Ashvamedhika Parva: Chapter 9

ಅಶ್ವಮೇಧಿಕ ಪರ್ವ

ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಮುಂದುವರೆಸಿದುದು (೧-೩೭).

14009001 ಇಂದ್ರ ಉವಾಚ

14009001a ಕಚ್ಚಿತ್ಸುಖಂ ಸ್ವಪಿಷಿ ತ್ವಂ ಬೃಹಸ್ಪತೇ

ಕಚ್ಚಿನ್ಮನೋಜ್ಞಾಃ ಪರಿಚಾರಕಾಸ್ತೇ|

14009001c ಕಚ್ಚಿದ್ದೇವಾನಾಂ ಸುಖಕಾಮೋಽಸಿ ವಿಪ್ರ

ಕಚ್ಚಿದ್ದೇವಾಸ್ತ್ವಾಂ ಪರಿಪಾಲಯಂತಿ||

ಇಂದ್ರನು ಹೇಳಿದನು: “ಬೃಹಸ್ಪತೇ! ನೀನು ಸುಖವಾಗಿ ನಿದ್ರಿಸುತ್ತಿರುವೆ ತಾನೆ? ನಿನ್ನ ಪರಿಚಾರಕರು ನಿನ್ನ ಮನಸ್ಸನ್ನು ತಿಳಿದುಕೊಂಡು ಕೆಲಸಮಾಡುತ್ತಾರೆ ತಾನೆ? ವಿಪ್ರ! ನೀನು ದೇವತೆಗಳ ಸುಖವನ್ನು ಬಯಸುತ್ತೀಯೆ ತಾನೆ? ದೇವತೆಗಳು ನಿನ್ನನ್ನು ಪರಿಪಾಲಿಸುತ್ತಿದ್ದಾರೆ ತಾನೆ?”

14009002 ಬೃಹಸ್ಪತಿರುವಾಚ

14009002a ಸುಖಂ ಶಯೇಽಹಂ ಶಯನೇ ಮಹೇಂದ್ರ

ತಥಾ ಮನೋಜ್ಞಾಃ ಪರಿಚಾರಕಾ ಮೇ|

14009002c ತಥಾ ದೇವಾನಾಂ ಸುಖಕಾಮೋಽಸ್ಮಿ ಶಕ್ರ

ದೇವಾಶ್ಚ ಮಾಂ ಸುಭೃಶಂ ಪಾಲಯಂತಿ||

ಬೃಹಸ್ಪತಿಯು ಹೇಳಿದನು: “ಮಹೇಂದ್ರ! ನಾನು ಹಾಸಿಗೆಯ ಮೇಲೆ ಸುಖವಾಗಿ ಮಲಗುತ್ತಿದ್ದೇನೆ. ಹಾಗೆಯೇ ಪರಿಚಾರಕರು ನನ್ನ ಮನಸ್ಸನ್ನು ಅರ್ಥಮಾಡಿಕೊಂಡಿದ್ದಾರೆ. ಶಕ್ರ! ಹಾಗೆಯೇ ನಾನು ದೇವತೆಗಳ ಸುಖವನ್ನೇ ಬಯಸುತ್ತಿದ್ದೇನೆ ಮತ್ತು ದೇವತೆಗಳೂ ಕೂಡ ನನ್ನನ್ನು ಚೆನ್ನಾಗಿ ಪಾಲಿಸುತ್ತಿದ್ದಾರೆ.”

14009003 ಇಂದ್ರ ಉವಾಚ

14009003a ಕುತೋ ದುಃಖಂ ಮಾನಸಂ ದೇಹಜಂ ವಾ

ಪಾಂಡುರ್ವಿವರ್ಣಶ್ಚ ಕುತಸ್ತ್ವಮದ್ಯ|

14009003c ಆಚಕ್ಷ್ವ ಮೇ ತದ್ದ್ವಿಜ ಯಾವದೇತಾನ್

ನಿಹನ್ಮಿ ಸರ್ವಾಂಸ್ತವ ದುಃಖಕರ್ತೄನ್||

ಇಂದ್ರನು ಹೇಳಿದನು: “ಈ ದುಃಖವು ಎಲ್ಲಿಂದ? ಇದು ಮಾನಸಿಕವಾದುದೇ ಅಥವಾ ಶಾರೀರಿಕವಾದುದೇ? ಇಂದು ನೀನು ಬಿಳಿಚಿಕೊಂಡಿದುದು ಏಕೆ? ದ್ವಿಜ! ಅದನ್ನು ನನಗೆ ಹೇಳು. ನಿನ್ನ ದುಃಖಕ್ಕೆ ಕಾರಣರಾದ ಎಲ್ಲರನ್ನೂ ನಾನು ಸಂಹರಿಸಿಬಿಡುತ್ತೇನೆ!”

14009004 ಬೃಹಸ್ಪತಿರುವಾಚ

14009004a ಮರುತ್ತಮಾಹುರ್ಮಘವನ್ಯಕ್ಷ್ಯಮಾಣಂ

ಮಹಾಯಜ್ಞೇನೋತ್ತಮದಕ್ಷಿಣೇನ|

14009004c ತಂ ಸಂವರ್ತೋ ಯಾಜಯಿತೇತಿ ಮೇ ಶ್ರುತಂ

ತದಿಚ್ಚಾಮಿ ನ ಸ ತಂ ಯಾಜಯೇತ||

ಬೃಹಸ್ಪತಿಯು ಹೇಳಿದನು: “ಮಘವನ್! ಮರುತ್ತನು ಉತ್ತಮ ದಕ್ಷಿಣೆಗಳಿಂದ ಯುಕ್ತವಾದ ಮಹಾ ಯಜ್ಞವನ್ನು ಯಾಜಿಸಲು ತೊಡಗಿರುವನೆಂದು ಹೇಳುತ್ತಾರೆ. ಆ ಯಜ್ಞವನ್ನು ಸಂವರ್ತನು ನಡೆಸಿಕೊಡುತ್ತಿದ್ದಾನೆಂದು ನಾನು ಕೇಳಿದ್ದೇನೆ. ಅವನು ಈ ಯಜ್ಞವನ್ನು ಮಾಡಿಸಿಕೊಡಬಾರದೆಂದು ನಾನು ಬಯಸುತ್ತೇನೆ.”

14009005 ಇಂದ್ರ ಉವಾಚ

14009005a ಸರ್ವಾನ್ಕಾಮಾನನುಜಾತೋಽಸಿ ವಿಪ್ರ

ಯಸ್ತ್ವಂ ದೇವಾನಾಂ ಮಂತ್ರಯಸೇ ಪುರೋಧಾಃ|

14009005c ಉಭೌ ಚ ತೇ ಜನ್ಮಮೃತ್ಯೂ ವ್ಯತೀತೌ

ಕಿಂ ಸಂವರ್ತಸ್ತವ ಕರ್ತಾದ್ಯ ವಿಪ್ರ||

ಇಂದ್ರನು ಹೇಳಿದನು: “ವಿಪ್ರ! ದೇವತೆಗಳಿಗೆ ಪುರೋಹಿತನಾಗಿ ಸಲಹೆಗಳನ್ನು ನೀಡುವ ನೀನು ಸರ್ವಕಾಮಗಳನ್ನೂ ಪೂರೈಸಿಕೊಂಡಿದ್ದೀಯೆ. ವಿಪ್ರ! ಜನ್ಮ-ಮೃತ್ಯುಗಳೆರಡನ್ನೂ ನೀನು ಕಳೆದುಕೊಂಡಿರುವೆ. ಇನ್ನು ಸಂವರ್ತನು ಇಂದು ನಿನಗೇನು ಮಾಡಬಲ್ಲನು?”

14009006 ಬೃಹಸ್ಪತಿರುವಾಚ

14009006a ದೇವೈಃ ಸಹ ತ್ವಮಸುರಾನ್ಸಂಪ್ರಣುದ್ಯ

ಜಿಘಾಂಸಸೇಽದ್ಯಾಪ್ಯುತ ಸಾನುಬಂಧಾನ್|

14009006c ಯಂ ಯಂ ಸಮೃದ್ಧಂ ಪಶ್ಯಸಿ ತತ್ರ ತತ್ರ

ದುಃಖಂ ಸಪತ್ನೇಷು ಸಮೃದ್ಧಭಾವಃ||

ಬೃಹಸ್ಪತಿಯು ಹೇಳಿದನು: “ನೀನು ಯಾವ ಯಾವ ಅಸುರರನ್ನು ಸಮೃದ್ಧರಾಗಿದ್ದಾರೆಂದು ಕಂಡೆಯೋ ಬಾಂಧವರೊಂದಿಗೆ ಅವರನ್ನು ಅಲ್ಲಲ್ಲಿಯೇ ದೇವತೆಗಳೊಡಗೂಡಿ ಸಂಹರಿಸುತ್ತಾ ಬಂದಿರುವೆ. ದಾಯಾದಿಗಳ ಸಮೃದ್ಧಿಯು ದುಃಖಕ್ಕೆ ಕಾರಣವಾಗುತ್ತದೆ.

14009007a ಅತೋಽಸ್ಮಿ ದೇವೇಂದ್ರ ವಿವರ್ಣರೂಪಃ

ಸಪತ್ನೋ ಮೇ ವರ್ಧತೇ ತನ್ನಿಶಮ್ಯ|

14009007c ಸರ್ವೋಪಾಯೈರ್ಮಘವನ್ಸಂನಿಯಚ್ಚ

ಸಂವರ್ತಂ ವಾ ಪಾರ್ಥಿವಂ ವಾ ಮರುತ್ತಮ್||

ದೇವೇಂದ್ರ! ನನ್ನ ದಾಯಾದಿಯು ಅಭಿವೃದ್ಧಿಹೊಂದುತ್ತಿರುವನು ಎಂದು ಕೇಳಿ ನಾನು ವಿವರ್ಣರೂಪನಾಗಿದ್ದೇನೆ. ಮಘವನ್! ಎಲ್ಲ ಉಪಾಯಗಳನ್ನೂ ಬಳಸಿ ಸಂವರ್ತನನ್ನಾಗಲೀ ಅಥವಾ ಪಾರ್ಥಿವ ಮರುತ್ತನನ್ನಾಗಲೀ ನೀನು ತಡೆಯಬೇಕು.”

14009008 ಇಂದ್ರ ಉವಾಚ

14009008a ಏಹಿ ಗಚ್ಚ ಪ್ರಹಿತೋ ಜಾತವೇದೋ

ಬೃಹಸ್ಪತಿಂ ಪರಿದಾತುಂ ಮರುತ್ತೇ|

14009008c ಅಯಂ ವೈ ತ್ವಾ ಯಾಜಯಿತಾ ಬೃಹಸ್ಪತಿಸ್

ತಥಾಮರಂ ಚೈವ ಕರಿಷ್ಯತೀತಿ||

ಇಂದ್ರನು ಹೇಳಿದನು: ’ಜಾತವೇದ! ಇಲ್ಲಿ ಬಾ! ಬೃಹಸ್ಪತಿಯನ್ನು ಮರುತ್ತನಿಗೆ ಒಪ್ಪಿಸುವ ಸಲುವಾಗಿ “ಈ ಬೃಹಸ್ಪತಿಯು ನಿನ್ನ ಯಜ್ಞವನ್ನು ಮಾಡಿಸುತ್ತಾನೆ ಮತ್ತು ನಿನ್ನನ್ನು ಅಮರನನ್ನಾಗಿಯೂ ಮಾಡುತ್ತಾನೆ” ಎಂಬ ಸಂದೇಶವನ್ನು ತೆಗೆದುಕೊಂಡು ಹೋಗು!”

14009009 ಅಗ್ನಿರುವಾಚ

14009009a ಅಯಂ ಗಚ್ಚಾಮಿ ತವ ಶಕ್ರಾದ್ಯ ದೂತೋ

ಬೃಹಸ್ಪತಿಂ ಪರಿದಾತುಂ ಮರುತ್ತೇ|

14009009c ವಾಚಂ ಸತ್ಯಾಂ ಪುರುಹೂತಸ್ಯ ಕರ್ತುಂ

ಬೃಹಸ್ಪತೇಶ್ಚಾಪಚಿತಿಂ ಚಿಕೀರ್ಷುಃ||

ಅಗ್ನಿಯು ಹೇಳಿದನು: “ಶಕ್ರ! ಇಂದ್ರನ ಮಾತನ್ನು ಸತ್ಯವನ್ನಾಗಿಸಲು ಮತ್ತು ಬೃಹಸ್ಪತಿಗೆ ಒಳ್ಳೆಯದನ್ನೇ ಮಾಡಲು, ಬೃಹಸ್ಪತಿಯನ್ನು ಮರುತ್ತನಿಗೆ ಒಪ್ಪಿಸುವ ಸಲುವಾಗಿ ಇಂದು ನಾನು ನಿನ್ನ ದೂತನಾಗಿ ಹೋಗುತ್ತೇನೆ.””

14009010 ವ್ಯಾಸ ಉವಾಚ

14009010a ತತಃ ಪ್ರಾಯಾದ್ಧೂಮಕೇತುರ್ಮಹಾತ್ಮಾ

ವನಸ್ಪತೀನ್ವೀರುಧಶ್ಚಾವಮೃದ್ನನ್|

14009010c ಕಾಮಾದ್ಧಿಮಾಂತೇ ಪರಿವರ್ತಮಾನಃ

ಕಾಷ್ಠಾತಿಗೋ ಮಾತರಿಶ್ವೇವ ನರ್ದನ್||

ವ್ಯಾಸನು ಹೇಳಿದನು: “ಆನಂತರ ಮಹಾತ್ಮ ಧೂಮಕೇತುವು ವನಸ್ಪತಿ-ಬಳ್ಳಿಗಳನ್ನು ಧ್ವಂಸಮಾಡುತ್ತಾ ಹೇಮಂತಋತುವಿನ ಕೊನೆಯಲ್ಲಿ ಸ್ವಚ್ಛಂದವಾಗಿ ಬೀಸುವ ವಾಯುವಿನಂತೆ ಗರ್ಜಿಸುತ್ತಾ ಮರುತ್ತನ ಯಜ್ಞಶಾಲೆಗೆ ಆಗಮಿಸಿದನು.

14009011 ಮರುತ್ತ ಉವಾಚ

14009011a ಆಶ್ಚರ್ಯಮದ್ಯ ಪಶ್ಯಾಮಿ ರೂಪಿಣಂ ವಹ್ನಿಮಾಗತಮ್|

14009011c ಆಸನಂ ಸಲಿಲಂ ಪಾದ್ಯಂ ಗಾಂ ಚೋಪಾನಯ ವೈ ಮುನೇ||

ಮರುತ್ತನು ಹೇಳಿದನು: “ಇಂದು ಮೂರ್ತಿಮತ್ತಾಗಿ ಅಗ್ನಿಯು ಬಂದಿರುವ ಈ ಆಶ್ಚರ್ಯವನ್ನು ಕಾಣುತ್ತಿದ್ದೇನೆ! ಮುನೇ! ಆಸನ, ನೀರು, ಪಾದ್ಯ ಮತ್ತು ಗೋವನ್ನು ತರಿಸಿ!”

14009012 ಅಗ್ನಿರುವಾಚ

14009012a ಆಸನಂ ಸಲಿಲಂ ಪಾದ್ಯಂ ಪ್ರತಿನಂದಾಮಿ ತೇಽನಘ|

14009012c ಇಂದ್ರೇಣ ತು ಸಮಾದಿಷ್ಟಂ ವಿದ್ಧಿ ಮಾಂ ದೂತಮಾಗತಮ್||

ಅಗ್ನಿಯು ಹೇಳಿದನು: “ಅನಘ! ಆಸನ, ನೀರು ಮತ್ತು ಪಾದ್ಯಗಳಿಂದ ಸಂತೋಷಗೊಂಡಿದ್ದೇನೆ. ಇಂದ್ರನು ಕಳುಹಿಸಿದ ದೂತನಾಗಿ ನಾನು ಬಂದಿದ್ದೇನೆಂದು ತಿಳಿ!”

14009013 ಮರುತ್ತ ಉವಾಚ

14009013a ಕಚ್ಚಿಚ್ಚ್ರೀಮಾನ್ದೇವರಾಜಃ ಸುಖೀ ಚ

ಕಚ್ಚಿಚ್ಚಾಸ್ಮಾನ್ಪ್ರೀಯತೇ ಧೂಮಕೇತೋ|

14009013c ಕಚ್ಚಿದ್ದೇವಾಶ್ಚಾಸ್ಯ ವಶೇ ಯಥಾವತ್

ತದ್ಬ್ರೂಹಿ ತ್ವಂ ಮಮ ಕಾರ್ತ್ಸ್ನ್ಯೇನ ದೇವ||

ಮರುತ್ತನು ಹೇಳಿದನು: “ಶ್ರೀಮಾನ್ ದೇವರಾಜನು ಸುಖಿಯಾಗಿರುವನು ತಾನೇ? ಧೂಮಕೇತೋ! ಅವನು ನಮ್ಮ ಮೇಲೆ ಪ್ರೀತಿಯಿಂದ ಇರುವನು ತಾನೆ? ದೇವ! ದೇವತೆಗಳೂ ಕೂಡ ಯಥಾವತ್ತಾಗಿ ಅವನ ವಶದಲ್ಲಿರುವರು ತಾನೇ? ಎಲ್ಲವನ್ನೂ ಸಂಪೂರ್ಣವಾಗಿ ನನಗೆ ಹೇಳು.”

14009014 ಅಗ್ನಿರುವಾಚ

14009014a ಶಕ್ರೋ ಭೃಶಂ ಸುಸುಖೀ ಪಾರ್ಥಿವೇಂದ್ರ

ಪ್ರೀತಿಂ ಚೇಚ್ಚತ್ಯಜರಾಂ ವೈ ತ್ವಯಾ ಸಃ|

14009014c ದೇವಾಶ್ಚ ಸರ್ವೇ ವಶಗಾಸ್ತಸ್ಯ ರಾಜನ್

ಸಂದೇಶಂ ತ್ವಂ ಶೃಣು ಮೇ ದೇವರಾಜ್ಞಃ||

ಅಗ್ನಿಯು ಹೇಳಿದನು: “ಪಾರ್ಥಿವೇಂದ್ರ! ಶಕ್ರನು ತುಂಬಾ ಸುಖಿಯಾಗಿದ್ದಾನೆ. ನಿನ್ನೊಡನೆ ಶಾಶ್ವತ ಪ್ರೀತಿಯನ್ನು ಇಟ್ಟುಕೊಂಡಿರಲು ಬಯಸುತ್ತಾನೆ. ರಾಜನ್! ದೇವತೆಗಳೆಲ್ಲರೂ ಅವನ ವಶದಲ್ಲಿಯೇ ಇದ್ದಾರೆ. ದೇವರಾಜನ ಸಂದೇಶವನ್ನು ನೀನು ಕೇಳು.

14009015a ಯದರ್ಥಂ ಮಾಂ ಪ್ರಾಹಿಣೋತ್ತ್ವತ್ಸಕಾಶಂ

ಬೃಹಸ್ಪತಿಂ ಪರಿದಾತುಂ ಮರುತ್ತೇ|

14009015c ಅಯಂ ಗುರುರ್ಯಾಜಯಿತಾ ನೃಪ ತ್ವಾಂ

ಮರ್ತ್ಯಂ ಸಂತಮಮರಂ ತ್ವಾಂ ಕರೋತು||

ಮರುತ್ತನಿಗೆ ಬೃಹಸ್ಪತಿಯನ್ನು ಒಪ್ಪಿಸಲು ನನ್ನನ್ನು ನಿನ್ನಬಳಿ ಕಳುಹಿಸಿದ್ದಾನೆ. ನೃಪ! ನಿನ್ನ ಈ ಯಜ್ಞವನ್ನು ಗುರುವು ಮಾಡಿಸಿಕೊಡುತ್ತಾನೆ. ಮರ್ತ್ಯನಾಗಿರುವ ನಿನ್ನನ್ನು ಅಮರನನ್ನಾಗಿ ಮಾಡಿಸುತ್ತಾನೆ.”

14009016 ಮರುತ್ತ ಉವಾಚ

14009016a ಸಂವರ್ತೋಽಯಂ ಯಾಜಯಿತಾ ದ್ವಿಜೋ ಮೇ

ಬೃಹಸ್ಪತೇರಂಜಲಿರೇಷ ತಸ್ಯ|

14009016c ನಾಸೌ ದೇವಂ ಯಾಜಯಿತ್ವಾ ಮಹೇಂದ್ರಂ

ಮರ್ತ್ಯಂ ಸಂತಂ ಯಾಜಯನ್ನದ್ಯ ಶೋಭೇತ್||

ಮರುತ್ತನು ಹೇಳಿದನು: “ಬೃಹಸ್ಪತಿಗೆ ಅಂಜಲೀ ಬದ್ಧನಾಗಿ ನಮಸ್ಕರಿಸುತ್ತೇನೆ. ಈ ದ್ವಿಜ ಸಂವರ್ತನು ನನ್ನ ಯಜ್ಞವನ್ನು ಮಾಡಿಸುತ್ತಾನೆ. ಮಹೇಂದ್ರ ದೇವನಿಗೆ ಯಜ್ಞಗಳನ್ನು ಮಾಡಿಸುವ ಅವನಿಗೆ ಇಂದು ಮನುಷ್ಯರ ಯಜ್ಞವನ್ನು ಮಾಡಿಸಿಕೊಡುವುದು ಶೋಭಿಸುವುದಿಲ್ಲ!”

14009017 ಅಗ್ನಿರುವಾಚ

14009017a ಯೇ ವೈ ಲೋಕಾ ದೇವಲೋಕೇ ಮಹಾಂತಃ

ಸಂಪ್ರಾಪ್ಸ್ಯಸೇ ತಾನ್ದೇವರಾಜಪ್ರಸಾದಾತ್|

14009017c ತ್ವಾಂ ಚೇದಸೌ ಯಾಜಯೇದ್ವೈ ಬೃಹಸ್ಪತಿರ್

ನೂನಂ ಸ್ವರ್ಗಂ ತ್ವಂ ಜಯೇಃ ಕೀರ್ತಿಯುಕ್ತಃ||

ಅಗ್ನಿಯು ಹೇಳಿದನು: “ಬೃಹಸ್ಪತಿಯಿಂದ ನೀನು ಯಜ್ಞಮಾಡಿಸಿದ್ದೇ ಆದರೆ ದೇವರಾಜನ ಪ್ರಸಾದದಿಂದ ದೇವಲೋಕದಲ್ಲಿರುವ ಮಹಾಲೋಕಗಳನ್ನು ಪಡೆಯುತ್ತೀಯೆ. ಕೀರ್ತಿಯುಕ್ತನಾಗಿ ಸ್ವರ್ಗವನ್ನು ಗೆಲ್ಲುತ್ತೀಯೆ!

14009018a ತಥಾ ಲೋಕಾ ಮಾನುಷಾ ಯೇ ಚ ದಿವ್ಯಾಃ

ಪ್ರಜಾಪತೇಶ್ಚಾಪಿ ಯೇ ವೈ ಮಹಾಂತಃ|

14009018c ತೇ ತೇ ಜಿತಾ ದೇವರಾಜ್ಯಂ ಚ ಕೃತ್ಸ್ನಂ

ಬೃಹಸ್ಪತಿಶ್ಚೇದ್ಯಾಜಯೇತ್ತ್ವಾಂ ನರೇಂದ್ರ||

ನರೇಂದ್ರ! ಬೃಹಸ್ಪತಿಯಿಂದ ನೀನು ಈ ಯಜ್ಞವನ್ನು ಮಾಡಿಸಿದ್ದೇ ಆದರೆ ಎಷ್ಟು ಮಾನುಷ, ದೇವ ಮತ್ತು ಪ್ರಜಾಪತಿಯ ಮಹಾಲೋಕಗಳಿವೆಯೋ ಅವೆಲ್ಲವನ್ನೂ ಮತ್ತು ಸಂಪೂರ್ಣ ದೇವರಾಜ್ಯವನ್ನೂ ಪಡೆಯುತ್ತೀಯೆ!”

14009019 ಸಂವರ್ತ ಉವಾಚ

14009019a ಮಾಸ್ಮಾನೇವಂ ತ್ವಂ ಪುನರಾಗಾಃ ಕಥಂ ಚಿದ್

ಬೃಹಸ್ಪತಿಂ ಪರಿದಾತುಂ ಮರುತ್ತೇ|

14009019c ಮಾ ತ್ವಾಂ ಧಕ್ಷ್ಯೇ ಚಕ್ಷುಷಾ ದಾರುಣೇನ

ಸಂಕ್ರುದ್ಧೋಽಹಂ ಪಾವಕ ತನ್ನಿಬೋಧ||

ಸಂವರ್ತನು ಹೇಳಿದನು: “ಮರುತ್ತನಿಗೆ ಬೃಹಸ್ಪತಿಯನ್ನು ಒಪ್ಪಿಸುವ ಸಲುವಾಗಿ ಪುನಃ ಎಂದೂ ಇಲ್ಲಿಗೆ ಬರಬೇಡ! ಪಾವಕ! ಸಂಕೃದ್ಧನಾದ ನಾನು ದಾರುಣ ದೃಷ್ಟಿಯಿಂದ ನಿನ್ನನ್ನು ದಹಿಸಿಬಿಡುತ್ತೇನೆ. ಇದನ್ನು ತಿಳಿದುಕೋ!””

14009020 ವ್ಯಾಸ ಉವಾಚ

14009020a ತತೋ ದೇವಾನಗಮದ್ಧೂಮಕೇತುರ್

ದಾಹಾದ್ಭೀತೋ ವ್ಯಥಿತೋಽಶ್ವತ್ಥಪರ್ಣವತ್|

14009020c ತಂ ವೈ ದೃಷ್ಟ್ವಾ ಪ್ರಾಹ ಶಕ್ರೋ ಮಹಾತ್ಮಾ

ಬೃಹಸ್ಪತೇಃ ಸಂನಿಧೌ ಹವ್ಯವಾಹಮ್||

ವ್ಯಾಸನು ಹೇಳಿದನು: “ಆಗ ದೇವ ಧೂಮಕೇತುವು ಸುಟ್ಟುಹೋಗುವ ಭಯದಿಂದ ವ್ಯಥಿತನಾಗಿ ಅಶ್ವತ್ಥದ ಎಲೆಯಂತೆ ನಡುಗುತ್ತಾ ಹಿಂದಿರುಗಿದನು. ಅವನನ್ನು ಹಾಗೆ ನೋಡಿದ ಮಹಾತ್ಮ ಶಕ್ರನು ಬೃಹಸ್ಪತಿಯ ಸನ್ನಿಧಿಯಲ್ಲಿ ಹವ್ಯವಾಹನಿಗೆ ಹೀಗೆ ಹೇಳಿದನು:

14009021a ಯತ್ತ್ವಂ ಗತಃ ಪ್ರಹಿತೋ ಜಾತವೇದೋ

ಬೃಹಸ್ಪತಿಂ ಪರಿದಾತುಂ ಮರುತ್ತೇ|

14009021c ತತ್ಕಿಂ ಪ್ರಾಹ ಸ ನೃಪೋ ಯಕ್ಷ್ಯಮಾಣಃ

ಕಚ್ಚಿದ್ವಚಃ ಪ್ರತಿಗೃಹ್ಣಾತಿ ತಚ್ಚ||

“ಜಾತವೇದ! ಮರುತ್ತನಿಗೆ ಬೃಹಸ್ಪತಿಯನ್ನು ಒಪ್ಪಿಸಲು ಕಳುಹಿಸಿದ ನೀನು ಅಲ್ಲಿಗೆ ಹೋಗಿದ್ದೆಯಷ್ಟೇ? ಯಜ್ಞನಡೆಸುತ್ತಿದ್ದ ಆ ನೃಪನು ಏನು ಹೇಳಿದನು? ಅವನು ನನ್ನ ಮಾತನ್ನು ಸ್ವೀಕರಿಸಿದನೇ?”

14009022 ಅಗ್ನಿರುವಾಚ

14009022a ನ ತೇ ವಾಚಂ ರೋಚಯತೇ ಮರುತ್ತೋ

ಬೃಹಸ್ಪತೇರಂಜಲಿಂ ಪ್ರಾಹಿಣೋತ್ಸಃ|

14009022c ಸಂವರ್ತೋ ಮಾಂ ಯಾಜಯಿತೇತ್ಯಭೀಕ್ಷ್ಣಂ

ಪುನಃ ಪುನಃ ಸ ಮಯಾ ಪ್ರೋಚ್ಯಮಾನಃ||

ಅಗ್ನಿಯು ಹೇಳಿದನು: “ಮರುತ್ತನಿಗೆ ನಿನ್ನ ಮಾತುಗಳು ಇಷ್ಟವಾಗಲಿಲ್ಲ. ಅವನು ಬೃಹಸ್ಪತಿಗೆ ನಮಸ್ಕಾರವನ್ನು ಕಳುಹಿಸಿದ್ದಾನೆ. ಪುನಃ ಪುನಃ ನಾನು ಕೇಳಿಕೊಂಡರೂ ಅವನು “ಸಂವರ್ತನೇ ನನ್ನ ಯಜ್ಞವನ್ನು ಮಾಡಿಸುತ್ತಾನೆ!” ಎಂದು ಹೇಳಿಬಿಟ್ಟನು.

14009023a ಉವಾಚೇದಂ ಮಾನುಷಾ ಯೇ ಚ ದಿವ್ಯಾಃ

ಪ್ರಜಾಪತೇರ್ಯೇ ಯೇ ಚ ಲೋಕಾ ಮಹಾಂತಃ|

14009023c ತಾಂಶ್ಚೇಲ್ಲಭೇಯಂ ಸಂವಿದಂ ತೇನ ಕೃತ್ವಾ

ತಥಾಪಿ ನೇಚ್ಚೇಯಮಿತಿ ಪ್ರತೀತಃ||

ಅವನು ಹೇಳಿದುದನ್ನು ಮಾಡಿದರೆ ಮನುಷ್ಯ-ದೇವ-ಪ್ರಜಾಪತಿಯ ಎಷ್ಟು ಮಹಾ ಲೋಕಗಳಿವೆಯೋ ಅವೆಲ್ಲವೂ ಅವನಿಗೆ ದೊರಕುವವೆಂದು ಹೇಳಿದರೂ ಅವನು ನನಗೆ ಇಷ್ಟವಿಲ್ಲ ಎಂದು ಬಿಟ್ಟನು!”

14009024 ಇಂದ್ರ ಉವಾಚ

14009024a ಪುನರ್ಭವಾನ್ಪಾರ್ಥಿವಂ ತಂ ಸಮೇತ್ಯ

ವಾಕ್ಯಂ ಮದೀಯಂ ಪ್ರಾಪಯ ಸ್ವಾರ್ಥಯುಕ್ತಮ್|

14009024c ಪುನರ್ಯದ್ಯುಕ್ತೋ ನ ಕರಿಷ್ಯತೇ ವಚಸ್

ತತೋ ವಜ್ರಂ ಸಂಪ್ರಹರ್ತಾಸ್ಮಿ ತಸ್ಮೈ||

ಇಂದ್ರನು ಹೇಳಿದನು: “ನೀನು ಪುನಃ ಆ ರಾಜನಲ್ಲಿಗೆ ಹೋಗಿ ಅರ್ಥಯುಕ್ತವಾದ ನನ್ನ ಈ ಮಾತನ್ನು ಅವನಿಗೆ ತಲುಪಿಸು. ನಾನು ಹೇಳಿದ ಮಾತಿನಂತೆ ಅವನು ಮಾಡದೇ ಇದ್ದರೆ ಅವನನ್ನು ವಜ್ರದಿಂದ ಪ್ರಹರಿಸುತ್ತೇನೆ!”

14009025 ಅಗ್ನಿರುವಾಚ

14009025a ಗಂಧರ್ವರಾಡ್ಯಾತ್ವಯಂ ತತ್ರ ದೂತೋ

ಬಿಭೇಮ್ಯಹಂ ವಾಸವ ತತ್ರ ಗಂತುಮ್|

14009025c ಸಂರಬ್ಧೋ ಮಾಮಬ್ರವೀತ್ತೀಕ್ಷ್ಣರೋಷಃ

ಸಂವರ್ತೋ ವಾಕ್ಯಂ ಚರಿತಬ್ರಹ್ಮಚರ್ಯಃ||

ಅಗ್ನಿಯು ಹೇಳಿದನು: “ನೀನು ಗಂಧರ್ವರಾಜನನ್ನು ದೂತನನ್ನಾಗಿ ಅಲ್ಲಿಗೆ ಕಳುಹಿಸು. ವಾಸವ! ಅಲ್ಲಿಗೆ ಹೋಗಲು ನನಗೆ ಭಯವಾಗುತ್ತಿದೆ. ಬ್ರಹ್ಮಚರ್ಯವನ್ನು ಪಾಲಿಸುತ್ತಿರುವ ಮುನಿ ಸಂವರ್ತನು ಕ್ರುದ್ಧನಾಗಿ ತೀಕ್ಷ್ಣ ರೋಷದಿಂದ ನನಗೆ ಈ ಮಾತುಗಳನ್ನಾಡಿದನು.

14009026a ಯದ್ಯಾಗಚ್ಚೇಃ ಪುನರೇವಂ ಕಥಂ ಚಿದ್

ಬೃಹಸ್ಪತಿಂ ಪರಿದಾತುಂ ಮರುತ್ತೇ|

14009026c ದಹೇಯಂ ತ್ವಾಂ ಚಕ್ಷುಷಾ ದಾರುಣೇನ

ಸಂಕ್ರುದ್ಧ ಇತ್ಯೇತದವೈಹಿ ಶಕ್ರ||

“ಮರುತ್ತನಿಗೆ ಬೃಹಸ್ಪತಿಯನ್ನು ಒಪ್ಪಿಸಲು ನೀನು ಪುನಃ ಯಾವಾಗಲಾದರೂ ಬಂದರೆ ಸಂಕ್ರುದ್ಧನಾದ ದಾರುಣ ದೃಷ್ಟಿಯಿಂದ ನಿನ್ನನ್ನು ಸುಟ್ಟುಬಿಡುತ್ತೇನೆ!” ಎಂದು ನನಗೆ ಹೇಳಿದನು ಶಕ್ರ!”

14009027 ಇಂದ್ರ ಉವಾಚ

14009027a ತ್ವಮೇವಾನ್ಯಾನ್ದಹಸೇ ಜಾತವೇದೋ

ನ ಹಿ ತ್ವದನ್ಯೋ ವಿದ್ಯತೇ ಭಸ್ಮಕರ್ತಾ|

14009027c ತ್ವತ್ಸಂಸ್ಪರ್ಶಾತ್ಸರ್ವಲೋಕೋ ಬಿಭೇತ್ಯ್

ಅಶ್ರದ್ಧೇಯಂ ವದಸೇ ಹವ್ಯವಾಹ||

ಇಂದ್ರನು ಹೇಳಿದನು: “ಜಾತವೇದ! ನೀನೇ ಅನ್ಯರನ್ನು ದಹಿಸುತ್ತೀಯೇ ಹೊರತು ಅನ್ಯರು ನಿನ್ನನ್ನು ಭಸ್ಮಮಾಡುವುದು ತಿಳಿದಿಲ್ಲ. ಹವ್ಯವಾಹ! ನಿನ್ನ ಸ್ಪರ್ಷಮಾತ್ರಕ್ಕೇ ಸರ್ವಲೋಕಗಳೂ ಬೆದರುತ್ತವೆ. ನೀನು ನಂಬಿಕೆಗೆ ಬಾರದ ಮಾತನ್ನು ಆಡುತ್ತಿರುವೆ!”

14009028 ಅಗ್ನಿರುವಾಚ

14009028a ದಿವಂ ದೇವೇಂದ್ರ ಪೃಥಿವೀಂ ಚೈವ ಸರ್ವಾಂ

ಸಂವೇಷ್ಟಯೇಸ್ತ್ವಂ ಸ್ವಬಲೇನೈವ ಶಕ್ರ|

14009028c ಏವಂವಿಧಸ್ಯೇಹ ಸತಸ್ತವಾಸೌ

ಕಥಂ ವೃತ್ರಸ್ತ್ರಿದಿವಂ ಪ್ರಾಗ್ ಜಹಾರ||

ಅಗ್ನಿಯು ಹೇಳಿದನು: “ದೇವೇಂದ್ರ! ಶಕ್ರ! ನೀನು ನಿನ್ನದೇ ಬಲದಿಂದ ಪೃಥ್ವಿ ಮತ್ತು ಎಲ್ಲವನ್ನೂ ಸುತ್ತಿಕೊಂಡಿರುವೆ. ಈ ರೀತಿ ಸತ್ತ್ವಯುತನಾಗಿದ್ದರೂ ಹಿಂದೆ ಹೇಗೆ ವೃತ್ರನು ಸ್ವರ್ಗವನ್ನು ಕಸಿದುಕೊಂಡನು?”

14009029 ಇಂದ್ರ ಉವಾಚ

14009029a ನ ಚಂಡಿಕಾ ಜಂಗಮಾ ನೋ ಕರೇಣುರ್

ನ ವಾರಿಸೋಮಂ ಪ್ರಪಿಬಾಮಿ ವಹ್ನೇ|

14009029c ನ ದುರ್ಬಲೇ ವೈ ವಿಸೃಜಾಮಿ ವಜ್ರಂ

ಕೋ ಮೇಽಸುಖಾಯ ಪ್ರಹರೇನ್ಮನುಷ್ಯಃ||

ಇಂದ್ರನು ಹೇಳಿದನು: “ವಹ್ನೇ! ನಾನು ಜಂಗಮಗಳನ್ನು ಚಂಡಿಕೆಯನ್ನಾಗಿ ಮಾಡಿಯೇನು ಆದರೆ ಶತ್ರುವು ಕೊಡುವ ಸೋಮವನ್ನು ಕುಡಿಯುವುದಿಲ್ಲ! ದುರ್ಬಲನ ಮೇಲೆ ವಜ್ರವನ್ನು ಪ್ರಯೋಗಿಸುವುದಿಲ್ಲ. ಯಾವ ಮನುಷ್ಯನು ತಾನೇ ನನ್ನ ಅಸುಖವನ್ನು ಬಯಸಿ ಪ್ರಹರಿಸಿಯಾನು?

14009030a ಪ್ರವ್ರಾಜಯೇಯಂ ಕಾಲಕೇಯಾನ್ಪೃಥಿವ್ಯಾಮ್

ಅಪಾಕರ್ಷಂ ದಾನವಾನಂತರಿಕ್ಷಾತ್|

14009030c ದಿವಃ ಪ್ರಹ್ರಾದಮವಸಾನಮಾನಯಂ

ಕೋ ಮೇಽಸುಖಾಯ ಪ್ರಹರೇತ ಮರ್ತ್ಯಃ||

ಆಕಾಶದಿಂದ ಕಾಲಕೇಯ ದಾನವರನ್ನು ಎಳೆದು ಭೂಮಿಯ ಮೇಲೆ ಬೀಳಿಸಿದೆನು. ಪ್ರಹ್ರಾದನಿಗೆ ಸ್ವರ್ಗದ ಮೇಲಿನ ಅಧಿಕಾರವನ್ನು ಕೊನೆಗೊಳಿಸಿದೆನು. ಮರ್ತ್ಯನಾದ ಯಾರುತಾನೇ ನನಗೆ ಅಸುಖವಾಗಲೆಂದು ಪ್ರಹರಿಸುತ್ತಾನೆ?”

14009031 ಅಗ್ನಿರುವಾಚ

14009031a ಯತ್ರ ಶರ್ಯಾತಿಂ ಚ್ಯವನೋ ಯಾಜಯಿಷ್ಯನ್

ಸಹಾಶ್ವಿಭ್ಯಾಂ ಸೋಮಮಗೃಹ್ಣದೇಕಃ|

14009031c ತಂ ತ್ವಂ ಕ್ರುದ್ಧಃ ಪ್ರತ್ಯಷೇಧೀಃ ಪುರಸ್ತಾಚ್

ಚರ್ಯಾತಿಯಜ್ಞಂ ಸ್ಮರ ತಂ ಮಹೇಂದ್ರ||

ಅಗ್ನಿಯು ಹೇಳಿದನು: “ಮಹೇಂದ್ರ! ಶರ್ಯಾತಿಯ ಯಜ್ಞವನ್ನು ಜ್ಞಾಪಿಸಿಕೋ! ಚ್ಯವನನು ಮಾಡಿಸುತ್ತಿದ್ದ ಆ ಯಜ್ಞದಲ್ಲಿ ನೀನು ಮೊದಲು ಅಶ್ವಿನಿಯರಿಗೆ ಸೋಮವನ್ನು ಕೊಡಕೂಡದೆಂದು ವಿರೋಧಿಸಿದೆ. ಆದರೆ ಕ್ರುದ್ಧನಾದ ಅವನು ನಿನ್ನನ್ನು ಎದುರಿಸಿಯೇ ವಿರೋಧಿಸಿದನು.

14009032a ವಜ್ರಂ ಗೃಹೀತ್ವಾ ಚ ಪುರಂದರ ತ್ವಂ

ಸಂಪ್ರಾಹಾರ್ಷೀಶ್ಚ್ಯವನಸ್ಯಾತಿಘೋರಮ್|

14009032c ಸ ತೇ ವಿಪ್ರಃ ಸಹ ವಜ್ರೇಣ ಬಾಹುಮ್

ಅಪಾಗೃಹ್ಣಾತ್ತಪಸಾ ಜಾತಮನ್ಯುಃ||

ಪುರಂದರ! ಅತಿಘೋರ ವಜ್ರವನ್ನು ತೆಗೆದುಕೊಂಡು ನೀನು ಆ ಋಷಿ ಚ್ಯವನನ ಮೇಲೆ ಎಸೆಯಲು ತಪಸ್ಸಿನಿಂದ ಹುಟ್ಟಿದ ಕೋಪದಿಂದ ಆ ವಿಪ್ರನು ವಜ್ರದೊಂದಿಗೆ ನಿನ್ನ ಬಾಹುವನ್ನೂ ಹಿಡಿದು ಸ್ತಂಭಿಸಿಬಿಟ್ಟಿದ್ದನು!

14009033a ತತೋ ರೋಷಾತ್ಸರ್ವತೋ ಘೋರರೂಪಂ

ಸಪತ್ನಂ ತೇ ಜನಯಾಮಾಸ ಭೂಯಃ|

14009033c ಮದಂ ನಾಮಾಸುರಂ ವಿಶ್ವರೂಪಂ

ಯಂ ತ್ವಂ ದೃಷ್ಟ್ವಾ ಚಕ್ಷುಷೀ ಸಂನ್ಯಮೀಲಃ||

ಆಗ ರೋಷದಿಂದ ಅವನನ್ನು ಎಲ್ಲಕಡೆಯೂ ಘೋರನಾಗಿ ಕಾಣುತ್ತಿದ್ದ ನಿನ್ನ ಪ್ರತಿಸ್ಪರ್ಧಿ ದಾನವನನ್ನು ಸೃಷ್ಟಿಸಿದನು. ಮದ ಎಂಬ ಹೆಸರಿನ ಆ ವಿಶ್ವರೂಪನನ್ನು ನೋಡಿ ನೀನು ನಿನ್ನ ಕಣ್ಣುಗಳನ್ನೇ ಮುಚ್ಚಿಕೊಂಡೆ!

14009034a ಹನುರೇಕಾ ಜಗತೀಸ್ಥಾ ತಥೈಕಾ

ದಿವಂ ಗತಾ ಮಹತೋ ದಾನವಸ್ಯ|

14009034c ಸಹಸ್ರಂ ದಂತಾನಾಂ ಶತಯೋಜನಾನಾಂ      

ಸುತೀಕ್ಷ್ಣಾನಾಂ ಘೋರರೂಪಂ ಬಭೂವ||

ಆ ಮಹಾದಾನವನ ಒಂದು ದವಡೆಯು ಭೂಮಿಯಲ್ಲಿದ್ದಿತು ಮತ್ತು ಇನ್ನೊಂದು ಸ್ವರ್ಗದಲ್ಲಿತ್ತು. ನೂರು ಯೋಜನೆಗಳ ಅತಿ ತೀಕ್ಷ್ಣ ಸಹಸ್ರ ದಂತಗಳಿದ್ದ ಅವನು ಘೋರರೂಪನಾಗಿದ್ದನು.

14009035a ವೃತ್ತಾಃ ಸ್ಥೂಲಾ ರಜತಸ್ತಂಭವರ್ಣಾ

ದಂಷ್ಟ್ರಾಶ್ಚತಸ್ರೋ ದ್ವೇ ಶತೇ ಯೋಜನಾನಾಮ್|

14009035c ಸ ತ್ವಾಂ ದಂತಾನ್ವಿದಶನ್ನಭ್ಯಧಾವಜ್

ಜಿಘಾಂಸಯಾ ಶೂಲಮುದ್ಯಮ್ಯ ಘೋರಮ್||

ಅವನ ನಾಲ್ಕು ಕೋರೆದಾಡೆಗಳು ದುಂಡಾಗಿ ಬೆಳ್ಳಿಯ ದೊಡ್ಡ ದೊಡ್ಡ ಕಂಬಗಳಂತಿದ್ದವು. ಅವು ಎರಡು ಯೋಜನ ಉದ್ದವಾಗಿದ್ದವು. ಅವನು ಹಲ್ಲುಕಡಿಯುತ್ತಾ ನಿನ್ನನ್ನು ಕೊಲ್ಲುವ ಸಲುವಾಗಿ ಘೋರ ಶೂಲವನ್ನು ಎತ್ತಿಹಿಡಿದು ಓಡಿಬಂದನು.

14009036a ಅಪಶ್ಯಸ್ತ್ವಂ ತಂ ತದಾ ಘೋರರೂಪಂ

ಸರ್ವೇ ತ್ವನ್ಯೇ ದದೃಶುರ್ದರ್ಶನೀಯಮ್|

14009036c ಯಸ್ಮಾದ್ಭೀತಃ ಪ್ರಾಂಜಲಿಸ್ತ್ವಂ ಮಹರ್ಷಿಮ್

ಆಗಚ್ಚೇಥಾಃ ಶರಣಂ ದಾನವಘ್ನ||

ದಾನವಘ್ನ! ಆಗ ಆ ಘೋರರೂಪವನ್ನು ನೋಡಿದ ದರ್ಶನೀಯನಾದ ನೀನು ಭೀತನಾಗಿ ಕೈಮುಗಿದು ಮಹರ್ಷಿ ಚ್ಯವನನ ಶರಣು ಹೊಕ್ಕಿದುದನ್ನು ಅನ್ಯ ಎಲ್ಲರೂ ನೋಡಿದರು.

14009037a ಕ್ಷತ್ರಾದೇವಂ ಬ್ರಹ್ಮಬಲಂ ಗರೀಯೋ

ನ ಬ್ರಹ್ಮತಃ ಕಿಂ ಚಿದನ್ಯದ್ಗರೀಯಃ|

14009037c ಸೋಽಹಂ ಜಾನನ್ಬ್ರಹ್ಮತೇಜೋ ಯಥಾವನ್

ನ ಸಂವರ್ತಂ ಗಂತುಮಿಚ್ಚಾಮಿ ಶಕ್ರ||

ಕ್ಷಾತ್ರಬಲಕ್ಕಿಂತಲೂ ಬ್ರಹ್ಮಬಲವೇ ದೊಡ್ಡದು. ಬ್ರಾಹ್ಮಣನಿಗೆ ಹೊರತಾಗಿ ಬೇರೆ ಯಾವುದೂ ದೊಡ್ಡದಿಲ್ಲ. ಶಕ್ರ! ಬ್ರಹ್ಮತೇಜಸ್ಸು ಏನೆಂದು ತಿಳಿದುಕೊಂಡ ನಾನು ಸಂವರ್ತನಲ್ಲಿಗೆ ಹೋಗಲು ಬಯಸುವುದಿಲ್ಲ!”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ನವಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಒಂಭತ್ತನೇ ಅಧ್ಯಾಯವು.

Comments are closed.