ಅಶ್ವಮೇಧಿಕ ಪರ್ವ
೮೫
ಶಕುನಿಯ ಮಗನು ಅರ್ಜುನನೊಂದಿಗೆ ಯುದ್ಧಮಾಡಿದುದು (೧-೧೮). ಸೇನೆಯು ಪರಾಜಯಗೊಳ್ಳಲು ಶಕುನಿಯ ಪತ್ನಿಯು ಶರಣಾಗತಳಾಗಿ ಬಂದುದು (೧೯-೨೩).
14085001 ವೈಶಂಪಾಯನ ಉವಾಚ
14085001a ಶಕುನೇಸ್ತು ಸುತೋ ವೀರೋ ಗಾಂಧಾರಾಣಾಂ ಮಹಾರಥಃ|
14085001c ಪ್ರತ್ಯುದ್ಯಯೌ ಗುಡಾಕೇಶಂ ಸೈನ್ಯೇನ ಮಹತಾ ವೃತಃ|
14085001e ಹಸ್ತ್ಯಶ್ವರಥಪೂರ್ಣೇನ ಪತಾಕಾಧ್ವಜಮಾಲಿನಾ||
ವೈಶಂಪಾಯನನು ಹೇಳಿದನು: “ಶಕುನಿಯ ಮಗ, ಗಾಂಧಾರರ ವೀರ ಮಹಾರಥನು ಪತಾಕ-ಧ್ವಜ-ಮಾಲೆಗಳಿಂದ ಅಲಂಕೃತಗೊಂಡ ಆನೆ-ಕುದುರೆ-ರಥಗಳಿಂದ ಪರಿಪೂರ್ಣವಾದ ಮಹಾ ಸೇನೆಯೊಂದಿಗೆ ಗುಡಾಕೇಶ ಅರ್ಜುನನೊಡನೆ ಯುದ್ಧಕ್ಕೆ ಹೊರಟನು.
14085002a ಅಮೃಷ್ಯಮಾಣಾಸ್ತೇ ಯೋಧಾ ನೃಪತೇಃ ಶಕುನೇರ್ವಧಮ್|
14085002c ಅಭ್ಯಯುಃ ಸಹಿತಾಃ ಪಾರ್ಥಂ ಪ್ರಗೃಹೀತಶರಾಸನಾಃ||
ನೃಪತಿ ಶಕುನಿಯ ವಧೆಯನ್ನು ಸಹಿಸಿಕೊಳ್ಳಲಾರದೇ ಆ ಯೋಧರು ಧನುಸ್ಸುಗಳನ್ನು ಹಿಡಿದುಕೊಂಡು ಒಂದಾಗಿ ಪಾರ್ಥನನ್ನು ಆಕ್ರಮಣಿಸಿದರು.
14085003a ತಾನುವಾಚ ಸ ಧರ್ಮಾತ್ಮಾ ಬೀಭತ್ಸುರಪರಾಜಿತಃ|
14085003c ಯುಧಿಷ್ಠಿರಸ್ಯ ವಚನಂ ನ ಚ ತೇ ಜಗೃಹುರ್ಹಿತಮ್||
ಧರ್ಮಾತ್ಮ ಅಪರಾಜಿತ ಬೀಭತ್ಸುವು ಅವರಿಗೆ ಯುಧಿಷ್ಠಿರನ ಸಂದೇಶವನ್ನು ತಿಳಿಸಿದನು. ಆದರೆ ಅದನ್ನು ಅವರು ಸ್ವೀಕರಿಸಲಿಲ್ಲ.
14085004a ವಾರ್ಯಮಾಣಾಸ್ತು ಪಾರ್ಥೇನ ಸಾಂತ್ವಪೂರ್ವಮಮರ್ಷಿತಾಃ|
14085004c ಪರಿವಾರ್ಯ ಹಯಂ ಜಗ್ಮುಸ್ತತಶ್ಚುಕ್ರೋಧ ಪಾಂಡವಃ||
ಪಾರ್ಥನು ಸಾಂತ್ವಪೂರ್ವಕವಾಗಿ ಅವರನ್ನು ತಡೆದರೂ ಕುಪಿತರಾದ ಅವರು ಕುದುರೆಯನ್ನು ಸುತ್ತುವರೆದರು. ಆಗ ಪಾಂಡವನು ಅತ್ಯಂತ ಕ್ರೋಧಿತನಾದನು.
14085005a ತತಃ ಶಿರಾಂಸಿ ದೀಪ್ತಾಗ್ರೈಸ್ತೇಷಾಂ ಚಿಚ್ಚೇದ ಪಾಂಡವಃ|
14085005c ಕ್ಷುರೈರ್ಗಾಂಡೀವನಿರ್ಮುಕ್ತೈರ್ನಾತಿಯತ್ನಾದಿವಾರ್ಜುನಃ||
ಪಾಂಡವ ಅರ್ಜುನನು ಹೆಚ್ಚಿನ ಪ್ರಯತ್ನಪಡದೇ ಗಾಂಡೀವದಿಂದ ಪ್ರಯೋಗಿಸಲ್ಪಟ್ಟ ಉರಿಯುತ್ತಿರುವ ಕ್ಷುರಗಳಿಂದ ಅವರ ಶಿರಗಳನ್ನು ಕತ್ತರಿಸಿದನು.
14085006a ತೇ ವಧ್ಯಮಾನಾಃ ಪಾರ್ಥೇನ ಹಯಮುತ್ಸೃಜ್ಯ ಸಂಭ್ರಮಾತ್|
14085006c ನ್ಯವರ್ತಂತ ಮಹಾರಾಜ ಶರವರ್ಷಾರ್ದಿತಾ ಭೃಶಮ್||
ಪಾರ್ಥನಿಂದ ವಧಿಸಲ್ಪಡುತ್ತಿದ್ದ ಅವರು ಶರಗಳಿಂದ ಅತ್ಯಂತ ಗಾಯಗೊಂಡು ಗಾಬರಿಯಿಂದ ಕುದುರೆಯನ್ನು ಅಲ್ಲಿಯೇ ಬಿಟ್ಟು ಪಲಾಯನಗೈದರು.
14085007a ವಿತುದ್ಯಮಾನಸ್ತೈಶ್ಚಾಪಿ ಗಾಂಧಾರೈಃ ಪಾಂಡವರ್ಷಭಃ|
14085007c ಆದಿಶ್ಯಾದಿಶ್ಯ ತೇಜಸ್ವೀ ಶಿರಾಂಸ್ಯೇಷಾಂ ನ್ಯಪಾತಯತ್||
ಗಾಂಧಾರರು ಪ್ರಹರಿಸುತ್ತಿದ್ದರೂ ಪಾಂಡವರ್ಷಭ ತೇಜಸ್ವೀ ಅರ್ಜುನನು ಅವರನ್ನು ಕರೆ ಕರೆದು ಶಿರಗಳನ್ನು ಕೆರಗುರುಳಿಸಿದನು.
14085008a ವಧ್ಯಮಾನೇಷು ತೇಷ್ವಾಜೌ ಗಾಂಧಾರೇಷು ಸಮಂತತಃ|
14085008c ಸ ರಾಜಾ ಶಕುನೇಃ ಪುತ್ರಃ ಪಾಂಡವಂ ಪ್ರತ್ಯವಾರಯತ್||
ಹೀಗೆ ಎಲ್ಲ ಕಡೆಗಳಲ್ಲಿ ಗಾಂಧಾರರು ವಧಿಸಲ್ಪಡುತ್ತಿರಲು ಶುಕುನಿಯ ಮಗ ರಾಜನು ಪಾಂಡವನನ್ನು ಆಕ್ರಮಣಿಸಿದನು.
14085009a ತಂ ಯುಧ್ಯಮಾನಂ ರಾಜಾನಂ ಕ್ಷತ್ರಧರ್ಮೇ ವ್ಯವಸ್ಥಿತಮ್|
14085009c ಪಾರ್ಥೋಽಬ್ರವೀನ್ನ ಮೇ ವಧ್ಯಾ ರಾಜಾನೋ ರಾಜಶಾಸನಾತ್|
14085009e ಅಲಂ ಯುದ್ಧೇನ ತೇ ವೀರ ನ ತೇಽಸ್ತ್ಯದ್ಯ ಪರಾಜಯಃ||
ಕ್ಷತ್ರಧರ್ಮದಲ್ಲಿ ನಿರತನಾಗಿದ್ದು ಯುದ್ಧಮಾಡುತ್ತಿದ್ದ ರಾಜನಿಗೆ ಪಾರ್ಥನು ಹೇಳಿದನು: “ರಾಜಶಾಸನದಂತೆ ನಾನು ರಾಜರನ್ನು ವಧಿಸುವುದಿಲ್ಲ! ವೀರ! ನಿನ್ನ ಯುದ್ಧವನ್ನು ನಿಲ್ಲಿಸು! ಇಂದು ನೀನು ಪರಾಜಯಗೊಳ್ಳುವೆ!”
14085010a ಇತ್ಯುಕ್ತಸ್ತದನಾದೃತ್ಯ ವಾಕ್ಯಮಜ್ಞಾನಮೋಹಿತಃ|
14085010c ಸ ಶಕ್ರಸಮಕರ್ಮಾಣಮವಾಕಿರತ ಸಾಯಕೈಃ||
ಅಜ್ಞಾನದಿಂದ ಮೋಹಿತನಾಗಿದ್ದ ಶಕುನಿಯ ಮಗನು ಈ ಮಾತನ್ನು ಅನಾದರಿಸಿ, ಕರ್ಮಗಳಲ್ಲಿ ಶಕ್ರನ ಸಮನಾದ ಅರ್ಜುನನನ್ನು ಸಾಯಕಗಳಿಂದ ಮುಸುಕಿದನು.
14085011a ತಸ್ಯ ಪಾರ್ಥಃ ಶಿರಸ್ತ್ರಾಣಮರ್ಧಚಂದ್ರೇಣ ಪತ್ರಿಣಾ|
14085011c ಅಪಾಹರದಸಂಭ್ರಾಂತೋ ಜಯದ್ರಥಶಿರೋ ಯಥಾ||
ಗಾಭರಿಗೊಳ್ಳದೇ ಪಾರ್ಥನು ಅರ್ಧಚಂದ್ರದ ಪತ್ರಿಯಿಂದ ಜಯದ್ರಥನ ಶಿರವನ್ನು ಹೇಗೋ ಹಾಗೆ ಅವನ ಶಿರಸ್ತ್ರಾಣವನ್ನು ಅಪಹರಿಸಿದನು.
14085012a ತದ್ದೃಷ್ಟ್ವಾ ವಿಸ್ಮಯಂ ಜಗ್ಮುರ್ಗಾಂಧಾರಾಃ ಸರ್ವ ಏವ ತೇ|
14085012c ಇಚ್ಚತಾ ತೇನ ನ ಹತೋ ರಾಜೇತ್ಯಪಿ ಚ ತೇ ವಿದುಃ||
ಅದನ್ನು ನೋಡಿ ಗಾಂಧಾರರು ಎಲ್ಲರೂ ವಿಸ್ಮಯಗೊಂಡರು. ಉದ್ದೇಶಪೂರ್ವಕವಾಗಿಯೇ ಅವನು ರಾಜನನ್ನು ಕೊಲ್ಲಲಿಲ್ಲವೆಂದು ಅರ್ಥಮಾಡಿಕೊಂಡರು.
14085013a ಗಾಂಧಾರರಾಜಪುತ್ರಸ್ತು ಪಲಾಯನಕೃತಕ್ಷಣಃ|
14085013c ಬಭೌ ತೈರೇವ ಸಹಿತಸ್ತ್ರಸ್ತೈಃ ಕ್ಷುದ್ರಮೃಗೈರಿವ||
ಗಾಂಧಾರರಾಜನ ಪುತ್ರನಾದರೋ ಅವಕಾಶವನ್ನು ಹುಡುಕುತ್ತಿದ್ದನು. ಸಿಂಹವನ್ನು ಕಂಡು ಬೆದರಿದ ಕ್ಷುದ್ರ ಮೃಗಗಳಂತೆ ಅನೇಕರು ಪಲಾಯನಗೈಯುತ್ತಿದ್ದರು.
14085014a ತೇಷಾಂ ತು ತರಸಾ ಪಾರ್ಥಸ್ತತ್ರೈವ ಪರಿಧಾವತಾಮ್|
14085014c ವಿಜಹಾರೋತ್ತಮಾಂಗಾನಿ ಭಲ್ಲೈಃ ಸಂನತಪರ್ವಭಿಃ||
ಕೂಡಲೇ ಪಾರ್ಥನು ಸನ್ನತಪರ್ವ ಭಲ್ಲಗಳಿಂದ ಓಡಿಹೋಗುತ್ತಿದ್ದವರ ಶಿರಸ್ಸುಗಳನ್ನು ಕತ್ತರಿಸತೊಡಗಿದನು.
14085015a ಉಚ್ಚ್ರಿತಾಂಸ್ತು ಭುಜಾನ್ಕೇ ಚಿನ್ನಾಬುಧ್ಯಂತ ಶರೈರ್ಹೃತಾನ್|
14085015c ಶರೈರ್ಗಾಂಡೀವನಿರ್ಮುಕ್ತೈಃ ಪೃಥುಭಿಃ ಪಾರ್ಥಚೋದಿತೈಃ||
ಪಾರ್ಥನು ಗಾಂಡೀವದಿಂದ ಪ್ರಯೋಗಿಸಿದ ಶರಗಳಿಂದ ಭುಜಗಳು ತುಂಡಾಗಿದ್ದುದೂ ಅವರಿಗೆ ಸ್ವಲ್ಪ ಸಮಯ ತಿಳಿಯುತ್ತಲೇ ಇರಲಿಲ್ಲ.
14085016a ಸಂಭ್ರಾಂತನರನಾಗಾಶ್ವಮಥ ತದ್ವಿದ್ರುತಂ ಬಲಮ್|
14085016c ಹತವಿಧ್ವಸ್ತಭೂಯಿಷ್ಠಮಾವರ್ತತ ಮುಹುರ್ಮುಹುಃ||
ಭ್ರಾಂತಿಗೊಂಡ ಪದಾತಿಗಳು, ಆನೆಗಳು ಮತ್ತು ಕುದುರೆಗಳ ಆ ಬಲವು ಪಲಾಯನಮಾಡುತ್ತಿತ್ತು ಮತ್ತು ಹತವಾಗದೇ ಉಳಿದವರು ಪುನಃ ಪುನಃ ಸಂಘಟಿತರಾಗಿ ಹಿಂದಿರುಗಿ ಆಕ್ರಮಣಿಸುತ್ತಿದ್ದರು.
14085017a ನ ಹ್ಯದೃಶ್ಯಂತ ವೀರಸ್ಯ ಕೇ ಚಿದಗ್ರೇಽಗ್ರ್ಯಕರ್ಮಣಃ|
14085017c ರಿಪವಃ ಪಾತ್ಯಮಾನಾ ವೈ ಯೇ ಸಹೇಯುರ್ಮಹಾಶರಾನ್||
ಆದರೆ ಮಹಾಶರಗಳಿಂದ ಶತ್ರುಗಳು ಕೆಳಗುರುಳುತ್ತಿದ್ದುದರಿಂದ ಆ ಅಗ್ರ್ಯಕರ್ಮಿ ವೀರ ಅರ್ಜುನನ ಮುಂದೆ ಅವರ್ಯಾರೂ ಹೆಚ್ಚುಹೊತ್ತು ಕಾಣಿಸಿಕೊಳ್ಳಲಿಲ್ಲ.
14085018a ತತೋ ಗಾಂಧಾರರಾಜಸ್ಯ ಮಂತ್ರಿವೃದ್ಧಪುರಃಸರಾ|
14085018c ಜನನೀ ನಿರ್ಯಯೌ ಭೀತಾ ಪುರಸ್ಕೃತ್ಯಾರ್ಘ್ಯಮುತ್ತಮಮ್||
ಆಗ ಗಾಂಧಾರರಾಜನ ಜನನಿಯು ಭೀತಳಾಗಿ ಮಂತ್ರಿಗಳನ್ನೂ ವೃದ್ಧರನ್ನೂ ಮುಂದಿಟ್ಟುಕೊಂಡು, ಉತ್ತಮ ಅರ್ಘ್ಯವನ್ನು ತೆಗೆದುಕೊಂಡು ನಗರಿಂದ ಹೊರಬಂದಳು.
14085019a ಸಾ ನ್ಯವಾರಯದವ್ಯಗ್ರಾ ತಂ ಪುತ್ರಂ ಯುದ್ಧದುರ್ಮದಮ್|
14085019c ಪ್ರಸಾದಯಾಮಾಸ ಚ ತಂ ಜಿಷ್ಣುಮಕ್ಲಿಷ್ಟಕಾರಿಣಮ್||
ಅವ್ಯಗ್ರಳಾಗಿದ್ದ ಅವಳು ಯುದ್ಧದುರ್ಮದ ಮಗನನ್ನು ತಡೆದಳು ಮತ್ತು ಅಕ್ಲಿಷ್ಟಕಾರಿ ಜಿಷ್ಣುವನ್ನು ಪ್ರಸನ್ನಗೊಳಿಸಿದಳು.
14085020a ತಾಂ ಪೂಜಯಿತ್ವಾ ಕೌಂತೇಯಃ ಪ್ರಸಾದಮಕರೋತ್ತದಾ|
14085020c ಶಕುನೇಶ್ಚಾಪಿ ತನಯಂ ಸಾಂತ್ವಯನ್ನಿದಮಬ್ರವೀತ್||
ಅವಳನ್ನು ಗೌರವಿಸಿ ಕೌಂತೇಯನು ಪ್ರಸನ್ನನಾದನು ಮತ್ತು ಶಕುನಿಯ ಮಗನನ್ನು ಸಂತೈಸುತ್ತಾ ಈ ಮಾತನ್ನಾಡಿದನು:
14085021a ನ ಮೇ ಪ್ರಿಯಂ ಮಹಾಬಾಹೋ ಯತ್ತೇ ಬುದ್ಧಿರಿಯಂ ಕೃತಾ|
14085021c ಪ್ರತಿಯೋದ್ಧುಮಮಿತ್ರಘ್ನ ಭ್ರಾತೈವ ತ್ವಂ ಮಮಾನಘ||
“ಮಹಾಬಾಹೋ! ಅಮಿತ್ರಘ್ನ! ಅನಘ! ನನ್ನೊಡನೆ ಯುದ್ಧಮಾಡಬೇಕೆಂಬ ನಿನ್ನ ಈ ಬುದ್ಧಿಯು ನನಗೆ ಹಿಡಿಸಲಿಲ್ಲ. ಏಕೆಂದರೆ ನೀನು ನನ್ನ ಸೋದರನೇ ಆಗಿರುವೆ!
14085022a ಗಾಂಧಾರೀಂ ಮಾತರಂ ಸ್ಮೃತ್ವಾ ಧೃತರಾಷ್ಟ್ರಕೃತೇನ ಚ|
14085022c ತೇನ ಜೀವಸಿ ರಾಜಂಸ್ತ್ವಂ ನಿಹತಾಸ್ತ್ವನುಗಾಸ್ತವ||
ರಾಜನ್! ಮಾತೆ ಗಾಂಧಾರಿಯನ್ನು ಸ್ಮರಿಸಿಕೊಂಡು ಮತ್ತು ಧೃತರಾಷ್ಟ್ರನ ಸಲುವಾಗಿ ನಿನ್ನ ಅನುಯಾಯಿಗಳನ್ನು ಸಂಹರಿಸಿದರೂ ನಿನ್ನನ್ನು ಜೀವದಿಂದ ಉಳಿಸಿದ್ದೇನೆ.
14085023a ಮೈವಂ ಭೂಃ ಶಾಮ್ಯತಾಂ ವೈರಂ ಮಾ ತೇ ಭೂದ್ಬುದ್ಧಿರೀದೃಶೀ|
14085023c ಆಗಂತವ್ಯಂ ಪರಾಂ ಚೈತ್ರೀಮಶ್ವಮೇಧೇ ನೃಪಸ್ಯ ನಃ||
ಇನ್ನು ಮುಂದೆ ಹೀಗೆ ನಡೆದುಕೊಳ್ಳಬೇಡ! ವೈರವು ಇಲ್ಲಿಗೇ ಉಪಶಮನಗೊಳ್ಳಲಿ! ಬರುವ ಚೈತ್ರದಲ್ಲಾಗುವ ನೃಪನ ಅಶ್ವಮೇಧಕ್ಕೆ ಬರಬೇಕು.””
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ಶಕುನಿಪುತ್ರಪರಾಜಯೇ ಪಂಚಾಶೀತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣೇ ಶಕುನಿಪುತ್ರಪರಾಜಯ ಎನ್ನುವ ಎಂಭತ್ತೈದನೇ ಅಧ್ಯಾಯವು.