Ashvamedhika Parva: Chapter 75

ಅಶ್ವಮೇಧಿಕ ಪರ್ವ

೭೫

ಅರ್ಜುನನು ವಜ್ರದತ್ತನ ಆನೆಯನ್ನು ಸಂಹರಿಸಿದುದು (೧-೧೯). ವಜ್ರದತ್ತನನ್ನು ಸಂಹರಿಸದೆಯೇ ಬಿಟ್ಟು ಅರ್ಜುನನು ಅವನಿಗೆ ಅಶ್ವಮೇಧ ಯಾಗಕ್ಕೆ ನಿಮಂತ್ರಣವನ್ನಿತ್ತುದು (೨೦-೨೬).

14075001 ವೈಶಂಪಾಯನ ಉವಾಚ

14075001a ಏವಂ ತ್ರಿರಾತ್ರಮಭವತ್ತದ್ಯುದ್ಧಂ ಭರತರ್ಷಭ|

14075001c ಅರ್ಜುನಸ್ಯ ನರೇಂದ್ರೇಣ ವೃತ್ರೇಣೇವ ಶತಕ್ರತೋಃ||

ವೈಶಂಪಾಯನನು ಹೇಳಿದನು: “ಭರತರ್ಷಭ! ಹೀಗೆ ವೃತ್ರನೊಡನೆ ಶತಕ್ರತುವಿನ ಯುದ್ಧದಂತಿದ್ದ ಅರ್ಜುನ ಮತ್ತು ನರೇಂದ್ರ ವಜ್ರದತ್ತನ ನಡುವಿನ ಯುದ್ಧವು ಮೂರುರಾತ್ರಿಗಳು ನಡೆಯಿತು.

14075002a ತತಶ್ಚತುರ್ಥೇ ದಿವಸೇ ವಜ್ರದತ್ತೋ ಮಹಾಬಲಃ|

14075002c ಜಹಾಸ ಸಸ್ವನಂ ಹಾಸಂ ವಾಕ್ಯಂ ಚೇದಮಥಾಬ್ರವೀತ್||

ನಾಲ್ಕನೆಯ ದಿವಸ ಮಹಾಬಲ ವಜ್ರದತ್ತನು ಗಟ್ಟಿಯಾಗಿ ಅಟ್ಟಹಾಸದಿಂದ ನಗುತ್ತಾ ಈ ಮಾತನ್ನಾಡಿದನು:

14075003a ಅರ್ಜುನಾರ್ಜುನ ತಿಷ್ಠಸ್ವ ನ ಮೇ ಜೀವನ್ವಿಮೋಕ್ಷ್ಯಸೇ|

14075003c ತ್ವಾಂ ನಿಹತ್ಯ ಕರಿಷ್ಯಾಮಿ ಪಿತುಸ್ತೋಯಂ ಯಥಾವಿಧಿ||

“ಅರ್ಜುನ! ಅರ್ಜುನ! ನಿಲ್ಲು! ಜೀವಸಹಿತವಾಗಿ ನನ್ನಿಂದ ನೀನು ಬಿಡುಗಡೆ ಹೊಂದುವುದಿಲ್ಲ. ನಿನ್ನನ್ನು ಸಂಹರಿಸಿ ಯಥಾವಿಧಿಯಾಗಿ ನಾನು ನನ್ನ ತಂದೆಗೆ ತರ್ಪಣವನ್ನು ನೀಡುತ್ತೇನೆ!

14075004a ತ್ವಯಾ ವೃದ್ಧೋ ಮಮ ಪಿತಾ ಭಗದತ್ತಃ ಪಿತುಃ ಸಖಾ|

14075004c ಹತೋ ವೃದ್ಧೋಽಪಚಾಯಿತ್ವಾಚ್ಚಿಶುಂ ಮಾಮದ್ಯ ಯೋಧಯ||

ನಿನ್ನ ವೃದ್ಧ ತಂದೆಯ ಸಖ ನನ್ನ ತಂದೆ ವೃದ್ಧ ಭಗದತ್ತನನ್ನು ನೀನು ಸಂಹರಿಸಿದೆ! ಇಂದು ಇನ್ನೂ ಬಾಲಕನಾಗಿರುವ ನನ್ನೊಡನೆ ಯುದ್ಧಮಾಡು!”

14075005a ಇತ್ಯೇವಮುಕ್ತ್ವಾ ಸಂಕ್ರುದ್ಧೋ ವಜ್ರದತ್ತೋ ನರಾಧಿಪಃ|

14075005c ಪ್ರೇಷಯಾಮಾಸ ಕೌರವ್ಯ ವಾರಣಂ ಪಾಂಡವಂ ಪ್ರತಿ||

ಕೌರವ್ಯ! ಹೀಗೆ ಹೇಳಿ ಸಂಕ್ರುದ್ಧನಾದ ನರಾಧಿಪ ವಜ್ರದತ್ತನು ಆನೆಯನ್ನು ಪಾಂಡವನ ಮೇಲೆ ಆಕ್ರಮಣಿಸಿದನು.

14075006a ಸಂಪ್ರೇಷ್ಯಮಾಣೋ ನಾಗೇಂದ್ರೋ ವಜ್ರದತ್ತೇನ ಧೀಮತಾ|

14075006c ಉತ್ಪತಿಷ್ಯನ್ನಿವಾಕಾಶಮಭಿದುದ್ರಾವ ಪಾಂಡವಮ್||

ಧೀಮತ ವಜ್ರದತ್ತನಿಂದ ಕಳುಹಿಸಲ್ಪಟ್ಟ ಆ ಗಜೇಂದ್ರವು ಆಕಾಶಕ್ಕೆ ಜಿಗಿಯುತ್ತಿರುವುದೋ ಎನ್ನುವಂತೆ ಪಾಂಡವನ ಮೇಲೆ ಎರಗಿತು.

14075007a ಅಗ್ರಹಸ್ತಪ್ರಮುಕ್ತೇನ ಶೀಕರೇಣ ಸ ಫಲ್ಗುನಮ್|

14075007c ಸಮುಕ್ಷತ ಮಹಾರಾಜ ಶೈಲಂ ನೀಲ ಇವಾಂಬುದಃ||

ಮಹಾರಾಜ! ಅದು ತನ್ನ ಸೊಂಡಿಲಿನಿಂದ ನೀಲಮೋಡಗಳು ಮಳೆಸುರಿಸುವಂತೆ ನೀರಿನ ತುಂತುರುಗಳನ್ನು ಫಲ್ಗುನನ ಮೇಲೆ ಸುರಿಸಿತು.

14075008a ಸ ತೇನ ಪ್ರೇಷಿತೋ ರಾಜ್ಞಾ ಮೇಘವನ್ನಿನದನ್ಮುಹುಃ|

14075008c ಮುಖಾಡಂಬರಘೋಷೇಣ ಸಮಾದ್ರವತ ಫಲ್ಗುನಮ್||

ರಾಜನಿಂದ ಕಳುಹಿಸಲ್ಪಟ್ಟ ಆ ಅನೆಯು ಪುನಃ ಪುನಃ ಮೇಘದಂತೆ ಗರ್ಜಿಸುತ್ತಾ, ಮುಖಾಡಂಬರ ಘೋಷಗಳೊಂದಿಗೆ ಫಲ್ಗುನನನ್ನು ಆಕ್ರಮಣಿಸಿತು.

14075009a ಸ ನೃತ್ಯನ್ನಿವ ನಾಗೇಂದ್ರೋ ವಜ್ರದತ್ತಪ್ರಚೋದಿತಃ|

14075009c ಆಸಸಾದ ದ್ರುತಂ ರಾಜನ್ಕೌರವಾಣಾಂ ಮಹಾರಥಮ್||

ರಾಜನ್! ವಜ್ರದತ್ತನಿಂದ ಪ್ರಚೋದಿತಗೊಂಡ ಆ ಗಜೇಂದ್ರವು ನರ್ತಿಸುತ್ತಿರುವುದೋ ಎನ್ನುವಂತೆ ಓಡಿ ಬಂದು ಮಹಾರಥ ಕೌರವನ ಮೇಲೆ ಎರಗಿತು.

14075010a ತಮಾಪತಂತಂ ಸಂಪ್ರೇಕ್ಷ್ಯ ವಜ್ರದತ್ತಸ್ಯ ವಾರಣಮ್|

14075010c ಗಾಂಡೀವಮಾಶ್ರಿತ್ಯ ಬಲೀ ನ ವ್ಯಕಂಪತ ಶತ್ರುಹಾ||

ಹಾಗೆ ಮೇಲೆ ಬೀಳಲು ಬರುತ್ತಿದ್ದ ವಜ್ರದತ್ತನ ಆನೆಯನ್ನು ನೋಡಿ ಬಲಶಾಲೀ ಶತ್ರುಹಂತಕ ಅರ್ಜುನನು ಗಾಂಡೀವನ್ನು ಹಿಡಿದುಕೊಂಡು ಸ್ವಲ್ಪವೂ ವಿಚಲಿತನಾಗಲಿಲ್ಲ.

14075011a ಚುಕ್ರೋಧ ಬಲವಚ್ಚಾಪಿ ಪಾಂಡವಸ್ತಸ್ಯ ಭೂಪತೇಃ|

14075011c ಕಾರ್ಯವಿಘ್ನಮನುಸ್ಮೃತ್ಯ ಪೂರ್ವವೈರಂ ಚ ಭಾರತ||

ಭಾರತ! ಹಿಂದಿನ ವೈರದಿಂದ ಭೂಪತಿ ವಜ್ರದತ್ತನು ಬಲವನ್ನುಪಯೋಗಿಸಿ ಯಜ್ಞಕ್ಕೆ ವಿಘ್ನವನ್ನುಂಟುಮಾಡುತ್ತಿರುವನೆಂದು ಸ್ಮರಿಸಿಕೊಂಡು ಅರ್ಜುನನು ಅತ್ಯಂತ ಕ್ರೋಧಿತನಾದನು.

14075012a ತತಸ್ತಂ ವಾರಣಂ ಕ್ರುದ್ಧಃ ಶರಜಾಲೇನ ಪಾಂಡವಃ|

14075012c ನಿವಾರಯಾಮಾಸ ತದಾ ವೇಲೇವ ಮಕರಾಲಯಮ್||

ಆಗ ಕ್ರುದ್ಧನಾದ ಪಾಂಡವನು ಶರಜಾಲಗಳಿಂದ ತೀರವು ಸಮುದ್ರವನ್ನು ತಡೆಯುವಂತೆ ಆ ಆನೆಯನ್ನು ತಡೆದನು.

14075013a ಸ ನಾಗಪ್ರವರೋ ವೀರ್ಯಾದರ್ಜುನೇನ ನಿವಾರಿತಃ|

14075013c ತಸ್ಥೌ ಶರೈರ್ವಿತುನ್ನಾಂಗಃ ಶ್ವಾವಿಚ್ಚಲಲಿತೋ ಯಥಾ||

ಅರ್ಜುನನಿಂದ ತಡೆಯಲ್ಪಟ್ಟ ಆ ಮಹಾಗಜವು ಅಂಗಾಂಗಗಳಲ್ಲಿ ಶರಗಳು ಚುಚ್ಚಿಕೊಂಡು ಮುಳ್ಳುಗಳು ನಿಮಿರಿನಿಂತಿದ್ದ ಮುಳ್ಳುಹಂದಿಯಂತೆ ಅಲ್ಲಿಯೇ ನಿಂತುಕೊಂಡಿತು.

14075014a ನಿವಾರಿತಂ ಗಜಂ ದೃಷ್ಟ್ವಾ ಭಗದತ್ತಾತ್ಮಜೋ ನೃಪಃ|

14075014c ಉತ್ಸಸರ್ಜ ಶಿತಾನ್ಬಾಣಾನರ್ಜುನೇ ಕ್ರೋಧಮೂರ್ಚಿತಃ||

ಆನೆಯನ್ನು ತಡೆದು ನಿಲ್ಲಿಸಿದುದನ್ನು ನೋಡಿ ನೃಪ ಭಗದತ್ತಾತ್ಮಜನು ಕ್ರೋಧಮೂರ್ಚಿತನಾಗಿ ಅರ್ಜುನನ ಮೇಲೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು.

14075015a ಅರ್ಜುನಸ್ತು ಮಹಾರಾಜ ಶರೈಃ ಶರವಿಘಾತಿಭಿಃ|

14075015c ವಾರಯಾಮಾಸ ತಾನಸ್ತಾಂಸ್ತದದ್ಭುತಮಿವಾಭವತ್||

ಮಹಾರಾಜ! ಅರ್ಜುನನಾದರೋ ಶರಗಳನ್ನು ತುಂಡರಿಸಬಲ್ಲ ಶರಗಳಿಂದ ಅವನ ಬಾಣಗಳನ್ನು ತಡೆದನು. ಅದೊಂದು ಅದ್ಭುತವಾಗಿತ್ತು.

14075016a ತತಃ ಪುನರತಿಕ್ರುದ್ಧೋ ರಾಜಾ ಪ್ರಾಗ್ಜ್ಯೋತಿಷಾಧಿಪಃ|

14075016c ಪ್ರೇಷಯಾಮಾಸ ನಾಗೇಂದ್ರಂ ಬಲವಚ್ಚ್ವಸನೋಪಮಮ್||

ಆಗ ಅತಿಕ್ರುದ್ಧನಾದ ರಾಜಾ ಪ್ರಗ್ಜ್ಯೋತಿಷಾಧಿಪನು ಪರ್ವತೋಪಮವಾಗಿದ್ದ ಆ ಮಹಾಗಜವನ್ನು ಪುನಃ ಅರ್ಜುನನ ಮೇಲೆ ನುಗ್ಗಿಸಿದನು.

14075017a ತಮಾಪತಂತಂ ಸಂಪ್ರೇಕ್ಷ್ಯ ಬಲವಾನ್ಪಾಕಶಾಸನಿಃ|

14075017c ನಾರಾಚಮಗ್ನಿಸಂಕಾಶಂ ಪ್ರಾಹಿಣೋದ್ವಾರಣಂ ಪ್ರತಿ||

ಮೇಲೆರಗಿ ಬರುತ್ತಿದ್ದ ಅದನ್ನು ನೋಡಿ ಬಲವಾನ್ ಪಾಕಶಾಸನಿಯು ಆ ಆನೆಯ ಮೇಲೆ ಅಗ್ನಿಸಂಕಾಶ ನಾರಾಚವನ್ನು ಪ್ರಯೋಗಿಸಿದನು.

14075018a ಸ ತೇನ ವಾರಣೋ ರಾಜನ್ಮರ್ಮಣ್ಯಭಿಹತೋ ಭೃಶಮ್|

14075018c ಪಪಾತ ಸಹಸಾ ಭೂಮೌ ವಜ್ರರುಗ್ಣ ಇವಾಚಲಃ||

ರಾಜನ್! ಮರ್ಮಸ್ಥಾನಕ್ಕೆ ಜೋರಾಗಿ ಹೊಡೆಯಲ್ಪಟ್ಟ ಆ ಆನೆಯು ವಜ್ರದಿಂದ ಹೊಡೆಯಲ್ಪಟ್ಟ ಪರ್ವತದಂತೆ ಒಮ್ಮೆಲೇ ಭೂಮಿಯ ಮೇಲೆ ಬಿದ್ದಿತು.

14075019a ಸ ಪತನ್ಶುಶುಭೇ ನಾಗೋ ಧನಂಜಯಶರಾಹತಃ|

14075019c ವಿಶನ್ನಿವ ಮಹಾಶೈಲೋ ಮಹೀಂ ವಜ್ರಪ್ರಪೀಡಿತಃ||

ಧನಂಜಯನ ಶರದಿಂದ ಹತಗೊಂಡು ಬೀಳುತ್ತಿದ್ದ ಆ ಆನೆಯು ವಜ್ರದಿಂದ ಹೊಡೆಯಲ್ಪಟ್ಟ ಮಹಾಶೈಲವು ಭೂಮಿಯ ಮೇಲೆ ಕುಸಿದು ಬೀಳುತ್ತಿದ್ದಂತೆ ಶೋಭಿಸುತ್ತಿತ್ತು.

14075020a ತಸ್ಮಿನ್ನಿಪತಿತೇ ನಾಗೇ ವಜ್ರದತ್ತಸ್ಯ ಪಾಂಡವಃ|

14075020c ತಂ ನ ಭೇತವ್ಯಮಿತ್ಯಾಹ ತತೋ ಭೂಮಿಗತಂ ನೃಪಮ್||

ಆನೆಯೊಂದಿಗೆ ವಜ್ರದತ್ತನೂ ಕೆಳಗೆ ಬೀಳಲು ಪಾಂಡವನು ಭೂಮಿಗತನಾದ ನೃಪನಿಗೆ “ಭಯಪಡಬೇಕಾಗಿಲ್ಲ!” ಎಂದು ಕೂಗಿ ಹೇಳಿದನು.

14075021a ಅಬ್ರವೀದ್ಧಿ ಮಹಾತೇಜಾಃ ಪ್ರಸ್ಥಿತಂ ಮಾಂ ಯುಧಿಷ್ಠಿರಃ|

14075021c ರಾಜಾನಸ್ತೇ ನ ಹಂತವ್ಯಾ ಧನಂಜಯ ಕಥಂ ಚನ||

14075022a ಸರ್ವಮೇತನ್ನರವ್ಯಾಘ್ರ ಭವತ್ವೇತಾವತಾ ಕೃತಮ್|

14075022c ಯೋಧಾಶ್ಚಾಪಿ ನ ಹಂತವ್ಯಾ ಧನಂಜಯ ರಣೇ ತ್ವಯಾ||

“ನಾನು ಹೊರಡುವಾಗ ಮಹಾತೇಜಸ್ವಿ ಯುಧಿಷ್ಠಿರನು “ಧನಂಜಯ! ಯಾವ ಕಾರಣಕ್ಕೂ ನೀನು ರಾಜರನ್ನು ಕೊಲ್ಲಬಾರದು! ಧನಂಜಯ! ರಣದಲ್ಲಿ ನೀನು ಯೋಧರನ್ನೂ ಕೊಲ್ಲಬಾರದು! ಇಷ್ಟುಮಾಡಿದರೆ ನರವ್ಯಾಘ್ರ! ನೀನು ಎಲ್ಲವನ್ನೂ ಮಾಡಿದಂತೆ!” ಎಂದು ಹೇಳಿದ್ದನು.

14075023a ವಕ್ತವ್ಯಾಶ್ಚಾಪಿ ರಾಜಾನಃ ಸರ್ವೈಃ ಸಹ ಸುಹೃಜ್ಜನೈಃ|

14075023c ಯುಧಿಷ್ಠಿರಸ್ಯಾಶ್ವಮೇಧೋ ಭವದ್ಭಿರನುಭೂಯತಾಮ್||

ಸುಹೃಜ್ಜನರೆಲ್ಲರೊಂದಿಗೆ ಯುಧಿಷ್ಠಿರನ ಅಶ್ವಮೇಧಕ್ಕೆ ನೀವೆಲ್ಲರೂ ಬರಬೇಕೆಂದೂ ಅವನು ಹೇಳಿದ್ದಾನೆ.

14075024a ಇತಿ ಭ್ರಾತೃವಚಃ ಶ್ರುತ್ವಾ ನ ಹನ್ಮಿ ತ್ವಾಂ ಜನಾಧಿಪ|

14075024c ಉತ್ತಿಷ್ಠ ನ ಭಯಂ ತೇಽಸ್ತಿ ಸ್ವಸ್ತಿಮಾನ್ ಗಚ್ಚ ಪಾರ್ಥಿವ||

ಜನಾಧಿಪ! ಅಣ್ಣನ ಈ ಮಾತನ್ನು ಕೇಳಿದ ನಾನು ನಿನ್ನನ್ನು ಸಂಹರಿಸುವುದಿಲ್ಲ. ಪಾರ್ಥಿವ! ಮೇಲೇಳು! ಭಯಪಡಬೇಡ! ಕ್ಷೇಮವಾಗಿ ಹೋಗು!

14075025a ಆಗಚ್ಚೇಥಾ ಮಹಾರಾಜ ಪರಾಂ ಚೈತ್ರೀಮುಪಸ್ಥಿತಾಮ್|

14075025c ತದಾಶ್ವಮೇಧೋ ಭವಿತಾ ಧರ್ಮರಾಜಸ್ಯ ಧೀಮತಃ||

ಮಹಾರಾಜ! ಬರುವ ಚೈತ್ರಹುಣ್ಣಿಮೆಯಂದು ಧೀಮತ ಧರ್ಮರಾಜ ಅಶ್ವಮೇಧವು ಆಗಲಿಕ್ಕಿದೆ. ಅದಕ್ಕೆ ಬರಬೇಕು!”

14075026a ಏವಮುಕ್ತಃ ಸ ರಾಜಾ ತು ಭಗದತ್ತಾತ್ಮಜಸ್ತದಾ|

14075026c ತಥೇತ್ಯೇವಾಬ್ರವೀದ್ವಾಕ್ಯಂ ಪಾಂಡವೇನಾಭಿನಿರ್ಜಿತಃ||

ಹೀಗೆ ಹೇಳಲು ಪಾಂಡವನಿಂದ ಪರಾಜಿತನಾದ ರಾಜಾ ಭಗದತ್ತಾತ್ಮಜನು ಹಾಗೆಯೇ ಆಗಲೆಂದು ಹೇಳಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಬ್ರಹ್ಮದತ್ತಪರಾಜಯೇ ಪಂಚಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣೇ ಬ್ರಹ್ಮದತ್ತಪರಾಜಯ ಎನ್ನುವ ಎಪ್ಪತ್ತೈದನೇ ಅಧ್ಯಾಯವು.

Comments are closed.