Ashvamedhika Parva: Chapter 82

ಅಶ್ವಮೇಧಿಕ ಪರ್ವ

೮೨

ಉಲೂಪಿಯು ಬಭೃವಾಹನನಿಂದ ಅರ್ಜುನನು ಹತನಾದ ಕಾರಣವನ್ನು ತಿಳಿಸಿದುದು (೧-೨೧). ಅರ್ಜುನನು ಬಭ್ರುವಾಹನನನ್ನು ಅಶ್ವಮೇಧ ಯಾಗಕ್ಕೆ ಆಮಂತ್ರಿಸಿ ಕುದುರೆಯನ್ನನುಸರಿಸಿ ಮುಂದುವರೆದುದು (೨೨-೩೨).

14082001 ಅರ್ಜುನ ಉವಾಚ

14082001a ಕಿಮಾಗಮನಕೃತ್ಯಂ ತೇ ಕೌರವ್ಯಕುಲನಂದಿನಿ|

14082001c ಮಣಿಪೂರಪತೇರ್ಮಾತುಸ್ತಥೈವ ಚ ರಣಾಜಿರೇ||

ಅರ್ಜುನನು ಹೇಳಿದನು: “ಕೌರವ್ಯಕುಲನಂದಿನಿ! ನೀನು ಮತ್ತು ಮಣಿಪೂರಪತಿಯ ತಾಯಿ ಚಿತ್ರಾಂಗದೆಯು ರಣಾಂಗಣಕ್ಕೆ ಏಕೆ ಬಂದಿರಿ?

14082002a ಕಚ್ಚಿತ್ಕುಶಲಕಾಮಾಸಿ ರಾಜ್ಞೋಽಸ್ಯ ಭುಜಗಾತ್ಮಜೇ|

14082002c ಮಮ ವಾ ಚಂಚಲಾಪಾಂಗೇ ಕಚ್ಚಿತ್ತ್ವಂ ಶುಭಮಿಚ್ಚಸಿ||

ಭುಜಗಾತ್ಮಜೇ! ಈ ರಾಜಾ ಬಭ್ರುವಾಹನನಿಗೆ ಕುಶಲವನ್ನೇ ಬಯಸುತ್ತಿರುವೆಯಲ್ಲವೇ? ಚಂಚಲಕಟಾಕ್ಷವುಳ್ಳವಳೇ! ನನಗೂ ಕೂಡ ಶುಭವನ್ನೇ ಬಯಸುತ್ತೀಯಲ್ಲವೇ?

14082003a ಕಚ್ಚಿತ್ತೇ ಪೃಥುಲಶ್ರೋಣಿ ನಾಪ್ರಿಯಂ ಶುಭದರ್ಶನೇ|

14082003c ಅಕಾರ್ಷಮಹಮಜ್ಞಾನಾದಯಂ ವಾ ಬಭ್ರುವಾಹನಃ||

ಪೃಥುಲಶ್ರೋಣೀ! ಶುಭದರ್ಶನೇ! ನಾನಾಗಲೀ ಬಭ್ರುವಾಹನನಾಗಲೀ ಅಜ್ಞಾನದಿಂದ ನಿನಗೆ ಅಪ್ರಿಯವಾದುದನ್ನು ಏನನ್ನೂ ಮಾಡಿಲ್ಲ ತಾನೇ?

14082004a ಕಚ್ಚಿಚ್ಚ ರಾಜಪುತ್ರೀ ತೇ ಸಪತ್ನೀ ಚೈತ್ರವಾಹಿನೀ|

14082004c ಚಿತ್ರಾಂಗದಾ ವರಾರೋಹಾ ನಾಪರಾಧ್ಯತಿ ಕಿಂ ಚನ||

ನಿನ್ನ ಸವತಿ ಚಿತ್ರವಾಹನನ ಮಗಳು ರಾಜಪುತ್ರೀ ವರಾರೋಹೇ ಚಿತ್ರಾಂಗದೆಯು ನಿನ್ನ ಕುರಿತು ಯಾವುದೇ ರೀತಿಯ ಅಪರಾಧವನ್ನೂ ಎಸಗಿಲ್ಲ ತಾನೇ?”

14082005a ತಮುವಾಚೋರಗಪತೇರ್ದುಹಿತಾ ಪ್ರಹಸಂತ್ಯಥ|

14082005c ನ ಮೇ ತ್ವಮಪರಾದ್ಧೋಽಸಿ ನ ನೃಪೋ ಬಭ್ರುವಾಹನಃ||

14082005e ನ ಜನಿತ್ರೀ ತಥಾಸ್ಯೇಯಂ ಮಮ ಯಾ ಪ್ರೇಷ್ಯವತ್ ಸ್ಥಿತಾ||

ಉರಗಪತಿಯ ಮಗಳು ನಗುತ್ತಾ ಅವನಿಗೆ ಉತ್ತರಿಸಿದಳು: “ನೀನಾಗಲೀ, ನೃಪ ಬಭ್ರುವಾಹನನಾಗಲೀ ಮತ್ತು ನನ್ನ ಸೇವಕಿಯಂತೆ ನಿಂತಿರುವ ಅವನ ತಾಯಿ ಚಿತ್ರಾಂಗದೆಯಾಗಲೀ ನನ್ನ ಕುರಿತು ಅಪರಾಧವನ್ನೆಸಗಿಲ್ಲ!

14082006a ಶ್ರೂಯತಾಂ ಯದ್ಯಥಾ ಚೇದಂ ಮಯಾ ಸರ್ವಂ ವಿಚೇಷ್ಟಿತಮ್|

14082006c ನ ಮೇ ಕೋಪಸ್ತ್ವಯಾ ಕಾರ್ಯಃ ಶಿರಸಾ ತ್ವಾಂ ಪ್ರಸಾದಯೇ||

ನಾನು ಇಲ್ಲಿಗೆ ಬಂದು ಮಾಡಿದುದೆಲ್ಲವನ್ನೂ ಕೇಳಬೇಕು. ಆದರೆ ನೀನು ಕೋಪಗೊಳ್ಳಬಾರದು. ಶಿರಸಾ ನಮಸ್ಕರಿಸಿ ಬೇಡಿಕೊಳ್ಳುತ್ತೇನೆ.

14082007a ತ್ವತ್ಪ್ರೀತ್ಯರ್ಥಂ ಹಿ ಕೌರವ್ಯ ಕೃತಮೇತನ್ ಮಯಾನಘ|

14082007c ಯತ್ತಚ್ಚೃಣು ಮಹಾಬಾಹೋ ನಿಖಿಲೇನ ಧನಂಜಯ||

ಕೌರವ್ಯ! ಅನಘ! ಮಹಾಬಾಹೋ! ಧನಂಜಯ! ನಿನ್ನ ಪ್ರೀತಿಗೋಸ್ಕರವಾಗಿಯೇ ನಾನು ಇವೆಲ್ಲವನ್ನೂ ಮಾಡಿದೆನು. ಎಲ್ಲವನ್ನೂ ಕೇಳು!

14082008a ಮಹಾಭಾರತಯುದ್ಧೇ ಯತ್ತ್ವಯಾ ಶಾಂತನವೋ ನೃಪಃ|

14082008c ಅಧರ್ಮೇಣ ಹತಃ ಪಾರ್ಥ ತಸ್ಯೈಷಾ ನಿಷ್ಕೃತಿಃ ಕೃತಾ||

ಪಾರ್ಥ! ಮಹಾಭಾರತ ಯುದ್ಧದಲ್ಲಿ ನೀನು ನೃಪ ಶಾಂತನವನನ್ನು ಅಧರ್ಮದಿಂದ ಸಂಹರಿಸಿದೆ. ಅದಕ್ಕೆ ಪ್ರಾಯಶ್ಚಿತ್ತವಾಗಿ ನಾನು ಇದನ್ನು ಮಾಡಬೇಕಾಯಿತು.

14082009a ನ ಹಿ ಭೀಷ್ಮಸ್ತ್ವಯಾ ವೀರ ಯುಧ್ಯಮಾನೋ ನಿಪಾತಿತಃ|

14082009c ಶಿಖಂಡಿನಾ ತು ಸಂಸಕ್ತಸ್ತಮಾಶ್ರಿತ್ಯ ಹತಸ್ತ್ವಯಾ||

ವೀರ! ನಿನ್ನೊಡನೆ ನೇರವಾಗಿ ಯುದ್ಧಮಾಡುತ್ತಿರುವಾಗ ಭೀಷ್ಮನು ಕೆಳಗುರುಳಲಿಲ್ಲ. ಅವನೊಡನೆ ಯುದ್ಧಮಾಡುತ್ತಿದ್ದ ಶಿಖಂಡಿಯನ್ನು ಆಶ್ರಯಿಸಿ ನೀನು ಅವನನ್ನು ಕೆಳಗುರುಳಿಸಿದೆ!

14082010a ತಸ್ಯ ಶಾಂತಿಮಕೃತ್ವಾ ತು ತ್ಯಜೇಸ್ತ್ವಂ ಯದಿ ಜೀವಿತಮ್|

14082010c ಕರ್ಮಣಾ ತೇನ ಪಾಪೇನ ಪತೇಥಾ ನಿರಯೇ ಧ್ರುವಮ್||

ಅದಕ್ಕೆ ಶಾಂತಿಯನ್ನು ಮಾಡಿಕೊಳ್ಳದೇ ನೀನು ಜೀವವನ್ನು ತ್ಯಜಿಸಿದ್ದೇ ಆದರೆ ನಿನ್ನ ಪಾಪಕರ್ಮದಿಂದ ನೀನು ನಿಶ್ಚಯವಾಗಿಯೂ ನರಕದಲ್ಲಿ ಬೀಳುತ್ತಿದ್ದೆ!

14082011a ಏಷಾ ತು ವಿಹಿತಾ ಶಾಂತಿಃ ಪುತ್ರಾದ್ಯಾಂ ಪ್ರಾಪ್ತವಾನಸಿ|

14082011c ವಸುಭಿರ್ವಸುಧಾಪಾಲ ಗಂಗಯಾ ಚ ಮಹಾಮತೇ||

ಮಹಾಮತೇ! ವಸುಧಾಪಾಲ! ವಸುಗಳು ಮತ್ತು ಗಂಗೆಯೂ ಕೂಡ ಪುತ್ರನಿಂದ ಪರಾಜಯ ಹೊಂದುವ ಪ್ರಾಯಶ್ಚಿತ್ತವನ್ನೇ ನಿನಗೆ ವಿಧಿಸಿದ್ದರು.

14082012a ಪುರಾ ಹಿ ಶ್ರುತಮೇತದ್ವೈ ವಸುಭಿಃ ಕಥಿತಂ ಮಯಾ|

14082012c ಗಂಗಾಯಾಸ್ತೀರಮಾಗಮ್ಯ ಹತೇ ಶಾಂತನವೇ ನೃಪೇ||

ಹಿಂದೆ ನೃಪ ಶಾಂತನವನು ಹತನಾದ ನಂತರ ಗಂಗಾತೀರಕ್ಕೆ ಬಂದಿದ್ದಾಗ ವಸುಗಳು ಹೇಳುತ್ತಿದ್ದ ಈ ಮಾತನ್ನು ನಾನು ಕೇಳಿಸಿಕೊಂಡಿದ್ದೆನು.

14082013a ಆಪ್ಲುತ್ಯ ದೇವಾ ವಸವಃ ಸಮೇತ್ಯ ಚ ಮಹಾನದೀಮ್|

14082013c ಇದಮೂಚುರ್ವಚೋ ಘೋರಂ ಭಾಗೀರಥ್ಯಾ ಮತೇ ತದಾ||

ದೇವ ವಸುಗಳು ಮಹಾನದಿಯಲ್ಲಿ ಮಿಂದು ಭಾಗೀರಥಿಯ ಸಮ್ಮತಿಯಂತೆ ಈ ಘೋರ ಮಾತುಗಳನ್ನಾಡಿದ್ದರು:

14082014a ಏಷ ಶಾಂತನವೋ ಭೀಷ್ಮೋ ನಿಹತಃ ಸವ್ಯಸಾಚಿನಾ|

14082014c ಅಯುಧ್ಯಮಾನಃ ಸಂಗ್ರಾಮೇ ಸಂಸಕ್ತೋಽನ್ಯೇನ ಭಾಮಿನಿ||

“ಭಾಮಿನಿ! ಸಂಗ್ರಾಮದಲ್ಲಿ ಶಾಂತನವ ಭೀಷ್ಮನು ಅನ್ಯನೊಡನೆ ಯುದ್ಧದಲ್ಲಿ ತೊಡಗಿದ್ದಾಗ ಸವ್ಯಸಾಚಿಯು ಅವನನ್ನು ಹೊಡೆದುರುಳಿಸಿದನು.

14082015a ತದನೇನಾಭಿಷಂಗೇಣ ವಯಮಪ್ಯರ್ಜುನಂ ಶುಭೇ|

14082015c ಶಾಪೇನ ಯೋಜಯಾಮೇತಿ ತಥಾಸ್ತ್ವಿತಿ ಚ ಸಾಬ್ರವೀತ್||

ಶುಭೇ! ಅವನ ಈ ಅಪರಾಧಕ್ಕಾಗಿ ಇಂದು ನಾವು ಅರ್ಜುನನಿಗೆ ಶಾಪವನ್ನು ಕೊಡುತ್ತೇವೆ!” ಅದಕ್ಕೆ ಅವಳು “ಹಾಗೆಯೇ ಆಗಲಿ!” ಎಂದಳು.

14082016a ತದಹಂ ಪಿತುರಾವೇದ್ಯ ಭೃಶಂ ಪ್ರವ್ಯಥಿತೇಂದ್ರಿಯಾ|

14082016c ಅಭವಂ ಸ ಚ ತಚ್ಚ್ರುತ್ವಾ ವಿಷಾದಮಗಮತ್ಪರಮ್||

ಅತ್ಯಂತ ದುಃಖಿತಳಾದ ನಾನು ನಡೆದುದನ್ನು ತಂದೆಗೆ ತಿಳಿಸಿದೆನು. ಅದನ್ನು ಕೇಳಿ ಅವನೂ ಕೂಡ ಅತ್ಯಂತ ದುಃಖಿತನಾದನು.

14082017a ಪಿತಾ ತು ಮೇ ವಸೂನ್ಗತ್ವಾ ತ್ವದರ್ಥಂ ಸಮಯಾಚತ|

14082017c ಪುನಃ ಪುನಃ ಪ್ರಸಾದ್ಯೈನಾಂಸ್ತ ಏನಮಿದಮಬ್ರುವನ್||

ನನ್ನ ತಂದೆಯು ನಿನಗೋಸ್ಕರವಾಗಿ ವಸುಗಳಲ್ಲಿ ಹೋಗಿ ಬೇಡಿಕೊಂಡನು. ಪುನಃ ಪುನಃ ಬೇಡಿಕೊಂಡನಂತರ ಅವರು ಅವನಿಗೆ ಹೀಗೆ ಹೇಳಿದರು:

14082018a ಪುನಸ್ತಸ್ಯ[1] ಮಹಾಭಾಗ ಮಣಿಪೂರೇಶ್ವರೋ ಯುವಾ|

14082018c ಸ ಏನಂ ರಣಮಧ್ಯಸ್ಥಂ ಶರೈಃ ಪಾತಯಿತಾ ಭುವಿ||

“ಮಹಾಭಾಗ! ಇವನು ರಣಮಧ್ಯದಲ್ಲಿರುವಾಗ ಯುವಕ ಮಣಿಪೂರೇಶ್ವನು ಇವನನ್ನು ಪುನಃ ಶರಗಳಿಂದ ಹೊಡೆದು ಭೂಮಿಗುರುಳಿಸುತ್ತಾನೆ!

14082019a ಏವಂ ಕೃತೇ ಸ ನಾಗೇಂದ್ರ ಮುಕ್ತಶಾಪೋ ಭವಿಷ್ಯತಿ|

14082019c ಗಚ್ಚೇತಿ ವಸುಭಿಶ್ಚೋಕ್ತೋ ಮಮ ಚೇದಂ ಶಶಂಸ ಸಃ||

ನಾಗೇಂದ್ರ! ಇದಾದನಂತರ ಅವನು ಶಾಪದಿಂದ ಮುಕ್ತನಾಗುತ್ತಾನೆ. ನೀನು ಈಗ ಹೋಗು!” ಎಂದು ವಸುಗಳು ಅವನಿಗೆ ಹೇಳಿದರು. ಅದನ್ನು ಅವನು ನನಗೆ ಹೇಳಿದನು.

14082020a ತಚ್ಚ್ರುತ್ವಾ ತ್ವಂ ಮಯಾ ತಸ್ಮಾಚ್ಚಾಪಾದಸಿ ವಿಮೋಕ್ಷಿತಃ|

14082020c ನ ಹಿ ತ್ವಾಂ ದೇವರಾಜೋಽಪಿ ಸಮರೇಷು ಪರಾಜಯೇತ್||

ಅದನ್ನು ಕೇಳಿ ನಾನು ನಿನ್ನನ್ನು ಆ ಶಾಪದಿಂದ ವಿಮೋಚನಗೊಳಿಸಿದ್ದೇನೆ. ದೇವರಾಜನೂ ಕೂಡ ನಿನ್ನನ್ನು ಸಮರದಲ್ಲಿ ಪರಾಜಯಗೊಳಿಸಲಾರನು.

14082021a ಆತ್ಮಾ ಪುತ್ರಃ ಸ್ಮೃತಸ್ತಸ್ಮಾತ್ತೇನೇಹಾಸಿ ಪರಾಜಿತಃ|

14082021c ನಾತ್ರ ದೋಷೋ ಮಮ ಮತಃ ಕಥಂ ವಾ ಮನ್ಯಸೇ ವಿಭೋ||

ವಿಭೋ! ಪುತ್ರನು ಆತ್ಮನಿಗೆ ಸಮಾನ ಎಂದು ಸ್ಮೃತಿಗಳು ಹೇಳುತ್ತವೆ. ಆದುದರಿಂದ ಬಭ್ರುವಾಹನನಿಂದ ನೀನು ಪರಾಜಿತನಾಗಿರುವುದರಲ್ಲಿ ನಿನ್ನ ದೋಷವು ಸ್ವಲ್ಪವೂ ಇಲ್ಲವೆಂದು ನನ್ನ ಅಭಿಪ್ರಾಯ. ನೀನು ಹೇಗೆ ಇದನ್ನು ತಿಳಿದುಕೊಳ್ಳುತ್ತೀಯೋ?”

14082022a ಇತ್ಯೇವಮುಕ್ತೋ ವಿಜಯಃ ಪ್ರಸನ್ನಾತ್ಮಾಬ್ರವೀದಿದಮ್|

14082022c ಸರ್ವಂ ಮೇ ಸುಪ್ರಿಯಂ ದೇವಿ ಯದೇತತ್ಕೃತವತ್ಯಸಿ||

ಇದನ್ನು ಕೇಳಿ ಪ್ರಸನ್ನಾತ್ಮನಾದ ವಿಜಯ ಅರ್ಜುನನು ಹೀಗೆ ಹೇಳಿದನು: “ದೇವಿ! ನೀನು ನಡೆಸಿದುದೆಲ್ಲವೂ ನನಗೆ ಸುಪ್ರಿಯವಾಗಿಯೇ ಇವೆ!”

14082023a ಇತ್ಯುಕ್ತ್ವಾಥಾಬ್ರವೀತ್ಪುತ್ರಂ ಮಣಿಪೂರೇಶ್ವರಂ ಜಯಃ|

14082023c ಚಿತ್ರಾಂಗದಾಯಾಃ ಶೃಣ್ವಂತ್ಯಾಃ ಕೌರವ್ಯದುಹಿತುಸ್ತಥಾ||

ಹೀಗೆ ಹೇಳಿ ಜಯ ಅರ್ಜುನನು ಕೌರವ್ಯಸೊಸೆ ಚಿತ್ರಾಂಗದೆಗೆ ಕೇಳಿಸುವಂತೆ ಮಗ ಮಣಿಪೂರೇಶ್ವರನಿಗೆ ಇಂತೆಂದನು:

14082024a ಯುಧಿಷ್ಠಿರಸ್ಯಾಶ್ವಮೇಧಃ ಪರಾಂ ಚೈತ್ರೀಂ ಭವಿಷ್ಯತಿ|

14082024c ತತ್ರಾಗಚ್ಚೇಃ ಸಹಾಮಾತ್ಯೋ ಮಾತೃಭ್ಯಾಂ ಸಹಿತೋ ನೃಪ||

“ಬರುವ ಚೈತ್ರದಲ್ಲಿ ಯುಧಿಷ್ಠಿರನ ಅಶ್ವಮೇಧವು ನಡೆಯಲಿದೆ. ನೃಪ! ಅದಕ್ಕೆ ತಾಯಂದಿರಿಬ್ಬರು ಮತ್ತು ಅಮಾತ್ಯರೊಂದಿಗೆ ಬರಬೇಕು.”

14082025a ಇತ್ಯೇವಮುಕ್ತಃ ಪಾರ್ಥೇನ ಸ ರಾಜಾ ಬಭ್ರುವಾಹನಃ|

14082025c ಉವಾಚ ಪಿತರಂ ಧೀಮಾನಿದಮಸ್ರಾವಿಲೇಕ್ಷಣಃ||

ಪಾರ್ಥನು ಹೀಗೆ ಹೇಳಲು ಧೀಮಾನ್ ರಾಜಾ ಬಭ್ರುವಾಹನನು ಕಂಬನಿದುಂಬಿದ ಕಣ್ಣುಗಳುಳ್ಳವನಾಗಿ ತಂದೆಗೆ ಹೇಳಿದನು:

14082026a ಉಪಯಾಸ್ಯಾಮಿ ಧರ್ಮಜ್ಞ ಭವತಃ ಶಾಸನಾದಹಮ್|

14082026c ಅಶ್ವಮೇಧೇ ಮಹಾಯಜ್ಞೇ ದ್ವಿಜಾತಿಪರಿವೇಷಕಃ||

“ಧರ್ಮಜ್ಞ! ನಿನ್ನ ಶಾಸನದಂತೆ ನಾನು ಬರುತ್ತೇನೆ. ಅಶ್ವಮೇಧ ಮಹಾಯಜ್ಞದಲ್ಲಿ ನಾನು ದ್ವಿಜಾತಿಯವರಿಗೆ ಸೇವಕನಾಗಿರುತ್ತೇನೆ.

14082027a ಮಮ ತ್ವನುಗ್ರಹಾರ್ಥಾಯ ಪ್ರವಿಶಸ್ವ ಪುರಂ ಸ್ವಕಮ್|

14082027c ಭಾರ್ಯಾಭ್ಯಾಂ ಸಹ ಶತ್ರುಘ್ನ ಮಾ ಭೂತ್ತೇಽತ್ರ ವಿಚಾರಣಾ||

ಶತ್ರುಘ್ನ! ನನ್ನ ಮೇಲೆ ಅನುಗ್ರಹ ತೋರಿಸುವ ಸಲುವಾಗಿ ಪತ್ನಿಯರಿಬ್ಬರೊಂದಿಗೆ ನಿನ್ನದೇ ಆದ ಈ ಪುರವನ್ನು ಪ್ರವೇಶಿಸು. ಅದರ ಕುರಿತು ವಿಚಾರಿಸಬೇಡ!

14082028a ಉಷಿತ್ವೇಹ ವಿಶಲ್ಯಸ್ತ್ವಂ ಸುಖಂ ಸ್ವೇ ವೇಶ್ಮನಿ ಪ್ರಭೋ|

14082028c ಪುನರಶ್ವಾನುಗಮನಂ ಕರ್ತಾಸಿ ಜಯತಾಂ ವರ||

ಪ್ರಭೋ! ವಿಜಯಿಗಳಲ್ಲಿ ಶ್ರೇಷ್ಠನೇ! ನಿನ್ನದೇ ಮನೆಯಲ್ಲಿ ಒಂದು ರಾತ್ರಿಯನ್ನು ಸುಖವಾಗಿ ಕಳೆದು ನಾಳೆ ಪುನಃ ಅಶ್ವವನ್ನು ಹಿಂಬಾಲಿಸಿ ಹೋಗಬಹುದು.”

14082029a ಇತ್ಯುಕ್ತಃ ಸ ತು ಪುತ್ರೇಣ ತದಾ ವಾನರಕೇತನಃ|

14082029c ಸ್ಮಯನ್ಪ್ರೋವಾಚ ಕೌಂತೇಯಸ್ತದಾ ಚಿತ್ರಾಂಗದಾಸುತಮ್||

ಪುತ್ರನು ಹೀಗೆ ಹೇಳಲು ವಾನರಕೇತನ ಕೌಂತೇಯನು ಮುಗುಳ್ನಗುತ್ತಾ ಚಿತ್ರಾಂಗದ ಸುತ ಮಗನಿಗೆ ಹೇಳಿದನು:

14082030a ವಿದಿತಂ ತೇ ಮಹಾಬಾಹೋ ಯಥಾ ದೀಕ್ಷಾಂ ಚರಾಮ್ಯಹಮ್|

14082030c ನ ಸ ತಾವತ್ಪ್ರವೇಕ್ಷ್ಯಾಮಿ ಪುರಂ ತೇ ಪೃಥುಲೋಚನ||

“ಮಹಾಬಾಹೋ! ಪೃಥುಲೋಚನ! ದೀಕ್ಷಾಬದ್ಧನಾಗಿ ನಾನು ತಿರುಗಾಡುತ್ತಿರುವೆನೆನ್ನುವುದು ನಿನಗೆ ತಿಳಿದೇ ಇದೆ. ಆದು ಮುಗಿಯುವವರೆಗೆ ನಾನು ನಿನ್ನ ಪುರವನ್ನು ಪ್ರವೇಶಿಸಲಾರೆ.

14082031a ಯಥಾಕಾಮಂ ಪ್ರಯಾತ್ಯೇಷ ಯಜ್ಞಿಯಶ್ಚ ತುರಂಗಮಃ|

14082031c ಸ್ವಸ್ತಿ ತೇಽಸ್ತು ಗಮಿಷ್ಯಾಮಿ ನ ಸ್ಥಾನಂ ವಿದ್ಯತೇ ಮಮ||

ಯಜ್ಞದ ಈ ಕುದುರೆಯು ಮನಬಂದಂತೆ ಹೋಗುತ್ತಿರುತ್ತಿದೆ. ಆದುದರಿಂದ ನನಗೆ ನಿರ್ದಿಷ್ಟ ಸ್ಥಾನವೆನ್ನುವುದೂ ಇಲ್ಲ. ಹೊರಡುತ್ತೇನೆ. ನಿನಗೆ ಮಂಗಳವಾಗಲಿ!”

14082032a ಸ ತತ್ರ ವಿಧಿವತ್ತೇನ ಪೂಜಿತಃ ಪಾಕಶಾಸನಿಃ|

14082032c ಭಾರ್ಯಾಭ್ಯಾಮಭ್ಯನುಜ್ಞಾತಃ ಪ್ರಾಯಾದ್ ಭರತಸತ್ತಮಃ||

ಅಲ್ಲಿಯೇ ವಿಧಿವತ್ತಾಗಿ ಪೂಜಿತನಾದ ಪಾಕಶಾಸನಿ ಭರತಸತ್ತಮನು ಪತ್ನಿಯಿಬ್ಬರಿಂದಲೂ ಬೀಳ್ಕೊಂಡು ಹೊರಟನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ದ್ವಾಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣ ಎನ್ನುವ ಎಂಭತ್ತೆರಡನೇ ಅಧ್ಯಾಯವು.

[1] ಪುತ್ರಸ್ತಸ್ಯ ಎಂಬ ಪಾಠಾಂತರವಿದೆ.

Comments are closed.