾಗಿದ್ದಿತು.
14090035a ಸ ಯಜ್ಞಃ ಶುಶುಭೇ ತಸ್ಯ ಸಾಕ್ಷಾದ್ದೇವರ್ಷಿಸಂಕುಲಃ|
14090035c ಗಂಧರ್ವಗಣಸಂಕೀರ್ಣಃ ಶೋಭಿತೋಽಪ್ಸರಸಾಂ ಗಣೈಃ||
ಸಾಕ್ಷಾತ್ ದೇವರ್ಷಿಗಳಿಂದ ಕೂಡಿದ್ದ ಆ ಯಜ್ಞವು ಶೋಭಿಸುತ್ತಿತ್ತು. ಗಂಧರ್ವಗಣಸಂಕೀರ್ಣಗಳಿಂದ ಮತ್ತು ಅಪ್ಸರೆಯರ ಗಣಗಳಿಂದ ಕೂಡಿ ಶೋಭಿಸುತ್ತಿತ್ತು.
14090036a ಸ ಕಿಂಪುರುಷಗೀತೈಶ್ಚ ಕಿಂನರೈರುಪಶೋಭಿತಃ|
14090036c ಸಿದ್ಧವಿಪ್ರನಿವಾಸೈಶ್ಚ ಸಮಂತಾದಭಿಸಂವೃತಃ||
ಕಿಂಪುರುಷರ ಗೀತೆಗಳಿಂದಲೂ ಕಿನ್ನರರಿಂದಲೂ ಶೋಭಿತವಾಗಿತ್ತು. ಸಿದ್ಧರ ಮತ್ತು ವಿಪ್ರರ ನಿವಾಸಗಳು ಎಲ್ಲೆಡೆಯಲ್ಲಿಯೂ ಸಮಾವೃತವಾಗಿದ್ದವು.
14090037a ತಸ್ಮಿನ್ಸದಸಿ ನಿತ್ಯಾಸ್ತು ವ್ಯಾಸಶಿಷ್ಯಾ ದ್ವಿಜೋತ್ತಮಾಃ|
14090037c ಸರ್ವಶಾಸ್ತ್ರಪ್ರಣೇತಾರಃ ಕುಶಲಾ ಯಜ್ಞಕರ್ಮಸು||
ಆ ಯಾಗಸಭೆಯಲ್ಲಿ ಸರ್ವಶಾಸ್ತ್ರಪ್ರಣೇತಾರರಾದ ಯಜ್ಞಕರ್ಮಗಳಲ್ಲಿ ಕುಶಲರಾದ ವ್ಯಾಸಶಿಷ್ಯ ದ್ವಿಜೋತ್ತಮರು ನಿತ್ಯವೂ ಸದಸ್ಯರಾಗಿದ್ದರು.
14090038a ನಾರದಶ್ಚ ಬಭೂವಾತ್ರ ತುಂಬುರುಶ್ಚ ಮಹಾದ್ಯುತಿಃ|
14090038c ವಿಶ್ವಾವಸುಶ್ಚಿತ್ರಸೇನಸ್ತಥಾನ್ಯೇ ಗೀತಕೋವಿದಾಃ||
ಅಲ್ಲಿ ನಾರದ, ಮಹಾದ್ಯುತಿ ತುಂಬುರು, ವಿಶ್ವಾವಸು ಮತ್ತು ಚಿತ್ರಸೇನರು ಹಾಗೂ ಅನ್ಯ ಗೀತಕೋವಿದರು ಇದ್ದರು.
14090039a ಗಂಧರ್ವಾ ಗೀತಕುಶಲಾ ನೃತ್ತೇಷು ಚ ವಿಶಾರದಾಃ|
14090039c ರಮಯಂತಿ ಸ್ಮ ತಾನ್ವಿಪ್ರಾನ್ಯಜ್ಞಕರ್ಮಾಂತರೇಷ್ವಥ||
ಯಜ್ಞಕರ್ಮಗಳ ಮಧ್ಯೆ ಬಿಡುವಿನಲ್ಲಿ ಗೀತಕುಶಲರಾದ ಮತ್ತು ನೃತ್ಯವಿಶಾರದರಾದ ಗಂಧರ್ವರು ಆ ವಿಪ್ರರನ್ನು ರಮಿಸುತ್ತಿದ್ದರು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಾರಂಭೇ ನವತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಾರಂಭ ಎನ್ನುವ ತೊಂಭತ್ತನೇ ಅಧ್ಯಾಯವು.
[1] ಸೋಮಲತೆಯನ್ನು ಕುಟ್ಟಿ ಸೋಮರಸವನ್ನು ಹಿಂಡುವ ಕಾರ್ಯ.