ಅಶ್ವಮೇಧಿಕ ಪರ್ವ
೭೩
ಅಶ್ವವನ್ನು ತಡೆದ ತ್ರಿಗರ್ತರೊಂದಿಗೆ ಅರ್ಜುನನ ಯುದ್ಧ (೧-೮). ಕೇತುವರ್ಮನ ವಧೆ (೯-೧೫). ಧೃತವರ್ಮನೊಡನೆ ಯುದ್ಧ; ತ್ರಿಗರ್ತರ ಪರಾಜಯ (೧೬-೩೪).
14073001 ವೈಶಂಪಾಯನ ಉವಾಚ
14073001a ತ್ರಿಗರ್ತೈರಭವದ್ಯುದ್ಧಂ ಕೃತವೈರೈಃ ಕಿರೀಟಿನಃ|
14073001c ಮಹಾರಥಸಮಾಜ್ಞಾತೈರ್ಹತಾನಾಂ ಪುತ್ರನಪ್ತೃಭಿಃ||
ವೈಶಂಪಾಯನನು ಹೇಳಿದನು: “ಯುದ್ಧದಲ್ಲಿ ಪುತ್ರರು ಮತ್ತು ಆಪ್ತರನ್ನು ಕಳೆದುಕೊಂಡಿದ್ದ, ಮಹಾರಥರೆಂದು ಖ್ಯಾತರಾಗಿದ್ದ ಮತ್ತು ಕಿರೀಟಿಯ ಬದ್ಧವೈರಿಗಳಾಗಿದ್ದ ತ್ರಿಗರ್ತರೊಡನೆ ಯುದ್ಧವು ನಡೆಯಿತು.
14073002a ತೇ ಸಮಾಜ್ಞಾಯ ಸಂಪ್ರಾಪ್ತಂ ಯಜ್ಞಿಯಂ ತುರಗೋತ್ತಮಮ್|
14073002c ವಿಷಯಾಂತೇ ತತೋ ವೀರಾ ದಂಶಿತಾಃ ಪರ್ಯವಾರಯನ್||
ಯಜ್ಞದ ಆ ಉತ್ತಮ ಕುದುರೆಯು ತಮ್ಮ ದೇಶದ ಗಡಿಯನ್ನು ತಲುಪಿದುದನ್ನು ತಿಳಿದುಕೊಂಡ ಆ ವೀರರು ಕವಚಧಾರಿಗಳಾಗಿ ಅದನ್ನು ತಡೆದರು.
14073003a ರಥಿನೋ ಬದ್ಧತೂಣೀರಾಃ ಸದಶ್ವೈಃ ಸಮಲಂಕೃತೈಃ|
14073003c ಪರಿವಾರ್ಯ ಹಯಂ ರಾಜನ್ಗ್ರಹೀತುಂ ಸಂಪ್ರಚಕ್ರಮುಃ||
ರಾಜನ್! ಆ ರಥಿಗಳು ತೂಣೀರಗಳನ್ನು ಕಟ್ಟಿಕೊಂಡು ಅಲಂಕೃತ ಕುದುರೆಗಳೊಂದಿಗೆ ಕುದುರೆಯನ್ನು ಸುತ್ತುವರೆದು ಅದನ್ನು ಕಟ್ಟಿಹಾಕಲು ತೊಡಗಿದರು.
14073004a ತತಃ ಕಿರೀಟೀ ಸಂಚಿಂತ್ಯ ತೇಷಾಂ ರಾಜ್ಞಾಂ ಚಿಕೀರ್ಷಿತಮ್|
14073004c ವಾರಯಾಮಾಸ ತಾನ್ವೀರಾನ್ಸಾಂತ್ವಪೂರ್ವಮರಿಂದಮಃ||
ಆಗ ಅರಿಂದಮ ಕಿರೀಟಿಯು ರಾಜಾ ಯುಧಿಷ್ಠಿರನು ಬಯಸಿದಂತೆ ಯೋಚಿಸಿ ಸಾಂತ್ವನಪೂರ್ವಕವಾಗಿ ಆ ವೀರರನ್ನು ತಡೆದನು.
14073005a ತಮನಾದೃತ್ಯ ತೇ ಸರ್ವೇ ಶರೈರಭ್ಯಹನಂಸ್ತದಾ|
14073005c ತಮೋರಜೋಭ್ಯಾಂ ಸಂಚನ್ನಾಂಸ್ತಾನ್ಕಿರೀಟೀ ನ್ಯವಾರಯತ್||
ಅವನನ್ನು ಅನಾದರಿಸಿ ಅವರೆಲ್ಲರೂ ಶರಗಳಿಂದ ಹೊಡೆಯತೊಡಗಲು, ತಮೋರಜಗುಣಗಳಿಂದ ತುಂಬಿಹೋಗಿದ್ದ ಅವರನ್ನು ಕಿರೀಟಿಯು ತಡೆದನು.
14073006a ಅಬ್ರವೀಚ್ಚ ತತೋ ಜಿಷ್ಣುಃ ಪ್ರಹಸನ್ನಿವ ಭಾರತ|
14073006c ನಿವರ್ತಧ್ವಮಧರ್ಮಜ್ಞಾಃ ಶ್ರೇಯೋ ಜೀವಿತಮೇವ ವಃ||
ಭಾರತ! ಆಗ ಜಿಷ್ಣುವು ನಸುನಗುತ್ತಾ ಅವರಿಗೆ “ಅಧರ್ಮಜ್ಞರೇ! ಹಿಂದಿರುಗಿರಿ! ಜೀವವನ್ನು ಉಳಿಸಿಕೊಳ್ಳುವುದೇ ನಿಮಗೆ ಶ್ರೇಯಸ್ಕರವು!” ಎಂದನು.
14073007a ಸ ಹಿ ವೀರಃ ಪ್ರಯಾಸ್ಯನ್ವೈ ಧರ್ಮರಾಜೇನ ವಾರಿತಃ|
14073007c ಹತಬಾಂಧವಾ ನ ತೇ ಪಾರ್ಥ ಹಂತವ್ಯಾಃ ಪಾರ್ಥಿವಾ ಇತಿ||
“ಪಾರ್ಥ! ಬಾಂಧವರನ್ನು ಕಳೆದುಕೊಂಡ ಪಾರ್ಥಿವರನ್ನು ನೀನು ಕೊಲ್ಲಬಾರದು!” ಎಂದು ಧರ್ಮರಾಜನು ಹೇಳಿ ತಡೆದಿದ್ದುದರಿಂದಲೇ ಆ ವೀರನು ಹೀಗೆ ಹೇಳಿದನು.
14073008a ಸ ತದಾ ತದ್ವಚಃ ಶ್ರುತ್ವಾ ಧರ್ಮರಾಜಸ್ಯ ಧೀಮತಃ|
14073008c ತಾನ್ನಿವರ್ತಧ್ವಮಿತ್ಯಾಹ ನ ನ್ಯವರ್ತಂತ ಚಾಪಿ ತೇ||
ಧೀಮತ ಧರ್ಮರಾಜನ ಆ ಮಾತನ್ನು ಕೇಳಿ ಅವನು ಅವರನ್ನು ತಡೆದನು. ಆದರೆ ಅವರು ಹಿಂದಿರುಗಲಿಲ್ಲ.
14073009a ತತಸ್ತ್ರಿಗರ್ತರಾಜಾನಂ ಸೂರ್ಯವರ್ಮಾಣಮಾಹವೇ|
14073009c ವಿತತ್ಯ ಶರಜಾಲೇನ ಪ್ರಜಹಾಸ ಧನಂಜಯಃ||
ಆಗ ಧನಂಜಯನು ತಿಗರ್ತ ರಾಜ ಸೂರ್ಯವರ್ಮನನ್ನು ಯುದ್ಧದಲ್ಲಿ ಶರಜಾಲದಿಂದ ಮುಚ್ಚಿ ಜೋರಾಗಿ ನಕ್ಕನು.
14073010a ತತಸ್ತೇ ರಥಘೋಷೇಣ ಖುರನೇಮಿಸ್ವನೇನ ಚ|
14073010c ಪೂರಯಂತೋ ದಿಶಃ ಸರ್ವಾ ಧನಂಜಯಮುಪಾದ್ರವನ್||
ಆಗ ಅವರು ರಥಘೋಷ ಮತ್ತು ರಥಚಕ್ರಗಳ ಶಬ್ಧಗಳೊಂದಿಗೆ ಎಲ್ಲ ದಿಕ್ಕುಗಳನ್ನೂ ಮೊಳಗಿಸುತ್ತಾ ಧನಂಜಯನನ್ನು ಆಕ್ರಮಣಿಸಿದರು.
14073011a ಸೂರ್ಯವರ್ಮಾ ತತಃ ಪಾರ್ಥೇ ಶರಾಣಾಂ ನತಪರ್ವಣಾಮ್|
14073011c ಶತಾನ್ಯಮುಂಚದ್ರಾಜೇಂದ್ರ ಲಘ್ವಸ್ತ್ರಮಭಿದರ್ಶಯನ್||
ರಾಜೇಂದ್ರ! ಸೂರ್ಯವರ್ಮನು ಪಾರ್ಥನ ಮೇಲೆ ನೂರಾರು ನತಪರ್ವ ಶರಗಳನ್ನು ಪ್ರಯೋಗಿಸಿ ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು.
14073012a ತಥೈವಾನ್ಯೇ ಮಹೇಷ್ವಾಸಾ ಯೇ ತಸ್ಯೈವಾನುಯಾಯಿನಃ|
14073012c ಮುಮುಚುಃ ಶರವರ್ಷಾಣಿ ಧನಂಜಯವಧೈಷಿಣಃ||
ಧನಂಜಯನನ್ನು ಕೊಲ್ಲಲು ಬಯಸಿದ ಅವನ ಅನ್ಯ ಮಹೇಷ್ವಾಸ ಅನುಯಾಯಿಗಳೂ ಅವನ ಮೇಲೆ ಶರವರ್ಷಗಳನ್ನೇ ಸುರಿಸಿದರು.
14073013a ಸ ತಾನ್ಜ್ಯಾಪುಂಖನಿರ್ಮುಕ್ತೈರ್ಬಹುಭಿಃ ಸುಬಹೂನ್ಶರಾನ್|
14073013c ಚಿಚ್ಚೇದ ಪಾಂಡವೋ ರಾಜಂಸ್ತೇ ಭೂಮೌ ನ್ಯಪತಂಸ್ತದಾ||
ರಾಜನ್! ಆಗ ಪಾಂಡವನು ಶಿಂಜಿನಿಯ ಮುಖದಿಂದ ಹೊರಟ ಅನೇಕ ಶರಗಳಿಂದ ಅವುಗಳನ್ನು ತುಂಡರಿಸಲು ಅವು ಭೂಮಿಯ ಮೇಲೆ ಬಿದ್ದವು.
14073014a ಕೇತುವರ್ಮಾ ತು ತೇಜಸ್ವೀ ತಸ್ಯೈವಾವರಜೋ ಯುವಾ|
14073014c ಯುಯುಧೇ ಭ್ರಾತುರರ್ಥಾಯ ಪಾಂಡವೇನ ಮಹಾತ್ಮನಾ||
ಸೂರ್ಯವರ್ಮನ ತಮ್ಮ ತೇಜಸ್ವೀ ಯುವಕ ಕೇತುವರ್ಮನು ಅಣ್ಣನ ಪರವಾಗಿ ಮಹಾತ್ಮ ಪಾಂಡವನೊಡನೆ ಯುದ್ಧಮಾಡಿದನು.
14073015a ತಮಾಪತಂತಂ ಸಂಪ್ರೇಕ್ಷ್ಯ ಕೇತುವರ್ಮಾಣಮಾಹವೇ|
14073015c ಅಭ್ಯಘ್ನನ್ನಿಶಿತೈರ್ಬಾಣೈರ್ಬೀಭತ್ಸುಃ ಪರವೀರಹಾ||
ಯುದ್ಧಕ್ಕೆ ಕೇತುವರ್ಮನು ಇಳಿದುದನ್ನು ನೋಡಿ ಪರವೀರಹ ಬೀಭತ್ಸುವು ನಿಶಿತ ಬಾಣಗಳಿಂದ ಅವನನ್ನು ಸಂಹರಿಸಿದನು.
14073016a ಕೇತುವರ್ಮಣ್ಯಭಿಹತೇ ಧೃತವರ್ಮಾ ಮಹಾರಥಃ|
14073016c ರಥೇನಾಶು ಸಮಾವೃತ್ಯ ಶರೈರ್ಜಿಷ್ಣುಮವಾಕಿರತ್||
ಕೇತುವರ್ಮನು ಹತನಾಗಲು ಮಹಾರಥ ಧೃತವರ್ಮನು ರಥಗಳಿಂದ ಸುತ್ತುವರೆದು ಶರಗಳಿಂದ ಜಿಷ್ಣುವನ್ನು ಮುಸುಕಿದನು.
14073017a ತಸ್ಯ ತಾಂ ಶೀಘ್ರತಾಮೀಕ್ಷ್ಯ ತುತೋಷಾತೀವ ವೀರ್ಯವಾನ್|
14073017c ಗುಡಾಕೇಶೋ ಮಹಾತೇಜಾ ಬಾಲಸ್ಯ ಧೃತವರ್ಮಣಃ||
ಬಾಲಕ ವೀರ್ಯವಾನ್ ಮಹಾತೇಜಸ್ವೀ ಧೃತವರ್ಮನ ಶೀಘ್ರತೆಯನ್ನು ನೋಡಿ ಗುಡಾಕೇಶನು ಸಂತುಷ್ಟನಾದನು.
14073018a ನ ಸಂದಧಾನಂ ದದೃಶೇ ನಾದದಾನಂ ಚ ತಂ ತದಾ|
14073018c ಕಿರಂತಮೇವ ಸ ಶರಾನ್ದದೃಶೇ ಪಾಕಶಾಸನಿಃ||
ಅವನು ಶರಗಳ ಸಂಧಾನ ಮಾಡುತ್ತಿರುವುದಾಗಲೀ ಪ್ರಯೋಗಿಸುತ್ತಿರುವುದಾಗಲೀ ಕಾಣುತ್ತಲೇ ಇರಲಿಲ್ಲ. ಶರಗಳನ್ನು ಸುರಿಸುತ್ತಿರುವುದನ್ನು ಮಾತ್ರ ಪಾಕಶಾಸನಿಯು ನೋಡಿದನು.
14073019a ಸ ತು ತಂ ಪೂಜಯಾಮಾಸ ಧೃತವರ್ಮಾಣಮಾಹವೇ|
14073019c ಮನಸಾ ಸ ಮುಹೂರ್ತಂ ವೈ ರಣೇ ಸಮಭಿಹರ್ಷಯನ್||
ಯುದ್ಧದಲ್ಲಿ ಧೃತವರ್ಮನ ಉತ್ಸಾಹವನ್ನು ನೋಡಿ ಅರ್ಜುನನು ಒಂದು ಕ್ಷಣ ರಣದಲ್ಲಿಯೇ ಮನಸಾ ಅವನನ್ನು ಶ್ಲಾಘಿಸಿದನು.
14073020a ತಂ ಪನ್ನಗಮಿವ ಕ್ರುದ್ಧಂ ಕುರುವೀರಃ ಸ್ಮಯನ್ನಿವ|
14073020c ಪ್ರೀತಿಪೂರ್ವಂ ಮಹಾರಾಜ ಪ್ರಾಣೈರ್ನ ವ್ಯಪರೋಪಯತ್||
ಮಹಾರಾಜ! ಪನ್ನಗದಂತೆ ಕ್ರುದ್ಧನಾದ ಅವನನ್ನು ಕುರುವೀರನು ನಸುನಗುತ್ತಲೇ ಪ್ರೀತಿಪೂರ್ವಕವಾಗಿ ಅವನ ಪ್ರಾಣವನ್ನು ತೆಗೆಯಲಿಲ್ಲ.
14073021a ಸ ತಥಾ ರಕ್ಷ್ಯಮಾಣೋ ವೈ ಪಾರ್ಥೇನಾಮಿತತೇಜಸಾ|
14073021c ಧೃತವರ್ಮಾ ಶರಂ ತೀಕ್ಷ್ಣಂ ಮುಮೋಚ ವಿಜಯೇ ತದಾ||
ಹಾಗೆ ಅಮಿತತೇಜಸ್ವಿ ಪಾರ್ಥನಿಂದ ರಕ್ಷಿಸಲ್ಪಟ್ಟ ಧೃತವರ್ಮನು ವಿಜಯನ ಮೇಲೆ ತೀಕ್ಷ್ಣ ಶರವನ್ನು ಪ್ರಯೋಗಿಸಿದನು.
14073022a ಸ ತೇನ ವಿಜಯಸ್ತೂರ್ಣಮಸ್ಯನ್ವಿದ್ಧಃ ಕರೇ ಭೃಶಮ್|
14073022c ಮುಮೋಚ ಗಾಂಡೀವಂ ದುಃಖಾತ್ತತ್ಪಪಾತಾಥ ಭೂತಲೇ||
ಕೂಡಲೇ ಅದು ವಿಜಯನ ಕೈಯಲ್ಲಿ ಜೋರಾಗಿ ಬಂದು ನೆಟ್ಟಿಕೊಂಡಿತು. ಅವನು ದುಃಖದಿಂದ ಗಾಂಡೀವವನ್ನು ಬಿಡಲು ಅದು ಭೂತಲದಲ್ಲಿ ಬಿದ್ದಿತು.
14073023a ಧನುಷಃ ಪತತಸ್ತಸ್ಯ ಸವ್ಯಸಾಚಿಕರಾದ್ವಿಭೋ|
14073023c ಇಂದ್ರಸ್ಯೇವಾಯುಧಸ್ಯಾಸೀದ್ರೂಪಂ ಭರತಸತ್ತಮ||
ಭರತಸತ್ತಮ! ವಿಭೋ! ಸವ್ಯಸಾಚಿಯ ಕರದಿಂದ ಜಾರಿ ಬಿದ್ದ ಆ ಧನುಸ್ಸು ಇಂದ್ರನ ಆಯುಧದಂತೆಯೇ ಕಾಣುತ್ತಿತ್ತು.
14073024a ತಸ್ಮಿನ್ನಿಪತಿತೇ ದಿವ್ಯೇ ಮಹಾಧನುಷಿ ಪಾರ್ಥಿವ|
14073024c ಜಹಾಸ ಸಸ್ವನಂ ಹಾಸಂ ಧೃತವರ್ಮಾ ಮಹಾಹವೇ||
ಪಾರ್ಥಿವ! ಆ ದಿವ್ಯ ಮಹಾಧನುಸ್ಸು ಕೆಳಗೆ ಬೀಳಲು ಯುದ್ಧದಲ್ಲಿ ಧೃತವರ್ಮನು ಅಟ್ಟಹಾಸದಿಂದ ನಗತೊಡಗಿದನು.
14073025a ತತೋ ರೋಷಾನ್ವಿತೋ ಜಿಷ್ಣುಃ ಪ್ರಮೃಜ್ಯ ರುಧಿರಂ ಕರಾತ್|
14073025c ಧನುರಾದತ್ತ ತದ್ದಿವ್ಯಂ ಶರವರ್ಷಂ ವವರ್ಷ ಚ||
ಆಗ ರೋಷಾನ್ವಿತನಾದ ಜಿಷ್ಣುವು ಕೈಗಳಿಂದ ರಕ್ತವನ್ನು ಒರೆಸಿಕೊಂಡು ಆ ದಿವ್ಯ ಧನುಸ್ಸನ್ನು ಎತ್ತಿಕೊಂಡು ಶರವರ್ಷವನ್ನು ಸುರಿಸಿದನು.
14073026a ತತೋ ಹಲಹಲಾಶಬ್ದೋ ದಿವಸ್ಪೃಗಭವತ್ತದಾ|
14073026c ನಾನಾವಿಧಾನಾಂ ಭೂತಾನಾಂ ತತ್ಕರ್ಮಾತೀವ ಶಂಸತಾಮ್||
ಅವನ ಆ ಕರ್ಮವನ್ನು ಪ್ರಶಂಸಿಸುತ್ತಿದ್ದ ನಾನಾವಿಧದ ಭೂತಗಳ ಹಲಹಲಾ ಶಬ್ಧವು ಗಗನವನ್ನು ಮುಟ್ಟಿತು.
14073027a ತತಃ ಸಂಪ್ರೇಕ್ಷ್ಯ ತಂ ಕ್ರುದ್ಧಂ ಕಾಲಾಂತಕಯಮೋಪಮಮ್|
14073027c ಜಿಷ್ಣುಂ ತ್ರೈಗರ್ತಕಾ ಯೋಧಾಸ್ತ್ವರಿತಾಃ ಪರ್ಯವಾರಯನ್||
ಕಾಲಾಂತಕ ಯಮನಂತೆ ಕ್ರುದ್ಧನಾಗಿದ್ದ ಜಿಷ್ಣುವನ್ನು ನೋಡಿ ತೈಗರ್ತಕ ಯೋಧರು ತ್ವರೆಮಾಡಿ ಅವನನ್ನು ಸುತ್ತುವರೆದು ಮುತ್ತಿಗೆ ಹಾಕಿದರು.
14073028a ಅಭಿಸೃತ್ಯ ಪರೀಪ್ಸಾರ್ಥಂ ತತಸ್ತೇ ಧೃತವರ್ಮಣಃ|
14073028c ಪರಿವವ್ರುರ್ಗುಡಾಕೇಶಂ ತತ್ರಾಕ್ರುಧ್ಯದ್ಧನಂಜಯಃ||
ಧೃತವರ್ಮನನ್ನು ರಕ್ಷಿಸುವ ಸಲುವಾಗಿ ಅವರು ಗುಡಾಕೇಶನನ್ನು ಸುತ್ತುವರೆದು ಮುತ್ತಿದರು. ಆಗ ಧನಂಜಯನು ಕ್ರೋಧಿತನಾದನು.
14073029a ತತೋ ಯೋಧಾನ್ಜಘಾನಾಶು ತೇಷಾಂ ಸ ದಶ ಚಾಷ್ಟ ಚ|
14073029c ಮಹೇಂದ್ರವಜ್ರಪ್ರತಿಮೈರಾಯಸೈರ್ನಿಶಿತೈಃ ಶರೈಃ||
ಅವನು ಮಹೇಂದ್ರನ ವಜ್ರಗಳಿಗೆ ಸಮಾನ ನಿಶಿತ ಉಕ್ಕಿನ ಶರಗಳಿಂದ ಅವರ ಹದಿನೆಂಟು ಯೋಧರನ್ನು ಸಂಹರಿಸಿದನು.
14073030a ತಾಂಸ್ತು ಪ್ರಭಗ್ನಾನ್ಸಂಪ್ರೇಕ್ಷ್ಯ ತ್ವರಮಾಣೋ ಧನಂಜಯಃ|
14073030c ಶರೈರಾಶೀವಿಷಾಕಾರೈರ್ಜಘಾನ ಸ್ವನವದ್ಧಸನ್||
ಅವರ ಸೇನೆಯು ತುಂಡಾಗುತ್ತಿರುವುದನ್ನು ನೋಡಿ ಅದನ್ನು ಧನಂಜಯನು ತ್ವರೆಮಾಡಿ ಸರ್ಪವಿಷದಾಕಾರ ಶರಗಳಿಂದ ಪ್ರಹರಿಸಿದನು.
14073031a ತೇ ಭಗ್ನಮನಸಃ ಸರ್ವೇ ತ್ರೈಗರ್ತಕಮಹಾರಥಾಃ|
14073031c ದಿಶೋ ವಿದುದ್ರುವುಃ ಸರ್ವಾ ಧನಂಜಯಶರಾರ್ದಿತಾಃ||
ಆ ತ್ರೈಗರ್ತಕ ಮಹಾರಥರೆಲ್ಲರೂ ಧನಂಜಯನ ಶರಗಳಿಂದ ಪೀಡಿತರಾಗಿ ಭಗ್ನಮನಸ್ಕರಾಗಿ ಎಲ್ಲ ದಿಕ್ಕುಗಳಲ್ಲಿಯೂ ಓಡಿಹೋದರು.
14073032a ತ ಊಚುಃ ಪುರುಷವ್ಯಾಘ್ರಂ ಸಂಶಪ್ತಕನಿಷೂದನಮ್|
14073032c ತವ ಸ್ಮ ಕಿಂಕರಾಃ ಸರ್ವೇ ಸರ್ವೇ ಚ ವಶಗಾಸ್ತವ||
ಅವರು ಪುರುಷವ್ಯಾಘ್ರ ಸಂಶಪ್ತಕನಿಷೂದನನಿಗೆ ಹೇಳಿದರು: “ನಾವೆಲ್ಲರೂ ನಿನ್ನ ಕಿಂಕರರು. ಎಲ್ಲರೂ ನಿನ್ನ ವಶದಲ್ಲಿ ಬಂದಿದ್ದೇವೆ.
14073033a ಆಜ್ಞಾಪಯಸ್ವ ನಃ ಪಾರ್ಥ ಪ್ರಹ್ವಾನ್ಪ್ರೇಷ್ಯಾನವಸ್ಥಿತಾನ್|
14073033c ಕರಿಷ್ಯಾಮಃ ಪ್ರಿಯಂ ಸರ್ವಂ ತವ ಕೌರವನಂದನ||
ಪಾರ್ಥ! ಕೌರವನಂದನ! ವಿನೀತರಾಗಿ ಸೇವಕರಂತೆ ನಿಂತಿರುವ ನಮಗೆ ಆಜ್ಞಾಪಿಸು! ನಿನಗೆ ಪ್ರಿಯವಾದುದೆಲ್ಲವನ್ನೂ ನಾವು ಮಾಡುತ್ತೇವೆ!”
14073034a ಏತದಾಜ್ಞಾಯ ವಚನಂ ಸರ್ವಾಂಸ್ತಾನಬ್ರವೀತ್ತದಾ|
14073034c ಜೀವಿತಂ ರಕ್ಷತ ನೃಪಾಃ ಶಾಸನಂ ಗೃಹ್ಯತಾಮಿತಿ||
ಅವರೆಲ್ಲರ ಮಾತುಗಳನ್ನು ಕೇಳಿ ಅರ್ಜುನನು “ನೃಪರೇ! ನಮ್ಮ ಶಾಸನವನ್ನು ಸ್ವೀಕರಿಸಿಕೊಂಡು ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ!” ಎಂದು ಆಜ್ಞಾಪಿಸಿದನು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ತ್ರಿಗರ್ತಪರಾಭವೇ ತ್ರಿಸಪ್ತತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣ ಎನ್ನುವ ಎಪ್ಪತ್ಮೂರನೇ ಅಧ್ಯಾಯವು.