ಅಶ್ವಮೇಧಿಕ ಪರ್ವ
೮೪
ಅರ್ಜುನನು ಶಿಶುಪಾಲನ ಮಗ ಶರಭನಿಂದ ಪೂಜಿಸಲ್ಪಟ್ಟು, ಮುಂದುವರೆದು ದಶಾರ್ಣದೇಶದ ಚಿತ್ರಾಂಗದನೊಡನೆ ಯುದ್ಧಮಾಡಿ, ನಿಷಾದರಾಜ್ಯಕ್ಕೆ ಬಂದು ಅಲ್ಲಿ ಏಕಲವ್ಯನ ಮಗನನ್ನು ಪರಾಜಯಗೊಳಿಸಿ, ದ್ವಾರಕೆಗೆ ಬಂದು ಅಲ್ಲಿ ವೃಷ್ಣಿಗಳಿಂದ ಗೌರವಿಸಲ್ಪಟ್ಟು, ಗಾಂಧಾರದೇಶಕ್ಕೆ ಬಂದುದು (೧-೧೯).
14084001 ವೈಶಂಪಾಯನ ಉವಾಚ
14084001a ಮಾಗಧೇನಾರ್ಚಿತೋ ರಾಜನ್ಪಾಂಡವಃ ಶ್ವೇತವಾಹನಃ|
14084001c ದಕ್ಷಿಣಾಂ ದಿಶಮಾಸ್ಥಾಯ ಚಾರಯಾಮಾಸ ತಂ ಹಯಮ್||
ವೈಶಂಪಾಯನನು ಹೇಳಿದನು: “ರಾಜನ್! ಶ್ವೇತವಾಹನ ಪಾಂಡವನು ಮಾಗಧನಿಂದ ಪೂಜಿಸಲ್ಪಟ್ಟು ದಕ್ಷಿಣದಿಶೆಯನ್ನು ಹಿಡಿದು ಕುದುರೆಯನ್ನು ಹಿಂಬಾಲಿಸಿ ಹೋದನು.
14084002a ತತಃ ಸ ಪುನರಾವೃತ್ಯ ಹಯಃ ಕಾಮಚರೋ ಬಲೀ|
14084002c ಆಸಸಾದ ಪುರೀಂ ರಮ್ಯಾಂ ಚೇದೀನಾಂ ಶುಕ್ತಿಸಾಹ್ವಯಾಮ್||
ಅನಂತರ ಆ ಬಲಶಾಲೀ ಕಾಮಚರ ಕುದುರೆಯು ಪುನಃ ಹಿಂದಿರುಗಿ ಚೇದಿಯರ ರಮ್ಯ ಪುರಿ ಶುಕ್ತಿಪುರವನ್ನು ತಲುಪಿತು.
14084003a ಶರಭೇಣಾರ್ಚಿತಸ್ತತ್ರ ಶಿಶುಪಾಲಾತ್ಮಜೇನ ಸಃ|
14084003c ಯುದ್ಧಪೂರ್ವೇಣ ಮಾನೇನ ಪೂಜಯಾ ಚ ಮಹಾಬಲಃ||
ಅಲ್ಲಿ ಶಿಶುಪಾಲನ ಮಗ ಮಹಾಬಲ ಶರಭನು ಯುದ್ಧಮಾಡದೇ ಅವನನ್ನು ಗೌರವಿಸಿ ಪೂಜಿಸಿದನು.
14084004a ತತ್ರಾರ್ಚಿತೋ ಯಯೌ ರಾಜಂಸ್ತದಾ ಸ ತುರಗೋತ್ತಮಃ|
14084004c ಕಾಶೀನಂಧ್ರಾನ್ಕೋಸಲಾಂಶ್ಚ ಕಿರಾತಾನಥ ತಂಗಣಾನ್||
ರಾಜನ್! ಅಲ್ಲಿ ಪೂಜಿಸಲ್ಪಟ್ಟು ಆ ಉತ್ತಮ ಕುದುರೆಯು ಕಾಶೀ, ಆಂಧ್ರ, ಕೋಸಲ, ಕಿರಾತ ಮತ್ತು ತಂಗಣ ರಾಷ್ಟ್ರಗಳಲ್ಲಿ ಸಂಚರಿಸಿತು.
14084005a ತತ್ರ ಪೂಜಾಂ ಯಥಾನ್ಯಾಯಂ ಪ್ರತಿಗೃಹ್ಯ ಸ ಪಾಂಡವಃ|
14084005c ಪುನರಾವೃತ್ಯ ಕೌಂತೇಯೋ ದಶಾರ್ಣಾನಗಮತ್ತದಾ||
ಅಲ್ಲಿ ಯಥಾನ್ಯಾಯವಾಗಿ ಸತ್ಕಾರಗಳನ್ನು ಸ್ವೀಕರಿಸಿ ಪಾಂಡವ ಕೌಂತೇಯನು ಪುನಃ ಹಿಂದಿರುಗಿ ದಶಾರ್ಣದೇಶಕ್ಕೆ ಬಂದನು.
14084006a ತತ್ರ ಚಿತ್ರಾಂಗದೋ ನಾಮ ಬಲವಾನ್ವಸುಧಾಧಿಪಃ|
14084006c ತೇನ ಯುದ್ಧಮಭೂತ್ತಸ್ಯ ವಿಜಯಸ್ಯಾತಿಭೈರವಮ್||
ಅಲ್ಲಿ ಚಿತ್ರಾಂಗದ ಎಂಬ ಹೆಸರಿನ ಬಲವಾನ್ ವಸುಧಾಧಿಪನೊಡನೆ ವಿಜಯ ಅರ್ಜುನನ ಅತಿಭೈರವ ಯುದ್ಧವು ನಡೆಯಿತು.
14084007a ತಂ ಚಾಪಿ ವಶಮಾನೀಯ ಕಿರೀಟೀ ಪುರುಷರ್ಷಭಃ|
14084007c ನಿಷಾದರಾಜ್ಞೋ ವಿಷಯಮೇಕಲವ್ಯಸ್ಯ ಜಗ್ಮಿವಾನ್||
ಅವನನ್ನು ಕೂಡ ಪರಾಜಯಗೊಳಿಸಿ ಪುರುಷರ್ಷಭ ಕಿರೀಟಿಯು ನಿಷಾದರಾಜ ಏಕಲವ್ಯನ ರಾಜ್ಯಕ್ಕೆ ಬಂದನು.
14084008a ಏಕಲವ್ಯಸುತಶ್ಚೈನಂ ಯುದ್ಧೇನ ಜಗೃಹೇ ತದಾ|
14084008c ತತಶ್ಚಕ್ರೇ ನಿಷಾದೈಃ ಸ ಸಂಗ್ರಾಮಂ ರೋಮಹರ್ಷಣಮ್||
ಏಕಲವ್ಯನ ಮಗನು ಅವನನ್ನು ಆಗ ಯುದ್ಧದ ಮೂಲಕವೇ ಸ್ವಾಗತಿಸಿದನು. ನಿಷಾದನೊಂದಿಗೆ ಅರ್ಜುನನು ರೋಮಾಂಚಕಾರೀ ಸಂಗ್ರಾಮವನ್ನು ನಡೆಸಿದನು.
14084009a ತತಸ್ತಮಪಿ ಕೌಂತೇಯಃ ಸಮರೇಷ್ವಪರಾಜಿತಃ|
14084009c ಜಿಗಾಯ ಸಮರೇ ವೀರೋ ಯಜ್ಞವಿಘ್ನಾರ್ಥಮುದ್ಯತಮ್||
ಆಗ ಸಮರದಲ್ಲಿ ಸೋಲನ್ನೇ ಹೊಂದದಿದ್ದ ವೀರ ಕೌಂತೇಯನು ಯಜ್ಞಕ್ಕೆ ವಿಘ್ನವನ್ನುಂಟುಮಾಡಲು ತೊಡಗಿದ್ದ ಅವನನ್ನೂ ಕೂಡ ಸಮರದಲ್ಲಿ ಗೆದ್ದನು.
14084010a ಸ ತಂ ಜಿತ್ವಾ ಮಹಾರಾಜ ನೈಷಾದಿಂ ಪಾಕಶಾಸನಿಃ|
14084010c ಅರ್ಚಿತಃ ಪ್ರಯಯೌ ಭೂಯೋ ದಕ್ಷಿಣಂ ಸಲಿಲಾರ್ಣವಮ್||
ಮಹಾರಾಜ! ನೈಷಾದಿಯನ್ನು ಗೆದ್ದು ಅವನಿಂದ ಪೂಜಿಸಲ್ಪಟ್ಟು ಪಾಕಶಾಸನಿಯು ಪುನಃ ದಕ್ಷಿಣಸಮುದ್ರದ ತೀರಪ್ರದೇಶಕ್ಕೆ ಹೋದನು.
14084011a ತತ್ರಾಪಿ ದ್ರವಿಡೈರಂಧ್ರೈ ರೌದ್ರೈರ್ಮಾಹಿಷಕೈರಪಿ|
14084011c ತಥಾ ಕೋಲ್ಲಗಿರೇಯೈಶ್ಚ ಯುದ್ಧಮಾಸೀತ್ಕಿರೀಟಿನಃ||
ಅಲ್ಲಿಯೂ ಕೂಡ ದ್ರವಿಡ, ಅಂಧ್ರ, ರೌದ್ರ, ಮಾಹಿಷಕರು ಮತ್ತು ಕೋಲ್ಲಗಿರಿಯವರೊಂದಿಗೆ ಕಿರೀಟಿಯ ಯುದ್ಧವು ನಡೆಯಿತು.
14084012a ತುರಗಸ್ಯ ವಶೇನಾಥ ಸುರಾಷ್ಟ್ರಾನಭಿತೋ ಯಯೌ|
14084012c ಗೋಕರ್ಣಮಪಿ ಚಾಸಾದ್ಯ ಪ್ರಭಾಸಮಪಿ ಜಗ್ಮಿವಾನ್||
ಕುದುರೆಯ ವಶದಲ್ಲಿಯೇ ಇದ್ದ ಅವನು ಸೌರಾಷ್ಟ್ರದೇಶಕ್ಕೆ ಹೋದನು. ಅಲ್ಲಿಂದ ಗೋಕರ್ಣ ಮತ್ತು ಪ್ರಭಾಸ ಕ್ಷೇತ್ರಗಳಿಗೂ ಹೋದನು.
14084013a ತತೋ ದ್ವಾರವತೀಂ ರಮ್ಯಾಂ ವೃಷ್ಣಿವೀರಾಭಿರಕ್ಷಿತಾಮ್|
14084013c ಆಸಸಾದ ಹಯಃ ಶ್ರೀಮಾನ್ಕುರುರಾಜಸ್ಯ ಯಜ್ಞಿಯಃ||
ಅನಂತರ ಕುರುರಾಜನ ಯಜ್ಞದ ಆ ಶ್ರೀಮಂತ ಕುದುರೆಯು ವೃಷ್ಣಿವೀರರಿಂದ ರಕ್ಷಿತವಾದ ರಮ್ಯ ದ್ವಾರವತಿಯನ್ನು ತಲುಪಿತು.
14084014a ತಮುನ್ಮಥ್ಯ ಹಯಶ್ರೇಷ್ಠಂ ಯಾದವಾನಾಂ ಕುಮಾರಕಾಃ|
14084014c ಪ್ರಯಯುಸ್ತಾಂಸ್ತದಾ ರಾಜನ್ನುಗ್ರಸೇನೋ ನ್ಯವಾರಯತ್||
ರಾಜನ್! ಯಾದವ ಕುಮಾರರು ಆ ಶ್ರೇಷ್ಠ ಕುದುರೆಯನ್ನು ಕಟ್ಟಿಹಾಕಲು ಮುಂದೆಬಂದಾಗ ಉಗ್ರಸೇನನು ಅವರನ್ನು ತಡೆದನು.
14084015a ತತಃ ಪುರ್ಯಾ ವಿನಿಷ್ಕ್ರಮ್ಯ ವೃಷ್ಣ್ಯಂಧಕಪತಿಸ್ತದಾ|
14084015c ಸಹಿತೋ ವಸುದೇವೇನ ಮಾತುಲೇನ ಕಿರೀಟಿನಃ||
ಆಗ ವೃಷ್ಣಿ-ಅಂಧಕರ ರಾಜನು, ಕಿರೀಟಿಯ ಸೋದರ ಮಾವ ವಸುದೇವನೊಂದಿಗೆ ಪುರದಿಂದ ಹೊರಬಂದನು.
14084016a ತೌ ಸಮೇತ್ಯ ಕುರುಶ್ರೇಷ್ಠಂ ವಿಧಿವತ್ಪ್ರೀತಿಪೂರ್ವಕಮ್|
14084016c ಪರಯಾ ಭರತಶ್ರೇಷ್ಠಂ ಪೂಜಯಾ ಸಮವಸ್ಥಿತೌ||
14084016E ತತಸ್ತಾಭ್ಯಾಮನುಜ್ಞಾತೋ ಯಯೌ ಯೇನ ಹಯೋ ಗತಃ||
ಅವರಿಬ್ಬರೂ ಒಂದಾಗಿ ಕುರುಶ್ರೇಷ್ಠ ಭರತಶ್ರೇಷ್ಠನನ್ನು ವಿಧಿವತ್ತಾಗಿ ಪರಮ ಪ್ರೀತಿಪೂರ್ವಕವಾಗಿ ಸತ್ಕರಿಸಿದರು. ಅನಂತರ ಅವರಿಬ್ಬರಿಂದ ಅನುಮತಿಯನ್ನು ಪಡೆದು ಅರ್ಜುನನು ಕುದುರೆಯು ಎಲ್ಲಿಗೆ ಹೋಗುತ್ತಿತ್ತೋ ಅಲ್ಲಿಗೆ ಹೋದನು.
14084017a ತತಃ ಸ ಪಶ್ಚಿಮಂ ದೇಶಂ ಸಮುದ್ರಸ್ಯ ತದಾ ಹಯಃ|
14084017c ಕ್ರಮೇಣ ವ್ಯಚರತ್ ಸ್ಫೀತಂ ತತಃ ಪಂಚನದಂ ಯಯೌ||
ಬಳಿಕ ಆ ಕುದುರೆಯು ಸಮುದ್ರದ ಪಶ್ಚಿಮ ತೀರದ ದೇಶದಲ್ಲಿ ಸಂಚರಿಸಿ, ಕ್ರಮೇಣವಾಗಿ ಪಂಚನದ ಪ್ರದೇಶಕ್ಕೆ ಬಂದಿತು.
14084018a ತಸ್ಮಾದಪಿ ಸ ಕೌರವ್ಯ ಗಾಂಧಾರವಿಷಯಂ ಹಯಃ|
14084018c ವಿಚಚಾರ ಯಥಾಕಾಮಂ ಕೌಂತೇಯಾನುಗತಸ್ತದಾ||
ಕೌರವ್ಯ! ಗಾಂಧಾರದೇಶವನ್ನು ಪ್ರವೇಶಿಸಿ ಅಲ್ಲಿಯೂ ಕೂಡ ಕೌಂತೇಯನಿಂದ ಹಿಂಬಾಲಿಸಲ್ಪಟ್ಟ ಆ ಕುದುರೆಯು ಯಥೇಚ್ಛವಾಗಿ ಸಂಚರಿಸಿತು.
14084019a ತತ್ರ ಗಾಂಧಾರರಾಜೇನ ಯುದ್ಧಮಾಸೀನ್ಮಹಾತ್ಮನಃ|
14084019c ಘೋರಂ ಶಕುನಿಪುತ್ರೇಣ ಪೂರ್ವವೈರಾನುಸಾರಿಣಾ||
ಅಲ್ಲಿ ಹಿಂದಿನ ವೈರವನ್ನೇ ಸಾಧಿಸುತ್ತಿದ್ದ ಶಕುನಿಯ ಮಗ ಗಾಂಧಾರರಾಜನೊಡನೆ ಮಹಾತ್ಮ ಅರ್ಜುನನ ಯುದ್ಧವು ನಡೆಯಿತು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ಚತುರಶೀತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.