Ashvamedhika Parva: Chapter 77

ಅಶ್ವಮೇಧಿಕ ಪರ್ವ

೭೭

ಸೈಂಧವ ಸೇನೆಯ ಪರಾಜಯ (೧-೨೧). ದುಃಶಲೆಯು ತನ್ನ ಮೊಮ್ಮಗನನ್ನು ಕರೆದುಕೊಂಡು ರಣಭೂಮಿಗೆ ಶರಣಾರ್ಥಿಯಾಗಿ ಬಂದುದು (೨೨-೩೮). ಅರ್ಜುನನು ದುಃಶಲೆಯನ್ನು ಸಂತವಿಸಿ ಕಳುಹಿಸಿಕೊಟ್ಟು ಅಶ್ವವನ್ನು ಅನುಸರಿಸಿ ಮಣಿಪುರವನ್ನು ತಲುಪಿದುದು (೩೯-೪೬).

14077001 ವೈಶಂಪಾಯನ ಉವಾಚ

14077001a ತತೋ ಗಾಂಡೀವಭೃಚ್ಚೂರೋ ಯುದ್ಧಾಯ ಸಮವಸ್ಥಿತಃ|

14077001c ವಿಬಭೌ ಯುಧಿ ದುರ್ಧರ್ಷೋ ಹಿಮವಾನಚಲೋ ಯಥಾ||

ವೈಶಂಪಾಯನನು ಹೇಳಿದನು: “ಯುದ್ಧದಲ್ಲಿ ತೊಡಗಿದ್ದ ಆ ಗಾಂಡೀವಧಾರೀ ಶೂರ ದುರ್ಧರ್ಷ ಅರ್ಜುನನು ಹಿಮವತ್ಪರ್ವತದಂತೆ ಅಚಲನಾಗಿ ಪ್ರಕಾಶಿಸುತ್ತಿದ್ದನು.

14077002a ತತಃ ಸೈಂಧವಯೋಧಾಸ್ತೇ ಪುನರೇವ ವ್ಯವಸ್ಥಿತಾಃ|

14077002c ವಿಮುಂಚಂತಃ ಸುಸಂರಬ್ಧಾಃ ಶರವರ್ಷಾಣಿ ಭಾರತ||

ಭಾರತ! ಪುನಃ ಸುಸಜ್ಜಿತರಾದ ಸೈಂಧವಯೋಧರು ಕೋಪದಿಂದ ಶರವರ್ಷಗಳನ್ನು ಸುರಿಸತೊಡಗಿದರು.

14077003a ತಾನ್ಪ್ರಸಹ್ಯ ಮಹಾವೀರ್ಯಃ ಪುನರೇವ ವ್ಯವಸ್ಥಿತಾನ್|

14077003c ತತಃ ಪ್ರೋವಾಚ ಕೌಂತೇಯೋ ಮುಮೂರ್ಷೂನ್ಶ್ಲಕ್ಷ್ಣಯಾ ಗಿರಾ||

ಪುನಃ ಯುದ್ಧಕ್ಕೆ ಸಿದ್ಧರಾಗಿ ನಿಂತಿರುವ ಅವರನ್ನು ನೋಡಿ ಮಹಾವೀರ್ಯ ಕೌಂತೇಯನು ಗಟ್ಟಿಯಾಗಿ ನಗುತ್ತಾ ಮಧುರ ಧ್ವನಿಯಲ್ಲಿ ಈ ಮಾತುಗಳನ್ನಾಡಿದನು:

14077004a ಯುಧ್ಯಧ್ವಂ ಪರಯಾ ಶಕ್ತ್ಯಾ ಯತಧ್ವಂ ಚ ವಧೇ ಮಮ|

14077004c ಕುರುಧ್ವಂ ಸರ್ವಕಾರ್ಯಾಣಿ ಮಹದ್ವೋ ಭಯಮಾಗತಮ್||

“ಪರಮ ಶಕ್ತಿಯಿಂದ ಯುದ್ಧಮಾಡಿರಿ. ನನ್ನನ್ನು ವಧಿಸಲು ಪ್ರಯತ್ನಿಸಿ. ಮಹಾಭಯವು ಉಂಟಾಗಿರುವ ನೀವು ಸರ್ವಕಾರ್ಯಗಳನ್ನೂ ಮುಗಿಸಿ ಬನ್ನಿರಿ!

14077005a ಏಷ ಯೋತ್ಸ್ಯಾಮಿ ವಃ ಸರ್ವಾನ್ನಿವಾರ್ಯ ಶರವಾಗುರಾಮ್|

14077005c ತಿಷ್ಠಧ್ವಂ ಯುದ್ಧಮನಸೋ ದರ್ಪಂ ವಿನಯಿತಾಸ್ಮಿ ವಃ||

ನಿಮ್ಮ ಎಲ್ಲ ಶರಜಾಲಗಳನ್ನೂ ತುಂಡರಿಸಿ ಯುದ್ಧಮಾಡುತ್ತೇನೆ. ಯುದ್ಧದಲ್ಲಿಯೇ ಮನಸ್ಸನ್ನಿಟ್ಟುಕೊಂಡು ನಿಲ್ಲಿರಿ. ನಿಮ್ಮ ದರ್ಪವನ್ನು ನೀಗಿಸುತ್ತೇನೆ!”

14077006a ಏತಾವದುಕ್ತ್ವಾ ಕೌರವ್ಯೋ ರುಷಾ ಗಾಂಡೀವಭೃತ್ತದಾ|

14077006c ತತೋಽಥ ವಚನಂ ಸ್ಮೃತ್ವಾ ಭ್ರಾತುರ್ಜ್ಯೇಷ್ಠಸ್ಯ ಭಾರತ||

14077007a ನ ಹಂತವ್ಯಾ ರಣೇ ತಾತ ಕ್ಷತ್ರಿಯಾ ವಿಜಿಗೀಷವಃ|

14077007c ಜೇತವ್ಯಾಶ್ಚೇತಿ ಯತ್ಪ್ರ್ರೋಕ್ತಂ ಧರ್ಮರಾಜ್ಞಾ ಮಹಾತ್ಮನಾ|

ಭಾರತ! ರೋಷದಿಂದ ಹೀಗೆ ಹೇಳಿದ ಗಾಂಡೀವಧಾರೀ ಕೌರವ್ಯನಿಗೆ ಆಗ ಹಿರಿಯಣ್ಣನ ಮಾತುಗಳು ಸ್ಮರಣೆಗೆ ಬಂದವು. “ಮಗೂ! ರಣದಲ್ಲಿ ವಿಜಯೇಚ್ಛುಗಳಾದ ಕ್ಷತ್ರಿಯರನ್ನು ಕೊಲ್ಲಬಾರದು. ಅವರನ್ನು ಜಯಿಸಬೇಕು!” ಎಂದು ಮಹಾತ್ಮ ಧರ್ಮರಾಜನು ಹೇಳಿದ್ದನು.

14077007e ಚಿಂತಯಾಮಾಸ ಚ ತದಾ ಫಲ್ಗುನಃ ಪುರುಷರ್ಷಭಃ||

14077008a ಇತ್ಯುಕ್ತೋಽಹಂ ನರೇಂದ್ರೇಣ ನ ಹಂತವ್ಯಾ ನೃಪಾ ಇತಿ|

14077008c ಕಥಂ ತನ್ನ ಮೃಷೇಹ ಸ್ಯಾದ್ಧರ್ಮರಾಜವಚಃ ಶುಭಮ್||

14077009a ನ ಹನ್ಯೇರಂಶ್ಚ ರಾಜಾನೋ ರಾಜ್ಞಶ್ಚಾಜ್ಞಾ ಕೃತಾ ಭವೇತ್|

 “ನೃಪರನ್ನು ಕೊಲ್ಲಬೇಡ! ಎಂದು ರಾಜನು ಹೇಳಿದ್ದನು. ಧರ್ಮರಾಜನ ಆ ಶುಭವಚನವು ಸುಳ್ಳಾಗದಂತೆ ನಾನು ಹೇಗೆ ನಡೆದುಕೊಳ್ಳಲಿ? ರಾಜರನ್ನು ಕೊಲ್ಲಬಾರದೆಂಬ ರಾಜನ ಆಜ್ಞೆಯನ್ನು ಹೇಗೆ ಪೂರೈಸಲಿ?” ಎಂದು ಆಗ ಪುರುಷರ್ಷಭ ಫಲ್ಗುನನು ಚಿಂತಿಸತೊಡಗಿದನು.

14077009c ಇತಿ ಸಂಚಿಂತ್ಯ ಸ ತದಾ ಭ್ರಾತುಃ ಪ್ರಿಯಹಿತೇ ರತಃ||

14077009e ಪ್ರೋವಾಚ ವಾಕ್ಯಂ ಧರ್ಮಜ್ಞಃ ಸೈಂಧವಾನ್ಯುದ್ಧದುರ್ಮದಾನ್||

ಅಣ್ಣನಿಗೆ ಪ್ರಿಯವಾದುದನ್ನು ಮಾಡುವುದರಲ್ಲಿಯೇ ನಿರತನಾಗಿದ್ದ ಧರ್ಮಜ್ಞ ಅರ್ಜುನನು ಹೀಗೆ ಆಲೋಚಿಸಿ ಯುದ್ಧದುರ್ಮದ ಸೈಂಧವರಿಗೆ ಈ ಮಾತನ್ನಾಡಿದನು:

14077010a ಬಾಲಾನ್ ಸ್ತ್ರಿಯೋ ವಾ ಯುಷ್ಮಾಕಂ ನ ಹನಿಷ್ಯೇ ವ್ಯವಸ್ಥಿತಾನ್|

14077010c ಯಶ್ಚ ವಕ್ಷ್ಯತಿ ಸಂಗ್ರಾಮೇ ತವಾಸ್ಮೀತಿ ಪರಾಜಿತಃ||

“ಸಂಗ್ರಾಮದಲ್ಲಿ ನಿಂತಿರುವ ನಿಮ್ಮಲ್ಲಿ ಬಾಲಕರನ್ನೂ ಅಥವಾ ಸ್ತ್ರೀಯರನ್ನೂ ನಾನು ಸಂಹರಿಸುವುದಿಲ್ಲ. ಹಾಗೆಯೇ ಸೋತು ನಿನ್ನವರಾಗಿದ್ದೇವೆ ಎನ್ನುವವರನ್ನೂ ನಾನು ಕೊಲ್ಲುವುದಿಲ್ಲ!

14077011a ಏತಚ್ಚ್ರುತ್ವಾ ವಚೋ ಮಹ್ಯಂ ಕುರುಧ್ವಂ ಹಿತಮಾತ್ಮನಃ|

14077011c ಅತೋಽನ್ಯಥಾ ಕೃಚ್ಚ್ರಗತಾ ಭವಿಷ್ಯಥ ಮಯಾರ್ದಿತಾಃ||

ನನ್ನ ಈ ಮಾತನ್ನು ಕೇಳಿ ನಿಮಗೆ ಹಿತವೆನಿಸಿದಂತೆ ಮಾಡಿ. ಅನ್ಯಥಾ ನನ್ನಿಂದ ಪೆಟ್ಟುತಿಂದು ಕಷ್ಟವನ್ನು ಅನುಭವಿಸಬೇಕಾಗುತ್ತದೆ!”

14077012a ಏವಮುಕ್ತ್ವಾ ತು ತಾನ್ವೀರಾನ್ಯುಯುಧೇ ಕುರುಪುಂಗವಃ|

14077012c ಅತ್ವರಾವಾನಸಂರಬ್ಧಃ ಸಂರಬ್ಧೈರ್ವಿಜಿಗೀಷುಭಿಃ||

ಹೀಗೆ ಹೇಳಿ ಅತಿಕ್ರುದ್ಧನಾದ ಕುರುಪುಂಗವನು ಕ್ರುದ್ಧರಾಗಿ ವಿಜಯವನ್ನೇ ಬಯಸಿದ್ದ ಆ ವೀರರೊಂದಿಗೆ ಯುದ್ಧದಲ್ಲಿ ತೊಡಗಿದನು.

14077013a ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಮ್|

14077013c ಮುಮುಚುಃ ಸೈಂಧವಾ ರಾಜಂಸ್ತದಾ ಗಾಂಡೀವಧನ್ವನಿ||

ರಾಜನ್! ಆಗ ಗಂಡೀವಧನ್ವಿಯ ಮೇಲೆ ಸೈಂಧವರು ನೂರುಸಾವಿರ ನತಪರ್ವ ಶರಗಳನ್ನು ಪ್ರಯೋಗಿಸಿದರು.

14077014a ಸ ತಾನಾಪತತಃ ಕ್ರೂರಾನಾಶೀವಿಷವಿಷೋಪಮಾನ್|

14077014c ಚಿಚ್ಚೇದ ನಿಶಿತೈರ್ಬಾಣೈರಂತರೈವ ಧನಂಜಯಃ||

ತನ್ನ ಮೇಲೆ ಬೀಳುತ್ತಿದ್ದ ಆ ಕ್ರೂರ ಸರ್ಪಗಳ ವಿಷಗಳಂತಿದ್ದ ಬಾಣಗಳನ್ನು ಧನಂಜಯನು ಅವುಗಳು ಬೀಳುವುದರೊಳಗೇ ನಿಶಿತ ಬಾಣಗಳಿಂದ ತುಂಡರಿಸಿದನು.

14077015a ಚಿತ್ತ್ವಾ ತು ತಾನಾಶುಗಮಾನ್ಕಂಕಪತ್ರಾನ್ಶಿಲಾಶಿತಾನ್|

14077015c ಏಕೈಕಮೇಷ ದಶಭಿರ್ಬಿಭೇದ ಸಮರೇ ಶರೈಃ||

ವೇಗದಿಂದ ಬರುತ್ತಿದ್ದ ಆ ಶಿಲಾಶಿತ ಕಂಕಪತ್ರಗಳನ್ನು ಕತ್ತರಿಸಿ ಅವನು ಸಮರದಲ್ಲಿ ಒಬ್ಬೊಬ್ಬರನ್ನೂ ಹತ್ತು-ಹತ್ತು ಶರಗಳಿಂದ ಹೊಡೆದನು.

14077016a ತತಃ ಪ್ರಾಸಾಂಶ್ಚ ಶಕ್ತೀಶ್ಚ ಪುನರೇವ ಧನಂಜಯೇ|

14077016c ಜಯದ್ರಥಂ ಹತಂ ಸ್ಮೃತ್ವಾ ಚಿಕ್ಷಿಪುಃ ಸೈಂಧವಾ ನೃಪಾಃ||

ಆಗ ಜಯದ್ರಥನ ಮರಣವನ್ನು ಸ್ಮರಿಸಿಕೊಳ್ಳುತ್ತಾ ಸೈಂಧವ ನೃಪರು ಧನಂಜಯನ ಮೇಲೆ ಪುನಃ ಪ್ರಾಸಗಳನ್ನೂ ಶಕ್ತಿಗಳನ್ನೂ ಪ್ರಯೋಗಿಸಿದರು.

14077017a ತೇಷಾಂ ಕಿರೀಟೀ ಸಂಕಲ್ಪಂ ಮೋಘಂ ಚಕ್ರೇ ಮಹಾಮನಾಃ|

14077017c ಸರ್ವಾಂಸ್ತಾನಂತರಾ ಚಿತ್ತ್ವಾ ಮುದಾ ಚುಕ್ರೋಶ ಪಾಂಡವಃ||

ಅವೆಲ್ಲವನ್ನೂ ಮಧ್ಯದಲ್ಲಿಯೇ ತುಂಡರಿಸಿ ಅವರ ಸಂಕಲ್ಪವನ್ನು ನಿಷ್ಫಲಗೊಳಿಸಿದ ಮಹಾಮನಸ್ವಿ ಕಿರೀಟೀ ಪಾಂಡವನು ಸಂತೋಷದಿಂದ ಗರ್ಜಿಸಿದನು.

14077018a ತಥೈವಾಪತತಾಂ ತೇಷಾಂ ಯೋಧಾನಾಂ ಜಯಗೃದ್ಧಿನಾಮ್|

14077018c ಶಿರಾಂಸಿ ಪಾತಯಾಮಾಸ ಭಲ್ಲೈಃ ಸಂನತಪರ್ವಭಿಃ||

ಹಾಗೆಯೇ ತನ್ನ ಮೇಲೆ ಆಕ್ರಮಣಿಸುತ್ತಿದ್ದ ಜಯೈಶೀ ಯೋಧರ ಶಿರಗಳನ್ನು ಸನ್ನತಪರ್ವ ಭಲ್ಲಗಳಿಂದ ಕೆಳಗುರುಳಿಸಿದನು.

14077019a ತೇಷಾಂ ಪ್ರದ್ರವತಾಂ ಚೈವ ಪುನರೇವ ಚ ಧಾವತಾಮ್|

14077019c ನಿವರ್ತತಾಂ ಚ ಶಬ್ದೋಽಭೂತ್ಪೂರ್ಣಸ್ಯೇವ ಮಹೋದಧೇಃ||

ಅವರು ಪಲಾಯನ ಮಾಡುತ್ತಿರುವ ಮತ್ತು ಪುನಃ ಓಡಿ ಹಿಂದಿರುಗಿ ಬರುವ ಶಬ್ಧವು ಉಕ್ಕಿಬರುವ ಸಮುದ್ರದ ಶಬ್ಧದಂತೆಯೇ ಜೋರಾಗಿತ್ತು.

14077020a ತೇ ವಧ್ಯಮಾನಾಸ್ತು ತದಾ ಪಾರ್ಥೇನಾಮಿತತೇಜಸಾ|

14077020c ಯಥಾಪ್ರಾಣಂ ಯಥೋತ್ಸಾಹಂ ಯೋಧಯಾಮಾಸುರರ್ಜುನಮ್||

ಅಮಿತತೇಜಸ್ವೀ ಪಾರ್ಥನು ಅವರನ್ನು ಸಂಹರಿಸುತ್ತಿದ್ದರೂ, ಅವರು ಪ್ರಾಣವಿದ್ದಷ್ಟೂ ಉತ್ಸಾಹವಿದ್ದಷ್ಟೂ ಅರ್ಜುನನೊಡನೆ ಯುದ್ಧಮಾಡತೊಡಗಿದರು.

14077021a ತತಸ್ತೇ ಫಲ್ಗುನೇನಾಜೌ ಶರೈಃ ಸಂನತಪರ್ವಭಿಃ|

14077021c ಕೃತಾ ವಿಸಂಜ್ಞಾ ಭೂಯಿಷ್ಠಾಃ ಕ್ಲಾಂತವಾಹನಸೈನಿಕಾಃ||

ಆಗ ಫಲ್ಗುನನು ಸನ್ನತಪರ್ವ ಶರಗಳಿಂದ ಅವರನ್ನು ಮೂರ್ಛೆಗೊಳಿಸಿದನು. ವಾಹನ-ಸೈನಿಕರೂ ಬಹಳವಾಗಿ ಬಳಲಿದ್ದರು.

14077022a ತಾಂಸ್ತು ಸರ್ವಾನ್ಪರಿಗ್ಲಾನಾನ್ವಿದಿತ್ವಾ ಧೃತರಾಷ್ಟ್ರಜಾ|

14077022c ದುಃಶಲಾ ಬಾಲಮಾದಾಯ ನಪ್ತಾರಂ ಪ್ರಯಯೌ ತದಾ|

14077022e ಸುರಥಸ್ಯ ಸುತಂ ವೀರಂ ರಥೇನಾನಾಗಸಂ ತದಾ||

14077023a ಶಾಂತ್ಯರ್ಥಂ ಸರ್ವಯೋಧಾನಾಮಭ್ಯಗಚ್ಚತ ಪಾಂಡವಮ್|

ಅವರೆಲ್ಲರೂ ದಣಿದಿರುವುದನ್ನು ತಿಳಿದ ಧೃತರಾಷ್ಟ್ರನ ಮಗಳು ದುಃಶಲೆಯು ತನ್ನ ಮೊಮ್ಮಗ - ವೀರ ಸುರಥನ ಮಗ - ಬಾಲಕನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಸರ್ವಯೋಧರ ಶಾಂತಿಗಾಗಿ ಪಾಂಡವನಿದ್ದಲ್ಲಿಗೆ ಆಗಮಿಸಿದಳು.

14077023c ಸಾ ಧನಂಜಯಮಾಸಾದ್ಯ ಮುಮೋಚಾರ್ತಸ್ವರಂ ತದಾ|

14077023e ಧನಂಜಯೋಽಪಿ ತಾಂ ದೃಷ್ಟ್ವಾ ಧನುರ್ವಿಸಸೃಜೇ ಪ್ರಭುಃ||

ಧನಂಜಯನ ಬಳಿಸಾರಿ ಅವಳು ಆರ್ತಸ್ವರದಲ್ಲಿ ಅಳತೊಡಗಿದಳು. ಪ್ರಭು ಧನಂಜಯನೂ ಕೂಡ ಅವಳನ್ನು ನೋಡಿ ಧನುಸ್ಸನ್ನು ಬಿಸುಟನು.

14077024a ಸಮುತ್ಸೃಷ್ಟಧನುಃ ಪಾರ್ಥೋ ವಿಧಿವದ್ ಭಗಿನೀಂ ತದಾ|

14077024c ಪ್ರಾಹ ಕಿಂ ಕರವಾಣೀತಿ ಸಾ ಚ ತಂ ವಾಕ್ಯಮಬ್ರವೀತ್||

ಧನುಸ್ಸನ್ನು ಬದಿಗಿಟ್ಟು ಪಾರ್ಥನು ವಿಧಿವತ್ತಾಗಿ ತಂಗಿಗೆ “ಏನು ಮಾಡಬೇಕು?” ಎಂದು ಕೇಳಿದನು. ಅವಳು ಅವನಿಗೆ ಈ ಮಾತನ್ನಾಡಿದಳು:

14077025a ಏಷ ತೇ ಭರತಶ್ರೇಷ್ಠ ಸ್ವಸ್ರೀಯಸ್ಯಾತ್ಮಜಃ ಶಿಶುಃ|

14077025c ಅಭಿವಾದಯತೇ ವೀರ ತಂ ಪಶ್ಯ ಪುರುಷರ್ಷಭ||

“ಭರತಶ್ರೇಷ್ಠ! ಪುರುಷರ್ಷಭ! ವೀರ! ಇವನು ನಿನ್ನ ತಂಗಿಯ ಮಗನ ಮಗನು. ಈ ಶಿಶುವು ನಿನಗೆ ನಮಸ್ಕರಿಸುತ್ತಿದ್ದಾನೆ ನೋಡು!”

14077026a ಇತ್ಯುಕ್ತಸ್ತಸ್ಯ ಪಿತರಂ ಸ ಪಪ್ರಚ್ಚಾರ್ಜುನಸ್ತದಾ|

14077026c ಕ್ವಾಸಾವಿತಿ ತತೋ ರಾಜನ್ ದುಃಶಲಾ ವಾಕ್ಯಮಬ್ರವೀತ್||

ಅವಳು ಹೀಗೆ ಹೇಳಲು ಅರ್ಜುನನು “ಇವನ ತಂದೆಯೆಲ್ಲಿರುವನು?” ಎಂದು ಕೇಳಿದನು. ರಾಜನ್! ಅದಕ್ಕೆ ದುಃಶಲೆಯು ಹೀಗೆ ಹೇಳಿದಳು:

14077027a ಪಿತೃಶೋಕಾಭಿಸಂತಪ್ತೋ ವಿಷಾದಾರ್ತೋಽಸ್ಯ ವೈ ಪಿತಾ|

14077027c ಪಂಚತ್ವಮಗಮದ್ವೀರ ಯಥಾ ತನ್ ಮೇ ನಿಬೋಧ ಹ||

“ವೀರ! ಇವನ ತಂದೆಯು ಪಿತೃಶೋಕದಿಂದ ಸಂತಪ್ತನಾಗಿ ವಿಷಾದದಿಂದ ಆರ್ತನಾಗಿ ಮೃತ್ಯುವಶನಾದನು. ನಾನು ಹೇಳುವುದನ್ನು ಕೇಳು.

14077028a ಸ ಪೂರ್ವಂ ಪಿತರಂ ಶ್ರುತ್ವಾ ಹತಂ ಯುದ್ಧೇ ತ್ವಯಾನಘ|

14077028c ತ್ವಾಮಾಗತಂ ಚ ಸಂಶ್ರುತ್ಯ ಯುದ್ಧಾಯ ಹಯಸಾರಿಣಮ್|

14077028e ಪಿತುಶ್ಚ ಮೃತ್ಯುದುಃಖಾರ್ತೋಽಜಹಾತ್ಪ್ರಾಣಾನ್ ಧನಂಜಯ||

ಅನಘ! ಹಿಂದೆ ನಿನ್ನಿಂದ ಯುದ್ಧದಲ್ಲಿ ತಂದೆಯು ಹತನಾದುದನ್ನು ಅವನು ಕೇಳಿದ್ದನು. ಧನಂಜಯ! ಈಗ ನೀನು ಕುದುರೆಯನ್ನು ಹಿಂಬಾಲಿಸಿ ಯುದ್ಧಕ್ಕೆ ಬಂದಿರುವುದನ್ನು ಕೇಳಿ ತಂದೆಯ ಮೃತ್ಯುವಿನ ದುಃಖದಿಂದ ಆರ್ತನಾಗಿ ಪ್ರಾಣವನ್ನೇ ತೊರೆದುಬಿಟ್ಟನು.

14077029a ಪ್ರಾಪ್ತೋ ಬೀಭತ್ಸುರಿತ್ಯೇವ ನಾಮ ಶ್ರುತ್ವೈವ ತೇಽನಘ|

14077029c ವಿಷಾದಾರ್ತಃ ಪಪಾತೋರ್ವ್ಯಾಂ ಮಮಾರ ಚ ಮಮಾತ್ಮಜಃ||

ಅನಘ! ಬೀಭತ್ಸುವು ಇಲ್ಲಿಗೆ ಬಂದಿದ್ದಾನೆ ಎಂದು ನಿನ್ನ ಹೆಸರನ್ನು ಕೇಳುತ್ತಲೇ ವಿಶಾದಾರ್ತನಾಗಿ ನನ್ನ ಮಗನು ಭೂಮಿಯ ಮೇಲೆ ಬಿದ್ದು ಮರಣಹೊಂದಿದನು.

14077030a ತಂ ತು ದೃಷ್ಟ್ವಾ ನಿಪತಿತಂ ತತಸ್ತಸ್ಯಾತ್ಮಜಂ ವಿಭೋ|

14077030c ಗೃಹೀತ್ವಾ ಸಮನುಪ್ರಾಪ್ತಾ ತ್ವಾಮದ್ಯ ಶರಣೈಷಿಣೀ||

ವಿಭೋ! ಅವನು ಕೆಳಗುರುಳಿದುದನ್ನು ನೋಡಿ ಅವನ ಮಗನನ್ನು ಕರೆದುಕೊಂಡು ಶರಣಾರ್ಥಿಯಾಗಿ ನಿನ್ನ ಬಳಿ ಬಂದಿದ್ದೇನೆ.”

14077031a ಇತ್ಯುಕ್ತ್ವಾರ್ತಸ್ವರಂ ಸಾ ತು ಮುಮೋಚ ಧೃತರಾಷ್ಟ್ರಜಾ|

14077031c ದೀನಾ ದೀನಂ ಸ್ಥಿತಂ ಪಾರ್ಥಮಬ್ರವೀಚ್ಚಾಪ್ಯಧೋಮುಖಮ್||

ಹೀಗೆ ಹೇಳಿ ಧೃತರಾಷ್ಟ್ರಜೆಯು ಆರ್ತಸ್ವರದಲ್ಲಿ ರೋದಿಸಿದಳು. ಮುಖಕೆಳಗೆ ಮಾಡಿಕೊಂಡು ದೀನನಾಗಿ ನಿಂತಿದ್ದ ಪಾರ್ಥನಿಗೆ ಆ ದೀನಳು ಹೇಳಿದಳು:

14077032a ಸ್ವಸಾರಂ ಮಾಮವೇಕ್ಷಸ್ವ ಸ್ವಸ್ರೀಯಾತ್ಮಜಮೇವ ಚ|

14077032c ಕರ್ತುಮರ್ಹಸಿ ಧರ್ಮಜ್ಞ ದಯಾಂ ಮಯಿ ಕುರೂದ್ವಹ|

14077032e ವಿಸ್ಮೃತ್ಯ ಕುರುರಾಜಾನಂ ತಂ ಚ ಮಂದಂ ಜಯದ್ರಥಮ್||

“ಕುರೂದ್ವಹ! ಧರ್ಮಜ್ಞ! ನಿನ್ನ ತಂಗಿಯನ್ನು ನೋಡು. ಮತ್ತು ನಿನ್ನ ತಂಗಿಯ ಮೊಮ್ಮಗನನ್ನು ನೋಡು. ಕುರುರಾಜ ದುರ್ಯೋಧನ ಮತ್ತು ಮೂಢಮತಿ ಜಯದ್ರಥರನ್ನು ಮರೆತು ನನ್ನ ಮೇಲೆ ದಯೆತೋರಿಸಬೇಕು.

14077033a ಅಭಿಮನ್ಯೋರ್ಯಥಾ ಜಾತಃ ಪರಿಕ್ಷಿತ್ಪರವೀರಹಾ|

14077033c ತಥಾಯಂ ಸುರಥಾಜ್ಜಾತೋ ಮಮ ಪೌತ್ರೋ ಮಹಾಭುಜ||

ಪರವೀರಹ ಪರಿಕ್ಷಿತನು ಅಭಿಮನ್ಯುವಿಗೆ ಹೇಗೆ ಹುಟ್ಟಿದನೋ ಹಾಗೆಯೇ ಈ ಮಹಾಭುಜನು ನನ್ನ ಮಗ ಸುರಥನಿಗೆ ಹುಟ್ಟಿದ ಮೊಮ್ಮಗನು.

14077034a ತಮಾದಾಯ ನರವ್ಯಾಘ್ರ ಸಂಪ್ರಾಪ್ತಾಸ್ಮಿ ತವಾಂತಿಕಮ್|

14077034c ಶಮಾರ್ಥಂ ಸರ್ವಯೋಧಾನಾಂ ಶೃಣು ಚೇದಂ ವಚೋ ಮಮ||

ನರವ್ಯಾಘ್ರ! ಸರ್ವಯೋಧರ ಶಾಂತಿಗಾಗಿ ಇವನನ್ನು ಕರೆದುಕೊಂಡು ನಿನ್ನ ಬಳಿ ಬಂದಿರುವೆನು. ನನ್ನ ಈ ಮಾತನ್ನು ಕೇಳು.

14077035a ಆಗತೋಽಯಂ ಮಹಾಬಾಹೋ ತಸ್ಯ ಮಂದಸ್ಯ ಪೌತ್ರಕಃ|

14077035c ಪ್ರಸಾದಮಸ್ಯ ಬಾಲಸ್ಯ ತಸ್ಮಾತ್ತ್ವಂ ಕರ್ತುಮರ್ಹಸಿ||

ಮಹಾಬಾಹೋ! ಆ ಮಂದ ಜಯದ್ರಥನ ಮೊಮ್ಮಗನು ಇಗೋ ಇಲ್ಲಿಗೆ ಬಂದಿದ್ದಾನೆ. ಆದುದರಿಂದ ಈ ಬಾಲಕನ ಮೇಲೆ ನೀನು ಕರುಣೆತೋರಿಸಬೇಕು.

14077036a ಏಷ ಪ್ರಸಾದ್ಯ ಶಿರಸಾ ಮಯಾ ಸಾರ್ಧಮರಿಂದಮ|

14077036c ಯಾಚತೇ ತ್ವಾಂ ಮಹಾಬಾಹೋ ಶಮಂ ಗಚ್ಚ ಧನಂಜಯ||

ಅರಿಂದಮ! ಮಹಾಬಾಹೋ! ಧನಂಜಯ! ನನ್ನೊಡನೆ ಇವನು ನಿನಗೆ ಶಿರಬಾಗಿ ನಮಸ್ಕರಿಸುತ್ತಿದ್ದಾನೆ. ಕರುಣೆಯನ್ನು ಕೇಳುತ್ತಿದ್ದಾನೆ. ಶಾಂತನಾಗಿ ಹೋಗು!

14077037a ಬಾಲಸ್ಯ ಹತಬಂಧೋಶ್ಚ ಪಾರ್ಥ ಕಿಂ ಚಿದಜಾನತಃ|

14077037c ಪ್ರಸಾದಂ ಕುರು ಧರ್ಮಜ್ಞ ಮಾ ಮನ್ಯುವಶಮನ್ವಗಾಃ||

ಪಾರ್ಥ! ಧರ್ಮಜ್ಞ! ಬಂಧುಗಳನ್ನು ಕಳೆದುಕೊಂಡಿರುವ ಏನನ್ನೂ ತಿಳಿಯದಿರುವ ಈ ಬಾಲಕನ ಮೇಲೆ ಕರುಣೆತೋರು. ಕೋಪವಶನಾಗಬೇಡ!

14077038a ತಮನಾರ್ಯಂ ನೃಶಂಸಂ ಚ ವಿಸ್ಮೃತ್ಯಾಸ್ಯ ಪಿತಾಮಹಮ್|

14077038c ಆಗಸ್ಕಾರಿಣಮತ್ಯರ್ಥಂ ಪ್ರಸಾದಂ ಕರ್ತುಮರ್ಹಸಿ||

ಇವನ ಅಜ್ಜನಾದ ಜಯದ್ರಥನ ಅನಾರ್ಯ ಕ್ರೂರತನವನ್ನು ಮತ್ತು ನಿಮಗೆಸಗಿದ ಅಪರಾಧಗಳನ್ನು ಮರೆತು ಇವನ ಮೇಲೆ ಕೃಪೆತೋರಬೇಕು!”

14077039a ಏವಂ ಬ್ರುವತ್ಯಾಂ ಕರುಣಂ ದುಃಶಲಾಯಾಂ ಧನಂಜಯಃ|

14077039c ಸಂಸ್ಮೃತ್ಯ ದೇವೀಂ ಗಾಂಧಾರೀಂ ಧೃತರಾಷ್ಟ್ರಂ ಚ ಪಾರ್ಥಿವಮ್|

14077039e ಪ್ರೋವಾಚ ದುಃಖಶೋಕಾರ್ತಃ ಕ್ಷತ್ರಧರ್ಮಂ ವಿಗರ್ಹಯನ್||

ದುಃಶಲೆಯು ಈ ರೀತಿ ಕರುಣಾಜನಕ ಮಾತುಗಳನ್ನು ಹೇಳುತ್ತಿರಲು ಧನಂಜಯನು ದೇವೀ ಗಾಂಧಾರಿ ಮತ್ತು ಪಾರ್ಥಿವ ಧೃತರಾಷ್ಟ್ರರನ್ನು ಸ್ಮರಿಸಿಕೊಂಡು ದುಃಖಶೋಕಾರ್ತನಾಗಿ ಕ್ಷತ್ರಧರ್ಮವನ್ನೇ ನಿಂದಿಸಿ ಈ ಮಾತನ್ನಾಡಿದನು:

14077040a ಧಿಕ್ತಂ ದುರ್ಯೋಧನಂ ಕ್ಷುದ್ರಂ ರಾಜ್ಯಲುಬ್ಧಂ ಚ ಮಾನಿನಮ್|

14077040c ಯತ್ಕೃತೇ ಬಾಂಧವಾಃ ಸರ್ವೇ ಮಯಾ ನೀತಾ ಯಮಕ್ಷಯಮ್||

“ನಾನು ಸರ್ವ ಬಾಂಧವರನ್ನೂ ಯಮಕ್ಷಯಕ್ಕೆ ಕಳುಹಿಸುವಂತೆ ಮಾಡಿದ ಆ ಮಾನಿನಿ ರಾಜ್ಯಲೋಭೀ ಕ್ಷುದ್ರ ದುರ್ಯೋಧನನಿಗೆ ಧಿಕ್ಕಾರ!”

14077041a ಇತ್ಯುಕ್ತ್ವಾ ಬಹು ಸಾಂತ್ವಾದಿ ಪ್ರಸಾದಮಕರೋಜ್ಜಯಃ|

14077041c ಪರಿಷ್ವಜ್ಯ ಚ ತಾಂ ಪ್ರೀತೋ ವಿಸಸರ್ಜ ಗೃಹಾನ್ಪ್ರತಿ||

ಹೀಗೆ ಹೇಳಿ ಅನೇಕ ಸಾಂತ್ವನಮಾತುಗಳಿಂದ ಜಯ ಅರ್ಜುನನು ಪ್ರಸಾದಿತನಾದನು. ಪ್ರೀತಿಯಿಂದ ಅವಳನ್ನು ಬಿಗಿದಪ್ಪಿ, ಮನೆಗೆ ಕಳುಹಿಸಿಕೊಟ್ಟನು.

14077042a ದುಃಶಲಾ ಚಾಪಿ ತಾನ್ಯೋಧಾನ್ನಿವಾರ್ಯ ಮಹತೋ ರಣಾತ್|

14077042c ಸಂಪೂಜ್ಯ ಪಾರ್ಥಂ ಪ್ರಯಯೌ ಗೃಹಾನ್ಪ್ರತಿ ಶುಭಾನನಾ||

ಶುಭಾನನೆ ದುಃಶಲೆಯೂ ಕೂಡ ಮಹಾರಣದಿಂದ ಆ ಯೋಧರನ್ನು ಹಿಂದಿರುಗುವಂತೆ ಮಾಡಿ ಪಾರ್ಥನನ್ನು ಪೂಜಿಸಿ ತನ್ನ ಮನೆಯ ಕಡೆ ನಡೆದಳು.

14077043a ತತಃ ಸೈಂಧವಕಾನ್ಯೋಧಾನ್ವಿನಿರ್ಜಿತ್ಯ ನರರ್ಷಭಃ|

14077043c ಪುನರೇವಾನ್ವಧಾವತ್ಸ ತಂ ಹಯಂ ಕಾಮಚಾರಿಣಮ್||

ಅನಂತರ ಸೈಂಧವ ಯೋಧರನ್ನು ಬಿಟ್ಟು ನರರ್ಷಭ ಅರ್ಜುನನು ಕಾಮಚಾರಿಣಿಯಾದ ಆ ಕುದುರೆಯನ್ನು ಪುನಃ ಅನುಸರಿಸುತ್ತಾ ಹೋದನು.

14077044a ಸಸಾರ ಯಜ್ಞಿಯಂ ವೀರೋ ವಿಧಿವತ್ಸ ವಿಶಾಂ ಪತೇ|

14077044c ತಾರಾಮೃಗಮಿವಾಕಾಶೇ ದೇವದೇವಃ ಪಿನಾಕಧೃಕ್||

ವಿಶಾಂಪತೇ! ದೇವದೇವ ಪಿನಾಕಧಾರಿಯು ಆಕಾಶದಲ್ಲಿ ತಾರಾಮೃಗವನ್ನು ಹೇಗೆ ಹಿಂಬಾಲಿಸಿ ಹೋಗುತ್ತಿದ್ದನೋ ಹಾಗೆ ವೀರ ಅರ್ಜುನನು ಯಜ್ಞದ ಕುದುರೆಯನ್ನು ವಿಧಿವತ್ತಾಗಿ ಹಿಂಬಾಲಿಸಿ ಹೋಗುತ್ತಿದ್ದನು.

14077045a ಸ ಚ ವಾಜೀ ಯಥೇಷ್ಟೇನ ತಾಂಸ್ತಾನ್ದೇಶಾನ್ಯಥಾಸುಖಮ್|

14077045c ವಿಚಚಾರ ಯಥಾಕಾಮಂ ಕರ್ಮ ಪಾರ್ಥಸ್ಯ ವರ್ಧಯನ್||

ಆ ಕುದುರೆಯು ಪಾರ್ಥನ ಯಶಸ್ಸನ್ನು ವೃದ್ಧಿಸುತ್ತಾ ಯಥೇಷ್ಟವಾಗಿ ಯಥಾಸುಖವಾಗಿ ಮನಸ್ಸು ಬಂದಂತೆ ದೇಶಗಳನ್ನು ಸುತ್ತಾಡಿತು.

14077046a ಕ್ರಮೇಣ ಸ ಹಯಸ್ತ್ವೇವಂ ವಿಚರನ್ ಭರತರ್ಷಭ|

14077046c ಮಣಿಪೂರಪತೇರ್ದೇಶಮುಪಾಯಾತ್ ಸಹಪಾಂಡವಃ||

ಭರತರ್ಷಭ! ಹೀಗೆಯೇ ಸಂಚರಿಸುತ್ತಾ ಕ್ರಮೇಣವಾಗಿ ಆ ಕುದುರೆಯು ಪಾಂಡವನೊಂದಿಗೆ ಮಣಿಪುರದ ಅರಸನ ದೇಶಕ್ಕೆ ಆಗಮಿಸಿತು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸೈಂಧವಪರಾಜಯೇ ಸಪ್ತಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸೈಂಧವಪರಾಜಯ ಎನ್ನುವ ಎಪ್ಪತ್ತೇಳನೇ ಅಧ್ಯಾಯವು.

Comments are closed.