ಅಶ್ವಮೇಧಿಕ ಪರ್ವ
೭೦
ಪರಿಕ್ಷಿತನ ಅದ್ಭುತ ಜನ್ಮದ ಕುರಿತು ಕೇಳಿದ ಪಾಂಡವರು ಕೃಷ್ಣನನ್ನು ಪೂಜಿಸಿದುದು (೧-೯). ಅಶ್ವಮೇಧ ಯಾಗಕ್ಕೆ ವ್ಯಾಸನು ಸಮ್ಮತಿಯನ್ನಿತ್ತಿದುದು (೧೦-೧೭). ಕೃಷ್ಣನೇ ಯಾಗದ ದೀಕ್ಷೆಯನ್ನು ಪಡೆದುಕೊಳ್ಳಬೇಕೆಂದು ಯುಧಿಷ್ಠಿರನು ಕೇಳಿಕೊಳ್ಳಲು, ಕೃಷ್ಣನು ಯುಧಿಷ್ಠಿರನೇ ಆ ಯಾಗವನ್ನು ನಡೆಸಬೇಕೆಂದು ಸೂಚಿಸಿದುದು (೧೮-೨೫).
14070001 ವೈಶಂಪಾಯನ ಉವಾಚ
14070001a ತಾನ್ಸಮೀಪಗತಾನ್ ಶೃತ್ವಾ ಪಾಂಡವಾನ್ ಶತ್ರುಕರ್ಶನಃ|
14070001c ವಾಸುದೇವಃ ಸಹಾಮಾತ್ಯಃ ಪ್ರತ್ಯುದ್ಯಾತೋ ದಿದೃಕ್ಷಯಾ||
ವೈಶಂಪಾಯನನು ಹೇಳಿದನು: “ಪಾಂಡವರು ಸಮೀಪದಲ್ಲಿಯೇ ಬಂದಿದ್ದಾರೆಂದು ಕೇಳಿದ ಶತ್ರುಕರ್ಶನ ವಾಸುದೇವನು ಅಮಾತ್ಯರೊಂದಿಗೆ ಅವರನ್ನು ಕಾಣಲು ಬಂದನು.
14070002a ತೇ ಸಮೇತ್ಯ ಯಥಾನ್ಯಾಯಂ ಪಾಂಡವಾ ವೃಷ್ಣಿಭಿಃ ಸಹ|
14070002c ವಿವಿಶುಃ ಸಹಿತಾ ರಾಜನ್ಪುರಂ ವಾರಣಸಾಹ್ವಯಮ್||
ರಾಜನ್! ಪಾಂಡವರು ವೃಷ್ಣಿಗಳೊಂದಿಗೆ ಯಥಾನ್ಯಾಯವಾಗಿ ಕಲೆತು ಒಟ್ಟಿಗೇ ವಾರಣಸಾಹ್ವಯ ಪುರವನ್ನು ಪ್ರವೇಶಿಸಿದರು.
14070003a ಮಹತಸ್ತಸ್ಯ ಸೈನ್ಯಸ್ಯ ಖುರನೇಮಿಸ್ವನೇನ ಚ|
14070003c ದ್ಯಾವಾಪೃಥಿವ್ಯೌ ಖಂ ಚೈವ ಶಬ್ದೇನಾಸೀತ್ಸಮಾವೃತಮ್||
ಆ ಮಹಾ ಸೇನೆಯ ಮತ್ತು ರಥಚಕ್ರಗಳ ಶಬ್ಧಗಳಿಂದ ಭೂಮಿ-ಸ್ವರ್ಗಗಳ ಮಧ್ಯದ ಆಕಾಶವು ತುಂಬಿಹೋಯಿತು.
14070004a ತೇ ಕೋಶಮಗ್ರತಃ ಕೃತ್ವಾ ವಿವಿಶುಃ ಸ್ವಪುರಂ ತದಾ|
14070004c ಪಾಂಡವಾಃ ಪ್ರೀತಮನಸಃ ಸಾಮಾತ್ಯಾಃ ಸಸುಹೃದ್ಗಣಾಃ||
ಆಗ ಪಾಂಡವರು ಪ್ರೀತಮನಸ್ಕರಾಗಿ ಅಮಾತ್ಯರು ಮತ್ತು ಸ್ನೇಹಿತಗಣಗಳೊಂದಿಗೆ ಕೋಶವನ್ನು ಮುಂದೆಮಾಡಿಕೊಂಡು ತಮ್ಮ ಪುರವನ್ನು ಪ್ರವೇಶಿಸಿದರು.
14070005a ತೇ ಸಮೇತ್ಯ ಯಥಾನ್ಯಾಯಂ ಧೃತರಾಷ್ಟ್ರಂ ಜನಾಧಿಪಮ್|
14070005c ಕೀರ್ತಯಂತಃ ಸ್ವನಾಮಾನಿ ತಸ್ಯ ಪಾದೌ ವವಂದಿರೇ||
ಅವರು ಯಥಾನ್ಯಾಯವಾಗಿ ಜನಾಧಿಪ ಧೃತರಾಷ್ಟ್ರನನ್ನು ಸಂಧಿಸಿ ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಳ್ಳುತ್ತಾ ಅವನ ಪಾದಗಳಿಗೆ ವಂದಿಸಿದರು.
14070006a ಧೃತರಾಷ್ಟ್ರಾದನು ಚ ತೇ ಗಾಂಧಾರೀಂ ಸುಬಲಾತ್ಮಜಾಮ್|
14070006c ಕುಂತೀಂ ಚ ರಾಜಶಾರ್ದೂಲ ತದಾ ಭರತಸತ್ತಮಾಃ||
14070007a ವಿದುರಂ ಪೂಜಯಿತ್ವಾ ಚ ವೈಶ್ಯಾಪುತ್ರಂ ಸಮೇತ್ಯ ಚ|
14070007c ಪೂಜ್ಯಮಾನಾಃ ಸ್ಮ ತೇ ವೀರಾ ವ್ಯರಾಜಂತ ವಿಶಾಂ ಪತೇ||
ರಾಜಶಾರ್ದೂಲ! ವಿಶಾಂಪತೇ! ಧೃತರಾಷ್ಟ್ರನ ನಂತರ ಆ ಭರತಸತ್ತಮರು ಸುಬಲಾತ್ಮಜೆ ಗಾಂಧಾರೀ, ಕುಂತೀ ಮತ್ತು ವಿದುರರನ್ನು ಪೂಜಿಸಿ ವೈಶ್ಯಾಪುತ್ರ ಯುಯುತ್ಸುವನ್ನು ಸಂಧಿಸಿದರು. ಅವರಿಂತ ಸನ್ಮಾನಿತರಾದ ಆ ವೀರರು ವಿರಾಜಿಸುತ್ತಿದ್ದರು.
14070008a ತತಸ್ತತ್ಪರಮಾಶ್ಚರ್ಯಂ ವಿಚಿತ್ರಂ ಮಹದದ್ಭುತಮ್|
14070008c ಶುಶ್ರುವುಸ್ತೇ ತದಾ ವೀರಾಃ ಪಿತುಸ್ತೇ ಜನ್ಮ ಭಾರತ||
ಭಾರತ! ಆಗ ಆ ವೀರರು ವಿಚಿತ್ರವೂ ಮಹದದ್ಭುತವೂ ಪರಮಾಶ್ಚರ್ಯವೂ ಆದ ನಿನ್ನ ತಂದೆಯ ಜನ್ಮದ ಕುರಿತು ಕೇಳಿದರು.
14070009a ತದುಪಶ್ರುತ್ಯ ತೇ ಕರ್ಮ ವಾಸುದೇವಸ್ಯ ಧೀಮತಃ|
14070009c ಪೂಜಾರ್ಹಂ ಪೂಜಯಾಮಾಸುಃ ಕೃಷ್ಣಂ ದೇವಕಿನಂದನಮ್||
ಧೀಮತ ವಾಸುದೇವನ ಆ ಕೃತ್ಯವನ್ನು ಕೇಳಿ ಅವರು ಪೂಜಾರ್ಹನಾದ ದೇವಕಿನಂದನ ಕೃಷ್ಣನನ್ನು ಪೂಜಿಸಿದರು.
14070010a ತತಃ ಕತಿಪಯಾಹಸ್ಯ ವ್ಯಾಸಃ ಸತ್ಯವತೀಸುತಃ|
14070010c ಆಜಗಾಮ ಮಹಾತೇಜಾ ನಗರಂ ನಾಗಸಾಹ್ವಯಮ್||
ಅದಾದ ಕೆಲವು ದಿನಗಳ ನಂತರ ಸತ್ಯವತೀ ಸುತ ಮಹಾತೇಜಸ್ವೀ ವ್ಯಾಸನು ನಾಗಸಾಹ್ವಯ ನಗರಕ್ಕೆ ಆಗಮಿಸಿದನು.
14070011a ತಸ್ಯ ಸರ್ವೇ ಯಥಾನ್ಯಾಯಂ ಪೂಜಾಂ ಚಕ್ರುಃ ಕುರೂದ್ವಹಾಃ|
14070011c ಸಹ ವೃಷ್ಣ್ಯಂಧಕವ್ಯಾಘ್ರೈರುಪಾಸಾಂ ಚಕ್ರಿರೇ ತದಾ||
ಆಗ ಎಲ್ಲ ಕುರೂದ್ವಹರೂ ವೃಷ್ಣಿ-ಅಂಧಕವ್ಯಾಘ್ರರೊಂದಿಗೆ ಅವನಿಗೆ ಯಥಾನ್ಯಾಯವಾಗಿ ಸೇವೆಸಲ್ಲಿಸಿದರು.
14070012a ತತ್ರ ನಾನಾವಿಧಾಕಾರಾಃ ಕಥಾಃ ಸಮನುಕೀರ್ತ್ಯ ವೈ|
14070012c ಯುಧಿಷ್ಠಿರೋ ಧರ್ಮಸುತೋ ವ್ಯಾಸಂ ವಚನಮಬ್ರವೀತ್||
ಅಲ್ಲಿ ನಾನಾ ವಿಧದ ಮಾತುಕಥೆಗಳು ನಡೆಯುತ್ತಿರಲು ಧರ್ಮಸುತ ಯುಧಿಷ್ಠಿರನು ವ್ಯಾಸನಿಗೆ ಇಂತೆಂದನು:
14070013a ಭವತ್ಪ್ರಸಾದಾದ್ಭಗವನ್ಯದಿದಂ ರತ್ನಮಾಹೃತಮ್|
14070013c ಉಪಯೋಕ್ತುಂ ತದಿಚ್ಚಾಮಿ ವಾಜಿಮೇಧೇ ಮಹಾಕ್ರತೌ||
“ಭಗವನ್! ನಿನ್ನ ಅನುಗ್ರಹದಿಂದ ಈ ರತ್ನವನ್ನು ತಂದಿದ್ದೇವೆ. ಇದನ್ನು ಮಹಾಕ್ರತು ವಾಜಿಮೇಧಕ್ಕೆ ಉಪಯೋಗಿಸಲು ಇಚ್ಛಿಸುತ್ತೇನೆ.
14070014a ತದನುಜ್ಞಾತುಮಿಚ್ಚಾಮಿ ಭವತಾ ಮುನಿಸತ್ತಮ|
14070014c ತ್ವದಧೀನಾ ವಯಂ ಸರ್ವೇ ಕೃಷ್ಣಸ್ಯ ಚ ಮಹಾತ್ಮನಃ||
ಮುನಿಸತ್ತಮ! ನೀನು ನನಗೆ ಅಪ್ಪಣೆಯನ್ನು ಕೊಡಬೇಕು. ನಾವೆಲ್ಲರೂ ನಿನ್ನ ಮತ್ತು ಮಹಾತ್ಮ ಕೃಷ್ಣನ ಅಧೀನದಲ್ಲಿದ್ದೇವೆ.”
14070015 ವ್ಯಾಸ ಉವಾಚ
14070015a ಅನುಜಾನಾಮಿ ರಾಜಂಸ್ತ್ವಾಂ ಕ್ರಿಯತಾಂ ಯದನಂತರಮ್|
14070015c ಯಜಸ್ವ ವಾಜಿಮೇಧೇನ ವಿಧಿವದ್ದಕ್ಷಿಣಾವತಾ||
ವ್ಯಾಸನು ಹೇಳಿದನು: “ರಾಜನ್! ನಿನಗೆ ಅನುಮತಿಯನ್ನು ಕೊಡುತ್ತಿದ್ದೇನೆ. ಇದರ ನಂತರದ ಕಾರ್ಯಗಳನ್ನು ನೀನು ಮಾಡಬೇಕು. ವಿಧಿವತ್ತಾಗಿ ದಕ್ಷಿಣಾಯುಕ್ತವಾದ ವಾಜಿಮೇಧವನ್ನು ಯಜಿಸು!
14070016a ಅಶ್ವಮೇಧೋ ಹಿ ರಾಜೇಂದ್ರ ಪಾವನಃ ಸರ್ವಪಾಪ್ಮನಾಮ್|
14070016c ತೇನೇಷ್ಟ್ವಾ ತ್ವಂ ವಿಪಾಪ್ಮಾ ವೈ ಭವಿತಾ ನಾತ್ರ ಸಂಶಯಃ||
ರಾಜೇಂದ್ರ! ಅಶ್ವಮೇಧವೇ ಸರ್ವಪಾಪಗಳನ್ನು ಪಾವನಗೊಳಿಸುತ್ತದೆ. ಆ ಇಷ್ಟಿಯಿಂದ ನೀನು ಪಾಪರಹಿತನಾಗುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ.””
14070017 ವೈಶಂಪಾಯನ ಉವಾಚ
14070017a ಇತ್ಯುಕ್ತಃ ಸ ತು ಧರ್ಮಾತ್ಮಾ ಕುರುರಾಜೋ ಯುಧಿಷ್ಠಿರಃ|
14070017c ಅಶ್ವಮೇಧಸ್ಯ ಕೌರವ್ಯ ಚಕಾರಾಹರಣೇ ಮತಿಮ್||
ವೈಶಂಪಾಯನನು ಹೇಳಿದನು: “ಕೌರವ್ಯ! ಆ ಧರ್ಮಾತ್ಮನು ಹೀಗೆ ಹೇಳಲು ಕುರುರಾಜ ಯುಧಿಷ್ಠಿರನು ಅಶ್ವಮೇಧವನ್ನು ಕೈಗೊಳ್ಳಲು ನಿರ್ಧರಿಸಿದನು.
14070018a ಸಮನುಜ್ಞಾಪ್ಯ ತು ಸ ತಂ ಕೃಷ್ಣದ್ವೈಪಾಯನಂ ನೃಪಃ|
14070018c ವಾಸುದೇವಮಥಾಮಂತ್ರ್ಯ ವಾಗ್ಮೀ ವಚನಮಬ್ರವೀತ್||
ಕೃಷ್ಣದ್ವೈಪಾಯನನ ಅಪ್ಪಣೆಯನ್ನು ಪಡೆದ ವಾಗ್ಮೀ ನೃಪನು ವಾಸುದೇವನನ್ನು ಆಮಂತ್ರಿಸಿ ಇಂತೆಂದನು:
14070019a ದೇವಕೀ ಸುಪ್ರಜಾ ದೇವೀ ತ್ವಯಾ ಪುರುಷಸತ್ತಮ|
14070019c ಯದ್ಬ್ರೂಯಾಂ ತ್ವಾಂ ಮಹಾಬಾಹೋ ತತ್ಕೃಥಾಸ್ತ್ವಮಿಹಾಚ್ಯುತ||
“ಪುರುಷಸತ್ತಮ! ನಿನ್ನಿಂದಾಗಿ ದೇವೀ ದೇವಕಿಯು ಸುಪ್ರಜಾ ಎಂದೆನಿಸಿಕೊಂಡಳು. ಮಹಾಬಾಹೋ! ಅಚ್ಯುತ! ಈಗ ನಾನು ಹೇಳುವುದನ್ನು ನೀನು ಮಾಡಿಕೊಡಬೇಕು.
14070020a ತ್ವತ್ಪ್ರಭಾವಾರ್ಜಿತಾನ್ಭೋಗಾನಶ್ನೀಮ ಯದುನಂದನ|
14070020c ಪರಾಕ್ರಮೇಣ ಬುದ್ಧ್ಯಾ ಚ ತ್ವಯೇಯಂ ನಿರ್ಜಿತಾ ಮಹೀ||
ಯದುನಂದನ! ನಿನ್ನ ಪ್ರಭಾವದಿಂದ ಜಯಿಸಿದ ಸಂಪತ್ತನ್ನು ನಾವು ಭೋಗಿಸುತ್ತಿದ್ದೇವೆ. ನಿನ್ನ ಬುದ್ಧಿ-ಪರಾಕ್ರಮಗಳಿಂದ ನೀನೇ ಈ ಮಹಿಯನ್ನು ಜಯಿಸಿದ್ದೀಯೆ.
14070021a ದೀಕ್ಷಯಸ್ವ ತ್ವಮಾತ್ಮಾನಂ ತ್ವಂ ನಃ ಪರಮಕೋ ಗುರುಃ|
14070021c ತ್ವಯೀಷ್ಟವತಿ ಧರ್ಮಜ್ಞ ವಿಪಾಪ್ಮಾ ಸ್ಯಾಮಹಂ ವಿಭೋ|
14070021e ತ್ವಂ ಹಿ ಯಜ್ಞೋಽಕ್ಷರಃ ಸರ್ವಸ್ತ್ವಂ ಧರ್ಮಸ್ತ್ವಂ ಪ್ರಜಾಪತಿಃ||
ನಮಗೆ ಪರಮ ಗುರುವಾಗಿರುವ ನೀನೇ ಈ ಯಾಗಕ್ಕೆ ದೀಕ್ಷಿತನಾಗು. ಧರ್ಮಜ್ಞ! ವಿಭೋ! ನೀನೇ ಈ ಇಷ್ಟಿಯನ್ನು ನೆರವೇರಿಸಿದರೆ ನಾವು ವಿಪಾಪಿಗಳಾಗುತ್ತೇವೆ. ನೀನೇ ಯಜ್ಞ. ಅಕ್ಷರ. ಎಲ್ಲವೂ ನೀನೇ. ಧರ್ಮ ಮತ್ತು ಪ್ರಜಾಪತಿಯೂ ನೀನೇ.”
14070022 ವಾಸುದೇವ ಉವಾಚ
14070022a ತ್ವಮೇವೈತನ್ಮಹಾಬಾಹೋ ವಕ್ತುಮರ್ಹಸ್ಯರಿಂದಮ|
14070022c ತ್ವಂ ಗತಿಃ ಸರ್ವಭೂತಾನಾಮಿತಿ ಮೇ ನಿಶ್ಚಿತಾ ಮತಿಃ||
ವಾಸುದೇವನು ಹೇಳಿದನು: “ಮಹಾಬಾಹೋ! ಅರಿಂದಮ! ನಿನ್ನಂಥವನು ಹೀಗೆ ಹೇಳುವುದು ಯೋಗ್ಯವಾಗಿಯೇ ಇದೆ. ಆದರೆ ನೀನೇ ಸರ್ವಭೂತಗಳಿಗೆ ಗತಿ ಎಂದು ನನ್ನ ಮತಿಯ ನಿಶ್ಚಯ.
14070023a ತ್ವಂ ಚಾದ್ಯ ಕುರುವೀರಾಣಾಂ ಧರ್ಮೇಣಾಭಿವಿರಾಜಸೇ|
14070023c ಗುಣಭೂತಾಃ ಸ್ಮ ತೇ ರಾಜಂಸ್ತ್ವಂ ನೋ ರಾಜನ್ಮತೋ ಗುರುಃ||
ಕುರುವೀರರಲ್ಲಿ ನೀನೇ ಇಂದು ಧರ್ಮದಿಂದ ವಿರಾಜಿಸುತ್ತಿರುವೆ. ರಾಜನ್! ನಾವೆಲ್ಲರೂ ನಿನ್ನ ಅನುಯಾಯಿಗಳು. ನಮಗೆ ನೀನು ರಾಜ ಮಾತ್ರನಲ್ಲದೇ ಗುರುವೂ ಆಗಿರುವೆ!
14070024a ಯಜಸ್ವ ಮದನುಜ್ಞಾತಃ ಪ್ರಾಪ್ತ ಏವ ಕ್ರತುರ್ಮಯಾ|
14070024c ಯುನಕ್ತು ನೋ ಭವಾನ್ಕಾರ್ಯೇ ಯತ್ರ ವಾಂಚಸಿ ಭಾರತ|
14070024e ಸತ್ಯಂ ತೇ ಪ್ರತಿಜಾನಾಮಿ ಸರ್ವಂ ಕರ್ತಾಸ್ಮಿ ತೇಽನಘ||
ಭಾರತ! ಅನಘ! ನನ್ನ ಅನುಮತಿಯಂತೆ ನೀನೇ ಈ ಯಜ್ಞವನ್ನು ಮಾಡು. ನೀನು ಯಾವ ಕೆಲಸಗಳನ್ನು ಹೇಳುತ್ತೀಯೋ ಅವೆಲ್ಲವನ್ನೂ ನಾನು ಮಾಡುತ್ತೇನೆ. ಎಲ್ಲವನ್ನೂ ಮಾಡುವೆನೆಂದು ಸತ್ಯಪ್ರತಿಜ್ಞೆಯನ್ನು ಮಾಡುತ್ತೇನೆ.
14070025a ಭೀಮಸೇನಾರ್ಜುನೌ ಚೈವ ತಥಾ ಮಾದ್ರವತೀಸುತೌ|
14070025c ಇಷ್ಟವಂತೋ ಭವಿಷ್ಯಂತಿ ತ್ವಯೀಷ್ಟವತಿ ಭಾರತ||
ಭಾರತ! ನೀನು ಯಜ್ಞಮಾಡಿದರೆ ಭೀಮಸೇನ-ಅರ್ಜುನರೂ ಹಾಗೆಯೇ ಮಾದ್ರವತೀ ಸುತರೂ ಯಜ್ಞವನ್ನು ಮಾಡಿದಂತಾಗಿ ಅದರ ಫಲವನ್ನು ಪಡೆದುಕೊಳ್ಳುತ್ತಾರೆ.””
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣವ್ಯಾಸಾನುಜ್ಞಾಯಾಂ ಸಪ್ತತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣವ್ಯಾಸಾನುಜ್ಞಯಾ ಎನ್ನುವ ಎಪ್ಪತ್ತನೇ ಅಧ್ಯಾಯವು.