ಅಶ್ವಮೇಧಿಕ ಪರ್ವ
೫೯
ಕೃಷ್ಣನು ತನ್ನ ತಂದೆ-ತಾಯಿಯರಿಗೆ ಕುರುವೀರರ ಸಂಗ್ರಾಮ-ನಿಧನಗಳ ಕುರಿತು ವರ್ಣಿಸಿದುದು (೧-೩೬).
14059001 ವಸುದೇವ ಉವಾಚ
14059001a ಶ್ರುತವಾನಸ್ಮಿ ವಾರ್ಷ್ಣೇಯ ಸಂಗ್ರಾಮಂ ಪರಮಾದ್ಭುತಮ್|
14059001c ನರಾಣಾಂ ವದತಾಂ ಪುತ್ರ ಕಥೋದ್ಘಾತೇಷು ನಿತ್ಯಶಃ||
ವಸುದೇವನು ಹೇಳಿದನು: “ವಾರ್ಷ್ಣೇಯ! ಪರಮ ಅದ್ಭುತವಾದ ಆ ಸಂಗ್ರಾಮದ ಕುರಿತು ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇನೆ. ಪುತ್ರ! ಅನುದಿನದ ಯುದ್ಧದ ಕುರಿತು ಹೇಳು!
14059002a ತ್ವಂ ತು ಪ್ರತ್ಯಕ್ಷದರ್ಶೀ ಚ ಕಾರ್ಯಜ್ಞಶ್ಚ ಮಹಾಭುಜ|
14059002c ತಸ್ಮಾತ್ಪ್ರಬ್ರೂಹಿ ಸಂಗ್ರಾಮಂ ಯಾಥಾತಥ್ಯೇನ ಮೇಽನಘ||
ಮಹಾಭುಜ! ನೀನಾದರೋ ಅದರ ಪ್ರತ್ಯಕ್ಷದರ್ಶಿಯೂ ಕಾರ್ಯಜ್ಞನೂ ಆಗಿರುವೆ. ಅನಘ! ಆದುದರಿಂದ ಆ ಸಂಗ್ರಾಮವು ಹೇಗೆ ನಡೆಯಿತೋ ಹಾಗೆ ಹೇಳು!
14059003a ಯಥಾ ತದಭವದ್ಯುದ್ಧಂ ಪಾಂಡವಾನಾಂ ಮಹಾತ್ಮನಾಮ್|
14059003c ಭೀಷ್ಮಕರ್ಣಕೃಪದ್ರೋಣಶಲ್ಯಾದಿಭಿರನುತ್ತಮಮ್||
14059004a ಅನ್ಯೇಷಾಂ ಕ್ಷತ್ರಿಯಾಣಾಂ ಚ ಕೃತಾಸ್ತ್ರಾಣಾಮನೇಕಶಃ|
14059004c ನಾನಾವೇಷಾಕೃತಿಮತಾಂ ನಾನಾದೇಶನಿವಾಸಿನಾಮ್||
ಮಹಾತ್ಮ ಪಾಂಡವರೊಡನೆ ನಡೆದ ಭೀಷ್ಮ-ಕರ್ಣ-ಕೃಪ-ದ್ರೋಣ-ಶಲ್ಯರೇ ಮೊದಲಾದವರ ಮತ್ತು ನಾನಾದೇಶ ನಿವಾಸಿಗಳ, ನಾನಾವೇಷ-ಆಕೃತಿ-ಬುದ್ಧಿಗಳಿದ್ದ ಅನೇಕ ಅಸ್ತ್ರಕೋವಿದ ಅನ್ಯ ಕ್ಷತ್ರಿಯರ ಆ ಯುದ್ಧವು ಹೇಗೆ ನಡೆಯಿತು?”
14059005a ಇತ್ಯುಕ್ತಃ ಪುಂಡರೀಕಾಕ್ಷಃ ಪಿತ್ರಾ ಮಾತುಸ್ತದಂತಿಕೇ|
14059005c ಶಶಂಸ ಕುರುವೀರಾಣಾಂ ಸಂಗ್ರಾಮೇ ನಿಧನಂ ಯಥಾ||
ಹೀಗೆ ಕೇಳಲು ಬಳಿಯಲ್ಲಿದ್ದ ತಂದೆ-ತಾಯಿಯರಿಗೆ ಪುಂಡರೀಕಾಕ್ಷನು ಕುರುವೀರರ ಸಂಗ್ರಾಮ-ನಿಧನಗಳ ಕುರಿತು ವರ್ಣಿಸಿದನು.
14059006 ವಾಸುದೇವ ಉವಾಚ
14059006a ಅತ್ಯದ್ಭುತಾನಿ ಕರ್ಮಾಣಿ ಕ್ಷತ್ರಿಯಾಣಾಂ ಮಹಾತ್ಮನಾಮ್|
14059006c ಬಹುಲತ್ವಾನ್ನ ಸಂಖ್ಯಾತುಂ ಶಕ್ಯಾನ್ಯಬ್ದಶತೈರಪಿ||
ವಾಸುದೇವನು ಹೇಳಿದನು: “ಮಹಾತ್ಮ ಕ್ಷತ್ರಿಯರ ಅತಿ ಅದ್ಭುತ ಕರ್ಮಗಳು ಬಹಳವಾಗಿದ್ದವು. ಅವುಗಳನ್ನು ವರ್ಣಿಸಲು ನೂರು ವರ್ಷಗಳೂ ಸಾಕಾಗುವುದಿಲ್ಲ.
14059007a ಪ್ರಾಧಾನ್ಯತಸ್ತು ಗದತಃ ಸಮಾಸೇನೈವ ಮೇ ಶೃಣು|
14059007c ಕರ್ಮಾಣಿ ಪೃಥಿವೀಶಾನಾಂ ಯಥಾವದಮರದ್ಯುತೇ||
ಅಮರದ್ಯುತೇ! ಪೃಥ್ವೀಶರ ಕರ್ಮಗಳಲ್ಲಿ ಪ್ರಧಾನವಾದವುಗಳನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ. ಕೇಳು.
14059008a ಭೀಷ್ಮಃ ಸೇನಾಪತಿರಭೂದೇಕಾದಶಚಮೂಪತಿಃ|
14059008c ಕೌರವ್ಯಃ ಕೌರವೇಯಾಣಾಂ ದೇವಾನಾಮಿವ ವಾಸವಃ||
ದೇವತೆಗಳಿಗೆ ವಾಸವ ಇಂದ್ರನು ಹೇಗೋ ಹಾಗೆ ಕೌರವರ ಹನ್ನೊಂದು ಅಕ್ಷೋಹಿಣೀ ಸೇನೆಗಳಿಗೆ ಕೌರವ್ಯ ಭೀಷ್ಮನು ಸೇನಾಪತಿಯಾಗಿದ್ದನು.
14059009a ಶಿಖಂಡೀ ಪಾಂಡುಪುತ್ರಾಣಾಂ ನೇತಾ ಸಪ್ತಚಮೂಪತಿಃ|
14059009c ಬಭೂವ ರಕ್ಷಿತೋ ಧೀಮಾನ್ಧೀಮತಾ ಸವ್ಯಸಾಚಿನಾ||
ಪಾಂಡುಪುತ್ರರ ಏಳು ಅಕ್ಷೋಹಿಣಿಗೆ ಧೀಮಾನ್ ಶಿಖಂಡಿಯು, ಧೀಮತ ಸವ್ಯಸಾಚಿಯಿಂದ ರಕ್ಷಣೆಯಡಿಯಲ್ಲಿ, ನೇತಾರನಾಗಿದ್ದನು[1].
14059010a ತೇಷಾಂ ತದಭವದ್ಯುದ್ಧಂ ದಶಾಹಾನಿ ಮಹಾತ್ಮನಾಮ್|
14059010c ಕುರೂಣಾಂ ಪಾಂಡವಾನಾಂ ಚ ಸುಮಹದ್ರೋಮಹರ್ಷಣಮ್||
ಮಹಾತ್ಮ ಕುರು-ಪಾಂಡವರ ನಡುವೆ ಹತ್ತು ದಿನಗಳು ರೋಮಾಂಚಕಾರೀ ಮಹಾ ಯುದ್ಧವು ನಡೆಯಿತು.
14059011a ತತಃ ಶಿಖಂಡೀ ಗಾಂಗೇಯಮಯುಧ್ಯಂತಂ ಮಹಾಹವೇ|
14059011c ಜಘಾನ ಬಹುಭಿರ್ಬಾಣೈಃ ಸಹ ಗಾಂಡೀವಧನ್ವನಾ||
ಅನಂತರ ಮಹಾರಣದಲ್ಲಿ ಯುದ್ಧಮಾಡುತ್ತಿದ್ದ ಗಾಂಗೇಯನನ್ನು ಗಾಂಡೀವಧನ್ವಿಯೊಡನೆ ಶಿಖಂಡಿಯು ಅನೇಕ ಬಾಣಗಳಿಂದ ಹೊಡೆದನು.
14059012a ಅಕರೋತ್ಸ ತತಃ ಕಾಲಂ ಶರತಲ್ಪಗತೋ ಮುನಿಃ|
14059012c ಅಯನಂ ದಕ್ಷಿಣಂ ಹಿತ್ವಾ ಸಂಪ್ರಾಪ್ತೇ ಚೋತ್ತರಾಯಣೇ||
ಆಗ ಶರತಲ್ಪಗತನಾದ ಆ ಮುನಿಯು ದಕ್ಷಿಣಾಯನವನ್ನು ಕಳೆದು ಉತ್ತರಾಯಣವು ಬಂದಾಗ ಕಾಲನ ವಶನಾದನು.
14059013a ತತಃ ಸೇನಾಪತಿರಭೂದ್ದ್ರೋಣೋಽಸ್ತ್ರವಿದುಷಾಂ ವರಃ|
14059013c ಪ್ರವೀರಃ ಕೌರವೇಂದ್ರಸ್ಯ ಕಾವ್ಯೋ ದೈತ್ಯಪತೇರಿವ||
ಅನಂತರ ದೈತ್ಯರಿಗೆ ಕಾವ್ಯನು ಹೇಗೋ ಹಾಗೆ ಕೌರವೇಂದ್ರನಿಗೆ ಅಸ್ತ್ರವಿದುಷರಲ್ಲಿ ಶ್ರೇಷ್ಠ ಪ್ರವೀರ ದ್ರೋಣನು ಸೇನಾಪತಿಯಾದನು.
14059014a ಅಕ್ಷೌಹಿಣೀಭಿಃ ಶಿಷ್ಟಾಭಿರ್ನವಭಿರ್ದ್ವಿಜಸತ್ತಮಃ|
14059014c ಸಂವೃತಃ ಸಮರಶ್ಲಾಘೀ ಗುಪ್ತಃ ಕೃಪವೃಷಾದಿಭಿಃ||
ದ್ವಿಜಸತ್ತಮ ಸಮರಶ್ಲಾಘೀ ದ್ರೋಣನು ಕೃಪ-ಕರ್ಣಾದಿಗಳಿಂದ ರಕ್ಷಿತಗೊಂಡಿದ್ದ ಕೌರವರ ಅಳಿದುಳಿದ ಒಂಭತ್ತು ಅಕ್ಷೋಹಿಣೀ ಸೇನೆಯ ನೇತಾರನಾಗಿದ್ದನು.
14059015a ಧೃಷ್ಟದ್ಯುಮ್ನಸ್ತ್ವಭೂನ್ನೇತಾ ಪಾಂಡವಾನಾಂ ಮಹಾಸ್ತ್ರವಿತ್|
14059015c ಗುಪ್ತೋ ಭೀಮೇನ ತೇಜಸ್ವೀ ಮಿತ್ರೇಣ ವರುಣೋ ಯಥಾ||
ಮಿತ್ರನಿಂದ ವರುಣನು ಹೇಗೋ ಹಾಗೆ ತೇಜಸ್ವೀ ಭೀಮನಿಂದ ರಕ್ಷಿಸಲ್ಪಟ್ಟ ಮಹಾಸ್ತ್ರವಿದು ಧೃಷ್ಟದ್ಯುಮ್ನನು ಪಾಂಡವರ ನೇತಾರನಾದನು.
14059016a ಪಂಚಸೇನಾಪರಿವೃತೋ ದ್ರೋಣಪ್ರೇಪ್ಸುರ್ಮಹಾಮನಾಃ|
14059016c ಪಿತುರ್ನಿಕಾರಾನ್ಸಂಸ್ಮೃತ್ಯ ರಣೇ ಕರ್ಮಾಕರೋನ್ಮಹತ್||
ಐದು ಅಕ್ಷೋಹಿಣೀ ಸೇನೆಗಳಿಂದ ಪರಿವೃತನಾದ ಆ ಮಹಾಮನಸ್ವೀ ಧೃಷ್ಟದ್ಯುಮ್ನನು ದ್ರೋಣನಿಂದ ತನ್ನ ತಂದೆಗಾದ ಅಪಮಾನವನ್ನು ಸ್ಮರಿಸಿಕೊಳ್ಳುತ್ತಾ ರಣದಲ್ಲಿ ಮಹಾಕರ್ಮಗಳನ್ನೆಸಗಿದನು.
14059017a ತಸ್ಮಿಂಸ್ತೇ ಪೃಥಿವೀಪಾಲಾ ದ್ರೋಣಪಾರ್ಷತಸಂಗರೇ|
14059017c ನಾನಾದಿಗಾಗತಾ ವೀರಾಃ ಪ್ರಾಯಶೋ ನಿಧನಂ ಗತಾಃ||
ದ್ರೋಣ-ಪಾರ್ಷತರ ಆ ಸಂಗ್ರಾಮದಲ್ಲಿ ನಾನಾ ದಿಕ್ಕುಗಳಿಂದ ಆಗಮಿಸಿದ್ದ ಪ್ರಾಯಶಃ ಎಲ್ಲ ವೀರ ಪೃಥ್ವೀಪಾಲರ ನಿಧನವಾಯಿತು.
14059018a ದಿನಾನಿ ಪಂಚ ತದ್ಯುದ್ಧಮಭೂತ್ಪರಮದಾರುಣಮ್|
14059018c ತತೋ ದ್ರೋಣಃ ಪರಿಶ್ರಾಂತೋ ಧೃಷ್ಟದ್ಯುಮ್ನವಶಂ ಗತಃ||
ಆ ಪರಮದಾರುಣ ಯುದ್ಧವು ಐದು ದಿನಗಳು ನಡೆಯಿತು. ನಂತರ ಪರಿಶ್ರಾಂತನಾದ ದ್ರೋಣನು ಧೃಷ್ಟದ್ಯುಮ್ನನ ವಶನಾದನು.
14059019a ತತಃ ಸೇನಾಪತಿರಭೂತ್ಕರ್ಣೋ ದೌರ್ಯೋಧನೇ ಬಲೇ|
14059019c ಅಕ್ಷೌಹಿಣೀಭಿಃ ಶಿಷ್ಟಾಭಿರ್ವೃತಃ ಪಂಚಭಿರಾಹವೇ||
ಅನಂತರ ದುರ್ಯೋಧನನ ಸೇನೆಯಲ್ಲಿ ಯುದ್ಧದಲ್ಲಿ ಅಳಿದುಳಿದಿದ್ದ ಐದು ಅಕ್ಷೋಹಿಣೀ ಸೇನೆಗೆ ಕರ್ಣನು ಸೇನಾಪತಿಯಾದನು.
14059020a ತಿಸ್ರಸ್ತು ಪಾಂಡುಪುತ್ರಾಣಾಂ ಚಮ್ವೋ ಬೀಭತ್ಸುಪಾಲಿತಾಃ|
14059020c ಹತಪ್ರವೀರಭೂಯಿಷ್ಠಾ ಬಭೂವುಃ ಸಮವಸ್ಥಿತಾಃ||
ಆಗ ಪಾಂಡುಪುತ್ರರ ಮೂರು ಅಕ್ಷೋಹಿಣೀ ಸೇನೆಯನ್ನು ಬೀಭತ್ಸುವು ರಕ್ಷಿಸುತ್ತಿದ್ದನು. ಬಹಳಷ್ಟು ಪ್ರವೀರರು ಹತರಾಗಿದ್ದರೂ ಅದು ಯುದ್ಧಸನ್ನದ್ಧವಾಗಿತ್ತು.
14059021a ತತಃ ಪಾರ್ಥಂ ಸಮಾಸಾದ್ಯ ಪತಂಗ ಇವ ಪಾವಕಮ್|
14059021c ಪಂಚತ್ವಮಗಮತ್ಸೌತಿರ್ದ್ವಿತೀಯೇಽಹನಿ ದಾರುಣೇ||
ಅನಂತರ ಎರಡನೆಯ ದಿನದ ದಾರುಣ ಯುದ್ಧದಲ್ಲಿ ಪತಂಗವು ಪಾವಕದ ಕಡೆ ಹಾರಿ ಹೋಗುವಂತೆ ಪಾರ್ಥನನ್ನು ಎದುರಿಸಿ ಸೌತಿಯು ಪಂಚತ್ವವನ್ನು ಹೊಂದಿದನು.
14059022a ಹತೇ ಕರ್ಣೇ ತು ಕೌರವ್ಯಾ ನಿರುತ್ಸಾಹಾ ಹತೌಜಸಃ|
14059022c ಅಕ್ಷೌಹಿಣೀಭಿಸ್ತಿಸೃಭಿರ್ಮದ್ರೇಶಂ ಪರ್ಯವಾರಯನ್||
ಕರ್ಣನು ಹತನಾಗಲು ನಿರುತ್ಸಾಹಗೊಂಡ ಹತೌಜಸ ಕೌರವ್ಯರ ಮೂರು ಅಕ್ಷೋಹಿಣೀ ಸೇನೆಗೆ ಮದ್ರೇಶನು ನಾಯಕನಾದನು.
14059023a ಹತವಾಹನಭೂಯಿಷ್ಠಾಃ ಪಾಂಡವಾಸ್ತು ಯುಧಿಷ್ಠಿರಮ್|
14059023c ಅಕ್ಷೌಹಿಣ್ಯಾ ನಿರುತ್ಸಾಹಾಃ ಶಿಷ್ಟಯಾ ಪರ್ಯವಾರಯನ್||
ಅನೇಕ ವಾಹನಗಳನ್ನು ಕಳೆದುಕೊಂಡು ನಿರುತ್ಸಾಹಗೊಂಡಿದ್ದ ಅಳಿದುಳಿದ ಪಾಂಡವರ ಒಂದು ಅಕ್ಷೋಹಿಣೀ ಸೇನೆಗೆ ಯುಧಿಷ್ಠಿರನು ನಾಯಕನಾದನು.
14059024a ಅವಧೀನ್ಮದ್ರರಾಜಾನಂ ಕುರುರಾಜೋ ಯುಧಿಷ್ಠಿರಃ|
14059024c ತಸ್ಮಿಂಸ್ತಥಾರ್ಧದಿವಸೇ ಕರ್ಮ ಕೃತ್ವಾ ಸುದುಷ್ಕರಮ್||
ಅಂದಿನ ಅರ್ಧ ದಿನದಲ್ಲಿಯೇ ಮದ್ರರಾಜನನ್ನು ಸಂಹರಿಸಿ ಕುರುರಾಜ ಯುಧಿಷ್ಠಿರನು ದುಷ್ಕರ ಕರ್ಮವನ್ನೆಸಗಿದನು.
14059025a ಹತೇ ಶಲ್ಯೇ ತು ಶಕುನಿಂ ಸಹದೇವೋ ಮಹಾಮನಾಃ|
14059025c ಆಹರ್ತಾರಂ ಕಲೇಸ್ತಸ್ಯ ಜಘಾನಾಮಿತವಿಕ್ರಮಃ||
ಶಲ್ಯನು ಹತನಾಗಲು ಮಹಾಮನಸ್ವಿ ಅಮಿತವಿಕ್ರಮಿ ಸಹದೇವನು ಆ ಕಲಹಕ್ಕೆ ಮೂಲಕಾರಣನಾಗಿದ್ದ ಶಕುನಿಯನ್ನು ಸಂಹರಿಸಿದನು.
14059026a ನಿಹತೇ ಶಕುನೌ ರಾಜಾ ಧಾರ್ತರಾಷ್ಟ್ರಃ ಸುದುರ್ಮನಾಃ|
14059026c ಅಪಾಕ್ರಾಮದ್ಗದಾಪಾಣಿರ್ಹತಭೂಯಿಷ್ಠಸೈನಿಕಃ||
ಶಕುನಿಯು ಹತನಾದ ನಂತರ ಧಾರ್ತರಾಷ್ಟ್ರ ದುರ್ಮನಸ್ವಿ ರಾಜ ದುರ್ಯೋಧನನು ಗದಾಪಾಣಿಯಾಗಿ ಹತರಾಗದೇ ಉಳಿದಿದ್ದ ಸೈನಿಕರನ್ನು ಬಿಟ್ಟು ಹೊರಟುಹೋದನು.
14059027a ತಮನ್ವಧಾವತ್ಸಂಕ್ರುದ್ಧೋ ಭೀಮಸೇನಃ ಪ್ರತಾಪವಾನ್|
14059027c ಹ್ರದೇ ದ್ವೈಪಾಯನೇ ಚಾಪಿ ಸಲಿಲಸ್ಥಂ ದದರ್ಶ ತಮ್||
ಸಂಕ್ರುದ್ಧನಾದ ಪ್ರತಾಪವಾನ್ ಭೀಮಸೇನನು ಅವನನ್ನೇ ಹಿಂಬಾಲಿಸಿ ಹೋಗಿ ದ್ವೈಪಾಯನ ಸರೋವರದಲ್ಲಿ ನೀರಿನೊಳಗೆ ಕುಳಿತಿದ್ದ ಅವನನ್ನು ನೋಡಿದನು.
14059028a ತತಃ ಶಿಷ್ಟೇನ ಸೈನ್ಯೇನ ಸಮಂತಾತ್ಪರಿವಾರ್ಯ ತಮ್|
14059028c ಉಪೋಪವಿವಿಶುರ್ಹೃಷ್ಟಾ ಹ್ರದಸ್ಥಂ ಪಂಚ ಪಾಂಡವಾಃ||
ಆಗ ಪಂಚ ಪಾಂಡವರು ಹೃಷ್ಟರಾಗಿ ಉಳಿದ ಸೇನೆಗಳಿಂದ ಸರೋವರದಲ್ಲಿದ್ದ ಅವನನ್ನು ಸುತ್ತುವರೆದು ನಿಂತರು.
14059029a ವಿಗಾಹ್ಯ ಸಲಿಲಂ ತ್ವಾಶು ವಾಗ್ಬಾಣೈರ್ಭೃಶವಿಕ್ಷತಃ|
14059029c ಉತ್ಥಾಯ ಸ ಗದಾಪಾಣಿರ್ಯುದ್ಧಾಯ ಸಮುಪಸ್ಥಿತಃ||
ನೀರಿನೊಳಗಿದ್ದ ದುರ್ಯೋಧನನು ಪಾಂಡವರ ವಾಗ್ಬಾಣಗಳಿಂದ ಅತ್ಯಂತ ಗಾಸಿಯಾಗಿ ಯುದ್ಧಮಾಡಲು ಗದಾಪಾಣಿಯಾಗಿ ನೀರಿನಿಂದ ಮೇಲೆದ್ದನು.
14059030a ತತಃ ಸ ನಿಹತೋ ರಾಜಾ ಧಾರ್ತರಾಷ್ಟ್ರೋ ಮಹಾಮೃಧೇ|
14059030c ಭೀಮಸೇನೇನ ವಿಕ್ರಮ್ಯ ಪಶ್ಯತಾಂ ಪೃಥಿವೀಕ್ಷಿತಾಮ್||
ಆಗ ಪೃಥ್ವೀಪಾಲರು ನೋಡುತ್ತಿದ್ದಂತೆಯೇ ನಡೆದ ಮಹಾ ಯುದ್ಧದಲ್ಲಿ ರಾಜಾ ಧಾರ್ತರಾಷ್ಟ್ರನು ಭೀಮಸೇನನ ವಿಕ್ರಮದಿಂದ ಹತನಾದನು.
14059031a ತತಸ್ತತ್ಪಾಂಡವಂ ಸೈನ್ಯಂ ಸಂಸುಪ್ತಂ ಶಿಬಿರೇ ನಿಶಿ|
14059031c ನಿಹತಂ ದ್ರೋಣಪುತ್ರೇಣ ಪಿತುರ್ವಧಮಮೃಷ್ಯತಾ||
ಅನಂತರ ಪಿತುರ್ವಧೆಯನ್ನು ಸಹಿಸಿಕೊಳ್ಳಲಾರದ ದ್ರೋಣಪುತ್ರನು ರಾತ್ರಿ ಶಿಬಿರದಲ್ಲಿ ಮಲಗಿದ್ದ ಪಾಂಡವ ಸೇನೆಯನ್ನು ಸಂಹರಿಸಿದನು.
14059032a ಹತಪುತ್ರಾ ಹತಬಲಾ ಹತಮಿತ್ರಾ ಮಯಾ ಸಹ|
14059032c ಯುಯುಧಾನದ್ವಿತೀಯೇನ ಪಂಚ ಶಿಷ್ಟಾಃ ಸ್ಮ ಪಾಂಡವಾಃ||
ನಾನು, ಎರಡನೆಯವನಾಗಿ ಯುಯುಧಾನ ಸಾತ್ಯಕಿ ಮತ್ತು ಐವರು ಪಾಂಡವರು ಇವರನ್ನು ಬಿಟ್ಟು ಸೇನೆಗಳೆಲ್ಲವೂ ನಾಶವಾದವು, ಪುತ್ರರು ಹತರಾದರು ಮತ್ತು ಮಿತ್ರರೂ ಹತರಾದರು.
14059033a ಸಹೈವ ಕೃಪಭೋಜಾಭ್ಯಾಂ ದ್ರೌಣಿರ್ಯುದ್ಧಾದಮುಚ್ಯತ|
14059033c ಯುಯುತ್ಸುಶ್ಚಾಪಿ ಕೌರವ್ಯೋ ಮುಕ್ತಃ ಪಾಂಡವಸಂಶ್ರಯಾತ್||
ಅವರ ಕಡೆಯಲ್ಲಿ ಕೃಪ-ಭೋಜ ಕೃತವರ್ಮರೊಂದಿಗೆ ದ್ರೌಣಿಯು ಯುದ್ಧದಿಂದ ಮುಕ್ತರಾಗಿ ಬದುಕುಳಿದರು. ಕೌರವ್ಯ ಯುಯುತ್ಸುವೂ ಕೂಡ ಪಾಂಡವರ ಆಶ್ರಯವನ್ನು ಪಡೆದುದರಿಂದ ಉಳಿದುಕೊಂಡನು.
14059034a ನಿಹತೇ ಕೌರವೇಂದ್ರೇ ಚ ಸಾನುಬಂಧೇ ಸುಯೋಧನೇ|
14059034c ವಿದುರಃ ಸಂಜಯಶ್ಚೈವ ಧರ್ಮರಾಜಮುಪಸ್ಥಿತೌ||
ಅನುಯಾಯಿಗಳೊಂದಿಗೆ ಕೌರವೇಂದ್ರ ಸುಯೋಧನನು ಹತನಾಗಲು ವಿದುರ-ಸಂಜಯರು ಧರ್ಮರಾಜನನ್ನೇ ಆಶ್ರಯಿಸಿದರು.
14059035a ಏವಂ ತದಭವದ್ಯುದ್ಧಮಹಾನ್ಯಷ್ಟಾದಶ ಪ್ರಭೋ|
14059035c ಯತ್ರ ತೇ ಪೃಥಿವೀಪಾಲಾ ನಿಹತಾಃ ಸ್ವರ್ಗಮಾವಸನ್||
ಪ್ರಭೋ! ಹದಿನೆಂಟು ಅಕ್ಷೋಹಿಣೀ ಸೇನೆಗಳು ಮತ್ತು ಪೃಥ್ವೀಪಾಲರು ಹತರಾಗಿ ಸ್ವರ್ಗವನ್ನು ಸೇರಿದ ಆ ಮಹಾಯುದ್ಧವು ಈ ರೀತಿ ನಡೆಯಿತು.””
14059036 ವೈಶಂಪಾಯನ ಉವಾಚ
14059036a ಶೃಣ್ವತಾಂ ತು ಮಹಾರಾಜ ಕಥಾಂ ತಾಂ ರೋಮಹರ್ಷಣೀಮ್|
14059036c ದುಃಖಹರ್ಷಪರಿಕ್ಲೇಶಾ ವೃಷ್ಣೀನಾಮಭವಂಸ್ತದಾ||
ವೈಶಂಪಾಯನನು ಹೇಳಿದನು: “ಮಹಾರಾಜ! ಆ ರೋಮಹರ್ಷಣ ಕಥೆಯನ್ನು ಕೇಳಿದ ವೃಷ್ಣಿಗಳು ದುಃಖ-ಹರ್ಷಗಳಿಂದ ಪೀಡಿತರಾದರು.”
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವಾಸುದೇವವಾಕ್ಯೇ ಏಕೋನಷಷ್ಟಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ವಾಸುದೇವವಾಕ್ಯ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.
[1] ಸಂಜಯನು ಧೃತರಾಷ್ಟ್ರನಿಗೆ ನೀಡಿದ ಯುದ್ಧವಿವರಣೆಯ ಪ್ರಕಾರ ಮಹಾಭಾರತ ಯುದ್ಧದ ಮೊದಲಿನಿಂದ ಕಡೆಯವರೆಗೂ ಧೃಷ್ಟದ್ಯುಮ್ನನೇ ಪಾಂಡವರ ಸೇನಾನಾಯಕನಾಗಿದ್ದನು. ಆದರೆ ಭೀಷ್ಮನನ್ನು ಸಂಹರಿಸಲು ಶಿಖಂಡಿಯನ್ನು ಅವನ ಎದಿರು ನಿಲ್ಲಿಸಲು ಪಾಂಡವರು ಪ್ರಯತ್ನಪಟ್ಟಿದ್ದುದರಿಂದ ಕೃಷ್ಣನು ಭೀಷ್ಮನ ವಧೆಯ ಪ್ರಸಂಗದಲ್ಲಿ ಶಿಖಂಡಿಯೇ ಪಾಂಡವರ ನಾಯಕನಾಗಿದ್ದನೆಂದು ಹೇಳುತ್ತಾನೆ.