ಅಶ್ವಮೇಧಿಕ ಪರ್ವ
೭
ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಮುಂದುವರೆಸಿದುದು (೧-೨೭).
14007001 ಸಂವರ್ತ ಉವಾಚ
14007001a ಕಥಮಸ್ಮಿ ತ್ವಯಾ ಜ್ಞಾತಃ ಕೇನ ವಾ ಕಥಿತೋಽಸ್ಮಿ ತೇ|
14007001c ಏತದಾಚಕ್ಷ್ವ ಮೇ ತತ್ತ್ವಮಿಚ್ಚಸೇ ಚೇತ್ಪ್ರಿಯಂ ಮಮ||
ಸಂವರ್ತನು ಹೇಳಿದನು: “ನನ್ನ ಕುರಿತು ನಿನಗೆ ಹೇಗೆ ತಿಳಿಯಿತು? ನನ್ನ ಕುರಿತು ನಿನಗೆ ಯಾರು ಹೇಳಿದರು? ನನಗೆ ಪ್ರಿಯವಾದುದನ್ನು ಮಾಡಲು ಬಯಸಿದರೆ ನೀನು ಅದನ್ನು ನನಗೆ ಹೇಳು.
14007002a ಸತ್ಯಂ ತೇ ಬ್ರುವತಃ ಸರ್ವೇ ಸಂಪತ್ಸ್ಯಂತೇ ಮನೋರಥಾಃ|
14007002c ಮಿಥ್ಯಾ ತು ಬ್ರುವತೋ ಮೂರ್ಧಾ ಸಪ್ತಧಾ ತೇ ಫಲಿಷ್ಯತಿ||
ಸತ್ಯವನ್ನೇ ಹೇಳಿದರೆ ನಿನ್ನ ಎಲ್ಲ ಮನೋರಥಗಳೂ ಪೂರ್ಣವಾಗುತ್ತವೆ. ಸುಳ್ಳನ್ನು ಹೇಳಿದರೆ ನಿನ್ನ ತಲೆಯು ಏಳು ಚೂರುಗಳಾಗಿ ಒಡೆದುಹೋಗುತ್ತದೆ.”
14007003 ಮರುತ್ತ ಉವಾಚ
14007003a ನಾರದೇನ ಭವಾನ್ಮಹ್ಯಮಾಖ್ಯಾತೋ ಹ್ಯಟತಾ ಪಥಿ|
14007003c ಗುರುಪುತ್ರೋ ಮಮೇತಿ ತ್ವಂ ತತೋ ಮೇ ಪ್ರೀತಿರುತ್ತಮಾ||
ಮರುತ್ತನು ಹೇಳಿದನು: “ದಾರಿಯಲ್ಲಿ ಅಲೆದಾಡುತ್ತಿದ್ದಾಗ ನಾರದನು ನೀನು ನನ್ನ ಗುರುವಿನ ಮಗನೆಂದು ನಿನ್ನ ಕುರಿತು ನನಗೆ ಹೇಳಿದನು. ಆಗ ನನಗೆ ನಿನ್ನ ಮೇಲೆ ಅತಿಯಾದ ಪ್ರೀತಿಯುಂಟಾಯಿತು.”
14007004 ಸಂವರ್ತ ಉವಾಚ
14007004a ಸತ್ಯಮೇತದ್ಭವಾನಾಹ ಸ ಮಾಂ ಜಾನಾತಿ ಸತ್ರಿಣಮ್|
14007004c ಕಥಯಸ್ವೈತದೇಕಂ ಮೇ ಕ್ವ ನು ಸಂಪ್ರತಿ ನಾರದಃ||
ಸಂವರ್ತನು ಹೇಳಿದನು: “ನೀನು ಸತ್ಯವನ್ನೇ ಹೇಳಿರುವೆ. ನಾನು ಯಜ್ಞಗಳನ್ನು ಮಾಡಿಸುವೆನೆಂದು ಅವನಿಗೆ ತಿಳಿದಿದೆ. ನನಗೆ ಈ ಒಂದು ವಿಷಯವನ್ನು ಹೇಳು. ಈಗ ನಾರದನು ಎಲ್ಲಿದ್ದಾನೆ?”
14007005 ಮರುತ್ತ ಉವಾಚ
14007005a ಭವಂತಂ ಕಥಯಿತ್ವಾ ತು ಮಮ ದೇವರ್ಷಿಸತ್ತಮಃ|
14007005c ತತೋ ಮಾಮಭ್ಯನುಜ್ಞಾಯ ಪ್ರವಿಷ್ಟೋ ಹವ್ಯವಾಹನಮ್||
ಮರುತ್ತನು ಹೇಳಿದನು: “ನನಗೆ ನಿನ್ನ ಕುರಿತು ಹೇಳಿ ಆ ದೇವರ್ಷಿಸತ್ತಮನು ನನಗೆ ಅಪ್ಪಣೆಯನ್ನಿತ್ತು ಅಗ್ನಿಯನ್ನು ಪ್ರವೇಶಿಸಿದನು.””
14007006 ವ್ಯಾಸ ಉವಾಚ
14007006a ಶ್ರುತ್ವಾ ತು ಪಾರ್ಥಿವಸ್ಯೈತತ್ಸಂವರ್ತಃ ಪರಯಾ ಮುದಾ|
14007006c ಏತಾವದಹಮಪ್ಯೇನಂ ಕುರ್ಯಾಮಿತಿ ತದಾಬ್ರವೀತ್||
ವ್ಯಾಸನು ಹೇಳಿದನು: “ರಾಜನನ್ನು ಕೇಳಿ ಸಂವರ್ತನು ಪರಮ ಮುದಿತನಾಗಿ ನಾನು ನಿನಗೆ ಯಜ್ಞವನ್ನು ಮಾಡಿಸಬಲ್ಲೆ ಎಂದು ಅವನಿಗೆ ಹೇಳಿದನು.
14007007a ತತೋ ಮರುತ್ತಮುನ್ಮತ್ತೋ ವಾಚಾ ನಿರ್ಭರ್ತ್ಸಯನ್ನಿವ|
14007007c ರೂಕ್ಷಯಾ ಬ್ರಾಹ್ಮಣೋ ರಾಜನ್ಪುನಃ ಪುನರಥಾಬ್ರವೀತ್||
ರಾಜನ್! ಆಗ ಉನ್ಮತ್ತ ಬ್ರಾಹ್ಮಣನು ಮಾತಿನಿಂದಲೇ ಬೆದರಿಸುತ್ತಿರುವನೋ ಎನ್ನುವಂತೆ ಮರುತ್ತನಿಗೆ ಮತ್ತೊಮ್ಮೆ ಹೇಳಿದನು:
14007008a ವಾತಪ್ರಧಾನೇನ ಮಯಾ ಸ್ವಚಿತ್ತವಶವರ್ತಿನಾ|
14007008c ಏವಂ ವಿಕೃತರೂಪೇಣ ಕಥಂ ಯಾಜಿತುಮಿಚ್ಚಸಿ||
“ವಾತದ ದೋಷದಿಂದಾಗಿ ನನ್ನ ಮನಸ್ಸು ನನ್ನ ಹಿಡಿತದಲ್ಲಿಲ್ಲದಂತಾಗಿದೆ. ಈ ರೀತಿಯ ವಿಕೃತ ರೂಪಿಯಿಂದ ನೀನು ಹೇಗೆತಾನೇ ಯಜ್ಞವನ್ನು ಮಾಡಲು ಬಯಸುತ್ತೀಯೆ?
14007009a ಭ್ರಾತಾ ಮಮ ಸಮರ್ಥಶ್ಚ ವಾಸವೇನ ಚ ಸತ್ಕೃತಃ|
14007009c ವರ್ತತೇ ಯಾಜನೇ ಚೈವ ತೇನ ಕರ್ಮಾಣಿ ಕಾರಯ||
ವಾಸವನಿಂದ ಸತ್ಕೃತನಾಗಿರುವ ನನ್ನ ಅಣ್ಣನು ಇದಕ್ಕೆ ಸಮರ್ಥನಾದವನು. ಯಜ್ಞಗಳನ್ನು ಕೂಡ ಮಾಡಿಸುತ್ತಾನೆ. ಅವನಿಂದ ನಿನ್ನ ಕಾರ್ಯಗಳನ್ನು ಮಾಡಿಸು.
14007010a ಗೃಹಂ ಸ್ವಂ ಚೈವ ಯಾಜ್ಯಾಶ್ಚ ಸರ್ವಾ ಗೃಹ್ಯಾಶ್ಚ ದೇವತಾಃ|
14007010c ಪೂರ್ವಜೇನ ಮಮಾಕ್ಷಿಪ್ತಂ ಶರೀರಂ ವರ್ಜಿತಂ ತ್ವಿದಮ್||
ನನ್ನ ಮನೆ, ಯಜ್ಞಸಾಮಗ್ರಿಗಳು, ಮನೆಯ ದೇವತೆಗಳು ಎಲ್ಲವನ್ನೂ ನನ್ನ ಅಣ್ಣನು ಹಿಂದೆಯೇ ಕಸಿದುಕೊಂಡಿದ್ದಾನೆ. ನನ್ನ ಈ ಶರೀರವನ್ನು ಮಾತ್ರ ನನಗಾಗಿ ಬಿಟ್ಟಿದ್ದಾನೆ.
14007011a ನಾಹಂ ತೇನಾನನುಜ್ಞಾತಸ್ತ್ವಾಮಾವಿಕ್ಷಿತ ಕರ್ಹಿ ಚಿತ್|
14007011c ಯಾಜಯೇಯಂ ಕಥಂ ಚಿದ್ವೈ ಸ ಹಿ ಪೂಜ್ಯತಮೋ ಮಮ||
ಆವಿಕ್ಷಿತ! ಅವನ ಅನುಜ್ಞೆಯಿಲ್ಲದೇ ನಾನು ಎಂದೂ ನಿನಗೆ ಯಜ್ಞಮಾಡಿಸುವುದಿಲ್ಲ. ನನಗಿಂತಲೂ ಹೆಚ್ಚು ಪೂಜ್ಯನಾದ ಅವನಿರುವಾಗ ನಾನು ಹೇಗೆ ನಿನಗೆ ಇದನ್ನು ಮಾಡಿಕೊಡಲಿ?
14007012a ಸ ತ್ವಂ ಬೃಹಸ್ಪತಿಂ ಗಚ್ಚ ತಮನುಜ್ಞಾಪ್ಯ ಚಾವ್ರಜ|
14007012c ತತೋಽಹಂ ಯಾಜಯಿಷ್ಯೇ ತ್ವಾಂ ಯದಿ ಯಷ್ಟುಮಿಹೇಚ್ಚಸಿ||
ನಿನಗೆ ಯಜ್ಞಮಾಡಲು ಇಚ್ಛೆಯಿದ್ದರೆ ನೀನು ಬೃಹಸ್ಪತಿಯಲ್ಲಿಗೆ ಹೋಗಿ ಅವನ ಅಪ್ಪಣೆಯನ್ನು ಕೇಳು. ಆಗ ನಾನು ನಿನ್ನ ಯಜ್ಞವನ್ನು ಮಾಡಿಸಿಕೊಡುತ್ತೇನೆ.”
14007013 ಮರುತ್ತ ಉವಾಚ
14007013a ಬೃಹಸ್ಪತಿಂ ಗತಃ ಪೂರ್ವಮಹಂ ಸಂವರ್ತ ತಚ್ಚೃಣು|
14007013c ನ ಮಾಂ ಕಾಮಯತೇ ಯಾಜ್ಯಮಸೌ ವಾಸವವಾರಿತಃ||
ಮರುತ್ತನು ಹೇಳಿದನು: “ಸಂವರ್ತ! ನಾನು ಈ ಹಿಂದೆಯೇ ಬೃಹಸ್ಪತಿಯ ಬಳಿ ಹೋಗಿದ್ದೆ. ಅದರ ಕುರಿತು ಕೇಳು. ವಾಸವನಿಂದ ತಡೆಯಲ್ಪಟ್ಟ ಅವನು ನನ್ನ ಯಜ್ಞವನ್ನು ಮಾಡಿಸಿಕೊಡಲು ಬಯಸುತ್ತಿಲ್ಲ.
14007014a ಅಮರಂ ಯಾಜ್ಯಮಾಸಾದ್ಯ ಮಾಮೃಷೇ ಮಾ ಸ್ಮ ಮಾನುಷಮ್|
14007014c ಯಾಜಯೇಥಾ ಮರುತ್ತಂ ತ್ವಂ ಮರ್ತ್ಯಧರ್ಮಾಣಮಾತುರಮ್||
“ಋಷೇ! ಅಮರನಾದ ನನ್ನನ್ನು ಯಜಮಾನನ್ನಾಗಿಸಿಕೊಂಡು ಮನುಷ್ಯನಿಗೆ ಯಜ್ಞಮಾಡಿಸಬೇಡ. ಮನುಷ್ಯಧರ್ಮವನ್ನು ಪಾಲಿಸುವ ಮರುತ್ತನಿಗೆ ಪುರೋಹಿತನಾಗಬೇಡ.
14007015a ಸ್ಪರ್ಧತೇ ಚ ಮಯಾ ವಿಪ್ರ ಸದಾ ವೈ ಸ ಹಿ ಪಾರ್ಥಿವಃ|
14007015c ಏವಮಸ್ತ್ವಿತಿ ಚಾಪ್ಯುಕ್ತೋ ಭ್ರಾತ್ರಾ ತೇ ಬಲವೃತ್ರಹಾ||
ವಿಪ್ರ! ಆ ಪಾರ್ಥಿವನು ನನ್ನೊಡನೆಯೂ ಸದಾ ಸ್ಪರ್ಧಿಸುತ್ತಲೇ ಇರುತ್ತಾನೆ.” ಬಲವೃತ್ರಹನು ಹೀಗೆ ಹೇಳಲು ನಿನ್ನ ಅಣ್ಣನು ಅವನಿಗೆ ಹಾಗೆಯೇ ಆಗಲೆಂದು ಹೇಳಿದ್ದನು.
14007016a ಸ ಮಾಮಭಿಗತಂ ಪ್ರೇಮ್ಣಾ ಯಾಜ್ಯವನ್ನ ಬುಭೂಷತಿ|
14007016c ದೇವರಾಜಮುಪಾಶ್ರಿತ್ಯ ತದ್ವಿದ್ಧಿ ಮುನಿಪುಂಗವ||
ಮುನಿಪುಂಗವ! ನನ್ನ ಯಜ್ಞವನ್ನು ಮಾಡಿಸಿಕೊಡು ಎಂದು ಪ್ರೀತಿಯಿಂದ ಅವನ ಬಳಿ ಹೋದಾಗ ದೇವರಾಜನನ್ನು ಉಪಾಶ್ರಯಿಸಿದ್ದ ಅವನು ನನ್ನನ್ನು ತಿರಸ್ಕರಿಸಿದನು.
14007017a ಸೋಽಹಮಿಚ್ಚಾಮಿ ಭವತಾ ಸರ್ವಸ್ವೇನಾಪಿ ಯಾಜಿತುಮ್|
14007017c ಕಾಮಯೇ ಸಮತಿಕ್ರಾಂತುಂ ವಾಸವಂ ತ್ವತ್ಕೃತೈರ್ಗುಣೈಃ||
ನನ್ನ ಸರ್ವಸ್ವವನ್ನು ಬಳಸಿಯೂ ನಿನ್ನಿಂದ ಯಜ್ಞವನ್ನು ಮಾಡಿಸಿಕೊಳ್ಳಲು ಬಯಸುತ್ತೇನೆ. ನಿನ್ನ ಕರ್ಮಗುಣಗಳಿಂದ ನಾನು ವಾಸವನನ್ನು ಮೀರಿಸಲು ಬಯಸುತ್ತೇನೆ.
14007018a ನ ಹಿ ಮೇ ವರ್ತತೇ ಬುದ್ಧಿರ್ಗಂತುಂ ಬ್ರಹ್ಮನ್ಬೃಹಸ್ಪತಿಮ್|
14007018c ಪ್ರತ್ಯಾಖ್ಯಾತೋ ಹಿ ತೇನಾಸ್ಮಿ ತಥಾನಪಕೃತೇ ಸತಿ||
ಬ್ರಹ್ಮನ್! ಬೃಹಸ್ಪತಿಯ ಬಳಿಗೆ ಪುನಃ ಹೋಗಲು ನನಗೆ ಮನಸ್ಸಾಗುತ್ತಿಲ್ಲ. ನಾನು ಯಾವುದೇ ತಪ್ಪನ್ನು ಮಾಡದೇ ಇದ್ದರೂ ಅವನು ನನ್ನನ್ನು ತಿರಸ್ಕರಿಸಿದ್ದಾನೆ.”
14007019 ಸಂವರ್ತ ಉವಾಚ
14007019a ಚಿಕೀರ್ಷಸಿ ಯಥಾಕಾಮಂ ಸರ್ವಮೇತತ್ತ್ವಯಿ ಧ್ರುವಮ್|
14007019c ಯದಿ ಸರ್ವಾನಭಿಪ್ರಾಯಾನ್ಕರ್ತಾಸಿ ಮಮ ಪಾರ್ಥಿವ||
ಸಂವರ್ತನು ಹೇಳಿದನು: “ಪಾರ್ಥಿವ! ನನ್ನ ಅಭಿಪ್ರಾಯದಂತೆ ನೀನು ಎಲ್ಲವನ್ನೂ ಮಾಡಿದ್ದೇ ಆದರೆ ನಿನ್ನ ಸರ್ವಕಾಮಗಳನ್ನೂ ಪಡೆಯುತ್ತೀಯೆ ಎನ್ನುವುದು ನಿಶ್ಚಿತ.
14007020a ಯಾಜ್ಯಮಾನಂ ಮಯಾ ಹಿ ತ್ವಾಂ ಬೃಹಸ್ಪತಿಪುರಂದರೌ|
14007020c ದ್ವಿಷೇತಾಂ ಸಮಭಿಕ್ರುದ್ಧಾವೇತದೇಕಂ ಸಮರ್ಥಯ||
ನಾನು ನಿನಗೆ ಯಜ್ಞಮಾಡಿಸುವಾಗ ದ್ವೇಷದಿಂದ ಬೃಹಸ್ಪತಿ-ಪುರಂದರರು ಕ್ರುದ್ಧರಾದರೂ ನೀನು ನನ್ನನ್ನೇ ಸಮರ್ಥಿಸಬೇಕು.
14007021a ಸ್ಥೈರ್ಯಮತ್ರ ಕಥಂ ತೇ ಸ್ಯಾತ್ಸ ತ್ವಂ ನಿಃಸಂಶಯಂ ಕುರು|
14007021c ಕುಪಿತಸ್ತ್ವಾಂ ನ ಹೀದಾನೀಂ ಭಸ್ಮ ಕುರ್ಯಾಂ ಸಬಾಂಧವಮ್||
ನಿಃಸಂಶಯವಾಗಿ ನೀನು ಹೇಗಾದರೂ ಸ್ಥೈರ್ಯದಿಂದಿರಬೇಕು. ಹಾಗೆ ಮಾಡದಿದ್ದರೆ ಕ್ರುದ್ಧನಾಗಿ ಬಾಂಧವರೊಂದಿಗೆ ನಿನ್ನನ್ನು ಭಸ್ಮಮಾಡಿಬಿಡುತ್ತೇನೆ.”
14007022 ಮರುತ್ತ ಉವಾಚ
14007022a ಯಾವತ್ತಪೇತ್ಸಹಸ್ರಾಂಶುಸ್ತಿಷ್ಠೇರಂಶ್ಚಾಪಿ ಪರ್ವತಾಃ|
14007022c ತಾವಲ್ಲೋಕಾನ್ನ ಲಭೇಯಂ ತ್ಯಜೇಯಂ ಸಂಗತಂ ಯದಿ||
ಮರುತ್ತನು ಹೇಳಿದನು: “ನಾನೇನಾದರೂ ನಿನ್ನ ಸಂಗವನ್ನು ತ್ಯಜಿಸಿದರೆ ಸೂರ್ಯನು ಸುಡುವವರೆಗೂ ಮತ್ತು ಪರ್ವತಗಳು ಸ್ಥಿರವಾಗಿರುವ ವರೆಗೂ ನನಗೆ ಉತ್ತಮ ಲೋಕಗಳು ದೊರಕದಂತಾಗಲಿ.
14007023a ಮಾ ಚಾಪಿ ಶುಭಬುದ್ಧಿತ್ವಂ ಲಭೇಯಮಿಹ ಕರ್ಹಿ ಚಿತ್|
14007023c ಸಮ್ಯಗ್ಜ್ಞಾನೇ ವೈಷಯೇ ವಾ ತ್ಯಜೇಯಂ ಸಂಗತಂ ಯದಿ||
ನಾನೇನಾದರೂ ನಿನ್ನ ಸಂಗವನ್ನು ತೊರೆದರೆ ನನಗೆ ಎಂದೂ ಶುಭಬುದ್ಧಿಯು ದೊರೆಯದಿರಲಿ. ವಿಷಯಗಳಲ್ಲಿ ಬುದ್ಧಿಲಂಪಟವುಂಟಾಗಲಿ.”
14007024 ಸಂವರ್ತ ಉವಾಚ
14007024a ಆವಿಕ್ಷಿತ ಶುಭಾ ಬುದ್ಧಿರ್ಧೀಯತಾಂ ತವ ಕರ್ಮಸು|
14007024c ಯಾಜನಂ ಹಿ ಮಮಾಪ್ಯೇವಂ ವರ್ತತೇ ತ್ವಯಿ ಪಾರ್ಥಿವ||
ಸಂವರ್ತನು ಹೇಳಿದನು: “ಆವಿಕ್ಷಿತ! ನೀನು ಮಾಡುವ ಕರ್ಮಗಳಲ್ಲಿ ನಿನಗೆ ಯಾವಾಗಲೂ ಶುಭ ಬುದ್ಧಿಯೇ ಇರಲಿ. ಪಾರ್ಥಿವ! ನಿನ್ನಿಂದ ಯಜ್ಞವನ್ನು ಮಾಡಿಸಬೇಕೆಂದು ನನಗೂ ಇಚ್ಛೆಯಾಗುತ್ತಿದೆ.
14007025a ಸಂವಿಧಾಸ್ಯೇ ಚ ತೇ ರಾಜನ್ನಕ್ಷಯಂ ದ್ರವ್ಯಮುತ್ತಮಮ್|
14007025c ಯೇನ ದೇವಾನ್ಸಗಂಧರ್ವಾನ್ಶಕ್ರಂ ಚಾಭಿಭವಿಷ್ಯಸಿ||
ರಾಜನ್! ನಿನಗೆ ಅಕ್ಷಯವಾದ ಉತ್ತಮ ದ್ರವ್ಯವನ್ನು ಒದಗಿಸಿಕೊಡುತ್ತೇನೆ. ಅದರಿಂದ ನೀನು ಗಂಧರ್ವ-ದೇವತೆಗಳೊಂದಿಗೆ ಶಕ್ರನನ್ನೂ ಮೀರಿಸುವಂತಾಗುತ್ತೀಯೆ!
14007026a ನ ತು ಮೇ ವರ್ತತೇ ಬುದ್ಧಿರ್ಧನೇ ಯಾಜ್ಯೇಷು ವಾ ಪುನಃ|
14007026c ವಿಪ್ರಿಯಂ ತು ಚಿಕೀರ್ಷಾಮಿ ಭ್ರಾತುಶ್ಚೇಂದ್ರಸ್ಯ ಚೋಭಯೋಃ||
ಧನದಲ್ಲಿಯಾಗಲೀ ಅಥವಾ ಯಜ್ಞಗಳನ್ನು ಮಾಡಿಸುವುದರಲ್ಲಿಯಾಗಲೀ ನನಗೆ ಮನಸ್ಸಿಲ್ಲ. ಆದರೆ ನನ್ನ ಅಣ್ಣ ಮತ್ತು ಇಂದ್ರ ಇವರಿಬ್ಬರಿಗೂ ಅಪ್ರಿಯವಾದುದನ್ನು ಮಾಡಲು ಬಯಸುತ್ತೇನೆ.
14007027a ಗಮಯಿಷ್ಯಾಮಿ ಚೇಂದ್ರೇಣ ಸಮತಾಮಪಿ ತೇ ಧ್ರುವಮ್|
14007027c ಪ್ರಿಯಂ ಚ ತೇ ಕರಿಷ್ಯಾಮಿ ಸತ್ಯಮೇತದ್ಬ್ರವೀಮಿ ತೇ||
ನಿಜವಾಗಿಯೂ ನಿನ್ನನ್ನು ಇಂದ್ರನ ಸಮನಾಗಿ ಮಾಡುತ್ತೇನೆ. ನಿನಗೆ ಪ್ರಿಯವಾದುದನ್ನೇ ಮಾಡುತ್ತೇನೆ. ನಾನು ನಿನಗೆ ಹೇಳುತ್ತಿರುವುದು ಸತ್ಯ.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಸಪ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಏಳನೇ ಅಧ್ಯಾಯವು.