Ashvamedhika Parva: Chapter 69

ಅಶ್ವಮೇಧಿಕ ಪರ್ವ

೬೯

ಹಸ್ತಿನಾಪುರದಲ್ಲಿ ಸಂತಸ ಸಮಾರಂಭ (೧-೧೧). ಪರಿಕ್ಷಿತನು ಹುಟ್ಟಿದ ಒಂದು ತಿಂಗಳ ನಂತರ ಪಾಂಡವರು ನಗರಕ್ಕೆ ಹಿಂದಿರುಗುತ್ತಿದ್ದಾರೆಂದು ತಿಳಿದು ಅವರನ್ನು ಸ್ವಾಗತಿಸಲು ಹಸ್ತಿನಾಪುರವು ಶೃಂಗಾರಗೊಂಡಿದುದು (೧೨-೨೦).

14069001 ವೈಶಂಪಾಯನ ಉವಾಚ

14069001a ಬ್ರಹ್ಮಾಸ್ತ್ರಂ ತು ಯದಾ ರಾಜನ್ಕೃಷ್ಣೇನ ಪ್ರತಿಸಂಹೃತಮ್|

14069001c ತದಾ ತದ್ವೇಶ್ಮ ತೇ ಪಿತ್ರಾ ತೇಜಸಾಭಿವಿದೀಪಿತಮ್||

ವೈಶಂಪಾಯನನು ಹೇಳಿದನು: “ರಾಜನ್! ಕೃಷ್ಣನು ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿದ ಕೂಡಲೇ ಆ ಪ್ರಸೂತಿಗೃಹವು ನಿನ್ನ ತಂದೆಯ ತೇಜಸ್ಸಿನಿಂದ ಬೆಳಗತೊಡಗಿತು.

14069002a ತತೋ ರಕ್ಷಾಂಸಿ ಸರ್ವಾಣಿ ನೇಶುಸ್ತ್ಯಕ್ತ್ವಾ ಗೃಹಂ ತು ತತ್|

14069002c ಅಂತರಿಕ್ಷೇ ಚ ವಾಗಾಸೀತ್ಸಾಧು ಕೇಶವ ಸಾಧ್ವಿತಿ||

ಆಗ ರಾಕ್ಷಸರೆಲ್ಲರೂ ಆ ಪ್ರಸೂತಿಗೃಹವನ್ನು ಬಿಟ್ಟು ಹೊರಟುಹೋದರು. ಅಂತರಿಕ್ಷದಲ್ಲಿ ಕೂಡ “ಸಾಧು ಕೇಶವ! ಸಾಧು!” ಎಂಬ ಧ್ವನಿಯಾಯಿತು.

14069003a ತದಸ್ತ್ರಂ ಜ್ವಲಿತಂ ಚಾಪಿ ಪಿತಾಮಹಮಗಾತ್ತದಾ|

14069003c ತತಃ ಪ್ರಾಣಾನ್ಪುನರ್ಲೇಭೇ ಪಿತಾ ತವ ಜನೇಶ್ವರ|

14069003e ವ್ಯಚೇಷ್ಟತ ಚ ಬಾಲೋಽಸೌ ಯಥೋತ್ಸಾಹಂ ಯಥಾಬಲಮ್||

ಉರಿಯುತ್ತಿದ್ದ ಆ ಅಸ್ತ್ರವೂ ಕೂಡ ಪಿತಾಮಹ ಬ್ರಹ್ಮನ ಬಳಿ ಹೋಯಿತು. ಜನೇಶ್ವರ! ಆಗ ನಿನ್ನ ತಂದೆಯು ಪುನಃ ಪ್ರಾಣಗಳನ್ನು ಪಡೆದನು. ಆ ಬಾಲಕನು ಯಥೋತ್ಸಾಹದಲ್ಲಿ ಯಥಾಬಲನಾಗಿ ಕಾಲು-ಕೈಗಳನ್ನು ಅಲ್ಲಾಡಿಸತೊಡಗಿದನು.

14069004a ಬಭೂವುರ್ಮುದಿತಾ ರಾಜಂಸ್ತತಸ್ತಾ ಭರತಸ್ತ್ರಿಯಃ|

14069004c ಬ್ರಾಹ್ಮಣಾನ್ವಾಚಯಾಮಾಸುರ್ಗೋವಿಂದಸ್ಯ ಚ ಶಾಸನಾತ್||

ರಾಜನ್! ಆಗ ಅಲ್ಲಿದ್ದ ಭರತಸ್ತ್ರೀಯರು ಅತ್ಯಂತ ಮುದಿತರಾದರು. ಗೋವಿಂದನ ಆಜ್ಞೆಯಂತೆ ಬ್ರಾಹ್ಮಣರಿಂದ ಸ್ವಸ್ತಿವಾಚನಗಳನ್ನು ಮಾಡಿಸಲಾಯಿತು.

14069005a ತತಸ್ತಾ ಮುದಿತಾಃ ಸರ್ವಾಃ ಪ್ರಶಶಂಸುರ್ಜನಾರ್ದನಮ್|

14069005c ಸ್ತ್ರಿಯೋ ಭರತಸಿಂಹಾನಾಂ ನಾವಂ ಲಬ್ಧ್ವೇವ ಪಾರಗಾಃ||

ಮುದಿತರಾದ ಎಲ್ಲ ಭರತಸಿಂಹರ ಸ್ತ್ರೀಯರೂ ಪಾರಾಗಲು ದೊರಕಿದ ದೋಣಿಯಂತಿದ್ದ ಜನಾರ್ದನನನ್ನು ಪ್ರಶಂಸಿಸಿದರು.

14069006a ಕುಂತೀ ದ್ರುಪದಪುತ್ರೀ ಚ ಸುಭದ್ರಾ ಚೋತ್ತರಾ ತಥಾ|

14069006c ಸ್ತ್ರಿಯಶ್ಚಾನ್ಯಾ ನೃಸಿಂಹಾನಾಂ ಬಭೂವುರ್ಹೃಷ್ಟಮಾನಸಾಃ||

ಕುಂತೀ, ದ್ರುಪದಪುತ್ರೀ, ಸುಭದ್ರಾ ಮತ್ತು ಉತ್ತರೆ ಹಾಗೆಯೇ ಇತರ ನರನಾಯಕರ ಸ್ತ್ರೀಯರು ಹೃಷ್ಟಮಾನಸರಾದರು.

14069007a ತತ್ರ ಮಲ್ಲಾ ನಟಾ ಝಲ್ಲಾ ಗ್ರಂಥಿಕಾಃ ಸೌಖಶಾಯಿಕಾಃ|

14069007c ಸೂತಮಾಗಧಸಂಘಾಶ್ಚಾಪ್ಯಸ್ತುವನ್ ವೈ ಜನಾರ್ದನಮ್|

14069007e ಕುರುವಂಶಸ್ತವಾಖ್ಯಾಭಿರಾಶೀರ್ಭಿರ್ಭರತರ್ಷಭ||

ಭರತರ್ಷಭ! ಬಳಿಕ ಅಲ್ಲಿ ಮಲ್ಲರೂ, ನಟರೂ, ಜ್ಯೋತಿಷಿಗಳೂ, ಸುಖಸಮಾಚಾರಗಳನ್ನು ಹೇಳುವ ದೂತರೂ, ಸೂತ-ಮಾಗಧ ಗಣಗಳೂ ಕುರುವಂಶದ ಸ್ತುತಿ-ಆಶೀರ್ವಾದಗಳೊಂದಿಗೆ ಜನಾರ್ದನನನ್ನು ಸ್ತುತಿಸಿದರು.

14069008a ಉತ್ಥಾಯ ತು ಯಥಾಕಾಲಮುತ್ತರಾ ಯದುನಂದನಮ್|

14069008c ಅಭ್ಯವಾದಯತ ಪ್ರೀತಾ ಸಹ ಪುತ್ರೇಣ ಭಾರತ|

14069008e ತತಸ್ತಸ್ಯೈ ದದೌ ಪ್ರೀತೋ ಬಹುರತ್ನಂ ವಿಶೇಷತಃ||

ಯಥಾಕಾಲದಲ್ಲಿ ಉತ್ತರೆಯು ಎದ್ದು ಮಗನನ್ನು ಎತ್ತಿಕೊಂಡು ಯದುನಂದನನಿಗೆ ನಮಸ್ಕರಿಸಿದಳು. ಆಗ ಕೃಷ್ಣನು ಪ್ರೀತಿಯಿಂದ ಅವರಿಬ್ಬರಿಗೂ ಅನೇಕ ವಿಶೇಷ ರತ್ನಗಳನ್ನು ಉಡುಗೊರೆಯನ್ನಾಗಿತ್ತನು.

14069009a ತಥಾನ್ಯೇ ವೃಷ್ಣಿಶಾರ್ದೂಲಾ ನಾಮ ಚಾಸ್ಯಾಕರೋತ್ಪ್ರಭುಃ|

14069009c ಪಿತುಸ್ತವ ಮಹಾರಾಜ ಸತ್ಯಸಂಧೋ ಜನಾರ್ದನಃ||

ಹಾಗೆಯೇ ಅನ್ಯ ವೃಷ್ಣಿಶಾರ್ದೂಲರೂ ಉಡುಗೊರೆಗಳನ್ನಿತ್ತರು. ಮಹಾರಾಜ! ಅನಂತರ ಪ್ರಭು ಸತ್ಯಸಂಧ ಜನಾರ್ದನನು ನಿನ್ನ ತಂದೆಗೆ ನಾಮಕರಣ ಮಾಡಿದನು.

14069010a ಪರಿಕ್ಷೀಣೇ ಕುಲೇ ಯಸ್ಮಾಜ್ಜಾತೋಽಯಮಭಿಮನ್ಯುಜಃ|

14069010c ಪರಿಕ್ಷಿದಿತಿ ನಾಮಾಸ್ಯ ಭವತ್ವಿತ್ಯಬ್ರವೀತ್ತದಾ||

ಆಗ ಅವನು “ಪರಿಕ್ಷೀಣಿಸುತ್ತಿರುವ ಕುಲದಲ್ಲಿ ಹುಟ್ಟಿರುವುದರಿಂದ ಈ ಅಭಿಮನ್ಯುವಿನ ಮಗನ ಹೆಸರು ಪರಿಕ್ಷಿತ ಎಂದಾಗುತ್ತದೆ” ಎಂದನು.

14069011a ಸೋಽವರ್ಧತ ಯಥಾಕಾಲಂ ಪಿತಾ ತವ ನರಾಧಿಪ|

14069011c ಮನಃಪ್ರಹ್ಲಾದನಶ್ಚಾಸೀತ್ಸರ್ವಲೋಕಸ್ಯ ಭಾರತ||

ನರಾಧಿಪ! ಭಾರತ! ಕಾಲಕ್ಕೆ ತಕ್ಕಂತೆ ನಿನ್ನ ತಂದೆಯು ವರ್ಧಿಸಿದನು ಮತ್ತು ಸರ್ವಜನರ ಮನಗಳಿಗೆ ಆಹ್ಲಾದವನ್ನುಂಟುಮಾಡುತ್ತಿದ್ದನು.

14069012a ಮಾಸಜಾತಸ್ತು ತೇ ವೀರ ಪಿತಾ ಭವತಿ ಭಾರತ|

14069012c ಅಥಾಜಗ್ಮುಃ ಸುಬಹುಲಂ ರತ್ನಮಾದಾಯ ಪಾಂಡವಾಃ||

ವೀರ! ಭಾರತ! ನಿನ್ನ ತಂದೆಯು ಹುಟ್ಟಿ ಒಂದು ತಿಂಗಳ ನಂತರ ಪಾಂಡವರು ಬಹುರತ್ನಗಳನ್ನು ತೆಗೆದುಕೊಂಡು ಹಿಂದಿರುಗಿದರು.

14069013a ತಾನ್ಸಮೀಪಗತಾನ್ಶ್ರುತ್ವಾ ನಿರ್ಯಯುರ್ವೃಷ್ಣಿಪುಂಗವಾಃ|

14069013c ಅಲಂಚಕ್ರುಶ್ಚ ಮಾಲ್ಯೌಘೈಃ ಪುರುಷಾ ನಾಗಸಾಹ್ವಯಮ್||

ಅವರು ನಗರದ ಸಮೀಪದಲ್ಲಿದ್ದಾರೆ ಎಂದು ಕೇಳಿ ವೃಷ್ಣಿಪುಂಗವರು ಅವರನ್ನು ಎದಿರುಗೊಳ್ಳಲು ಹೊರಟರು. ಪುರಜನರು ನಾಗಸಾಹ್ವಯವನ್ನು ಪುಷ್ಪರಾಶಿಗಳಿಂದ ಅಲಂಕರಿಸಿದರು.

14069014a ಪತಾಕಾಭಿರ್ವಿಚಿತ್ರಾಭಿರ್ಧ್ವಜೈಶ್ಚ ವಿವಿಧೈರಪಿ|

14069014c ವೇಶ್ಮಾನಿ ಸಮಲಂಚಕ್ರುಃ ಪೌರಾಶ್ಚಾಪಿ ಜನಾಧಿಪ||

ಜನಾಧಿಪ! ವಿಚಿತ್ರ ಪತಾಕೆಗಳಿಂದಲೂ. ವಿವಿಧ ಧ್ವಜಗಳಿಂದಲೂ ಪೌರರು ಅರಮನೆಗಳನ್ನು ಅಲಂಕರಿಸಿದರು.

14069015a ದೇವತಾಯತನಾನಾಂ ಚ ಪೂಜಾ ಬಹುವಿಧಾಸ್ತಥಾ|

14069015c ಸಂದಿದೇಶಾಥ ವಿದುರಃ ಪಾಂಡುಪುತ್ರಪ್ರಿಯೇಪ್ಸಯಾ||

ಪಾಂಡುಪುತ್ರರಿಗೆ ಪ್ರಿಯವಾಗಲೆಂದು ವಿದುರನು ದೇವತಾಲಯಗಳಲ್ಲಿ ಬಹುವಿಧದ ಪೂಜೆಗಳು ನಡೆಯುವಂತೆ ಸಂದೇಶವನ್ನಿತ್ತಿದ್ದನು.

14069016a ರಾಜಮಾರ್ಗಾಶ್ಚ ತತ್ರಾಸನ್ಸುಮನೋಭಿರಲಂಕೃತಾಃ|

14069016c ಶುಶುಭೇ ತತ್ಪುರಂ ಚಾಪಿ ಸಮುದ್ರೌಘನಿಭಸ್ವನಮ್||

ರಾಜಮಾರ್ಗಗಳನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಆ ಪುರವು ಆಗ ಭೋರ್ಗರೆಯುತ್ತಿರುವ ಸಮುದ್ರದಂತೆ ಶೋಭಿಸುತ್ತಿತ್ತು.

14069017a ನರ್ತಕೈಶ್ಚಾಪಿ ನೃತ್ಯದ್ಭಿರ್ಗಾಯನಾನಾಂ ಚ ನಿಸ್ವನೈಃ|

14069017c ಆಸೀದ್ವೈಶ್ರವಣಸ್ಯೇವ ನಿವಾಸಸ್ತತ್ ಪುರಂ ತದಾ||

ನರ್ತಕರ ನೃತ್ಯಗಳಿಂದಲೂ ಮತ್ತು ಗಾಯನಗಳ ಇಂಪಾದ ಸ್ವರಗಳಿಂದಲೂ ಆ ಪುರವು ಕುಬೇರನ ನಗರಿಯಂತೆಯೇ ತೋರುತ್ತಿತ್ತು.

14069018a ಬಂದಿಭಿಶ್ಚ ನರೈ ರಾಜನ್ ಸ್ತ್ರೀಸಹಾಯೈಃ ಸಹಸ್ರಶಃ|

14069018c ತತ್ರ ತತ್ರ ವಿವಿಕ್ತೇಷು ಸಮಂತಾದುಪಶೋಭಿತಮ್||

ರಾಜನ್! ನಗರದ ಅಲ್ಲಲ್ಲಿ ಸಹಸ್ರಾರು ಬಂದಿಗಳು ಅವರ ಪತ್ನಿಯರೊಂದಿಗೆ ನಿಂತು ಶೋಭೆಗೊಳಿಸುತ್ತಿದ್ದರು.

14069019a ಪತಾಕಾ ಧೂಯಮಾನಾಶ್ಚ ಶ್ವಸತಾ ಮಾತರಿಶ್ವನಾ|

14069019c ಅದರ್ಶಯನ್ನಿವ ತದಾ ಕುರೂನ್ವೈ ದಕ್ಷಿಣೋತ್ತರಾನ್||

ಗಾಳಿಯ ರಭಸದಿಂದ ಎಲ್ಲೆಡೆಯಲ್ಲಿಯೂ ಪತಾಕೆಗಳು ಪಟಪಟನೆ ಹಾರಾಡುತ್ತಿದ್ದವು. ಹಸ್ತಿನಾಪುರವು ಆಗ ದಕ್ಷಿಣ-ಉತ್ತರ ಕುರುದೇಶಗಳಿಗೆ ಆದರ್ಶಪ್ರಾಯವಾಗಿತ್ತು.

14069020a ಅಘೋಷಯತ್ತದಾ ಚಾಪಿ ಪುರುಷೋ ರಾಜಧೂರ್ಗತಃ|

14069020c ಸರ್ವರಾತ್ರಿವಿಹಾರೋಽದ್ಯ ರತ್ನಾಭರಣಲಕ್ಷಣಃ||

ರಾಜಪುರುಷರು “ಇಂದಿನ ರಾತ್ರಿ ಸರ್ವರೂ ರತ್ನಾಭರಣಭೂಷಿತರಾಗಿ ವಿಹರಿಸಿ!” ಎಂಬ ಘೋಷಣೆಯನ್ನೂ ಮಾಡಿದರು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಪಾಂಡವಾಗಮನೇ ಏಕೋನಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಪಾಂಡವಾಗಮನ ಎನ್ನುವ ಅರವತ್ತೊಂಭತ್ತನೇ ಅಧ್ಯಾಯವು.

Comments are closed.