ಅಶ್ವಮೇಧಿಕ ಪರ್ವ
೭೮
ಬಭೃವಾಹನನು ವಿನಯದಿಂದ ಅರ್ಜುನನನ್ನು ಪೂಜಿಸಲು ಅರ್ಜುನನು ಅವನನ್ನು ಧಿಕ್ಕರಿಸಿದುದು (೧-೭). ಉಲೂಪಿಯ ಸೂಚನೆಯಂತೆ ಬಭ್ರುವಾಹನನು ಯಜ್ಞಕುದುರೆಯನ್ನು ಕಟ್ಟಿಹಾಕಿ ಅರ್ಜುನನೊಡನೆ ಯುದ್ಧಕ್ಕೆ ಹೊರಟಿದುದು (೮-೧೭). ಬಭ್ರುವಾಹನ-ಅರ್ಜುನರ ಯುದ್ಧ; ಅರ್ಜುನನು ಮೂರ್ಛೆಹೋದುದು (೧೮-೩೫). ತಂದೆಯು ಮೂರ್ಛಿತನಾದುದನ್ನು ನೋಡಿ ಬಭ್ರುವಾಹನನೂ ಮೂರ್ಛಿತನಾದುದು; ಚಿತ್ರಾಂಗದೆಯು ರಣಭೂಮಿಯನ್ನು ಪ್ರವೇಶಿಸಿದುದು (೩೬-೩೯).
14078001 ವೈಶಂಪಾಯನ ಉವಾಚ
14078001a ಶ್ರುತ್ವಾ ತು ನೃಪತಿರ್ವೀರಂ ಪಿತರಂ ಬಭ್ರುವಾಹನಃ|
14078001c ನಿರ್ಯಯೌ ವಿನಯೇನಾರ್ಯೋ ಬ್ರಾಹ್ಮಣಾರ್ಘ್ಯಪುರಃಸರಃ||
ವೈಶಂಪಾಯನನು ಹೇಳಿದನು: “ವೀರ ತಂದೆಯು ಬಂದಿದ್ದಾನೆಂದು ಕೇಳಿ ನೃಪತಿ ಬಭ್ರುವಾಹನನು ವಿನಯದಿಂದ ಆರ್ಯಬ್ರಾಹ್ಮಣರನ್ನು ಮುಂದಿಟ್ಟುಕೊಂಡು ಅರ್ಘ್ಯಗಳೊಂದಿಗೆ ಪಟ್ಟಣದಿಂದ ಹೊರಟನು.
14078002a ಮಣಿಪೂರೇಶ್ವರಂ ತ್ವೇವಮುಪಯಾತಂ ಧನಂಜಯಃ|
14078002c ನಾಭ್ಯನಂದತ ಮೇಧಾವೀ ಕ್ಷತ್ರಧರ್ಮಮನುಸ್ಮರನ್||
ಕ್ಷತ್ರಧರ್ಮವನ್ನು ಸ್ಮರಿಸಿಕೊಂಡ ಮೇಧಾವೀ ಧನಂಜಯನು ಹೀಗೆ ಬಂದಿರುವ ಮಣಿಪೂರೇಶ್ವರನನ್ನು ಅಭಿನಂದಿಸಲಿಲ್ಲ.
14078003a ಉವಾಚ ಚೈನಂ ಧರ್ಮಾತ್ಮಾ ಸಮನ್ಯುಃ ಫಲ್ಗುನಸ್ತದಾ|
14078003c ಪ್ರಕ್ರಿಯೇಯಂ ನ ತೇ ಯುಕ್ತಾ ಬಹಿಸ್ತ್ವಂ ಕ್ಷತ್ರಧರ್ಮತಃ||
ಆಗ ಧರ್ಮಾತ್ಮಾ ಫಲ್ಗುನನು ಕೋಪದಿಂದಲೇ ಅವನಿಗೆ ಹೇಳಿದನು: “ಕ್ಷತ್ರಧರ್ಮದ ಹೊರಕ್ಕಿರುವ ಈ ಪ್ರಕ್ರಿಯೆಯು ನಿನಗೆ ಯುಕ್ತವಾದುದಲ್ಲ!
14078004a ಸಂರಕ್ಷ್ಯಮಾಣಂ ತುರಗಂ ಯೌಧಿಷ್ಠಿರಮುಪಾಗತಮ್|
14078004c ಯಜ್ಞಿಯಂ ವಿಷಯಾಂತೇ ಮಾಂ ನಾಯೋತ್ಸೀಃ ಕಿಂ ನು ಪುತ್ರಕ||
ಪುತ್ರಕ! ಯುಧಿಷ್ಠಿರನ ಯಜ್ಞ ಕುದುರೆಯನ್ನು ಸಂರಕ್ಷಿಸುತ್ತಾ ನಿನ್ನ ರಾಜ್ಯಕ್ಕೆ ನಾನು ಬಂದಿರುವಾಗ ನನ್ನೊಡನೆ ನೀನು ಏಕೆ ಯುದ್ಧಮಾಡುತ್ತಿಲ್ಲ?
14078005a ಧಿಕ್ತ್ವಾಮಸ್ತು ಸುದುರ್ಬುದ್ಧಿಂ ಕ್ಷತ್ರಧರ್ಮಾವಿಶಾರದಮ್|
14078005c ಯೋ ಮಾಂ ಯುದ್ಧಾಯ ಸಂಪ್ರಾಪ್ತಂ ಸಾಮ್ನೈವಾಥೋ ತ್ವಮಗ್ರಹೀಃ||
ಯುದ್ಧಕ್ಕಾಗಿ ಬಂದಿರುವ ನನ್ನನ್ನು ಸಾಮ್ಯದಿಂದ ಸ್ವಾಗತಿಸುತ್ತಿರುವ, ಕ್ಷತ್ರಧರ್ಮವನ್ನು ತಿಳಿಯದಿರುವ ಅತ್ಯಂತ ದುರ್ಬುದ್ಧಿಯಾದ ನಿನಗೆ ಧಿಕ್ಕಾರವು!
14078006a ನ ತ್ವಯಾ ಪುರುಷಾರ್ಥಶ್ಚ ಕಶ್ಚಿದಸ್ತೀಹ ಜೀವತಾ|
14078006c ಯಸ್ತ್ವಂ ಸ್ತ್ರೀವದ್ಯುಧಾ ಪ್ರಾಪ್ತಂ ಸಾಮ್ನಾ ಮಾಂ ಪ್ರತ್ಯಗೃಹ್ಣಥಾಃ||
ಬದುಕಿರುವಾಗ ನೀನು ಯಾವ ಪುರುಷಾರ್ಥವನ್ನೂ ಸಾಧಿಸಿಲ್ಲ. ಈಗ ಯುದ್ಧಮಾಡಲು ಆಗಮಿಸಿರುವ ನನ್ನನ್ನು ಸ್ತ್ರೀಯಂತೆ ಸಾಮ್ಯದಿಂದ ಸ್ವಾಗತಿಸುತ್ತಿರುವೆ!
14078007a ಯದ್ಯಹಂ ನ್ಯಸ್ತಶಸ್ತ್ರಸ್ತ್ವಾಮಾಗಚ್ಚೇಯಂ ಸುದುರ್ಮತೇ|
14078007c ಪ್ರಕ್ರಿಯೇಯಂ ತತೋ ಯುಕ್ತಾ ಭವೇತ್ತವ ನರಾಧಮ||
ದುರ್ಮತೇ! ನರಾಧಮ! ಒಂದುವೇಳೆ ನಾನು ಶಸ್ತ್ರಗಳನ್ನು ಬದಿಗಿಟ್ಟು ಇಲ್ಲಿಗೆ ಬಂದಿದ್ದೆನಾದರೆ ನಿನ್ನ ಈ ಪ್ರಕ್ರಿಯೆಯು ಯುಕ್ತವಾಗುತ್ತಿತ್ತೋ ಏನೋ!”
14078008a ತಮೇವಮುಕ್ತಂ ಭರ್ತ್ರಾ ತು ವಿದಿತ್ವಾ ಪನ್ನಗಾತ್ಮಜಾ|
14078008c ಅಮೃಷ್ಯಮಾಣಾ ಭಿತ್ತ್ವೋರ್ವೀಮುಲೂಪೀ ತಮುಪಾಗಮತ್||
ತನ್ನ ಪತಿಯು ಹೀಗೆ ಹೇಳುತ್ತಿರುವುದನ್ನು ತಿಳಿದ ಪನ್ನಗಾತ್ಮಜೆ ಉಲೂಪಿಯು ಕೋಪವನ್ನು ಸಹಿಸಿಕೊಳ್ಳಲಾರದೇ ಭೂಮಿಯನ್ನೇ ಭೇದಿಸಿಕೊಂಡು ಪಾತಾಳದಿಂದ ಮೇಲೆ ಬಂದಳು.
14078009a ಸಾ ದದರ್ಶ ತತಃ ಪುತ್ರಂ ವಿಮೃಶಂತಮಧೋಮುಖಮ್|
14078009c ಸಂತರ್ಜ್ಯಮಾನಮಸಕೃದ್ಭರ್ತ್ರಾ ಯುದ್ಧಾರ್ಥಿನಾ ವಿಭೋ||
ವಿಭೋ! ಅಲ್ಲಿ ಅವಳು ಮುಖಕೆಳಗೆ ಮಾಡಿಕೊಂಡು ಏನುಮಾಡಬೇಕೆಂದು ವಿಮರ್ಶಿಸುತ್ತಿರುವ ಮಗನನ್ನೂ ಮತ್ತು ಯುದ್ಧಾರ್ಥಿಯಾದ ಪತಿಯು ಅವನನ್ನು ಕಠೋರಮಾತುಗಳಿಂದ ನಿಂದಿಸುತ್ತಿರುವುದನ್ನೂ ನೋಡಿದಳು.
14078010a ತತಃ ಸಾ ಚಾರುಸರ್ವಾಂಗೀ ತಮುಪೇತ್ಯೋರಗಾತ್ಮಜಾ|
14078010c ಉಲೂಪೀ ಪ್ರಾಹ ವಚನಂ ಕ್ಷತ್ರಧರ್ಮವಿಶಾರದಾ||
ಆಗ ಆ ಕ್ಷತ್ರಧರ್ಮವನ್ನು ತಿಳಿದಿದ್ದ ಸುಂದರಸರ್ವಾಂಗೀ ಉರಗಾತ್ಮಜೆ ಉಲೂಪಿಯು ಬಭ್ರುವಾಹನನಿಗೆ ಇಂತೆಂದಳು:
14078011a ಉಲೂಪೀಂ ಮಾಂ ನಿಬೋಧ ತ್ವಂ ಮಾತರಂ ಪನ್ನಗಾತ್ಮಜಾಮ್|
14078011c ಕುರುಷ್ವ ವಚನಂ ಪುತ್ರ ಧರ್ಮಸ್ತೇ ಭವಿತಾ ಪರಃ||
“ನೀನು ನನ್ನನ್ನು ನಿನ್ನ ತಾಯಿ ಪನ್ನಗಾತ್ಮಜೆ ಉಲೂಪಿಯೆಂದು ತಿಳಿ! ಮಗೂ! ನನ್ನ ಈ ಮಾತನ್ನು ಕೇಳು. ಇದರಿಂದ ನೀನು ಮಹಾಧರ್ಮವನ್ನೆಸಗಿದಂತಾಗುತ್ತದೆ!
14078012a ಯುಧ್ಯಸ್ವೈನಂ ಕುರುಶ್ರೇಷ್ಠಂ ಧನಂಜಯಮರಿಂದಮ|
14078012c ಏವಮೇಷ ಹಿ ತೇ ಪ್ರೀತೋ ಭವಿಷ್ಯತಿ ನ ಸಂಶಯಃ||
ಅರಿಂದಮ! ನೀನು ಈ ಕುರುಶ್ರೇಷ್ಠ ಧನಂಜಯನೊಡನೆ ಯುದ್ಧಮಾಡು! ಇದರಿಂದಲೇ ನಿನಗೆ ಸಂತೋಷವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”
14078013a ಏವಮುದ್ಧರ್ಷಿತೋ ಮಾತ್ರಾ ಸ ರಾಜಾ ಬಭ್ರುವಾಹನಃ|
14078013c ಮನಶ್ಚಕ್ರೇ ಮಹಾತೇಜಾ ಯುದ್ಧಾಯ ಭರತರ್ಷಭ||
ಭರತರ್ಷಭ! ಹೀಗೆ ತಾಯಿಯಿಂದ ಉತ್ಸಾಹಗೊಳಿಸಲ್ಪಟ್ಟ ಮಹಾತೇಜಸ್ವೀ ರಾಜಾ ಬಭ್ರುವಾಹನನು ಯುದ್ಧಕ್ಕೆ ಮನಸ್ಸು ಮಾಡಿದನು.
14078014a ಸಂನಹ್ಯ ಕಾಂಚನಂ ವರ್ಮ ಶಿರಸ್ತ್ರಾಣಂ ಚ ಭಾನುಮತ್|
14078014c ತೂಣೀರಶತಸಂಬಾಧಮಾರುರೋಹ ಮಹಾರಥಮ್||
ಅವನು ಕಾಂಚನ ಕವಚವನ್ನು ಮತ್ತು ಹೊಳೆಯುತ್ತಿರುವ ಶಿರಸ್ತ್ರಾಣವನ್ನೂ ತೊಟ್ಟು, ನೂರಾರು ಭತ್ತಳಿಕೆಗಳನ್ನು ತುಂಬಿಸಿದ್ದ ಮಹಾರಥವನ್ನೇರಿದನು.
14078015a ಸರ್ವೋಪಕರಣೈರ್ಯುಕ್ತಂ ಯುಕ್ತಮಶ್ವೈರ್ಮನೋಜವೈಃ|
14078015c ಸುಚಕ್ರೋಪಸ್ಕರಂ ಧೀಮಾನ್ ಹೇಮಭಾಂಡಪರಿಷ್ಕೃತಮ್||
14078016a ಪರಮಾರ್ಚಿತಮುಚ್ಚ್ರಿತ್ಯ ಧ್ವಜಂ ಸಿಂಹಂ ಹಿರಣ್ಮಯಮ್|
14078016c ಪ್ರಯಯೌ ಪಾರ್ಥಮುದ್ದಿಶ್ಯ ಸ ರಾಜಾ ಬಭ್ರುವಾಹನಃ||
ಸರ್ವೋಪಕರಣಗಳಿಂದ ಕೂಡಿದ್ದ, ಮನೋವೇಗದಲ್ಲಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ್ದ, ಚಕ್ರವೇ ಮೊದಲಾದ ಇತರ ಸಾಮಾಗ್ರಿಗಳಿಂದ ಕೂಡಿದ್ದ, ಹೊಳೆಯುವ ಸುವರ್ಣಮಯ ಆಭರಣಗಳಿಂದ ಅಲಂಕೃತಗೊಂಡಿದ್ದ, ಪರಮಾರ್ಚಿತವಾದ ಹಿರಣ್ಮಯ ಸಿಂಹಧ್ವಜವನ್ನು ಮೇಲೇರಿಸಿಕೊಂಡು ರಾಜಾ ಬಭ್ರುವಾಹನನು ಪಾರ್ಥನನ್ನು ಎದುರಿಸಿ ಹೊರಟನು.
14078017a ತತೋಽಭ್ಯೇತ್ಯ ಹಯಂ ವೀರೋ ಯಜ್ಞಿಯಂ ಪಾರ್ಥರಕ್ಷಿತಮ್|
14078017c ಗ್ರಾಹಯಾಮಾಸ ಪುರುಷೈರ್ಹಯಶಿಕ್ಷಾವಿಶಾರದೈಃ||
ಆಗ ವೀರ ಬಭ್ರುವಾಹನನು ಪಾರ್ಥನ ರಕ್ಷೆಯಲ್ಲಿದ್ದ ಆ ಯಜ್ಞದ ಕುದುರೆಯನ್ನು ಹಯಶಿಕ್ಷಾವಿಶಾರದ ಪುರುಷರಿಂದ ಕಟ್ಟಿಹಾಕಿಸಿದನು.
14078018a ಗೃಹೀತಂ ವಾಜಿನಂ ದೃಷ್ಟ್ವಾ ಪ್ರೀತಾತ್ಮಾ ಸ ಧನಂಜಯಃ|
14078018c ಪುತ್ರಂ ರಥಸ್ಥಂ ಭೂಮಿಷ್ಠಃ ಸಂನ್ಯವಾರಯದಾಹವೇ||
ಅವನು ಕುದುರೆಯನ್ನು ಕಟ್ಟಿಹಾಕಿದುದನ್ನು ನೋಡಿ ಸಂತೋಷಗೊಂಡ ಧನಂಜಯನು ಭೂಮಿಯಮೇಲೆ ನಿಂತುಕೊಂಡೇ ರಥಸ್ಥನಾಗಿರುವ ಮಗನನ್ನು ರಣದಲ್ಲಿ ತಡೆದನು.
14078019a ತತಃ ಸ ರಾಜಾ ತಂ ವೀರಂ ಶರವ್ರಾತೈಃ ಸಹಸ್ರಶಃ|
14078019c ಅರ್ದಯಾಮಾಸ ನಿಶಿತೈರಾಶೀವಿಷವಿಷೋಪಮೈಃ||
ಆಗ ರಾಜಾ ಬಭ್ರುವಾಹನನು ವೀರ ಅರ್ಜುನನನ್ನು ಸರ್ಪವಿಷಗಳಿಗೆ ಸಮಾನವಾದ ಸಹಸ್ರಾರು ನಿಶಿತ ಬಾಣಗಳಿಂದ ಪೀಡಿಸಿದನು.
14078020a ತಯೋಃ ಸಮಭವದ್ಯುದ್ಧಂ ಪಿತುಃ ಪುತ್ರಸ್ಯ ಚಾತುಲಮ್|
14078020c ದೇವಾಸುರರಣಪ್ರಖ್ಯಮುಭಯೋಃ ಪ್ರೀಯಮಾಣಯೋಃ||
ಪರಸ್ಪರರಿಗೆ ಸಂತೋಷವನ್ನು ಕೊಡುತ್ತಿದ್ದ ಆ ತಂದೆ-ಮಗನ ನಡುವೆ ದೇವಾಸುರರ ನಡುವೆ ನಡೆದಂಥಹ ಸರಿಸಾಟಿಯಿಲ್ಲದ ಮಹಾಯುದ್ಧವೇ ನಡೆಯಿತು.
14078021a ಕಿರೀಟಿನಂ ತು ವಿವ್ಯಾಧ ಶರೇಣ ನತಪರ್ವಣಾ|
14078021c ಜತ್ರುದೇಶೇ ನರವ್ಯಾಘ್ರಃ ಪ್ರಹಸನ್ಬಭ್ರುವಾಹನಃ||
ನರವ್ಯಾಘ್ರ ಬಭ್ರುವಾಹನನು ನತಪರ್ವ ಶರದಿಂದ ಕಿರೀಟಿಯ ಜತ್ರುದೇಶಕ್ಕೆ ಹೊಡೆದು ಜೋರಾಗಿ ನಕ್ಕನು.
14078022a ಸೋಽಭ್ಯಗಾತ್ಸಹ ಪುಂಖೇನ ವಲ್ಮೀಕಮಿವ ಪನ್ನಗಃ|
14078022c ವಿನಿರ್ಭಿದ್ಯ ಚ ಕೌಂತೇಯಂ ಮಹೀತಲಮಥಾವಿಶತ್||
ಸರ್ಪವು ಹುತ್ತವನ್ನು ಹೇಗೋ ಹಾಗೆ ಆ ಬಾಣವು ಪುಂಖದೊಂದಿಗೆ ಕೌಂತೇಯನನ್ನು ಭೇದಿಸಿ ಭೂಮಿಯ ಒಳಹೊಕ್ಕಿತು.
14078023a ಸ ಗಾಢವೇದನೋ ಧೀಮಾನಾಲಂಬ್ಯ ಧನುರುತ್ತಮಮ್|
14078023c ದಿವ್ಯಂ ತೇಜಃ ಸಮಾವಿಶ್ಯ ಪ್ರಮೀತ ಇವ ಸಂಬಭೌ||
ಧೀಮಾನ್ ಅರ್ಜುನನು ಗಾಢವೇದನೆಯಿಂದ ಉತ್ತಮ ಧನುಸ್ಸನ್ನು ಅವಲಂಬಿಸಿ ಹಾಗೆಯೇ ನಿಂತುಕೊಂಡನು. ಆಗ ಅವನು ದಿವ್ಯ ತೇಜಸ್ಸಿನಿಂದ ಕೂಡಿದ್ದ ಯಜ್ಞಪಶುವಿನಂತೆಯೇ ಕಾಣುತ್ತಿದ್ದನು.
14078024a ಸ ಸಂಜ್ಞಾಮುಪಲಭ್ಯಾಥ ಪ್ರಶಸ್ಯ ಪುರುಷರ್ಷಭಃ|
14078024c ಪುತ್ರಂ ಶಕ್ರಾತ್ಮಜೋ ವಾಕ್ಯಮಿದಮಾಹ ಮಹೀಪತೇ||
ಮಹೀಪತೇ! ಪುನಃ ಸಂಜ್ಞೆಗಳನ್ನು ಪಡೆದುಕೊಂಡ ಪುರುಷರ್ಷಭ ಶಕ್ರಾತ್ಮಜನು ಮಗನನ್ನು ಪ್ರಶಂಸಿಸುತ್ತಾ ಈ ಮಾತುಗಳನ್ನಾಡಿದನು:
14078025a ಸಾಧು ಸಾಧು ಮಹಾಬಾಹೋ ವತ್ಸ ಚಿತ್ರಾಂಗದಾತ್ಮಜ|
14078025c ಸದೃಶಂ ಕರ್ಮ ತೇ ದೃಷ್ಟ್ವಾ ಪ್ರೀತಿಮಾನಸ್ಮಿ ಪುತ್ರಕ||
14078026a ವಿಮುಂಚಾಮ್ಯೇಷ ಬಾಣಾಂಸ್ತೇ ಪುತ್ರ ಯುದ್ಧೇ ಸ್ಥಿರೋ ಭವ|
14078026c ಇತ್ಯೇವಮುಕ್ತ್ವಾ ನಾರಾಚೈರಭ್ಯವರ್ಷದಮಿತ್ರಹಾ||
“ಭಲೇ! ಭಲೇ! ಮಹಾಬಾಹೋ! ಮಗೂ! ಚಿತ್ರಾಂಗದಾತ್ಮಜ! ಪುತ್ರಕ! ಅನುರೂಪವಾದ ನಿನ್ನ ಈ ಕೆಲಸವನ್ನು ನೋಡಿ ನಾನು ಹರ್ಷಿತನಾಗಿದ್ದೇನೆ. ಪುತ್ರ! ಈ ಬಾಣವನ್ನು ನಿನ್ನ ಮೇಲೆ ಪ್ರಯೋಗಿಸುತ್ತಿದ್ದೇನೆ. ಯುದ್ಧದಲ್ಲಿ ಸ್ಥಿರವಾಗಿರು!” ಹೀಗೆ ಹೇಳಿ ಆ ಅಮಿತ್ರಹ ಅರ್ಜುನನು ನಾರಾಚಗಳನ್ನು ಅವನ ಮೇಲೆ ಸುರಿಸಿದನು.
14078027a ತಾನ್ಸ ಗಾಂಡೀವನಿರ್ಮುಕ್ತಾನ್ವಜ್ರಾಶನಿಸಮಪ್ರಭಾನ್|
14078027c ನಾರಾಚೈರಚ್ಚಿನದ್ರಾಜಾ ಸರ್ವಾನೇವ ತ್ರಿಧಾ ತ್ರಿಧಾ||
ಗಾಂಡೀವದಿಂದ ಹೊರಟ ವಜ್ರದ ಮಿಂಚುಗಳಿಗೆ ಸಮಾನ ಪ್ರಭೆಯುಳ್ಳ ಆ ನಾರಾಚಗಳೆಲ್ಲವನ್ನೂ ರಾಜಾ ಬಭ್ರುವಾಹನನು ಮೂರು ಮೂರು ಭಾಗಗಳನ್ನಾಗಿ ತುಂಡರಿಸಿದನು.
14078028a ತಸ್ಯ ಪಾರ್ಥಃ ಶರೈರ್ದಿವ್ಯೈರ್ಧ್ವಜಂ ಹೇಮಪರಿಷ್ಕೃತಮ್|
14078028c ಸುವರ್ಣತಾಲಪ್ರತಿಮಂ ಕ್ಷುರೇಣಾಪಾಹರದ್ರಥಾತ್||
ಪಾರ್ಥನು ದಿವ್ಯ ಕ್ಷುರಪ್ರ ಶರಗಳಿಂದ ಸುವರ್ಣತಾಲವೃಕ್ಷದಂತಿದ್ದ ಬಭ್ರುವಾಹನನ ಕಾಂಚನ ಧ್ವಜವನ್ನು ಅವನ ರಥದಿಂದ ಅಪಹರಿಸಿದನು.
14078029a ಹಯಾಂಶ್ಚಾಸ್ಯ ಮಹಾಕಾಯಾನ್ಮಹಾವೇಗಪರಾಕ್ರಮಾನ್|
14078029c ಚಕಾರ ರಾಜ್ಞೋ ನಿರ್ಜೀವಾನ್ಪ್ರಹಸನ್ಪಾಂಡವರ್ಷಭಃ||
ಪಾಂಡವರ್ಷಭನು ನಗುತ್ತಾ ರಾಜ ಬಭ್ರುವಾಹನನ ಮಹಾವೇಗಪರಾಕ್ರಮಗಳಿದ್ದ ಮಹಾಕಾಯದ ಕುದುರೆಗಳನ್ನು ಕೂಡ ನಿರ್ಜೀವಗೊಳಿಸಿದನು.
14078030a ಸ ರಥಾದವತೀರ್ಯಾಶು ರಾಜಾ ಪರಮಕೋಪನಃ|
14078030c ಪದಾತಿಃ ಪಿತರಂ ಕೋಪಾದ್ಯೋಧಯಾಮಾಸ ಪಾಂಡವಮ್||
ಪರಮ ಕುಪಿತನಾದ ರಾಜಾ ಬಭ್ರುವಾಹನನು ರಥದಿಂದ ಕೆಳಗಿಳಿದು ಪದಾತಿಯಾಗಿಯೇ ತಂದೆ ಪಾಂಡವ ಅರ್ಜುನನೊಡನೆ ಕೋಪದಿಂದ ಯುದ್ಧಮಾಡಿದನು.
14078031a ಸಂಪ್ರೀಯಮಾಣಃ ಪಾಂಡೂನಾಮೃಷಭಃ ಪುತ್ರವಿಕ್ರಮಾತ್|
14078031c ನಾತ್ಯರ್ಥಂ ಪೀಡಯಾಮಾಸ ಪುತ್ರಂ ವಜ್ರಧರಾತ್ಮಜಃ||
ಪಾಂಡುಗಳ ವೃಷಭ ವಜ್ರಧರಾತ್ಮಜನು ಮಗನ ವಿಕ್ರಮದಿಂದ ಸಂತುಷ್ಟನಾಗಿ ಮಗನನ್ನು ಹೆಚ್ಚು ಪೀಡಿಸಲಿಲ್ಲ.
14078032a ಸ ಹನ್ಯಮಾನೋ ವಿಮುಖಂ ಪಿತರಂ ಬಭ್ರುವಾಹನಃ|
14078032c ಶರೈರಾಶೀವಿಷಾಕಾರೈಃ ಪುನರೇವಾರ್ದಯದ್ಬಲೀ||
ಆಕ್ರಮಣ ಮಾಡದಿರುವುದನ್ನು ನೋಡಿ ತಂದೆಯು ವಿಮುಖನಾದನೆಂದೇ ತಿಳಿದು ಬಲಶಾಲೀ ಬಭ್ರುವಾಹನನು ಸರ್ಪದ ವಿಷದಂತಿದ್ದ ಶರಗಳಿಂದ ಪುನಃ ಅವನನ್ನು ಪ್ರಹರಿಸಿದನು.
14078033a ತತಃ ಸ ಬಾಲ್ಯಾತ್ಪಿತರಂ ವಿವ್ಯಾಧ ಹೃದಿ ಪತ್ರಿಣಾ|
14078033c ನಿಶಿತೇನ ಸುಪುಂಖೇನ ಬಲವದ್ಬಭ್ರುವಾಹನಃ||
ಆಗ ಬಾಲ್ಯತನದಿಂದ ಬಲವಂತನಾದ ಬಭ್ರುವಾಹನನು ಪುಂಖಗಳಿದ್ದ ನಿಶಿತ ಪತ್ರಿಯಿಂದ ತಂದೆಯ ಹೃದಯಕ್ಕೆ ಹೊಡೆದನು.
14078034a ಸ ಬಾಣಸ್ತೇಜಸಾ ದೀಪ್ತೋ ಜ್ವಲನ್ನಿವ ಹುತಾಶನಃ|
14078034c ವಿವೇಶ ಪಾಂಡವಂ ರಾಜನ್ಮರ್ಮ ಭಿತ್ತ್ವಾತಿದುಃಖಕೃತ್||
ರಾಜನ್! ಆ ಬಾಣವು ಉರಿಯುತ್ತಿರುವ ಬೆಂಕಿಯಂತೆ ತೇಜಸ್ಸಿನಿಂದ ಬೆಳಗುತ್ತಾ ಪಾಂಡವನ ಮರ್ಮವನ್ನು ಭೇದಿಸಿ ಒಳಹೊಕ್ಕು ಅತ್ಯಂತ ದುಃಖವನ್ನುಂಟುಮಾಡಿತು.
14078035a ಸ ತೇನಾತಿಭೃಶಂ ವಿದ್ಧಃ ಪುತ್ರೇಣ ಕುರುನಂದನಃ|
14078035c ಮಹೀಂ ಜಗಾಮ ಮೋಹಾರ್ತಸ್ತತೋ ರಾಜನ್ಧನಂಜಯಃ||
ರಾಜನ್! ಹಾಗೆ ಮಗನಿಂತ ಅತಿ ಜೋರಾಗಿ ಹೊಡೆಯಲ್ಪಟ್ಟ ಕುರುನಂದನ ಧನಂಜಯನು ಮೂರ್ಛಿತನಾಗಿ ನೆಲಕ್ಕುರುಳಿದನು.
14078036a ತಸ್ಮಿನ್ನಿಪತಿತೇ ವೀರೇ ಕೌರವಾಣಾಂ ಧುರಂಧರೇ|
14078036c ಸೋಽಪಿ ಮೋಹಂ ಜಗಾಮಾಶು ತತಶ್ಚಿತ್ರಾಂಗದಾಸುತಃ||
ಕೌರವರ ವೀರ ದುರಂಧರನು ಕೆಳಕ್ಕುರುಳಲು ಚಿತ್ರಾಂಗದನ ಮಗನೂ ಕೂಡ ಮೂರ್ಛಿತನಾದನು.
14078037a ವ್ಯಾಯಮ್ಯ ಸಂಯುಗೇ ರಾಜಾ ದೃಷ್ಟ್ವಾ ಚ ಪಿತರಂ ಹತಮ್|
14078037c ಪೂರ್ವಮೇವ ಚ ಬಾಣೌಘೈರ್ಗಾಢವಿದ್ಧೋಽರ್ಜುನೇನ ಸಃ||
ಮೊದಲೇ ಅರ್ಜುನನ ಬಾಣಸಂಘಗಳಿಂದ ಅತಿಯಾಗಿ ಗಾಯಗೊಂಡು ಬಳಲಿದ್ದ ರಾಜಾ ಬಭ್ರುವಾಹನನು ಯುದ್ಧದಲ್ಲಿ ತಂದೆಯು ಹತನಾದುದನ್ನು ನೋಡಿ ಮೂರ್ಛೆಹೋದನು.
14078038a ಭರ್ತಾರಂ ನಿಹತಂ ದೃಷ್ಟ್ವಾ ಪುತ್ರಂ ಚ ಪತಿತಂ ಭುವಿ|
14078038c ಚಿತ್ರಾಂಗದಾ ಪರಿತ್ರಸ್ತಾ ಪ್ರವಿವೇಶ ರಣಾಜಿರಮ್||
ಪತಿಯು ಹತನಾದುದನ್ನು ಮತ್ತು ಮಗನು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಪರಿತಪಿಸಿದ ಚಿತ್ರಾಂಗದೆಯು ರಣಾಂಗಣವನ್ನು ಪ್ರವೇಶಿಸಿದಳು.
14078039a ಶೋಕಸಂತಪ್ತಹೃದಯಾ ರುದತೀ ಸಾ ತತಃ ಶುಭಾ|
14078039c ಮಣಿಪೂರಪತೇರ್ಮಾತಾ ದದರ್ಶ ನಿಹತಂ ಪತಿಮ್||
ಶೋಕಸಂತಪ್ತಹೃದಯಿಯಾಗಿ ರೋದಿಸುತ್ತಿದ್ದ ಆ ಶುಭೆ ಮಣಿಪೂರಪತಿಯ ಮಾತೆಯು ತನ್ನ ಪತಿಯು ಹತನಾಗಿರುವುದನ್ನು ನೋಡಿದಳು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಬಭ್ರುವಾಹನಯುದ್ಧೇ ಅಷ್ಟಸಪ್ತತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಬಭ್ರುವಾಹನಯುದ್ಧ ಎನ್ನುವ ಎಪ್ಪತ್ತೆಂಟನೇ ಅಧ್ಯಾಯವು.