ಅಶ್ವಮೇಧಿಕ ಪರ್ವ
೭೬
ಸೈಂಧವ ರಾಜರೊಡನೆ ಅರ್ಜುನನ ಯುದ್ಧ (೧-೩೨).
14076001 ವೈಶಂಪಾಯನ ಉವಾಚ
14076001a ಸೈಂಧವೈರಭವದ್ಯುದ್ಧಂ ತತಸ್ತಸ್ಯ ಕಿರೀಟಿನಃ|
14076001c ಹತಶೇಷೈರ್ಮಹಾರಾಜ ಹತಾನಾಂ ಚ ಸುತೈರಪಿ||
ವೈಶಂಪಾಯನನು ಹೇಳಿದನು: “ಮಹಾರಾಜ! ಬಳಿಕ ಕಿರೀಟಿ ಮತ್ತು ಯುದ್ಧದಲ್ಲಿ ಹತರಾಗದೇ ಉಳಿದಿದ್ದ ಸೈಂಧವರು ಮತ್ತು ಹತರಾಗಿದ್ದ ಸೈಂಧವರ ಮಕ್ಕಳ ನಡುವೆ ಯುದ್ಧವು ನಡೆಯಿತು.
14076002a ತೇಽವತೀರ್ಣಮುಪಶ್ರುತ್ಯ ವಿಷಯಂ ಶ್ವೇತವಾಹನಮ್|
14076002c ಪ್ರತ್ಯುದ್ಯಯುರಮೃಷ್ಯಂತೋ ರಾಜಾನಃ ಪಾಂಡವರ್ಷಭಮ್||
ಅರ್ಜುನನು ತಮ್ಮ ರಾಜ್ಯದ ಗಡಿಯಲ್ಲಿ ಬಂದಿದ್ದಾನೆಂದು ತಿಳಿದ ಆ ರಾಜರು ಅಸಹನೆಯಿಂದ ಪಾಂಡವರ್ಷಭನೊಡನೆ ಯುದ್ಧಮಾಡಿದರು.
14076003a ಅಶ್ವಂ ಚ ತಂ ಪರಾಮೃಶ್ಯ ವಿಷಯಾಂತೇ ವಿಷೋಪಮಾಃ|
14076003c ನ ಭಯಂ ಚಕ್ರಿರೇ ಪಾರ್ಥಾದ್ಭೀಮಸೇನಾದನಂತರಾತ್||
ರಾಜ್ಯದ ಗಡಿಗೆ ಬಂದಿದ್ದ ಅಶ್ವವನ್ನು ವಿಷೋಪಮರಾದ ಅವರು ಭೀಮನ ತಮ್ಮ ಪಾರ್ಥನಿಗೆ ಹೆದರದೇ ಬಂಧಿಸಿದರು.
14076004a ತೇಽವಿದೂರಾದ್ಧನುಷ್ಪಾಣಿಂ ಯಜ್ಞಿಯಸ್ಯ ಹಯಸ್ಯ ಚ|
14076004c ಬೀಭತ್ಸುಂ ಪ್ರತ್ಯಪದ್ಯಂತ ಪದಾತಿನಮವಸ್ಥಿತಮ್||
ಯಜ್ಞಕುದುರೆಯ ಸ್ವಲ್ಪ ದೂರದಲ್ಲಿಯೇ ಪದಾತಿಯಾಗಿ ನಿಂತಿದ್ದ ಧನುಷ್ಪಾಣೀ ಬೀಭತ್ಸುವನ್ನು ಎದುರಿಸಿದರು.
14076005a ತತಸ್ತೇ ತು ಮಹಾವೀರ್ಯಾ ರಾಜಾನಃ ಪರ್ಯವಾರಯನ್|
14076005c ಜಿಗೀಷಂತೋ ನರವ್ಯಾಘ್ರಾಃ ಪೂರ್ವಂ ವಿನಿಕೃತಾ ಯುಧಿ||
ಹಿಂದೆ ಯುದ್ಧದಲ್ಲಿ ಅವನಿಂದ ಸೋತುಹೋಗಿದ್ದ ಆ ಮಹಾವೀರ್ಯ ನರವ್ಯಾಘ್ರ ರಾಜರು ಈಗ ಅವನನ್ನು ಗೆಲ್ಲಲು ಬಯಸಿ ಸುತ್ತುವರೆದರು.
14076006a ತೇ ನಾಮಾನ್ಯಥ ಗೋತ್ರಾಣಿ ಕರ್ಮಾಣಿ ವಿವಿಧಾನಿ ಚ|
14076006c ಕೀರ್ತಯಂತಸ್ತದಾ ಪಾರ್ಥಂ ಶರವರ್ಷೈರವಾಕಿರನ್||
ಅವರು ತಮ್ಮ ನಾಮ-ಗೋತ್ರಗಳನ್ನೂ ವಿವಿಧ ಸಾಧನೆಗಳನ್ನೂ ಹೇಳಿಕೊಳ್ಳುತ್ತಾ ಪಾರ್ಥನನ್ನು ಶರವರ್ಷಗಳಿಂದ ಮುಚ್ಚಿದರು.
14076007a ತೇ ಕಿರಂತಃ ಶರಾಂಸ್ತೀಕ್ಷ್ಣಾನ್ವಾರಣೇಂದ್ರನಿವಾರಣಾನ್|
14076007c ರಣೇ ಜಯಮಭೀಪ್ಸಂತಃ ಕೌಂತೇಯಂ ಪರ್ಯವಾರಯನ್||
ಆನೆಗಳನ್ನೇ ತಡೆದು ನಿಲ್ಲಿಸಲು ಸಮರ್ಥವಾದ ತೀಕ್ಷ್ಣ ಬಾಣಗಳನ್ನು ಎರಚುತ್ತಾ ರಣದಲ್ಲಿ ಜಯವನ್ನು ಬಯಸಿದ ಅವರು ಕೌಂತೇಯನನ್ನು ಸುತ್ತುವರೆದು ಮುತ್ತಿದರು.
14076008a ತೇಽಸಮೀಕ್ಷ್ಯೈವ ತಂ ವೀರಮುಗ್ರಕರ್ಮಾಣಮಾಹವೇ|
14076008c ಸರ್ವೇ ಯುಯುಧಿರೇ ವೀರಾ ರಥಸ್ಥಾಸ್ತಂ ಪದಾತಿನಮ್||
ಯುದ್ಧದಲ್ಲಿ ಉಗ್ರಕರ್ಮಗಳನ್ನೆಸಗಿದ್ದ ಆ ವೀರನು ಪದಾತಿಯಾಗಿರುವುದನ್ನು ನೋಡಿ ಆ ಎಲ್ಲ ವೀರರೂ ರಥಸ್ಥರಾಗಿಯೇ ಯುದ್ಧದಲ್ಲಿ ತೊಡಗಿದರು.
14076009a ತೇ ತಮಾಜಘ್ನಿರೇ ವೀರಂ ನಿವಾತಕವಚಾಂತಕಮ್|
14076009c ಸಂಶಪ್ತಕನಿಹಂತಾರಂ ಹಂತಾರಂ ಸೈಂಧವಸ್ಯ ಚ||
ನಿವಾತಕವಚರಿಗೆ ಯಮನಾಗಿದ್ದ, ಸಂಶಪ್ತಕರನ್ನು ಸಂಹರಿಸಿದ್ದ, ಸೈಂಧವನನ್ನು ಕೊಂದಿದ್ದ ಆ ವೀರನನ್ನು ಅವರು ಪ್ರಹರಿಸಿದರು.
14076010a ತತೋ ರಥಸಹಸ್ರೇಣ ಹಯಾನಾಮಯುತೇನ ಚ|
14076010c ಕೋಷ್ಠಕೀಕೃತ್ಯ ಕೌಂತೇಯಂ ಸಂಪ್ರಹೃಷ್ಟಮಯೋಧಯನ್||
ಆಗ ಅವರು ಸಾವಿರ ರಥಗಳು ಮತ್ತು ಹತ್ತು ಸಾವಿರ ಕುದುರೆಗಳಿಂದ ಗುಂಪಾಗಿ ಸುತ್ತುವರೆದು ಕೌಂತೇಯನೊಡನೆ ಹರ್ಷದಿಂದ ಯುದ್ಧಮಾಡಿದರು.
14076011a ಸಂಸ್ಮರಂತೋ ವಧಂ ವೀರಾಃ ಸಿಂಧುರಾಜಸ್ಯ ಧೀಮತಃ|
14076011c ಜಯದ್ರಥಸ್ಯ ಕೌರವ್ಯ ಸಮರೇ ಸವ್ಯಸಾಚಿನಾ||
ಕೌರವ್ಯ! ಸಮರದಲ್ಲಿ ಸವ್ಯಸಾಚಿಯು ಧೀಮತ ಸಿಂಧುರಾಜ ಜಯದ್ರಥನನ್ನು ವಧಿಸಿದುದನ್ನು ನೆನಪಿಸಿಕೊಳ್ಳುತ್ತಾ ಆ ವೀರರು ಯುದ್ಧಮಾಡಿದರು.
14076012a ತತಃ ಪರ್ಜನ್ಯವತ್ಸರ್ವೇ ಶರವೃಷ್ಟಿಮವಾಸೃಜನ್|
14076012c ತೈಃ ಕೀರ್ಣಃ ಶುಶುಭೇ ಪಾರ್ಥೋ ರವಿರ್ಮೇಘಾಂತರೇ ಯಥಾ||
ಆಗ ಅವರೆಲ್ಲರೂ ಮಳೆಯಂತೆ ಶರವೃಷ್ಟಿಯನ್ನು ಅವನ ಮೇಲೆ ಸುರಿಸಿದರು. ಅವುಗಳಿಂದ ಮುಸುಕಲ್ಪಟ್ಟ ಪಾರ್ಥನು ಮೇಘಗಳ ಮಧ್ಯದಲ್ಲಿದ್ದ ರವಿಯಂತೆ ಶೋಭಿಸಿದನು.
14076013a ಸ ಶರೈಃ ಸಮವಚ್ಚನ್ನೋ ದದೃಶೇ ಪಾಂಡವರ್ಷಭಃ|
14076013c ಪಂಜರಾಂತರಸಂಚಾರೀ ಶಕುಂತ ಇವ ಭಾರತ||
ಭಾರತ! ಆ ಶರಗಳಿಂದ ಮುಚ್ಚಿಹೋಗಿದ್ದ ಪಾಂಡವರ್ಷಭನು ಪಿಂಜರದಲ್ಲಿ ಅಲೆದಾಡುತ್ತಿದ್ದ ಪಕ್ಷಿಯಂತೆಯೇ ಕಂಡನು.
14076014a ತತೋ ಹಾಹಾಕೃತಂ ಸರ್ವಂ ಕೌಂತೇಯೇ ಶರಪೀಡಿತೇ|
14076014c ತ್ರೈಲೋಕ್ಯಮಭವದ್ರಾಜನ್ರವಿಶ್ಚಾಸೀದ್ರಜೋರುಣಃ||
ರಾಜನ್! ಕೌಂತೇಯನು ಶರಪೀಡಿತನಾಗಲು ತ್ರೈಲೋಕ್ಯಗಳಲ್ಲಿ ಎಲ್ಲಕಡೆಯೂ ಹಾಹಾಕಾರವುಂಟಾಯಿತು. ರವಿಯು ಧೂಳುಮುಕ್ಕಿ ಕೆಂಪಾದನು.
14076015a ತತೋ ವವೌ ಮಹಾರಾಜ ಮಾರುತೋ ರೋಮಹರ್ಷಣಃ|
14076015c ರಾಹುರಗ್ರಸದಾದಿತ್ಯಂ ಯುಗಪತ್ಸೋಮಮೇವ ಚ||
ಮಹಾರಾಜ! ಆಗ ರೋಮಾಂಚಕಾರೀ ಚಂಡಮಾರುತವು ಬೀಸತೊಡಗಿತು. ರಾಹುವು ಆದಿತ್ಯ-ಚಂದ್ರರಿಬ್ಬರನ್ನೂ ಒಂದೇ ಕಾಲದಲ್ಲಿ ನುಂಗಿದನು.
14076016a ಉಲ್ಕಾಶ್ಚ ಜಘ್ನಿರೇ ಸೂರ್ಯಂ ವಿಕೀರ್ಯಂತ್ಯಃ ಸಮಂತತಃ|
14076016c ವೇಪಥುಶ್ಚಾಭವದ್ರಾಜನ್ಕೈಲಾಸಸ್ಯ ಮಹಾಗಿರೇಃ||
ರಾಜನ್! ಎಲ್ಲಕಡೆಗಳಿಂದಲೂ ಬೀಳುತ್ತಿದ್ದ ಉಲ್ಕೆಗಳು ಸೂರ್ಯನ ಮೇಲೂ ಬಿದ್ದವು. ಮಹಾಗಿರಿ ಕೈಲಾಸವೂ ನಡುಗಿತು.
14076017a ಮುಮುಚುಶ್ಚಾಸ್ರಮತ್ಯುಷ್ಣಂ ದುಃಖಶೋಕಸಮನ್ವಿತಾಃ|
14076017c ಸಪ್ತರ್ಷಯೋ ಜಾತಭಯಾಸ್ತಥಾ ದೇವರ್ಷಯೋಽಪಿ ಚ||
ದುಃಖಶೋಕಸಮನ್ವಿತರಾದ ಸಪ್ತರ್ಷಿಗಳು ಬಿಸಿ ನಿಟ್ಟುಸಿರನ್ನು ಬಿಡತೊಡಗಿದರು. ಹಾಗೆಯೇ ದೇವರ್ಷಿಗಳಿಗೂ ಭಯವುಂಟಾಯಿತು.
14076018a ಶಶಶ್ಚಾಶು ವಿನಿರ್ಭಿದ್ಯ ಮಂಡಲಂ ಶಶಿನೋಽಪತತ್|
14076018c ವಿಪರೀತಸ್ತದಾ ರಾಜಂಸ್ತಸ್ಮಿನ್ನುತ್ಪಾತಲಕ್ಷಣೇ||
ರಾಜನ್! ಚಂದ್ರಮಂಡಲವನ್ನೇ ಭೇದಿಸಿಕೊಂಡು ಮೊಲವು ಕೆಳಗುರುಳಿತು. ಹಾಗೆ ವಿಪರೀತ ಉತ್ಪಾತಗಳು ಕಾಣಿಸಿಕೊಂಡವು.
14076019a ರಾಸಭಾರುಣಸಂಕಾಶಾ ಧನುಷ್ಮಂತಃ ಸವಿದ್ಯುತಃ|
14076019c ಆವೃತ್ಯ ಗಗನಂ ಮೇಘಾ ಮುಮುಚುರ್ಮಾಂಸಶೋಣಿತಮ್||
ಕತ್ತೆಯ ಕೆಂಪುಬಣ್ಣಗಳುಳ್ಳ ಮೇಘಗಳು ಕಾಮನಬಿಲ್ಲು ಮತ್ತು ಮಿಂಚುಗಳಿಂದ ಕೂಡಿ ಗಗನವನ್ನು ಆವರಿಸಿ ಮಾಂಸ-ರಕ್ತಗಳ ಮಳೆಯನ್ನೇ ಸುರಿಸಿದವು.
14076020a ಏವಮಾಸೀತ್ತದಾ ವೀರೇ ಶರವರ್ಷಾಭಿಸಂವೃತೇ|
14076020c ಲೋಕೇಽಸ್ಮಿನ್ ಭರತಶ್ರೇಷ್ಠ ತದದ್ಭುತಮಿವಾಭವತ್||
ಭರತಶ್ರೇಷ್ಠ! ಶರವರ್ಷಗಳಿಂದ ಆ ವೀರ ಅರ್ಜುನನು ಮುಸುಕಿರಲು ಲೋಕದಲ್ಲಿ ಈ ಅದ್ಭುತಗಳು ನಡೆದವು.
14076021a ತಸ್ಯ ತೇನಾವಕೀರ್ಣಸ್ಯ ಶರಜಾಲೇನ ಸರ್ವಶಃ|
14076021c ಮೋಹಾತ್ ಪಪಾತ ಗಾಂಡೀವಮಾವಾಪಶ್ಚ ಕರಾದಪಿ||
ಸುತ್ತಲೂ ಶರಜಾಲಗಳಿಂದ ಮುಚ್ಚಲ್ಪಟ್ಟ ಅರ್ಜುನನು ಮೋಹಪರವಶನಾಗಲು ಅವನ ಕೈಯಿಂದ ಗಾಂಡೀವವೂ, ಕೈಚೀಲಗಳೂ ಜಾರಿ ಬಿದ್ದವು.
14076022a ತಸ್ಮಿನ್ ಮೋಹಮನುಪ್ರಾಪ್ತೇ ಶರಜಾಲಂ ಮಹತ್ತರಮ್|
14076022c ಸೈಂಧವಾ ಮುಮುಚುಸ್ತೂರ್ಣಂ ಗತಸತ್ತ್ವೇ ಮಹಾರಥೇ||
ಹೀಗೆ ಮಹಾರಥ ಅರ್ಜುನನು ಮೂರ್ಛಿತನಾಗಿದ್ದರೂ ಸೈಂಧವರು ಮಹತ್ತರವಾದ ಶರಜಾಲಗಳನ್ನು ಅವನ ಮೇಲೆ ಸುರಿಸುತ್ತಲೇ ಇದ್ದರು.
14076023a ತತೋ ಮೋಹಸಮಾಪನ್ನಂ ಜ್ಞಾತ್ವಾ ಪಾರ್ಥಂ ದಿವೌಕಸಃ|
14076023c ಸರ್ವೇ ವಿತ್ರಸ್ತಮನಸಸ್ತಸ್ಯ ಶಾಂತಿಪರಾಭವನ್||
ಪಾರ್ಥನು ಮೂರ್ಛಿತನಾಗಿರುವುದನ್ನು ತಿಳಿದ ದಿವೌಕಸರು ಎಲ್ಲರೂ ಭಯಗೊಂಡು ಅದನ್ನು ನಿವಾರಿಸಲು ಅನುವಾದರು.
14076024a ತತೋ ದೇವರ್ಷಯಃ ಸರ್ವೇ ತಥಾ ಸಪ್ತರ್ಷಯೋಽಪಿ ಚ|
14076024c ಬ್ರಹ್ಮರ್ಷಯಶ್ಚ ವಿಜಯಂ ಜೇಪುಃ ಪಾರ್ಥಸ್ಯ ಧೀಮತಃ||
ಆಗ ದೇವರ್ಷಿಗಳು, ಸಪ್ತರ್ಷಿಗಳು ಮತ್ತು ಬ್ರಹ್ಮರ್ಷಿಗಳು ಎಲ್ಲರೂ ಪಾರ್ಥನಿಗೆ ವಿಜಯವಾಗಲೆಂದು ಜಪಿಸತೊಡಗಿದರು.
14076025a ತತಃ ಪ್ರದೀಪಿತೇ ದೇವೈಃ ಪಾರ್ಥತೇಜಸಿ ಪಾರ್ಥಿವ|
14076025c ತಸ್ಥಾವಚಲವದ್ಧೀಮಾನ್ ಸಂಗ್ರಾಮೇ ಪರಮಾಸ್ತ್ರವಿತ್||
ಪಾರ್ಥಿವ! ದೇವತೆಗಳಿಂದಾಗಿ ಪಾರ್ಥನ ತೇಜಸ್ಸು ಉದ್ದೀಪನಗೊಂಡಿತು. ಪರಮಾಸ್ತ್ರಗಳನ್ನು ತಿಳಿದಿದ್ದ ಆ ಧೀಮಂತನು ಸಂಗ್ರಾಮದಲ್ಲಿ ಪರ್ವತದಂತೆ ಸ್ಥಿರವಾಗಿ ನಿಂತುಕೊಂಡನು.
14076026a ವಿಚಕರ್ಷ ಧನುರ್ದಿವ್ಯಂ ತತಃ ಕೌರವನಂದನಃ|
14076026c ಯಂತ್ರಸ್ಯೇವೇಹ ಶಬ್ದೋಽಭೂನ್ಮಹಾಂಸ್ತಸ್ಯ ಪುನಃ ಪುನಃ||
ಆಗ ಕೌರವನಂದನನು ದಿವ್ಯ ಧನುಸ್ಸನ್ನು ಸೆಳೆಯಲು ಅದರಿಂದಾಗಿ ಪುನಃ ಪುನಃ ಯಂತ್ರದ ಶಬ್ಧದಂತೆ ಮಹಾ ಶಬ್ಧವು ಕೇಳಿಬಂದಿತು.
14076027a ತತಃ ಸ ಶರವರ್ಷಾಣಿ ಪ್ರತ್ಯಮಿತ್ರಾನ್ ಪ್ರತಿ ಪ್ರಭುಃ|
14076027c ವವರ್ಷ ಧನುಷಾ ಪಾರ್ಥೋ ವರ್ಷಾಣೀವ ಸುರೇಶ್ವರಃ||
ಆಗ ಪ್ರಭು ಪಾರ್ಥನು ಸುರೇಶ್ವರನಂತೆ ತನ್ನ ಧನುಸ್ಸಿನಿಂದ ಶತ್ರುಗಳ ಮೇಲೆ ಶರವರ್ಷಗಳನ್ನು ಸುರಿಸಿದನು.
14076028a ತತಸ್ತೇ ಸೈಂಧವಾ ಯೋಧಾಃ ಸರ್ವ ಏವ ಸರಾಜಕಾಃ|
14076028c ನಾದೃಶ್ಯಂತ ಶರೈಃ ಕೀರ್ಣಾಃ ಶಲಭೈರಿವ ಪಾವಕಾಃ||
ಪತಂಗಗಳು ಮುತ್ತಿದ ಅಗ್ನಿಗಳಂತೆ ಶರಗಳಿಂದ ಮುಚ್ಚಲ್ಪಟ್ಟ ಆ ಸೈಂಧವ ಯೋಧರು ರಾಜರೊಂದಿಗೆ ಕಾಣಿಸದೇ ಹೋದರು.
14076029a ತಸ್ಯ ಶಬ್ದೇನ ವಿತ್ರೇಸುರ್ಭಯಾರ್ತಾಶ್ಚ ವಿದುದ್ರುವುಃ|
14076029c ಮುಮುಚುಶ್ಚಾಶ್ರು ಶೋಕಾರ್ತಾಃ ಸುಷುಪುಶ್ಚಾಪಿ ಸೈಂಧವಾಃ||
ಗಾಂಡೀವದ ಶಬ್ಧದಿಂದ ಸೈಂಧವರು ಭಯಾರ್ತರಾಗಿ ನಡುಗಿದರು ಮತ್ತು ಪಲಾಯನಗೈದರು. ಶೋಕಾರ್ತರಾಗಿ ಅತ್ತರು ಮತ್ತು ಮೂರ್ಛಿತರಾದರು ಕೂಡ.
14076030a ತಾಂಸ್ತು ಸರ್ವಾನ್ನರಶ್ರೇಷ್ಠಃ ಸರ್ವತೋ ವಿಚರನ್ ಬಲೀ|
14076030c ಅಲಾತಚಕ್ರವದ್ರಾಜನ್ಶರಜಾಲೈಃ ಸಮರ್ಪಯತ್||
ರಾಜನ್! ಆ ಬಲಶಾಲೀ ನರಶ್ರೇಷ್ಠನು ಪಂಜಿಯ ಚಕ್ರದಂತೆ ಎಲ್ಲಕಡೆ ತಿರುಗುತ್ತಾ ಅವರೆಲ್ಲರ ಮೇಲೆ ಶರಜಾಲಗಳನ್ನು ಸುರಿಸಿದನು.
14076031a ತದಿಂದ್ರಜಾಲಪ್ರತಿಮಂ ಬಾಣಜಾಲಮಮಿತ್ರಹಾ|
14076031c ವ್ಯಸೃಜದ್ದಿಕ್ಷು ಸರ್ವಾಸು ಮಹೇಂದ್ರ ಇವ ವಜ್ರಭೃತ್||
ವಜ್ರಧಾರಿ ಮಹೇಂದ್ರನಂತೆ ಇಂದ್ರಜಾಲದಂತಿರುವ ಬಾಣಜಾಲವನ್ನು ಅಮಿತ್ರಹ ಅರ್ಜುನನು ಸರ್ವ ದಿಕ್ಕುಗಳಲ್ಲಿಯೂ ಪ್ರಯೋಗಿಸಿದನು.
14076032a ಮೇಘಜಾಲನಿಭಂ ಸೈನ್ಯಂ ವಿದಾರ್ಯ ಸ ರವಿಪ್ರಭಃ|
14076032c ವಿಬಭೌ ಕೌರವಶ್ರೇಷ್ಠಃ ಶರದೀವ ದಿವಾಕರಃ||
ಮೇಘಜಾಲಗಳಂತಿದ್ದ ಆ ಸೇನೆಯನ್ನು ಸೀಳಿದ ರವಿಪ್ರಭ ಕೌರವಶ್ರೇಷ್ಠನು ಶರದ್ಕಾಲದ ದಿವಾಕರನಂತೆಯೇ ಬೆಳಗಿದನು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸೈಂಧವಯುದ್ಧೇ ಷಟ್ಸಪ್ತತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸೈಂಧವಯುದ್ಧ ಎನ್ನುವ ಎಪ್ಪತ್ತಾರನೇ ಅಧ್ಯಾಯವು.