ಅಶ್ವಮೇಧಿಕ ಪರ್ವ
೭೯
ಉಲೂಪಿಯನ್ನು ನಿಂದಿಸಿ ಚಿತ್ರಾಂಗದೆಯು ಪ್ರಾಯೋಪವೇಶ ಮಾಡಿದುದು (೧-೧೮).
14079001 ವೈಶಂಪಾಯನ ಉವಾಚ
14079001a ತತೋ ಬಹುವಿಧಂ ಭೀರುರ್ವಿಲಪ್ಯ ಕಮಲೇಕ್ಷಣಾ|
14079001c ಮುಮೋಹ ದುಃಖಾದ್ದುರ್ಧರ್ಷಾ ನಿಪಪಾತ ಚ ಭೂತಲೇ||
ವೈಶಂಪಾಯನನು ಹೇಳಿದನು: “ಆಗ ಬಹುವಿಧವಾಗಿ ವಿಲಪಿಸಿ ಆ ಕಮಲೇಕ್ಷಣೆ ಭೀರು ಸಹಿಸಲಸಾಧ್ಯ ದುಃಖದಿಂದ ಮೂರ್ಛಿತಳಾಗಿ ನೆಲದ ಮೇಲೆ ಬಿದ್ದಳು.
14079002a ಪ್ರತಿಲಭ್ಯ ಚ ಸಾ ಸಂಜ್ಞಾಂ ದೇವೀ ದಿವ್ಯವಪುರ್ಧರಾ|
14079002c ಉಲೂಪೀಂ ಪನ್ನಗಸುತಾಂ ದೃಷ್ಟ್ವೇದಂ ವಾಕ್ಯಮಬ್ರವೀತ್||
ಸುಂದರ ರೂಪಿಣೀ ಆ ದೇವಿಯು ಸಂಜ್ಞೆಗಳನ್ನು ಪಡೆದು ಪನ್ನಗಸುತೆ ಉಲೂಪಿಯನ್ನು ನೋಡಿ ಈ ಮಾತುಗಳನ್ನಾಡಿದಳು:
14079003a ಉಲೂಪಿ ಪಶ್ಯ ಭರ್ತಾರಂ ಶಯಾನಂ ನಿಹತಂ ರಣೇ|
14079003c ತ್ವತ್ಕೃತೇ ಮಮ ಪುತ್ರೇಣ ಬಾಲೇನ ಸಮಿತಿಂಜಯಮ್||
“ಉಲೂಪಿ! ನೀನೇ ನಡೆಸಿದಂತೆ ನನ್ನ ಬಾಲಕ ಮಗನಿಂದ ರಣದಲ್ಲಿ ಹತನಾಗಿ ಮಲಗಿರುವ ಸಮಿತಿಂಜಯ ಪತಿಯನ್ನು ನೋಡು!
14079004a ನನು ತ್ವಮಾರ್ಯೇ ಧರ್ಮಜ್ಞಾ ನನು ಚಾಸಿ ಪತಿವ್ರತಾ|
14079004c ಯತ್ತ್ವತ್ಕೃತೇಽಯಂ ಪತಿತಃ ಪತಿಸ್ತೇ ನಿಹತೋ ರಣೇ||
ಆರ್ಯೇ! ನೀನು ಧರ್ಮಜ್ಞಳೂ ಪತಿವ್ರತೆಯೂ ಅಲ್ಲವೇ? ಆದರೂ ನಿನ್ನ ಪತಿಯು ರಣದಲ್ಲಿ ಹತನಾಗಿ ಬೀಳುವಹಾಗೆ ಏಕೆ ಮಾಡಿದೆ?
14079005a ಕಿಂ ತು ಸರ್ವಾಪರಾಧೋಽಯಂ ಯದಿ ತೇಽದ್ಯ ಧನಂಜಯಃ|
14079005c ಕ್ಷಮಸ್ವ ಯಾಚ್ಯಮಾನಾ ಮೇ ಸಂಜೀವಯ ಧನಂಜಯಮ್||
ಒಂದು ವೇಳೆ ಧನಂಜಯನದ್ದೇ ಸರ್ವ ಅಪರಾಧಗಳೇ ಆಗಿದ್ದರೂ ಇಂದು ಅವನನ್ನು ಕ್ಷಮಿಸಿಬಿಡು. ಧನಂಜಯನನ್ನು ಬದುಕಿಸು. ಬೇಡುತ್ತಿದ್ದೇನೆ.
14079006a ನನು ತ್ವಮಾರ್ಯೇ ಧರ್ಮಜ್ಞಾ ತ್ರೈಲೋಕ್ಯವಿದಿತಾ ಶುಭೇ|
14079006c ಯದ್ಘಾತಯಿತ್ವಾ ಭರ್ತಾರಂ ಪುತ್ರೇಣೇಹ ನ ಶೋಚಸಿ||
ಆರ್ಯೇ! ಶುಭೇ! ನೀನು ಧರ್ಮಜ್ಞೆಯೆಂದು ಮೂರುಲೋಕಗಳಲ್ಲಿಯೂ ಖ್ಯಾತಳಾಗಿಲ್ಲವೇ? ಆದರೂ ಮಗನಿಂದ ಪತಿಯನ್ನು ಕೊಲ್ಲಿಸಿಯೂ ಶೋಕಿಸುತ್ತಿಲ್ಲವಲ್ಲ!
14079007a ನಾಹಂ ಶೋಚಾಮಿ ತನಯಂ ನಿಹತಂ ಪನ್ನಗಾತ್ಮಜೇ|
14079007c ಪತಿಮೇವ ತು ಶೋಚಾಮಿ ಯಸ್ಯಾತಿಥ್ಯಮಿದಂ ಕೃತಮ್||
ಪನ್ನಗಾತ್ಮಜೇ! ಹತನಾಗಿರುವ ಮಗನಿಗಾಗಿ ನಾನು ಶೋಕಿಸುತ್ತಿಲ್ಲ. ಪತಿಗೆ ಇಂತಹ ಆತಿಥ್ಯವನ್ನು ನೀಡಿದೆನಲ್ಲಾ ಎಂದು ಶೋಕಿಸುತ್ತಿದ್ದೇನೆ!”
14079008a ಇತ್ಯುಕ್ತ್ವಾ ಸಾ ತದಾ ದೇವೀಮುಲೂಪೀಂ ಪನ್ನಗಾತ್ಮಜಾಮ್|
14079008c ಭರ್ತಾರಮಭಿಗಮ್ಯೇದಮಿತ್ಯುವಾಚ ಯಶಸ್ವಿನೀ||
ಪನ್ನಗಾತ್ಮಜೆ ದೇವೀ ಉಲೂಪಿಗೆ ಹೀಗೆ ಹೇಳಿ ಆ ಯಶಸ್ವಿನೀ ಚಿತ್ರಾಂಗದೆಯು ಪತಿಯ ಬಳಿಸಾರಿ ಈ ಮಾತುಗಳನ್ನಾಡಿದಳು:
14079009a ಉತ್ತಿಷ್ಠ ಕುರುಮುಖ್ಯಸ್ಯ ಪ್ರಿಯಕಾಮ ಮಮ ಪ್ರಿಯ|
14079009c ಅಯಮಶ್ವೋ ಮಹಾಬಾಹೋ ಮಯಾ ತೇ ಪರಿಮೋಕ್ಷಿತಃ||
“ಕುರುಮುಖ್ಯನಿಗೆ ಪ್ರಿಯವಾದುದನ್ನು ಮಾಡುವವನೇ! ನನ್ನ ಪ್ರಿಯನೇ! ಎದ್ದೇಳು! ಮಹಾಬಾಹೋ! ಈ ಕುದುರೆಯನ್ನು ನಾನೇ ನಿನಗೆ ಬಿಟ್ಟುಕೊಟ್ಟಿದ್ದೇನೆ!
14079010a ನನು ನಾಮ ತ್ವಯಾ ವೀರ ಧರ್ಮರಾಜಸ್ಯ ಯಜ್ಞಿಯಃ|
14079010c ಅಯಮಶ್ವೋಽನುಸರ್ತವ್ಯಃ ಸ ಶೇಷೇ ಕಿಂ ಮಹೀತಲೇ||
ವೀರ! ಧರ್ಮರಾಜನ ಈ ಯಜ್ಞಕುದುರೆಯನ್ನು ನೀನು ಹಿಂಬಾಲಿಸಿ ಹೋಗಬೇಕಲ್ಲವೇ? ಆದರೂ ನೀನು ಮಹೀತಲದಲ್ಲಿ ಏಕೆ ಮಲಗಿರುವೆ?
14079011a ತ್ವಯಿ ಪ್ರಾಣಾಃ ಸಮಾಯತ್ತಾಃ ಕುರೂಣಾಂ ಕುರುನಂದನ|
14079011c ಸ ಕಸ್ಮಾತ್ಪ್ರಾಣದೋಽನ್ಯೇಷಾಂ ಪ್ರಾಣಾನ್ ಸಂತ್ಯಕ್ತವಾನಸಿ||
ಕುರುನಂದನ! ಕುರುಗಳ ಪ್ರಾಣಗಳು ನಿನ್ನನ್ನೇ ಅವಲಂಬಿಸಿವೆ! ಅನ್ಯರಿಗೆ ಪ್ರಾಣದಾನವನ್ನು ನೀಡುವ ನೀನೇ ಏಕೆ ಹೀಗೆ ಪ್ರಾಣಗಳನ್ನು ತ್ಯಜಿಸಿರುವೆ?
14079012a ಉಲೂಪಿ ಸಾಧು ಸಂಪಶ್ಯ ಭರ್ತಾರಂ ನಿಹತಂ ರಣೇ|
14079012c ಪುತ್ರಂ ಚೈನಂ ಸಮುತ್ಸಾಹ್ಯ ಘಾತಯಿತ್ವಾ ನ ಶೋಚಸಿ||
ಉಲೂಪಿ! ರಣದಲ್ಲಿ ಹತನಾಗಿರುವ ಪತಿಯನ್ನು ಚೆನ್ನಾಗಿ ನೋಡು! ಮಗನನ್ನು ಪ್ರೋತ್ಸಾಹಿಸಿ ಇವನನ್ನು ಕೊಲ್ಲಿಸಿದ ನೀನು ಶೋಕಿಸುತ್ತಿಲ್ಲವಲ್ಲ!
14079013a ಕಾಮಂ ಸ್ವಪಿತು ಬಾಲೋಽಯಂ ಭೂಮೌ ಪ್ರೇತಗತಿಂ ಗತಃ|
14079013c ಲೋಹಿತಾಕ್ಷೋ ಗುಡಾಕೇಶೋ ವಿಜಯಃ ಸಾಧು ಜೀವತು||
ಪ್ರೇತಗತಿಯನ್ನು ಸೇರಿದ ನನ್ನ ಈ ಬಾಲಕನು ಬೇಕಾದರೆ ಭೂಮಿಯ ಮೇಲೆಯೇ ಮಲಗಿರಲಿ! ಆದರೆ ನಿದ್ರೆಯನ್ನು ಜಯಿಸಿದ ಲೋಹಿತಾಕ್ಷ ವಿಜಯನು ಮಾತ್ರ ಜೀವಿಸಿದರೆ ಚೆನ್ನಾಗಿರುತ್ತಿತ್ತು!
14079014a ನಾಪರಾಧೋಽಸ್ತಿ ಸುಭಗೇ ನರಾಣಾಂ ಬಹುಭಾರ್ಯತಾ|
14079014c ನಾರೀಣಾಂ ತು ಭವತ್ಯೇತನ್ಮಾ ತೇ ಭೂದ್ಬುದ್ಧಿರೀದೃಶೀ||
ಸುಭಗೇ! ಪುರುಷರಿಗೆ ಅನೇಕ ಭಾರ್ಯೆಯರಿದ್ದರೆ ಅಪರಾಧವೇನೂ ಅಲ್ಲ. ಆದರೆ ನಾರಿಯರಿಗೆ ಇದು ತರವಲ್ಲ. ನಿನಗೆ ಈ ರೀತಿಯ ಬುದ್ಧಿಯುಂಟಾಗಬಾರದಾಗಿತ್ತು!
14079015a ಸಖ್ಯಂ ಹ್ಯೇತತ್ಕೃತಂ ಧಾತ್ರಾ ಶಾಶ್ವತಂ ಚಾವ್ಯಯಂ ಚ ಹ|
14079015c ಸಖ್ಯಂ ಸಮಭಿಜಾನೀಹಿ ಸತ್ಯಂ ಸಂಗತಮಸ್ತು ತೇ||
ಪತಿ-ಪತ್ನಿಯರ ನಡುವಿನ ಈ ಶಾಶ್ವತವೂ ಅವ್ಯಯವೂ ಆದ ಸಖ್ಯವನ್ನು ಧಾತನೇ ಮಾಡಿರುವನು. ನಿನಗೂ ಅರ್ಜುನನೊಡನೆ ಇದೇ ರೀತಿಯ ಸಂಬಂಧವಿದೆ ಎನ್ನುವ ಸತ್ಯವು ನಿನಗೆ ಅರಿವಾಗಲಿ!
14079016a ಪುತ್ರೇಣ ಘಾತಯಿತ್ವೇಮಂ ಪತಿಂ ಯದಿ ನ ಮೇಽದ್ಯ ವೈ|
14079016c ಜೀವಂತಂ ದರ್ಶಯಸ್ಯದ್ಯ ಪರಿತ್ಯಕ್ಷ್ಯಾಮಿ ಜೀವಿತಮ್||
ಪುತ್ರನಿಂದ ಕೊಲ್ಲಿಸಿದ ನನ್ನ ಈ ಪತಿಯನ್ನು ಇಂದು ಜೀವಂತವಾಗಿ ತೋರಿಸದೇ ಇದ್ದರೆ ಇಂದೇ ನಾನು ನನ್ನ ಜೀವವನ್ನು ತ್ಯಜಿಸುತ್ತೇನೆ!
14079017a ಸಾಹಂ ದುಃಖಾನ್ವಿತಾ ಭೀರು ಪತಿಪುತ್ರವಿನಾಕೃತಾ|
14079017c ಇಹೈವ ಪ್ರಾಯಮಾಶಿಷ್ಯೇ ಪ್ರೇಕ್ಷಂತ್ಯಾಸ್ತೇ ನ ಸಂಶಯಃ||
ಭೀರು! ಪತಿ-ಪುತ್ರರಿಂದ ವಿಹೀನಳಾಗಿ ದುಃಖಾನ್ವಿತಳಾದ ನಾನು ಇಲ್ಲಿಯೇ ಪ್ರಾಯೋಪವೇಶ ಮಾಡುವುದನ್ನು ನಿಸ್ಸಂಶಯವಾಗಿ ನೀನು ಕಾಣುವೆ!”
14079018a ಇತ್ಯುಕ್ತ್ವಾ ಪನ್ನಗಸುತಾಂ ಸಪತ್ನೀಂ ಚೈತ್ರವಾಹಿನೀ|
14079018c ತತಃ ಪ್ರಾಯಮುಪಾಸೀನಾ ತೂಷ್ಣೀಮಾಸೀಜ್ಜನಾಧಿಪ||
ಜನಾಧಿಪ! ಹೀಗೆ ಸವತಿಯಾದ ಪನ್ನಗಸುತೆಗೆ ಹೇಳಿ ಚಿತ್ರವಾಹನನ ಮಗಳು ಚಿತ್ರಾಂಗದೆಯು ಪ್ರಾಯೋಪವೇಶಮಾಡಿ ಸುಮ್ಮನೇ ಕುಳಿತುಕೊಂಡಳು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಪ್ರತ್ಯುಜ್ಜೀವನೇ ಎಕೋನಾಶೀತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಪ್ರತ್ಯುಜ್ಜೀವನ ಎನ್ನುವ ಎಪ್ಪತ್ತೊಂಭತ್ತನೇ ಅಧ್ಯಾಯವು.