ಅಶ್ವಮೇಧಿಕ ಪರ್ವ
೬೨
ಮರುತ್ತನಿಧಿಯ ಕುರಿತು ಸಮಾಲೋಚನೆಗೈದು ಪಾಂಡವರು ಅದನ್ನು ತರಲು ನಿಶ್ಚಯಿಸಿದುದು (೧-೧೬). ನಿಧಿಯನ್ನು ತರಲು ಪಾಂಡವರು ಪ್ರಯಾಣಿಸಿದುದು (೧೭-೨೩).
14062001 ಜನಮೇಜಯ ಉವಾಚ
14062001a ಶ್ರುತ್ವೈತದ್ವಚನಂ ಬ್ರಹ್ಮನ್ವ್ಯಾಸೇನೋಕ್ತಂ ಮಹಾತ್ಮನಾ|
14062001c ಅಶ್ವಮೇಧಂ ಪ್ರತಿ ತದಾ ಕಿಂ ನೃಪಃ ಪ್ರಚಕಾರ ಹ||
ಜನಮೇಜಯನು ಹೇಳಿದನು: “ಬ್ರಹ್ಮನ್! ಮಹಾತ್ಮ ವ್ಯಾಸನಾಡಿದ ಆ ಮಾತುಗಳನ್ನು ಕೇಳಿದ ನೃಪನು ಅಶ್ವಮೇಧದ ಕುರಿತು ಏನನ್ನು ನಡೆಸಿದನು?
14062002a ರತ್ನಂ ಚ ಯನ್ಮರುತ್ತೇನ ನಿಹಿತಂ ಪೃಥಿವೀತಲೇ|
14062002c ತದವಾಪ ಕಥಂ ಚೇತಿ ತನ್ಮೇ ಬ್ರೂಹಿ ದ್ವಿಜೋತ್ತಮ||
ದ್ವಿಜೋತ್ತಮ! ಮರುತ್ತನು ಪೃಥ್ವಿಯೊಳಗೆ ಹುದುಗಿಸಿಟ್ಟಿದ್ದ ರತ್ನಗಳನ್ನು ಅವನು ಹೇಗೆ ಪಡೆದುಕೊಂಡನು ಎನ್ನುವುದನ್ನು ನನಗೆ ಹೇಳು.”
14062003 ವೈಶಂಪಾಯನ ಉವಾಚ
14062003a ಶ್ರುತ್ವಾ ದ್ವೈಪಾಯನವಚೋ ಧರ್ಮರಾಜೋ ಯುಧಿಷ್ಠಿರಃ|
14062003c ಭ್ರಾತೄನ್ಸರ್ವಾನ್ಸಮಾನಾಯ್ಯ ಕಾಲೇ ವಚನಮಬ್ರವೀತ್|
14062003e ಅರ್ಜುನಂ ಭೀಮಸೇನಂ ಚ ಮಾದ್ರೀಪುತ್ರೌ ಯಮಾವಪಿ||
ವೈಶಂಪಾಯನನು ಹೇಳಿದನು: “ದ್ವೈಪಾಯನನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ತನ್ನ ಸಹೋದರರೆಲ್ಲರನ್ನೂ - ಅರ್ಜುನ, ಭೀಮಸೇನ ಮತ್ತು ಮಾದ್ರೀಪುತ್ರ ಯಮಳರನ್ನು – ಕರೆಯಿಸಿ ಕಾಲೋಚಿತವಾದ ಈ ಮಾತುಗಳನ್ನಾಡಿದನು.
14062004a ಶ್ರುತಂ ವೋ ವಚನಂ ವೀರಾಃ ಸೌಹೃದಾದ್ಯನ್ಮಹಾತ್ಮನಾ|
14062004c ಕುರೂಣಾಂ ಹಿತಕಾಮೇನ ಪ್ರೋಕ್ತಂ ಕೃಷ್ಣೇನ ಧೀಮತಾ||
“ವೀರರೇ! ಧೀಮಂತ ಮಹಾತ್ಮ ಕೃಷ್ಣನು ಕುರುಗಳ ಹಿತಕಾಮ ಮತ್ತು ಸೌಹಾರ್ದತೆಗಳಿಂದ ಹೇಳಿದ ಈ ಮಾತುಗಳನ್ನು ನಾವು ಕೇಳಿದೆವು.
14062005a ತಪೋವೃದ್ಧೇನ ಮಹತಾ ಸುಹೃದಾಂ ಭೂತಿಮಿಚ್ಚತಾ|
14062005c ಗುರುಣಾ ಧರ್ಮಶೀಲೇನ ವ್ಯಾಸೇನಾದ್ಭುತಕರ್ಮಣಾ||
14062006a ಭೀಷ್ಮೇಣ ಚ ಮಹಾಪ್ರಾಜ್ಞ ಗೋವಿಂದೇನ ಚ ಧೀಮತಾ|
14062006c ಸಂಸ್ಮೃತ್ಯ ತದಹಂ ಸಮ್ಯಕ್ಕರ್ತುಮಿಚ್ಚಾಮಿ ಪಾಂಡವಾಃ||
ಪಾಂಡವರೇ! ಸುಹೃದಯರ ಅಭ್ಯುದಯವನ್ನೇ ಬಯಸುವ ಮಹಾ ತಪೋವೃದ್ಧ ಧರ್ಮಶೀಲ ಗುರು ಅದ್ಭುತಕರ್ಮಿ ವ್ಯಾಸ, ಮಹಾಪ್ರಾಜ್ಞ ಬೀಷ್ಮ ಮತ್ತು ಧೀಮಂತ ಗೋವಿಂದ ಇವರು ನೀಡಿರುವ ಸಲಹೆಗಳನ್ನು ಸ್ಮರಿಸಿ, ಅವುಗಳನ್ನು ಕಾರ್ಯರೂಪದಲ್ಲಿ ತರಲು ಇಚ್ಛಿಸಿದ್ದೇನೆ.
14062007a ಆಯತ್ಯಾಂ ಚ ತದಾತ್ವೇ ಚ ಸರ್ವೇಷಾಂ ತದ್ಧಿ ನೋ ಹಿತಮ್|
14062007c ಅನುಬಂಧೇ ಚ ಕಲ್ಯಾಣಂ ಯದ್ವಚೋ ಬ್ರಹ್ಮವಾದಿನಃ||
ಅವರು ನೀಡಿದ ಸಲಹೆಗಳೆಲ್ಲವೂ ನಮಗೆ ಭವಿಷ್ಯ-ವರ್ತಮಾನಗಳೆರಡರಲ್ಲೂ ಹಿತವನ್ನೇ ಉಂಟುಮಾಡುತ್ತವೆ. ಬ್ರಹ್ಮವಾದಿ ವ್ಯಾಸನು ಹೇಳಿದಂತೆ ಮಾಡುವುದರಲ್ಲಿ ನಮ್ಮ ಕಲ್ಯಾಣವಿದೆ.
14062008a ಇಯಂ ಹಿ ವಸುಧಾ ಸರ್ವಾ ಕ್ಷೀಣರತ್ನಾ ಕುರೂದ್ವಹಾಃ|
14062008c ತಚ್ಚಾಚಷ್ಟ ಬಹು ವ್ಯಾಸೋ ಮರುತ್ತಸ್ಯ ಧನಂ ನೃಪಾಃ||
ಕುರೂದ್ವಹರೇ! ಈ ಸಮಯದಲ್ಲಿ ಭೂಮಂಡಲದಲ್ಲಿರುವ ಎಲ್ಲ ರಾಜ್ಯಗಳೂ ಐಶ್ವರ್ಯರಹಿತವಾಗಿವೆ. ಆದುದರಿಂದ ವ್ಯಾಸನು ಮರುತ್ತನ ಬಹು ಧನದ ಕುರಿತಾಗಿ ಹೇಳಿದ್ದನು.
14062009a ಯದ್ಯೇತದ್ವೋ ಬಹುಮತಂ ಮನ್ಯಧ್ವಂ ವಾ ಕ್ಷಮಂ ಯದಿ|
14062009c ತದಾನಯಾಮಹೇ ಸರ್ವೇ ಕಥಂ ವಾ ಭೀಮ ಮನ್ಯಸೇ||
ನೀವೆಲ್ಲರೂ ಮರುತ್ತನು ಇಟ್ಟಿರುವ ಐಶ್ವರ್ಯವು ಸಾಕೆಂದು ಮತ್ತು ಅದನ್ನು ತರುವ ಸಾಮರ್ಥ್ಯವಿರುವುದೆಂದು ತಿಳಿದರೆ ಅದನ್ನು ನಾವು ತರೋಣ. ಭೀಮ! ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು?”
14062010a ಇತ್ಯುಕ್ತವಾಕ್ಯೇ ನೃಪತೌ ತದಾ ಕುರುಕುಲೋದ್ವಹ|
14062010c ಭೀಮಸೇನೋ ನೃಪಶ್ರೇಷ್ಠಂ ಪ್ರಾಂಜಲಿರ್ವಾಕ್ಯಮಬ್ರವೀತ್||
ಕುರುಕುಲೋದ್ವಹ! ನೃಪತಿಯು ಹೀಗೆ ಹೇಳಲು ಭೀಮಸೇನನು ಕೈಮುಗಿದು ನೃಪಶ್ರೇಷ್ಠನಿಗೆ ಇಂತೆಂದನು:
14062011a ರೋಚತೇ ಮೇ ಮಹಾಬಾಹೋ ಯದಿದಂ ಭಾಷಿತಂ ತ್ವಯಾ|
14062011c ವ್ಯಾಸಾಖ್ಯಾತಸ್ಯ ವಿತ್ತಸ್ಯ ಸಮುಪಾನಯನಂ ಪ್ರತಿ||
“ಮಹಾಬಾಹೋ! ವ್ಯಾಸನು ಹೇಳಿದ ವಿತ್ತವನ್ನು ತರುವುದರ ಕುರಿತಾಗಿ ನೀನು ಹೇಳಿದ ಮಾತುಗಳು ನನಗೆ ರುಚಿಸಿವೆ.
14062012a ಯದಿ ತತ್ಪ್ರಾಪ್ನುಯಾಮೇಹ ಧನಮಾವಿಕ್ಷಿತಂ ಪ್ರಭೋ|
14062012c ಕೃತಮೇವ ಮಹಾರಾಜ ಭವೇದಿತಿ ಮತಿರ್ಮಮ||
ಪ್ರಭೋ! ಮಹಾರಾಜ! ಹುಗಿದಿಟ್ಟಿರುವ ಆ ಧನವನ್ನು ಪಡೆದುಕೊಂಡುದೇ ಆದರೆ ಕಾರ್ಯವು ಆದಂತೆಯೇ ಎಂದು ನನ್ನ ಅಭಿಪ್ರಾಯ.
14062013a ತೇ ವಯಂ ಪ್ರಣಿಪಾತೇನ ಗಿರೀಶಸ್ಯ ಮಹಾತ್ಮನಃ|
14062013c ತದಾನಯಾಮ ಭದ್ರಂ ತೇ ಸಮಭ್ಯರ್ಚ್ಯ ಕಪರ್ದಿನಮ್||
ಮಹಾತ್ಮ ಗಿರೀಶನಿಗೆ ಶಿರಸಾ ನಮಸ್ಕರಿಸಿ ನಾವು ಆ ಧನವನ್ನು ತರೋಣ. ನಿನಗೆ ಮಂಗಳವಾಗಲಿ! ಕಪರ್ದಿನಿಯನ್ನು ಅರ್ಚಿಸು.
14062014a ತಂ ವಿಭುಂ ದೇವದೇವೇಶಂ ತಸ್ಯೈವಾನುಚರಾಂಶ್ಚ ತಾನ್|
14062014c ಪ್ರಸಾದ್ಯಾರ್ಥಮವಾಪ್ಸ್ಯಾಮೋ ನೂನಂ ವಾಗ್ಬುದ್ಧಿಕರ್ಮಭಿಃ||
ಮಾತು-ಮನಸ್ಸು-ಕ್ರಿಯೆಗಳ ಮೂಲಕ ಆ ವಿಭು ದೇವದೇವೇಶನನ್ನೂ ಅವನ ಅನುಚರರನ್ನೂ ಪ್ರಸನ್ನಗೊಳಿಸಿ ನಾವು ಆ ಧನವನ್ನು ನಮ್ಮದಾಗಿಸಿಕೊಳ್ಳೋಣ.
14062015a ರಕ್ಷಂತೇ ಯೇ ಚ ತದ್ದ್ರವ್ಯಂ ಕಿಂಕರಾ ರೌದ್ರದರ್ಶನಾಃ|
14062015c ತೇ ಚ ವಶ್ಯಾ ಭವಿಷ್ಯಂತಿ ಪ್ರಸನ್ನೇ ವೃಷಭಧ್ವಜೇ||
ವೃಷಭದ್ವಜನನ್ನು ಪ್ರಸನ್ನಗೊಳಿಸಿದರೆ ಆ ದ್ರವ್ಯವನ್ನು ರಕ್ಷಿಸುತ್ತಿರುವ ಅವನ ರೌದ್ರದರ್ಶನ ಕಿಂಕರರೂ ನಮ್ಮ ವಶರಾಗುತ್ತಾರೆ.”
14062016a ಶ್ರುತ್ವೈವಂ ವದತಸ್ತಸ್ಯ ವಾಕ್ಯಂ ಭೀಮಸ್ಯ ಭಾರತ|
14062016c ಪ್ರೀತೋ ಧರ್ಮಾತ್ಮಜೋ ರಾಜಾ ಬಭೂವಾತೀವ ಭಾರತ|
14062016e ಅರ್ಜುನಪ್ರಮುಖಾಶ್ಚಾಪಿ ತಥೇತ್ಯೇವಾಬ್ರುವನ್ಮುದಾ||
ಭಾರತ! ಭೀಮನಾಡಿದ ಆ ಮಾತುಗಳನ್ನು ಕೇಳಿ ರಾಜಾ ಧರ್ಮಾತ್ಮಜನು ಅತೀವ ಹರ್ಷಿತನಾದನು. ಭಾರತ! ಅರ್ಜುನ ಪ್ರಮುಖಾದಿಗಳೂ ಕೂಡ ಸಂತೋಷದಿಂದ ಹಾಗೆಯೇ ಆಗಲೆಂದು ಅನುಮೋದಿಸಿದರು.
14062017a ಕೃತ್ವಾ ತು ಪಾಂಡವಾಃ ಸರ್ವೇ ರತ್ನಾಹರಣನಿಶ್ಚಯಮ್|
14062017c ಸೇನಾಮಾಜ್ಞಾಪಯಾಮಾಸುರ್ನಕ್ಷತ್ರೇಽಹನಿ ಚ ಧ್ರುವೇ||
ಪಾಂಡವರೆಲ್ಲರೂ ಆ ರತ್ನಗಳನ್ನು ತರಲು ನಿಶ್ಚಯಿಸಿ ಶುಭನಕ್ಷತ್ರದ ಶುಭದಿನದಲ್ಲಿ ಸೇನೆಗಳಿಗೆ ಸಜ್ಜಾಗುವಂತೆ ಆಜ್ಞಾಪಿಸಿದರು.
14062018a ತತೋ ಯಯುಃ ಪಾಂಡುಸುತಾ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ|
14062018c ಅರ್ಚಯಿತ್ವಾ ಸುರಶ್ರೇಷ್ಠಂ ಪೂರ್ವಮೇವ ಮಹೇಶ್ವರಮ್||
ಆಗ ಪಾಂಡುಸುತರು ಎಲ್ಲವಕ್ಕೂ ಮೊದಲು ಸುರಶ್ರೇಷ್ಠ ಮಹೇಶ್ವರನನ್ನು ಅರ್ಚಿಸಿ ಬ್ರಾಹ್ಮಣರ ಸ್ವಸ್ತಿವಾಚನಗಳೊಂದಿಗೆ ಹೊರಟರು.
14062019a ಮೋದಕೈಃ ಪಾಯಸೇನಾಥ ಮಾಂಸಾಪೂಪೈಸ್ತಥೈವ ಚ|
14062019c ಆಶಾಸ್ಯ ಚ ಮಹಾತ್ಮಾನಂ ಪ್ರಯಯುರ್ಮುದಿತಾ ಭೃಶಮ್||
ಅವರು ಮಹಾತ್ಮ ಮಹೇಶ್ವರನನ್ನು ಮೋದಕ, ಪಾಯಸ, ಮಾಂಸಪೂಪಗಳಿಂದ ತೃಪ್ತಿಪಡಿಸಿ ಅವನ ಆಶೀರ್ವಾದವನ್ನು ಪಡೆದು ಅತ್ಯಂತ ಸಂತೋಷದಿಂದ ಪ್ರಯಾಣಿಸಿದರು.
14062020a ತೇಷಾಂ ಪ್ರಯಾಸ್ಯತಾಂ ತತ್ರ ಮಂಗಲಾನಿ ಶುಭಾನ್ಯಥ|
14062020c ಪ್ರಾಹುಃ ಪ್ರಹೃಷ್ಟಮನಸೋ ದ್ವಿಜಾಗ್ರ್ಯಾ ನಾಗರಾಶ್ಚ ತೇ||
ಅವರು ಹೊರಟಾಗ ಪ್ರಹೃಷ್ಟಮನಸ್ಕರಾದ ದ್ವಿಜಾಗ್ರರೂ ನಾಗರೀಕರೂ ಅವರಿಗೆ ಶುಭ-ಮಂಗಲಗಳನ್ನು ಕೋರಿದರು.
14062021a ತತಃ ಪ್ರದಕ್ಷಿಣೀಕೃತ್ಯ ಶಿರೋಭಿಃ ಪ್ರಣಿಪತ್ಯ ಚ|
14062021c ಬ್ರಾಹ್ಮಣಾನಗ್ನಿಸಹಿತಾನ್ಪ್ರಯಯುಃ ಪಾಂಡುನಂದನಾಃ||
ಅಗ್ನಿಸಹಿತ ಬ್ರಾಹ್ಮಣರನ್ನು ಪ್ರದಕ್ಷಿಣೆಮಾಡಿ ಶಿರಬಾಗಿ ನಮಸ್ಕರಿಸಿ ಆ ಪಾಂಡುನಂದನರು ಹೊರಟರು.
14062022a ಸಮನುಜ್ಞಾಪ್ಯ ರಾಜಾನಂ ಪುತ್ರಶೋಕಸಮಾಹತಮ್|
14062022c ಧೃತರಾಷ್ಟ್ರಂ ಸಭಾರ್ಯಂ ವೈ ಪೃಥಾಂ ಪೃಥುಲಲೋಚನಾಮ್||
ಪುತ್ರಶೋಕದಿಂದ ಬಳಲುತ್ತಿದ್ದ ರಾಜಾ ಧೃತರಾಷ್ಟ್ರ, ಅವನ ಪತ್ನಿ ಮತ್ತು ಪೃಥುಲಲೋಚನೆ ಪೃಥೆಯ ಅನುಜ್ಞೆಯನ್ನು ಅವರು ಪಡೆದಿದ್ದರು.
14062023a ಮೂಲೇ ನಿಕ್ಷಿಪ್ಯ ಕೌರವ್ಯಂ ಯುಯುತ್ಸುಂ ಧೃತರಾಷ್ಟ್ರಜಮ್|
14062023c ಸಂಪೂಜ್ಯಮಾನಾಃ ಪೌರೈಶ್ಚ ಬ್ರಾಹ್ಮಣೈಶ್ಚ ಮನೀಷಿಭಿಃ||
ಧೃತರಾಷ್ಟ್ರನ ಮಗ ಕೌರವ್ಯ ಯುಯುತ್ಸುವನ್ನು ರಾಜ್ಯದಲ್ಲಿರಿಸಿ, ಪೌರರೂ, ಮನೀಷಿಗಳೂ ಮತ್ತು ಬ್ರಾಹ್ಮಣರೂ ಗೌರವಿಸುತ್ತಿರಲು ಅವರು ಪ್ರಯಾಣಮಾಡಿದರು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ದ್ರವ್ಯಾನಯನೋಪಕ್ರಮೇ ದ್ವಿಷಷ್ಟಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ದ್ರವ್ಯಾನಯನೋಪಕ್ರಮ ಎನ್ನುವ ಅರವತ್ತೆರಡನೇ ಅಧ್ಯಾಯವು.